ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ರೇವಾದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಸುಮಾರು 17,000 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ
ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಖರೀದಿಗಾಗಿ ಸಮಗ್ರ ಇ-ಗ್ರಾಮ್ ಸ್ವರಾಜ್ ಮತ್ತು ಜಿಇಎಂ ಪೋರ್ಟಲ್ ಅನಾವರಣ

ಸುಮಾರು 35 ಲಕ್ಷ ಸ್ವಾಮಿತ್ವ ಆಸ್ತಿ ಕಾರ್ಡ್‌ಗಳ ಹಸ್ತಾಂತರ

ಪಿಎಂಎವೈ-ಜಿ ಯೋಜನೆ ಅಡಿ 4 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳ ‘ಗೃಹ ಪ್ರವೇಶ’ದಲ್ಲಿ ಭಾಗಿ

ಸುಮಾರು 2,300 ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಜಲಜೀವನ್ ಮಿಷನ್ ಅಡಿ ಸುಮಾರು 7,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ

"ಪಂಚಾಯತ್ ರಾಜ್ ಸಂಸ್ಥೆಗಳು ಪ್ರಜಾಪ್ರಭುತ್ವದ ಮನೋಭಾವ ಉತ್ತೇಜಿಸುವ ಮೂಲಕ ನಮ್ಮ ನಾಗರಿಕರ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸುತ್ತಿವೆ"

"ಅಮೃತ್ ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದೇವೆ,  ಅದನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ"

"2014ರಿಂದ ದೇಶವು ತನ್ನ ಪಂಚಾಯತ್‌ ಸಂಸ್ಥೆಗಳ ಸಬಲೀಕರಣ ಕೈಗೆತ್ತಿಕೊಂಡಿದೆ, ಅದರ ಫಲಿತಾಂಶಗಳು ಇದೀಗ ಗೋಚರಿಸುತ್ತಿವೆ"

"ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ, ಪಂಚಾಯಿತಿಗಳನ್ನು ಸಹ ಸ್ಮಾರ್ಟ್ ಮಾಡಲಾಗುತ್ತಿದೆ"
"ಪ್ರತಿಯೊಂದು ಪಂಚಾಯಿತಿ, ಪ್ರತಿ ಸಂಸ್ಥೆ, ಪ್ರತಿಯೊಬ್ಬ ಪ್ರತಿನಿಧಿ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಒಂದಾಗಬೇಕು"

"ನಮ್ಮ ಪಂಚಾಯತ್‌ಗಳು ನೈಸರ್ಗಿಕ ಕೃಷಿಯ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಬೇಕು"

Posted On: 24 APR 2023 2:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ರೇವಾದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸುಮಾರು 17,000 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು.

ನಂತರ ಮಾತೆ ವಿದ್ಯಾವಾಸಿನಿ ಮತ್ತು ಶೌರ್ಯದ ಭೂಮಿಗೆ ನಮಸ್ಕರಿಸುವ ಮೂಲಕ ತಮ್ಮ ಭಾಷಣ ಪ್ರಾರಂಭಿಸಿದ ಪ್ರಧಾನ ಮಂತ್ರಿ, ಹಿಂದಿನ ಭೇಟಿ ಮತ್ತು ಇಲ್ಲಿನ ಜನರ ಪ್ರೀತಿಯನ್ನು ಸ್ಮರಿಸಿದರು. ದೇಶಾದ್ಯಂತ ಇರುವ 30 ಲಕ್ಷಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳ ವರ್ಚುವಲ್ ಉಪಸ್ಥಿತಿ ಗಮನಿಸಿದ ಪ್ರಧಾನಿ, ಇದು ಭಾರತೀಯ ಪ್ರಜಾಪ್ರಭುತ್ವದ ದಿಟ್ಟ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಇಲ್ಲಿ ಇರುವ ಪ್ರತಿಯೊಬ್ಬರ ಕೆಲಸದ ವ್ಯಾಪ್ತಿ ವಿಭಿನ್ನವಾಗಿರಬಹುದು ಆದರೆ ದೇಶ ಸೇವೆಯ ಮೂಲಕ ನಾಗರಿಕರಿಗೆ ಸೇವೆ ಸಲ್ಲಿಸುವ ಸಾಮಾನ್ಯ ಗುರಿಗಾಗಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಗಾಂವ್ ಔರ್ ಗರೀಬ್ - ಹಳ್ಳಿಗಳು ಮತ್ತು ಬಡವರಿಗಾಗಿ ಪಂಚಾಯತ್‌ ಸಂಸ್ಥೆಗಳು ಸರ್ಕಾರದ ಯೋಜನೆಗಳನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಅನುಷ್ಠಾನಗೊಳಿಸುತ್ತಿವೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕ ಖರೀದಿಗಾಗಿ ಇ-ಗ್ರಾಮ್ ಸ್ವರಾಜ್ ಮತ್ತು ಜಿಇಎಂ ಪೋರ್ಟಲ್ ಅನಾವರಣವನ್ನು ಉಲ್ಲೇಖಿಸಿದ ಪ್ರಧಾನಿ, ಇದು ಪಂಚಾಯತ್‌ಗಳ ಕೆಲಸವನ್ನು ಸುಲಭಗೊಳಿಸುತ್ತದೆ. ಮಧ್ಯಪ್ರದೇಶದ ಅಭಿವೃದ್ಧಿಗಾಗಿ ರೈಲ್ವೆ, ವಸತಿ, ನೀರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ 35 ಲಕ್ಷ ಸ್ವಾಮಿತ್ವ ಆಸ್ತಿ ಕಾರ್ಡ್‌ಗಳು ಮತ್ತು 17,000 ಕೋಟಿ ರೂ. ಮೊತ್ತದ ಯೋಜನೆಗಳ ವಿತರಣೆಯನ್ನು ಅವರು ಪ್ರಸ್ತಾಪಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ, ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಅತ್ಯಂತ ಸಮರ್ಪಣಾ ಭಾವದಿಂದ ನನಸಾಗಿಸಲು ಶ್ರಮಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ಭಾರತದ ಹಳ್ಳಿಗಳಲ್ಲಿ ಸಾಮಾಜಿಕ ವ್ಯವಸ್ಥೆ, ಆರ್ಥಿಕತೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆ ಇದೆ. ಪ್ರಸ್ತುತ ಸರ್ಕಾರವು ಸದೃಢವಾದ ವ್ಯವಸ್ಥೆಯನ್ನು ರೂಪಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅವಿರತ ಶ್ರಮಿಸುತ್ತಿದೆ. ಹಿಂದಿನ ಸರಕಾರಗಳು ಪಂಚಾಯತ್‌ಗಳೊಂದಿಗೆ ತಾರತಮ್ಯ ತೋರಿದವು. 2014ರ ಮೊದಲು ಹಿಂದಿನ ಸರ್ಕಾರಗಳು ಮಾಡಿದ ಪ್ರಯತ್ನಗಳ ಕೊರತೆಯ ಬಗ್ಗೆ ಬೆಳಕು ಚೆಲ್ಲಿರುವ ಪ್ರಧಾನಿ, ಹಣಕಾಸು ಆಯೋಗವು 70,000 ಕೋಟಿ ರೂ.ಗಿಂತ ಕಡಿಮೆ ಅನುದಾನ ನೀಡಿದ್ದು, ಇದು ದೇಶದ ಗಾತ್ರವನ್ನು ಪರಿಗಣಿಸಿದಾಗ ಅತ್ಯಲ್ಪ ಮೊತ್ತವಾಗಿದೆ, ಆದರೆ 2014ರ ನಂತರ ಈ ಅನುದಾನವನ್ನು 2 ಲಕ್ಷ ಕೋಟಿ ರೂ.ಗಿಂತ ಹೆಚ್ಚಿಗೆ ಮಾಡಲಾಗಿದೆ. 2014ರ ಹಿಂದಿನ ದಶಕದಲ್ಲಿ ಕೇವಲ 6,000 ಪಂಚಾಯತ್ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಪ್ರಸ್ತುತ ಸರ್ಕಾರವು ಕಳೆದ 8 ವರ್ಷಗಳಲ್ಲಿ 30,000ಕ್ಕಿಂತ ಹೆಚ್ಚಿನ ಪಂಚಾಯತ್ ಭವನಗಳನ್ನು ನಿರ್ಮಿಸಿದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಪ್ಟಿಕಲ್ ಫೈಬರ್ ಸಂಪರ್ಕ ಪಡೆದ 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಒದಗಿಸಿದೆ. ಹಿಂದೆ ಕೇವಲ 70ಕ್ಕಿಂತ ಕಡಿಮೆ ಗ್ರಾಮ ಪಂಚಾಯಿತಿಗಳು ಆಪ್ಟಿಕಲ್ ಫೈಬರ್ ಸಂಪರ್ಕ ಹೊಂದಿದ್ದವು. ಭಾರತದ ಸ್ವಾತಂತ್ರ್ಯಾ ನಂತರದ ಹಿಂದಿನ ಸರ್ಕಾರಗಳು ಅಸ್ತಿತ್ವದಲ್ಲಿರುವ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆ ಎದ್ದು ಕಾಣುತ್ತಿತ್ತು. ‘ಭಾರತದ ಬದುಕು ಮತ್ತು ಅಭಿವೃದ್ಧಿ ಹಳ್ಳಿಗಳಲ್ಲಿ ನೆಲೆಸಿದೆ’ ಎಂಬ ಮಹಾತ್ಮ ಗಾಂಧಿ ಅವರ ಮಾತುಗಳನ್ನು ನೆನಪಿಸಿಕೊಂಡ ಪ್ರಧಾನಿ, ಹಿಂದಿನ ಆಡಳಿತಗಳು ಗ್ರಾಮೀಣರ ಸಿದ್ಧಾಂತಗಳಿಗೆ ಯಾವುದೇ ಗಮನ ನೀಡಲಿಲ್ಲ, ಇದರಿಂದಾಗಿ ಪಂಚಾಯತ್ ರಾಜ್ ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದೆ. ಆದರೆ  ಇಂದು ಪಂಚಾಯತ್‌ಗಳು ಭಾರತದ ಅಭಿವೃದ್ಧಿಯ ಜೀವಶಕ್ತಿಯಾಗಿ ಹೊರಹೊಮ್ಮುತ್ತಿವೆ. "ಗ್ರಾಮ ಪಂಚಾಯತ್ ವಿಕಾಸ್ ಯೋಜನೆಯು ಪಂಚಾಯತ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ಗ್ರಾಮಗಳು ಮತ್ತು ನಗರಗಳ ನಡುವಿನ ಅಂತರ ಕಡಿಮೆ ಮಾಡಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ. ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪಂಚಾಯತ್‌ಗಳು ಸ್ಮಾರ್ಟ್ ಆಗುತ್ತಿವೆ. ಪಂಚಾಯಿತಿಗಳು ಕೈಗೊಳ್ಳುತ್ತಿರುವ ಯೋಜನೆಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಅಮೃತ್ ಸರೋವರದ ಉದಾಹರಣೆ ನೀಡಿದ ಪ್ರಧಾನಮಂತ್ರಿ, ಅಲ್ಲಿ ಜಾಗ ಅಥವಾ ನಿವೇಶನಗಳ ಆಯ್ಕೆ ಮತ್ತು ಯೋಜನೆಯ ಪೂರ್ಣಗೊಳಿಸುವಿಕೆಯಂತಹ ಸಮಸ್ಯೆಗಳನ್ನು ತಂತ್ರಜ್ಞಾನದ ಸಹಾಯದಿಂದ ಮಾಡಲಾಗುತ್ತಿದೆ. ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕ ಖರೀದಿಗಾಗಿ ಜಿಇಎಂ ಪೋರ್ಟಲ್ ಅನಾವರಣಗೊಳಿಸಿದ್ದು, ಇದು ಖರೀದಿಯನ್ನು ಸುಲಭ ಮತ್ತು ಪಾರದರ್ಶಕಗೊಳಿಸುತ್ತಿದೆ. ಸ್ಥಳೀಯ ಗುಡಿ ಕೈಗಾರಿಕೆಗಳು ತಮ್ಮ ಮಾರಾಟಕ್ಕೆ ಬಲವಾದ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆಯಲ್ಲಿ ತಂತ್ರಜ್ಞಾನದ ಪ್ರಯೋಜನಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಯೋಜನೆಯು ಹಳ್ಳಿಗಳಲ್ಲಿನ ಆಸ್ತಿ ಹಕ್ಕುಗಳ ಸದೃಶ್ಯವನ್ನು ಬದಲಾಯಿಸುತ್ತಿದೆ, ವಿವಾದಗಳು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡುತ್ತಿದೆ. ಡ್ರೋನ್ ತಂತ್ರಜ್ಞಾನದ ಬಳಕೆಯು ಯಾವುದೇ ತಾರತಮ್ಯವಿಲ್ಲದೆ ಜನರಿಗೆ ಆಸ್ತಿ ದಾಖಲೆಗಳನ್ನು ಖಾತ್ರಿಪಡಿಸುತ್ತಿದೆ. ದೇಶದ 75 ಸಾವಿರ ಹಳ್ಳಿಗಳಲ್ಲಿ ಆಸ್ತಿ ಕಾರ್ಡ್ ನೀಡುವ ಕೆಲಸ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಚಿಂದ್ವಾರದ ಅಭಿವೃದ್ಧಿಗೆ ಎದುರಾಗಿರುವ ಉದಾಸೀನತೆಯನ್ನು ಉಲ್ಲೇಖಿಸಿದ ಪ್ರಧಾನಿ, ಕೆಲವು ರಾಜಕೀಯ ಪಕ್ಷಗಳ ಚಿಂತನೆಯೇ ಇದಕ್ಕೆ ಕಾರಣ ಎಂದು ದೂಷಿಸಿದರು. ಸ್ವಾತಂತ್ರ್ಯಾ ನಂತರ ಗ್ರಾಮೀಣ ಪ್ರದೇಶದ ಮೂಲಸೌಕರ್ಯಗಳನ್ನು ಕಡೆಗಣಿಸುವ ಮೂಲಕ ಆಡಳಿತ ನಡೆಸಿದ ಪಕ್ಷಗಳು ಗ್ರಾಮೀಣ ಬಡವರ ನಂಬಿಕೆ ಕಳೆದುಕೊಂಡಿವೆ ಎಂದರು.

ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ವಾಸಿಸುವ ಹಳ್ಳಿಗಳಲ್ಲಿ ತಾರತಮ್ಯ ಮಾಡುವುದರಿಂದ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. 2014ರ ನಂತರ ಗ್ರಾಮೀಣ ಆರ್ಥಿಕತೆ, ಗ್ರಾಮಗಳಲ್ಲಿನ ಸೌಲಭ್ಯಗಳು ಹಾಗೂ ಹಳ್ಳಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಜ್ವಲ ಮತ್ತು ಪ್ರಧಾನಮಂತ್ರಿ ಆವಾಸ್‌ನಂತಹ ಯೋಜನೆಗಳು ಹಳ್ಳಿಗಳಲ್ಲಿ ಆಳವಾದ ಪರಿಣಾಮ ಬೀರಿವೆ. 4.5 ಕೋಟಿ ಮನೆಗಳ ಪೈಕಿ 3 ಕೋಟಿ ಪಿಎಂಎವೈ ಮನೆಗಳು ಗ್ರಾಮೀಣ ಪ್ರದೇಶದಲ್ಲಿವೆ, ಅವೆಲ್ಲವೂ ಹೆಚ್ಚಾಗಿ ಮಹಿಳೆಯರ ಹೆಸರಿನಲ್ಲಿದೆ ಎಂದು ಮೋದಿ ತಿಳಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಿಸಲಾದ ಪ್ರತಿ ಮನೆಯ ವೆಚ್ಚ 1 ಲಕ್ಷ ರೂ.ಗಿಂತ ಹೆಚ್ಚಾಗಿದೆ. ಸರ್ಕಾರವು ದೇಶದ ಕೋಟಿಗಟ್ಟಲೆ ಮಹಿಳೆಯರನ್ನು ‘ಲಕ್ಷಾಧಿಪತಿ ದೀದಿ’ (ಮಿಲಿಯನೇರ್) ಮಾಡುವ ಮೂಲಕ ಅವರ ಜೀವನವನ್ನು ಪರಿವರ್ತಿಸಿದೆ. 4 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಇಂದು ಪಕ್ಕಾ ಮನೆಗಳಲ್ಲಿ ಗೃಹ ಪ್ರವೇಶ ಮಾಡಿವೆ. ಇದೀಗ ಮನೆ ಮಾಲೀಕರಾಗಿರುವ ಸಹೋದರಿಯರಿಗೆ ಅಭಿನಂದನೆಗಳು ಸಲ್ಲಬೇಕು ಎಂದರು.

ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ವಿದ್ಯುತ್ ಪಡೆದ 2.5 ಕೋಟಿ ಮನೆಗಳಲ್ಲಿ ಹೆಚ್ಚಿನ ಮನೆಗಳು ಗ್ರಾಮೀಣ ಪ್ರದೇಶಗಳಿಗೆ ಸೇರಿವೆ. ಹರ್ ಘರ್ ಜಲ ಯೋಜನೆಯಿಂದಾಗಿ 9 ಕೋಟಿಗೂ ಹೆಚ್ಚು ಗ್ರಾಮೀಣ ಜನರಿಗೆ ನೀರಿನ ಸಂಪರ್ಕ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ಈ ಹಿಂದೆ ಇದ್ದ 13 ಲಕ್ಷಕ್ಕೆ ಹೋಲಿಸಿದರೆ ಈಗ ಸರಿಸುಮಾರು 60 ಲಕ್ಷ ಮನೆಗಳು ನೀರಿನ ಸಂಪರ್ಕ ಪಡೆದಿವೆ ಎಂದು ಅವರು ಗಮನ ಸೆಳೆದರು.

ಗ್ರಾಮೀಣರಿಗೆ ಬ್ಯಾಂಕ್‌ಗಳು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಹೆಚ್ಚಿನ ಗ್ರಾಮೀಣ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ ಅಥವಾ ಬ್ಯಾಂಕ್‌ಗಳಿಂದ ಯಾವುದೇ ಸೇವೆಗಳನ್ನು ಪಡೆದಿಲ್ಲ. ಇದರ ಪರಿಣಾಮವಾಗಿ, ಫಲಾನುಭವಿಗಳಿಗೆ ಕಳುಹಿಸಲಾದ ಆರ್ಥಿಕ ಸಹಾಯವು ಅವರಿಗೆ ತಲುಪುವ ಮೊದಲೇ ಲೂಟಿಯಾಗುತ್ತಿತ್ತು. ಜನ್ ಧನ್ ಯೋಜನೆ ಜಾರಿಗೆ ಬಂದ ನಂತರ 40 ಕೋಟಿಗೂ ಹೆಚ್ಚು ಗ್ರಾಮೀಣ ನಿವಾಸಿಗಳಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಭಾರತೀಯ ಅಂಚೆ ಕಚೇರಿ ಮೂಲಕ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಬ್ಯಾಂಕ್‌ಗಳ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಗ್ರಾಮೀಣ ಜನರಿಗೆ ಕೃಷಿಯಾಗಲಿ, ವ್ಯಾಪಾರವಾಗಲಿ ಎಲ್ಲದರಲ್ಲೂ ಸಹಾಯ ಮಾಡುತ್ತಿರುವ ಬ್ಯಾಂಕ್ ಮಿತ್ರರು ಮತ್ತು ತರಬೇತಿ ಪಡೆದ ಬ್ಯಾಂಕ್ ಸಖಿಗಳ ಉದಾಹರಣೆಯನ್ನು ಪ್ರಧಾನಿ ನೀಡಿದರು.

ಹಿಂದಿನ ಸರ್ಕಾರಗಳಿಂದ ಭಾರತದ ಗ್ರಾಮೀಣ ಪ್ರದೇಶಗಳಿಗೆ ಉಂಟಾದ ದೊಡ್ಡ ಅನ್ಯಾಯದ ಮೇಲೆ ಬೆಳಕು ಚೆಲ್ಲುವ ಪ್ರಧಾನಿ, ಹಳ್ಳಿಗಳನ್ನು ವೋಟ್ ಬ್ಯಾಂಕ್‌ಗಳೆಂದು ಮಾತ್ರ ಪರಿಗಣಿಸಿದ ಕಾರಣ, ಹಳ್ಳಿಗಳ ಅಭಿವೃದ್ಧಿಗೆ ಹಣ ಖರ್ಚು ಮಾಡುವುದನ್ನು ತಪ್ಪಿಸಲಾಗಿದೆ. ಹರ್ ಘರ್ ಜಲ್ ಯೋಜನೆಗೆ 3.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುವ ಮೂಲಕ ಪ್ರಸ್ತುತ ಸರ್ಕಾರವು ಹಳ್ಳಿಗಳ ಅಭಿವೃದ್ಧಿಯ ಬಾಗಿಲು ತೆರೆದಿದೆ.  ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ, 1 ಲಕ್ಷ ಕೋಟಿ ರೂ. ಅನ್ನು ಯೋಜನೆ ಪೂರ್ಣಗೊಳಿಸಲು ವ್ಯಯಿಸಲಾಗುತ್ತಿದೆ. ನೀರಾವರಿ ಯೋಜನೆಗಳು ದಶಕಗಳಿಂದ ಅಪೂರ್ಣವಾಗಿವೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಅಭಿಯಾನಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿ, ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರವು ಸುಮಾರು 2.5 ಲಕ್ಷ ಕೋಟಿ ರೂ. ನೇರವಾಗಿ ವರ್ಗಾಯಿಸಿದೆ. ಈ ಯೋಜನೆಯ ಭಾಗವಾಗಿ ಮಧ್ಯಪ್ರದೇಶದ ಸುಮಾರು 90 ಲಕ್ಷ ರೈತರು 18,500 ಕೋಟಿ ರೂ. ಪಡೆದಿದ್ದಾರೆ.  "ರೇವಾದ ರೈತರು ಈ ನಿಧಿಯಿಂದ ಸುಮಾರು 500 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ" ಎಂದು ಅವರು ಹೇಳಿದರು. ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಹೆಚ್ಚಳದ ಜತೆಗೆ ಸಾವಿರಾರು ಕೋಟಿ ರೂಪಾಯಿಯನ್ನು ಹಳ್ಳಿಗಳಿಗೆ ತಲುಪಿಸಲಾಗಿದೆ.  ಕೊರೊನಾ ಅವಧಿಯಲ್ಲಿ ಸರ್ಕಾರವು ಕಳೆದ 3 ವರ್ಷಗಳಿಂದ 3 ಲಕ್ಷ ಕೋಟಿ ರೂ. ಮೊತ್ತದ ಉಚಿತ ಪಡಿತರವನ್ನು ಬಡವರಿಗೆ ವಿತರಿಸಲಾಗಿದೆ ಎಂದರು.

ಮುದ್ರಾ ಯೋಜನೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಕೇಂದ್ರ ಸರ್ಕಾರವು ಕಳೆದ ವರ್ಷವೊಂದರಲ್ಲೇ 24 ಲಕ್ಷ ಕೋಟಿ ರೂ. ನೆರವು ನೀಡುವ ಮೂಲಕ ಹಳ್ಳಿಗಳಲ್ಲಿ ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಕಾರಣದಿಂದಾಗಿ, ಹೆಚ್ಚಿನ ಸಂಖ್ಯೆಯ ಮಹಿಳಾ ಫಲಾನುಭವಿಗಳು ಸೇರಿದಂತೆ ಹಳ್ಳಿಗಳಲ್ಲಿ ಕೋಟಿಗಟ್ಟಲೆ ಜನರು ತಮ್ಮ ಉದ್ಯೋಗ ಪ್ರಾರಂಭಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ, ಮಧ್ಯಪ್ರದೇಶದ 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ದೇಶಾದ್ಯಂತ ಒಟ್ಟು 9 ಕೋಟಿ ಮಹಿಳೆಯರು ಸ್ವ-ಸಹಾಯ ಗುಂಪುಗಳಿಗೆ ಸೇರಿದ್ದಾರೆ. ಸರ್ಕಾರವು ಪ್ರತಿ ಸ್ವ-ಸಹಾಯ ಗುಂಪಿಗೆ ಬ್ಯಾಂಕ್ ಗ್ಯಾರಂಟಿ ಇಲ್ಲದೆ 20 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. "ಮಹಿಳೆಯರು ಈಗ ಅನೇಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಆರ್ಡರ್ ಗಳನ್ನು ನಿರ್ವಹಿಸುತ್ತಿದ್ದಾರೆ", ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರವು ಸ್ಥಾಪಿಸಿದ 'ದೀದಿ ಕೆಫೆ'ಯನ್ನು ಪ್ರಧಾನಿ ಉಲ್ಲೇಖಿಸಿದರು. ಮಧ್ಯಪ್ರದೇಶದ ಸ್ತ್ರೀಶಕ್ತಿಯನ್ನು ಅಭಿನಂದಿಸಿದ ಪ್ರಧಾನಿ, ಕಳೆದ ಪಂಚಾಯತ್ ಚುನಾವಣೆಯಲ್ಲಿ ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಸುಮಾರು 17,000 ಮಹಿಳೆಯರು ಪಂಚಾಯತ್ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ ಎಂದರು.

ಇಂದು ಆರಂಭಿಸಲಾದ ‘ಸಮಾವೇಶಿ ಅಭಿಯಾನ’ ಉಲ್ಲೇಖಿಸಿದ ಪ್ರಧಾನ ಮಂತ್ರಿ,  ಸಬ್ಕಾ ವಿಕಾಸ್ ಮೂಲಕ ವಿಕ್ಷಿತ್ ಭಾರತ ನಿರ್ಮಾಣ ಸಾಧಿಸಲು ಇದು ಬಲವಾದ ಉಪಕ್ರಮವಾಗಿದೆ ಎಂದು ಹೇಳಿದರು. “ಪ್ರತಿಯೊಬ್ಬ ಪಂಚಾಯತ್, ಪ್ರತಿ ಸಂಸ್ಥೆ, ಪ್ರತಿ ಪ್ರತಿನಿಧಿ, ದೇಶದ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಒಂದಾಗಬೇಕು. ಯಾವುದೇ ತಾರತಮ್ಯವಿಲ್ಲದೆ ಪ್ರತಿ ಮೂಲಸೌಲಭ್ಯವು 100% ಫಲಾನುಭವಿಗಳನ್ನು ತ್ವರಿತವಾಗಿ ತಲುಪಿದಾಗ ಮಾತ್ರ ಇದು ಸಾಧ್ಯ” ಎಂದು ಅವರು ಹೇಳಿದರು.

ಕೃಷಿಯ ಹೊಸ ಪ್ರಯೋಗಗಳು ಮತ್ತು ವ್ಯವಸ್ಥೆಗಳ ಬಗ್ಗೆ ಪಂಚಾಯತ್‌ಗಳು ಜಾಗೃತಿ ಮೂಡಿಸಬೇಕು. ವಿಶೇಷವಾಗಿ ನೈಸರ್ಗಿಕ ಕೃಷಿಯನ್ನು ಪ್ರಚಾರ ಮಾಡಬೇಕು. ಸಣ್ಣ ರೈತರು, ಮೀನುಗಾರರು ಮತ್ತು ಪಶುಸಂಗೋಪನೆಯ ಉಪಕ್ರಮಗಳ ಜಾರಿಗೆ ಪಂಚಾಯತ್‌ಗಳು ದೊಡ್ಡ ಪಾತ್ರ ವಹಿಸಬೇಕು. “ನೀವು ಪ್ರತಿಯೊಂದು ಅಭಿವೃದ್ಧಿ-ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ, ರಾಷ್ಟ್ರದ ಸಾಮೂಹಿಕ ಪ್ರಯತ್ನಗಳು ಬಲಗೊಳ್ಳುತ್ತವೆ. ಇದು ಅಮೃತ ಕಾಲದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನೈಜ ಶಕ್ತಿಯಾಗಲಿದೆ ಎಂದರು

ಇಂದಿನ ಯೋಜನೆಗಳನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಚಿಂದ್ವಾರ-ನೈನ್‌ಪುರ್-ಮಂಡ್ಲಾ ಫೋರ್ಟ್ ರೈಲು ಮಾರ್ಗದ ವಿದ್ಯುದ್ದೀಕರಣವನ್ನು ಪ್ರಸ್ತಾಪಿಸಿದರು, ಇದು ಈ ಭಾಗದ ಜನರಿಗೆ ದೆಹಲಿ-ಚೆನ್ನೈ ಮತ್ತು ಹೌರಾ-ಮುಂಬೈ ಮಾರ್ಗದ ಸಂಪರ್ಕವನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಮತ್ತು ಬುಡಕಟ್ಟು ಜನರಿಗೆ ಪ್ರಯೋಜನವನ್ನು ಒದಗಿಸುತ್ತದೆ. ಛಿಂದ್‌ವಾರಾ-ನೈನ್‌ಪುರ್‌ಗೆ ಇಂದು ಹಸಿರು ನಿಶಾನೆ ತೋರಲಾದ ಹೊಸ ರೈಲುಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅನೇಕ ಪಟ್ಟಣಗಳು ​​ಮತ್ತು ಹಳ್ಳಿಗಳು ಚಿಂದ್ವಾರಾ, ಸಿಯೋನಿಯಲ್ಲಿರುವ ತಮ್ಮ ಜಿಲ್ಲಾ ಕೇಂದ್ರಕ್ಕೆ ನೇರವಾಗಿ ಸಂಪರ್ಕ ಹೊಂದಲಿವೆ. ನಾಗ್‌ಪುರ ಮತ್ತು ಜಬಲ್‌ಪುರಕ್ಕೆ ಹೋಗುವುದು ಸಹ ಸುಲಭವಾಗುತ್ತದೆ ಎಂದರು. ಈ ಪ್ರದೇಶದಲ್ಲಿ ಶ್ರೀಮಂತ ವನ್ಯಜೀವಿಗಳಿವೆ. ಹಾಗಾಗಿ, ಹೆಚ್ಚುತ್ತಿರುವ ಸಂಪರ್ಕವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. "ಇದು ಡಬಲ್ ಇಂಜಿನ್ ಸರ್ಕಾರದ ಶಕ್ತಿ" ಎಂದು ಪ್ರಧಾನಿ ಹೇಳಿದರು.

ಈ ಭಾನುವಾರ 100 ಸಂಚಿಕೆಗಳನ್ನು ಪೂರೈಸುತ್ತಿರುವ 'ಮನ್ ಕಿ ಬಾತ್' ಕಾರ್ಯಕ್ರಮದ ಬಗ್ಗೆ ಜನರು ತೋರಿಸಿರುವ ಪ್ರೀತಿ ಮತ್ತು ಬೆಂಬಲಕ್ಕಾಗಿ ಪ್ರಧಾನಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಮನ್ ಕಿ ಬಾತ್‌ನಲ್ಲಿ ಮಧ್ಯಪ್ರದೇಶದ ಜನರ ವಿವಿಧ ಸಾಧನೆಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಅವರು, 100ನೇ ಸಂಚಿಕೆಗೆ ಎಲ್ಲರೂ ಟ್ಯೂನ್ ಮಾಡುವಂತೆ ಮನವಿ ಮಾಡಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್, ರಾಜ್ಯ ಸಚಿವರಾದ ಶ್ರೀ ಫಗ್ಗನ್ ಕುಲಸ್ತೆ, ಸಾಧ್ವಿ ನಿರಂಜನ್ ಜ್ಯೋತಿ, ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್, ಮಧ್ಯಪ್ರದೇಶ ಸರ್ಕಾರದ ಸಂಸದರು ಮತ್ತು ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆಯಲ್ಲಿ ಭಾಗವಹಿಸಿ,  ದೇಶಾದ್ಯಂತ ಎಲ್ಲಾ ಗ್ರಾಮ ಸಭೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕ ಖರೀದಿಗಾಗಿ ರೂಪಿಸಿರುವ ಸಂಯೋಜಿತ ಇ-ಗ್ರಾಮ್ ಸ್ವರಾಜ್ ಮತ್ತು ಜಿಇಎಂ ಪೋರ್ಟಲ್ ಅನ್ನು ಪ್ರಧಾನಿ ಅನಾವರಣಗೊಳಿಸಿದರು. ಪಂಚಾಯತ್‌ ಸಂಸ್ಥೆಗಳು ತಮ್ಮ ಸರಕುಗಳು ಮತ್ತು ಸೇವೆಗಳನ್ನು ಜಿಇಎಂ ಪೋರ್ಟಲ್ ಮೂಲಕ ಖರೀದಿಸಲು ಇ-ಗ್ರಾಮ್ ಸ್ವರಾಜ್ ಆನ್ ಲೈನ್ ವೇದಿಕೆಯು ಅನುವು ಮಾಡಿಕೊಡುತ್ತದೆ. ಇದನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ನಲ್ಲಿ ಏಕೀಕರಣಗೊಳಿಸಲಾಗಿದೆ.

ಸರ್ಕಾರದ ಯೋಜನೆಗಳ ಶುದ್ಧತ್ವವನ್ನು ಖಾತ್ರಿಪಡಿಸುವ ಕಡೆಗೆ ಜನರ ಸಹಭಾಗಿತ್ವವನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಪ್ರಧಾನಮಂತ್ರಿ ಅವರು "ವಿಕಾಸ ಕಿ ಓರ್ ಸಾಝೇ ಕಮ್" ಎಂಬ ಅಭಿಯಾನ ಅನಾವರಣಗೊಳಿಸಿದರು. ಅಭಿಯಾನದ ವಿಷಯವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಾಗಿದ್ದು, ದೇಶದ ಕಟ್ಟಕಡೆಯ ವ್ಯಕ್ತಿ ಮತ್ತು ಕೊನೆಯ ಮೈಲಿಯನ್ನು ತಲುಪುವತ್ತ ಗಮನ ಹರಿಸುತ್ತದೆ.

ಪ್ರಧಾನ ಮಂತ್ರಿ ಅವರು ಸುಮಾರು 35 ಲಕ್ಷ ಸ್ವಾಮಿತ್ವ ಆಸ್ತಿ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದ ನಂತರ, ಇಲ್ಲಿ ವಿತರಿಸಲಾದ ಕಾರ್ಡ್ ಗಳು ಸೇರಿದಂತೆ ದೇಶಾದ್ಯಂತ ಸ್ವಾಮಿತ್ವ ಯೋಜನೆಯಡಿ ಸುಮಾರು 1.25 ಕೋಟಿ ಆಸ್ತಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. 'ಎಲ್ಲರಿಗೂ ವಸತಿ' ಗುರಿ ಸಾಧಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ್ ಯೋಜನೆ ಅಡಿ, 4 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳ 'ಗೃಹ ಪ್ರವೇಶ' ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು.

ಪ್ರಧಾನ ಮಂತ್ರಿ ಅವರು ಸುಮಾರು 2,300 ಕೋಟಿ. ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಜತೆಗೆ ರಾಷ್ಟ್ರಕ್ಕೆ ಸಮರ್ಪಿಸಿದರು. ಮಧ್ಯಪ್ರದೇಶದಲ್ಲಿ ಪ್ರತಿಶತ  100 ರೈಲು ವಿದ್ಯುದೀಕರಣ ಯೋಜನೆ ಇದರಲ್ಲಿ ಒಳಗೊಂಡಿವೆ, ಜತೆಗೆ ವಿವಿಧ ಡಬ್ಲಿಂಗ್, ಗೇಜ್ ಪರಿವರ್ತನೆ ಮತ್ತು ವಿದ್ಯುದ್ದೀಕರಣ ಯೋಜನೆಗಳು ಸೇರಿವೆ. ಗ್ವಾಲಿಯರ್ ರೈಲು ನಿಲ್ದಾಣದ ಮರುಭಿವೃದ್ಧಿಗೆ ಪ್ರಧಾನಿ ಅಡಿಗಲ್ಲು ಹಾಕಿದರು.

ಜಲಜೀವನ್ ಮಿಷನ್ ಅಡಿ, ಸುಮಾರು 7,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

***

 



(Release ID: 1921640) Visitor Counter : 142