ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ 100ನೇ ಜಿ20 ಶೃಂಗಸಭೆ

Posted On: 17 APR 2023 10:19AM by PIB Bengaluru

ವಾರಾಣಸಿಯಲ್ಲಿಂದು ಕೃಷಿ ಮುಖ್ಯ ವಿಜ್ಞಾನಿಗಳ (ಎಂಎಸಿಎಸ್) ಸಭೆಯ ಆಯೋಜನೆಯೊಂದಿಗೆ ಜಿ -20 ಅಧ್ಯಕ್ಷತೆಯಲ್ಲಿ ಭಾರತವು 100 ನೇ  ಶೃಂಗಸಭೆಯ ಆತಿಥ್ಯವಹಿಸಿ ಪ್ರಮುಖ ಮೈಲಿಗಲ್ಲಿನ ಸಾಧನೆಯ ಸಂಭ್ರಮವನ್ನು ಆಚರಿಸಿತು.   ಗೋವಾದಲ್ಲಿ 2ನೇ ಆರೋಗ್ಯ ಕಾರ್ಯ ಗುಂಪಿನ ಸಭೆ, ಹೈದರಾಬಾದ್ ನಲ್ಲಿ 2 ನೇ ಡಿಜಿಟಲ್ ಆರ್ಥಿಕತೆಯ ಕಾರ್ಯಗುಂಪಿನ ಸಭೆ ಮತ್ತು ಶಿಲ್ಲಾಂಗ್ ನಲ್ಲಿ ಬಾಹ್ಯಾಕಾಶ ಆರ್ಥಿಕ ನಾಯಕರ ಪೂರ್ವಭಾವಿ ಸಭೆ ಸಹ ಇಂದು ನಡೆಯುತ್ತಿದೆ.

2022 ನವೆಂಬರ್ 16 ರಂದು ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದ ನಂತರ, ಭಾರತದ ಒಂದು ವರ್ಷದ ಜಿ 20 ಅಧ್ಯಕ್ಷತೆಯು 2022ರ ಡಿಸೆಂಬರ್ 1 ರಂದು ಪ್ರಾರಂಭಗೊಂಡಿತು ಮತ್ತು 2023ರ ನವೆಂಬರ್ 30 ರವರೆಗೆ ಮುಂದುವರಿಯುತ್ತದೆ. ಇದಕ್ಕೂ ಮುನ್ನ 2022ರ ನವೆಂಬರ್ 8 ರಂದು ಪ್ರಧಾನಮಂತ್ರಿಯವರು ಜಿ 20 ಲಾಂಛನವನ್ನು ಬಿಡುಗಡೆ ಮಾಡಿದ್ದರು ಮತ್ತು ಭಾರತದ ಜಿ 20 ಅಧ್ಯಕ್ಷತೆಯ ಧ್ಯೇಯವಾಕ್ಯ- "ವಸುಧೈವ ಕುಟುಂಬಕಂ"- "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ವನ್ನು ಅನಾವರಣಗೊಳಿಸಿದ್ದರು. ಭಾರತದ ರಾಷ್ಟ್ರಧ್ವಜದ ಬಣ್ಣಗಳ ಮೂಲಕ ವಿನ್ಯಾಸಗೊಳಿಸಲಾದ ಜಿ 20 ಲಾಂಛನ ಸವಾಲುಗಳ ನಡುವೆ ನಮ್ಮ ಭೂಗ್ರಹ ಪರವಾದ ವಿಧಾನ ಮತ್ತು ಪ್ರಗತಿಯನ್ನು ಸಂಕೇತಿಸುತ್ತದೆ.
 
ಜಿ -20 ಗುಂಪು 19 ದೇಶಗಳು (ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ ಗಣರಾಜ್ಯ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ) ಮತ್ತು ಐರೋಪ್ಯ ಒಕ್ಕೂಟವನ್ನು ಒಳಗೊಂಡಿದೆ. ಜಿ 20 ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯ ಸುಮಾರು ಶೇ.85ರಷ್ಟು, ಜಾಗತಿಕ ವ್ಯಾಪಾರದ ಶೇ.75ರಷ್ಟು ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತವೆ.
 
ಭಾರತದ ಜಿ 20 ಅಧ್ಯಕ್ಷತೆಯಲ್ಲಿ ವೈಯಕ್ತಿಕ ಭಾಗವಹಿಸುವಿಕೆಯು ಅಭೂತಪೂರ್ವವಾದಷ್ಟು ದೊಡ್ಡದಾಗಿದೆ. ಈವರೆಗಿನ ಜಿ-20 ಸಂಬಂಧಿತ ಸಭೆಗಳಲ್ಲಿ 110 ಕ್ಕೂ ಹೆಚ್ಚು ರಾಷ್ಟ್ರಗಳಿಂದ 12,300 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇದರಲ್ಲಿ ಜಿ 20 ಸದಸ್ಯರಾಷ್ಟ್ರಗಳು, 9 ಆಹ್ವಾನಿತ ದೇಶಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ಭಾಗವಹಿಸುವಿಕೆಯೂ ಸೇರಿದೆ.  ಈ ದಿನಾಂಕದವರೆಗೆ, 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 41 ನಗರಗಳಲ್ಲಿ  ಜಿ 20ರ 100 ಸಭೆಗಳು ನಡೆದಿವೆ . ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಬೆಂಬಲ ಮತ್ತು ಭಾಗವಹಿಸುವಿಕೆಯೊಂದಿಗೆ ಭಾರತದ ಉದ್ದಗಲಕ್ಕೂ ಸಭೆಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ದೇಶದಾದ್ಯಂತ ಸುಮಾರು 60 ನಗರಗಳಲ್ಲಿ 200 ಕ್ಕೂ ಹೆಚ್ಚು ಜಿ 20 ಸಂಬಂಧಿತ ಸಭೆಗಳ ಅಂಗವಾಗಿ ವಿದೇಶಿ ಪ್ರತಿನಿಧಿಗಳಿಗೆ ಆತಿಥ್ಯ ನೀಡಲಿದೆ, ಇದು  ಯಾವುದೇ ಜಿ 20 ಪ್ರೆಸಿಡೆನ್ಸಿಯಲ್ಲಿ ವಿಶಾಲವಾದ ಭೌಗೋಳಿಕ ಹರಡುವಿಕೆಯಾಗಿದೆ. ಎಲ್ಲ 13 ಶರ್ಪಾ ಟ್ರ್ಯಾಕ್ ಕಾರ್ಯ ಗುಂಪುಗಳು, 8 ಹಣಕಾಸು ಟ್ರ್ಯಾಕ್ ಕಾರ್ಯ ವಾಹಿನಿಗಳು, 11 ಕಾರ್ಯಕ್ರಮ ಗುಂಪುಗಳು ಮತ್ತು 4 ಉಪಕ್ರಮಗಳು ಅರ್ಥಪೂರ್ಣ ಸಂವಾದಗಳನ್ನು ಪ್ರಾರಂಭಿಸಿವೆ. ವಿಪತ್ತಿನ ಅಪಾಯ ತಗ್ಗಿಸುವ ಹೊಸ ಕಾರ್ಯ ಗುಂಪು (ಡಿಆರ್.ಆರ್), ಹೊಸ ಕಾರ್ಯಕ್ರಮ ಗುಂಪು "ನವೋದ್ಯಮ 20" ಮತ್ತು ಹೊಸ ಉಪಕ್ರಮ ಮುಖ್ಯ ವಿಜ್ಞಾನ ಸಲಹೆಗಾರರ ದುಂಡುಮೇಜಿನ ಸಭೆ (ಸಿಎಸ್ಎಆರ್) ಅನ್ನು ನಮ್ಮ ಜಿ 20 ಅಧ್ಯಕ್ಷತೆಯಲ್ಲಿ ಕಾರ್ಯಗತಗೊಳಿಸಲಾಗಿದೆ. 11 ಕಾರ್ಯ ಗುಂಪುಗಳು ಖಾಸಗಿ ವಲಯ, ಶಿಕ್ಷಣ ತಜ್ಞರು, ನಾಗರಿಕ ಸಮಾಜ, ಯುವಜನರು ಮತ್ತು ಮಹಿಳೆಯರು ಮತ್ತು ಸಂಸತ್ತುಗಳು, ಲೆಕ್ಕಪರಿಶೋಧನಾ ಪ್ರಾಧಿಕಾರಗಳು ಮತ್ತು ನಗರ ಆಡಳಿತಗಳು ಸೇರಿದಂತೆ ವಿವಿಧ ಸಂಸ್ಥೆಗಳ ನಡುವೆ ಸಂವಾದಕ್ಕೆ ವೇದಿಕೆಯನ್ನು ಒದಗಿಸುತ್ತವೆ.
 
ಇಲ್ಲಿಯವರೆಗೆ, ಮೂರು ಸಚಿವ ಮಟ್ಟದ ಸಭೆಗಳು ನಡೆದಿವೆ. ಮೊದಲ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಸಭೆ (ಎಫ್ಎಂಸಿಬಿಜಿ) 2023 ರ ಫೆಬ್ರವರಿ 24-25 ರಂದು ಬೆಂಗಳೂರಿನಲ್ಲಿ ನಡೆಯಿತು, ಜಿ 20 ವಿದೇಶಾಂಗ ಸಚಿವರ ಸಭೆ (ಎಫ್ಎಂಎಂ) ನವದೆಹಲಿಯಲ್ಲಿ 2023ರ ಮಾರ್ಚ್  1-2 ರಂದು ನಡೆಯಿತು ಮತ್ತು ಎರಡನೇ ಎಫ್ಎಂಸಿಬಿಜಿ ಸಭೆ 2023 ರ ಏಪ್ರಿಲ್ 12-13 ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಿತು. ಉದಯಪುರದಲ್ಲಿ 2 ಶರ್ಪಾ ಸಭೆಗಳು (4-7 ಡಿಸೆಂಬರ್ 2022) ಮತ್ತು ಕುಮಾರಕೊಮ್ (30 ಮಾರ್ಚ್ - 2 ಏಪ್ರಿಲ್ 2023) ನಲ್ಲಿ ನಡೆದಿವೆ. ಎಫ್.ಎಂ ಸಿ ಬಿ ಜಿ, ಎಫ್.ಎಂ ಎಂ ಮತ್ತು ಶೆರ್ಪಾ ಸಭೆಗಳಲ್ಲಿ ಸಚಿವರ ಮಟ್ಟದ ಗಣ್ಯರೊಂದಿಗೆ ಎಲ್ಲ ನಿಯೋಗಗಳಿಂದ ದಾಖಲೆಯ, ಉನ್ನತ ಮಟ್ಟದ ವ್ಯಕ್ತಿಗತ ಭಾಗವಹಿಸುವಿಕೆ ಕಂಡುಬಂದಿದೆ. 28 ವಿದೇಶಾಂಗ ಸಚಿವರು (18 ಜಿ 20 ಸದಸ್ಯ ರಾಷ್ಟ್ರಗಳು, 9 ಅತಿಥಿ ದೇಶಗಳು ಮತ್ತು ಎಯು ಚಾಯ್-ಕೊಮೊರೊಸ್) ಮತ್ತು 2 ಡೆಪ್ಯೂಟಿ / ಉಪ ವಿದೇಶಾಂಗ ಸಚಿವರು (ಜಪಾನ್ ಮತ್ತು ಕೊರಿಯಾ ಗಣರಾಜ್ಯದಿಂದ) ಎಫ್ಎಂಎಂನಲ್ಲಿ ಭಾಗವಹಿಸಿದ್ದರು. ಈ ಸಚಿವ ಮಟ್ಟದ ಸಭೆಗಳು ಜಿ 20ರ ಹಂಚಿಕೆಯ ಆದ್ಯತೆಗಳ ಬಗ್ಗೆ ಒಮ್ಮತವನ್ನು ಬೆಳೆಸುವ ದಾಖಲೆಯ ಗಣನೀಯ ಫಲಶ್ರುತಿಯೊಂದಿಗೆ  ಮುಕ್ತಾಯಗೊಂಡವು. ಎಂಡಿಬಿ ಸುಧಾರಣೆಗಳು ಮತ್ತು ಎಫ್.ಎಂ ಸಿ ಬಿ ಜಿಯಲ್ಲಿ ಸಾಲ ನಿರ್ವಹಣೆ ಮತ್ತು ಬಹುಪಕ್ಷೀಯ ಸುಧಾರಣೆಗಳು, ಅಭಿವೃದ್ಧಿ ಸಹಕಾರ, ಆಹಾರ ಮತ್ತು ಇಂಧನ ಭದ್ರತೆ, ಭಯೋತ್ಪಾದನೆ ನಿಗ್ರಹ, ಹೊಸ ಮತ್ತು ಉದಯೋನ್ಮುಖ ಬೆದರಿಕೆಗಳು, ಜಾಗತಿಕ ಕೌಶಲ್ಯ ನಕ್ಷೆ ಮತ್ತು ಎಫ್ ಎಂಎಂನಲ್ಲಿ ವಿಪತ್ತಿನ ಅಪಾಯವನ್ನು ತಗ್ಗಿಸುವ ಬಗ್ಗೆ ತಜ್ಞರ ಗುಂಪನ್ನು ರಚಿಸುವ ಬಗ್ಗೆ ಒಮ್ಮತದ ಸಹಮತವನ್ನೂ ಇದು ಒಳಗೊಂಡಿದೆ.
 
ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಜಾಗತಿಕ ದಕ್ಷಿಣ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿ ಮತ್ತು ಕಾಳಜಿಯನ್ನು ಹೆಚ್ಚಿಸುತ್ತಿದೆ. ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ 2023 ರ ಜನವರಿಯಲ್ಲಿ ನಡೆದ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ 125 ದೇಶಗಳು ಭಾಗವಹಿಸಿದ್ದವು, ಇದರಲ್ಲಿ 18 ರಾಷ್ಟ್ರಗಳ ಮುಖ್ಯಸ್ಥರು / ಸರ್ಕಾರದ ಮಟ್ಟದಲ್ಲಿ ಮತ್ತು ಇತರರು ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ, ದಕ್ಷಿಣ ಆಫ್ರಿಕಾ (ಜಿ 20 ಸದಸ್ಯ), ಮಾರಿಷಸ್, ಈಜಿಪ್ಟ್, ನೈಜೀರಿಯಾ, ಎಯು ಚೇರ್ - ಕೊಮೊರೊಸ್ ಮತ್ತು ಎಯುಡಿಎ-ಎನ್ಇಪಿಎಡಿ ಸೇರಿದಂತೆ ಆಫ್ರಿಕಾದಿಂದ ಭಾಗವಹಿಸುವಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು.
 
ಭಾರತದ ವೈವಿಧ್ಯ, ಅಂತರ್ಗತ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸುವ ವಿಶಿಷ್ಟ ಅನುಭವಗಳು ಭೇಟಿ ನೀಡುವ ಪ್ರತಿನಿಧಿಗಳ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿವೆ. ಸಿರಿಧಾನ್ಯ ಆಧಾರಿತ ಭಕ್ಷ್ಯಗಳನ್ನು ಭೋಜನದ ಪಟ್ಟಿಯಲ್ಲಿ ಸೇರಿಸಲಾಗಿದೆ, ಮತ್ತು ವ್ಯಾಪಕ ಶ್ರೇಣಿಯ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವಿಹಾರಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ 7,000  ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವ 150 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿವೆ. ಭಾರತದ ಜಿ 20 ಅಧ್ಯಕ್ಷತೆಯನ್ನು "ಪೀಪಲ್ಸ್ ಜಿ 20" ಯನ್ನಾಗಿ ಮಾಡುವ ಮೂಲಕ ಇಡೀ ರಾಷ್ಟ್ರ ಮತ್ತು ಇಡೀ ಸಮಾಜದ ವಿಧಾನದಲ್ಲಿ ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಅನೇಕ ಜನ ಪಾಲ್ಗೊಳ್ಳುವ ಚಟುವಟಿಕೆಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ. ಇವುಗಳಲ್ಲಿ ಜಿ 20 ವಿಶ್ವವಿದ್ಯಾಲಯ ಸಂಪರ್ಕ ಉಪನ್ಯಾಸ ಸರಣಿ, ಮಾದರಿ ಜಿ 20 ಸಭೆಗಳು, ಶಾಲೆಗಳು / ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಜಿ 20 ಅಧಿವೇಶನಗಳು, ಪ್ರಮುಖ ಉತ್ಸವಗಳಲ್ಲಿ ಜಿ 20 ಪೆವಿಲಿಯನ್ ಗಳು, ರಸಪ್ರಶ್ನೆ ಸ್ಪರ್ಧೆಗಳು, ಸೆಲ್ಫಿ ಸ್ಪರ್ಧೆಗಳು, #G20India ಗಾಥೆಗಳು ಮತ್ತು ನಾಗರಿಕ ಸಮಾಜ ಮತ್ತು ಖಾಸಗಿ ವಲಯದ ನೂರಾರು ಇತರ ಜಿ 20-ವಿಷಯ ಆಧಾರಿತ ಕಾರ್ಯಕ್ರಮಗಳು ಸೇರಿವೆ. 
 
ಪ್ರಸ್ತುತ ನಡೆಯುತ್ತಿರುವ ಜಿ 20 ಅಧ್ಯಕ್ಷತೆಯಲ್ಲಿ ಗಣನೀಯ ಚರ್ಚೆಗಳು ಸಮಗ್ರ ಮತ್ತು ಚೇತರಿಕೆಯ ವೃದ್ಧಿ; ಎಸ್.ಡಿ.ಜಿ. ಪ್ರಗತಿ, ಹಸಿರು ಅಭಿವೃದ್ಧಿ ಮತ್ತು ಪರಿಸರಕ್ಕಾಗಿ ಜೀವನಶೈಲಿ (ಎಲ್ಐಎಫ್ಇ) ಪ್ರಗತಿ; ತಾಂತ್ರಿಕ ರೂಪಾಂತರ ಮತ್ತು ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ; ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆ; ಮಹಿಳೆಯರು ಅಭಿವೃದ್ಧಿಯನ್ನು ಮುನ್ನಡೆಸುವುದು; ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯದಂತಹ ವಿಶಾಲ ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡಿವೆ.
 
ಭಾರತದ ಜಿ 20 ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ನಾಯಕರ ಶೃಂಗಸಭೆಯ ಸಿದ್ಧತೆಯಲ್ಲಿ, ತನ್ನ ಸಮಗ್ರ, ಮಹತ್ವಾಕಾಂಕ್ಷೆಯ, ಕ್ರಮ ಆಧಾರಿತ ಮತ್ತು ನಿರ್ಣಾಯಕ ಕಾರ್ಯಸೂಚಿಗಾಗಿ ಜಿ 20 ಸದಸ್ಯರು ಮತ್ತು ಅತಿಥಿ ದೇಶಗಳಿಂದ ಅಪಾರ ಬೆಂಬಲವನ್ನು ಪಡೆದಿದೆ. ಸಮಕಾಲೀನ ಜಾಗತಿಕ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ಭಾರತದ ಜಿ 20 ಅಧ್ಯಕ್ಷತೆಯ ಅಡಿಯಲ್ಲಿ ಜಿ 20 ಸದಸ್ಯರು ಮತ್ತು ಆಹ್ವಾನಿತರು ಒಗ್ಗೂಡುತ್ತಿರುವುದಕ್ಕೆ ಭಾರತದ ಜಿ 20 ಸಭೆಗಳಲ್ಲಿ ವ್ಯಾಪಕ, ದೊಡ್ಡ ಪ್ರಮಾಣದ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆ ಸಾಕ್ಷಿಯಾಗಿದೆ.

****



(Release ID: 1917349) Visitor Counter : 1032