ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಅಂತಾರಾಷ್ಟ್ರೀಯ ಶೂನ್ಯ ತ್ಯಾಜ್ಯ ದಿನದಂದು ಕಸ ಮುಕ್ತ ನಗರಗಳಿಗಾಗಿ ಮೆರವಣಿಗೆ ನಡೆಯಲಿದೆ

Posted On: 28 MAR 2023 12:58PM by PIB Bengaluru

ಅಂತರರಾಷ್ಟ್ರೀಯ ಶೂನ್ಯ ತ್ಯಾಜ್ಯ ದಿನ 2023 ಇದರ ವಿಷಯಕ್ಕೆ ಅನುಗುಣವಾಗಿ - 'ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ನಿರ್ವಹಿಸುವ ಸುಸ್ಥಿರ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಸಾಧಿಸುವುದು’ - ಈ ನಿಟ್ಟಿನಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಸ್ವಚ್ಛೋತ್ಸವ”ವನ್ನು ಆಯೋಜಿಸುತ್ತಿದೆ. ಶೂನ್ಯ ತ್ಯಾಜ್ಯದ ಅಂತರರಾಷ್ಟ್ರೀಯ ದಿನದಂದು ಕಸ ಮುಕ್ತ ನಗರಗಳಿಗಾಗಿ ನವ ದೆಹಲಿಯಲ್ಲಿ ಮೆರವಣಿಗೆ(ಪಥಸಂಚಲನ) ನಡೆಯಲಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಯು.ಎನ್. ರೆಸಿಡೆಂಟ್ ಕೋ-ಆರ್ಡಿನೇಟರ್ ಶ್ರೀ ಶೋಂಬಿ ಶಾರ್ಪ್ ಅವರ ಉಪಸ್ಥಿತಿಯಲ್ಲಿ, ಮೇಯರ್ ಗಳು, ಆಯುಕ್ತರು, ಮಿಷನ್ ನಿರ್ದೇಶಕರು, ವ್ಯಾಪಾರ ಮತ್ತು ತಂತ್ರಜ್ಞಾನ ತಜ್ಞರು, ಮಹಿಳೆಯರು ಮತ್ತು ಯುವಜನತೆಯ ಪ್ರಮುಖ ನೈರ್ಮಲ್ಯ, ತಾಂತ್ರಿಕ ಸಂಸ್ಥೆಗಳು, ಅಭಿವೃದ್ಧಿ ಪಾಲುದಾರರು, ಇತ್ಯಾದಿಗಳು ಸುಮಾರು 350 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಸ ಮುಕ್ತ ನಗರಗಳಿಗಾಗಿ 'ಮಹಿಳೆಯರ ನೇತೃತ್ವದ ಸ್ವಚ್ಛೋತ್ಸವ'ಕ್ಕೆ ಧ್ವನಿಗೂಡಿಸಲು ಮಾರ್ಚ್ 29, 30, 31, 2023 ರಂದು “ಸ್ವಚ್ಛ ಮಶಾಲ್ ಮಾರ್ಚ್ 2023” ಅಭಿಯಾನವನ್ನು ನಾಗರಿಕರು ಮೆರವಣಿಗೆ ಮೂಲಕ ನಡೆಸಲಿದ್ದಾರೆ. ಇದರ ನಂತರ ಭಾಗವಹಿಸುವ ನಗರ ಸ್ಥಳೀಯ ಸಂಸ್ಥೆಗಳ ಪ್ರತಿ ವಾರ್ಡ್ ನಲ್ಲಿ ಜಲಮೂಲಗಳು, ರೈಲ್ವೆ ಹಳಿಗಳು, ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಸ್ಥಳಗಳು, ತೆರೆದ ಪ್ಲಾಟ್ ಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಗಳು ನಡೆಯಲಿವೆ. ಸುಮಾರು 2000 ಕ್ಕೂ ಹೆಚ್ಚು ನಗರಗಳು ಈಗಾಗಲೇ “ಸ್ವಚ್ಛ ಮಶಾಲ್ ಮಾರ್ಚ್ 2023” ಅಭಿಯಾನದ ಮೆರವಣಿಗೆಗೆ ಕೈ ಜೋಡಿಸಿವೆ.  

ಸ್ವಚ್ಛೋತ್ಸವ್ – ಶೂನ್ಯ ತ್ಯಾಜ್ಯದ ಅಂತರರಾಷ್ಟ್ರೀಯ ದಿನದಂದು ಕಸ ಮುಕ್ತ ನಗರಗಳಿಗಾಗಿ ಪಥಸಂಚಲನ ನಡೆಯಲಿದೆ. ಕಸ ಮುಕ್ತ ನಗರಗಳಲ್ಲಿ ಕಸ ರಹಿತ ಜೀವನ ಕುರಿತು ಚರ್ಚೆಗಳು ಮತ್ತು ಉತ್ತಮ ಅಭ್ಯಾಸಗಳ ಪ್ರಸ್ತುತಿಗಳನ್ನು ನಡೆಸಲಾಗುತ್ತದೆ. ಕಸ ಮುಕ್ತ ನಗರಗಳಿಗಾಗಿ ಮಹಿಳೆಯರು ಮತ್ತು ಯುವಕರು, ಕಸ ಮುಕ್ತ ನಗರಗಳಿಗಾಗಿ ವ್ಯಾಪಾರ ಮತ್ತು ಟೆಕ್ ಮತ್ತು ಮೇಯರ್ – ಹೀಗೆ ಪ್ರತಿ ವಿಭಾಗಗಳೊಂದಿಗೆ ತೀವ್ರ ಚರ್ಚೆಯ ಸಂವಾದ(ಫೈರ್ಸೈಡ್ ಚಾಟ್) ನಡೆಯಲಿದೆ. ಈವೆಂಟ್ ಅನ್ನು ಯು.ಎನ್.ಇ.ಪಿ. ಇದರ ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕ ರಕ್ಷಣೆಯ ಫೆಡರಲ್ ಸಚಿವಾಲಯ, ಗಿಜ್ ಇವುಗಳ ಸಹಯೋಗದೊಂದಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜಂಟಿಯಾಗಿ ಆಯೋಜಿಸುತ್ತಿದೆ. 

ನೈರ್ಮಲ್ಯ ವ್ಯಾಪ್ತಿ ಮತ್ತು ಉಪಕ್ರಮಗಳ ಮೇಲೆ ಕೇಂದ್ರೀಕರಿಸಲು, ಪ್ರಧಾನಮಂತ್ರಿಯವರು 2 ಅಕ್ಟೋಬರ್ 2014 ರಂದು ನೈರ್ಮಲ್ಯ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ನಡವಳಿಕೆಯ ಬದಲಾವಣೆ ಕಾರ್ಯಕ್ರಮವಾಗಿ ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು. 1 ಅಕ್ಟೋಬರ್, 2021 ರಂದು ಗೌರವಾನ್ವಿತ ಪ್ರಧಾನಮಂತ್ರಿ ಅವರು ಪ್ರಾರಂಭಿಸಿದ ಎಸ್.ಬಿ.ಎಂ - ಅರ್ಬನ್ 2.0 ಮೂಲಕ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಗುರಿಯನ್ನು ಹೊಂದಿರುವ 'ಕಸ ಮುಕ್ತ ನಗರಗಳು' ಎಂಬ ದೃಷ್ಟಿಯೊಂದಿಗೆ ಆಂದೋಲನವನ್ನು ಬಲಪಡಿಸಲಾಯಿತು. ಯು.ಎನ್.ಇ.ಪಿ.ಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ 2021 ರ ನವೆಂಬರ್ 1 ರಂದು ಗ್ಲ್ಯಾಸ್ಗೋದಲ್ಲಿ ಜರುಗಿದ ಸಿಒಪಿ26 ನಲ್ಲಿ ಪ್ರಧಾನಮಂತ್ರಿ ಅವರು 'ಪರಿಸರಕ್ಕಾಗಿ ಜೀವನಶೈಲಿ (ಲೈಫ್)’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು "ಬುದ್ಧಿಹೀನ ಮತ್ತು ವಿನಾಶಕಾರಿ ಬಳಕೆಯ ಬದಲಿಗೆ, ಗಮನ ಮತ್ತು ಉದ್ದೇಶಪೂರ್ವಕ ಬಳಕೆಗಾಗಿ" ಪರಿಸರಪೂರಕ ಜೀವನಶೈಲಿ (ಲೈಫ್)’ ಅನ್ನು ಪರಿಚಯಿಸಿ ಅಂತರರಾಷ್ಟ್ರೀಯ ಸಾಮೂಹಿಕ ಆಂದೋಲನವಾಗಿ ಚಾಲನೆ ಮಾಡಲು ವ್ಯಕ್ತಿಗಳು ಮತ್ತು ಸಂಸ್ಥೆಗಳ ಜಾಗತಿಕ ಸಮುದಾಯಕ್ಕೆ ಪ್ರಧಾನಮಂತ್ರಿ ಅವರು ಕರೆ ನೀಡಿದ್ದರು.  

ಮಾರ್ಚ್ 08, 2023 ರಿಂದ 3 ವಾರಗಳ ಮಹಿಳಾ ನೇತೃತ್ವದ ಸ್ವಚ್ಛತಾ ಅಭಿಯಾನದ “ಸ್ವಚ್ಛೋತ್ಸವ”ವನ್ನು ಕೇಂದ್ರ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಪ್ರಾರಂಭಿಸಿದರು. ಈ ಅಭಿಯಾನವು ನೈರ್ಮಲ್ಯದಲ್ಲಿ ಮಹಿಳೆಯರಿಂದ,  ಮಹಿಳಾ ನೇತೃತ್ವದ ನೈರ್ಮಲ್ಯಕ್ಕೆ ಪರಿವರ್ತನೆಯನ್ನು ಗುರುತಿಸುವ ಮತ್ತು ಆಚರಿಸುವ ಗುರಿಯನ್ನು ಹೊಂದಿದೆ. ಕಸ ಮುಕ್ತ ನಗರ ಆಂದೋಲನದ ಧ್ಯೇಯವನ್ನು ಯಶಸ್ವಿಗೊಳಿಸುವಲ್ಲಿ ನಾಯಕತ್ವವನ್ನು ಒದಗಿಸುವ ಎಲ್ಲಾ ವರ್ಗಗಳ ಮಹಿಳೆಯರನ್ನು ಸೇರಿಸಿಕೊಳ್ಳಲು ನಗರಗಳಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಸರಣಿಯನ್ನು ಆಯೋಜಿಸಲಾಗಿದೆ. 3 ವಾರಗಳ ಕಾಲ ಅಭಿಯಾನವು ನಡೆದು, ಮಾರ್ಚ್ 29, 2023 ರಂದು ನಡೆಯುವ ಸ್ವಚ್ಛೋತ್ಸವ ಕಾರ್ಯಕ್ರಮ ಹಾಗೂ ಮಾರ್ಚ್ 30, 2023 ರಂದು ನಡೆಯುವ “ಶೂನ್ಯ ತ್ಯಾಜ್ಯದ ಅಂತರರಾಷ್ಟ್ರೀಯ ದಿನ 2023” ಕಾರ್ಯಕ್ರಮಗಳ ಮೂಲಕ ಮುಕ್ತಾಯಗೊಳ್ಳುತ್ತದೆ.  

  

ಈ ಸ್ವಚ್ಛ ಅಭಿಯಾನದ ಯೋಜನೆಯಡಿಯಲ್ಲಿ, ಹೆಚ್ಚಿನ ಪ್ರಭಾವದ ಮಹಿಳಾ ಉದ್ಯಮಿಗಳು ಅಥವಾ ನಗರ ಸ್ವಚ್ಛತಾ ಕಾರ್ಯಕ್ಕಾಗಿ ಕೆಲಸ ಮಾಡುವ ಮಹಿಳಾ-ನೇತೃತ್ವದ ಉದ್ಯಮಗಳನ್ನು, ಸ್ವಸಹಾಯ ಗುಂಪುಗಳನ್ನು ಗುರುತಿಸಲು, ನೂತನ  “ಮಹಿಳಾ ಐಕಾನ್ ಗಳ ಪ್ರಮುಖ ಸ್ವಚ್ಚತಾ ಪ್ರಶಸ್ತಿ 2023” ಇದರ ಮೊದಲ ಆವೃತ್ತಿಯನ್ನು ಘೋಷಿಸಲಾಯಿತು. ಒಂದು ವಿಶಿಷ್ಟವಾದ ಜೊತೆಗಾರರಿಂದ ಕಲಿಕೆಯ ಉಪಕ್ರಮ, ಸ್ವಚ್ಛತಾ ಯಾತ್ರೆಯನ್ನು ಕೂಡಾ ಆಯೋಜಿಸಲಾಗಿದೆ. ಇದರಲ್ಲಿ ತ್ಯಾಜ್ಯ ಉದ್ಯಮಿಗಳಾಗಿ ತೊಡಗಿಸಿಕೊಂಡಿರುವ ಸ್ವಸಹಾಯ ಗುಂಪಿನ ಸದಸ್ಯರು ಅಂತರ-ರಾಜ್ಯ ಉಚಿತ ಪ್ರಯಾಣದ ಅವಕಾಶವನ್ನು ಪಡೆಯುತ್ತಿದ್ದಾರೆ. “ಸ್ವಚ್ಛತಾ ದೂತ”ರಂತೆ ಕಾರ್ಯನಿರ್ವಹಿಸುತ್ತಿರುವ ಈ ಮಹಿಳೆಯರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಪ್ರಯಾಣಿಸುವವರು ಮತ್ತು ಈ ಶ್ರೀಮಂತ ಅನುಭವವು ಅವರಿಗೆ ನೋಡಲು, ಅನುಭವಿಸಲು, ಸಂವಾದಿಸಲು ಮತ್ತು ಕಲಿಯಲು ವೇದಿಕೆಯನ್ನು ನೀಡುತ್ತಿದೆ.

***



(Release ID: 1911418) Visitor Counter : 102