ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ ಅನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಸಂಪುಟದ ಅನುಮೋದನೆ. ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಅದರಲ್ಲಿ ಸರ್ಕಾರದ ಪಾಲನ್ನು ಭಾಗಶಃ ಮಾರಾಟ ಮಾಡುವ ಮೂಲಕ ಮತ್ತು ಐಆರ್ ಇಡಿಎ ಹೊಸ ಈಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ ಹಣವನ್ನು ಸಂಗ್ರಹಿಸಲು ಸಂಪುಟದ ಅನುಮೋದನೆ

Posted On: 17 MAR 2023 7:24PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂ.ಎನ್.ಆರ್.ಇ.) ಅಡಿಯಲ್ಲಿ ಬರುವ ಐ.ಆರ್.ಇ.ಡಿ.ಎ.ಯನ್ನು ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಮತ್ತು ಹೊಸ ಈಕ್ವಿಟಿ ಷೇರುಗಳ ವಿತರಣೆಯ ಮೂಲಕ ಐ.ಆರ್.ಇ.ಡಿ.ಎ.ಗೆ ಹಣವನ್ನು ಸಂಗ್ರಹಿಸಲು ತನ್ನ ಅನುಮೋದನೆ ನೀಡಿದೆ.  ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯು (ಡಿಐಪಿಎಎಂ) ಈ ಪಟ್ಟಿ ಪ್ರಕ್ರಿಯೆಯನ್ನು ನಡೆಸಲಿದೆ.

ಈ ನಿರ್ಧಾರವು ಐಪಿಒ ಮೂಲಕ ಬುಕ್ ಬಿಲ್ಡಿಂಗ್ ಆಧಾರದ ಮೇಲೆ ಸಾರ್ವಜನಿಕರಿಗೆ ತಲಾ ₹ 10.00ರಂತೆ 13.90 ಕೋಟಿ ಹೊಸ ಈಕ್ವಿಟಿ ಷೇರುಗಳನ್ನು ವಿತರಿಸಲು ಐಆರ್ ಇಡಿಎಗೆ ಅನುಮತಿ ನೀಡಲು 2017ರ ಜೂನ್ ನಲ್ಲಿ ತೆಗೆದುಕೊಂಡ ಹಿಂದಿನ ಸಿಸಿಇಎ ನಿರ್ಧಾರವನ್ನು ಹಿಮ್ಮೆಟ್ಟಿಸುತ್ತದೆ. ಮಾರ್ಚ್ 2022ರಲ್ಲಿ 1500 ಕೋಟಿ ರೂ.ಗಳ ಬಂಡವಾಳ ಸೇರ್ಪಡೆಯ ನಂತರ, ಬಂಡವಾಳ ರಚನೆಯಲ್ಲಿನ ಬದಲಾವಣೆಯಿಂದಾಗಿ ಇದು ಸರ್ಕಾರ ತೆಗೆದುಕೊಂಡ ತ್ವರಿತ ಅನಿವಾರ್ಯ ನಿರ್ಧಾರವಾಗಿದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಒಂದು ಕಡೆ ಸರ್ಕಾರದ ಹೂಡಿಕೆಯ ಮೌಲ್ಯವನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಮತ್ತೊಂದೆಡೆ ಸಾರ್ವಜನಿಕರಿಗೆ ರಾಷ್ಟ್ರೀಯ ಆಸ್ತಿಯಲ್ಲಿ ಪಾಲನ್ನು ಪಡೆಯಲು ಮತ್ತು ಅದರಿಂದ ಪ್ರಯೋಜನಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಇದಲ್ಲದೆ, ಸಾರ್ವಜನಿಕ ಖಜಾನೆಯನ್ನು ಅವಲಂಬಿಸದೆ ಬೆಳವಣಿಗೆಯ ಯೋಜನೆಗಳನ್ನು ಪೂರೈಸಲು ತನ್ನ ಬಂಡವಾಳದ ಅಗತ್ಯದ ಒಂದು ಭಾಗವನ್ನು ಸಂಗ್ರಹಿಸಲು ಮತ್ತು ಪಟ್ಟಿ ಅವಶ್ಯಕತೆಗಳು ಮತ್ತು ಬಹಿರಂಗಪಡಿಸುವಿಕೆಗಳಿಂದ ಉಂಟಾಗುವ ಹೆಚ್ಚಿನ ಮಾರುಕಟ್ಟೆ ಶಿಸ್ತು ಮತ್ತು ಪಾರದರ್ಶಕತೆಯ ಮೂಲಕ ಆಡಳಿತವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಐಆರ್ ಇಡಿಎ ಪ್ರಸ್ತುತ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ, ಮಿನಿ ರತ್ನ (ವರ್ಗ -1) ಸಿಪಿಎಸ್ಇ ಆಗಿದ್ದು 1987ರಲ್ಲಿ ಇದನ್ನು ಸ್ಥಾಪಿಸಲ್ಪಟ್ಟಿದೆ. ಇದು ಭಾರತದಲ್ಲಿ ನವೀಕರಿಸಬಹುದಾದ ಇಂಧನ (ಆರ್ ಇ) ಮತ್ತು ಇಂಧನ ದಕ್ಷತೆ (ಇಇ) ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲಿ ತೊಡಗಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಆರ್ ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್ ಬಿ ಎಫ್ ಸಿ) ಆಗಿ ನೋಂದಾಯಿಸಲ್ಪಟ್ಟಿದೆ. ಹವಾಮಾನ ಬದಲಾವಣೆ ಕುರಿತಾದ ಪ್ಯಾರಿಸ್ ಒಪ್ಪಂದದಲ್ಲಿ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯ (ಎನ್ ಡಿಸಿ) ಭಾಗವಾಗಿ ಮಾಡಿದ ಪ್ರತಿಜ್ಞೆಗೆ ಅನುಗುಣವಾಗಿ ಸರ್ಕಾರವು 2022ರ ವೇಳೆಗೆ 175 ಗಿಗಾವ್ಯಾಟ್ ಸ್ಥಾಪಿತ ಆರ್ ಇ ಸಾಮರ್ಥ್ಯವನ್ನು ಮತ್ತು 2030ರ ವೇಳೆಗೆ 500 ಗಿಗಾವ್ಯಾಟ್ ಅನ್ನು ಸಾಧಿಸುವ ಗುರಿಗಳನ್ನು ನಿಗದಿಪಡಿಸಿದೆ. ಆರ್ ಇ ಗುರಿಗಳನ್ನು ಸಾಧಿಸುವಲ್ಲಿ ಐಆರ್ ಇಡಿಎ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತ ಸರ್ಕಾರದ ಆರ್ ಇ ಗುರಿಗಳಿಗೆ ಅನುಗುಣವಾಗಿ ಐಆರ್ ಇಡಿಎ ತಮ್ಮ ವ್ಯವಹಾರ ಯೋಜನೆಯ ಪ್ರಕಾರ ನವೀಕರಿಸಬಹುದಾದ ಇಂಧನ / ಇಂಧನ ದಕ್ಷತೆ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಾಚರಣೆಯು ನುರಿತ ಮತ್ತು ಕೌಶಲ್ಯರಹಿತ ಮಾನವಶಕ್ತಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

******

ಡಿ.ಎಸ್.



(Release ID: 1908197) Visitor Counter : 167