ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 18 ರಂದು ಜಾಗತಿಕ ಸಿರಿಧಾನ್ಯ (ಶ್ರೀ ಅನ್ನ) ಸಮ್ಮೇಳನವನ್ನು ಉದ್ಘಾಟಿಸಲಿರುವ ಪ್ರಧಾನಿ

Posted On: 16 MAR 2023 6:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಮಾರ್ಚ್ 18 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಪುಸಾ ಐ ಎ ಆರ್‌ ಐ ಕ್ಯಾಂಪಸ್ ನಲ್ಲಿ ಜಾಗತಿಕ ಸಿರಿಧಾನ್ಯ (ಶ್ರೀ ಅನ್ನ) ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತದ ಪ್ರಸ್ತಾವನೆಯನ್ನು ಆಧರಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) ಎಂದು ಘೋಷಿಸಿತು. ಅಲ್ಲದೆ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ರ ಆಚರಣೆಗಳನ್ನು 'ಜನಾಂದೋಲನ'ವನ್ನಾಗಿ ಮಾಡುವ ಮತ್ತು ಭಾರತವನ್ನು 'ಸಿರಿಧಾನ್ಯಗಳ ಜಾಗತಿಕ ಕೇಂದ್ರ'ವನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ರೈತರು, ಸ್ಟಾರ್ಟ್-ಅಪ್‌ಗಳು, ರಫ್ತುದಾರರು, ಚಿಲ್ಲರೆ ವ್ಯವಹಾರಗಳು ಮತ್ತು ಇತರ ಪಾಲುದಾರರು, ಕೃಷಿಕರು, ಗ್ರಾಹಕರು ಮತ್ತು ಹವಾಮಾನಕ್ಕೆ ಸಿರಿಧಾನ್ಯ (ಶ್ರೀ ಅನ್ನ) ಪ್ರಯೋಜನಗಳ ಬಗ್ಗೆ ಪ್ರಚಾರ ಮತ್ತು ಜಾಗೃತಿಯನ್ನು ಮೂಡಿಸಲು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಜಾಗತಿಕ ಸಿರಿಧಾನ್ಯ (ಶ್ರೀ ಅನ್ನ) ಸಮ್ಮೇಳನದ ಆಯೋಜನೆಯು ಈ ಸಂದರ್ಭದಲ್ಲಿ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.

ಎರಡು ದಿನಗಳ ಜಾಗತಿಕ ಸಮ್ಮೇಳನವು ಉತ್ಪಾದಕರು, ಗ್ರಾಹಕರು ಮತ್ತು ಇತರ ಪಾಲುದಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ, ಸಿರಿಧಾನ್ಯ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಪ್ರಯೋಜನಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ ಸಿರಿಧಾನ್ಯಗಳಿಗೆ (ಶ್ರೀ ಅನ್ನ) ಸಂಬಂಧಿಸಿದ

ಎಲ್ಲಾ ಪ್ರಮುಖ ವಿಷಯಗಳ ಕುರಿತು ಅಧಿವೇಶನಗಳನ್ನು ಹೊಂದಿರುತ್ತದೆ. ಸಮ್ಮೇಳನದಲ್ಲಿ ವಿವಿಧ ದೇಶಗಳ ಕೃಷಿ ಸಚಿವರು, ಅಂತಾರಾಷ್ಟ್ರೀಯ ವಿಜ್ಞಾನಿಗಳು, ಪೌಷ್ಟಿಕತಾತಜ್ಞರು, ಆರೋಗ್ಯತಜ್ಞರು, ಸ್ಟಾರ್ಟ್-ಅಪ್ ನಾಯಕರು ಮತ್ತು ಇತರ ಪಾಲುದಾರರು ಭಾಗವಹಿಸಲಿದ್ದಾರೆ.

****



(Release ID: 1907989) Visitor Counter : 128