ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

'ಒಂದು ಆರೋಗ್ಯ: ಅತ್ಯುತ್ತಮ ಆರೋಗ್ಯಕ್ಕಾಗಿ ಸಮಗ್ರ, ಸಹಯೋಗ ಮತ್ತು ಬಹುವಲಯ ವಿಧಾನ' ಕುರಿತು ಸಿಐಐ ಪಾಲುದಾರಿಕೆಯ ಶೃಂಗಸಭೆ 2023 ನ್ನು  ಉದ್ದೇಶಿಸಿ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಭಾಷಣ 


"ಭಾರತವು ಸಮಗ್ರ ದೃಷ್ಟಿಯ ಮತ್ತು ಸಮಗ್ರ ಪರಿಸರ ಹಾಗು ಪ್ರಕೃತಿ ಸ್ನೇಹಿ ನೀತಿ ರೂಪಿಸುವ ಪರಿಸರದೊಂದಿಗೆ "ಒಂದು ಭೂಮಿ, ಒಂದು ಆರೋಗ್ಯ" ಚಿಂತನೆಯನ್ನು ನಾಯಕತ್ವ ವಹಿಸಿ ಮುನ್ನಡೆಸಬಹುದು ಮತ್ತು ಜಾಗತಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ವಸುದೈವ ಕುಟುಂಬಕಂ ತತ್ವದೊಂದಿಗೆ ಅದನ್ನು ಸಮೀಕರಿಸಬಹುದು”.

"ಒಂದು ಭೂಮಿ, ಒಂದು ಆರೋಗ್ಯ" ದೃಷ್ಟಿಕೋನವು ಸಕ್ರಿಯ ಜಾಗತಿಕ ಸಹಯೋಗದಿಂದ ಮಾತ್ರ ವಾಸ್ತವವಾಗಲು ಸಾಧ್ಯ, ಅಲ್ಲಿ ದೇಶಗಳು ತಮ್ಮ ಬಗ್ಗೆ ಮಾತ್ರ ಯೋಚಿಸುವುದಲ್ಲ, ಬದಲು ಸಾಮೂಹಿಕ ಜಾಗತಿಕ ಫಲಿತಾಂಶಗಳ ಬಗ್ಗೆ ಯೋಚಿಸುತ್ತವೆ - ಡಾ. ಮನ್ಸುಖ್ ಮಾಂಡವಿಯಾ

"ಸಾರ್ವತ್ರಿಕ ಸ್ವೀಕಾರಾರ್ಹತೆಯೊಂದಿಗೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ನವೀನ ಸಂಶೋಧನೆ ಮತ್ತು ತಂತ್ರಜ್ಞಾನ ಬೆಂಬಲಿತ ಪರಿಹಾರಗಳಲ್ಲಿ ಭಾರತವು ಮುಂದಾಳತ್ವ ವಹಿಸಬಹುದು"

Posted On: 15 MAR 2023 2:33PM by PIB Bengaluru

ಸಮಗ್ರ ದೃಷ್ಟಿಯ ಮತ್ತು ಸಮಗ್ರ ಪರಿಸರ ಹಾಗು ಪ್ರಕೃತಿ ಸ್ನೇಹಿ ನೀತಿ ರೂಪಿಸುವ ಪರಿಸರದೊಂದಿಗೆ "ಒಂದು ಭೂಮಿ, ಒಂದು ಆರೋಗ್ಯ" ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ಭಾರತವು ಮುಂದಾಳತ್ವ ವಹಿಸುವ ಸಮಯ ಇದಾಗಿದೆ, ಮತ್ತು ಅದನ್ನು ಜಾಗತಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ವಸುದೈವ ಕುಟುಂಬಕಂ ತತ್ವದೊಂದಿಗೆ ಜೋಡಿಸುವ ಸಂದರ್ಭವೂ ಇದಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ, ಸಾರ್ವತ್ರಿಕ ಸ್ವೀಕಾರಾರ್ಹತೆಯೊಂದಿಗೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ನವೀನ ಸಂಶೋಧನೆ ಮತ್ತು ತಂತ್ರಜ್ಞಾನ ಬೆಂಬಲಿತ ಪರಿಹಾರಗಳ ಮೂಲಕ  ಮುಂದಾಳತ್ವ ವಹಿಸಲು ಭಾರತವು ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿದೆ ". ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಅವರು ಇಂದು ಇಲ್ಲಿ 'ಒಂದು ಆರೋಗ್ಯ: ಸಮಗ್ರ, ಸಹಯೋಗ ಮತ್ತು ಸೂಕ್ತ ಆರೋಗ್ಯಕ್ಕೆ ಬಹು ಆಯಾಮದ ವಿಧಾನ” ಎಂಬ ವಿಷಯದ ಮೇಲೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಪಾಲುದಾರಿಕೆಯ ಶೃಂಗಸಭೆ 2023ನ್ನು ಉದ್ದೇಶಿಸಿ ಮಾತನಾಡಿದರು.

"ಒಂದು ಭೂಮಿ, ಒಂದು ಆರೋಗ್ಯ ದೃಷ್ಟಿಕೋನವು ಸಕ್ರಿಯ ಜಾಗತಿಕ ಸಹಯೋಗದಿಂದ ಮಾತ್ರ ನನಸಾಗಲು ಸಾಧ್ಯ, ಅಲ್ಲಿ ದೇಶಗಳು ತಮ್ಮ ಬಗ್ಗೆ ಮಾತ್ರ ಯೋಚಿಸುವುದಲ್ಲ, ಆದರೆ ಸಾಮೂಹಿಕ ಜಾಗತಿಕ ಫಲಿತಾಂಶಗಳ ಬಗ್ಗೆ ಯೋಚಿಸುತ್ತವೆ" ಎಂದು ಅವರು ಹೇಳಿದರು. "ಆರೋಗ್ಯ ಕ್ಷೇತ್ರವು ಒಂದು ದೇಶಕ್ಕೆ ಸೀಮಿತವಾಗಬಾರದು ಏಕೆಂದರೆ ಒಂದು ದೇಶದ ಆರೋಗ್ಯ ಮತ್ತು ಯೋಗಕ್ಷೇಮವು ಮತ್ತೊಂದು ದೇಶದ ಮೇಲೆ ಪರಿಣಾಮ ಬೀರುತ್ತದೆ. ನಾವು ಪರಸ್ಪರ ಅವಲಂಬಿತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ದೇಶಗಳು ಮಾತ್ರವಲ್ಲದೆ ಮಾನವ ಜನಸಮೂಹದ ಆರೋಗ್ಯವು ಸುತ್ತಮುತ್ತಲಿನ ಪರಿಸರ ಮತ್ತು ಪ್ರಾಣಿಗಳ ಆರೋಗ್ಯದಿಂದ ಸಮಾನವಾಗಿ ಪ್ರಭಾವಿಸಲ್ಪಡುತ್ತದೆ ಮತ್ತು ಅದರ ಪರಿಣಾಮವನ್ನು ಅನುಸರಿಸುತ್ತಿರುತ್ತದೆ. ಜಾಗತಿಕ ಸಾಂಕ್ರಾಮಿಕ ರೋಗವು ಯಾವುದೇ ದೇಶವೂ ಕೂಡ ಬೇರಾವುದೇ ದೇಶಗಳಲ್ಲಾಗುವ  ಪ್ರತಿಕೂಲ ಬೆಳವಣಿಗೆಗಳಿಂದ ಮುಕ್ತವಾಗಿಲ್ಲ  ಮತ್ತು ನಮ್ಮ ಕ್ರಮಗಳು ನಮ್ಮ ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸಿದೆ. ಆದ್ದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಮಾತ್ರವಲ್ಲದೆ, ನಮ್ಮ ಕಾರ್ಯಗಳು ನಾವು ಸಹಬಾಳ್ವೆ ನಡೆಸುವ ಪರಿಸರವನ್ನು ರಕ್ಷಿಸಲು ಪೂರಕವಾಗುವಂತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾನವ ಜನಾಂಗವಾಗಿ ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. "ಒಂದು ಭೂಮಿ, ಒಂದು ಆರೋಗ್ಯ" ದೃಷ್ಟಿಕೋನವು, ಚಿಂತನೆಯು  ನಮ್ಮ ಕ್ರಮಗಳು, ಕಾರ್ಯಗಳು ಮತ್ತು ಪರಿಸರ ಸ್ನೇಹಿ ನೀತಿಗಳ ಮಹತ್ವವನ್ನು ತೀಕ್ಷ್ಣವಾಗಿ, ನಿಕಟವಾಗಿ  ಗಮನಿಸುವಂತೆ ಮಾಡುತ್ತವೆ ಎಂದೂ ಅವರು ವಿವರಿಸಿದರು.  

 

ದೇಶೀಯ ಸಂಶೋಧನೆ ಮತ್ತು ಸಾಂಪ್ರದಾಯಿಕ ಚಿಕಿತ್ಸೆಗಳ ಸಂಪತ್ತಿಗೆ ಸಂಬಂಧಿಸಿ ಭಾರತದ ಪ್ರಮುಖ ಪಾತ್ರವನ್ನು ಕೊಂಡಾಡಿದ ಡಾ.ಮಾಂಡವಿಯಾ, "ಒಂದು ಭೂಮಿ, ಒಂದು ಆರೋಗ್ಯ" ವನ್ನು ಖಚಿತಪಡಿಸಿಕೊಳ್ಳಲು ಪ್ರತಿ ದೇಶವು ತನ್ನದೇ ಆದ ಮಾದರಿಯನ್ನು ಹೊಂದಬಹುದು ಎಂದು ಒತ್ತಿ ಹೇಳಿದರು. ಆದಾಗ್ಯೂ, ನಮ್ಮ ಮಾದರಿಗಳನ್ನು ಶ್ರೀಮಂತಗೊಳಿಸಲು ಪರಸ್ಪರರ ಉತ್ತಮ ಅಭ್ಯಾಸಗಳಿಂದ, ಪದ್ಧತಿಗಳಿಂದ ಕಲಿಯುವುದು ಬಹಳ ಮುಖ್ಯ ಮತ್ತು ನಮ್ಮ ಸಾಮೂಹಿಕ ಕ್ರಿಯೆಗಳು ನಾವು ವಾಸಿಸುವ ಪ್ರಪಂಚಕ್ಕೆ ಆರೋಗ್ಯಕರ ಜಗತ್ತನ್ನು ಬಿಟ್ಟುಹೋಗುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡುವುದು ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಇದಲ್ಲದೆ, "ಭಾರತದ ಸಮಗ್ರ ಔಷಧದ ಮಾದರಿ ಇದಕ್ಕೆ ಉದಾಹರಣೆಯಾಗಿದೆ, ಇದು ಭಾರತದಲ್ಲಿ ಅಂತರ್ಗತವಾಗಿರುವ ಆಯುರ್ವೇದದ ಸಾಂಪ್ರದಾಯಿಕ ತತ್ವಗಳನ್ನು ಒಳಗೊಂಡ ಸ್ವಾಸ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ ಅದರೊಳಗೆ ಆಧುನಿಕ ಔಷಧವನ್ನು ಸಮ್ಮಿಳಿತಗೊಳಿಸಿಕೊಂಡಿದೆ " ಎಂದೂ ಆರೋಗ್ಯ ಸಚಿವರು ಹೇಳಿದರು.  

ಆಯುಷ್ಮಾನ್ ಭಾರತ್ ಯೋಜನೆಯಂತಹ ಉಪಕ್ರಮಗಳ ಪ್ರಗತಿ ಮತ್ತು ಈಗ ಸಾರ್ವಜನಿಕ ಡಿಜಿಟಲ್ ಸರಕಾಗಿ ಹಂಚಿಕೊಳ್ಳಲಾದ ಕೋ-ವಿನ್ ವೇದಿಕೆ (ಪ್ಲಾಟ್ ಫಾರ್ಮ್)ಯ ಯಶಸ್ಸನ್ನು ಶ್ಲಾಘಿಸಿದ ಡಾ. ಮಾಂಡವಿಯಾ, ಆರೋಗ್ಯವನ್ನು 'ಸೇವಾ' ಅಂದರೆ ಇತರರಿಗೆ ಸೇವೆ ಸಲ್ಲಿಸುವುದು ಎಂದು ಗ್ರಹಿಸಲಾಗಿದೆ ಎಂಬುದರತ್ತಲೂ ಬೆಟ್ಟು ಮಾಡಿದರು. ಆರೋಗ್ಯ ಸಚಿವರು ರಾಷ್ಟ್ರದ ಸಂಶೋಧನಾ ಸಂಸ್ಥೆಗಳಲ್ಲಿ ತಮ್ಮ ವಿಶ್ವಾಸವನ್ನು ಪುನರುಚ್ಚರಿಸಿದರು ಮತ್ತು ಸಂಶೋಧನೆಗೆ ಕೊಡುಗೆ ನೀಡುವಂತೆ ಶೈಕ್ಷಣಿಕ ವಲಯವನ್ನು ಆಗ್ರಹಿಸಿದರಲ್ಲದೆ ಈ ನಿಟ್ಟಿನಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯೂ  ಅವಶ್ಯ ಎಂದರು. 

ಜನೌಷಧಿ ಕೇಂದ್ರಗಳ ಮೂಲಕ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಪ್ಯಾನೆಲಿಸ್ಟ್ ಗಳು ಶ್ಲಾಘಿಸಿದರು, ಆಯುಷ್ಮಾನ್ ಭಾರತ್ ಕೊಡೆಯಡಿ ಯುಎಚ್ ಸಿ ಮತ್ತು ವೈದ್ಯಕೀಯ ಕಾಲೇಜುಗಳೊಂದಿಗೆ ನರ್ಸಿಂಗ್ ಕಾಲೇಜುಗಳ ಸಂಯೋಜನೆಯಂತಹ ವಿವಿಧ ಉಪಕ್ರಮಗಳು ಹಾಸಿಗೆಯ ಬದಿಯಲ್ಲಿ ಬೋಧನಾ ಅವಕಾಶಗಳಂತಹ ಲಭ್ಯವಿರುವ ಸಂಪನ್ಮೂಲಗಳ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.  ಹಾಗು ಭಾರತದಲ್ಲಿ ನರ್ಸಿಂಗ್ ಸಮುದಾಯಕ್ಕೆ ಉತ್ತೇಜನವನ್ನು ಒದಗಿಸುತ್ತವೆ ಎಂದವರು ಅಭಿಪ್ರಾಯಪಟ್ಟರು. 'ಒಂದು ಭೂಮಿ, ಒಂದು ಆರೋಗ್ಯ' ಎಂಬ ದೃಷ್ಟಿಕೋನವನ್ನು, ಚಿಂತನೆಯನ್ನು ಪ್ಯಾನೆಲಿಸ್ಟ್ ಗಳು ಶ್ಲಾಘಿಸಿದರು, ಇದು ಜ್ಞಾನ ಮತ್ತು ಉತ್ತರದಾಯಿತ್ವವನ್ನು ಸಂಯೋಜಿಸುತ್ತದೆ, ಇದರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಉತ್ಪಾದನೆಯ ಪರಿಸರ ವ್ಯವಸ್ಥೆಯ ಪ್ರತಿಯೊಬ್ಬ ಪಾಲುದಾರರು, ಭಾಗೀದಾರರು ತಮ್ಮ ಫಲಿತಾಂಶಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದಭಿಪ್ರಾಯಪಟ್ಟ ಅವರು  ದೇಶದ ವೈಜ್ಞಾನಿಕ ಜ್ಞಾನ ಮತ್ತು ಸಾಮರ್ಥ್ಯಗಳ ಬಗ್ಗೆ ಸರ್ಕಾರ ಇಟ್ಟಿರುವ ವಿಶ್ವಾಸವನ್ನೂ ಶ್ಲಾಘಿಸಿದರು. 

ಸಿಐಐ ಹೆಲ್ತ್ ಕೇರ್ ಮಂಡಳಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ನರೇಶ್ ಟ್ರೆಹಾನ್, ಸಿಐಐಯ ಜೈವಿಕ ತಂತ್ರಜ್ಞಾನ ಕುರಿತ ರಾಷ್ಟ್ರೀಯ ಸಮಿತಿ ಮತ್ತು ಪ್ಯಾನೇಶಿಯಾ ಬಯೋಟೆಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜೇಶ್ ಜೈನ್, ಸಿಐಐ ದಕ್ಷಿಣ ವಲಯದ ಅಧ್ಯಕ್ಷೆ ಮತ್ತು ಭಾರತ್ ಬಯೋಟೆಕ್ ನ  ಸಹ ಸಂಸ್ಥಾಪಕ ಹಾಗು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುಚಿತ್ರಾ ಇಳಾ ಈ ಕಾರ್ಯಕ್ರಮದಲ್ಲಿ ಪ್ಯಾನೆಲಿಸ್ಟ್ ಗಳಾಗಿ ಭಾಗವಹಿಸಿದ್ದರು. .

****



(Release ID: 1907178) Visitor Counter : 139