ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆಯ 3ನೇ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಅವರ ಭಾಷಣ


ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣೆಯು ಪ್ರಧಾನಮಂತ್ರಿಯವರ ಆಶಯದಂತೆ ಜನ ಆಂದೋಲನವಾಗಿ ಬದಲಾಗುತ್ತಿದೆ: ಪಿ.ಕೆ.ಮಿಶ್ರಾ

"ಪ್ರಧಾನ ಮಂತ್ರಿಯವರ 10 ಅಂಶಗಳ ಕಾರ್ಯಸೂಚಿಯು ಸ್ಥಳೀಯ ಸಾಮರ್ಥ್ಯಗಳನ್ನು ನಿರ್ಮಾಣ ಮಾಡುವ ಮತ್ತು ಉಪಕ್ರಮಗಳನ್ನು ರೂಪಿಸುವ  ಅಗತ್ಯವನ್ನು ಒತ್ತಿಹೇಳುತ್ತದೆ, ಮತ್ತು ವಿಶೇಷವಾಗಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಮಹಿಳಾ ನಾಯಕತ್ವಕ್ಕೂ ಒತ್ತು ನೀಡುತ್ತದೆ"

"ವಿಪತ್ತು ಅಪಾಯ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸುವುದು ಮತ್ತು ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳು ಹಾಗು ಮಧ್ಯಪ್ರವೇಶಗಳನ್ನು ಅಭಿವೃದ್ಧಿಪಡಿಸುವುದು ಮುಂದಿನ ಆಶಯವಾಗಿದೆ"

"ನಾವು ಅತ್ಯಂತ ದುರ್ಬಲರನ್ನು ಬೆಂಬಲಿಸಲು ಮತ್ತು ಅವರ ಜೀವನ ಹಾಗು ಜೀವನೋಪಾಯವನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ನಮ್ಮ ಕೆಲಸದ ಇಡೀ  ಉದ್ದೇಶವೇ  ಸೋಲುಣ್ಣುತ್ತದೆ"

Posted On: 11 MAR 2023 6:18PM by PIB Bengaluru

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ.ಮಿಶ್ರಾ ಅವರು ಇಂದು ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆಯ 3ನೇ ಅಧಿವೇಶನದ ಸಮಾರೋಪ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. 2013 ರಿಂದ ಎನ್ ಪಿ ಡಿಆರ್ ಆರ್ ನ ಎಲ್ಲಾ ಮೂರು ಅಧಿವೇಶನಗಳಲ್ಲಿ ಭಾಗವಹಿಸಿರುವ ಶ್ರೀ ಮಿಶ್ರಾ ಅವರು, ಮಾತುಕತೆಯ  ವಿಸ್ತೃತ ವ್ಯಾಪ್ತಿ ಮತ್ತು ಚರ್ಚೆಗಳ ವಿಸ್ತಾರ ಹಾಗು ಅವುಗಳ ಆಳದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.  ಇಡೀ ದೇಶವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಈ ವಿಪತ್ತು ಅಪಾಯ ತಗ್ಗಿಸುವ ಕಾರ್ಯಕ್ರಮವು  'ಜನಾಂದೋಲನ'ವಾಗಿ ಬದಲಾಗುತ್ತಿದೆ ಎಂದರು. 

"ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ಸ್ಥಿತಿಸ್ಥಾಪಕತ್ವವನ್ನು, ಪುನಶ್ಚೇತನವನ್ನು  ನಿರ್ಮಿಸುವುದು" ಶೀರ್ಷಿಕೆಯ ಅಧಿವೇಶನದ ಮಹತ್ವವನ್ನು ಪ್ರಧಾನ ಕಾರ್ಯದರ್ಶಿ ಅವರು ಒತ್ತಿಹೇಳಿದರು, ಏಕೆಂದರೆ ಇದು ವಿಪತ್ತು ಅಪಾಯಗಳು ಹೆಚ್ಚುತ್ತಿರುವ ಸಮಯದಲ್ಲಿ ಮತ್ತು ವಿಪತ್ತು ಅಪಾಯಗಳ ಹೊಸ ಮಾದರಿಗಳು ಉದ್ಭವಿಸುತ್ತಿರುವ ಕಾಲಘಟ್ಟದಲ್ಲಿ ವಿಪತ್ತು ಅಪಾಯ ನಿರ್ವಹಣೆಯನ್ನು ಸ್ಥಳೀಕರಣ ಮಾಡುವ  ಅಗತ್ಯಕ್ಕೆ ಇದು ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ ಶ್ರೀ ಮಿಶ್ರಾ ಅವರು ಪ್ರಧಾನಮಂತ್ರಿಯವರ 10 ಅಂಶಗಳ ಕಾರ್ಯಸೂಚಿಯನ್ನು ಉಲ್ಲೇಖಿಸಿದರು, ಇದು ಸ್ಥಳೀಯ ಸಾಮರ್ಥ್ಯಗಳನ್ನು ನಿರ್ಮಾಣ ಮಾಡುವ  ಮತ್ತು ಉಪಕ್ರಮಗಳನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳುತ್ತದೆ, ಮತ್ತು ವಿಶೇಷವಾಗಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಮಹಿಳಾ ನಾಯಕತ್ವದ ಮಹತ್ವವನ್ನು ಒತ್ತಿಹೇಳುತ್ತದೆ. ಅಧಿವೇಶನಗಳ ನಡಾವಳಿಗಳಿಂದ ಲಭಿಸಿದ ಕಲಿಕಾ ಜ್ಞಾನ  ಪ್ರಧಾನ ಮಂತ್ರಿಯವರ ಹತ್ತು ಅಂಶಗಳ ಕಾರ್ಯಸೂಚಿ ಮತ್ತು ಸೆಂಡೈ ಚೌಕಟ್ಟಿನ ಅನುಷ್ಠಾನಕ್ಕೆ ಬಳಕೆಯಾಗುತ್ತದೆ ಎಂದೂ ಹೇಳಿದರು.

ಶ್ರೀ ಮಿಶ್ರಾ ಅವರು ಭಾಗೀದಾರರು  ಅನುಸರಿಸಬೇಕಾದ ಎರಡು ಪ್ರಮುಖ ವಿಷಯಗಳ ಬಗ್ಗೆ ಸಲಹೆಗಳನ್ನು ಮಾಡಿದರು.  ಮೊದಲನೆಯದಾಗಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಪತ್ತು ಅಪಾಯ ನಿರ್ವಹಣಾ ವ್ಯವಸ್ಥೆಯನ್ನು ವೃತ್ತಿಪರಗೊಳಿಸುವುದು ಮತ್ತು ಎರಡನೆಯದಾಗಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳು ಮತ್ತು ಮಧ್ಯಪ್ರವೇಶಗಳನ್ನು  ಅಭಿವೃದ್ಧಿಪಡಿಸುವುದು ಅವಶ್ಯ ಎಂದವರು ನುಡಿದರು. 

ಮೊದಲ ಶೀರ್ಷಿಕಾ ವಿಷಯಕ್ಕೆ ಸಂಬಂಧಿಸಿದಂತೆ, "ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಹಂತಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳ ಎಲ್ಲಾ ಅಂಶಗಳೂ ವೃತ್ತಿಪರವಾಗಿ ತರಬೇತಿ ಪಡೆದ ಸಿಬ್ಬಂದಿ ಮೂಲಕ ಬೆಂಬಲಿಸಲ್ಪಟ್ಟಿರಬೇಕು, ಸೂಕ್ತ ಉದ್ದೇಶಕ್ಕೆ ಪ್ರತಿಸ್ಪಂದಿಸುವ  ರಚನೆ, ಆಡಳಿತಾತ್ಮಕ ಮೂಲಸೌಕರ್ಯ, ಆಧುನಿಕ ಕಾರ್ಯಸ್ಥಳ ಮತ್ತು ತುರ್ತು ಕಾರ್ಯಾಚರಣೆ ಕೇಂದ್ರಗಳಂತಹ ಅಗತ್ಯ ಸೌಲಭ್ಯಗಳು ಅಲ್ಲಿರಬೇಕು”  ಎಂದು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹೇಳಿದರು. ಈ ವೃತ್ತಿಪರತೆಯು ಎಸ್.ಡಿ.ಎಂ.ಎಸ್.ಗಳು, ಡಿಡಿಎಂಎಗಳು –ಈ ಎರಡನ್ನೂ ಒಳಗೊಳ್ಳಬೇಕು. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಆಗಮನ ಬಳಿಕ ವಿಪತ್ತು ಪ್ರತಿಕ್ರಿಯೆಯಲ್ಲುಂಟಾದ  ವೃತ್ತಿಪರತೆಯ ಮಾದರಿಯಲ್ಲಿ ವಿಪತ್ತು ಎದುರಿಸುವ ಸನ್ನದ್ಧತೆ ಮತ್ತು ವಿಪತ್ತು ತಗ್ಗಿಸುವಿಕೆಯನ್ನು ವೃತ್ತಿಪರಗೊಳಿಸಬೇಕಾಗಿದೆ ಎಂದು ಅವರು ಹೇಳಿದರು. ರಾಜ್ಯಗಳು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿವೆ ಮತ್ತು ಎನ್.ಡಿ.ಎಂ.ಎ, ಎನ್.ಐ.ಡಿ.ಎಂ, ಹಾಗು  ಎನ್.ಡಿ.ಆರ್.ಎಫ್.ಗಳಿಂದ   ಸಂಘಟಿತ ರೀತಿಯಲ್ಲಿ ಬೆಂಬಲಿಸಲ್ಪಡುತ್ತವೆ  ಎಂದು ಅವರು ಹೇಳಿದರು.

ಕಾರ್ಯಕ್ರಮ ಅಭಿವೃದ್ಧಿಯ ಎರಡನೇ ವಿಷಯ ಶೀರ್ಷಿಕೆಗೆ  ಸಂಬಂಧಿಸಿದಂತೆ, ನೀತಿಗಳು ಮತ್ತು ಕಾರ್ಯಕ್ರಮಗಳು ಜೊತೆಜೊತೆಯಾಗಿ ಸಾಗಬೇಕು  ಎಂದು ಶ್ರೀ ಮಿಶ್ರಾ ಹೇಳಿದರು. "ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಇದಕ್ಕೆ ವಿಪತ್ತು ನಿರ್ವಹಣೆ, ಪರಿಸರ, ಜಲಸಂಪನ್ಮೂಲ, ಶಿಕ್ಷಣ, ನಗರಾಭಿವೃದ್ಧಿ, ಕೃಷಿ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳ ಸಂಯೋಜಿತ ಪ್ರಯತ್ನಗಳು ಬೇಕಾಗುತ್ತವೆ" ಎಂದೂ ಅವರು ಹೇಳಿದರು.

ವಿಪತ್ತು ನಿರ್ವಹಣೆಯ ಅನ್ವಯಿಸುವಿಕೆಯನ್ನು  ಆಧುನಿಕಗೊಳಿಸುವ  ಅಂತರ-ವಲಯ ಕಾರ್ಯಕ್ರಮಗಳನ್ನು ಸೂಕ್ತ ಸಮಯ ಸಂದರ್ಭಗಳಲ್ಲಿ  ಅಭಿವೃದ್ಧಿಪಡಿಸುವುದನ್ನು ಪರಿಗಣಿಸುವಂತೆ ಪ್ರಧಾನ ಕಾರ್ಯದರ್ಶಿ ಅವರು ಎನ್.ಡಿ.ಎಂ.ಎ.ಗೆ  ಸೂಚಿಸಿದರು, ಏಕೆಂದರೆ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ವಿಪತ್ತು ಅಪಾಯ ನಿರ್ವಹಣೆಯನ್ನು ಆನ್ವಯಿಕಗೊಳಿಸಲು ನಮ್ಮ ನಿಯಮಿತ ಅಪಾಯ ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ಹೇಗೆ ಅನ್ವಯಿಸಬಹುದು ಎಂಬುದು  ನಮಗೆ ತಿಳಿಯದ ಹೊರತು ಅಭಿವೃದ್ಧಿಯಲ್ಲಿ ವಿಪತ್ತು ಅಪಾಯ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ ಎಂದ ಅವರು ಅತ್ಯಂತ ದುರ್ಬಲರ ಅಗತ್ಯಗಳಿಗೆ ಆದ್ಯತೆ ನೀಡುವ ಅಗತ್ಯವನ್ನೂ ಪ್ರಮುಖವಾಗಿ ಉಲ್ಲೇಖಿಸಿದರು. 

ವೃತ್ತಿಪರತೆ ಮತ್ತು ಕಾರ್ಯಕ್ರಮ ಅಭಿವೃದ್ಧಿ ಎರಡೂ ಕಾರ್ಯಗಳಿಗೆ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಹೊಸ ತಂತ್ರಜ್ಞಾನಗಳು,  ವಿಪತ್ತು ನಿರ್ವಹಣಾ ಸಾಧನಗಳು ಮತ್ತು ಅಭ್ಯಾಸಗಳನ್ನು ಚಂಡಮಾರುತಗಳು, ವಿಪತ್ತು ಸ್ಥಿತಿಸ್ಥಾಪಕ/ಪುನಶ್ಚೇತನ  ಮೂಲಸೌಕರ್ಯಗಳಂತಹ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿಸಬಹುದು ಎಂದು ಅವರು ಹೇಳಿದರು. ಮುಂದಿನ ಮೂರು ವರ್ಷಗಳು ಬಹಳ ನಿರ್ಣಾಯಕವಾಗಿವೆ ಮತ್ತು ನಾವು ಇದನ್ನು ಏಕ ಮನಸ್ಸಿನಿಂದ ಆದ್ಯತೆ ನೀಡಿ ಅನುಸರಿಸಬೇಕು ಎಂದೂ  ಅವರು ಹೇಳಿದರು.

ಸೆಂಡೈ ಚೌಕಟ್ಟಿಗೆ ಸಂಬಂಧಿಸಿ  ನಿಧಾನಗತಿಯ ಪ್ರಗತಿಯ ಬಗ್ಗೆ ಭಾಗೀದಾರರನ್ನು  ಎಚ್ಚರಿಸುವ ಮೂಲಕ ಪ್ರಧಾನ ಕಾರ್ಯದರ್ಶಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು, ಅದರ ಎಂಟನೇ ವಾರ್ಷಿಕೋತ್ಸವವು ಇನ್ನು ಒಂದು ಒಂದು ವಾರದಲ್ಲಿ ಬರಲಿದೆ. "ಈ 15 ವರ್ಷಗಳ ಚೌಕಟ್ಟಿನ ಅರ್ಧಕ್ಕಿಂತ ಹೆಚ್ಚು ಸಮಯ ಕಳೆದಿದೆ ಮತ್ತು ಸೆಂಡೈ ಗುರಿಗಳನ್ನು ಸಾಧಿಸುವಲ್ಲಿ  ಜಗತ್ತು ದಾರಿ ತಪ್ಪಿದೆ. ಹೆಚ್ಚು ಸ್ಥಿತಿಸ್ಥಾಪಕ/ಪುನಶ್ಚೇತನ ಸಮುದಾಯಗಳೊಂದಿಗೆ ಸುರಕ್ಷಿತ ದೇಶ ಮತ್ತು ಸುರಕ್ಷಿತ ಪ್ರಪಂಚದತ್ತ ಕೆಲಸ ಮಾಡಲು ವಿಪತ್ತು ಅಪಾಯ ನಿರ್ವಹಣೆಯನ್ನು  ಹೆಚ್ಚು ಪರಿಣಾಮಕಾರಿಯಾಗಿಸಲು, ಹೆಚ್ಚು ಸ್ಪಂದಿಸುವ ರೀತಿಯ  ವ್ಯವಸ್ಥೆಯನ್ನು ರಚಿಸಲು ನಮ್ಮನ್ನು ನಾವು ಮರುಸಮರ್ಪಿಸಿಕೊಳ್ಳಬೇಕು " ಎಂದು ಅವರು ಹೇಳಿದರು.

 

***


(Release ID: 1906147) Visitor Counter : 156