ಹಣಕಾಸು ಸಚಿವಾಲಯ
ʻಸ್ವಾಮಿಹ್’ ನಿಧಿಯು 2019ರಲ್ಲಿ ಪ್ರಾರಂಭವಾದಾಗಿನಿಂದ ಈವರೆಗೆ 20,557 ಮನೆಗಳನ್ನು ಪೂರ್ಣಳಿಸಿದೆ
30 ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳಲ್ಲಿ ಮುಂದಿನ 3 ವರ್ಷಗಳಲ್ಲಿ 81,000ಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ
35,000 ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ದ್ರವ್ಯತೆ ಸಾಧನೆಯೊಂದಿಗೆ ಈ ನಿಧಿಯು 26 ಯೋಜನೆಗಳಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸಿದೆ
Posted On:
04 MAR 2023 1:32PM by PIB Bengaluru
ʻಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿಗಾಗಿ ವಿಶೇಷ ವ್ಯವಸ್ಥೆʼ(ಸ್ವಾಮಿಹ್) ಹೂಡಿಕೆ ನಿಧಿ-1 ಎಂಬುದು ಭಾರತದ ಅತಿದೊಡ್ಡ ಸಾಮಾಜಿಕ ಪರಿಣಾಮ ನಿಧಿಯಾಗಿದೆ. ಒತ್ತಡಕ್ಕೊಳಗಾದ ಮತ್ತು ಸ್ಥಗಿತಗೊಂಡ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವ ನಿರ್ದಿಷ್ಟ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಗಿದೆ.
ಈ ನಿಧಿಯನ್ನು ಭಾರತ ಸರಕಾರದ ಹಣಕಾಸು ಸಚಿವಾಲಯ ಪ್ರಾಯೋಜಿಸಿದೆ ಮತ್ತು ಸ್ಟೇಟ್ ಬ್ಯಾಂಕ್ ಸಮೂಹದ ಕಂಪನಿಯಾದ ʻಎಸ್‌ಬಿಐಸಿಎಪಿ ವೆಂಚರ್ಸ್ ಲಿಮಿಟೆಡ್ʼ ಇದನ್ನು ನಿರ್ವಹಿಸುತ್ತದೆ. ಈ ನಿಧಿಯು ವಿಶಿಷ್ಟವಾಗಿದ್ದು, ಭಾರತದಲ್ಲಿ ಅಥವಾ ಜಾಗತಿಕ ಮಾರುಕಟ್ಟೆಗಳಲ್ಲಿ ಇದಕ್ಕೆ ಹೋಲಿಸಬಹುದಾದ ಮತ್ತೊಂದು ನಿಧಿಯಿಲ್ಲ.
ʻಕೈಗೆಟುಕುವ, ಮಧ್ಯಮ ಆದಾಯದ ವಸತಿʼ ವಿಭಾಗದಲ್ಲಿ ಬರುವ ಒತ್ತಡಕ್ಕೆ ಸಿಲುಕಿದ, ಪಾಳುಬಿದ್ದ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ನೋಂದಾಯಿತ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆಯ ಸಾಲ ಒದಗಿಸುವ ಉದ್ದೇಶದಿಂದ ಈ ನಿಧಿಯಡಿ ಇಲ್ಲಿಯವರೆಗೆ 15,530 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.
ʻಸ್ವಾಮಿಹ್ʼ ಇದುವರೆಗೆ 12,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸುಮಾರು 130 ಯೋಜನೆಗಳಿಗೆ ಅಂತಿಮ ಅನುಮೋದನೆ ನೀಡಿದೆ. 2019ರಲ್ಲಿ ಪ್ರಾರಂಭವಾದ ಮೂರು ವರ್ಷಗಳಲ್ಲಿ, ಈ ನಿಧಿ ಈಗಾಗಲೇ 20,557 ಮನೆಗಳನ್ನು ಪೂರ್ಣಗೊಳಿಸಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 30 ಶ್ರೇಣಿ 1 ಮತ್ತು 2 ನಗರಗಳಲ್ಲಿ 81,000 ಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಮೊದಲ ಬಾರಿಗೆ ಕೆಲಸ ಆರಂಭಿಸಿದ ಡೆವಲಪರ್‌ಗಳು, ತೊಂದರೆಗೀಡಾದ ಯೋಜನೆಗಳನ್ನು ಹೊಂದಿರುವ ಪ್ರತಿಷ್ಠಿತ ಡೆವಲಪರ್‌ಗಳು, ಸ್ಥಗಿತಗೊಂಡ ಯೋಜನೆಗಳ ಕಳಪೆ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಡೆವಲಪರ್‌ಗಳು, ಗ್ರಾಹಕರ ದೂರುಗಳು ಮತ್ತು ಎನ್‌ಪಿಎ ಖಾತೆಗಳು, ವ್ಯಾಜ್ಯ ಸಮಸ್ಯೆಗಳಿರುವ ಯೋಜನೆಗಳನ್ನು ಸಹ ಈ ನಿಧಿಯು ಪರಿಗಣಿಸುತ್ತದೆ. ಹೀಗಾಗಿ ತೊಂದರೆಗೀಡಾದ ಯೋಜನೆಗಳಿಗೆ ಈ ನಿಧಿಯನ್ನು ಅಂತಿಮ ಹಣಕಾಸು ಪರಿಹಾರವೆಂದು ಪರಿಗಣಿಸಲಾಗಿದೆ.
ಯೋಜನೆಯ ವೆಚ್ಚಗಳ ಮೇಲೆ ದೃಢವಾದ ಮೇಲ್ವಿಚಾರಣೆ ಮತ್ತು ನಿಯಂತ್ರಣವು ʻಸ್ವಾಮಿಹ್ʼ ಹೂಡಿಕೆ ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ. ಇದು ತ್ವರಿತ ಯೋಜನೆ ಪೂರ್ಣಗೊಳಿಸುವಿಕೆಗೆ ಅನುವು ಮಾಡಿಕೊಡುತ್ತದೆ. ಯೋಜನೆಯಲ್ಲಿ ಈ ನಿಧಿಯ ಉಪಸ್ಥಿತಿಯು ಹಲವು ವರ್ಷಗಳಿಂದ ವಿಳಂಬವಾದ ಯೋಜನೆಗಳಲ್ಲಿಯೂ ಸಹ ಉತ್ತಮ ಸಂಗ್ರಹಣೆ ಮತ್ತು ಮಾರಾಟಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ದೃಢವಾದ ನಿಯಂತ್ರಣಗಳು ಮತ್ತು ಯೋಜನೆಗಳು ಹಾಗೂ ಪ್ರವರ್ತಕರ ಟ್ರ್ಯಾಕ್ ರೆಕಾರ್ಡ್ ಹೊರತಾಗಿಯೂ, ಈ ನಿಧಿಯು 26 ಯೋಜನೆಗಳಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸಲು ಮತ್ತು ಅದರ ಹೂಡಿಕೆದಾರರಿಗೆ ಆದಾಯವನ್ನು ಗಳಿಸಲು ಅನುವು ಮಾಡಿಕೊಟ್ಟಿದೆ.
ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕ್ಷೇತ್ರದ ಅನೇಕ ಪೂರಕ ಉದ್ಯಮಗಳ ಬೆಳವಣಿಗೆಯಲ್ಲಿ ಈ ನಿಧಿ ನಿರ್ಣಾಯಕ ಪಾತ್ರ ವಹಿಸಿದ್ದು, 35,000 ಕೋಟಿ ರೂ.ಗಿಂತ ಹೆಚ್ಚಿನ ದ್ರವ್ಯತೆಯನ್ನು ಯಶಸ್ವಿಯಾಗಿ ಸಾಧಿಸಿದೆ.
**
(Release ID: 1904212)
Visitor Counter : 196