ಪ್ರಧಾನ ಮಂತ್ರಿಯವರ ಕಛೇರಿ

​​​​​​​‘ನಗರ ಯೋಜನೆ, ಅಭಿವೃದ್ಧಿ ಮತ್ತು ನೈರ್ಮಲ್ಯʼಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


"21 ನೇ ಶತಮಾನದಲ್ಲಿ ಭಾರತದ ವೇಗದ ಬೆಳವಣಿಗೆಯ ವಾತಾವರಣಕ್ಕೆ ಉತ್ತಮವಾಗಿ ಯೋಜಿಸಲಾದ ನಗರಗಳು ಅವಶ್ಯಕತೆಯಾಗಿರುತ್ತವೆ"

"ಹೊಸ ನಗರಗಳ ಅಭಿವೃದ್ಧಿ ಮತ್ತು ಅಸ್ತಿತ್ವದಲ್ಲಿರುವ ನಗರಗಳಲ್ಲಿ ಸೇವೆಗಳ ಆಧುನೀಕರಣವು ನಗರಾಭಿವೃದ್ಧಿಯ ಎರಡು ಪ್ರಮುಖ ಅಂಶಗಳಾಗಿವೆ"

"ನಗರ ಯೋಜನೆಯು ಅಮೃತಕಾಲದಲ್ಲಿ ನಮ್ಮ ನಗರಗಳ  ಭವಿಷ್ಯವನ್ನು ನಿರ್ಧರಿಸುತ್ತದೆ ಮತ್ತು ಉತ್ತಮವಾಗಿ ಯೋಜಿತವಾದ ನಗರಗಳು ಮಾತ್ರ ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ "

"ಮೆಟ್ರೋ ರೈಲು ಜಾಲದಲ್ಲಿ ಭಾರತವು ಹಲವಾರು ದೇಶಗಳನ್ನು ಹಿಂದಿಕ್ಕಿದೆ"

"2014 ರಲ್ಲಿದ್ದ ಕೇವಲ 14-15 ಪ್ರತಿಶತಕ್ಕೆ ಹೋಲಿಸಿದರೆ ಇಂದು ಶೇಕಡಾ 75 ರಷ್ಟು ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ"

"ನಮ್ಮ ಹೊಸ ನಗರಗಳು ಕಸ ಮುಕ್ತವಾಗಿರಬೇಕು, ಸಮೃದ್ಧ ನೀರು ಪಡೆಯಬೇಕು ಮತ್ತು ಹವಾಮಾನ ತಾಳಿಕೆ ಹೊಂದಿರಬೇಕು"

"ಸರ್ಕಾರವು ರೂಪಿಸುತ್ತಿರುವ ಯೋಜನೆಗಳು ಮತ್ತು ನೀತಿಗಳು ನಗರಗಳ  ಜನರ ಜೀವನವನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಅವರ ಸ್ವಂತ ಅಭಿವೃದ್ಧಿಗೆ ಸಹಾಯ ಮಾಡಬೇಕು"

Posted On: 01 MAR 2023 11:29AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಯೋಜನೆ ಕೇಂದ್ರಿತ ನಗರಾಭಿವೃದ್ಧಿ’ವಿಷಯವನ್ನು ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ ಬಜೆಟ್ ನಂತರದ 12 ವೆಬಿನಾರ್‌ಗಳ ಸರಣಿಯಲ್ಲಿ ಇದು ಆರನೆಯದು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ದೇಶದಲ್ಲಿ ಕೇವಲ ಒಂದೆರಡು ಯೋಜಿತ ನಗರಗಳನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ವಿಷಾದಿಸಿದರು. ಸ್ವಾತಂತ್ರ್ಯದ 75 ವರ್ಷಗಳಲ್ಲಿ 75 ಯೋಜಿತ ನಗರಗಳನ್ನು ಅಭಿವೃದ್ಧಿಪಡಿಸಿದ್ದರೆ ವಿಶ್ವದಲ್ಲಿ ಭಾರತದ ಸ್ಥಾನವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿತ್ತು ಎಂದು ಅವರು ಹೇಳಿದರು. 21ನೇ ಶತಮಾನದಲ್ಲಿ ಭಾರತದ ವೇಗದ ಬೆಳವಣಿಗೆಯ ವಾತಾವರಣದಲ್ಲಿ ಸುವ್ಯವಸ್ಥಿತ ನಗರಗಳು ಅಗತ್ಯವಾಗಲಿವೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಹೊಸ ನಗರಗಳ ಅಭಿವೃದ್ಧಿ ಮತ್ತು ಅಸ್ತಿತ್ವದಲ್ಲಿರುವ ನಗರಗಳಲ್ಲಿನ ಸೇವೆಗಳ ಆಧುನೀಕರಣವು ನಗರಾಭಿವೃದ್ಧಿಯ ಎರಡು ಪ್ರಮುಖ ಅಂಶಗಳಾಗಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದ ಪ್ರತಿ ಬಜೆಟ್‌ನಲ್ಲಿ ನಗರಾಭಿವೃದ್ಧಿಗೆ ನೀಡುತ್ತಿರುವ ಮಹತ್ವವನ್ನು ಎತ್ತಿ ತೋರಿಸಿದರು. ನಗರಾಭಿವೃದ್ಧಿಯ ಮಾನದಂಡಗಳಿಗೆ ಈ ವರ್ಷದ ಬಜೆಟ್‌ನಲ್ಲಿ 15,000 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು ಮತ್ತು ಇದು ಯೋಜಿತ ನಗರೀಕರಣಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಾಭಿವೃದ್ಧಿಯಲ್ಲಿ ಯೋಜನೆ ಮತ್ತು ಆಡಳಿತದ ಮಹತ್ವದ ಪಾತ್ರವನ್ನು ಪ್ರಧಾನಿ ಪುನರುಚ್ಚರಿಸಿದರು. ನಗರಗಳ ಕಳಪೆ ಯೋಜನೆ ಅಥವಾ ಯೋಜನೆಯ ನಂತರ ಸೂಕ್ತ ಅನುಷ್ಠಾನದ ಕೊರತೆಯು ಭಾರತದ ಅಭಿವೃದ್ಧಿ ಪಯಣದಲ್ಲಿ ದೊಡ್ಡ ಸವಾಲುಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಪ್ರದೇಶವಾರು ಯೋಜನೆ, ಸಾರಿಗೆ ಯೋಜನೆ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚು ಕೇಂದ್ರೀಕೃತ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಗರ ಯೋಜನೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ರಾಜ್ಯಗಳಲ್ಲಿ ನಗರ ಯೋಜನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಹೇಗೆ, ನಗರ ಯೋಜನೆಯಲ್ಲಿ ಖಾಸಗಿ ವಲಯದಲ್ಲಿ ಲಭ್ಯವಿರುವ ಪರಿಣತಿಯನ್ನು ಸರಿಯಾಗಿ ಬಳಸುವುದು ಹೇಗೆ ಮತ್ತು ಕೊನೆಯದಾಗಿ ಶ್ರೇಷ್ಠತಾ ಕೇಂದ್ರವನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬ ಮೂರು ಪ್ರಮುಖ ಪ್ರಶ್ನೆಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಅವರು ವೆಬಿನಾರ್‌ನಲ್ಲಿ ಭಾಗವಹಿಸಿದವರನ್ನು ಒತ್ತಾಯಿಸಿದರು. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಯೋಜಿತ ನಗರ ಪ್ರದೇಶಗಳನ್ನು ಸಿದ್ಧಪಡಿಸಿದಾಗ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ತಮ್ಮ ಕೊಡುಗೆಗಳನ್ನು ನೀಡಬಹುದು ಎಂದು ಅವರು ಹೇಳಿದರು. ನಗರ ಯೋಜನೆಯು ಅಮೃತಕಾಲದಲ್ಲಿ ನಮ್ಮ ನಗರಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಮತ್ತು ಉತ್ತಮ ಯೋಜಿತ ನಗರಗಳು ಮಾತ್ರ ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಪ್ರಧಾನಿ ಹೇಳಿದರು. ಉತ್ತಮ ಯೋಜನೆಯಿಂದ ಮಾತ್ರ ನಮ್ಮ ನಗರಗಳು ಹವಾಮಾನ ತಾಳಿಕೆ ಮತ್ತು ಸುರಕ್ಷಿತ ನೀರು ಹೊಂದುತ್ತವೆ ಎಂದು ಅವರು ಹೇಳಿದರು.

ಪರಿಣಿತರು ಹೊಸ ಆಲೋಚನೆಗಳನ್ನು ಮಾಡಬೇಕು ಎಂದು ವಿನಂತಿಸಿದ ಪ್ರಧಾನಮಂತ್ರಿಯವರು ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನಿಂಗ್, ವಿವಿಧ ರೀತಿಯ ಯೋಜನಾ ಪರಿಕರಗಳ ಅಭಿವೃದ್ಧಿ, ಸಮರ್ಥ ಮಾನವ ಸಂಪನ್ಮೂಲಗಳು ಮತ್ತು ಸಾಮರ್ಥ್ಯ ವರ್ಧನೆಯಂತಹ ಕ್ಷೇತ್ರಗಳಲ್ಲಿ ಅವರು ವಹಿಸಬಹುದಾದ ಪಾತ್ರವನ್ನು ವಿವರಿಸಿದರು. ನಗರ ಸ್ಥಳೀಯ ಸಂಸ್ಥೆಗಳಿಗೆ ಅವರ ಪರಿಣತಿ ಹೆಚ್ಚು ಅಗತ್ಯವಾಗಿದ್ದು, ಆ ಮೂಲಕ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಸಾರಿಗೆ ಯೋಜನೆಯು ನಗರಗಳ ಅಭಿವೃದ್ಧಿಯ ಪ್ರಮುಖ ಆಧಾರ ಸ್ತಂಭವಾಗಿದೆ ಮತ್ತು ನಮ್ಮ ನಗರಗಳ ಸಾರಿಗೆ ವ್ಯವಸ್ಥೆಯು ಅಡೆತಡೆಯಿಲ್ಲದೆ ಇರಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. 2014 ಕ್ಕೂ ಮೊದಲು ದೇಶದಲ್ಲಿದ್ದ ಮೆಟ್ರೋ ಸಂಪರ್ಕದ ಬಗ್ಗೆ ಪ್ರಸ್ಥಾಪಿಸಿದ ಪ್ರಧಾನಿ, ಪ್ರಸ್ತುತ ಸರ್ಕಾರವು ಅನೇಕ ನಗರಗಳಲ್ಲಿ ಮೆಟ್ರೋ ರೈಲು ಕೆಲಸ ಮಾಡಿದೆ ಮತ್ತು ಮೆಟ್ರೋ ನೆಟ್‌ವರ್ಕ್ ಸಂಪರ್ಕದ ವಿಷಯದಲ್ಲಿ ಹಲವಾರು ದೇಶಗಳನ್ನು ಹಿಂದಿಕ್ಕಿದೆ ಎಂದು ಹೇಳಿದರು. ಮೆಟ್ರೋ ಜಾಲವನ್ನು ಬಲಪಡಿಸುವ ಮತ್ತು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಗರಗಳಲ್ಲಿನ ರಸ್ತೆಗಳ ಅಗಲೀಕರಣ, ಹಸಿರು ಸಾರಿಗೆ, ಎತ್ತರಿಸಿದ ರಸ್ತೆಗಳು ಮತ್ತು ಜಂಕ್ಷನ್ ಸುಧಾರಣೆಯನ್ನು ಸಾರಿಗೆ ಯೋಜನೆಯ ಭಾಗವಾಗಿ ಸೇರಿಸಬೇಕಾಗಿದೆ ಎಂದು ಅವರು ಹೇಳಿದರು.

ಭಾರತವು ಮರುಬಳಕೆಯ ಆರ್ಥಿಕತೆಯನ್ನು ನಗರಾಭಿವೃದ್ಧಿಯ ಪ್ರಮುಖ ಆಧಾರವನ್ನಾಗಿ ಮಾಡುತ್ತಿದೆ, ನಗರಸಭೆಯ ಸಾವಿರಾರು ಟನ್ ತ್ಯಾಜ್ಯಗಳಾದ ಬ್ಯಾಟರಿ ತ್ಯಾಜ್ಯ, ವಿದ್ಯುತ್ ತ್ಯಾಜ್ಯ, ಆಟೋಮೊಬೈಲ್ ತ್ಯಾಜ್ಯ, ಟೈರ್ ಮತ್ತು ಕಾಂಪೋಸ್ಟ್ ತಯಾರಿಸಲು ಬಳಸುವ ತ್ಯಾಜ್ಯವನ್ನು ಪ್ರತಿದಿನ ನಮ್ಮ ದೇಶದಲ್ಲಿ ಸಂಸ್ಕರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 2014 ರಲ್ಲಿದ್ದ ಕೇವಲ 14-15 ಪ್ರತಿಶತಕ್ಕೆ ಹೋಲಿಸಿದರೆ ಇಂದು 75 ಪ್ರತಿಶತದಷ್ಟು ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಕ್ರಮವನ್ನು ಮೊದಲೇ ತೆಗೆದುಕೊಂಡಿದ್ದರೆ ಭಾರತದ ನಗರಗಳ ಹೊರವಲಯಗಳು ಕಸದ ಪರ್ವತಗಳಿಂದ ಕೂಡಿರುತ್ತಿರಲಿಲ್ಲ ಎಂದು ಅವರು ಹೇಳಿದರು. ತ್ಯಾಜ್ಯ ಸಂಸ್ಕರಣೆಯ ಮೂಲಕ ನಗರಗಳನ್ನು ಕಸದ ರಾಶಿಯಿಂದ ಮುಕ್ತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಇದು ಅನೇಕ ಕೈಗಾರಿಕೆಗಳಿಗೆ ಮರುಬಳಕೆ ಅವಕಾಶಗಳನ್ನು ತೆರೆದಿದೆ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳನ್ನು ಎಲ್ಲರೂ ಬೆಂಬಲಿಸಬೇಕು, ಕೈಗಾರಿಕೆಗಳು ತ್ಯಾಜ್ಯ ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಅಮೃತ್ ಯೋಜನೆಯ ಯಶಸ್ಸಿನ ನಂತರ ನಗರಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಅಮೃತ್ 2.0 ಅನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು. ಸಾಂಪ್ರದಾಯಿಕ ಮಾದರಿಯ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಯೋಜನೆಗೆ ಒತ್ತು ನೀಡಿದ ಪ್ರಧಾನಿ, ಕೆಲವು ನಗರಗಳಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಕೈಗಾರಿಕಾ ಬಳಕೆಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಹೊಸ ನಗರಗಳು ಕಸ-ಮುಕ್ತ, ನೀರು ಸಮೃದ್ಧ ಮತ್ತು ಹವಾಮಾನ ತಾಳಿಕೆಯಾಗಿರಬೇಕು, ನಗರ ಮೂಲಸೌಕರ್ಯದಲ್ಲಿ ಹೂಡಿಕೆಯ ಹೆಚ್ಚಳದ ಅಗತ್ಯ ಮತ್ತು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿ ಯೋಜನೆಗಳನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಮ್ಮ ಭವಿಷ್ಯದ ನಗರಗಳನ್ನು ವಾಸ್ತುಶಿಲ್ಪ, ಶೂನ್ಯ ವಿಸರ್ಜನೆ ಮಾದರಿ, ಇಂಧನದ ನಿವ್ವಳ ಸಕಾರಾತ್ಮಕತೆ, ಭೂ ಬಳಕೆಯಲ್ಲಿ ದಕ್ಷತೆ, ಸಾರಿಗೆ ಕಾರಿಡಾರ್‌ಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಂತಹ ನಿಯತಾಂಕಗಳ ಮೇಲೆ ವ್ಯಾಖ್ಯಾನಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ನಗರ ಯೋಜನೆಯ ಭಾಗವಾಗಿ ಮಕ್ಕಳಿಗೆ ಬೈಸಿಕಲ್ ಸವಾರಿಗಾಗಿ ಆಟದ ಮೈದಾನಗಳು ಮತ್ತು ಮಾರ್ಗಗಳ ಅಗತ್ಯವಿದೆ ಎಂದು ಅವರು ಹೇಳಿದರು. 

ಸರ್ಕಾರವು ರೂಪಿಸುತ್ತಿರುವ ಯೋಜನೆಗಳು ಮತ್ತು ನೀತಿಗಳು ನಗರಗಳ ಜನರ ಜೀವನವನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಅವರ ಸ್ವಂತ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಈ ವರ್ಷದ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ ಸುಮಾರು 80,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಸರ್ಕಾರದ ಬದ್ಧತೆಯ ಬಗ್ಗೆ ಅವರು ಪ್ರಸ್ತಾಪಿಸಿದರು. ಸಿಮೆಂಟ್, ಕಬ್ಬಿಣ, ಬಣ್ಣ ಮತ್ತು ಪೀಠೋಪಕರಣಗಳಂತಹ ಕೈಗಾರಿಕೆಗಳಿಗೆ ಮನೆ ನಿರ್ಮಿಸಿದಾಗಲೆಲ್ಲಾ ಉತ್ತೇಜನ ಸಿಗುತ್ತದೆ ಎಂದು ಅವರು ಹೇಳಿದರು. ನಗರಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭವಿಷ್ಯದ ತಂತ್ರಜ್ಞಾನದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ನವೊದ್ಯಮಗಳು ಮತ್ತು ಉದ್ಯಮಗಳು ಈ ದಿಕ್ಕಿನಲ್ಲಿ ಯೋಚಿಸಬೇಕು ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ನಾವು ಇರುವ ಸಾಧ್ಯತೆಗಳ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಬೇಕು. ಸುಸ್ಥಿರ ಮನೆ ತಂತ್ರಜ್ಞಾನದಿಂದ ಸುಸ್ಥಿರ ನಗರಗಳವರೆಗೆ, ನಾವು ಹೊಸ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

 

***



(Release ID: 1903383) Visitor Counter : 213