ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ದಿನಾಂಕ 26.02.2023 ರಂದು ಮಾಡಿದ ‘ಮನ್ ಕಿ ಬಾತ್’ – 98 ನೇ ಭಾಷಣದ ಕನ್ನಡ ಅವತರಣಿಕೆ

Posted On: 26 FEB 2023 11:40AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನ ಈ 98 ನೇ ಸಂಚಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನೂರನೇ ಸಂಚಿಕೆಯತ್ತ ಸಾಗುತ್ತಿರುವ ಈ ಪ್ರಯಾಣದಲ್ಲಿ ಮನದ ಮಾತನ್ನು, ನೀವೆಲ್ಲರೂ ಜನಭಾಗಿದಾ ಅಭಿವ್ಯಕ್ತಿಯ ಅದ್ಭುತ ವೇದಿಕೆಯನ್ನಾಗಿ ಮಾಡಿದ್ದೀರಿ. ಪ್ರತಿ ತಿಂಗಳೂ, ಲಕ್ಷಾಂತರ ಸಂದೇಶಗಳಲ್ಲಿ ಎಷ್ಟೊಂದು ಜನರ ಮನದ ಮಾತು ನನಗೆ ತಲುಪುತ್ತದೆ. ನೀವೆಲ್ಲರೂ ನಿಮ್ಮ ಮನದ ಸಾಮರ್ಥ್ಯವನ್ನಂತೂ ಅರಿತೇ ಇದ್ದೀರಿ, ಅಂತೆಯೇ ಸಮಾಜದ ಶಕ್ತಿ ಸಾಮರ್ಥ್ಯದಿಂದ ದೇಶದ ಶಕ್ತಿ ಸಾಮರ್ಥ್ಯ ಹೇಗೆ ಹೆಚ್ಚಾಗುತ್ತದೆಂದು ನಾವು ಮನದ ಮಾತಿನ ಬೇರೆ ಬೇರೆ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ, ಮತ್ತು ನನ್ನ ಅನುಭವಕ್ಕೂ ಬಂದಿದೆ ಅಂತೆಯೇ ಅಂಗೀಕರಿಸಿದ್ದೇನೆ ಕೂಡಾ. ನಾವು ಮನದ ಮಾತಿನಲ್ಲಿ ಭಾರತದ ಸಾಂಪ್ರದಾಯಿಕ ಆಟಗಳಿಗೆ ಪ್ರೋತ್ಸಾಹ ನೀಡುವ ಕುರಿತು ಮಾತನಾಡಿದ ಆ ದಿನ ನನಗೆ ನೆನಪಿದೆ. ಆ ಸಮಯದಲ್ಲಿ ತಕ್ಷಣವೇ ದೇಶದಲ್ಲಿ ಭಾರತೀಯ ಕ್ರೀಡೆಗಳೊಡನೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಆನಂದಿಸಲು ಮತ್ತು ಅವುಗಳನ್ನು ಕಲಿಯಲು ಒಂದು ಅಲೆಯೇ ಮೇಲೆ ಎದ್ದಿತ್ತು. ಮನದ ಮಾತಿನಲ್ಲಿ ಭಾರತೀಯ ಆಟಿಕೆಗಳ ಮಾತು ಬಂದಾಗ, ದೇಶದ ಜನತೆ ಇದಕ್ಕೆ ಕೂಡಾ ಕೈಜೋಡಿಸಿ ಪ್ರಚಾರಕ್ಕೆ ಮುಂದಾದರು. ಈಗಂತೂ ಭಾರತೀಯ ಆಟಿಕೆಗಳ ಮೇಲೆ ಜನರಲ್ಲಿ ಎಷ್ಟು ಇಷ್ಟ ಮೂಡಿದೆಯೆಂದರೆ, ವಿದೇಶಗಳಲ್ಲೂ ಇವುಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ. ಮನದ ಮಾತಿನಲ್ಲಿ ನಾವು ಕತೆ ಹೇಳುವ ಭಾರತೀಯ ಶೈಲಿಗಳ ಬಗ್ಗೆ ಮಾತನಾಡಿದಾಗ, ಇದರ ಜನಪ್ರಿಯತೆ ಕೂಡಾ ದೂರದೂರವರೆಗೂ ತಲುಪಿತು. ಜನರು ಭಾರತೀಯ ಕತೆ ಹೇಳುವ ಶೈಲಿಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗತೊಡಗಿದರು.

    ಸ್ನೇಹಿತರೇ, ನಿಮಗೆ ನೆನಪಿರಬಹುದು, ಸರ್ದಾರ್ ಪಟೇಲರ ಜಯಂತಿ ಅಂದರೆ ಏಕತಾ ದಿವಸ್ ಸಂದರ್ಭದಲ್ಲಿ ಮನ್ ಕಿ ಬಾತ್ ನಲ್ಲಿ ನಾವು ಮೂರು ಸ್ಪರ್ಧೆಗಳ ಬಗ್ಗೆ ಮಾತನಾಡಿದ್ದೆವು. ಈ ಸ್ಪರ್ಧೆಗಳಲ್ಲಿ ದೇಶಭಕ್ತಿ ಆಧಾರಿತ ಗೀತೆಗಳು, ಲಾಲಿ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳು ಸೇರಿದ್ದವು. ದೇಶಾದ್ಯಂತ 700 ಕ್ಕಿಂತಲೂ ಅಧಿಕ ಜಿಲ್ಲೆಗಳ 5 ಲಕ್ಷಕ್ಕೂ ಅಧಿಕ ಜನರು ಬಹಳ ಉತ್ಸಾಹದಿಂದ ಇವುಗಳಲ್ಲಿ ಪಾಲ್ಗೊಂಡಿದ್ದರೆಂದು ನಿಮಗೆ ಹೇಳಲು ನನಗೆ ಬಹಳ ಹರ್ಷವೆನಿಸುತ್ತದೆ. ಮಕ್ಕಳು, ದೊಡ್ಡವರು, ವೃದ್ಧರೂ ಎಲ್ಲರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಮತ್ತು 20 ಕ್ಕೂ ಅಧಿಕ ಭಾಷೆಗಳಲ್ಲಿ ತಮ್ಮ ಪ್ರವೇಶ ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ನನ್ನ ಕಡೆಯಿಂದ ಅನೇಕ ಶುಭಾಶಯಗಳು. ನಿಮ್ಮಲ್ಲಿ ಪ್ರತಿಯೊಬ್ಬರೂ, ನಿಮಗೆ ನೀವೇ ಛಾಂಪಿಯನ್ ಗಳು, ಕಲಾ ಸಾಧಕರಾಗಿದ್ದೀರಿ. ನಿಮ್ಮೆಲ್ಲರ ಹೃದಯದಲ್ಲಿ ದೇಶದ ವಿವಿಧತೆ ಮತ್ತು ಸಂಸ್ಕೃತಿಯ ಕುರಿತು ಎಷ್ಟೊಂದು ಪ್ರೀತಿಯಿದೆ ಎಂದು ನೀವೆಲ್ಲರೂ ತೋರಿಸಿದ್ದೀರಿ.

ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ ನನಗೆ ಲತಾ ಮಂಗೇಶ್ಕರ್, ಲತಾ ದೀದಿಯ ನೆನಪು ಬರುವುದು ಬಹಳ ಸಹಜವಾಗಿದೆ. ಏಕೆಂದರೆ ಈ ಸ್ಪರ್ಧೆ ಪ್ರಾರಂಭವಾದಾಗ, ಲತಾ ಅವರು ದೇಶದ ಜನತೆ ಈ ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.

ಸ್ನೇಹಿತರೇ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕರ್ನಾಟಕದ ಚಾಮರಾಜ ನಗರದ ಜಿಲ್ಲೆಯ ಬಿ. ಎಂ ಮಂಜುನಾಥ್ ಅವರಿಗೆ ಸಂದಿದೆ. ಅವರು ಕನ್ನಡದಲ್ಲಿ ಬರೆದ ಲಾಲಿ ಮಲಗು ಕಂದಾ ಹಾಡಿಗೆ ಈ ಬಹುಮಾನ ಸಂದಿದೆ. ತಮ್ಮ ತಾಯಿ ಮತ್ತು ಅಜ್ಜಿ ಹಾಡುತ್ತಿದ್ದ ಜೋಗುಳದ ಹಾಡುಗಳಿಂದ ಇವರಿಗೆ ಲಾಲಿ ಹಾಡು ಬರೆಯುವ ಪ್ರೇರಣೆ ದೊರೆಯಿತು. ಇದನ್ನು ಕೇಳಿದರೆ ನಿಮಗೆ ಕೂಡಾ ಖಂಡಿತವಾಗಿಯೂ ಸಂತೋಷವಾಗುತ್ತದೆ.

(Kannad Sound Clip (35 seconds) HINDI Translation)

ಮಲಗು ಮಲಗು ಮಗುವೇ ಮಲಗು

ನನ್ನ ಜಾಣ ಮುದ್ದು ಮಗುವೇ ಮಲಗು,

ದಿನ ಕಳೆದು ಕತ್ತಲಾಗಿದೆ,

ನಿದ್ರಾದೇವಿ ಬರುತ್ತಾಳೆ, ತಾರೆಗಳ ತೋಟದಿಂದ.

ಕನಸು ಕಿತ್ತು ತರುತ್ತಾಳೆ, ಮಲಗು ಮಲಗು

ಜೋ ಜೋಜೋ..

ಜೋ. ಜೋಜೋ

(“ಸೋ ಜಾವೋ ಸೋ ಜಾವೋ ಬೇಬಿ,

ಮೇರೆ ಸಮಜ್ ದಾರ್ ಲಾಡಲೇ, ಸೋ ಜಾವೋ

ದಿನ್ ಚಲಾ ಗಯಾ ಹೈ ಔರ್ ಅಂಧೇರಾ ಹೈ

ನಿದ್ರಾ ದೇವೀ ಆ ಜಾಯೇಗೀ, ಸಿತಾರೋಂ ಕೆ ಬಾಗ್ ಸೇ,

ಸಪನೇ ಕಾಟ್ ಲಾಯೇಗೀ,

ಸೋ ಜಾವೋ, ಸೋ ಜಾವೋ,

ಜೋಜೋ..ಜೋ..ಜೋ,”)

ಅಸ್ಸಾಂನಲ್ಲಿ ಕಾಮರೂಪ್ ಜಿಲ್ಲೆಯ ನಿವಾಸಿ ದಿನೇಶ್ ಗೋವಾಲಾ ಅವರು ಈ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ವಿಜೇತರಾಗಿತ್ತಾರೆ. ಇವರು ಬರೆದಿರುವ ಲಾಲಿ ಹಾಡಿನಲ್ಲಿ, ಸ್ಥಳೀಯ ಮಣ್ಣು ಮತ್ತು ಲೋಹದ ಪಾತ್ರೆಗಳನ್ನು ತಯಾರಿಸುವ ಕುಶಲ ಕರ್ಮಿಗಳ ಜನಪ್ರಿಯ ಕಲೆಯ ಛಾಪು ಕೂಡಾ ಇದೆ.

(Assamese Sound Clip (35 seconds) HINDI Translation)

ಕುಂಬಾರಜ್ಜ ಜೋಳಿಗೆ ತಂದಿದ್ದಾರೆ

ಜೋಳಿಗೆಯಲ್ಲಿ ಇರುವುದಾದರೂ ಏನು?

ಕುಂಬಾರಜ್ಜನ ಜೋಳಿಗೆ ತೆರೆದು ನೋಡಿದೆ,

ಜೋಳಿಗೆಯಲ್ಲಿತ್ತು ಸುಂದರ ಬಟ್ಟಲೊಂದು!

ನಮ್ಮ ಪುಟ್ಟ ಹೆಣ್ಣುಮಗು ಕುಂಬಾರನನ್ನು ಕೇಳಿತು,

ಹೇಗಿದೆ ಈ ಪುಟ್ಟ ಬಟ್ಟಲು!

(ಕುಮ್ಹಾರ ದಾದಾ ಝೋಲಾ ಲೇಕರ್ ಆಯೇ ಹೈ,

ಝೋಲೇ ಮೇ ಭಲಾ ಕ್ಯಾ ಹೈ?

ಖೋಲ್ ಕರ್ ದೇಖಾ ಕುಮ್ಹಾರಾ ಕೇ ಝೋಲೇ ಕೋ ತೋ,

ಝೋಲೇ ಮೇ ಥೀ ಪ್ಯಾರೀ ಸೀ ಕಟೋರೀ!

ಹಮಾರೀ ಗುಡಿಯಾ ನೇ ಕುಮ್ಹಾರಾ ಸೇ ಪೂಛಾ,

ಕೈಸೀ ಹೈ ಛೋಟೀ ಸೀ ಕಟೋರೀ!)

 

ಗೀತೆಗಳು ಮತ್ತು ಲಾಲಿ ಹಾಡಿನಂತೆಯೇ ರಂಗೋಲಿ ಸ್ಪರ್ಧೆ ಕೂಡಾ ಬಹಳ ಜನಪ್ರಿಯವಾಯಿತು. ಇದರಲ್ಲಿ ಪಾಲ್ಗೊಂಡವರು ಒಂದಕ್ಕಿಂತ ಒಂದು ಸುಂದರವಾದ ರಂಗೋಲಿಗಳನ್ನು ಬಿಡಿಸಿ ಕಳುಹಿಸಿದ್ದರು. ಇದರಲ್ಲಿ ಪಂಜಾಬ್ ನ ಕಮಲ್ ಕುಮಾರ್ ಅವರು ಕಳುಹಿಸಿದ ರಂಗೋಲಿಗೆ ಬಹುಮಾನ ದೊರೆಯಿತು. ಇವರು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಹುತಾತ್ಮ ವೀರ ಭಗತ್ ಸಿಂಗ್ ಅವರುಗಳ ಚಿತ್ರಗಳನ್ನು ಬಹಳ ಸುಂದರವಾಗಿ ರಂಗೋಲಿಯಲ್ಲಿ ಮೂಡಿಸಿದ್ದರು. ಮಹಾರಾಷ್ಟ್ರದ ಸಾಂಗ್ಲಿಯ ಸಚಿನ್ ನರೇಂದ್ರ ಅವಸಾರಿ ಅವರು ಜಲಿಯನ್ ವಾಲಾ ಬಾಗ್, ಅಲ್ಲಿ ನಡೆದ ನರಮೇಧ, ಮತ್ತು ಹುತಾತ್ಮ  ಉಧಮ್ ಸಿಂಗ್ ಅವರ ಪರಾಕ್ರಮ ರಂಗೋಲಿಯಲ್ಲಿ ಪ್ರದರ್ಶಿತಗೊಳಿಸಿದ್ದರು. ಗೋವಾ ನಿವಾಸಿ ಗುರುದತ್ ವಾಂಟೇಕರ್ ಅವರು ಗಾಂಧೀಜಿಯವರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದರೆ, ಪುದುಚೆರಿಯ ಮಾಲತಿ ಸೆಲ್ವಮ್ ಅವರು ಸ್ವಾತಂತ್ರ್ಯ ಹೋರಾಟದ ಅನೇಕ ಮಹಾನ್ ಸೈನಿಕರ ಚಿತ್ರ ಬಿಡಿಸುವಲ್ಲಿ ತಮ್ಮ ಏಕಾಗ್ರತೆ ತೋರಿಸಿದ್ದರು. ದೇಶ ಭಕ್ತಿ ಗೀತೆಯ ಸ್ಪರ್ಧೆಯಲ್ಲಿ ವಿಜೇತರಾದ ಟಿ ವಿಜಯ ದುರ್ಗಾ ಆಂಧ್ರಪ್ರದೇಶಕ್ಕೆ ಸೇರಿದವರು. ಅವರು ತೆಲುಗಿನಲ್ಲಿ ತಮ್ಮ ಎಂಟ್ರಿ ಕಳುಹಿಸಿ ಕೊಟ್ಟಿದ್ದರು. ಅವರು ತಮ್ಮ ಕ್ಷೇತ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ನರಸಿಂಹ ರೆಡ್ಡಿ ಅವರಿಂದ ಪ್ರೇರಿತರಾಗಿದ್ದರು. ವಿಜಯ ದುರ್ಗಾ ಅವರ ಎಂಟ್ರಿಯ ಈ ಭಾಗವನ್ನು ನೀವು ಕೂಡಾ ಕೇಳಿಸಿಕೊಳ್ಳಿ

 

(Telugu Sound Clip (27 seconds) HINDI Translation)

ರೇನಾಡು ಪ್ರಾಂತ್ಯದ ಸೂರ್ಯ

ಹೇ ವೀರ ನರಸಿಂಹ

ಭಾರತ ಸ್ವಾತಂತ್ರ್ಯ ಸಂಗ್ರಾಮ ಮೊಳಕೆಯೊಡೆಯಿತು, ಅಂಕುಶವಾದೆ ನೀ

ಬ್ರಿಟಿಷರ ನ್ಯಾಯರಹಿತ ನಿರಂಕುಶ ದಮನ ಕಾಂಡ ನೋಡಿ

ನಿನ್ನ ನೆತ್ತುರು ಕುದಿಯಿತು, ಬೆಂಕಿಯ ಕಾರಿತು

ರೇನಾಡು ಪ್ರಾಂತ್ಯದ ಸೂರ್ಯ

ಹೇ ವೀರ ನರಸಿಂಹ

(ರೇನಾಡೂ ಪ್ರಾಂತ್ ಕೇ ಸೂರಜ್,

ಹೇ ವೀರ ನರಸಿಂಹ!

ಭಾರತೀಯ ಸ್ವತಂತ್ರತಾ ಸಂಗ್ರಾಮ್ ಕೇ ಅಂಕುರ್ ಹೋ, ಅಂಕುಶ್ ಹೋ!

ಅಂಗ್ರೇಜೋ ಕೇ ನ್ಯಾಯ ರಹಿತ ನಿರಂಕುಶ ದಮನ ಕಾಂಡ್ ಕೋ ದೇಖ್

ಖೂನ್ ತೇರಾ ಸುಲಗಾ ಔರ್ ಆಗ್ ಉಗಲಾ!   

ರೇನಾಡೂ ಪ್ರಾಂತ್ ಕೇ ಸೂರಜ್

ಹೇ ವೀರ ನರಸಿಂಹ!)

 

ತೆಲುಗಿನ ನಂತರ, ಈಗ ನಾನು ನಿಮಗೆ ಮೈಥಿಲಿಯಲ್ಲಿ ಒಂದು ಕ್ಲಿಪ್ ಕೇಳಿಸುತ್ತೇನೆ. ಇದನ್ನು ದೀಪಕ್ ವತ್ಸ್ ಅವರು ಕಳುಹಿಸಿಕೊಟ್ಟಿದ್ದಾರೆ. ಅವರು ಕೂಡಾ ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

(Maithili Sound Clip (30 seconds) HINDI Translation)

ಭಾರತ ಪ್ರಪಂಚದ ಹೆಮ್ಮೆ ಸೋದರಾ

ನಮ್ಮ ದೇಶ ಶ್ರೇಷ್ಠವಾದುದು

ಮೂರು ಕಡೆ ಸಮುದ್ರದಿಂದ ಸುತ್ತುರಿದಿದೆ

ಉತ್ತರದಲ್ಲಿ ಕೈಲಾಸ ಪರ್ವತ ಬಲಿಷ್ಟವಾಗಿದೆ

ಗಂಗಾ, ಯಮುನಾ, ಕೃಷ್ಣಾ, ಕಾವೇರಿ

ಕೋಶಿ, ಕಮಲಾ ಬಲಾನ್ ಇದೆ

ನಮ್ಮ ದೇಶ ಶ್ರೇಷ್ಠವಾದುದು ಸೋದರಾ

ತ್ರಿವರ್ಣ ಧ್ವಜದಲ್ಲಿ ನಮ್ಮ ಜೀವವಿದೆ

(ಭಾರತ್ ದುನಿಯಾ ಕೀ ಶಾನ್ ಹೈ ಭಯ್ಯಾ,

ಅಪನಾ ದೇಶ್ ಮಹಾನ್ ಹೈ,

ತೀನ್ ದಿಶಾ ಸಮುನ್ದರ್ ಸೇ ಧಿರಾ,

ಉತ್ತರ್ ಮೇ ಕೈಲಾಶ್ ಬಲವಾನ್ ಹೈ,

ಗಂಗಾ, ಯಮುನಾ, ಕೃಷ್ಣಾ, ಕಾವೇರಿ,

ಕೋಶೀ, ಕಮಲಾ ಬಲಾನ್ ಹೈ,

ಅಪನಾ ದೇಶ್ ಮಹಾನ್ ಹೈ ಭಯ್ಯಾ,

ತಿರಂಗೇ ಮೇ ಬಸಾ ಪ್ರಾಣ್ ಹೈ  )

 

ಸ್ನೇಹಿತರೇ ನಿಮಗೆ ಇದು ಇಷ್ಟವಾಯಿತೆಂದು ನಾನು ನಂಬುತ್ತೇನೆ.  ಸ್ಪರ್ಧೆಗಾಗಿ ಬಂದಂತಹ ಇಂತಹ ಅರ್ಜಿಗಳ ಪಟ್ಟಿ ಬಹಳ ಉದ್ದವಾಗಿದೆ. ನೀವು, ಸಂಸ್ಕೃತಿ ಸಚಿವಾಲಯ ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಕುಟುಂಬದವರೊಡನೆ ನೋಡಿ ಮತ್ತು ಕೇಳಿಸಿಕೊಳ್ಳಿ – ನಿಮಗೆ ಬಹಳ ಪ್ರೇರಣೆ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಬನಾರಸ್ ವಿಷಯವಾಗಿರಲಿ, ಶಹನಾಯಿ ವಿಷಯವಾಗಿರಲಿ, ಉಸ್ತಾದ್ ಬಿಸ್ಮಿಲ್ಲಾ ಖಾನ್ ವಿಷಯವಾಗಿರಲಿ, ನನ್ನ ಗಮನ ಅತ್ತ ಹೋಗುವುದು ಸಹಜವೇ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಈ ಪುರಸ್ಕಾರವನ್ನು ಸಂಗೀತ ಮತ್ತು ಪ್ರದರ್ಶನ ಕಲೆಗಳಲ್ಲಿ ಹೊರಹೊಮ್ಮುತ್ತಿರುವ ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುತ್ತದೆ. ಇದು ಕಲೆ ಮತ್ತು ಸಂಗೀತ ಪ್ರಪಂಚದ ಜನಪ್ರಿಯತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಏಳಿಗೆಗೂ ತನ್ನ ಕೊಡುಗೆ ನೀಡುತ್ತಿದೆ. ಕಾಲ ಕ್ರಮೇಣ  ಜನಪ್ರಿಯತೆ ಕಡಿಮೆಯಾಗುತ್ತಿರುವ ಸಂಗೀತ ವಾದ್ಯಗಳಿಗೆ ಹೊಸ ಜೀವ ತುಂಬಿದ ಕಲಾವಿದರೂ ಇವರಲ್ಲಿ ಸೇರಿದ್ದಾರೆ. ಈಗ ನೀವೆಲ್ಲರೂ ಈ ಸ್ವರವನ್ನು ಗಮನವಿಟ್ಟು ಆಲಿಸಿರಿ...

(Sound Clip (21 seconds) Instrument- ‘सुरसिंगार’, Artist -जॉयदीप मुखर्जी)

ಇದು ಯಾವ ಸಂಗೀತ ವಾದ್ಯವೆಂದು ನಿಮಗೆ ತಿಳಿದಿದೆಯೇ? ನಿಮಗೆ ತಿಳಿಯದೇ ಇರುವ ಸಾಧ್ಯತೆಯೂ ಇದೆ! ಈ ಸಂಗೀತ ವಾದ್ಯದ ಹೆಸರು ಸುರಸಿಂಗಾರ್ ಎಂದಾಗಿದೆ ಮತ್ತು ಈ ಸ್ವರವನ್ನು ಸಂಯೋಜಿಸಿದವರು ಜೊಯಿದೀಪ್ ಮುಖರ್ಜಿಯವರು. ಜೊಯಿದೀಪ್ ಅವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರಕ್ಕೆ ಭಾಜನರಾದ ಯುವ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಈ ವಾದ್ಯದ ಸ್ವರವನ್ನು ಸುಮಾರು 50 ಮತ್ತು 60 ದಶಗಳಿಂದ ಕೇಳುವುದು ಅಸಾಧ್ಯವಾಗಿತ್ತು, ಆದರೆ ಜೊಯಿದೀಪ್ ಅವರು ಸುರ್ ಸಿಂಗಾರ್ ಅನ್ನು ಪುನಃ ಜನಪ್ರಿಯಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಸೋದರಿ ಉಪ್ಲಪೂ ನಾಗಮಣಿಯವರ ಪ್ರಯತ್ನ ಕೂಡಾ ಬಹಳ ಪ್ರೇರಣಾದಾಯಕವಾಗಿದೆ, ಇವರಿಗೆ ಮ್ಯಾಂಡೋಲಿನ್ ನಲ್ಲಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತಕ್ಕಾಗಿ ಈ ಪುರಸ್ಕಾರ ನೀಡಲಾಗಿದೆ. ಸಂಗ್ರಾಮ್ ಸಿಂಗ್ ಸುಹಾಸ್ ಭಂಡಾರೆ ಅವರಿಗೆ ವಾರ್ಕರಿ ಕೀರ್ತನ್ ಗಾಗಿ ಈ ಪುರಸ್ಕಾರ ಸಂದಿದೆ. ಈ ಪಟ್ಟಿಯಲ್ಲಿ ಕೇವಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರು ಮಾತ್ರ ಅಲ್ಲ – ವಿ ದುರ್ಗಾ ದೇವಿಯವರು, ನಾಟ್ಯದ ಒಂದು ಪ್ರಾತೀನ ಶೈಲಿಯಾದ ಕರಕಟ್ಟಂದಿ ಪುರಸ್ಕೃತರಾಗಿದ್ದಾರೆ. ಈ ಪುರಸ್ಕಾರಕ್ಕೆ ಭಾಜನರಾದ ರಾಜ್ ಕುಮಾರ್ ನಾಯಕ್ ಅವರು, ತೆಲಂಗಾಣದ 31 ಜಿಲ್ಲೆಗಳಲ್ಲಿ, 101 ದಿನಗಳ ಕಾಲ ನಡೆಯುವ ಪೆರಿನೀ ಒಡಿಸೀ ಆಯೋಜಿಸಿದ್ದರು. ಇಂದು ಜನರು ಅವರನ್ನು ಪೆರಿನಿ ರಾಜ್ ಕುಮಾರ್ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ. ಪೆರಿನೀ ನಾಟ್ಯ, ಭಗವಂತ ಶಿವನಿಗೆ ಅರ್ಪಿಸುವ ಒಂದು ನೃತ್ಯವಾಗಿದ್ದು, ಇದು ಕಾಕತೀಯ ರಾಜವಂಶಸ್ಥರ ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ರಾಜವಂಶದ ಬೇರುಗಳು ಇಂದಿನ ತೆಲಂಗಾಣದೊಂದಿಗೆ ಬೆಸೆದುಕೊಂಡಿವೆ. ಈ ಪುರಸ್ಕಾರಕ್ಕೆ ಭಾಜನರಾಗಿರುವ ಮತ್ತೊಬ್ಬ ವ್ಯಕ್ತಿಯೆಂದರೆ ಸಾಯಿಖೋಮ್ ಸುರ್ ಚಂದ್ರಾ ಸಿಂಗ್. ಮೈತೇಯಿ ಪುಂಗ್ ವಾದ್ಯ ತಯಾರಿಸುವುದರಲ್ಲಿ ಪಾಂಡಿತ್ಯ ಸಾಧಿಸಿ ಇವರು ಹೆಸರಾಗಿದ್ದಾರೆ. ಈ ವಾದ್ಯ ಮಣಿಪುರದೊಂದಿಗೆ ಬೆಸೆದುಕೊಂಡಿದೆ. ಪೂರಣ್ ಸಿಂಗ್ ಓರ್ವ ದಿವ್ಯಾಂಗ ಕಲಾವಿದರಾಗಿದ್ದು, ರಾಜೂಲಾ-ಮಲುಶಾಹೀ, ನ್ಯೂಯೋಲಿ, ಹುಡಕ ಬೋಲ್, ಜಾಗರ್ ನಂತಹ ವಿಭಿನ್ನ ಸಂಗೀತ ವಿಧಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಆಡಿಯೋ ರೆಕಾರ್ಡಿಂಗ್ ಗಳನ್ನು ಕೂಡಾ ಇವರು ಸಿದ್ಧಪಡಿಸಿದ್ದಾರೆ. ಉತ್ತರಾಖಂಡ್ ನ ಜನಪದ ಸಂಗೀತದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಬಹುಮಾನಗಳನ್ನು ಪೂರಣ್ ಸಿಂಗ್ ಗಳಿಸಿದ್ದಾರೆ. ಸಮಯದ ಮಿತಿಯ ಕಾರಣದಿಂದಾಗಿ ಪ್ರಶಸ್ತಿ ಪುರಸ್ಕೃತರೆಲ್ಲರ ಬಗ್ಗೆ ನನಗೆ ಮಾತನಾಡಲು ಸಾಧ್ಯವಾಗುವುದಿಲ್ಲ, ಆದರೆ, ನೀವೆಲ್ಲರೂ ಇವರೆಲ್ಲರ ಬಗ್ಗೆ ಖಂಡಿತಾ ಓದುತ್ತೀರೆಂಬ ನಂಬಿಕೆ ನನಗಿದೆ. ಎಲ್ಲಾ ಕಲಾವಿದರೂ, ಪ್ರದರ್ಶನ ಕಲೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಎಲ್ಲರಿಗೂ ತಳಮಟ್ಟದಿಂದಲೂ ಸ್ಪೂರ್ತಿ ನೀಡುತ್ತಲೇ ಇರುತ್ತಾರೆ ಎಂಬ ನಂಬಿಕೆ ನನಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕ್ಷಿಪ್ರಗತಿಯಿಂದ ಮುಂದೆ ಸಾಗುತ್ತಿರುವ ನಮ್ಮ ದೇಶದಲ್ಲಿ ಡಿಜಿಟಲ್ ಭಾರತದ ಸಾಮರ್ಥ್ಯ ಪ್ರತಿಯೊಂದು ಮೂಲೆಯಲ್ಲೂ ಕಂಡುಬರುತ್ತಿದೆ. Digital India ದ ಸಾಮರ್ಥ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ವಿಧ ವಿಧದ ಆಪ್ ಗಳ ಪಾತ್ರ ಬಹಳ ದೊಡ್ಡದಿರುತ್ತದೆ. ಅಂತಹದ್ದೇ ಒಂದು ಆಪ್ E-Sanjeevani . ಈ ಆಪ್ ಮೂಲಕ Tele-consultation ಅಂದರೆ ದೂರದಲ್ಲಿದ್ದುಕೊಂಡೇ, ವಿಡಿಯೋ ಕಾನ್ಫರೆನ್ಸ್ ಮುಖಾಂತರ ನೀವು ತಮ್ಮ ಅನಾರೋಗ್ಯ ಕುರಿತಂತೆ ವೈದ್ಯರೊಂದಿಗೆ ಸಮಾಲೋಚಿಸಬಹುದು. ಈ ಅನ್ವಯಿಕವನ್ನು ಬಳಸಿ ಇದುವರೆಗೂ ಟೆಲಿ ಕನ್ಸಲ್ಟೇಷನ್ ಮಾಡಿರುವವರ ಸಂಖ್ಯೆ 10 ಕೋಟಿ ದಾಟಿದೆ. ನೀವು ಊಹೆ ಮಾಡಬಹುದು, ವಿಡಿಯೋ ಕಾನ್ಫರೆನ್ಸ್ ಮುಖಾಂತರ 10 ಕೋಟಿ ಸಮಾಲೋಚನೆಗಳು! ರೋಗಿ ಮತ್ತು ವೈದ್ಯರ ನಡುವೆ ಅದ್ಭುತ ಸಂಬಂಧ – ಇದೊಂದು ಬಹುದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ಎಲ್ಲಾ ವೈದ್ಯರಿಗೆ ಮತ್ತು ಇದರ ಪ್ರಯೋಜನ ಪಡೆದುಕೊಂಡಿರುವ ಎಲ್ಲಾ ರೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತದ ಜನತೆ, ತಂತ್ರಜ್ಞಾನವನ್ನು ಯಾವರೀತಿ ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ, ಎನ್ನುವುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಕೊರೋನಾ ಸಮಯದಲ್ಲಿ ಇ-ಸಂಜೀವಿನಿ ಆಪ್ ಮೂಲಕ ಟೆಲಿ ಕನ್ಸಲ್ಟೇಷನ್ ಎನ್ನುವುದು ಜನರಿಗೆ ಯಾವರೀತಿ ಒಂದು ದೊಡ್ಡ ವರದಾನವಾಯಿತು ಎಂಬುದನ್ನು ನಾವು ನೋಡಿದ್ದೇವೆ. ಮನದ ಮಾತಿನಲ್ಲಿ ಓರ್ವ ವೈದ್ಯರೊಂದಿಗೆ ಮತ್ತು ಓರ್ವ ರೋಗಿಯೊಂದಿಗೆ ನಾವು ಮಾತನಾಡಬಾರದೇಕೆ, ಸಂವಾದ ನಡೆಸಬಾರದೇಕೇ ಮತ್ತು ಇದನ್ನು ನಿಮಗೆ ತಲುಪಿಸಬಾರದೇಕೆ ಎಂದು ನನಗೆ ಅನಿಸಿತು. ಟೆಲಿ ಕನ್ಸಲ್ಟೇಷನ್ ಜನರಿಗೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯುವ ಪ್ರಯತ್ನ ಮಾಡಿದೆವು. ನಮ್ಮೊಂದಿಗೆ ಸಿಕ್ಕಿಂನ ವೈದ್ಯ ಡಾಕ್ಟರ್ ಮದನ್ ಮಣಿ ಅವರಿದ್ದಾರೆ. ಡಾಕ್ಟರ್ ಮದನ್ ಮಣಿ ಸಿಕ್ಕಿಂ ನಿವಾಸಿಗಳೇನೋ ನಿಜ ಆದರೆ ಅವರು ಧನ್ ಬಾದ್ ನಲ್ಲಿ ತಮ್ಮ ಎಂಬಿಬಿಎಸ್ ಪದವಿ ಪಡೆದರು ಮತ್ತು ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಡಿ ಪದವಿ ಪಡೆದರು. ಇವರು ಗ್ರಾಮೀಣ ಭಾಗದ ನೂರಾರು ಜನರೊಂದಿಗೆ ಟೆಲಿ ಕನ್ಸಲ್ಟೇಷನ್ ನಡೆಸಿದ್ದಾರೆ.

ಪ್ರಧಾನ ಮಂತ್ರಿ:  ನಮಸ್ಕಾರ.. ಮದನ್ ಮಣಿ ಅವರೆ

ಡಾ. ಮದನ್ ಮಣಿ: ನಮಸ್ಕಾರ ಸರ್

ಪ್ರಧಾನ ಮಂತ್ರಿ:  ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ

ಡಾ. ಮದನ್ ಮಣಿ:  ಹೇಳಿ ಸರ್...

ಪ್ರಧಾನ ಮಂತ್ರಿ:  ನೀವು ಬನಾರಸ್ ನಲ್ಲಿ ಓದಿದ್ದೀರಲ್ಲವೇ

ಡಾ. ಮದನ್ ಮಣಿ:  ಹೌದು ಸರ್ ನಾನು ಬನಾರಸ್ ನಲ್ಲಿ ಓದಿದ್ದೇನೆ

ಪ್ರಧಾನ ಮಂತ್ರಿ:  ನಿಮ್ಮ ವೈದ್ಯಕೀಯ ಶಿಕ್ಷಣ ಅಲ್ಲಿಯೇ ಆಯಿತಲ್ಲವೇ

ಡಾ. ಮದನ್ ಮಣಿ:  ಹೌದು ಸರ್ ಹೌದು

ಪ್ರಧಾನ ಮಂತ್ರಿ:  ಹಾಗಿದ್ದರೆ ಅಲ್ಲಿ ಇದ್ದಾಗಿನ ಬನಾರಸ್ ಮತ್ತು ಈಗಿನ ಬದಲಾವಣೆಯಾಗಿರುವ ಬನಾರಸ್ ನೋಡಲು ಹೋಗಿರುವಿರೋ ಅಥವಾ ಹೋಗಿಲ್ಲವೋ|

ಡಾ. ಮದನ್ ಮಣಿ:  ಪ್ರಧಾನ ಮಂತ್ರಿಯವರೇ ನಾನು ಸಿಕ್ಕಿಂಗೆ ಹಿಂದಿರುಗಿ ಬಂದಾಗಿನಿಂದ ನನಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಅಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದು ನಾನು ಕೇಳಿದ್ದೇನೆ.

ಪ್ರಧಾನ ಮಂತ್ರಿ:  ನೀವು ಬನಾರಸ್ ನಿಂದ ಹೊರಟುಬಂದು ಎಷ್ಟು ವರ್ಷಗಳಾಗಿವೆ?

ಡಾ. ಮದನ್ ಮಣಿ:  ನಾನು ಬನಾರಸ್ ನಿಂದ 2006 ರಲ್ಲಿ ಹೊರಟು ಬಂದೆ ಸರ್

ಪ್ರಧಾನ ಮಂತ್ರಿ:  ಓ.. ಹಾಗಾದರೆ ನೀವು ಖಂಡಿತಾ ಹೋಗಲೇ ಬೇಕು

ಡಾ. ಮದನ್ ಮಣಿ:  ಹೌದು... ಹೌದು

ಪ್ರಧಾನ ಮಂತ್ರಿ:  ಸರಿ, ನೀವು ಸಿಕ್ಕಿಂನಲ್ಲಿ ದೂರ ಬೆಟ್ಟಗುಡ್ಡಗಳ ಪ್ರಾಂತ್ಯದಲ್ಲಿ ನೆಲೆಸಿ ಅಲ್ಲಿನ ಜನರಿಗೆ ಟೆಲಿ ಕನ್ಸಲ್ಟೇಷನ್ ನ ಬಹು ದೊಡ್ಡ ಸೇವೆ ನೀಡುತ್ತೀರೆಂದು ಕೇಳಿ ನಿಮಗೆ ನಾನು ಕರೆ ಮಾಡುತ್ತಿದ್ದೇನೆ.

. ಮದನ್ ಮಣಿ: ಸರಿ ಸರ್

ಪ್ರಧಾನ ಮಂತ್ರಿ:  ಮನದ ಮಾತಿನ ಶ್ರೋತೃಗಳಿಗೆ ನಾನು ನಿಮ್ಮ ಅನುಭವ ಕೇಳಿಸಬೇಕೆಂದು ಬಯಸುತ್ತೇನೆ.

ಡಾ. ಮದನ್ ಮಣಿ:  ಸರಿ ಸರ್

ಪ್ರಧಾನ ಮಂತ್ರಿ:  ಅನುಭವ ಹೇಗಿತ್ತೆಂದು ನನಗೆ ಹೇಳಿ?

ಡಾ. ಮದನ್ ಮಣಿ:  ಅನುಭ ಬಹಳ ಚೆನ್ನಾಗಿತ್ತು ಪ್ರಧಾನ ಮಂತ್ರಿಯವರೆ. ಏನೆಂದರೆ ಸಿಕ್ಕಿಂನಲ್ಲಿ ಅತ್ಯಂತ ಸಮೀಪವಿರುವ ಪಿಹೆಚ್ ಸಿ ಗೆ ಹೋಗಬೇಕೆಂದರೂ ಜನರು ವಾಹನದಲ್ಲಿ ಹೋಗಬೇಕು ಮತ್ತು ಕನಿಷ್ಠ ಒಂದು ಅಥವಾ ಎರಡುನೂರು ರೂಪಾಯಿ ತೆಗೆದುಕೊಂಡು ಹೋಗಬೇಕಿತ್ತು. ಅಲ್ಲದೇ ವೈದ್ಯರು ಸಿಗುತ್ತಾರೋ ಇಲ್ಲವೋ ಅದು ಕೂಡಾ ಸಮಸ್ಯೆಯೇ. ಹೀಗಾಗಿ ದೂರ ದೂರದ ಜನರು ಟೆಲಿ ಕನ್ಸಲ್ಟೇಷನ್ ಮುಖಾಂತರ ನಮ್ಮೊಂದಿಗೆ ಸಂಪರ್ಕ ಹೊಂದುತ್ತಿದ್ದರು. Health & Wellness Centre ನ CHOಗಳು ನಮ್ಮನ್ನು ಜನರೊಂದಿಗೆ ಕನೆಕ್ಟ್ ಮಾಡಿಸುತ್ತಾರೆ. ಮತ್ತು ನಮಗೆ ರೋಗಿಗಳ ವರದಿಗಳು, ಅವರ ಪ್ರಸಕ್ತ ಸ್ಥಿತಿ ಈ ಎಲ್ಲಾ ವಿಷಯಗಳ ಕುರಿತು ನಮಗೆ ತಿಳಿಯಪಡಿಸುತ್ತಾರೆ.

ಪ್ರಧಾನ ಮಂತ್ರಿ:  ಅಂದರೆ ದಾಖಲೆಗಳನ್ನು ವರ್ಗಾವಣೆ ಮಾಡುತ್ತಾರೆ.

ಡಾ. ಮದನ್ ಮಣಿ:  ಹೌದು ಸರ್. ದಾಖಲೆಗಳ ವರ್ಗಾವಣೆ ಮಾಡುತ್ತಾರೆ ಮತ್ತು ಒಂದುವೇಳೆ ವರ್ಗಾವಣೆ ಮಾಡಲಾಗದೇ ಇದ್ದಲ್ಲಿ, ಅದರಲ್ಲಿರುವುದನ್ನು ನಮಗೆ ಓದಿ ಹೇಳುತ್ತಾರೆ.

ಪ್ರಧಾನ ಮಂತ್ರಿ:  ಅಂದರೆ ಕ್ಷೇಮ ಕೇಂದ್ರದ ವೈದ್ಯರು ಹೇಳುತ್ತಾರೆ

ಡಾ. ಮದನ್ ಮಣಿ:  ಹೌದು, ಕ್ಷೇಮ ಕೇಂದ್ರದಲ್ಲಿರುವ ಸಿಹೆಚ್ ಓ, ಸಮುದಾಯ ಆರೋಗ್ಯ ಅಧಿಕಾರಿ.

ಪ್ರಧಾನ ಮಂತ್ರಿ:  ಮತ್ತು ರೋಗಿ ತಮ್ಮ ತೊಂದರೆಗಳನ್ನು ನಿಮಗೆ ನೇರವಾಗಿ ತಿಳಿಯಪಡಿಸುತ್ತಾರೆ.

ಡಾ. ಮದನ್ ಮಣಿ:  ಹೌದು. ರೋಗಿ ಕೂಡಾ ತಮ್ಮ ಸಮಸ್ಯೆಗಳನ್ನು ನಮಗೆ ಹೇಳುತ್ತಾರೆ. ಹಿಂದಿನ ರೆಕಾರ್ಡ್ ಗಳನ್ನು ನೋಡಿ ಇನ್ನೇನಾದರೂ ಹೊಸ ಸಮಸ್ಯೆ ಇದ್ದರೆ ಅದನ್ನು ನಾವು ತಿಳಿದುಕೊಳ್ಳಬೇಕು. ಅಂದರೆ ರೋಗಿಗೆ Chest Auscultate ಮಾಡಬೇಕಾದರೆ, ಅವರ ಕಾಲು ಊದಿಕೊಂಡಿದೆಯೇ ಅಥವಾ ಇಲ್ಲವೇ? ಒಂದುವೇಳೆ CHO ನೋಡಿಲ್ಲವೆಂದರೆ, ಕಾಲು ಊದಿದೆಯೇ ಅಥವಾ ಇಲ್ಲವೇ ಎಂದು ನೋಡಿ, ಕಣ್ಣುಗಳನ್ನು ನೋಡಿ, ರಕ್ತ ಹೀನತೆ ಇದೆಯೋ ಇಲ್ಲವೋ ನೋಡಿ, ಒಂದುವೇಳೆ ಅವರಿಗೆ ಕೆಮ್ಮು ಇದ್ದಲ್ಲಿ Chest ಅನ್ನು Auscultate ಮಾಡಿ ಮತ್ತು ಶಬ್ದ ಬರುತ್ತಿದೆಯೋ ಇಲ್ಲವೋ ಎಂದು ಕಂಡುಕೊಳ್ಳಿ ಎಂದು ಹೇಳುತ್ತೇವೆ.

ಪ್ರಧಾನ ಮಂತ್ರಿ:  ನೀವು ವಾಯ್ಸ್ ಕಾಲ್ ನಲ್ಲಿ ಮಾತನಾಡುತ್ತೀರೋ ಅಥವಾ ವಿಡಿಯೋ ಕಾಲ್ ಕೂಡಾ ಬಳಸುತ್ತೀರೋ ?

ಡಾ. ಮದನ್ ಮಣಿ:  ಸರ್, ವಿಡಿಯೋ ಕಾಲ್ ಬಳಸುತ್ತೇವೆ

ಪ್ರಧಾನ ಮಂತ್ರಿ:  ಅಂದರೆ ನೀವು ರೋಗಿಯನ್ನು ನೋಡುತ್ತೀರಿ ಕೂಡಾ ಅಲ್ಲವೇ

ಡಾ. ಮದನ್ ಮಣಿ: ಹೌದು ಸರ್. ರೋಗಿಯನ್ನು ನೋಡುತ್ತೇವೆ ಕೂಡಾ

ಪ್ರಧಾನ ಮಂತ್ರಿ:  ರೋಗಿಗೆ ಯಾವ ರೀತಿಯ ಅನಿಸಿಕೆ ಉಂಟಾಗುತ್ತದೆ ?

ಡಾ. ಮದನ್ ಮಣಿ:  ರೋಗಿಗೆ ಸಂತೋಷವಾಗುತ್ತದೆ ಏಕೆಂದರೆ ಅವರು ವೈದ್ಯರನ್ನು ಸಮೀಪದಿಂದ ನೋಡುತ್ತಾರೆ. ಔಷಧ ಕಡಿಮೆ ಮಾಡಬೇಕೋ, ಜಾಸ್ತಿ ಮಾಡಬೇಕೋ ಎಂದು ಅವರಿಗೆ ಗೊಂದಲವಿರುತ್ತದೆ. ಏಕೆಂದರೆ ಸಿಕ್ಕಿಂನಲ್ಲಿರುವ ಜನರಲ್ಲಿ ರೋಗಿಗಳು ಮಧು ಮೇಹ ಮತ್ತು ಹೈಪರ್ ಟೆನ್ಷನ್ ನಿಂದ ಬರುತ್ತಾರೆ ಮತ್ತು ಮಧು ಮೇಹ ಮತ್ತು ಹೈಪರ್ ಟೆನ್ಷನ್ ಔಷಧಗಳನ್ನು ಬದಲಾಯಿಸುವುದಕ್ಕಾಗಿ ಅವರು ವೈದ್ಯರನ್ನು ಕಾಣಲು ಬಹಳ ದೂರ ಹೋಗಬೇಕಾಗುತ್ತದೆ. ಆದರೆ, ಟೆಲಿ ಕನ್ಸಲ್ಟೇಷನ್ ಮುಖಾಂತರ ವೈದ್ಯರು ಅಲ್ಲೇ ಸಿಗುತ್ತಾರೆ ಮತ್ತು ಔಷಧ ಕೂಡಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಉಚಿತ ಔಷಧ ಉಪಕ್ರಮದ ಅಡಿಯಲ್ಲಿ ದೊರೆಯುತ್ತದೆ. ಹೀಗಾಗಿ ಅವರು ಅಲ್ಲಿಂದಲೇ ಔಷಧವನ್ನೂ ತೆಗೆದುಕೊಂಡು ಹೋಗುತ್ತಾರೆ.

ಪ್ರಧಾನಮಂತ್ರಿಯವರು: ಸರಿ ಮದನ್ ಮಣಿ ಅವರೆ, ರೋಗಿಗಳಿಗೆ ಒಂದು ಅಭ್ಯಾಸವಿರುತ್ತದೆ. ಎಲ್ಲಿವರೆಗೆ ವೈದ್ಯರು ಬರುವುದಿಲ್ಲ, ವೈದ್ಯರು ತಮ್ಮನ್ನು ನೋಡುವುದಿಲ್ಲ, ಅವರು ತೃಪ್ತಿ ಹೊಂದುವುದಿಲ್ಲ ಎಂಬುದು ನಿಮಗೆ ತಿಳಿದಿದೆ ಮತ್ತು ರೋಗಿಯನ್ನು ನೋಡಬೇಕು ಎಂದು ವೈದ್ಯರಿಗೆ ಕೂಡ ಅನಿಸುತ್ತದೆ. ಈಗ ಅಲ್ಲಿ ಎಲ್ಲಾ ಸಮಾಲೋಚನೆಗಳನ್ನು ಟೆಲಿಕಾಂ ಮೂಲಕವೇ ಮಾಡಲಾಗುತ್ತದೆ, ಆದ್ದರಿಂದ ವೈದ್ಯರಿಗೆ ಏನು ಅನಿಸುತ್ತದೆ, ರೋಗಿಗೆ ಏನು ಅನಿಸುತ್ತದೆ?

ಡಾ. ಮದನ್ ಮಣಿ: ಹೌದು, ರೋಗಿಯು ವೈದ್ಯರನ್ನು ನೋಡಬೇಕು ಎಂದು ಭಾವಿಸಿದಂತೆ, ನಾವು ಏನನ್ನು ನೋಡಬೇಕು ಎಂದು ಅನಿಸುತ್ತದೆಯೋ ಅದನ್ನು CHO ಗೆ ನೋಡಲು ಹೇಳಿ ವೀಡಿಯೊ ಮೂಲಕವೇ ನಾವು ನೋಡಲು ಹೇಳಿ  ಮಾತನಾಡುತ್ತೇವೆ. ಕೆಲವೊಮ್ಮೆ, ವೀಡಿಯೊದಲ್ಲಿಯೇ ರೋಗಿಯನ್ನು ಹತ್ತಿರ ಬರುವಂತೆ ಹೇಳಿ, ಅವನು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಮಗೆ ತೋರಿಸಲು ಹೇಳುತ್ತೇವೆ. ಯಾರಿಗಾದರೂ ಚರ್ಮದ ಸಮಸ್ಯೆ ಇದ್ದರೆ,  skin problem ಇದ್ದರೆ ಅವರು ವೀಡಿಯೊದ ಮೂಲಕವೇ ನಮಗೆ ತೋರಿಸುತ್ತಾರೆ. ಹೀಗೆ ಆ ರೋಗಿಯೂ ತೃಪ್ತರಾಗಿರುತ್ತಾರೆ.

ಪ್ರಧಾನಮಂತ್ರಿಯವರು: ಅವರಿಗೆ ಚಿಕಿತ್ಸೆ ನೀಡಿದ ನಂತರ, ಅವರು ತೃಪ್ತಿ ಪಡೆಯುತ್ತಾರೆಯೇ, ಅವರು ಏನು ಭಾವಿಸುತ್ತಾರೆ? ರೋಗಿಗಳು  ಚೇತರಿಸಿಕೊಳ್ಳುತ್ತಿದ್ದಾರೆಯೇ?

ಡಾ.ಮದನ್ ಮಣಿ: ಹೌದು, ನನಗೆ ತುಂಬಾ ತೃಪ್ತಿ ಎನಿಸುತ್ತದೆ. ರೋಗಿಗಳಿಗೂ ತೃಪ್ತಿ ಸಿಗುತ್ತದೆ ಸರ್. ನಾನು ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿದ್ದೇನೆ ಜೊತೆ ಜೊತೆಗೆ ಟೆಲಿ-ಕನ್ಸಲ್ಟೇಶನ್ ಮಾಡುವುದರಿಂದ, ಫೈಲ್ ಜೊತೆಗೆ ರೋಗಿಯನ್ನು ನೋಡುವುದು ನನಗೆ ತುಂಬಾ ಒಳ್ಳೆಯ, ಅನುಭವವನ್ನು ನೀಡುತ್ತಿದೆ.

ಪ್ರಧಾನ ಮಂತ್ರಿ: ಸರಾಸರಿ ಎಷ್ಟು ರೋಗಿಗಳನ್ನು ಟೆಲಿ ಕನ್ಸಲ್ಟೇಶನ್ ಮೂಲಕ ಪರೀಕ್ಷಿಸುತ್ತೀರಿ?

ಡಾ.ಮದನ್ ಮಣಿ: ಇಲ್ಲಿಯವರೆಗೆ ನಾನು 536 ರೋಗಿಗಳನ್ನು ನೋಡಿದ್ದೇನೆ.

ಪ್ರಧಾನಿಯವರು: ಓಹ್... ಅಂದರೆ ನೀವು ಅದನ್ನು ಸಾಕಷ್ಟು ಪರಿಣಿತಿ ಹೊಂದಿದ್ದೀರಿ.

ಡಾ.ಮದನ್ ಮಣಿ: ಹೌದು, ಒಳ್ಳೇ ಅನುಭವ

 

ಪ್ರಧಾನಿಯವರು: ಒಳ್ಳೆಯದು, ನಿಮಗೆ ಶುಭ ಹಾರೈಕೆಗಳು. ಈ ತಂತ್ರಜ್ಞಾನವನ್ನು ಬಳಸಿಕೊಂಡು, ನೀವು ಸಿಕ್ಕಿಂನ ದೂರದ ಕಾಡುಗಳಲ್ಲಿ, ಪರ್ವತಗಳಲ್ಲಿ ವಾಸಿಸುವ ಜನರಿಗೆ ಅಂತಹ ದೊಡ್ಡ ಸೇವೆಯನ್ನು ಮಾಡುತ್ತಿದ್ದೀರಿ. ಮತ್ತು ನಮ್ಮ ದೇಶದ ದೂರದ ಪ್ರದೇಶಗಳಲ್ಲೂ ಇಂತಹ ತಂತ್ರಜ್ಞಾನದ ಸದ್ಬಳಕೆಯಾಗುತ್ತಿರುವುದು ಸಂತಸದ ವಿಚಾರ. ನನ್ನ ಪರವಾಗಿ ನಿಮಗೆ ಅನಂತ ಅಭಿನಂದನೆಗಳು.

ಡಾ. ಮದನ್ ಮಣಿ: ಧನ್ಯವಾದಗಳು!

ಸ್ನೇಹಿತರೇ, ಇ-ಸಂಜೀವಿನಿ ಆ್ಯಪ್ ಅವರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದು ಡಾ.ಮದನ್ ಮಣಿ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಡಾ. ಮದನ್ ಅವರ ನಂತರ, ಈಗ ನಾವು ಮತ್ತೊಬ್ಬ ಮದನ್ ಜಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ಇವರು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ್ ಮೋಹನ್ ಲಾಲ್ ಜಿ. ಈಗ ಚಂದೌಲಿ ಕೂಡ ಬನಾರಸ್ ಗೆ ಹೊಂದಿಕೊಂಡಿರುವುದು ಕಾಕತಾಳೀಯ. ಇ- ಸಂಜೀವಿನಿ ಸಂಬಂಧಿಸಿದಂತೆ ರೋಗಿಯಾಗಿ ಅವರ ಅನುಭವ ಏನು ಎಂದು ಮದನ್ ಮೋಹನ್ ಜಿ ಅವರಿಂದ ತಿಳಿಯೋಣ?

ಪ್ರಧಾನಮಂತ್ರಿ: ಮದನ್ ಮೋಹನ್ ಅವರೆ ನಮಸ್ಕಾರ!

ಮದನ್ ಮೋಹನ್ ಜಿ: ನಮಸ್ಕಾರ, ನಮಸ್ಕಾರ ಸರ್.

ಪ್ರಧಾನಿಯವರು: ನಮಸ್ಕಾರ! ನೀವು ಮಧುಮೇಹ ರೋಗಿ ಎಂದು ನನಗೆ ಹೇಳಲಾಗಿದೆ.

ಮದನ್ ಮೋಹನ್ ಜಿ: ಹೌದು.

ಪ್ರಧಾನ ಮಂತ್ರಿ: ನೀವು ತಂತ್ರಜ್ಞಾನವನ್ನು ಬಳಸಿಕೊಂಡು ಟೆಲಿ ಸಮಾಲೋಚನೆಯ ಮೂಲಕ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದ  ಸಹಾಯವನ್ನು ಪಡೆಯುತ್ತಿದ್ದೀರಿ.

ಮದನ್ ಮೋಹನ್ ಜಿ: ಹೌದು ಸರ್.

ಪ್ರಧಾನ ಮಂತ್ರಿ: ಒಬ್ಬ ರೋಗಿಯಾಗಿ, ಪೀಡಿತನಾಗಿ, ನಾನು ನಿಮ್ಮ ಅನುಭವಗಳನ್ನು ಕೇಳಬಯಸುತ್ತೇನೆ,  ಈ ಮೂಲಕ ನಮ್ಮ ಗ್ರಾಮಗಳಲ್ಲಿ ವಾಸಿಸುವ ಜನರು ಇಂದಿನ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ದೇಶವಾಸಿಗಳಿಗೆ ತಿಳಿಸಲು ನಾನು ಬಯಸುತ್ತೇನೆ. ತಾವು ಅದನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ ಎಂದು ಹೇಳಿ?

 

ಮದನ್ ಮೋಹನ್ ಜೀ : ಸರ್, ಆಸ್ಪತ್ರೆಗಳು ದೂರದಲ್ಲಿವೆ, ಮಧುಮೇಹ ಕಾಯಿಲೆ ಬಂದಾಗ 5-6 ಕಿ.ಮೀ ದೂರ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ನೀವು ವ್ಯವಸ್ಥೆ ಮಾಡಿರುವುದರಿಂದ. ಈಗ ನಾವು ಹೋಗುತ್ತೇವೆ, ನಮ್ಮನ್ನು ಪರೀಕ್ಷಿಸಲಾಗುತ್ತದೆ, ನಮ್ಮನ್ನು ದೂರದ ವೈದ್ಯರೊಂದಿಗೆ ಮಾತನಾಡುವಂತೆ ಕೂಡ ಅನುಕೂಲ ಮಾಡುತ್ತಾರೆ ಮತ್ತು ನಮಗೆ ಔಷಧಿಗಳನ್ನೂ ನೀಡುತ್ತಾರೆ. ಇದರಿಂದ ನಮಗೆ ಹೆಚ್ಚಿನ ಪ್ರಯೋಜನವಾಗಿದೆ ಮತ್ತು ಇತರ ಜನರು ಸಹ ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರಧಾನಿಯವರು: ಹಾಗಾದರೆ ಪ್ರತಿ ಬಾರಿಯೂ ಅದೇ ವೈದ್ಯರು ನಿಮ್ಮನ್ನು ನೋಡುತ್ತಾರೋ ಅಥವಾ ವೈದ್ಯರು ಬದಲಾಗುತ್ತಿರುತ್ತಾರೆಯೇ?

ಮದನ್ ಮೋಹನ್ ಜಿ: ಅವರಿಗೆ ತಿಳಿಯದಿದ್ದರೆ ಬೇರೆ ವೈದ್ಯರಿಗೆ ತೋರಿಸುತ್ತಾರೆ. ಅವರು ಸ್ವತಃ ಬೇರೆ ವೈದ್ಯರೊಂದಿಗೆ ಮಾತನಾಡುತ್ತಾರೆ ಮತ್ತು ಆ ವೈದ್ಯರೊಂದಿಗೆ ನಮ್ಮನ್ನು  ಮಾತನಾಡುವಂತೆ ಮಾಡುತ್ತಾರೆ.

ಪ್ರಧಾನ ಮಂತ್ರಿ: ವೈದ್ಯರು ನಿಮಗೆ ನೀಡುವ ಮಾರ್ಗದರ್ಶನದಿಂದ ಪೂರ್ಣ ಪ್ರಯೋಜನವನ್ನು ಪಡೆಯುತ್ತೀರಾ.

 

ಮದನ್ ಮೋಹನ್ ಜಿ: ನಮಗೆ ಲಾಭವಾಗಿದೆ. ಇದರಿಂದ ನಮಗೆ ಬಹಳ ಲಾಭವಿದೆ. ಗ್ರಾಮದ ಜನರಿಗೂ ಇದರ ಪ್ರಯೋಜನವಿದೆ. ಅಲ್ಲಿದ್ದವರೆಲ್ಲ, ನಮಗೆ ಬಿಪಿ ಇದೆ, ಶುಗರ್ ಇದೆ, ಪರೀಕ್ಷೆ ಮಾಡಿ, ಔಷಧಿ ಕೊಡಿ ಎಂದು ಕೇಳುತ್ತಾರೆ. ಈ ಮೊದಲು ಅವರು 5-6 ಕಿಲೋಮೀಟರ್ ದೂರ ಹೋಗುತ್ತಿದ್ದರು, ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದರು , ರೋಗ ಪರೀಕ್ಷೆಗೆ ಸರತಿ ಸಾಲುಗಳು ಇರುತ್ತಿದ್ದವು. ಸಂಪೂರ್ಣ ದಿನ ನಷ್ಟವಾಗುತ್ತಿತ್ತು.

ಪ್ರಧಾನಿಯವರು: ಅಂದರೆ ಈಗ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

ಮದನ್ ಮೋಹನ್ ಜಿ: ಹಣ ಸಹ ಖರ್ಚು ಮಾಡಬೇಕಿತ್ತು ಆದರೆ ಇಲ್ಲಿ ಎಲ್ಲಾ ಸೇವೆಗಳು ಉಚಿತವಾಗಿ ಲಭಿಸುತ್ತಿವೆ.

ಪ್ರಧಾನಿಯವರು: ನಿಮ್ಮ ವೈದ್ಯರನ್ನು ನೋಡಿದಾಗ, ಒಂದು ವಿಶ್ವಾಸ ಮೂಡುತ್ತದೆ. ಸರಿ, ಡಾಕ್ಟರ್ ಇದ್ದಾರೆ, ಅವರು ನನ್ನ ನಾಡಿ, ಕಣ್ಣು, ನಾಲಿಗೆಯನ್ನೂ ಪರೀಕ್ಷಿಸಿದ್ದಾರೆ. ಅದೊಂದು ವಿಭಿನ್ನ ಭಾವನೆ ಮೂಡಿಸುತ್ತದೆ. ಈಗ ಅವರು ಟೆಲಿ ಕನ್ಸಲ್ಟೇಶನ್ ಮಾಡಿದರೆ ನಿಮಗೆ ಅದೇ ತೃಪ್ತಿ ಸಿಗುತ್ತದೆಯೇ?

ಮದನ್ ಮೋಹನ್ ಜಿ: ಹೌದು, ತೃಪ್ತಿ ಇದೆ. ಅವರು ನಮ್ಮ ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದಾರೆ, ಎದೆ ಬಡಿತ  ಪರೀಕ್ಷಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ನೀವು ಇಷ್ಟು ಒಳ್ಳೆಯ ವ್ಯವಸ್ಥೆ ಮಾಡಿದ್ದೀರಿ ಎಂದು ನನಗೆ ತುಂಬಾ ಸಂತೋಷವಾಗಿದೆ, ಹಿಂದೆ ನಾವು ಕಷ್ಟಪಟ್ಟು ಇಲ್ಲಿಗೆ ಹೋಗಬೇಕಾಗಿತ್ತು, ಕಾರಿಗೆ ಹಣ ತೆರಬೇಕಾಗುತ್ತಿತ್ತು, ಅಲ್ಲಿ ಸಾಲಾಗಿ ನಿಲ್ಲಬೇಕಿತ್ತು. ಆದರೆ ಈಗ ಮನೆಯಲ್ಲಿ ಕುಳಿತೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ.

ಪ್ರಧಾನಿಯವರು: ಮದನ್ ಮೋಹನ್ ಅವರೇ, ನನ್ನ ಪರವಾಗಿ ನಿಮಗೆ ಅನಂತ ಶುಭ ಹಾರೈಕೆಗಳು. ಈ ವಯಸ್ಸಿನಲ್ಲೂ ನೀವು ತಂತ್ರಜ್ಞಾನವನ್ನು ಕಲಿತಿದ್ದೀರಿ, ತಂತ್ರಜ್ಞಾನವನ್ನು ಬಳಸುತ್ತಿದ್ದೀರಿ. ಇತರರಿಗೂ ತಿಳಿಸಿ ಇದರಿಂದ ಜನರ ಸಮಯ ಉಳಿತಾಯವಾಗುತ್ತದೆ, ಹಣವೂ ಉಳಿತಾಯವಾಗುತ್ತದೆ ಮತ್ತು ಅವರು ಮಾರ್ಗದರ್ಶನ ಪಡೆದು  ಉತ್ತಮ ರೀತಿಯಲ್ಲಿ ಔಷಧಗಳನ್ನು ಬಳಸಬಹುದು.

ಮದನ್ ಮೋಹನ್ ಜಿ: ಹೌದು ಸರ್, ಮತ್ತಿನ್ನೇನು.

ಪ್ರಧಾನ ಮಂತ್ರಿ: ಮದನ್ ಮೋಹನ್ ಅವರೇ ನಿಮಗೆ ನನ್ನ ಅನಂತ ಶುಭಾಶಯಗಳು.

ಮದನ್ ಮೋಹನ್ ಜಿ: ಸರ್, ನೀವು ಬನಾರಸ್ ಅನ್ನು ಕಾಶಿ ವಿಶ್ವನಾಥ ಸ್ಟೇಷನ್ ಮಾಡಿದ್ದೀರಿ, ಅದನ್ನು ಅಭಿವೃದ್ಧಿಪಡಿಸಿದ್ದೀರಿ. ನಿಮಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು.

ಪ್ರಧಾನಿಯವರು: ನಿಮಗೆ ಧನ್ಯವಾದ ತಿಳಿಸಬಯಸುತ್ತೇನೆ. ನಾವೇನು ​​ಮಾಡಿದ್ದೇವೆ, ಬನಾರಸ್ ಜನರು ಬನಾರಸ್ ಅಭಿವೃದ್ಧಿ ಮಾಡಿದ್ದಾರೆ | ನಾನು ಕೇವಲ ಗಂಗಾಮಾತೆಯ ಸೇವೆಗಾಗಿ ಇದ್ದೇನೆ. ಗಂಗಾಮಾತೆ ಕರೆದಿದ್ದಷ್ಟೇ ನನಗೆ ಗೊತ್ತು. ಒಳ್ಳೆಯದು, ನಿಮಗೆ ಅನಂತ ಶುಭಾಷಯಗಳು. ನಮಸ್ಕಾರ 

ಮದನ್ ಮೋಹನ್ ಜಿ: ನಮಸ್ಕಾರ ಸರ್!

ಪ್ರಧಾನಿಯವರು: ನಮಸ್ಕಾರ!

ಸ್ನೇಹಿತರೇ, ಇ-ಸಂಜೀವನಿ ದೇಶದ ಸಾಮಾನ್ಯ ಜನರಿಗೆ, ಮಧ್ಯಮ ವರ್ಗದವರಿಗೆ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀವ ರಕ್ಷಕ ಅಪ್ಲಿಕೇಶನ್ ಆಗುತ್ತಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯ ಶಕ್ತಿ ಮತ್ತು ಇಂದು ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅದರ ಪರಿಣಾಮವನ್ನು ಕಾಣುತ್ತಿದ್ದೇವೆ. ಭಾರತದ UPI ಯ ಶಕ್ತಿಯ ಬಗ್ಗೆಯೂ ನಿಮಗೆ ತಿಳಿದಿದೆ. ಪ್ರಪಂಚದ ಅದೆಷ್ಟೋ ದೇಶಗಳು ಇದರತ್ತ ಆಕರ್ಷಿತವಾಗಿವೆ. ಕೆಲವು ದಿನಗಳ ಹಿಂದೆ, ಭಾರತ ಮತ್ತು ಸಿಂಗಾಪುರದ ಮಧ್ಯೆ ಯುಪಿಐ-ಪೇ ನೌ ಲಿಂಕ್ ಅನ್ನು ಪ್ರಾರಂಭಿಸಲಾಯಿತು. ಈಗ, ಸಿಂಗಾಪುರ ಮತ್ತು ಭಾರತದ ಜನರು ತಮ್ಮ ತಮ್ಮ ದೇಶಗಳಲ್ಲಿ ಮಾಡುವ ರೀತಿಯಲ್ಲಿಯೇ ತಮ್ಮ ಮೊಬೈಲ್ ಫೋನ್‌ಗಳಿಂದ ಪರಸ್ಪರ ಹಣವನ್ನು ವರ್ಗಾಯಿಸುತ್ತಿದ್ದಾರೆ. ಜನರು ಅದರ ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಅದು ಭಾರತದ ಇ-ಸಂಜೀವಿನಿ ಆ್ಯಪ್ ಆಗಿರಲಿ ಅಥವಾ UPI, ಜೀವನವನ್ನು ಸುಲಭಗೊಳಿಸಲು ಇವು ತುಂಬಾ ಸಹಾಯಕರ ಎಂದು ಸಾಬೀತಾಗಿವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಒಂದು ದೇಶದಲ್ಲಿ ನಶಿಸಿ ಹೋಗುತ್ತಿರುವ ಒಂದು ಪ್ರಜಾತಿಯ ಪಕ್ಷಿ, ಪ್ರಾಣಿಯನ್ನು ಉಳಿಸಿದಾಗ, ಅದು ಪ್ರಪಂಚದಾದ್ಯಂತ ಚರ್ಚೆಯಾಗುತ್ತದೆ. ನಮ್ಮ ದೇಶದಲ್ಲಿ ಕಣ್ಮರೆಯಾಗಿದ್ದ, ಜನಮಾನಸದಿಂದ ದೂರವಾಗಿದ್ದ ಇಂತಹ ಹಲವಾರು ಶ್ರೇಷ್ಠ ಸಂಪ್ರದಾಯಗಳಿವೆ, ಆದರೆ ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಹಾಗಾಗಿ ಈ ಕುರಿತು ಚರ್ಚಿಸಲು ಮನದ ಮಾತಿಗಿಂತ ಉತ್ತಮ ವೇದಿಕೆ ಯಾವುದಿದೆ?

ಈಗ ನಾನು ನಿಮಗೆ ಹೇಳಲಿರುವುದನ್ನು ತಿಳಿದು, ನಿಜವಾಗಿಯೂ ಸಂತೋಷಪಡುತ್ತೀರಿ, ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೀರಿ. ಅಮೆರಿಕಾದಲ್ಲಿ ನೆಲೆಸಿರುವ ಶ್ರೀ ಕಂಚನ್ ಬ್ಯಾನರ್ಜಿಯವರು ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಇಂತಹ ಒಂದು ಅಭಿಯಾನದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಸ್ನೇಹಿತರೇ, ಈ ತಿಂಗಳು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬಾನ್ಸ್ ಬೇರಿಯಾದಲ್ಲಿ 'ತ್ರಿವೇಣಿ ಕುಂಭ ಮಹೋತ್ಸವ' ಆಯೋಜಿಸಲಾಗಿದೆ. ಇದರಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಆದರೆ ಇದು ಏಕೆ ವಿಶೇಷವಾಗಿದೆ ಎಂದು ನಿಮಗೆ ತಿಳಿದಿದೆಯೇ? ವಿಶೇಷವೇನೆಂದರೆ 700 ವರ್ಷಗಳ ನಂತರ ಈ ಪದ್ಧತಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದಾದರೂ, ದುರದೃಷ್ಟವಶಾತ್ ಬಂಗಾಳದ ತ್ರಿವೇಣಿಯಲ್ಲಿ ನಡೆಯುತ್ತಿದ್ದ ಈ ಉತ್ಸವವನ್ನು 700 ವರ್ಷಗಳ ಹಿಂದೆ ನಿಲ್ಲಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇದನ್ನು ಆರಂಭಿಸಬೇಕಿತ್ತು, ಆದರೆ ಅದೂ ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಹಿಂದೆ, ಸ್ಥಳೀಯ ಜನರು ಮತ್ತು 'ತ್ರಿವೇಣಿ ಕುಂಭ ಪರಿಚಲನಾ ಸಮಿತಿ' ಮೂಲಕ ಈ ಉತ್ಸವವು ಮತ್ತೆ ಪ್ರಾರಂಭವಾಗಿದೆ. ಅದರ ಸಂಘಟನೆಗೆ ಸಂಬಂಧಿಸಿದ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ. ನೀವು ಕೇವಲ ಸಂಪ್ರದಾಯವನ್ನು ಜೀವಂತವಾಗಿಸಿಕೊಳ್ಳುತ್ತಿಲ್ಲ, ನೀವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಹ ರಕ್ಷಿಸುತ್ತಿದ್ದೀರಿ.

ಸ್ನೇಹಿತರೇ, ಪಶ್ಚಿಮ ಬಂಗಾಳದ ತ್ರಿವೇಣಿ ಶತಮಾನಗಳಿಂದಲೂ ಪವಿತ್ರ ಸ್ಥಳವೆಂದು ಹೆಸರುವಾಸಿಯಾಗಿದೆ. ಇದನ್ನು ವಿವಿಧ ಮಂಗಳಕಾವ್ಯ, ವೈಷ್ಣವ ಸಾಹಿತ್ಯ, ಶಾಕ್ತ ಸಾಹಿತ್ಯ ಮತ್ತು ಇತರ ಬಂಗಾಳಿ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶವು ಒಂದು ಕಾಲದಲ್ಲಿ ಸಂಸ್ಕೃತ, ಶಿಕ್ಷಣ ಮತ್ತು ಭಾರತೀಯ ಸಂಸ್ಕೃತಿಯ ಕೇಂದ್ರವಾಗಿತ್ತು ಎಂದು ವಿವಿಧ ಐತಿಹಾಸಿಕ ದಾಖಲೆಗಳಿಂದ ತಿಳಿಯುತ್ತದೆ. ಅನೇಕ ಸಂತರು ಇದನ್ನು ಮಾಘ ಸಂಕ್ರಾಂತಿಯಲ್ಲಿ ಕುಂಭ ಸ್ನಾನಕ್ಕೆ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ತ್ರಿವೇಣಿಯಲ್ಲಿ, ನೀವು ಅನೇಕ ಗಂಗಾ ಘಾಟ್‌ಗಳು, ಶಿವ ದೇವಾಲಯಗಳು ಮತ್ತು ಟೆರಾಕೋಟಾ ವಾಸ್ತುಕಲೆಯಿಂದ ಅಲಂಕರಿಸಲ್ಪಟ್ಟ ಪ್ರಾಚೀನ ಕಟ್ಟಡಗಳನ್ನು ಕಾಣಬಹುದು. ತ್ರಿವೇಣಿಯ ಪರಂಪರೆಯನ್ನು ಮರುಸ್ಥಾಪಿಸಲು ಮತ್ತು ಕುಂಭ ಸಂಪ್ರದಾಯದ ವೈಭವವನ್ನು ಪುನರುಜ್ಜೀವನಗೊಳಿಸಲು ಕಳೆದ ವರ್ಷ ಇಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಏಳು ಶತಮಾನಗಳ ನಂತರ, ಮೂರು ದಿನಗಳ ಕುಂಭ ಮಹಾಸ್ನಾನ ಮತ್ತು ಜಾತ್ರೆಯು ಈ ಪ್ರದೇಶಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಮೂರು ದಿನಗಳ ಕಾಲ ಪ್ರತಿದಿನ ನಡೆಯುತ್ತಿದ್ದ ಗಂಗಾ ಆರತಿ, ರುದ್ರಾಭಿಷೇಕ, ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ಬಾರಿಯ ಉತ್ಸವದಲ್ಲಿ ವಿವಿಧ ಆಶ್ರಮಗಳು, ಮಠಗಳು ಮತ್ತು ಅಖಾಡಗಳು ಸಹ ಸೇರಿವೆ. ಬೆಂಗಾಲಿ ಸಂಪ್ರದಾಯಗಳಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳಾದ ಕೀರ್ತನೆ, ಬೌಲ್, ಗೋಡಿಯೋ ನೃತ್ಯ, ಶ್ರೀ-ಖೋಲ್, ಪೋಟೆರ್ ಗಾಯನ, ಛೌ-ನೃತ್ಯ , ಸಂಜೆ ಕಾರ್ಯಕ್ರಮಗಳ ಆಕರ್ಷಣೆಯ ಕೇಂದ್ರವಾಗಿದ್ದವು. ನಮ್ಮ ಯುವಜನರನ್ನು ದೇಶದ ಸುವರ್ಣ ಗತಕಾಲದೊಂದಿಗೆ ಬೆರೆಯುವಂತೆ ಮಾಡಲು ಇದು ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿದೆ. ಭಾರತದಲ್ಲಿ ಇಂತಹ ಇನ್ನೂ ಅನೇಕ ಆಚರಣೆಗಳಿವೆ, ಅವುಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಅವುಗಳ ಬಗೆಗಿನ ಚರ್ಚೆ ಈ ದಿಶೆಯಲ್ಲಿ ಖಂಡಿತವಾಗಿಯೂ ಜನರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.

    ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಅರ್ಥವೇ ಬದಲಾಗಿದೆ. ದೇಶದಲ್ಲಿ ಎಲ್ಲಿಯೇ ಆಗಲಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಏನಾದರೂ ವಿಷಯಗಳಿದ್ದರೆ, ಜನರು ಖಂಡಿತವಾಗಿಯೂ ಅದರ ಬಗ್ಗೆ ನನಗೆ ತಿಳಿಸುತ್ತಾರೆ. ಅದರಂತೆ ಹರಿಯಾಣದ ಯುವಕರು ಸ್ವಚ್ಛತಾ ಅಭಿಯಾನದತ್ತ ನನ್ನ ಗಮನ ಸೆಳೆದಿದ್ದಾರೆ. ಹರಿಯಾಣದಲ್ಲಿ ದುಲ್ಹೇರಿ ಎಂಬ ಒಂದು ಹಳ್ಳಿಯಿದೆ -. ಸ್ವಚ್ಛತೆಯ ವಿಷಯದಲ್ಲಿ ಭಿವಾನಿ ನಗರವನ್ನು ಮಾದರಿಯಾಗಿಸಬೇಕು ಎಂದು ಇಲ್ಲಿನ ಯುವಕರು ನಿರ್ಧರಿಸಿದ್ದಾರೆ. ಅವರೆಲ್ಲ ಸೇರಿ ಯುವ ಸ್ವಚ್ಛತಾ ಮತ್ತು ಜನ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಸಮಿತಿಯ ಯುವಕರು ಮುಂಜಾನೆ 4 ಗಂಟೆಗೆ ಭಿವಾನಿ ತಲುಪುತ್ತಾರೆ. ಅವರೆಲ್ಲ ಸೇರಿ ನಗರದ ವಿವಿಧೆಡೆ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಈ ಜನರು ಇದುವರೆಗೆ ನಗರದ ವಿವಿಧ ಪ್ರದೇಶಗಳಿಂದ ಟನ್‌ಗಟ್ಟಲೆ ಕಸವನ್ನು ತೆರವುಗೊಳಿಸಿದ್ದಾರೆ.

ಸ್ನೇಹಿತರೇ, waste to wealth (ಕಸದಿಂದ ರಸ) ಎಂಬುದು ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಅಂಶವಾಗಿದೆ. ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಸಹೋದರಿ ಕಮಲಾ ಮೊಹರಾನಾ ಸ್ವಸಹಾಯ ಸಂಘವನ್ನು ನಡೆಸುತ್ತಿದ್ದಾರೆ. ಈ ಗುಂಪಿನ ಮಹಿಳೆಯರು ಹಾಲಿನ ಚೀಲಗಳು ಮತ್ತು ಇತರ ಪ್ಲಾಸ್ಟಿಕ್ ಪ್ಯಾಕಿಂಗ್‌ಗಳಿಂದ ಬುಟ್ಟಿಗಳು ಮತ್ತು ಮೊಬೈಲ್ ಸ್ಟ್ಯಾಂಡ್‌ಗಳಂತಹ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಸ್ವಚ್ಛತೆಯ ಜತೆಗೆ ಅವರಿಗೆ ಉತ್ತಮ ಆದಾಯದ ಮೂಲವೂ ದೊರೆಯುತ್ತಿದೆ. ನಾವು ಸಂಕಲ್ಪಗೈದರೆ ಸ್ವಚ್ಛ ಭಾರತದಲ್ಲಿ ದೊಡ್ಡ ಕೊಡುಗೆ ನೀಡಬಹುದು. ಕನಿಷ್ಠ ನಾವೆಲ್ಲರೂ ಪ್ಲಾಸ್ಟಿಕ್ ಚೀಲಗಳನ್ನು ಬಟ್ಟೆಯ ಚೀಲಗಳೊಂದಿಗೆ ಬದಲಾಯಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಈ ನಿರ್ಣಯವು ನಿಮಗೆ ಎಷ್ಟು ತೃಪ್ತಿಯನ್ನು ನೀಡುತ್ತದೆ ಮತ್ತು ಇತರ ಜನರಿಗೆ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ ಎಂದು ನೀವೇ ಕಾಣುತ್ತೀರಿ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನೀವು ಮತ್ತು ನಾನು ಒಟ್ಟಿಗೆ ಸೇರಿ ಮತ್ತೊಮ್ಮೆ ಅನೇಕ ಸ್ಪೂರ್ತಿದಾಯಕ ವಿಷಯಗಳ ಕುರಿತು ಮಾತನಾಡಿದ್ದೇವೆ. ಮನೆಯವರ ಜೊತೆ ಕೂತು ಅದನ್ನು ಕೇಳಿದ್ದೇವೆ ಈಗ ದಿನವಿಡೀ ಅದನ್ನೇ ಗುನುಗುಣಿಸುತ್ತೇವೆ. ದೇಶದ ಶ್ರಮಿಕತನದ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ನಮಗೆ ಶಕ್ತಿ ಬರುತ್ತದೆ. ಈ ಶಕ್ತಿಯ ಪ್ರವಾಹದೊಂದಿಗೆ   ಚಲಿಸುತ್ತಾ, ಇಂದು ನಾವು 'ಮನದ ಮಾತಿನ'  98 ನೇ ಸಂಚಿಕೆಯನ್ನು ತಲುಪಿದ್ದೇವೆ. ಹೋಳಿ ಹಬ್ಬ ಇಂದಿನಿಂದ ಕೆಲವೇ ದಿನಗಳಲ್ಲಿ ಬರಲಿದೆ. ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ವೋಕಲ್ ಫಾರ್ ಲೋಕಲ್ ಎಂಬ ಸಂಕಲ್ಪದೊಂದಿಗೆ ನಮ್ಮ ಹಬ್ಬಗಳನ್ನು ಆಚರಿಸಬೇಕು. ನಿಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಅಲ್ಲಿಯವರೆಗೆ ನನ್ನನ್ನು ಬೀಳ್ಕೊಡಿ. ಮುಂದಿನ ಬಾರಿ ನಾವು ಹೊಸ ವಿಷಯಗಳೊಂದಿಗೆ ಮತ್ತೆ ಭೇಟಿಯಾಗೋಣ. ಅನಂತ ಧನ್ಯವಾದಗಳು ನಮಸ್ಕಾರ

 

*****


(Release ID: 1902613) Visitor Counter : 401