ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ʻಐಐಎಂ ರಾಯ್‌ಪುರʼದಲ್ಲಿ ನಡೆದ ʻಯೂತ್ 20ʼ ಸಮಾಲೋಚನೆ ಕಾರ್ಯಕ್ರಮದ ಮೊದಲ ದಿನವು ಯುವಜನತೆಯ ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು


ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು 'ಯುವ ಸಂವಾದ'ದಲ್ಲಿ ತೊಡಗಿಸಿದರು

ಭಾರತವು ಈಗ 107 ʻಯೂನಿಕಾರ್ನ್‌ʼಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

ʻಯೂತ್‌ 20ʼ ಸಮಾಲೋಚನೆಗಳ ಸಮಯದಲ್ಲಿನ ಚರ್ಚೆಗಳು ಶಾಂತಿ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ ಮತ್ತು "ವಸುದೈವ ಕುಟುಂಬಕಂ" ಗುರಿಯನ್ನು ಸಾಧಿಸಲು ನಮಗೆ ಅನುವು ಮಾಡಿಕೊಡುತ್ತವೆ: ಶ್ರೀಮತಿ ರೇಣುಕಾ ಸಿಂಗ್ ಸರುತಾ

Posted On: 26 FEB 2023 1:01PM by PIB Bengaluru

ರಾಯ್‌ಪುರದ ಐಐಎಂ, ತನ್ನ ಕ್ಯಾಂಪಸ್‌ಲ್ಲಿ ಭಾರಿ ಉತ್ಸಾಹ ಮತ್ತು ಉಲ್ಲಾಸಭರಿತವಾಗಿ ಎರಡು ದಿನಗಳ ʻಯೂತ್‌ 20ʼ ಸಮಾಲೋಚನಾ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಯಶಸ್ವಿಯಾಯಿತು. ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಮಹತ್ವದ 'ಯುವ ಸಂವಾದ'ದೊಂದಿಗೆ ನಿನ್ನೆ, 2023ರ ಫೆಬ್ರವರಿ 25ರಂದು ಮೊದಲ ದಿನದ ಚರ್ಚೆಗಳು ಆರಂಭಗೊಂಡವು. ಇವುಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಉತ್ಸಾಹದಿಂದ ಪಾಲ್ಗೊಂಡರು. ಇದಕ್ಕೂ ಮೊದಲು, ನಿನ್ನೆ ಬೆಳಿಗ್ಗೆ, ಐಐಎಂ ರಾಯ್‌ಪುರದ ನಿರ್ದೇಶಕ ಡಾ. ರಾಮ್ ಕುಮಾರ್ ಕಾಕನಿ ಹಾಗೂ ಇತರ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಭಾರತ ಸರಕಾರದ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವೆ ಶ್ರೀಮತಿ ರೇಣುಕಾ ಸಿಂಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀ ಅನುರಾಗ್ ಠಾಕೂರ್ ಅವರು ಅಂತರಗಳನ್ನು ನಿವಾರಿಸುವಲ್ಲಿ, ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳನ್ನು ಒದಗಿಸುವಲ್ಲಿ ಮತ್ತು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಂತ್ರಜ್ಞಾನದ ಮಹತ್ವವನ್ನು ತಮ್ಮ ಭಾಷಣದಲ್ಲಿ ಸಾರಿದರು. ಭಾರತವು ಈಗ 107 ʻಯೂನಿಕಾರ್ನ್‌ʼಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ ಎಂದು ಸಚಿವರು ಹೆಮ್ಮೆ ವ್ಯಕ್ತಪಡಿಸಿದರು. ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವ ಮತ್ತು ಸಾಟಿಯಿಲ್ಲದ ಹುರುಪು, ಚೈತನ್ಯ ಮತ್ತು ಹುರುಪನ್ನು ತೋರುತ್ತಿರುವ ಛತ್ತೀಸ್‌ಗಢದ ಯುವಕರನ್ನು ಅವರು ಶ್ಲಾಘಿಸಿದರು. "ನಿಮ್ಮ ಜಾಲವೇ ನಿಮ್ಮ ನೈಜ ಮೌಲ್ಯವಾಗಿದೆ" ಎಂದು ಅವರು ಹೇಳಿದರು. ಯುವಜನರು ತಮ್ಮ ಜಾಲವನ್ನು ವಿಸ್ತರಿಸಲು ಹಾಗೂ ತಮ್ಮ ಜೀವನ ಮತ್ತು ಕೆಲಸದ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೆಚ್ಚು ಜನರೊಂದಿಗೆ ಸಂಪರ್ಕಗಳನ್ನು ಏರ್ಪಡಿಸಿಕೊಳ್ಳಬೇಕು ಎಂದು ಶ್ರೀ ಅನುರಾಗ್ ಠಾಕೂರ್ ಅವರು ಪ್ರೇರೇಪಿಸಿದರು. ಅಲ್ಲದೆ, ಯುವಜನತೆಯು ವ್ಯಾಪಕವಾಗಿ ತಮ್ಮನ್ನು ತಾವು ತೆರೆದುಕೊಳ್ಳಲು ಮತ್ತು ಅನುಭವಗಳನ್ನು ಪಡೆಯಲು ಸಾಧ್ಯವಾದಷ್ಟು ಹೆಚ್ಚು ಪ್ರಯಾಣ ಮಾಡಬೇಕು ಎಂದು ಅವರು ಸಲಹೆ ನೀಡಿದರು. "ನೀವು ವರ್ತಮಾನ, ನೀವು ಪ್ರಪಂಚದ ಭರವಸೆ" ಎಂದು ಹೇಳುವ ಮೂಲಕ ಅವರು ಮಾತು ಮುಗಿಸಿದರು.

ಸಚಿವರೊಂದಿಗಿನ ಸಂವಾದದ ಸಮಯದಲ್ಲಿ, ಯುವಕ-ಯುವತಿಯರು ರಾಜಕೀಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆ, ಜಿಡಿಪಿ ಹೆಚ್ಚಳ, ಸ್ವಯಂ ಸಬಲೀಕರಣ, ತಮ್ಮ ತಾಯ್ನಾಡಿಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕೊಡುಗೆ ಇತ್ಯಾದಿಗಳ ವಿಷಯಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದರು. ಈ ಚರ್ಚಾ ಅಧಿವೇಶನದಿಂದ ಕಲಿತ ಮುಖ್ಯ ಅಂಶವೆಂದರೆ: ನಿರಂತರ ಕಲಿಕೆ ಮತ್ತು ಹೊಸ ಕೌಶಲ್ಯಗಳ ಕಲಿಕೆಯು ಯುವಜನರನ್ನು ತಮ್ಮ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಹಾಗೂ ಶಾಂತಿಯನ್ನು ಉತ್ತೇಜಿಸಲು ಸಶಕ್ತಗೊಳಿಸುತ್ತದೆ. ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಐಐಎಂ ರಾಯ್‌ಪುರದ ಲಾಂಛನದಲ್ಲಿ ಸಾಂಪ್ರದಾಯಿಕ ಕಲೆಯ ಬಳಕೆಯನ್ನು ಕಂಡು ಪ್ರಭಾವಿತರಾದರು.

ಶ್ರೀಮತಿ ರೇಣುಕಾ ಸಿಂಗ್ ಸರುತಾ ಅವರು ಮಾತನಾಡಿ, ಭಾರತಕ್ಕೆ  ಸ್ವಾತಂತ್ರ್ಯವನ್ನು ಖಾತರಿಪಡಿಸಿದ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ʻಯೂತ್‌ 20ʼ ಸಮಾಲೋಚನಾ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರು ಸಹ ಇದೇ ಆಶಯವನ್ನು ಹೊಂದಿದ್ದು,  ಜಾಗತಿಕ ವೇದಿಕೆಯಲ್ಲಿ ಭಾರತೀಯ ಯುವಕರ ಮಹತ್ವವನ್ನು ಅವರು ಗುರುತಿಸಿದರು ಎಂದು ಶ್ರೀಮತಿ ರೇಣುಕಾ ಸಿಂಗ್‌ ಸ್ಮರಿಸಿದರು. ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ಬಹುಪಕ್ಷೀಯ ಸಂವಾದಗಳು ಮತ್ತು ವೇದಿಕೆಗಳಲ್ಲಿ ತೊಡಗುವುದು ಅವಶ್ಯಕ ಎಂದು ಅವರು ಪ್ರತಿಪಾದಿಸಿದರು. ಭಾರತವು ತಾನು ಎದುರಿಸಿದ ಸಂಕಷ್ಟಗಳ ನಡುವೆಯೂ, ಸ್ವಾತಂತ್ರ್ಯ ಪಡೆದಾಗಿನಿಂದ ವಿಶ್ವ ಶಾಂತಿಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಂಘರ್ಷವನ್ನು ಹೇಗೆ ನಿಗ್ರಹಿಸಲಾಗಿದೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ಉಲ್ಲೇಖಿಸಿದರು. ಅಲ್ಲಿನ ಯುವಕರು ಈಗ ಅಭಿವೃದ್ಧಿ ಹೊಂದುತ್ತಿದ್ದಾರೆ. ಈ ʻಯೂತ್‌ 20ʼ ಸಮಾಲೋಚನೆಯ ಸಮಯದಲ್ಲಿನ ಚರ್ಚೆಗಳು ಶಾಂತಿ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಮತ್ತು "ವಸುದೈವ ಕುಟುಂಬಕಂ" ಗುರಿಯನ್ನು ಸಾಧಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಐಐಎಂ ರಾಯ್‌ಪುರದ ನಿರ್ದೇಶಕ ಡಾ.ರಾಮ್ ಕುಮಾರ್ ಕಾಕನಿ ಅವರು ಸ್ವಾಗತ ಭಾಷಣ ಮಾಡಿದರು. ʻವೈ 20ʼ ಸಮಾಲೋಚನಾ ಕಾರ್ಯಕ್ರಮವು ಜಾಗತಿಕ ಪರಿವರ್ತನೆಯ ಪ್ರಬಲ ಚಾಲಕ ಶಕ್ತಿಯಾಗಿದೆ ಎಂದು ಅವರು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಭಯೋತ್ಪಾದನೆ, ಸಮಾಜವಾದಿ ಗುಂಪುಗಳು ಮತ್ತು ಸಾಮಾಜಿಕ ಊಳಿಗಮಾನ್ಯ ವ್ಯವಸ್ಥೆ ಒಡ್ಡಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಾದ ಮಹತ್ವವನ್ನು ಅವರು ಒತ್ತಿ ಹೇಳಿದರು. ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದು ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವುದು – ಇವೆರಡರ ನಡುವೆ ಸಮತೋಲನವನ್ನು ಸಾಧಿಸುವಲ್ಲಿ ಸರಕಾರಗಳು ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಶಾಂತಿ ಮತ್ತು ಸೌಹಾರ್ದತೆ ಮೇಲುಗೈ ಸಾಧಿಸುವಂತೆ ಖಾತರಿಪಡಿಸಿಕೊಳ್ಳಲು ಅಂತರ್-ಸಮುದಾಯ ಸಂವಾದವು ನಿರ್ಣಾಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದುದ್ದಕ್ಕೂ ಸಕ್ರಿಯ ಚರ್ಚೆಗಳು ಮತ್ತು ಚಿಂತನ-ಮಂಥನ ಕೂಟಗಳಲ್ಲಿ ತೊಡಗಿಸಿಕೊಳ್ಳಲು ಅವರು ಯುವಜನತೆಯನ್ನು ಪ್ರೋತ್ಸಾಹಿಸಿದರು. ಇದರಿಂದ ಅವರು ವಿಶ್ವದ ಅತ್ಯಂತ ಒತ್ತಡದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ರಚಿಸಬಹುದು ಎಂದು ಡಾ. ರಾಮ್‌ ಕುಮಾರ್‌ ಕಾಕನಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ಅತಿಥಿಗಳಿಗೆ ಐಐಎಂ, ರಾಯ್‌ಪುರದ ಕ್ಯಾಂಪಸ್‌ ಪ್ರವಾಸವನ್ನು ವ್ಯವಸ್ಥೆ ಮಾಡಲಾಗಿತ್ತು. 2023ರ ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼದ ಆಚರಣೆಗೆ ಭಾರತದ ಕೊಡುಗೆಯಾಗಿ ಅವರಿಗೆ ಸಿರಿಧಾನ್ಯ ಆಧಾರಿತ ಉಪಾಹಾರ ನೀಡಿ ಉಪಚರಿಸಲಾಯಿತು.

"ಸಂಘರ್ಷ ಪರಿಹಾರದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು" ಎಂಬ ವಿಷಯದ ಬಗ್ಗೆ ಪ್ಯಾನಲ್ ಚರ್ಚೆಯನ್ನು ನಡೆಸಲಾಯಿತು. ಬೋಡೋಲ್ಯಾಂಡ್ ಶಾಂತಿ ಸಮಾಲೋಚಕ, ಅಸ್ಸಾಂನ ಮಾಜಿ ಮುಖ್ಯ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಸಿಂಗ್ ಅವರು, “ಯುವ ಪೀಳಿಗೆಯು ಶಾಂತಿ ಸ್ಥಾಪನೆಯ ಹಾದಿ ಅನುಸರಿಸಬೇಕು. ಶಾಂತಿಯನ್ನು ಎತ್ತಿಹಿಡಿಯಬೇಕು ಮತ್ತು ಸಂರಕ್ಷಿಸಬೇಕು,” ಎಂದರು.  ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ಸರಕಾರದ ಮೇಲಿನ ನಂಬಿಕೆ ಕ್ರಮೇಣ ಕ್ಷೀಣಿಸುತ್ತಿರುವುದನ್ನು ಗಮನಿಸಬಹುದು ಎಂದು ಬಲರಾಂಪುರದ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಮೋಹಿತ್ ಗರ್ಗ್ ಹೇಳಿದರು. ಈ ಪ್ರದೇಶಗಳಿಗೆ ಸೇರಿದ ಯುವ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸುವುದು, ಅವರೊಂದಿಗೆ ಸಮಾಲೋಚನೆ ನಡೆಸುವುದು ಹಾಗೂ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವಂತೆ ಉತ್ತೇಜಿಲು ವಿವಿಧ ಕಾರ್ಯಕ್ರಮಗಳನ್ನು ಯೋಜಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಬಹುದು ಎಂದರು. “ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳು ಯುವಕರ ಆಕಾಂಕ್ಷೆಗಳನ್ನು ಹತ್ತಿಕ್ಕುತ್ತವೆ,” ಎಂದು ಶ್ರೀನಗರದ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ಐಜಾಜ್ ಅಸಾದ್ ಒತ್ತಿ ಹೇಳಿದರು. ಜರ್ಮನಿಯ ಅಂತರರಾಷ್ಟ್ರೀಯ ಸಂಘರ್ಷ ವಲಯಗಳ ಹೆಸರಾಂತ ಪತ್ರಕರ್ತ ಶ್ರೀ ರೀನ್ಹಾರ್ಡ್ ಬೌಮ್‌ಗಾರ್ಟನ್ ಅವರು ಸುಡಾಡ್‌ನಲ್ಲಿನ ಸಂಘರ್ಷವನ್ನು ಪ್ರಸ್ತಾಪಿಸಿದರು. ಪ್ರೀತಿಯು ಶಾಶ್ವತ ಶಾಂತಿಗೆ ಅಡಿಪಾಯವಾಗುತ್ತದೆ ಎಂದು ಸಲಹೆ ನೀಡಿದರು. ನೆಹರು ಯುವ ಕೇಂದ್ರದ ಯೂತ್ ಐಕಾನ್ ಸುಶ್ರೀ ಪ್ರಿಯಾಂಕಾ ಬಿಸ್ಸಾ ಅವರು ಮಾತನಾಡಿ, ಯುದ್ಧಗಳ ಚರ್ಚೆಯು ಆಹಾರ, ನೀರು ಮತ್ತು ಸಂಪನ್ಮೂಲಗಳು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಮುನ್ನೆಲೆಗೆ ತರುತ್ತದೆ ಎಂದರು.

ಎರಡನೇ ಪ್ಯಾನಲ್ ಚರ್ಚೆಯನ್ನು ʻಶಾಂತಿ ಸ್ಥಾಪನೆ ಮತ್ತು ಶಾಂತಿಪಾಲನೆ ಕುರಿತ ಅನುಭವ ಹಂಚಿಕೆʼ ಎಂಬ ಅಂಶದ ಮೇಲೆ ನಡೆಸಲಾಯಿತು. ಬಲೋಡಾ ಬಜಾರ್‌ ಜಿಲ್ಲಾಧಿಕಾರಿ, ಶ್ರೀ ರಜತ್ ಬನ್ಸಾಲ್(ಐಎಎಸ್) ಅವರು ಈ ಚರ್ಚೆಯನ್ನು ನಿರ್ವಹಿಸಿದರು. ಬ್ರಿಗೇಡಿಯರ್(ನಿವೃತ್ತ) ಬಸಂತ್ ಕೆ ಪೊನ್ವಾರ್, ಎವಿಎಸ್ಎಂ, ವಿಎಸ್ಎಂ (ಭಯೋತ್ಪಾದನೆ ನಿಗ್ರಹ ಮತ್ತು ಜಂಗಲ್ ವಾರ್ಫೇರ್ ಕಾಲೇಜಿನ ಮಾಜಿ ನಿರ್ದೇಶಕ), ಶ್ರೀ ರತನ್ ಲಾಲ್ ಡಾಂಗಿ (ಸಿಜಿ ರಾಜ್ಯ ಪೊಲೀಸ್ ಅಕಾಡೆಮಿ ನಿರ್ದೇಶಕ), ಶ್ರೀ ರಾಬ್ ಯಾರ್ಕ್ (ಅಮೆರಿಕದ ʻಪೆಸಿಫಿಕ್ ಫೋರಂʼನ ಪ್ರಾದೇಶಿಕ ವ್ಯವಹಾರಗಳ ನಿರ್ದೇಶಕ) ಮತ್ತು ಡಾ.ಅದಿತಿ ನಾರಾಯಣಿ (ಟ್ರ್ಯಾಕ್ ಚೇರ್ ವೈ 20) ಈ ಅಧಿವೇಶನದ ಪ್ಯಾನಲ್‌ ಸದಸ್ಯರಾಗಿದ್ದರು. “ಆಯುಧಗಳ ಬಳಕೆಯ ಮೂಲಕ ಸಮಸ್ಯೆಗಳನ್ನು ಪರಿಹರಿಹಾರವು ಪರಿಣಾಮಕಾರಿಯಲ್ಲ. ಲಭ್ಯವಿರುವ ಆಯುಧಗಳಿಗಿಂತಲೂ ಆಲೋಚನಾ ವಿಧಾನವು ಹೆಚ್ಚು ಮುಖ್ಯವಾದುದು” ಎಂಬುದು ಈ ಅಧಿವೇಶನದಿಂದ ತಿಳಿದುಬಂದ ಪ್ರಮುಖ ಅಂಶವಾಗಿದೆ.

ರಾಯ್‌ಪುರ ಜಿಲ್ಲಾಧಿಕಾರಿ, ಡಾ.ಸರ್ವೇಶ್ವರ್ ನರೇಂದ್ರ ಭುರೆ(ಐಎಎಸ್) ಅವರ ಮೇಲ್ವಿಚಾರಣೆಯಲ್ಲಿ ಮೂರನೇ ಪ್ಯಾನಲ್ ಚರ್ಚೆ ನಡೆಯಿತು. ಸಮುದಾಯಗಳ ನಡುವೆ ಒಮ್ಮತವನ್ನು ನಿರ್ಮಿಸುವತ್ತ ಇದರ ಚರ್ಚಾ ವಿಷಯ ಕೇಂದ್ರೀಕೃತವಾಗಿತ್ತು. ಚರ್ಚಾ ಪ್ಯಾನಲ್‌ನಲ್ಲಿ ಛತ್ತೀಸ್ಗಢದ ಮುಂಗೇಲಿಯ ಯುವ ನಾಯಕ ಶ್ರೀ ನಿತೇಶ್ ಕುಮಾರ್ ಸಾಹು; ಜೀನ್ ಮೌಲಿನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಫಿಲಿಪ್ ಐಬೆ ಅವೊನೊ; ಮತ್ತು ಐಐಎಂ ರಾಯ್‌ಪುರದ 2ನೇ ವರ್ಷದ ಪಿಜಿಪಿ ವಿದ್ಯಾರ್ಥಿನಿ ಸುಶ್ರೀ ಶ್ವೇತಾ ಕರಂಬೆಲ್ಕರ್ ಇದ್ದರು. ಈ ಅಧಿವೇಶನದಲ್ಲಿ ಪ್ರಮುಖ ಭಾಷಣಕಾರರಲ್ಲಿ ಒಬ್ಬರಾದ ಶ್ರೀ ಬಿ ಮರ್ಕಮ್ ಅವರು ಹಿಂದೆ ನಕ್ಸಲೈಟ್ ಆಗಿದ್ದವರು. ತದನಂತರ ಅವರು ಶರಣಾಗತರಾಗಿ ಸಮುದಾಯಗಳಲ್ಲಿ ಶಾಂತಿ ಮತ್ತು ಪರಿವರ್ತನೆಯನ್ನು ತಂದರು. ವಿಶ್ವಸಂಸ್ಥೆ ಹಾಗೂ ಗಾಂಧಿ ಮತ್ತು ಬುದ್ಧನಂತಹ ಭಾರತದ ನಾಯಕರು ಶಾಂತಿಯನ್ನು ಪ್ರತಿಪಾದಿಸುವಲ್ಲಿ ನೀಡಿದ ಮಹತ್ವವನ್ನು ಈ ಅಧಿವೇಶನವು ಎತ್ತಿ ತೋರಿಸುತ್ತದೆ. ಭಾರತದಲ್ಲಿರುವ ಅತ್ಯಧಿಕ ಯುವಜನರ ಸಂಖ್ಯೆಯೇ ದೇಶಕ್ಕಿರುವ ಪ್ರಮುಖ ಜನಸಂಖ್ಯಾ ಲಾಭವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶವಾಗಿದೆ. ಆದಾಗ್ಯೂ, ಸಮುದಾಯಗಳನ್ನು ನಿರ್ಮಿಸುವ ಮತ್ತು ಶಾಂತಿಯನ್ನು ಉತ್ತೇಜಿಸುವ ವಿಷಯಕ್ಕೆ ಬಂದಾಗ, ಶಾಂತಿ ಸ್ಥಾಪಕರು ಸಂಘರ್ಷಗಳನ್ನು ಪರಿಹರಿಸುವ ಬದಲು ಅವುಗಳನ್ನು ನಿಗ್ರಹಿಸುವತ್ತ ಗಮನ ಹರಿಸುತ್ತಾರೆ. ಹಾಗಾಗಿ ಇದರಲ್ಲಿ ನಾಗರಿಕರು ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎಂಬ ಅಂಶವನ್ನು ಈ ಅಧಿವೇಶನ ಪ್ರಮುಖವಾಗಿ ಮುಂದಿಟ್ಟಿತು. ಐಐಎಂ ರಾಯ್‌ಪುರದ ಮೊದಲ ವರ್ಷದ ಪಿಜಿಪಿ ವಿದ್ಯಾರ್ಥಿಗಳು ನಿರ್ವಹಿಸಿದ ಮತ್ತೊಂದು ಅಧಿವೇಶನವು ಸಾಮರಸ್ಯದ ಬಗ್ಗೆ ಬಹು ಆಯಾಮಗಳ ಮೇಲೆ ಗಮನ ಕೇಂದ್ರೀಕರಿಸಿತು. ಭಾಷಣಕಾರ ಡಾ.ಪ್ರೇಮ್ ಸಿಂಗ್ ಬೋಗ್ಜಿ ಅವರು (ಐಐಎಂ ರಾಯ್‌ಪುರದ ಗೌರವಾನ್ವಿತ ಸಂದರ್ಶಕ ಪ್ರಾಧ್ಯಾಪಕರು), “ಹಿಂದಿನ ಕಾರ್ಯಗಳು ಆದರ್ಶಪ್ರಾಯವಾಗಿಲ್ಲ ಅಥವಾ ಪರಿಣಾಮಕಾರಿಯಲ್ಲ ಎಂದು ಗುರುತಿಸುವ ಕೆಲಸವನ್ನು ಸಮನ್ವಯದ ವೇಳೆ ಮಾಡಬೇಕು. ಆದರೆ ಇದಕ್ಕೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗಳನ್ನು ತರುವುದು ಮತ್ತು ಮುಂದೆ ಸಾಗಲು ಹಂಚಿಕೆಯ ದೃಷ್ಟಿಕೋನವನ್ನು ಸ್ಥಾಪಿಸುವ ಅಗತ್ಯವಿದೆ,” ಎಂದು ಪ್ರತಿಪಾದಿಸಿದರು.

ಭಾರತ ಸರಕಾರದ ಗೌರವಾನ್ವಿತ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗಿನ 'ಯುವ ಸಂವಾದ'ವು ಒಟ್ಟಾರೆ ಕಾರ್ಯಕ್ರಮದ ಅತ್ಯಂತ ಮಹತ್ವದ ಭಾಗವಾಗಿದ್ದು, ವಿದ್ಯಾರ್ಥಿಗಳು ಸಾಕಷ್ಟು ಉತ್ಸಾಹದೊಂದಿಗೆ ಇದರಲ್ಲಿ ಪಾಲ್ಗೊಂಡರು. ಐಐಎಂ ರಾಯ್‌ಪುರದ ಮಾರ್ಕೆಟಿಂಗ್ ಪ್ರಾಧ್ಯಾಪಕ ಪ್ರೊ.ಸಂಜೀವ್ ಪ್ರಶರ್ ಇದನ್ನು ನಿರ್ವಹಿಸಿದರು. ಪ್ರಗತಿ ವಿಚಾರದಲ್ಲಿ ಛತ್ತೀಸ್‌ಗಢ ರಾಜ್ಯವನ್ನು ಶ್ಲಾಘಿಸುವ ಮೂಲಕ ಸಂವಾದಕ್ಕೆ ಚಾಲನೆ ನೀಡಿದ ಸಚಿವರು, ತಾವು ಉತ್ಸಾಹಿ ಮತ್ತು ಅಗಾಧ ಚಿಂತನೆಯುಳ್ಳ ವ್ಯಕ್ತಿಗಳ ನಡುವೆ ಇರುವುದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದರು. ಐಐಎಂ ರಾಯ್‌ಪುರದ ಲಾಂಛನದಲ್ಲಿ ಸಾಂಪ್ರದಾಯಿಕ ಕಲೆಯ ಬಳಕೆ ಬಗ್ಗೆ ಸಚಿವರು ಪ್ರಭಾವಿತರಾದರು. ಛತ್ತೀಸ್‌ಗಢದ ಜಲಪಾತಗಳು, ದೇವಾಲಯಗಳು ಮತ್ತು 44% ಅರಣ್ಯ ಪ್ರದೇಶದಿಂದಾಗಿ ತವರಿನಲ್ಲಿರುವ ಭಾವನೆ ಮೂಡುತ್ತಿದೆ ಎಂದರು.

ಛತ್ತೀಸ್‌ಗಢ ರಾಜ್ಯವು ಅರಣ್ಯ, ಖನಿಜ ಮತ್ತು ಲೋಹ ಸಂಪತ್ತಿನಿಂದ ಸಮೃದ್ಧವಾಗಿದೆ. ಜೊತೆಗೆ ಪ್ರಸಿದ್ಧ ಕೋಸಾ ರೇಷ್ಮೆಯನ್ನು ಸಹ ಉತ್ಪಾದಿಸುತ್ತದೆ ಎಂದು ಸಚಿವರು ಹೇಳಿದರು. ಅಂತರಗಳನ್ನು ನಿವಾರಿಸುವಲ್ಲಿ, ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶಗಳನ್ನು ಒದಗಿಸುವಲ್ಲಿ ಹಾಗೂ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಂತ್ರಜ್ಞಾನದ ಮಹತ್ವವನ್ನು ಸಚಿವರು ಒತ್ತಿ ಹೇಳಿದರು. ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವ ಹಾಗೂ ಸಾಟಿಯಿಲ್ಲದ ಹುರುಪು, ಚೈತನ್ಯ ಹೊಂದಿರುವ ಛತ್ತೀಸ್‌ಗಢದ ಯುವಕರನ್ನು ಅವರು ಶ್ಲಾಘಿಸಿದರು. ಭಾರತವು 107 ʻಯೂನಿಕಾರ್ನ್ʼಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ರಾಜಕೀಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆ, ಜಿಡಿಪಿ ಹೆಚ್ಚಳ, ಸ್ವಯಂ ಸಬಲೀಕರಣ, ತಮ್ಮ ತಾಯ್ನಾಡಿಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕೊಡುಗೆ ಇತ್ಯಾದಿಗಳ ಬಗ್ಗೆ ಸಭಿಕರು ಅನೇಕ ಪ್ರಶ್ನೆಗಳನ್ನು ಎತ್ತಿದರು. ಈ ಅಧಿವೇಶನದಿಂದ ಕಲಿತ ಮುಖ್ಯ ಪಾಠವೆಂದರೆ, ನಿರಂತರ ಕಲಿಕೆ ಮತ್ತು ಹೊಸ ಕೌಶಲ್ಯಗಳ ಕಲಿಕೆಯು ಯುವಜನರನ್ನು ತಮ್ಮ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಮತ್ತು ಶಾಂತಿಯನ್ನು ಉತ್ತೇಜಿಸಲು ಸಶಕ್ತಗೊಳಿಸುತ್ತದೆ ಎಂದರು. "ನಿಮ್ಮ ಜಾಲವೇ ನಿಮ್ಮ ನೈಜ ಮೌಲ್ಯವಾಗಿದೆ" ಎಂದು ಸಚಿವರು ಉಲ್ಲೇಖಿಸಿದರು. ಯುವಜನರನ್ನು ತಮ್ಮ ಜಾಲ ವಿಸ್ತರಿಸುವಂತೆ ಮತ್ತು ಜನರೊಂದಿಗೆ ಹೆಚ್ಚಿನ ಸಂಪರ್ಕಗಳನ್ನು ಹೊಂದುವಂತೆ ಸಚಿವರು ಪ್ರೇರೇಪಿಸಿದರು. ಇದರಿಂದ ಯುವಕರ ಭವಿಷ್ಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು. ಅಲ್ಲದೆ, ಯುವಕರು ವ್ಯಾಪಕವಾಗಿ ತಮ್ಮನ್ನು ತಾವು ತೆರೆದುಕೊಳ್ಳಲು ಮತ್ತು ಅನುಭವಗಳನ್ನು ಪಡೆಯಲು ಸಾಧ್ಯವಾದಷ್ಟು ಪ್ರಯಾಣ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು. "ನೀವು ವರ್ತಮಾನ, ನೀವು ಪ್ರಪಂಚದ ಭರವಸೆ" ಎಂದು ಹೇಳುವ ಮೂಲಕ ಅವರು ಮಾತು ಮುಗಿಸಿದರು.

ಒಟ್ಟಾರೆಯಾಗಿ, ಐಐಎಂ ರಾಯ್‌ಪುರ ಆಯೋಜಿಸಿದ್ದ ʻವೈ 20ʼ ಸಮಾಲೋಚನಾ ಕಾರ್ಯಕ್ರಮವು ಅದ್ಭುತ ಯಶಸ್ಸನ್ನು ಕಂಡಿತು. ಶಾಂತಿಯುತ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಯುವ ನಾಯಕರು, ತಜ್ಞರು ಹಾಗೂ ನೀತಿ ನಿರೂಪಕರನ್ನು ಈ ಕಾರ್ಯಕ್ರಮ ಒಟ್ಟುಗೂಡಿಸಿತು. ಸಮಿತಿಯ ಚರ್ಚೆಗಳು, ಮುಖ್ಯ ಭಾಷಣಗಳು ಮತ್ತು ಯುವ ಸಂವಾದ ಅಧಿವೇಶನಗಳು ಸಮುದಾಯ ನಿರ್ಮಾಣ, ಒಮ್ಮತ ಮೂಡಿಸುವಿಕೆ ಮತ್ತು ಸಾಮರಸ್ಯದ ವಿವಿಧ ಆಯಾಮಗಳನ್ನು ಅನ್ವೇಷಿಸಿದವು. ಸಂಕೀರ್ಣ ಸಾಮಾಜಿಕ ಸವಾಲುಗಳನ್ನು ಎದುರಿಸಲು ಸಹಕಾರಿ ಮತ್ತು ಅಂತರ್ಗತ ವಿಧಾನಗಳ ಅಗತ್ಯವನ್ನು ಒತ್ತಿಹೇಳಿದವು. ನಾಯಕತ್ವವನ್ನು ಬೆಳೆಸುವ, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಹಾಗೂ ಭವಿಷ್ಯದಲ್ಲಿ ಈ ವಿಚಾರದಲ್ಲಿ ವೇಗವನ್ನು ಕಾಯ್ದುಕೊಳ್ಳುವ ಐಐಎಂ ರಾಯ್‌ಪುರದ ಬದ್ಧತೆಯನ್ನು ಈ ಕಾರ್ಯಕ್ರಮದ ಯಶಸ್ಸು ಒತ್ತಿಹೇಳುತ್ತದೆ.

*****

 



(Release ID: 1902583) Visitor Counter : 120