ಪ್ರಧಾನ ಮಂತ್ರಿಯವರ ಕಛೇರಿ

​​​​​​​ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ

Posted On: 24 FEB 2023 9:41AM by PIB Bengaluru

ಗೌರವಾನ್ವಿತರೇ,

ನಾನು ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ನಿಮ್ಮ ಸಭೆಯು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಸಚಿವರ ಮಟ್ಟದ ಮೊದಲ ಸಂವಾದವಾಗಿದೆ. ಫಲಪ್ರದ ಸಭೆಗಾಗಿ ನಿಮಗೆ ನನ್ನ ಶುಭಾಶಯಗಳು. ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನಗೆ ಅರಿವಿದೆ. ಜಗತ್ತು ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನೀವು ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದೀರಿ. ಶತಮಾನ ಕಂಡರಿಯದ ಕೋವಿಡ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಗೆ ಹೊಡೆತವನ್ನು ನೀಡಿದೆ. ಅನೇಕ ದೇಶಗಳು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ಅದರ ನಂತರದ ಪರಿಣಾಮಗಳನ್ನು ಇನ್ನೂ ನಿಭಾಯಿಸುತ್ತಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ನಾವು ನೋಡುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿವೆ. ಬೆಲೆ ಏರಿಕೆಯಿಂದ ಹಲವು ಸಮಾಜಗಳು ಸಂಕಷ್ಟಕ್ಕೆ ಸಿಲುಕಿವೆ. ಆಹಾರ ಮತ್ತು ಇಂಧನ ಸುರಕ್ಷತೆಯು ಪ್ರಪಂಚದಾದ್ಯಂತ ಪ್ರಮುಖ ಕಾಳಜಿಯಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಸಮರ್ಥನೀಯವಲ್ಲದ ಸಾಲ ಮಟ್ಟಗಳಿಂದ ಬೆದರಿಕೆಗೆ ಒಳಗಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ. ಅವುಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ತಡಮಾಡಿವೆ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿದೆ. ಜಾಗತಿಕ ಆರ್ಥಿಕತೆಗೆ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರುವುದು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳ ಪಾಲಕರಾದ ನಿಮಗೆ ಸೇರಿದ್ದು. ಇದು ಅಷ್ಟು ಸುಲಭದ ಕೆಲಸವಲ್ಲ.

ಆದಾಗ್ಯೂ, ನೀವು ಭಾರತೀಯ ಆರ್ಥಿಕತೆಯ ಚೈತನ್ಯದಿಂದ ಸ್ಫೂರ್ತಿ ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಭಾರತೀಯ ಗ್ರಾಹಕರು ಮತ್ತು ಉತ್ಪಾದಕರು ಭವಿಷ್ಯದ ಬಗ್ಗೆ ಆಶಾವಾದ ಮತ್ತು ವಿಶ್ವಾಸ ಹೊಂದಿದ್ದಾರೆ. ಜಾಗತಿಕ ಆರ್ಥಿಕತೆಗೆ ನೀವು ಅದೇ ಸಕಾರಾತ್ಮಕ ಮನೋಭಾವವನ್ನು ರವಾನಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಚರ್ಚೆಗಳು ಪ್ರಪಂಚದ ಅತ್ಯಂತ ದುರ್ಬಲ ನಾಗರಿಕರ ಮೇಲೆ ಕೇಂದ್ರೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಅಂತರ್ಗತ ಕಾರ್ಯಸೂಚಿಯನ್ನು ರಚಿಸುವ ಮೂಲಕ ಮಾತ್ರ ಜಾಗತಿಕ ಆರ್ಥಿಕ ನಾಯಕತ್ವವು ಪ್ರಪಂಚದ ವಿಶ್ವಾಸವನ್ನು ಮರಳಿ ಪಡೆಯುತ್ತದೆ. ನಮ್ಮ ಜಿ-20 ಅಧ್ಯಕ್ಷತೆಯ ಘೋಷವಾಕ್ಯವು ಈ ಅಂತರ್ಗತ ದೃಷ್ಟಿಕೋನವಾದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ವನ್ನು ಉತ್ತೇಜಿಸುತ್ತದೆ.

ಗೌರವಾನ್ವಿತರೇ,

ವಿಶ್ವ ಜನಸಂಖ್ಯೆಯು 800 ಕೋಟಿ ದಾಟಿದ್ದರೂ ಸಹ, ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯು ನಿಧಾನವಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಸಾಲ ಮಟ್ಟದ ಹೆಚ್ಚಳದಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

ಗೌರವಾನ್ವಿತರೇ,

ಹಣಕಾಸು ಜಗತ್ತಿನಲ್ಲಿ, ತಂತ್ರಜ್ಞಾನವು ಹೆಚ್ಚು ಪ್ರಭಾವಶಾಲಿಯಾಗಿದೆ. ಸಾಂಕ್ರಾಮಿಕ ಸಮಯದಲ್ಲಿ, ಡಿಜಿಟಲ್ ಪಾವತಿಗಳು ಸಂಪರ್ಕರಹಿತ ಮತ್ತು ತಡೆರಹಿತ ವಹಿವಾಟುಗಳನ್ನು ಸಕ್ರಿಯಗೊಳಿಸಿದವು. ಆದಾಗ್ಯೂ, ಡಿಜಿಟಲ್ ಹಣಕಾಸಿನಲ್ಲಿನ ಕೆಲವು ಇತ್ತೀಚಿನ ಆವಿಷ್ಕಾರಗಳು ಸಹ ಅಸ್ಥಿರತೆ ಮತ್ತು ದುರುಪಯೋಗದ ಅಪಾಯಗಳನ್ನು ಉಂಟುಮಾಡಿವೆ. ಸಂಭವನೀಯ ಅಪಾಯಗಳನ್ನು ನಿಯಂತ್ರಿಸುವ ಮಾನದಂಡಗಳನ್ನು ಅಭಿವೃದ್ಧಿಪಡಿಸುವಾಗ ತಂತ್ರಜ್ಞಾನದ ಶಕ್ತಿಯನ್ನು ಒಳ್ಳೆಯದಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ನೀವು ಅನ್ವೇಷಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಭಾರತದ ಸ್ವಂತ ಅನುಭವ ಮಾದರಿಯಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ, ನಾವು ಹೆಚ್ಚು ಸುರಕ್ಷಿತ, ಹೆಚ್ಚು ವಿಶ್ವಾಸಾರ್ಹ ಮತ್ತು ಹೆಚ್ಚು ಪರಿಣಾಮಕಾರಿಯಾದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವನ್ನು ರಚಿಸಿದ್ದೇವೆ. ನಮ್ಮ ಡಿಜಿಟಲ್ ಪಾವತಿಗಳ ಪರಿಸರ ವ್ಯವಸ್ಥೆಯನ್ನು ಮುಕ್ತ ಸಾರ್ವಜನಿಕ ಒಳಿತಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಭಾರತದಲ್ಲಿ ಆಡಳಿತ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸುಲಭವಾದ ಜೀವನವನ್ನು ಆಮೂಲಾಗ್ರವಾಗಿ ಪರಿವರ್ತಿಸಿದೆ. ನೀವು ಭಾರತದ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ಸಭೆ ಸೇರುತ್ತಿದ್ದು, ಭಾರತೀಯ ಗ್ರಾಹಕರು ಡಿಜಿಟಲ್ ಪಾವತಿಗಳನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಕುರಿತು ನಿಮಗೆ ಅಲ್ಲಿ ಅನುಭವವಾಗಲಿದೆ. ವಾಸ್ತವವಾಗಿ, ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ನಾವು ಹೊಸ ವ್ಯವಸ್ಥೆಯನ್ನು ರಚಿಸಿದ್ದೇವೆ. ಇದು ನಮ್ಮ ಜಿ-20 ಅತಿಥಿಗಳು ಭಾರತದ ವಿನೂತನ ಡಿಜಿಟಲ್ ಪಾವತಿ ವೇದಿಕೆಯಾದ ಯುಪಿಐ ಅನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. ನೀವು ಅದನ್ನು ಬಳಸುವಾಗ ಮತ್ತು ಅದರ ಬಳಕೆಯ ಸುಲಭತೆಯನ್ನು ಅನುಭವಿಸಿದಾಗ, ಭಾರತೀಯ ಗ್ರಾಹಕರು ಇದನ್ನು ಸ್ವಇಚ್ಛೆಯಿಂದ ಏಕೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಯುಪಿಐನಂತಹ ಉದಾಹರಣೆಗಳು ಇತರ ಹಲವು ದೇಶಗಳಿಗೂ ಮಾದರಿಗಳಾಗಬಹುದು. ನಮ್ಮ ಅನುಭವವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಮತ್ತು ಜಿ-20 ಇದಕ್ಕೆ ಒಂದು ವಾಹಕವಾಗಬಹುದು.

ಗೌರವಾನ್ವಿತರೇ,

ಈ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಮತ್ತು ಅತ್ಯಂತ ಫಲಪ್ರದ ಮತ್ತು ಯಶಸ್ವಿ ಚರ್ಚೆಗಳು ನಡೆಯಲು ಎಂದು ಶುಭ ಹಾರೈಸುತ್ತೇನೆ.

*****



(Release ID: 1901940) Visitor Counter : 238