ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಟರ್ಕಿ ಮತ್ತು ಸಿರಿಯಾದಲ್ಲಿ 'ಆಪರೇಷನ್ ದೋಸ್ತ್' ನಲ್ಲಿ ಭಾಗಿಯಾಗಿದ್ದ ಎನ್‌ ಡಿ ಆರ್‌ ಎಫ್‌ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಸಂವಾದ


“ಭೂಕಂಪದ ಸಮಯದಲ್ಲಿ ಭಾರತದ ತ್ವರಿತ ಪ್ರತಿಕ್ರಿಯೆ ಇಡೀ ಪ್ರಪಂಚದ ಗಮನವನ್ನು ಸೆಳೆದಿದೆ. ಇದು ನಮ್ಮ ರಕ್ಷಣಾ ಮತ್ತು ಪರಿಹಾರ ತಂಡಗಳ ಸನ್ನದ್ಧತೆಯ ಪ್ರತಿಬಿಂಬವಾಗಿದೆ”

"ಭಾರತವು ಸ್ವಾವಲಂಬನೆಯೊಂದಿಗೆ ತನ್ನ ನಿಸ್ವಾರ್ಥತೆಯನ್ನೂ ಪೋಷಿಸಿದೆ"

"ಜಗತ್ತಿನಲ್ಲಿ ಎಲ್ಲಿ ವಿಪತ್ತು ಸಂಭವಿಸಿದರೂ, ಭಾರತವು ಮೊದಲ ಪ್ರತಿಸ್ಪಂದಕ ಆಗಿರುತ್ತದೆ"

"ತಿರಂಗ'ದೊಂದಿಗೆ ನಾವು ಎಲ್ಲಿಗೆ ತಲುಪುತ್ತೇವೆಯೋ, ಅಲ್ಲಿ ಭಾರತೀಯ ತಂಡಗಳು ಬಂದ ನಂತರ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ಭರವಸೆ ಇರುತ್ತದೆ"

“ಎನ್‌ಡಿಆರ್‌ಎಫ್ ದೇಶದ ಜನರಲ್ಲಿ ಉತ್ತಮ ಹೆಸರು ಗಳಿಸಿದೆ. ದೇಶದ ಜನತೆ ನಿಮ್ಮನ್ನು ನಂಬಿದ್ದಾರೆ"

"ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ನಾವು ನಮ್ಮ ಗುರುತನ್ನು ಬಲಪಡಿಸಬೇಕಾಗಿದೆ. ನಮ್ಮ ಸ್ವಂತ ತಯಾರಿ ಉತ್ತಮವಾದಷ್ಟೂ ನಾವು ಜಗತ್ತಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.”

Posted On: 20 FEB 2023 7:48PM by PIB Bengaluru

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ‘ಆಪರೇಷನ್ ದೋಸ್ತ್ʼನಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ ನಡೆಸಿದರು.

ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ‘ಆಪರೇಷನ್ ದೋಸ್ತ್ʼನಲ್ಲಿ ಸಿಬ್ಬಂದಿಯ ಮಹತ್ತರ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸಿದರು. ವಸುಧೈವ ಕುಟುಂಬಕಂ ಪರಿಕಲ್ಪನೆಯನ್ನು ಪ್ರಧಾನಿ ವಿವರಿಸಿದರು. ಟರ್ಕಿ ಮತ್ತು ಸಿರಿಯಾದಲ್ಲಿ ಭಾರತ ತಂಡವು ಇಡೀ ಜಗತ್ತು ನಮಗೆ ಒಂದೇ ಕುಟುಂಬ ಎಂಬ ಮನೋಭಾವವನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಿ ಹೇಳಿದರು.

ನೈಸರ್ಗಿಕ ವಿಕೋಪದ ಸಮಯದಲ್ಲಿ ತ್ವರಿತ ಪ್ರತಿಕ್ರಿಯೆಯ ಪ್ರಾಮುಖ್ಯತೆಯನ್ನು ವಿವರಿಸಿದ ಪ್ರಧಾನಿಯವರು, 'ಗೋಲ್ಡನ್ ಅವರ್' ಅನ್ನು ಉಲ್ಲೇಖಿಸಿದರು ಮತ್ತು ಟರ್ಕಿಯಲ್ಲಿ ಎನ್‌ಡಿಆರ್‌ಎಫ್ ತಂಡದ ತ್ವರಿತ ಪ್ರತಿಕ್ರಿಯೆಯು ಇಡೀ ಪ್ರಪಂಚದ ಗಮನವನ್ನು ಸೆಳೆಯಿತು ಎಂದು ಹೇಳಿದರು. ತ್ವರಿತ ಪ್ರತಿಕ್ರಿಯೆಯು ತಂಡದ ಸನ್ನದ್ಧತೆ ಮತ್ತು ತರಬೇತಿ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ಅವರ ಶ್ರಮಕ್ಕಾಗಿ ತಂಡದ ಸದಸ್ಯರನ್ನು ಆಶೀರ್ವದಿಸಿದ ತಾಯಿಯ ಚಿತ್ರಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಸಂತ್ರಸ್ತ ಪ್ರದೇಶಗಳಲ್ಲಿ ನಡೆಸಲಾದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಪ್ರತಿ ಚಿತ್ರವನ್ನು ವೀಕ್ಷಿಸಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಟ್ಟಿದ್ದಾನೆ ಎಂದರು. ಸಾಟಿಯಿಲ್ಲದ ವೃತ್ತಿಪರತೆ ಮತ್ತು ಮಾನವ ಸ್ಪರ್ಶವನ್ನು ಒತ್ತಿ ಹೇಳಿದ ಪ್ರಧಾನಿ, ಒಬ್ಬ ವ್ಯಕ್ತಿಯು ಆಘಾತದಲ್ಲಿದ್ದಾಗ ಮತ್ತು ಎಲ್ಲವನ್ನೂ ಕಳೆದುಕೊಂಡಾಗ ಅದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ತಂಡವು ತೋರಿದ ಸಹಾನುಭೂತಿಯ ಕೆಲಸಗಳನ್ನು ಪ್ರಧಾನಿ ಶ್ಲಾಘಿಸಿದರು.

2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ಸ್ವಯಂಸೇವಕರಾಗಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅವಶೇಷಗಳನ್ನು ತೆಗೆದು ಕೆಳಗಿರುವ ಜನರನ್ನು ಹುಡುಕುವ ಕೆಲಸದ ಕಷ್ಟವನ್ನು ಒತ್ತಿಹೇಳಿದರು. ಭುಜ್‌ನಲ್ಲಿ ಆಸ್ಪತ್ರೆಯೇ ಕುಸಿದುಬಿದ್ದಿದ್ದರಿಂದ ಇಡೀ ವೈದ್ಯಕೀಯ ವ್ಯವಸ್ಥೆಗೆ ಹೇಗೆ ಹಾನಿಯಾಯಿತು ಎಂಬುದನ್ನು ವಿವರಿಸಿದರು. 1979 ರಲ್ಲಿ ನಡೆದ ಮಚ್ಚು ಅಣೆಕಟ್ಟು ದುರಂತವನ್ನು ಸಹ ಪ್ರಧಾನಿ ನೆನಪಿಸಿಕೊಂಡರು. ಈ ವಿಪತ್ತುಗಳ ಸಂದರ್ಭಲ್ಲಿನ ನನ್ನ ಅನುಭವಗಳ ಆಧಾರದ ಮೇಲೆ, ನಿಮ್ಮ ಶ್ರಮ, ಉತ್ಸಾಹ ಮತ್ತು ಭಾವನೆಗಳನ್ನು ನಾನು ಪ್ರಶಂಸಿಸುತ್ತೇನೆ. ಇಂದು ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಕಷ್ಟದ ಸಂದರ್ಭಗಳಲ್ಲಿ ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವವರನ್ನು ಸ್ವಾವಲಂಬಿಗಳು ಎಂದು ಕರೆಯಲಾಗುತ್ತದೆ. ಆದರೆ ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುವವರನ್ನು ನಿಸ್ವಾರ್ಥಿಗಳು ಎಂದು ಕರೆಯಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಇದು ವ್ಯಕ್ತಿಗಳಿಗೆ ಮಾತ್ರವಲ್ಲ ರಾಷ್ಟ್ರಗಳಿಗೂ ಅನ್ವಯಿಸುತ್ತದೆ ಎಂದರು. ಅದಕ್ಕಾಗಿಯೇ ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಸ್ವಾವಲಂಬನೆಯ ಜೊತೆಗೆ ತನ್ನ ನಿಸ್ವಾರ್ಥತೆಯನ್ನು ಪೋಷಿಸಿದೆ. ನಾವು 'ತಿರಂಗ'ದೊಂದಿಗೆ ಎಲ್ಲಿಗೆ ತಲುಪಿದರೂ, ಅಲ್ಲಿ ಭಾರತೀಯ ತಂಡಗಳು ಬಂದ ನಂತರ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ ಎಂಬ ಭರವಸೆ ಇರುತ್ತದೆ ಎಂದ ಪ್ರಧಾನಿಯವರು ಉಕ್ರೇನ್‌ನಲ್ಲಿ ತಿರಂಗಾ ವಹಿಸಿದ ಪಾತ್ರದ ಮೇಲೆ ಬೆಳಕು ಚೆಲ್ಲಿದರು.

ತ್ರಿವರ್ಣ ಧ್ವಜವು ಸ್ಥಳೀಯ ಜನರಲ್ಲಿ ಗಳಿಸಿದ ಗೌರವದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಗಂಗಾ ಕಾರ್ಯಾಚರಣೆಯ ಸಂದರ್ಭದಲ್ಲಿ ಉಕ್ರೇನ್‌ನಲ್ಲಿರುವ ಪ್ರತಿಯೊಬ್ಬರಿಗೂ ತ್ರಿವರ್ಣ ಧ್ವಜವು ಹೇಗೆ ಗುರಾಣಿಯಾಗಿ ಕಾರ್ಯನಿರ್ವಹಿಸಿತು ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಅಂತೆಯೇ, ಆಪರೇಷನ್ ದೇವಿ ಶಕ್ತಿಯಲ್ಲಿ ಅಫ್ಘಾನಿಸ್ತಾನದಿಂದ ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ಜನರನ್ನು ಸ್ಥಳಾಂತರಿಸಲಾಯಿತು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಪ್ರತಿಯೊಬ್ಬ ನಾಗರಿಕರನ್ನು ಮರಳಿ ಅವರ ಊರಿಗೆ ಕರೆತಂದಾಗ ಮತ್ತು ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸುವ ಮೂಲಕ ಜಾಗತಿಕ ಅಭಿಮಾನವನ್ನು ಗಳಿಸಿದಾಗಲೂ ಅದೇ ಬದ್ಧತೆ ಸ್ಪಷ್ಟವಾಗಿತ್ತು ಎಂದು ಪ್ರಧಾನಿ ಹೇಳಿದರು.

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದಾಗ ಮೊದಲು ಪ್ರತಿಕ್ರಿಯಿಸಿದವರಲ್ಲಿ ಭಾರತವು ಒಂದಾಗಿತ್ತು. 'ಆಪರೇಷನ್ ದೋಸ್ತ್' ಮೂಲಕ ಮಾನವೀಯತೆಗೆ ಭಾರತದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು. ನೇಪಾಳದಲ್ಲಿ ಭೂಕಂಪ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದಲ್ಲಿನ ಬಿಕ್ಕಟ್ಟಿನ ಉದಾಹರಣೆಗಳನ್ನು ನೀಡಿದ ಅವರು ಇಲ್ಲೆಲ್ಲಾ ಸಹಾಯ ಮಾಡಲು ಮೊದಲು ಮುಂದೆ ಬಂದದ್ದು ಭಾರತ ಎಂದು ಹೇಳಿದರು. ಭಾರತೀಯ ಪಡೆಗಳು ಮತ್ತು ಎನ್‌ಡಿಆರ್‌ಎಫ್‌ ಮೇಲೆ ಇತರ ದೇಶಗಳ ವಿಶ್ವಾಸವೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಹಲವು ವರ್ಷಗಳಿಂದ ಎನ್‌ಡಿಆರ್‌ಎಫ್‌ ದೇಶದ ಜನರಲ್ಲಿ ಉತ್ತಮ ಹೆಸರು ಗಳಿಸಿದೆ ಎಂದು ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು. ದೇಶದ ಜನರು ಎನ್‌ಡಿಆರ್‌ಎಫ್ ಅನ್ನು ನಂಬುತ್ತಾರೆ ಎಂದು ಅವರು ಹೇಳಿದರು. ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಲುಪಿದಾಗ ಜನರಲ್ಲಿ ನಂಬಿಕೆ ಮತ್ತು ಭರವಸೆ ಮೂಡುತ್ತದೆ. ಸ್ವತಃ ಇದೇ ಒಂದು ದೊಡ್ಡ ಸಾಧನೆಯಾಗಿದೆ ಎಂದರು. ಕೌಶಲ್ಯವಿರುವ ಪಡೆಗೆ ಸಂವೇದನಾಶೀಲತೆಯನ್ನು ಸೇರಿಸಿದಾಗ, ಆ ಪಡೆಯ ಬಲವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು.

ದುರಂತದ ಸಮಯದಲ್ಲಿ ಪರಿಹಾರ ಮತ್ತು ರಕ್ಷಣೆಗಾಗಿ ಭಾರತದ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ನಾವು ನಮ್ಮ ಗುರುತನ್ನು ಬಲಪಡಿಸಬೇಕಾಗಿದೆ. ನಮ್ಮ ಸ್ವಂತ ತಯಾರಿ ಉತ್ತಮವಾದಷ್ಟೂ ನಾವು ಜಗತ್ತಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು. ಎನ್‌ಡಿಆರ್‌ಎಫ್ ತಂಡದ ಪ್ರಯತ್ನಗಳು ಮತ್ತು ಅನುಭವಗಳನ್ನು ಶ್ಲಾಘಿಸಿದ ಪ್ರಧಾನಿಯವರು, ಸಿಬ್ಬಂದಿಯು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದರೂ, ಕಳೆದ 10 ದಿನಗಳಿಂದ ಮನಸ್ಸು ಮತ್ತು ಹೃದಯದ ಮೂಲಕ ನಾನು ಅವರೊಂದಿಗೆ ಸಂಪರ್ಕ ಹೊಂದಿದ್ದೆ ಎಂದು ಹೇಳಿದರು.

 

***


(Release ID: 1901722) Visitor Counter : 141