ಸಂಪುಟ

​​​​​​​ಅಂಗವೈಕಲ್ಯ ವಲಯದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ತಿಳಿವಳಿಕಾ ಒಡಂಬಡಿಕೆ  ಅಂಕಿತಕ್ಕೆ ಸಂಪುಟದ ಅನುಮೋದನೆ

Posted On: 15 FEB 2023 3:48PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂಗವೈಕಲ್ಯ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ದಕ್ಷಿಣ ಆಫ್ರಿಕಾ ಗಣರಾಜ್ಯ ಸರ್ಕಾರದ ನಡುವೆ ತಿಳಿವಳಿಕಾ ಒಡಂಬಡಿಕೆ (ಎಂ.ಓ.ಯು.) ಅಂಕಿತಕ್ಕೆ  ತನ್ನ ಅನುಮೋದನೆ ನೀಡಿದೆ.

ಈ ದ್ವಿಪಕ್ಷೀಯ ತಿಳುವಳಿಕಾ ಒಡಂಬಡಿಕೆಯು ಭಾರತ ಗಣರಾಜ್ಯದ ವಿಕಲಚೇತನರ ಸಬಲೀಕರಣ ಇಲಾಖೆ ಮತ್ತು ದಕ್ಷಿಣ ಆಫ್ರಿಕಾ ಸರ್ಕಾರದ ನಡುವೆ ಅಂಗವೈಕಲ್ಯ ವಲಯದಲ್ಲಿ ಜಂಟಿ ಉಪಕ್ರಮಗಳ ಮೂಲಕ ಸಹಕಾರವನ್ನು ಉತ್ತೇಜಿಸಲಿದೆ.  ಇದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುತ್ತದೆ. ಪರಸ್ಪರ ಒಪ್ಪಿಕೊಂಡಂತಹ ವಲಯಗಳಲ್ಲಿ ಉಭಯ  ದೇಶಗಳ ನಡುವಿನ ಸಹಕಾರಕ್ಕೆ ಸಂಬಂಧಿಸಿ ನಿರ್ದಿಷ್ಟ ಪ್ರಸ್ತಾಪಗಳನ್ನು ತಿಳುವಳಿಕಾ ಒಡಂಬಡಿಕೆಯ ಸಿಂಧುತ್ವದ ಅವಧಿಯಲ್ಲಿ ಅನುಷ್ಠಾನಕ್ಕೆ ಕೈಗೆತ್ತಿಕೊಳ್ಳಲಾಗುವುದು.

ವಿಶೇಷವಾಗಿ ಆಧುನಿಕ, ವೈಜ್ಞಾನಿಕ, ಬಾಳಿಕೆ ಬರುವ, ಕಡಿಮೆ ವೆಚ್ಚದ ಸಾಧನಗಳು ಮತ್ತು ಸಹಾಯಕ ಸಲಕರಣೆಗಳ ಅಗತ್ಯವಿರುವ ಉಭಯ  ದೇಶಗಳಲ್ಲಿನ ವಿಕಲಚೇತನ ವ್ಯಕ್ತಿಗಳು (ಪಿಡಬ್ಲ್ಯೂಡಿ)  ಮತ್ತು ವಯಸ್ಸಾದ  ವ್ಯಕ್ತಿಗಳಿಗೆ ಈ ತಿಳಿವಳಿಕೆ ಒಪ್ಪಂದದಿಂದ ಪ್ರಯೋಜನವಾಗಲಿದೆ.

ಒಂದು ಶತಮಾನದ ಹಿಂದೆ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ಆಂದೋಲನವನ್ನು ಪ್ರಾರಂಭಿಸಿದಾಗಿನಿಂದ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಟದ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಸುದೀರ್ಘ ಐತಿಹಾಸಿಕ ಸಂಪರ್ಕ ಮತ್ತು ಸಂಬಂಧಗಳನ್ನು ಹಂಚಿಕೊಂಡಿವೆ. ವರ್ಣಭೇದ ನೀತಿ ವಿರೋಧಿ ಚಳವಳಿಯನ್ನು ಬೆಂಬಲಿಸುವಲ್ಲಿ ಭಾರತವು ಅಂತರರಾಷ್ಟ್ರೀಯ ಸಮುದಾಯದ ಮುಂಚೂಣಿಯಲ್ಲಿತ್ತು. ಸ್ವಾತಂತ್ರ್ಯದ ನಂತರ, ದಕ್ಷಿಣ ಆಫ್ರಿಕಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು 1993 ರಲ್ಲಿ ಪುನಃಸ್ಥಾಪಿಸಲಾಯಿತು ಮತ್ತು ಅನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳು 1997 ಮಾರ್ಚ್ ತಿಂಗಳಲ್ಲಿ ವ್ಯೂಹಾತ್ಮಕ  ಸಹಭಾಗಿತ್ವವನ್ನು ಸ್ಥಾಪಿಸಿದವು. ತರುವಾಯ, ದ್ವಿಪಕ್ಷೀಯವಾಗಿ ಮತ್ತು ಬ್ರಿಕ್ಸ್, ಐಬಿಎಸ್ಎ ಮತ್ತು ಇತರ ವೇದಿಕೆಗಳ ಮೂಲಕ ದಕ್ಷಿಣ ಆಫ್ರಿಕಾದೊಂದಿಗೆ ನಮ್ಮ ನಿಕಟ ಮತ್ತು ಸ್ನೇಹಪರ ಸಂಬಂಧಗಳು ಬಲಗೊಂಡಿವೆ. ಆರ್ಥಿಕ ಮತ್ತು ವಾಣಿಜ್ಯ ಸಹಕಾರ, ರಕ್ಷಣೆ, ಸಂಸ್ಕೃತಿ, ಆರೋಗ್ಯ, ಜನವಸತಿಗಳು, ಸಾರ್ವಜನಿಕ ಆಡಳಿತ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಭಾರತದ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮ (ಐಟಿಇಸಿ) ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರವನ್ನು ಉತ್ತೇಜಿಸುವ ಉಪಯುಕ್ತ ಮಾಧ್ಯಮವಾಗಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಮತ್ತು ಇತರ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಸಹಕಾರ ಗಮನಾರ್ಹವಾಗಿದೆ.  ವಿವಿಧ ಇತರ ಸಚಿವಾಲಯಗಳು/ ಇಲಾಖೆಗಳು ಕೂಡಾ ತಮ್ಮ ಸಂಬಂಧಿತ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ / ಒಪ್ಪಂದಗಳಿಗೆ ಸಹಿ ಹಾಕಿವೆ, ಇದು ದಕ್ಷಿಣ ಆಫ್ರಿಕಾ ಸರ್ಕಾರದೊಂದಿಗಿನ ಆಳವಾದ ಸಂಬಂಧಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.

*****



(Release ID: 1899560) Visitor Counter : 106