ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್‌ಗಳ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


"ನೀವು ಭರವಸೆ, ಸ್ಥಿತಿಸ್ಥಾಪಕತ್ವ ಮತ್ತು ಚೇತರಿಕೆಯ ಸಂಕೇತ"

"ನಿಮ್ಮ ವೃತ್ತಿಪರತೆ ನನಗೆ ಸ್ಫೂರ್ತಿ ನೀಡುತ್ತದೆ"

"ನಿರ್ಗತಿಕರನ್ನು ಬೆಂಬಲಿಸುವ ಮನೋಭಾವ ಮತ್ತು ಸ್ಥಿರತೆ, ನಿರಂತರತೆ ಮತ್ತು ದೃಢವಿಶ್ವಾಸವು ಆಡಳಿತದಲ್ಲಿಯೂ ವ್ಯಾಪಿಸಿದೆ"

"ಸರ್ಕಾರವು  ಆರೋಗ್ಯರಕ್ಷಣಾ ವೃತ್ತಿಪರರು ಮತ್ತು ಅದರ ಸಂಬಂಧಿ ರಾಷ್ಟ್ರೀಯ ಆಯೋಗದ ಮಸೂದೆ ಜಾರಿಗೊಳಿಸಿರುವುದರಿಂದ ಫಿಸಿಯೋಥೆರಪಿಸ್ಟ್ ಗಳು ಬಹುನಿರೀಕ್ಷಿತ  ವೃತ್ತಿಯ ಮನ್ನಣೆ ಪಡೆದಿದ್ದಾರೆ’’

"ಸರಿಯಾದ ಭಂಗಿ, ಸರಿಯಾದ ಹವ್ಯಾಸಗಳು, ಸರಿಯಾದ ವ್ಯಾಯಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ"

"ಯೋಗದ ಪರಿಣತಿಯನ್ನು ಫಿಸಿಯೋಥೆರಪಿಸ್ಟ್ ಜೊತೆಗೆ ಸಂಯೋಜಿಸಿದಾಗ, ಅದರ ಶಕ್ತಿಯು ಹಲವು ಪಟ್ಟು ವೃದ್ಧಿಯಾಗುತ್ತದೆ"

"ಟರ್ಕಿಯ ಭೂಕಂಪದಂತಹ ಸಂದರ್ಭಗಳಲ್ಲಿ ಪಿಸಿಯೋಥರಪಿಸ್ಟ್  ವೀಡಿಯೊ ಸಮಾಲೋಚನೆಯು ಉಪಯುಕ್ತವಾದುದು"

 "ಭಾರತ ಫಿಟ್ ಆಗುವುದರ ಜೊತೆಗೆ ಸೂಪರ್ ಹಿಟ್ ಆಗುತ್ತದೆಂಬ ಸಂಪೂರ್ಣ ವಿಶ್ವಾಸ ನನಗಿದೆ’’ 

Posted On: 11 FEB 2023 10:26AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್‌ಗಳ (ಐಎಪಿ) 60 ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ವೀಡಿಯೊ ಸಂದೇಶದ ಮೂಲಕ ಮಾತನಾಡಿದರು.
 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಸಾಂತ್ವನ, ಭರವಸೆಯ ಸಂಕೇತ, ಸ್ಥಿತಿಸ್ಥಾಪಕತ್ವ ಮತ್ತು ಚೇತರಿಕೆ ಒದಗಿಸುವವರು ಎಂದು ಫಿಸಿಯೋಥೆರಪಿಸ್ಟ್‌ಗಳ ಪ್ರಾಮುಖ್ಯತೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಫಿಸಿಯೋಥೆರಪಿಸ್ಟ್‌ ಗಳು ದೈಹಿಕ ಗಾಯಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಮಾನಸಿಕ ಸವಾಲನ್ನು ಎದುರಿಸಲು ರೋಗಿಗೆ ಧೈರ್ಯವನ್ನು ನೀಡುತ್ತಾರೆ ಎಂದು ಅವರು ಹೇಳಿದರು.
 
ಪ್ರಧಾನಮಂತ್ರಿಯವರು ಫಿಸಿಯೋಥೆರಪಿಸ್ಟ್ ಗಳ ವೃತ್ತಿಪರತೆಯನ್ನು ಶ್ಲಾಘಿಸಿದರು ಮತ್ತು ಅಗತ್ಯವಿರುವ ಸಮಯದಲ್ಲಿ ಬೆಂಬಲವನ್ನು ನೀಡುವ ಅದೇ ಮನೋಭಾವವು ಹೇಗೆ ಆಡಳಿತವನ್ನು ವ್ಯಾಪಿಸುತ್ತದೆ ಎಂಬುದನ್ನು ವಿವರಿಸಿದರು. ಮೂಲಭೂತ ಅಗತ್ಯಗಳಾದ ಬ್ಯಾಂಕ್ ಖಾತೆ, ಶೌಚಾಲಯ, ಕೊಳಾಯಿ ನೀರು, ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಸಾಮಾಜಿಕ ಭದ್ರತೆಯ ಜಾಲವನ್ನು ಒದಗಿಸುವ ಬೆಂಬಲದೊಂದಿಗೆ ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಕನಸು ಕಾಣಲು ಧೈರ್ಯ ತುಂಬುತ್ತಿದೆ ಎಂದರು. “ಅವರ ಸಾಮರ್ಥ್ಯದಿಂದ ಅವರು ಹೊಸ ಎತ್ತರವನ್ನು ತಲುಪಲು ಸಮರ್ಥರಾಗಿದ್ದಾರೆಂಬುದನ್ನು ನಾವು ಇಡೀ ಜಗತ್ತಿಗೆ ತೋರಿಸಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು.

 

ಅಂತೆಯೇ, ರೋಗಿಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬುವ ವೃತ್ತಿಯ ಗುಣಲಕ್ಷಣಗಳನ್ನು ವಿವರಿಸಿದ ಅವರು, ದೇಶವು ಆತ್ಮನಿರ್ಭರ ಭಾರತದತ್ತ ಸಾಗುತ್ತಿದೆ ಎಂದು ಹೇಳಿದರು. ಈ ವೃತ್ತಿಯು 'ಸಬ್ ಕ ಪ್ರಯಾಸ್' ಸಂಕೇತವನ್ನು ಪ್ರತಿನಿಧಿಸುತ್ತದೆ, ಏಕೆಂದರೆ ರೋಗಿ ಮತ್ತು ವೈದ್ಯರು ಇಬ್ಬರೂ ಸಮಸ್ಯೆಯನ್ನು ಅರಿತು ಕೆಲಸ ಮಾಡಬೇಕಾಗುತ್ತದೆ ಮತ್ತು ಇದು ಸ್ವಚ್ಛ ಭಾರತ ಮತ್ತು ಬೇಟಿ ಬಚಾವೋದಂತಹ ಜನ ಆಂದೋಲನಗಳಲ್ಲಿ ಹಾಗೂ  ಅನೇಕ ಯೋಜನೆಗಳಲ್ಲೂ ಪ್ರತಿಫಲಿಸುತ್ತದೆ ಎಂದು ಪ್ರಧಾನಿ ಹೇಳಿದರು.
 
ಆಡಳಿತದ ನೀತಿಗಳಿಗೆ ನಿರ್ಣಾಯಕವಾಗಿರುವ ಸ್ಥಿರತೆ, ನಿರಂತರತೆ ಮತ್ತು ಬದ್ಧತೆಯಂತಹ ಅನೇಕ ಪ್ರಮುಖ ಸಂದೇಶಗಳನ್ನು ಹೊಂದಿರುವ ಫಿಸಿಯೋಥೆರಪಿಸ್ಟ್‌ ಗಳ ಮನೋಭಾವವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.
 
ರಾಷ್ಟ್ರದ ಆರೋಗ್ಯ ವ್ಯವಸ್ಥೆಯಲ್ಲಿ ಫಿಸಿಯೋಥೆರಪಿಸ್ಟ್‌ ಗಳ ಕೊಡುಗೆಯನ್ನು ಗುರುತಿಸುವ ಆರೋಗ್ಯ ರಕ್ಷಣೆ ಮತ್ತು ಅದರ ಸಂಬಂಧಿ ವೃತ್ತಿಪರರ ರಾಷ್ಟ್ರೀಯ ಆಯೋಗದ ಮಸೂದೆಯನ್ನು ಸರ್ಕಾರವು ಜಾರಿಗೊಳಿಸಿದ್ದರಿಂದ ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಫಿಸಿಯೋಥೆರಪಿಸ್ಟ್‌ಗಳು ಬಹು ನಿರೀಕ್ಷಿತ ವೃತ್ತಿಯ ಮನ್ನಣೆಯನ್ನು ಪಡೆದರು ಎಂದು ಪ್ರಧಾನಿ ಹೇಳಿದರು. “ಇದು ನಿಮ್ಮೆಲ್ಲರಿಗೂ ಭಾರತದಲ್ಲಿ ಮತ್ತು ವಿದೇಶದಲ್ಲಿ ಕೆಲಸ ಮಾಡಲು ಸುಲಭವಾಗಿದೆ. ಸರ್ಕಾರವು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಜಾಲಕ್ಕೆ ಕೂಡ ಫಿಸಿಯೋಥೆರಪಿಸ್ಟ್‌ಗಳನ್ನು ಸೇರಿಸಿದೆ. ಇದು ನಿಮಗೆ ರೋಗಿಗಳನ್ನು ತಲುಪಲು ಸುಲಭವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಫಿಟ್ ಇಂಡಿಯಾ ಅಭಿಯಾನ ಮತ್ತು ಖೇಲೋ ಇಂಡಿಯಾದ ಪರಿಸರದಲ್ಲಿ ಫಿಸಿಯೋಥೆರಪಿಸ್ಟ್‌ಗಳಿಗೆ ಅವಕಾಶಗಳು ಹೆಚ್ಚಾಗುತ್ತಿರುವ ಬಗ್ಗೆಯೂ ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.
 
ಫಿಸಿಯೋಥೆರಪಿಸ್ಟ್‌ಗಳು ಜನರಿಗೆ ಸರಿಯಾದ ಭಂಗಿ, ಸರಿಯಾದ ಹವ್ಯಾಸಗಳು, ಸರಿಯಾದ ವ್ಯಾಯಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. "ದೈಹಿಕ ಕ್ಷಮತೆ-ಫಿಟ್ನೆಸ್ ಬಗ್ಗೆ ಜನರು ಸರಿಯಾದ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಇದನ್ನು ಲೇಖನಗಳು ಮತ್ತು ಉಪನ್ಯಾಸಗಳ ಮೂಲಕ ಮಾಡಬಹುದು. ಮತ್ತು ನನ್ನ ಯುವ ಸ್ನೇಹಿತರು ಇದನ್ನು ರೀಲ್ಸ್ ಮೂಲಕವೂ ಮಾಡಬಹುದು” ಎಂದು ಅವರು ಹೇಳಿದರು.

ಫಿಸಿಯೋಥೆರಪಿಯ ಕುರಿತು ತಮ್ಮ ವೈಯಕ್ತಿಕ ಅನುಭವ ಬಿಡಿಸಿಟ್ಟ ಪ್ರಧಾನಿ, “ಯೋಗದ ನಿಪುಣತೆಯನ್ನು ಫಿಸಿಯೋಥೆರಪಿಯೊಂದಿಗೆ ಸಂಯೋಜಿಸಿದಾಗ, ಅದರ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ ಎಂಬುದು ನನ್ನ ಅನುಭವ. ಸಾಮಾನ್ಯವಾಗಿ ಫಿಸಿಯೋಥೆರಪಿಸ್ಟ್ ಅಗತ್ಯವಿರುವ ದೇಹದ ಸಾಮಾನ್ಯ ಸಮಸ್ಯೆಗಳನ್ನು ಕೆಲವೊಮ್ಮೆ ಯೋಗದಿಂದ ಪರಿಹರಿಸಲಾಗುತ್ತದೆ. ಅದಕ್ಕಾಗಿಯೇ ನೀವು ಫಿಸಿಯೋಥೆರಪಿ ಜೊತೆಗೆ ಯೋಗ್ಯಾಭ್ಯಾಸವನ್ನೂ ಸಹ ತಿಳಿದಿರಬೇಕು.ಇದು ನಿಮ್ಮ ವೃತ್ತಿಪರ ಶಕ್ತಿಯನ್ನು ವೃದ್ಧಿಸುತ್ತದೆ’’ ಎಂದರು. 

ಫಿಸಿಯೋಥೆರಪಿ ವೃತ್ತಿಯ ಬಹು ದೊಡ್ಡ ಭಾಗ, ಹಿರಿಯ ನಾಗರಿಕರೊಂದಿಗೆ ಸಂಪರ್ಕ ಹೊಂದಿರುವುದರಿಂದ, ಅನುಭವ ಮತ್ತು ಮೃದು ಕೌಶಲ್ಯಗಳ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ವೃತ್ತಿಯ ಅನುಭವಗಳನ್ನು ದಾಖಲು ಮಾಡಿ ಅವುಗಳನ್ನು ಶೈಕ್ಷಣಿಕ ಪತ್ರಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಜಗತ್ತಿನ ಮುಂದೆ ಪ್ರಸ್ತುತಪಡಿಸುವಂತೆ ಮನವಿ ಮಾಡಿದರು. 
 
ವೀಡಿಯೊ ಕನ್ಸಲ್ಟಿಂಗ್ ಮತ್ತು ಟೆಲಿ-ಮೆಡಿಸಿನ್ ವಿಧಾನಗಳನ್ನು ಅಭಿವೃದ್ಧಿಪಡಿಸುವಂತೆ ಶ್ರೀ ನರೇಂದ್ರ ಮೋದಿ ಅವರು ವೃತ್ತಿಪರರಿಗೆ ಮನವಿ ಮಾಡಿದರು. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಂತಹ ಪರಿಸ್ಥಿತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಫಿಸಿಯೋಥೆರಪಿಸ್ಟ್‌ಗಳ ಅಗತ್ಯವಿರುವ ಸಂದರ್ಭಗಳಲ್ಲಿ ಇದು ಉಪಯುಕ್ತವಾಗುತ್ತದೆ ಮತ್ತು ಭಾರತೀಯ ಫಿಸಿಯೋಥೆರಪಿಸ್ಟ್‌ಗಳು ಮೊಬೈಲ್ ಫೋನ್‌ಗಳ ಮೂಲಕ ಸಹಾಯ ಮಾಡಬಹುದು ಮತ್ತು ನಿಮ್ಮಂತಹ ಪರಿಣತ ಫಿಸಿಯೋಥೆರಪಿಸ್ಟ್ ಒಕ್ಕೂಟ ಆ ನಿಟ್ಟಿನಲ್ಲಿ ಅಲೋಚನೆ ಮಾಡಬೇಕು  ಅವರು ಹೇಳಿದರು. “ನಿಮ್ಮಂತಹವರ ನಾಯಕತ್ವದಲ್ಲಿ ಭಾರತವು ಫಿಟ್ ಆಗುವುದರ ಜೊತೆಗೆ ಸೂಪರ್ ಹಿಟ್ ಆಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಹೇಳಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಗಿಸಿದರು.

*****



(Release ID: 1898427) Visitor Counter : 116