ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ಉತ್ತರ


"ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣವು ದೇಶಕ್ಕೆ ಸ್ಪಷ್ಟ ದಿಕ್ಕು ತೋರಿದೆ"

"ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಸಕಾರಾತ್ಮಕತೆ, ಆಶಾವಾದ ಮತ್ತು ಭರವಸೆ ಹುಟ್ಟಿಸಿದೆ"

"ಇಂದಿನ ಸುಧಾರಣೆಗಳನ್ನು ಬಲವಂತದಿಂದ ಕೈಗೊಳ್ಳಲಾಗಿಲ್ಲ, ಆದರೆ ಅವು ಬಲವಾದ ನಂಬಿಕೆಯಿಂದ ಬಂದಿವೆ"

ಯುಪಿಎ ಆಡಳಿತವಿದ್ದ ಭಾರತವನ್ನು 'ಕಳೆದುಹೋದ ದಶಕ' ಎಂದು ಕರೆಯಲಾಗುತ್ತಿತ್ತು, ಆದರೆ ಇಂದು ಜನರು ಪ್ರಸ್ತುತ ದಶಕವನ್ನು 'ಭಾರತದ ದಶಕ' ಎಂದು ಕರೆಯುತ್ತಿದ್ದಾರೆ

"ಭಾರತ ಪ್ರಜಾಪ್ರಭುತ್ವದ ಮೂಲಬೇರು ಅಥವಾ ತಾಯಿ, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ರಚನಾತ್ಮಕ ಟೀಕೆ ಅತ್ಯಗತ್ಯ ಮತ್ತು ಟೀಕೆಗಳು ಶುದ್ಧಿ ಯಜ್ಞದಂತೆ"

"ರಚನಾತ್ಮಕ ಟೀಕೆಗಳಿಗೆ ಬದಲಾಗಿ, ಕೆಲವರು ಆಧಾರರಹಿತ (ಒತ್ತಾಯಪೂರ್ವಕ) ಟೀಕೆಗಳಲ್ಲಿ ತೊಡಗುತ್ತಾರೆ"

"140 ಕೋಟಿ ಭಾರತೀಯರ ಆಶೀರ್ವಾದವು ನನಗೆ ಸುರಕ್ಷಾ ಕವಚವಿದ್ದಂತೆ"

''ನಮ್ಮ ಸರಕಾರ ಮಧ್ಯಮ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸಿದೆ. ಅವರ ಪ್ರಾಮಾಣಿಕತೆಗಾಗಿ ನಾವು ಅವರನ್ನು ಗೌರವಿಸಿದ್ದೇವೆ''

"ಭಾರತೀಯ ಸಮಾಜವು ನಕಾರಾತ್ಮಕತೆ ಎದುರಿಸುವ ಸಾಮರ್ಥ್ಯ ಹೊಂದಿದೆ, ಆದರೆ ಅದು ಎಂದಿಗೂ ನಕಾರಾತ್ಮಕತೆ ಸ್ವೀಕರಿಸುವುದಿಲ್ಲ"

Posted On: 08 FEB 2023 5:40PM by PIB Bengaluru

ಸಂಸತ್ತಿನ ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಲೋಕಸಭೆಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಿಸಿದರು.

ಉಭಯ ಸದನ ಉದ್ದೇಶಿಸಿ ಗೌರವಾನ್ವಿತ ರಾಷ್ಟ್ರಪತಿಯವರು ಮಾಡಿದ ದೂರದೃಷ್ಟಿಯ ಭಾಷಣದಲ್ಲಿ ರಾಷ್ಟ್ರಕ್ಕೆ ಹೊಸ ದಿಕ್ಕು ತೋರಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರಪತಿಯವರ ಭಾಷಣವು ಭಾರತದ 'ನಾರಿ ಶಕ್ತಿ' (ಮಹಿಳಾ ಶಕ್ತಿ) ಯನ್ನು ಪ್ರೇರೇಪಿಸಿದೆ, ಭಾರತದ ಬುಡಕಟ್ಟು ಸಮುದಾಯಗಳಲ್ಲಿ ಹೆಮ್ಮೆಯ ಭಾವನೆ ತುಂಬುವುದರೊಂದಿಗೆ ಅವರ ಆತ್ಮವಿಶ್ವಾಸಕ್ಕೆ ಉತ್ತೇಜನ ನೀಡಿದೆ. ರಾಷ್ಟ್ರಪತಿ ಅವರು ರಾಷ್ಟ್ರದ 'ಸಂಕಲ್ಪ್ ಸೇ ಸಿದ್ಧಿ'ಯ ವಿವರವಾದ ನೀಲನಕ್ಷೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ದೇಶದ ಮುಂದೆ ಸವಾಲುಗಳು ಎದುರಾಗಬಹುದು, ಆದರೆ 140 ಕೋಟಿ ಭಾರತೀಯರ ಸಂಕಲ್ಪದಿಂದ ರಾಷ್ಟ್ರವು ನಮ್ಮ ದಾರಿಯಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಿವಾರಿಸಲಿದೆ. ಶತಮಾನಕ್ಕೊಮ್ಮೆ ಸಂಭವಿಸುವ ವಿಪತ್ತು ಮತ್ತು ಯುದ್ಧದ ಸಂದರ್ಭದಲ್ಲಿ ದೇಶವನ್ನು ನಿಭಾಯಿಸಿದ ಕ್ರಮವು ಪ್ರತಿಯೊಬ್ಬ ಭಾರತೀಯರಲ್ಲಿ ಆತ್ಮವಿಶ್ವಾಸ ತುಂಬಿದೆ. ಇಂತಹ ಸಂಕಷ್ಟ(ಸಂಕ್ಷೋಭೆ)ದ ಕಾಲಘಟ್ಟದಲ್ಲೂ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಸಕಾರಾತ್ಮಕತೆ, ಆಶಾವಾದ ಮತ್ತು ಭರವಸೆ ಮೂಡಿದೆ. ಸ್ಥಿರತೆ, ಭಾರತದ ಜಾಗತಿಕ ನಿಲುವು, ಬೆಳೆಯುತ್ತಿರುವ ಭಾರತದ ಸಾಮರ್ಥ್ಯ ಮತ್ತು ಭಾರತದಲ್ಲಿ ಹೊಸ ಉದಯೋನ್ಮುಖ ಸಾಧ್ಯತೆಗಳೇ ಈ ಸಕಾರಾತ್ಮಕತೆಗೆ ಕಾರಣ. ದೇಶದಲ್ಲಿರುವ ವಿಶ್ವಾಸದ ವಾತಾವರಣದ ಮೇಲೆ ಬೆಳಕು ಚೆಲ್ಲುವ ಪ್ರಧಾನಿ, ಭಾರತವು ಸ್ಥಿರ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ನಾವು ಸುಧಾರಣೆಗಳನ್ನು ಬಲವಂತದಿಂದ ಕೈಗೊಳ್ಳುತ್ತಿಲ್ಲ, ಆದರೆ ಬಲವಾದ ನಂಬಿಕೆ ಮೂಲಕ ಕೈಗೊಳ್ಳಲಾಗುತ್ತಿದೆ. "ಭಾರತದ ಸಮೃದ್ಧಿಯಿಂದ ಇಡೀ ಜಗತ್ತು ಸಮೃದ್ಧಿ ನೋಡುತ್ತಿದೆ" ಎಂದು ಪ್ರಧಾನಿ ಹೇಳಿದರು.

2014ರ ಹಿಂದಿನ ದಶಕದ ಬಗ್ಗೆ ಗಮನ ಸೆಳೆದ ಪ್ರಧಾನಿ ಮಂತ್ರಿ, 2004ರಿಂದ 2014ರ ನಡುವಿನ ಸಂವತ್ಸರಗಳು ಹಗರಣಗಳಿಂದ ತುಂಬಿದ್ದವು. ಅದೇ ಸಮಯದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಇದೇ ದಶಕದಲ್ಲಿ ಭಾರತದ ಆರ್ಥಿಕತೆ ತಳ ಸೇರಿತ್ತು. ಜಾಗತಿಕ ವೇದಿಕೆಗಳಲ್ಲಿ ಭಾರತೀಯ ಧ್ವನಿಯು ತುಂಬಾ ದುರ್ಬಲಗೊಂಡಿತು. ಆ ಯುಗವನ್ನು 'ಮೌಕೆ ಮೇನ್ ಮುಸೀಬತ್' – ಅವಕಾಶಗಳಿಗೆ ಪ್ರತೀಕೂಲ ಕಾಲ ಎಂದು ಗುರುತಿಸಲಾಗಿದೆ ಎಂದರು.

ದೇಶವು ಇಂದು ಅಪಾರ ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತಿದೆ, ಅದರ ಕನಸುಗಳು ಮತ್ತು ಸಂಕಲ್ಪಗಳನ್ನು ನನಸಾಗಿಸುತ್ತಿದೆ. ಇದೀಗ ಇಡೀ ವಿಶ್ವವೇ ಅಪಾರ ಭರವಸೆಯ ಕಣ್ಣುಗಳಿಂದ ಭಾರತದತ್ತ ನೋಡುತ್ತಿದೆ. ಇದಕ್ಕೆ ಭಾರತದ ಸ್ಥಿರತೆ ಮತ್ತು ಇಲ್ಲಿರುವ ಅಪಾರ ಸಾಧ್ಯತೆಗಳೇ ಕಾರಣ. ಯುಪಿಎ ಆಡಳಿತವಿದ್ದ ಭಾರತವನ್ನು ‘ಕಳೆದುಹೋದ ದಶಕ’ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಜನರು ಪ್ರಸ್ತುತ ದಶಕವನ್ನು ‘ಭಾರತದ ದಶಕ’ ಎಂದು ಕರೆಯುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

ಭಾರತವು ಪ್ರಜಾಪ್ರಭುತ್ವದ ತಾಯಿ ಅಥವಾ ಮೂಲಬೇರು. ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ರಚನಾತ್ಮಕ ಟೀಕೆಗಳು ಅತ್ಯಗತ್ಯ. ಟೀಕೆಯು ‘ಶುದ್ಧಿ ಯಜ್ಞ’ (ಶುದ್ಧೀಕರಣ ಯಜ್ಞ) ಇದ್ದಂತೆ ಆದರೆ, ಕೆಲವರು ರಚನಾತ್ಮಕ ಟೀಕೆಗಳನ್ನು ಮಾಡದೆ, ಒತ್ತಾಯಪೂರ್ವಕ ಅಥವಾ ಬಲವಂತದ ಟೀಕೆಗಳಲ್ಲಿ ತೊಡಗುತ್ತಾರೆ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಕಳೆದ 9 ವರ್ಷಗಳಲ್ಲಿ, ರಚನಾತ್ಮಕ ಟೀಕೆಗಳ ಬದಲಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಬಲವಂತದ ಟೀಕಾಕಾರರನ್ನು ನಾವು ಹೊಂದಿದ್ದೇವೆ. ಇದೇ ಮೊದಲ ಬಾರಿಗೆ ನಾನಾ ಮೂಲ ಸೌಕರ್ಯಗಳನ್ನು ಅನುಭವಿಸುತ್ತಿರುವ ಜನರಿಗೆ ಇಂತಹ ಟೀಕೆಗಳು ಅಡ್ಡಿಯಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ನಾನು ರಾಜವಂಶದವನಾಗದೆ, 140 ಕೋಟಿ ಭಾರತೀಯರ ಕುಟುಂಬದ ಸದಸ್ಯನಾಗಿದ್ದೇನೆ. ಅದೇ 140 ಕೋಟಿ ಭಾರತೀಯರ ಆಶೀರ್ವಾದ ನನ್ನ 'ಸುರಕ್ಷಾ ಕವಚ'ವಾಗಿದೆ ಎಂದು ಪ್ರಧಾನಿ ತಿಳಿಸಿದರು.

ಸೌಲಭ್ಯವಂಚಿತರು ಮತ್ತು ನಿರ್ಲಕ್ಷಿತ ಜನರ ಅಭ್ಯುದಯಕ್ಕೆ ಸರ್ಕಾರ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ, ಸರ್ಕಾರದ ಯೋಜನೆಗಳ ದೊಡ್ಡ ಲಾಭವು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ದುರ್ಬಲ ವರ್ಗಗಳಿಗೆ ತಲುಪಿದೆ. ಭಾರತದ ನಾರಿಶಕ್ತಿಯನ್ನು ಬಲಪಡಿಸಲು ಸರ್ಕಾರ ಯಾವುದೇ ಪ್ರಯತ್ನಗಳನ್ನು ಬಿಟ್ಟಿಲ್ಲ. ಭಾರತ ಮಾತೆಯರು ಬಲಗೊಂಡಾಗ ಜನರು ಬಲಗೊಳ್ಳುತ್ತಾರೆ ಮತ್ತು ಜನರು ಬಲಗೊಂಡಾಗ ಅದು ಸಮಾಜವನ್ನು ಬಲಪಡಿಸುತ್ತದೆ, ಅದು ರಾಷ್ಟ್ರದ ಬಲವರ್ಧನೆಗೆ ಕಾರಣವಾಗುತ್ತದೆ ಎಂದರು. ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಸರ್ಕಾರ ಪರಿಹರಿಸಿದೆ ಮತ್ತು ಅವರ ಪ್ರಾಮಾಣಿಕತೆಯನ್ನು ಗೌರವಿಸಿದೆ. ಭಾರತದ ಸಾಮಾನ್ಯ ನಾಗರಿಕರು ಸಕಾರಾತ್ಮಕತೆಯಿಂದ ತುಂಬಿದ್ದಾರೆ ಎಂಬುದನ್ನು ಎತ್ತಿ ಹಿಡಿದ ಪ್ರಧಾನಿ, ಭಾರತೀಯ ಸಮಾಜವು ನಕಾರಾತ್ಮಕತೆ ಎದುರಿಸುವ ಅಪಾರ ಸಾಮರ್ಥ್ಯ ಹೊಂದಿದೆ. ಅದು ಎಂದಿಗೂ ಈ ನಕಾರಾತ್ಮಕತೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.

***


(Release ID: 1897615) Visitor Counter : 196