ಪ್ರಧಾನ ಮಂತ್ರಿಯವರ ಕಛೇರಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 21 ಅತಿ ದೊಡ್ಡ ಅನಾಮಧೇಯ ದ್ವೀಪಗಳಿಗೆ 21 ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರಿಡುವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ


ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮಾರಕ ನಿರ್ಮಾಣ: ನೇತಾಜಿಗೆ ಸಮರ್ಪಿತವಾದ ರಾಷ್ಟ್ರೀಯ ಸ್ಮಾರಕದ ಮಾದರಿ ಅನಾವರಣಗೊಳಿಸಿದ ಪ್ರಧಾನಿ

"ಇತಿಹಾಸವನ್ನು ಸೃಷ್ಟಿಸಿದಾಗ, ಭವಿಷ್ಯದ ಪೀಳಿಗೆಯು ಅದನ್ನು ಸ್ಮರಿಸುವುದು, ಮೌಲ್ಯೀಕರಿಸುವುದು ಮಾತ್ರವಲ್ಲ, ಅದರಿಂದ ನಿರಂತರ ಸ್ಫೂರ್ತಿಯನ್ನು ಪಡೆಯುತ್ತದೆ"

"ಭವಿಷ್ಯದ ಪೀಳಿಗೆಯು ಈ ದಿನವನ್ನು ʻಸ್ವಾತಂತ್ರ್ಯದ ಅಮೃತ ಕಾಲʼ ದ ಮಹತ್ವದ ಅಧ್ಯಾಯವಾಗಿ ನೆನಪಿಸಿಕೊಳ್ಳುತ್ತದೆ"

"ಅಪಾರ ನೋವಿನಿಂದ ಕೂಡಿದ ಆ ಅಭೂತಪೂರ್ವ ಉತ್ಸಾಹದ ದನಿಗಳು ಇಂದಿಗೂ ʻಸೆಲ್ಯುಲಾರ್ ಜೈಲಿʼನ ಕೊಠಡಿಗಳಿಂದ ಕೇಳಿಬರುತ್ತಿವೆ"

"ಬಂಗಾಳದಿಂದ ಹಿಡಿದು ದೆಹಲಿ, ಅಂಡಮಾನ್‌ವರೆಗೆ, ದೇಶದ ಪ್ರತಿಯೊಂದು ಭಾಗವೂ ನೇತಾಜಿಯ ಪರಂಪರೆಗೆ ವಂದಿಸುತ್ತದೆ ಮತ್ತು ಅದನ್ನು ಸತ್ಕರಿಸುತ್ತದೆ"

"ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ʻಕರ್ತವ್ಯ ಪಥʼದ ಮುಂದಿರುವ ನೇತಾಜಿಯ ಭವ್ಯ ಪ್ರತಿಮೆಯು ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ.

"ಸಮುದ್ರವು ವಿವಿಧ ದ್ವೀಪಗಳನ್ನು ಸಂಪರ್ಕಿಸುವಂತೆ, 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಭಾವನೆಯು ಭಾರತ ಮಾತೆಯ ಪ್ರತಿಯೊಂದು ಮಗುವನ್ನು ಒಂದುಗೂಡಿಸುತ್ತದೆ"

"ಸೇನೆಯ ಕೊಡುಗೆಯನ್ನು ಗುರುತಿಸುವುದರ ಜೊತೆಗೆ, ರಾಷ್ಟ್ರ ರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಸೈನಿಕರನ್ನು ವ್ಯಾಪಕವಾಗಿ ಗುರುತಿಸುವುದು ದೇಶದ ಕರ್ತವ್ಯವಾಗಿದೆ"

"ಈಗ ಜನರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇತಿಹಾಸವನ್ನು ತಿಳಿಯುವುದಕ್ಕಾಗಿ ಮತ್ತು ಇತಿಹಾಸವನ್ನು ಜೀವಿಸುವುದಕ್ಕಾಗಿ ಬರುತ್ತಿದ್ದಾರೆ"

Posted On: 23 JAN 2023 2:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ಅತಿ ದೊಡ್ಡ ಅನಾಮಧೇಯ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡುವ ಸಮಾರಂಭದಲ್ಲಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು. ಇದೇ ವೇಳೆ, ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೇತಾಜಿ ಅವರಿಗೆ ಸಮರ್ಪಿತವಾದ ʻರಾಷ್ಟ್ರೀಯ ಸ್ಮಾರಕʼದ ಮಾದರಿಯನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಪರಾಕ್ರಮ್ ದಿವಸ್ʼ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಈ ಸ್ಫೂರ್ತಿದಾಯಕ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇಂದು ಐತಿಹಾಸಿಕ ದಿನ ಎಂದು ಹೇಳಿದ ಪ್ರಧಾನಮಂತ್ರಿಯವರು, "ಇತಿಹಾಸವನ್ನು ಸೃಷ್ಟಿಸಿದಾಗ, ಭವಿಷ್ಯದ ಪೀಳಿಗೆಯು ಅದನ್ನು ನೆನಪಿಟ್ಟುಕೊಳ್ಳುವುದು ಮತ್ತು ಮೌಲ್ಯಮಾಪನ ಮಾಡುವುದು ಮಾತ್ರವಲ್ಲ, ಅದರಿಂದ ನಿರಂತರ ಸ್ಫೂರ್ತಿಯನ್ನು ಪಡೆಯುತ್ತದೆ," ಎಂದು ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳಿಗೆ ನಾಮಕರಣ ಸಮಾರಂಭ ಇಂದು ನಡೆಯುತ್ತಿದ್ದು, ಅವುಗಳನ್ನು ಈಗ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳಿಂದ ಗುರುತಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಂಗಿದ್ದ ದ್ವೀಪದಲ್ಲಿ ನೇತಾಜಿಯವರ ಜೀವನವನ್ನು ಗೌರವಿಸುವ ಹೊಸ ಸ್ಮಾರಕಕ್ಕೆ ಅಡಿಪಾಯ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ವೇಳೆ, ಈ ಸುದಿನವನ್ನು ಭವಿಷ್ಯದ ಪೀಳಿಗೆಯು ʻಸ್ವಾತಂತ್ರ್ಯದ ಅಮೃತ ಕಾಲʼದ ಮಹತ್ವದ ಅಧ್ಯಾಯವಾಗಿ ನೆನಪಿಸಿಕೊಳ್ಳುತ್ತದೆ ಎಂದು ಮೋದಿ ಹೇಳಿದರು. ನೇತಾಜಿ ಸ್ಮಾರಕ ಮತ್ತು ಹೊಸದಾಗಿ ಹೆಸರಿಸಲಾದ 21 ದ್ವೀಪಗಳು ಯುವ ಪೀಳಿಗೆಗೆ ನಿರಂತರ ಸ್ಫೂರ್ತಿಯ ಮೂಲವಾಗಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಭಾರತದ ಮೊದಲ ಸ್ವತಂತ್ರ ಸರಕಾರ ರಚನೆಯಾಗಿದ್ದೂ ಇಲ್ಲಿಯೇ ಎಂದು ಮಾಹಿತಿ ನೀಡಿದರು. ವೀರ್ ಸಾವರ್ಕರ್ ಮತ್ತು ಅವರಂತಹ ಅನೇಕ ನಾಯಕರು ಇದೇ ನೆಲದಲ್ಲಿ ದೇಶಕ್ಕಾಗಿ ತಪಸ್ಸು ಮತ್ತು ತ್ಯಾಗದ ಉತ್ತುಂಗವನ್ನು ಮುಟ್ಟಿದ್ದಾರೆ ಎಂದು ಅವರು ತಿಳಿಸಿದರು. "ಆ ಅಭೂತಪೂರ್ವ ಉತ್ಸಾಹದ ಧ್ವನಿಗಳು ಮತ್ತು ಅಪಾರ ನೋವಿನ ಧ್ವನಿಗಳು ಇಂದಿಗೂ ʻಸೆಲ್ಯುಲಾರ್ ಜೈಲಿʼನ ಕೊಠಡಿಗಳಿಂದ ಕೇಳಿಬರುತ್ತಿವೆ,ʼʼ ಎಂದು ಪ್ರಧಾನಿ ಹೇಳಿದರು. ಅಂಡಮಾನ್‌ನ ಅಸ್ಮಿತೆಯು ಸ್ವಾತಂತ್ರ್ಯ ಹೋರಾಟದ ನೆನಪುಗಳ ಬದಲು ಗುಲಾಮಗಿರಿಯ ಸಂಕೇತಗಳೊಂದಿಗೆ ನಂಟಾಗಿರುವ ಬಗ್ಗೆ ಪ್ರಧಾನಿ ವಿಷಾದಿಸಿದರು. "ನಮ್ಮ ದ್ವೀಪಗಳ ಹೆಸರುಗಳು ಸಹ ಗುಲಾಮಗಿರಿಯ ಮುದ್ರೆಯನ್ನು ಹೊಂದಿವೆ," ಎಂದರು. ನಾಲ್ಕು-ಐದು ವರ್ಷಗಳ ಹಿಂದೆ ಪೋರ್ಟ್‌ಬ್ಲೇರ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, "ಇಂದು ʻರಾಸ್ ದ್ವೀಪʼವು ʻನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪʼವಾಗಿ ಮಾರ್ಪಟ್ಟಿದೆ. ʻಹ್ಯಾವ್ಲಾಕ್ʼ ಮತ್ತು ʻನೀಲ್ʼ ದ್ವೀಪಗಳು ʻಸ್ವರಾಜ್ʼ ಮತ್ತು ʻಶಾಹೀದ್ʼ ದ್ವೀಪಗಳಾಗಿ ಮಾರ್ಪಟ್ಟಿವೆ,ʼʼ ಎಂದು ಮಾಹಿತಿ ನೀಡಿದರು. ʻಸ್ವರಾಜ್ʼ ಮತ್ತು ʻಶಾಹೀದ್ʼ ಎಂಬ ಹೆಸರುಗಳನ್ನು ನೇತಾಜಿ ಅವರೇ ನೀಡಿದ್ದರು.  ಆದರೆ ಸ್ವಾತಂತ್ರ್ಯದ ನಂತರ ನೇತಾಜಿಯವರ ಈ ಕಾರ್ಯಕ್ಕೆ ಯಾವುದೇ ಪ್ರಾಮುಖ್ಯತೆ ದೊರೆಯಲಿಲ್ಲ ಎಂದು ಅವರು ಹೇಳಿದರು. "ಆಜಾದ್ ಹಿಂದ್ ಫೌಜ್ ಸರ್ಕಾರʼ 75 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಮ್ಮ ಸರಕಾರವು ಈ ಹೆಸರುಗಳನ್ನು ಮರುಸ್ಥಾಪಿಸಿತು,ʼʼ ಎಂದು ಪ್ರಧಾನಿ ತಿಳಿಸಿದರು.

ಭಾರತದ ಸ್ವಾತಂತ್ರ್ಯದ ನಂತರ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಅದೇ ನೇತಾಜಿಯನ್ನು ಭಾರತದ 21ನೇ ಶತಮಾನವು ನೆನಪಿಸಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಗಮನಸೆಳೆದರು. ಅಂಡಮಾನ್‌ನಲ್ಲಿ ನೇತಾಜಿಯವರು ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಅದೇ ಸ್ಥಳದಲ್ಲಿ ಇಂದು ಹಾರಿಸಲಾದ ಭಾರತದ ಮುಗಿಲೆತ್ತರದ ರಾಷ್ಟ್ರ ಧ್ವಜವನ್ನು ಅವರು ಎತ್ತಿ ತೋರಿಸಿದರು. ಈ ಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ದೇಶವಾಸಿಗಳ ಹೃದಯದಲ್ಲಿ ಈ ಧ್ವಜವು ದೇಶಭಕ್ತಿಯನ್ನು ತುಂಬುತ್ತದೆ ಎಂದು ಹೇಳಿದರು. ನೇತಾಜಿ ಅವರ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಹೊಸ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕವು ಅಂಡಮಾನ್ ದ್ವೀಪಗಳಿಗೆ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಅವರು ಹೇಳಿದರು. 2019ರಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಉದ್ಘಾಟಿಸಲಾದ ನೇತಾಜಿ ವಸ್ತುಸಂಗ್ರಹಾಲಯವನ್ನು ಪ್ರಸ್ತಾಪಿಸಿದ ಪ್ರಧಾನಿ, ಆ ಸ್ಥಳವು ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದರು. ನೇತಾಜಿ ಅವರ 125ನೇ ಜನ್ಮ ದಿನಾಚರಣೆಯಂದು ಬಂಗಾಳದಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳನ್ನು ಮತ್ತು ಆ ದಿನವನ್ನು ʻಪರಾಕ್ರಮ್ ದಿವಸ್ʼ ಎಂದು ಘೋಷಿಸಿದ್ದನ್ನು ಪ್ರಧಾನಿ ಉಲ್ಲೇಖಿಸಿದರು. "ಬಂಗಾಳ, ದೆಹಲಿಯಿಂದ ಹಿಡಿದು  ಅಂಡಮಾನ್‌ವರೆಗೆ ದೇಶದ ಪ್ರತಿಯೊಂದು ಭಾಗವೂ ನೇತಾಜಿಯವರ ಪರಂಪರೆಗೆ ವಂದಿಸುತ್ತದೆ ಮತ್ತು ಸತ್ಕರಿಸುತ್ತದೆ," ಎಂದು ಪ್ರಧಾನಿ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಾರ್ಯಗಳನ್ನು ಸ್ವಾತಂತ್ರ್ಯಾನಂತರ ತಕ್ಷಣವೇ ಮಾಡಬೇಕಾಗಿತ್ತು. ಆದರೆ, ಕಳೆದ 8-9 ವರ್ಷಗಳಿಂದ ಈಚೆಗಷ್ಟೇ ಅವುಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಸ್ವತಂತ್ರ ಭಾರತದ ಮೊದಲ ಸರಕಾರವು 1943ರಲ್ಲಿ ದೇಶದ ಈ ಭಾಗದಲ್ಲಿ ರಚನೆಯಾಯಿತು ಮತ್ತು ಇಂದು ದೇಶವು ಅದನ್ನು ಹೆಚ್ಚು ಹೆಮ್ಮೆಯಿಂದ ಸ್ವೀಕರಿಸುತ್ತಿದೆ ಎಂದು ಅವರು ಒತ್ತಿಹೇಳಿದರು. ʻಆಜಾದ್ ಹಿಂದ್ ಸರ್ಕಾರ್‌ʼ ರಚನೆಯಾಗಿ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ದೇಶವು ನೇತಾಜಿ ಅವರಿಗೆ ಗೌರವ ಸಲ್ಲಿಸಿದೆ ಎಂದು ಪ್ರಧಾನಿ ಸ್ಮರಿಸದಿರು. ನೇತಾಜಿ ಅವರ ಜೀವನಕ್ಕೆ ಸಂಬಂಧಿಸಿದ ಕಡತಗಳನ್ನು ಬಹಿರಂಗಗೊಳಿಸಬೇಕು ಎಂಬ ದಶಕಗಳ ಬೇಡಿಕೆಯನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಈ ಕೆಲಸವನ್ನು ಪೂರ್ಣ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಗಿದೆ ಎಂದರು. "ಇಂದು, ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ʻಕರ್ತವ್ಯ ಪಥʼದ ಮುಂದೆ ನೇತಾಜಿಯವರ ಭವ್ಯ ಪ್ರತಿಮೆಯು ನಮ್ಮ ಕರ್ತವ್ಯಗಳನ್ನು ನೆನಪಿಸುತ್ತಿದೆ", ಎಂದು ಪ್ರಧಾನಿ ಉಲ್ಲೇಖಿಸಿದರು.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಮಹಾನ್‌ ವ್ಯಕ್ತಿಗಳನ್ನು ಸೂಕ್ತ ಸಮಯದಲ್ಲಿ ದೇಶದ ಜನರೊಂದಿಗೆ ಸಂಪರ್ಕಿಸಿದ ದೇಶಗಳು ಸಮರ್ಥ ಹಾಗೂ ಪರಸ್ಪರ ಹಂಚಲ್ಪಟ್ಟ ಆದರ್ಶಗಳನ್ನು ಸೃಷ್ಟಿಸುವಲ್ಲಿ ಸಫಲವಾಗಿವೆ. ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಓಟದಲ್ಲಿ ಅಂತಹ ದೇಶಗಳು ಬಹಳ ಮುಂದೆ ಸಾಗಿವೆ ಎಂದು ಪ್ರಧಾನಿ ಹೇಳಿದರು. ಭಾರತವು ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಒತ್ತಿ ಹೇಳಿದರು.

21 ದ್ವೀಪಗಳಿಗೆ ನಾಮಕರಣ ಮಾಡುವುದರ ಹಿಂದಿನ 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ವಿಶಿಷ್ಟ ಸಂದೇಶವನ್ನು ಒತ್ತಿ ಹೇಳಿದ ಪ್ರಧಾನಿಯವರು ಇದು ದೇಶಕ್ಕಾಗಿ ಮಾಡಿದ ತ್ಯಾಗಗಳ ಅಮರತ್ವ ಮತ್ತು ಭಾರತೀಯ ಸೇನೆಯ ಶೌರ್ಯ ಹಾಗೂ ಸಾಹಸದ ಸಂದೇಶವಾಗಿದೆ ಎಂದರು. 21 ಪರಮವೀರ ಚಕ್ರ ಪರಸ್ಕೃತರು ಭಾರತ ಮಾತೆಯನ್ನು ರಕ್ಷಿಸಲು ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಎಂದು ಒತ್ತಿಹೇಳಿದ ಪ್ರಧಾನಿ, ಭಾರತೀಯ ಸೇನೆಯ ಕೆಚ್ಚೆದೆಯ ಸೈನಿಕರು ವಿವಿಧ ರಾಜ್ಯಗಳಿಂದ ಬಂದವರು, ವಿಭಿನ್ನ ಭಾಷೆಗಳು ಮತ್ತು ಉಪಭಾಷೆಗಳನ್ನು ಮಾತನಾಡುತ್ತಿದ್ದರು ಮತ್ತು ವಿಭಿನ್ನ ಜೀವನಶೈಲಿಯನ್ನು ಹೊಂದಿದ್ದರು. ಆದರೂ ಭಾರತ ಮಾತೆಯ ಸೇವೆ ಮತ್ತು ತಾಯ್ನಾಡಿನ ಬಗ್ಗೆ ಅಚಲ ಭಕ್ತಿ ಅವರನ್ನು ಒಂದುಗೂಡಿಸಿತು ಎಂದು ಹೇಳಿದರು. "ಸಮುದ್ರವು ವಿವಿಧ ದ್ವೀಪಗಳನ್ನು ಸಂಪರ್ಕಿಸುವಂತೆ, 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಭಾವನೆಯು ಭಾರತ ಮಾತೆಯ ಪ್ರತಿಯೊಂದು ಮಗುವನ್ನು ಒಂದುಗೂಡಿಸುತ್ತದೆ," ಎಂದು ಪ್ರಧಾನಿ ಬಣ್ಣಿಸಿದರು. "ಮೇಜರ್ ಸೋಮನಾಥ್ ಶರ್ಮಾ, ಪಿರು ಸಿಂಗ್, ಮೇಜರ್ ಶೈತಾನ್ ಸಿಂಗ್‌ ಅವರಿಂದ ಹಿಡಿದು ಕ್ಯಾಪ್ಟನ್ ಮನೋಜ್ ಪಾಂಡೆ, ಸುಬೇದಾರ್ ಜೋಗಿಂದರ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ವೀರ್ ಅಬ್ದುಲ್ ಹಮೀದ್ ಮತ್ತು ಮೇಜರ್ ರಾಮಸ್ವಾಮಿ ಪರಮೇಶ್ವರನ್ವರೆಗೆ ಎಲ್ಲಾ 21 ʻಪರಮವೀರʼರಿಗೆ ಎಲ್ಲರಿಗೂ ಇದ್ದದ್ದು ಒಂದೇ ಸಂಕಲ್ಪ ಅದೆಂದರೆ - ʻರಾಷ್ಟ್ರ ಮೊದಲು! ಭಾರತ ಮೊದಲುʼ! ಈ ಸಂಕಲ್ಪವು ಈಗ ಈ ದ್ವೀಪಗಳ ಹೆಸರಿನ ರೂಪದಲ್ಲಿ ಅಮರವಾಗಿದೆ. ಕಾರ್ಗಿಲ್ ಯುದ್ಧದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹೆಸರಿನಲ್ಲಿ ಅಂಡಮಾನ್‌ನಲ್ಲಿನ ಒಂದು ಬೆಟ್ಟವನ್ನು ಸಮರ್ಪಿಸಲಾಗುತ್ತಿದೆ" ಎಂದು ಪ್ರಧಾನಿ ಮಾಹಿತಿ ನೀಡಿದರು. 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನಾಮಕರಣ ಕ್ರಮವು ಕೇವಲ ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರಿಗಷ್ಟೇ ಸಮರ್ಪತವಾಗಿಲ್ಲ, ಬದಲಿಗೆ ಭಾರತದ ಎಲ್ಲಾ ಸಶಸ್ತ್ರ ಪಡೆಗಳಿಗೂ ಸಮರ್ಪಿತವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಸೇನೆ ಯುದ್ಧಗಳನ್ನು ಎದುರಿಸಬೇಕಾಯಿತು ಎಂಬುದನ್ನು ಸ್ಮರಿಸಿದ ಪ್ರಧಾನಿ, ನಮ್ಮ ಸಶಸ್ತ್ರ ಪಡೆಗಳು ಎಲ್ಲ ರಂಗಗಳಲ್ಲೂ ತಮ್ಮ ಶೌರ್ಯವನ್ನು ಸಾಬೀತುಪಡಿಸಿವೆ ಎಂದರು. "ದೇಶಕ್ಕೆ ಸೇನೆಯ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಈ ದೇಶ ರಕ್ಷಣಾ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಸೈನಿಕರನ್ನು ವ್ಯಾಪಕವಾಗಿ ಗುರುತಿಸುವುದು ದೇಶದ ಕರ್ತವ್ಯವಾಗಿದೆ. ಇಂದು ದೇಶವು ಆ ಜವಾಬ್ದಾರಿಯನ್ನು ಪೂರೈಸುತ್ತಿದೆ. ಹೀಗಾಗಿಯೇ  ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳನ್ನು ಸೈನಿಕರು ಮತ್ತು ಸೈನ್ಯಗಳ ಹೆಸರಿನಲ್ಲಿ ಗುರುತಿಸಲಾಗುತ್ತಿದೆ,ʼʼ ಎಂದು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, “ಇದು ನೀರು, ಪ್ರಕೃತಿ, ಪರಿಸರ, ಪ್ರಯತ್ನ, ಶೌರ್ಯ, ಸಂಪ್ರದಾಯ, ಪ್ರವಾಸೋದ್ಯಮ, ಜ್ಞಾನೋದಯ ಮತ್ತು ಸ್ಫೂರ್ತಿಯ ಭೂಮಿಯಾಗಿದೆ,ʼʼಎಂದರು. ಇವುಗಳ ಸಾಮರ್ಥ್ಯವನ್ನು ಗುರುತಿಸುವ ಮತ್ತು ಅವಕಾಶಗಳನ್ನು ಗುರುತಿಸುವ ಅಗತ್ಯವನ್ನು ಒತ್ತಿ ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಆಗಿರುವ ಕೆಲಸಗಳನ್ನು ವಿಶೇಷವಾಗಿ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 2014ಕ್ಕೆ ಹೋಲಿಸಿದರೆ 2022ರಲ್ಲಿ ಅಂಡಮಾನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ ಎಂದರು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗ ಮತ್ತು ಆದಾಯದಲ್ಲಿ ಹೆಚ್ಚಳದ ಬಗ್ಗೆ ಅವರು ಗಮನ ಸೆಳೆದರು. ಅಂಡಮಾನ್‌ಗೆ ಸಂಬಂಧಿಸಿದ ಸ್ವಾತಂತ್ರ್ಯದ ಇತಿಹಾಸದ ಬಗ್ಗೆ ಕುತೂಹಲ ಹೆಚ್ಚುತ್ತಿರುವಂತೆಯೇ ಈ ಸ್ಥಳದ ಗುರುತು ಸಹ ವೈವಿಧ್ಯಮಯವಾಗುತ್ತಿದೆ ಎಂಬ ಅಂಶದ ಬಗ್ಗೆ ಪ್ರಧಾನಿ ಗಮನ ಸೆಳೆದರು. "ಈಗ ಜನರು ಇತಿಹಾಸವನ್ನು ತಿಳಿದುಕೊಳ್ಳಲು ಮತ್ತು ಇತಿಹಾಸವನ್ನು ಜೀವಿಸಲು ಇಲ್ಲಿಗೆ ಬರುತ್ತಿದ್ದಾರೆ," ಎಂದು ಅವರು ಬಣ್ಣಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀಮಂತ ಬುಡಕಟ್ಟು ಸಂಪ್ರದಾಯವನ್ನು ಉಲ್ಲೇಖಿಸಿದ ಪ್ರಧಾನಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಸ್ಮಾರಕ ನಿರ್ಮಾಣದಿಂದಾಗಿ ಮತ್ತು ಸೇನೆಯ ಶೌರ್ಯಕ್ಕೆ ಸಲ್ಲಿಸಲಾದ ಗೌರವದಿಂದಾಗಿ ಇಲ್ಲಿಗೆ ಭೇಟಿ ನೀಡಲು ಭಾರತೀಯರಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದು ಹೇಳಿದರು.

ದಶಕಗಳ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ, ವಿಶೇಷವಾಗಿ ವಿಕೃತ ಸೈದ್ಧಾಂತಿಕ ರಾಜಕೀಯದಿಂದಾಗಿ ದೇಶದ ಸಾಮರ್ಥ್ಯವನ್ನು ಗುರುತಿಸುವಲ್ಲಿ ಹಿಂದಿನ ಸರಕಾರದ ವೈಫಲ್ಯದ ಬಗ್ಗೆ ಪ್ರಧಾನಿ ವಿಷಾದಿಸಿದರು. "ಅದು ನಮ್ಮ ಹಿಮಾಲಯ ತಪ್ಪಲಿನ ರಾಜ್ಯಗಳಾಗಿರಲಿ, ವಿಶೇಷವಾಗಿ ಈಶಾನ್ಯ ರಾಜ್ಯಗಳಾಗಿರಲಿ ಅಥವಾ ಅಂಡಮಾನ್ ಮತ್ತು ನಿಕೋಬಾರ್‌ನಂತಹ ದ್ವೀಪ ಪ್ರದೇಶಗಳಾಗಿರಲಿ, ಅಂತಹ ಪ್ರದೇಶಗಳ ಅಭಿವೃದ್ಧಿಯನ್ನು ದಶಕಗಳಿಂದ ನಿರ್ಲಕ್ಷಿಸಲಾಗಿದೆ. ಏಕೆಂದರೆ ಇವುಗಳನ್ನು ದೂರದ, ಪ್ರವೇಶಿಸಲಾಗದ ಮತ್ತು ಅಪ್ರಸ್ತುತ ಪ್ರದೇಶಗಳು ಎಂದು ಪರಿಗಣಿಸಲಾಗಿದೆ," ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಭಾರತದ ವ್ಯಾಪ್ತಿಯಲ್ಲಿರುವ ದ್ವೀಪಗಳು ಮತ್ತು ಕಿರು ದ್ವೀಪಗಳ ಸಂಖ್ಯೆಯ ಲೆಕ್ಕವನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಎಂದು ಅವರು ಗಮನ ಸೆಳೆದರು. ಸಿಂಗಾಪುರ, ಮಾಲ್ಡೀವ್ಸ್ ಮತ್ತು ಸೀಶೆಲ್ಸ್‌ನಂತಹ ಅಭಿವೃದ್ಧಿ ಹೊಂದಿದ ದ್ವೀಪ ರಾಷ್ಟ್ರಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಈ ರಾಷ್ಟ್ರಗಳ ಭೌಗೋಳಿಕ ವಿಸ್ತೀರ್ಣ ಅಂಡಮಾನ್ ಮತ್ತು ನಿಕೋಬಾರ್‌ಗಿಂತ ಕಡಿಮೆ ಇದೆ. ಆದರೆ ತಮ್ಮ ಸಂಪನ್ಮೂಲಗಳ ಸ್ಬಳಕೆಯಿಂದ ಅವು ಹೊಸ ಎತ್ತರವನ್ನು ತಲುಪಿವೆ ಎಂದು ಒತ್ತಿ ಹೇಳಿದರು. ಭಾರತದ ದ್ವೀಪಗಳು ಸಹ ಇದೇ ರೀತಿಯ ಸಾಮರ್ಥ್ಯವನ್ನು ಹೊಂದಿವೆ ಮತ್ತು ದೇಶವು ಈ ದಿಕ್ಕಿನಲ್ಲಿ ಮುಂದುವರಿಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 'ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್' ಮೂಲಕ ಅಂಡಮಾನ್ ನಿಕೋಬಾರ್‌ ದ್ವೀಪವನ್ನು ವೇಗದ ಅಂತರ್ಜಾಲದೊಂದಿಗೆ ಸಂಪರ್ಕಿಸುವ ಉದಾಹರಣೆಯನ್ನು ನೀಡಿದ ಪ್ರಧಾನಿ, ಇದು ಡಿಜಿಟಲ್ ಪಾವತಿ ಮತ್ತು ಇತರ ಸಂಕೀರ್ಣ ಸೇವೆಗಳಿಗೆ ಅನುವು ಮಾಡಿದೆ, ಜೊತೆಗೆ ಪ್ರವಾಸಿಗರಿಗೆ ಪ್ರಯೋಜನಕಾರಿಯಾಗಿದೆ ಎಂದರು. "ಈಗ ದೇಶದಲ್ಲಿ ಪ್ರಾಕೃತಿಕ ಸಮತೋಲನ ಮತ್ತು ಆಧುನಿಕ ಸಂಪನ್ಮೂಲಗಳನ್ನು ಒಟ್ಟಿಗೆ ಮುಂದೆ ಕೊಂಡೊಯ್ಯಲಾಗುತ್ತಿದೆ", ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ ಹಿಂದಿನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ಈ ಪ್ರದೇಶವು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಹೊಸ ಪ್ರೇರಣೆ ನೀಡುತ್ತದೆ ಎಂದರು. "ನಾವು ಸಮರ್ಥವಾದ ಭಾರತವನ್ನು ನಿರ್ಮಿಸುತ್ತೇವೆ ಮತ್ತು ಆಧುನಿಕ ಅಭಿವೃದ್ಧಿಯ ಉತ್ತುಂಗವನ್ನು ತಲುಪುತ್ತೇವೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳುವ ಮೂಲಕ ಪ್ರಧಾನಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು. 

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ.ಜೋಶಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಅಂಡಮಾನ್-ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೆನಪನ್ನು ಗೌರವಿಸುವ ಸಲುವಾಗಿ, ʻರಾಸ್ ದ್ವೀಪʼವನ್ನು ʻನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪʼ ಎಂದು ಮರುನಾಮಕರಣ ಮಾಡಲಾಯಿತು. ʻನೀಲ್ ದ್ವೀಪʼ ಮತ್ತು ʻಹ್ಯಾವ್ಲಾಕ್ ದ್ವೀಪʼವನ್ನು ಕ್ರಮವಾಗಿ ʻಶಾಹೀದ್ ದ್ವೀಪʼ ಮತ್ತು ʻಸ್ವರಾಜ್ ದ್ವೀಪʼ ಎಂದು ಮರುನಾಮಕರಣ ಮಾಡಲಾಯಿತು.

ದೇಶದ ನಿಜ ಜೀವನದ ವೀರರಿಗೆ ಸೂಕ್ತ ಗೌರವ ಸಲ್ಲಿಸುವುದು ಸದಾ ಪ್ರಧಾನಿಯವರ ಅತ್ಯುನ್ನತ ಆದ್ಯತೆಯಾಗಿದೆ. ಇದೇ ಆಶಯದೊಂದಿಗೆ ಮುಂದುವರಿದು, ದ್ವೀಪ ಸಮೂಹದ 21 ಅತಿದೊಡ್ಡ ಅನಾಮಧೇಯ ದ್ವೀಪಗಳಿಗೆ 21 ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲು ಈಗ ನಿರ್ಧರಿಸಲಾಗಿದೆ. ಅನಾಮಧೇಯ ಅತಿದೊಡ್ಡ ದ್ವೀಪಕ್ಕೆ ಮೊದಲ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಡಲಾಗುವುದು, ಎರಡನೇ ಅತಿದೊಡ್ಡ ಅನಾಮಧೇಯ ದ್ವೀಪಕ್ಕೆ ಎರಡನೇ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು. ಈ ಕ್ರಮವು, ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಪರಮೋಚ್ಛ ತ್ಯಾಗ ಮಾಡಿದ ನಮ್ಮ ವೀರರಿಗೆ ಸಲ್ಲಿಸಲಾದ ಶಾಶ್ವತ ಗೌರವವಾಗಿದೆ.

ಈ ದ್ವೀಪಗಳಿಗೆ 21 ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗಿದೆ: ಮೇಜರ್ ಸೋಮನಾಥ ಶರ್ಮಾ; ಸುಬೇದಾರ್ ಮತ್ತು ಗೌರವಾನ್ವಿತ ಕ್ಯಾಪ್ಟನ್ (ನಂತರ ಲ್ಯಾನ್ಸ್ ನಾಯಕ್) ಕರಮ್ ಸಿಂಗ್, ಎಂ.ಎಂ; 2ನೇ ಲೆಫ್ಟಿನೆಂಟ್ ರಾಮ ರಾಘೋಬಾ ರಾಣೆ; ನಾಯಕ್ ಜಾದುನಾಥ್ ಸಿಂಗ್; ಕಂಪನಿ ಹವಿಲ್ದಾರ್ ಮೇಜರ್ ಪಿರು ಸಿಂಗ್; ಕ್ಯಾಪ್ಟನ್ ಜಿಎಸ್ ಸಲಾರಿಯಾ; ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ; ಸುಬೇದಾರ್ ಜೋಗಿಂದರ್ ಸಿಂಗ್; ಮೇಜರ್ ಶೈತಾನ್ ಸಿಂಗ್; ಸಿ.ಕ್ಯೂ.ಎಂ.ಎಚ್‌. ಅಬ್ದುಲ್ ಹಮೀದ್; ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್; ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ; ಮೇಜರ್ ಹೋಶಿಯಾರ್ ಸಿಂಗ್; 2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್; ಫ್ಲೈಯಿಂಗ್ ಆಫೀಸರ್ ನಿರ್ಮಲ್‌ಜಿತ್ ಸಿಂಗ್ ಸೆಖೋನ್; ಮೇಜರ್ ರಾಮಸ್ವಾಮಿ ಪರಮೇಶ್ವರನ್; ನೈಬ್ ಸುಬೇದಾರ್ ಬನಾ ಸಿಂಗ್; ಕ್ಯಾಪ್ಟನ್ ವಿಕ್ರಮ್ ಬಾತ್ರಾ; ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ; ಸುಬೇದಾರ್ ಮೇಜರ್ (ಆಗಿನ ರೈಫಲ್ ಮ್ಯಾನ್) ಸಂಜಯ್ ಕುಮಾರ್; ಮತ್ತು ಸುಬೇದಾರ್ ಮೇಜರ್ ನಿವೃತ್ತ (ಗೌರವಾನ್ವಿತ ಕ್ಯಾಪ್ಟನ್) ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್.

******



(Release ID: 1893039) Visitor Counter : 246