ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
6 ವಿಭಾಗಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 11 ಮಕ್ಕಳಿಗೆ ನಾಳೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2023 ಪ್ರದಾನ ಮಾಡಲಿರುವ ರಾಷ್ಟ್ರಪತಿ
ಪ್ರಶಸ್ತಿ ಪುರಸ್ಕೃತ ಮಕ್ಕಳೊಂದಿಗೆ ಜ.24ರಂದು ಪ್ರಧಾನ ಮಂತ್ರಿ ಸಂವಾದ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಪ್ರಶಸ್ತಿ ಪುರಸ್ಕೃತ ಮಕ್ಕಳನ್ನು ಅಭಿನಂದಿಸಿ, ಸಂವಾದ ನಡೆಸಲಿದ್ದಾರೆ, ಸಹಾಯಕ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ ಉಪಸ್ಥಿತರಿರುವರು
ಪ್ರಶಸ್ತಿ ಪುರಸ್ಕೃತರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 6 ಹುಡುಗರು ಮತ್ತು 5 ಹುಡುಗಿಯರು ಇದ್ದಾರೆ
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಿಗೆ ಪದಕ, 1 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ.
Posted On:
22 JAN 2023 10:48AM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ ಅಂದರೆ 2023 ಜನವರಿ 23ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸಾಧಾರಣ ಸಾಧನೆ ಮಾಡಿರುವ 11 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2023 ಪ್ರದಾನ ಮಾಡಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಜನವರಿ 24ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.
2023 ಜನವರಿ 24ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ. ಸ್ಮೃತಿ ಜುಬಿನ್ ಇರಾನಿ ಅವರು ಆಯಾ ವಿಭಾಗಗಳಲ್ಲಿ ಅಸಾಧಾರಣ ಸಾಧಿನೆ ಮಾಡಿ ಪ್ರಶಸ್ತಿ ವಿಜೇತರಾಗಿರುವ ಮಕ್ಕಳನ್ನು ಅಭಿನಂದಿಸಿ, ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ ಉಪಸ್ಥಿತರಿರುವರು.
ಭಾರತ ಸರ್ಕಾರವು ಮಕ್ಕಳ ಅಸಾಧಾರಣ ಸಾಧನೆ ಗುರುತಿಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (ಪಿಎಂಆರ್ ಬಿಪಿ) ಪ್ರಶಸ್ತಿ ನೀಡುತ್ತದೆ. 5ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ 6 ವಿಭಾಗಗಳಲ್ಲಿ ಅವರ ಶ್ರೇಷ್ಠ ಸಾಧನೆ ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ ಮತ್ತು ಸಂಸ್ಕೃತಿ, ಶೌರ್ಯ, ನಾವೀನ್ಯತೆ, ಪಾಂಡಿತ್ಯ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಾಡುವ ಅಸಾಧಾರಣ ಸಾಧನೆಗಳು ರಾಷ್ಟ್ರೀಯ ಮನ್ನಣೆಗೆ ಅರ್ಹವಾಗಿರುತ್ತವೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ(ಪಿಎಂಆರ್ ಬಿಪಿ) - 2023 ಪ್ರತಿ ವಿಜೇತರಿಗೆ ಪದಕ, 1 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ.
ಈ ವರ್ಷ, ಕಲೆ ಮತ್ತು ಸಂಸ್ಕೃತಿ(4), ಶೌರ್ಯ(1), ನಾವೀನ್ಯತೆ(2), ಸಮಾಜ ಸೇವೆ(1) ಮತ್ತು ಕ್ರೀಡಾ(3) ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ದೇಶದ ಎಲ್ಲಾ ಭಾಗಗಳಿಂದ ಆಯ್ಕೆಯಾದ 11 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗುವುದು.
*****
(Release ID: 1892870)
Visitor Counter : 235