ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮನಸ್ಸಿಗೆ ಘಾಸಿ ಮಾಡುವ  ದೃಶ್ಯಗಳು, ದುಃಖಕರ ಚಿತ್ರಗಳನ್ನು ಪ್ರಸಾರ ಮಾಡುವುದರ ವಿರುದ್ಧ ಟಿ.ವಿ.ವಾಹಿನಿಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಎಚ್ಚರಿಕೆ


ರಕ್ತ, ಮೃತ ದೇಹಗಳು, ದೈಹಿಕ ಹಲ್ಲೆಯ ಘೋರ ಚಿತ್ರಗಳು ಯಾತನಾದಾಯಕ ಮತ್ತು ಕಾರ್ಯಕ್ರಮ ಸಂಹಿತೆಗೆ  ವಿರುದ್ಧವಾದವು.  

ಸಾಮಾಜಿಕ ಮಾಧ್ಯಮದಿಂದ ತೆಗೆಯಲಾದ ಹಿಂಸಾತ್ಮಕ ವೀಡಿಯೊಗಳನ್ನು ವಾಹಿನಿಗಳು ಯಾವುದೇ ರೀತಿಯಲ್ಲಿ ಸಂಕಲನ ಮಾಡುತ್ತಿಲ್ಲ

ಟಿವಿ ವರದಿಗಳು ಮಕ್ಕಳ ಮೇಲೆ ಮಾನಸಿಕ ಪರಿಣಾಮವನ್ನು  ಉಂಟುಮಾಡುತ್ತವೆ, ಬಲಿಪಶುಗಳ ಖಾಸಗಿತನವನ್ನು ಅತಿಕ್ರಮಿಸುತ್ತವೆ.

Posted On: 09 JAN 2023 2:38PM by PIB Bengaluru

ಅಪಘಾತಗಳು, ಸಾವುಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ "ಒಳ್ಳೆಯ ಅಭಿರುಚಿ ಮತ್ತು ಸಭ್ಯತೆಯ" ನ್ನು ಸಂಪೂರ್ಣವಾಗಿ ಕಡೆಗಣಿಸುವ  ಹಿಂಸಾಚಾರದ ಘಟನೆಗಳನ್ನು ವರದಿ ಮಾಡುವುದಕ್ಕೆ ಸಂಬಂಧಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು ಎಲ್ಲಾ ದೂರದರ್ಶನ, ಟಿ.ವಿ. ವಾಹಿನಿಗಳಿಗೆ ಸಲಹಾಸೂಚಿಯನ್ನು  ನೀಡಿದೆ. ಟೆಲಿವಿಷನ್ ಚಾನೆಲ್‌ಗಳ ವಿವೇಚನೆಯ ಕೊರತೆಯ ಹಲವಾರು ನಿದರ್ಶನಗಳು ಸಚಿವಾಲಯದ ಗಮನಕ್ಕೆ ಬಂದ ನಂತರ ಈ ಸಲಹೆಯನ್ನು ನೀಡಲಾಗಿದೆ.

ಟೆಲಿವಿಷನ್ ಚಾನೆಲ್‌ಗಳು ಮಹಿಳೆಯರು ಸೇರಿದಂತೆ ವ್ಯಕ್ತಿಗಳ  ರಕ್ತಸಿಕ್ತವಾದ ಮೃತದೇಹಗಳು ಮತ್ತು ಗಾಯಾಳುಗಳ ಚಿತ್ರಗಳು/ವಿಡಿಯೋಗಳನ್ನು ತೋರಿಸಿವೆ. ಹಿರಿಯರನ್ನು, ಮಹಿಳೆಯರನ್ನು ದಯಾರಹಿತವಾಗಿ ಹಲ್ಲೆ ಮಾಡುವ, ಹೊಡೆಯುವ  ನಿಕಟ ದೃಶ್ಯಗಳನ್ನು (ಕ್ಲೋಸ್ ಶಾಟ್ )  ತೋರಿಸಿವೆ. ಶಿಕ್ಷಕರು ಮಕ್ಕಳಿಗೆ ಹೊಡೆಯುವ ದೃಶ್ಯಗಳನ್ನು, ಬಲಿಪಶುಗಳ ಆಕ್ರಂದನವನ್ನು  ನಿರಂತರವಾಗಿ ಪದೇ ಪದೇ ತೋರಿಸಿ  ಅದನ್ನು ಭೀಭತ್ಸವಾಗಿಸಿವೆ ಎಂದು ಸಚಿವಾಲಯ ತಿಳಿಸಿದೆ. ಚಿತ್ರಗಳನ್ನು ಮಸುಕುಗೊಳಿಸುವ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದೆ ಅಥವಾ ಅವುಗಳನ್ನು ಲಾಂಗ್ ಶಾಟ್ ಮೂಲಕ  ತೋರಿಸುವ ವಿಧಾನವನ್ನು ಅನುಸರಿಸದೆ ಅದನ್ನು ಇನ್ನಷ್ಟು ಘೋರವಾಗಿಸಿ ಹಲವಾರು ನಿಮಿಷಗಳವರೆಗೆ ಪದೇ ಪದೇ ತೋರಿಸಲಾಗುತ್ತಿದೆ. ಅಂತಹ ಘಟನೆಗಳನ್ನು ವರದಿ ಮಾಡುವ ವಿಧಾನವು ಪ್ರೇಕ್ಷಕರಿಗೆ ಅಸಹ್ಯಕರ ಮತ್ತು ದುಃಖಕರವಾಗಿದೆ ಎಂಬುದರತ್ತ  ಅದು ಪ್ರಮುಖವಾಗಿ ಬೆಟ್ಟು ಮಾಡಿದೆ. 

ಅಂತಹ ವರದಿಯು ವಿವಿಧ ಪ್ರೇಕ್ಷಕರ ಮೇಲೆ ಬೀರುವ ಪರಿಣಾಮವನ್ನು ಕೂಡಾ  ಸಲಹಾ ಸೂಚಿಯು  ಪ್ರಮುಖವಾಗಿ ಪ್ರಸ್ತಾಪಿಸಿದೆ. ಇಂತಹ ವರದಿಗಳು ಮಕ್ಕಳ ಮೇಲೆ ವ್ಯತಿರಿಕ್ತ ಮಾನಸಿಕ ಪರಿಣಾಮವನ್ನೂ ಬೀರುತ್ತವೆ ಎಂದು ಅದು ಹೇಳಿದೆ. ಗೌಪ್ಯತೆಯ/ಖಾಸಗಿತನದ ಅತಿಕ್ರಮಣದ ಒಂದು ನಿರ್ಣಾಯಕ ಸಮಸ್ಯೆಯೂ ಇದರಲ್ಲಡಗಿದೆ, ಅದು ಹಾನಿಕರ ಮತ್ತು ಮಾನನಷ್ಟದ ಅಂಶವನ್ನೂ ಒಳಗೊಳ್ಳಬಹುದಾಗಿದೆ ಎಂಬುದನ್ನೂ ಸಲಹೆಯು ಒತ್ತಿಹೇಳಿದೆ. ಟೆಲಿವಿಷನ್, ಸಾಮಾನ್ಯವಾಗಿ ಮನೆಗಳಲ್ಲಿ  ಕುಟುಂಬ ಸಮೇತವಾಗಿ  ವೀಕ್ಷಿಸುವ ವೇದಿಕೆಯಾಗಿದೆ - ವೃದ್ಧರು, ಮಧ್ಯವಯಸ್ಕರು, ಸಣ್ಣ ಮಕ್ಕಳು, ಇತ್ಯಾದಿಯಾಗಿ, ಮತ್ತು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಜನರ ಸಮೂಹ ಅದನ್ನು ವೀಕ್ಷಿಸುತ್ತಿರುತ್ತದೆ. ಅವರು ಪ್ರಸಾರಕರಲ್ಲಿ ಕೆಲವು ಜವಾಬ್ದಾರಿ ಮತ್ತು ಶಿಸ್ತಿನ ಪ್ರಜ್ಞೆಯನ್ನು ಆಶಿಸುತ್ತಾರೆ. ಕಾರ್ಯಕ್ರಮ ಸಂಹಿತೆ  ಮತ್ತು ಜಾಹೀರಾತು ಸಂಹಿತೆಯಲ್ಲಿ ತಿಳಿಸಿದ ಅಂಶಗಳು ಪರಿಪಾಲನೆಯಾಗುವುದರ ಬಗ್ಗೆ ಭರವಸೆ ಹೊಂದಿರುತ್ತಾರೆ.  
ಹೆಚ್ಚಿನ ಸಂದರ್ಭಗಳಲ್ಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗುತ್ತಿದೆ  ಮತ್ತು ಕಾರ್ಯಕ್ರಮ ಸಂಹಿತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸಂಪಾದಕೀಯ ವಿವೇಚನೆಯನ್ನು ಬಳಸದಿರುವುದು  ಹಾಗೂ ಮಾರ್ಪಾಡುಗಳಿಲ್ಲದೆ ಪ್ರಸಾರ ಮಾಡಲಾಗುತ್ತಿರುವುದನ್ನು  ಸಚಿವಾಲಯ ಗಮನಿಸಿದೆ.

ಇತ್ತೀಚೆಗೆ ಪ್ರಸಾರವಾದ ಇಂತಹ ಉದಾಹರಣೆಗಳ ಪಟ್ಟಿಯು ಕೆಳಕಂಡಂತಿದೆ:

1. 30.12.2022ರಂದು ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗನ ಯಾತನಾದಾಯಕ ಚಿತ್ರಗಳು ಮತ್ತು ವೀಡಿಯೊಗಳನ್ನು ಮಸುಕುಗೊಳಿಸದೆ ತೋರಿಸಲಾಗಿದೆ.

2. 28.08.2022ರಂದು  ವ್ಯಕ್ತಿಯೊಬ್ಬ ಮೃತ ವ್ಯಕ್ತಿಯ  ದೇಹವನ್ನು ಎಳೆದುಕೊಂಡು ಹೋಗುತ್ತಿರುವ ಮನಸ್ಸಿಗೆ ಘಾಸಿಯಾಗುವಂತಹ  ತುಣುಕನ್ನು ತೋರಿಸಲಾಗಿದೆ. ಅದರಲ್ಲಿ ಬಲಿಪಶುವಾದ ವ್ಯಕ್ತಿಯ ಮುಖದ ಸುತ್ತ ರಕ್ತ ಚೆಲ್ಲಲ್ಪಟಿದೆ. ಮತ್ತು ಆ ದೃಶ್ಯಾವಳಿ ಮುಖದ ಮೇಲೆ ಕೇಂದ್ರೀಕರಿಸಲ್ಪಟ್ಟಿದೆ. 

3. 06-07-2022ರಂದು  ಬಿಹಾರದ ಪಾಟ್ನಾದಲ್ಲಿ ಕೋಚಿಂಗ್ ಕ್ಲಾಸ್‌ರೂಮ್‌ನಲ್ಲಿ 5 ವರ್ಷದ ಬಾಲಕನಿಗೆ ಪ್ರಜ್ಞೆ ತಪ್ಪುವವರೆಗೂ ಶಿಕ್ಷಕನೊಬ್ಬ ಅಮಾನುಷವಾಗಿ ಥಳಿಸುವುದನ್ನು ತೋರಿಸಲಾಗಿದೆ. ಆ ದೃಶ್ಯಾವಳಿಯನ್ನು  ಅನ್ನು ಮ್ಯೂಟ್ ಮಾಡದೆ ಪ್ಲೇ ಮಾಡಲಾಗಿದೆ, ಇದರಲ್ಲಿ ಮಗು ದಯಾಪೂರ್ಣವಾಗಿ ಯಾಚಿಸುವ  ನೋವಿನ ಕೂಗು ಕೇಳುತ್ತದೆ ಮತ್ತು 09 ನಿಮಿಷಗಳ ಕಾಲ ಇದನ್ನು ತೋರಿಸಲಾಗಿದೆ.

4. 04-06-2022 ಪಂಜಾಬಿ ಗಾಯಕನ ಮೃತ ದೇಹದ ದುಃಖದಾಯಕ  ಚಿತ್ರಗಳನ್ನು ಮಸುಕುಗೊಳಿಸದೆ ತೋರಿಸಲಾಗಿದೆ

5. 25-05-2022 ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕರನ್ನು ದೊಣ್ಣೆಯಿಂದ ಕ್ರೂರವಾಗಿ ಥಳಿಸುವ ಮನಸ್ಸಿಗೆ ದುಃಖ ತರುವ  ಘಟನೆಯನ್ನು ತೋರಿಸಲಾಗಿದೆ. ವೀಡಿಯೋದಲ್ಲಿ, ವ್ಯಕ್ತಿ ಕರುಣೆಯಿಲ್ಲದೆ ಹುಡುಗರನ್ನು ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು. ಕ್ಲಿಪ್ ಅನ್ನು ಮಸುಕುಗೊಳಿಸದೆ ಅಥವಾ ಮ್ಯೂಟ್ ಮಾಡದೆ ಪ್ಲೇ ಮಾಡಲಾಗಿದೆ, ಇದರಲ್ಲಿ ಹುಡುಗರ ನೋವಿನ ಕೂಗು ಸ್ಪಷ್ಟವಾಗಿ ಕೇಳುತ್ತದೆ.

6. 16-05-2022ರಂದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ವಕೀಲರೊಬ್ಬರನ್ನು ಆಕೆಯ ನೆರೆಹೊರೆಯವರು ಅಮಾನುಷವಾಗಿ ಹಲ್ಲೆ ಮಾಡಿದ್ದನ್ನು , ಸಂಕಲನಗೊಳಿಸದೆ  ನಿರಂತರವಾಗಿ ತೋರಿಸಲಾಗಿದೆ.

7. 04-05-2022ರಂದು  ತಮಿಳುನಾಡಿನ ವಿರುದುನಗರ ಜಿಲ್ಲೆಯ ರಾಜಪಾಳ್ಯಂನಲ್ಲಿ ಒಬ್ಬ ವ್ಯಕ್ತಿ ತನ್ನ ಸ್ವಂತ ಸಹೋದರಿಯನ್ನು ಕೊಂದಿರುವುದನ್ನು ತೋರಿಸಲಾಗಿದೆ.

8. 01-05-2022 ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಐದು ಜನರು ಕ್ರೂರವಾಗಿ ದೊಣ್ಣೆಗಳಿಂದ ಥಳಿಸಿರುವುದನ್ನು ತೋರಿಸಲಾಗಿದೆ. 

9. 12-04-2022 ಅಪಘಾತದಲ್ಲಿ ಐದು ಮೃತ ದೇಹಗಳ ದುಃಖದ ದೃಶ್ಯಗಳನ್ನು ಮಸುಕುಗೊಳಿಸದೆ ನಿರಂತರವಾಗಿ ತೋರಿಸಲಾಗಿದೆ.

10. 11-04-2022ರಂದು  ಕೇರಳದ ಕೊಲ್ಲಂನಲ್ಲಿ ಒಬ್ಬ ವ್ಯಕ್ತಿ ತನ್ನ 84 ವರ್ಷದ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ಘಟನೆಯನ್ನು ತೋರಿಸಲಾಗಿದೆ, ಅಂಗಳದಲ್ಲಿ  ತನ್ನ ತಾಯಿಯನ್ನು ಎಳೆದುಕೊಂಡು ಹೋಗಿ ಥಳಿಸುತ್ತಿರುವುದನ್ನು ಸುಮಾರು 12 ನಿಮಿಷಗಳ ಕಾಲ ಮಸುಕುಗೊಳಿಸದೆ ನಿರಂತರವಾಗಿ ತೋರಿಸಲಾಗಿದೆ.

11. 07-04-2022ರಂದು  ಬೆಂಗಳೂರಿನಲ್ಲಿ ಮುದುಕರೊಬ್ಬರು ತನ್ನ ಮಗನನ್ನು ಸುಟ್ಟು ಹಾಕುವ ಅತ್ಯಂತ ಭಯಭೀತಿಯ ವೀಡಿಯೊದ ಕುರಿತಂತೆ ಹೇಳುವುದಾದರೆ. ಆ ಮುದುಕರು  ಬೆಂಕಿಕಡ್ಡಿಯನ್ನು ಹೊತ್ತಿಸಿ ತನ್ನ ಮಗನ ಮೇಲೆ ಎಸೆದು ಬೆಂಕಿಗೆ ಆಹುತಿಯಾಗುವ ಎಡಿಟ್ ಮಾಡದ ದೃಶ್ಯಗಳು ಪದೇ ಪದೇ ಪ್ರಸಾರವಾಯಿತು.

12. 22-03-2022ರಂದು  ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 14 ವರ್ಷದ ಅಪ್ರಾಪ್ತ ಬಾಲಕನನ್ನು ಥಳಿಸಿರುವ ವೀಡಿಯೊದ ಕುರಿತು ಹೇಳುವುದಾದರೆ, ಮಸುಕುಗೊಳಿಸದೆ ಅಥವಾ ಮ್ಯೂಟ್ ಮಾಡದೆ ಬಾಲಕನನ್ನು ಹೊತ್ತೊಯ್ದ ,ಮತ್ತು ಆತನನ್ನು  ನಿರ್ದಯವಾಗಿ ಹೊಡೆಯುತ್ತಿರುವಾಗ ಆತನು ಅಳುವುದು ಮತ್ತು ಮನವಿ ಮಾಡುವ ಮನಕಲಕುವ ದೃಶ್ಯವಿದೆ. 

ಇಂತಹ ಪ್ರಸಾರದ ಬಗ್ಗೆ ಕಳವಳ ಹೆಚ್ಚುತ್ತಿರುವ  ಮತ್ತು ಅದರಲ್ಲಿ ಒಳಗೊಂಡಿರುವ ಬಹಳ ದೊಡ್ಡ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದೂರದರ್ಶನ ಚಾನೆಲ್‌ಗಳ ಪ್ರೇಕ್ಷಕರ ಸ್ವಭಾವವನ್ನು ಗಮನದಲ್ಲಿಟ್ಟುಕೊಂಡು, ಸಾವು ಸೇರಿದಂತೆ ಅಪರಾಧ, ಅಪಘಾತಗಳು ಮತ್ತು ಹಿಂಸೆ ಸಹಿತ ಘಟನೆಗಳನ್ನು ವರದಿ ಮಾಡುವುದಕ್ಕೆ ಸಂಬಂಧಿಸಿ  ಕಾರ್ಯಕ್ರಮ ಸಂಹಿತೆಗೆ (ಪ್ರೋಗ್ರಾಂ ಕೋಡ್‌ಗೆ ) ಅನುಗುಣವಾಗಿ ಎಲ್ಲಾ ಖಾಸಗಿ ದೂರದರ್ಶನ ಚಾನೆಲ್‌ಗಳಿಗೆ ತಮ್ಮ ವ್ಯವಸ್ಥೆಗಳು ಮತ್ತು ವರದಿ ಮಾಡುವ ಅಭ್ಯಾಸಗಳನ್ನು ಸರಿಹೊಂದಿಸಿಕೊಳ್ಳಲು  ಸಚಿವಾಲಯವು ಸಲಹೆ ನೀಡಿದೆ.

*****



(Release ID: 1889890) Visitor Counter : 151