ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ -19 ಗೆ ಕುರಿತು ಸಾರ್ವಜನಿಕ ಆರೋಗ್ಯ ಪ್ರಕ್ರಿಯೆಯ ಸ್ಥಿತಿಗತಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸುವ  ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಅವರು ವಹಿಸಿದರು


ಕಟ್ಟುನಿಟ್ಟಾದ ಮುಂಜಾಗರೂಕತೆಯನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿ ಅವರು ಸಲಹೆ ನೀಡಿದರು
ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಅಧಿಕ ಸಂಖ್ಯೆಯಲ್ಲಿ ದೈನಂದಿನ ಪರೀಕ್ಷೆಯ ಮೇಲೆ ಕೇಂದ್ರೀಕರಿಸುವ ಮೂಲಕ ಮುನ್ನೆಚ್ಚರಿಕಾ ಅಗತ್ಯ ಕ್ರಮಗಳನ್ನು ನಡೆಸಲು  ಪ್ರಧಾನಮಂತ್ರಿ ಅವರು ನಿರ್ದೇಶಿಸಿದರು

ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ

ಮುಖಗವಸು ಧರಿಸುವುದು ಸೇರಿದಂತೆ ಸೂಕ್ತ ಕೋವಿಡ್ ಮುನ್ನೆಚ್ಚರಿಕಾ ನಡವಳಿಕೆಯನ್ನು ಅನುಸರಿಸಲು ಸಲಹೆ ನೀಡಲಾಗಿದೆ

ವಯಸ್ಸಾದ ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ಮುನ್ನೆಚ್ಚರಿಕಾ ಲಸಿಕೆ  ನೀಡಲು ನೀಡಲಾಗಿದೆ

ಆರೋಗ್ಯ ಕ್ಷೇತ್ರದ ಮುಂಚೂಣಿಯ ಕಾರ್ಯಕರ್ತರು ಮತ್ತು ಕರೋನಾ ಯೋಧರ ನಿಸ್ವಾರ್ಥ ಸೇವೆಯನ್ನು ಪ್ರಧಾನಮಂತ್ರಿಯವರು  ಶ್ಲಾಘಿಸಿದರು

Posted On: 22 DEC 2022 6:52PM by PIB Bengaluru

ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ, ಆರೋಗ್ಯ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ ನ ಸನ್ನದ್ಧತೆ, ಲಸಿಕೆ ಅಭಿಯಾನದ ಸ್ಥಿತಿಗತಿ , ಹೊಸ ಕೋವಿಡ್ -19 ರೂಪಾಂತರಗಳು, ಆರೋಗ್ಯದ ಪರಿಣಾಮಗಳು ಮತ್ತು ಸಾರ್ವಜನಿಕರ ಆರೋಗ್ಯ ಕಾಳಜಿ ಕುರಿತ ಇಂದು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದ್ದರು. ಇತ್ತೀಚೆಗೆ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಈ ಉನ್ನತ ಮಟ್ಟದ ಪರಿಶೀಲನಾ ಸಭೆಯು ಜರುಗಿತು.  

ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಸೇರಿದಂತೆ ಜಾಗತಿಕ ಕೋವಿಡ್-19 ಪರಿಸ್ಥಿತಿಯ ಕುರಿತು ನೀತಿ ಆಯೋಗ್ ಸದಸ್ಯ ಮತ್ತು ಆರೋಗ್ಯ ಕಾರ್ಯದರ್ಶಿ ಅವರಿಂದ ಸಮಗ್ರ ಮಾಹಿತಿಯ ಪ್ರಸ್ತುತಿಯನ್ನು ಮಾಡಲಾಯಿತು. ಡಿಸೆಂಬರ್ 22, 2022 ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ ದೈನಂದಿನ ಕೋವಿಡ್-19 ಪ್ರಕರಣಗಳು ದೇಶದಲ್ಲಿ 153 ಕ್ಕೆ ಮತ್ತು ಸಾಪ್ತಾಹಿಕ ಧನಾತ್ಮಕತೆಯು 0.14% ಕ್ಕೆ ಇಳಿದಿರುತ್ತದೆ ಹಾಗೂ ಕೋವಿಡ್‌ ಪ್ರಕರಣಗಳಲ್ಲಿ ಭಾರತವು ಸ್ಥಿರವಾದ ಇಳಿಕೆಯನ್ನು ಕಂಡಿದೆ ಎಂದು ಪ್ರಧಾನಮಂತ್ರಿ ಅವರಿಗೆ ಸಕಾಲಿಕ ಮಾಹಿತಿಯನ್ನು ವಿವರಿಸಲಾಯಿತು. ಆದರೆ, ಕಳೆದ 6 ವಾರಗಳಲ್ಲಿ ಜಾಗತಿಕವಾಗಿ ದೈನಂದಿನ ಸರಾಸರಿ ಪ್ರಕರಣಗಳು 5.9 ಲಕ್ಷ ವರದಿಯಾಗಿವೆ.

“ಕೋವಿಡ್ ಇನ್ನೂ ಮುಗಿದಿಲ್ಲ” ಎಂದು ಕೋವಿಡ್‌ ಕುರಿತು ಸ್ಪಷ್ಟ ಸಂದೇಶ ನೀಡಿದ ಪ್ರಧಾನಮಂತ್ರಿ ಅವರು, ಕಟ್ಟುನಿಟ್ಟಿನ ಮುಂಜಾಗರೂಕತೆಗೆ ಸಲಹೆ ನೀಡಿದರು. ವಿಶೇಷವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಪರೀಕ್ಷಣಾ  ಕಣ್ಗಾವಲು ಕ್ರಮವ್ಯವಸ್ಥೆಗಳನ್ನು ಇನ್ನೂ ಬಲಪಡಿಸಲು ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ನಿರ್ದೇಶನ ನೀಡಿದರು.

ಉನ್ನತ ಮಟ್ಟದ ಸನ್ನದ್ಧತೆಯಲ್ಲಿ ಔಷಧೀಯ ಉಪಕರಣಗಳು, ಪ್ರಕ್ರಿಯೆಗಳು ಮತ್ತು ಮಾನವ ಸಂಪನ್ಮೂಲಗಳ ವಿಷಯ ಸೇರಿದಂತೆ  ಎಲ್ಲಾ ಹಂತಗಳಲ್ಲಿ ಸಂಪೂರ್ಣ ಕೋವಿಡ್ ಮೂಲಸೌಕರ್ಯವನ್ನು ನಿರ್ವಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಸಭೆಗೆ ತಿಳಿಸಿದರು. ಕೋವಿಡ್ ನಿರ್ದಿಷ್ಟ ಸೌಲಭ್ಯಗಳನ್ನು ಪೂರ್ವಭಾವಿಯಾಗಿ ಆಕ್ಸಿಜನ್ ಸಿಲಿಂಡರ್‌ಗಳು, ಪಿ.ಎಸ್‌.ಎ. ಪ್ಲಾಂಟ್‌ಗಳು, ವೆಂಟಿಲೇಟರ್‌ಗಳು ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಾಲಿಕವಾಗಿ ಲೆಕ್ಕಪರಿಶೋಧಿಸಲು ಪ್ರಧಾನಮಂತ್ರಿ ಅವರು ರಾಜ್ಯಗಳಿಗೆ ಸಲಹೆ ನೀಡಿದರು.

ದೇಶದಲ್ಲಿ ಹಬ್ಬುತ್ತಿರುವ ಹೊಸ ರೂಪಾಂತರಗಳ ಸಕಾಲಿಕ ಪತ್ತೆಗೆ ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವ ಆರೋಗ್ಯ ಪರೀಕ್ಷೆಗಳನ್ನು ಹಾಗೂ ಜೀನೋಮಿಕ್ ಅನುಕ್ರಮ ಪ್ರಯತ್ನಗಳನ್ನು ಹೆಚ್ಚಿಸುವಂತೆ ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದಿನನಿತ್ಯದ ಆಧಾರದ ಮೇಲೆ ಜೀನೋಮ್ ಸೀಕ್ವೆನ್ಸಿಂಗ್‌ ಕುರಿತು ಗೊತ್ತುಪಡಿಸಿದ ಇನ್ಸಾಕೊಗ್‌  ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರೀಸ್  ಸಂಸ್ಥೆಯೊಂದಿಗೆ ಇನ್ನೂ ಅಧಿಕ ಸಂಖ್ಯೆಯ ಮಾದರಿಗಳನ್ನು ಹಂಚಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಯಿತು.

“ವಿಶೇಷವಾಗಿ ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ, ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸುವುದು ಸೇರಿದಂತೆ, ಕೋವಿಡ್ ಕುರಿತು ಸೂಕ್ತ ಮುನ್ನೆಚ್ಚರಿಕೆ ಮತ್ತು ನಡವಳಿಕೆಗಳನ್ನು ಎಲ್ಲಾ ಸಮಯದಲ್ಲೂ ಕಟ್ಟುನಿಟ್ಟಾಗಿ ಅನುಸರಿಸುವಂತೆ ಹಾಗೂ ವಿಶೇಷವಾಗಿ ಆರೋಗ್ಯ ಸಮಸ್ಯೆಯವರು, ದುರ್ಬಲರು ಮತ್ತು ವಯಸ್ಸಾದ ವರ್ಗದವರುಗಳಿಗೆ ಇಂತಹ ಮುನ್ನೆಚ್ಚರಿಕೆ ಪ್ರಮಾಣಗಳನ್ನು ಪ್ರತಿದಿನವೂ ಪಾಲಿಸಲು ಪ್ರೋತ್ಸಾಹಿಸಬೇಕು” ಎಂದು ಪ್ರಧಾನಮಂತ್ರಿಯವರು  ಈ ಸಂದರ್ಭದಲ್ಲಿ ಸಭೆಗೆ ನಿರ್ದೇಶನ ನೀಡಿದರು.

ಔಷಧಿಗಳು, ಲಸಿಕೆಗಳು ಮತ್ತು ಆಸ್ಪತ್ರೆಯ ಹಾಸಿಗೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಲಭ್ಯತೆ ಇದೆ ಎಂಬ ಮಾಹಿತಿಯನ್ನು ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ಅಗತ್ಯ ಔಷಧಿಗಳ ಲಭ್ಯತೆ ಮತ್ತು ಬೆಲೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಪ್ರಧಾನಮಂತ್ರಿಯವರು  ಸಲಹೆ ನೀಡಿದರು.  

ಸದಾ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಕಾರ್ಯಚಟುವಟಿಕೆಗಳು ಜಾಗತಿಕವಾಗಿ ಮೆಚ್ಚುಗೆ ಪಡೆದ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅದೇ ನಿಸ್ವಾರ್ಥ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಆರೋಗ್ಯ ಕಾರ್ಯಕರ್ತರಿಗೆ ಹೇಳಿದರು.

ಕೇಂದ್ರ ಗೃಹ ಸಚಿವ ಶ್ರೀ  ಅಮಿತ್ ಶಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವ  ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್,  ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವೆ ಶ್ರೀಮತಿ ಭಾರತಿ ಪ್ರವೀಣ್ ಪವಾರ್, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ, ನೀತಿ ಆಯೋಗದ ಸಿ.ಇ.ಒ. ಶ್ರೀ ಪರಮೇಶ್ವರನ್ ಅಯ್ಯರ್, ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ. ವಿ ಕೆ ಪಾಲ್, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ, ಪ್ರಧಾನಮಂತ್ರಿ ಕಾರ್ಯಾಲಯದ ಸಲಹೆಗಾರ ಶ್ರೀ ಅಮಿತ್ ಖರೆ, ಕೇಂದ್ರ ಗೃಹ ಇಲಾಖಾ ಕಾರ್ಯದರ್ಶಿ ಶ್ರೀ. ಎ.ಕೆ. ಭಲ್ಲಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್,  ಕೇಂದ್ರ ಮಾನವಸಂಪನ್ಮೂಲ ಇಲಾಖಾ ಕಾರ್ಯದರ್ಶಿ ಡಾ ರಾಜೀವ್ ಬಹ್ಲ್, ಕಾರ್ಯದರ್ಶಿ, ಫಾರ್ಮಾಸ್ಯುಟಿಕಲ್ಸ್ (ಸ್ವ/ನಿ) ಶ್ರೀ ಅರುಣ್ ಬರೋಕಾ ಮತ್ತು  ಇತರ ಹಿರಿಯ ಅಧಿಕಾರಿಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು.

*****



(Release ID: 1885870) Visitor Counter : 260