ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ


ಪರಿಸರವನ್ನು ರಕ್ಷಿಸುವ ಮೂಲಕ, ನಾವು ಅನೇಕ ಮಾನವ ಹಕ್ಕುಗಳನ್ನು ರಕ್ಷಿಸಬಹುದು: ರಾಷ್ಟ್ರಪತಿ ಮುರ್ಮು.

Posted On: 14 DEC 2022 2:25PM by PIB Bengaluru

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವಾದ ಇಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು (ಡಿಸೆಂಬರ್ 14, 2022) ನವದೆಹಲಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ, ರಾಷ್ಟ್ರೀಯ ಇಂಧನ ದಕ್ಷತೆಯ ನಾವಿನ್ಯತೆ ಪ್ರಶಸ್ತಿ ಮತ್ತು ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಅವರು 'ಇವಿ-ಯಾತ್ರಾ ಪೋರ್ಟಲ್' ಅನ್ನು ಸಹ ಉದ್ಘಾಟಿಸಿದರು.  ಹತ್ತಿರದ ಸಾರ್ವಜನಿಕ ಇವಿ ಚಾರ್ಜರ್ ಕೇಂದ್ರಕ್ಕೆ ತೆರಳಲು  ಪಥದರ್ಶನ ಮಾಡುವ ಸಲುವಾಗಿ 'ಇವಿ-ಯಾತ್ರಾ ಪೋರ್ಟಲ್' ಅನ್ನು ಇಂಧನ ದಕ್ಷತೆ ಶಾಖೆ ಅಭಿವೃದ್ಧಿಪಡಿಸಿದೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಭವಿಷ್ಯದ ಪೀಳಿಗೆ ಮಾಲಿನ್ಯ ಮುಕ್ತ ವಾತಾವರಣದಲ್ಲಿ ಉಸಿರಾಡುವುದನ್ನು, ಪ್ರಗತಿ ಸಾಧಿಸುವುದನ್ನು ಮತ್ತು ಆರೋಗ್ಯ ಪೂರ್ಣ ಜೀವನ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಿದೆ ಎಂದು ಹೇಳಿದರು. ಶುದ್ಧವಾದ ಗಾಳಿಯನ್ನು ಉಸಿರಾಡುವುದು ಮಾನವನ ಮೂಲಭೂತ ಹಕ್ಕು. ಪರಿಸರವನ್ನು ರಕ್ಷಿಸುವ ಮೂಲಕ, ನಾವು ಅನೇಕ ಮಾನವ ಹಕ್ಕುಗಳನ್ನು ರಕ್ಷಿಸಬಹುದು ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸವಾಲುಗಳನ್ನು ಎದುರಿಸುತ್ತಿರುವಾಗ, ಇಂಧನ ಸಂರಕ್ಷಣೆಯು ಜಾಗತಿಕ ಮತ್ತು ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಭಾರತದ ತಲಾ ಇಂಗಾಲದ ಹೊರಸೂಸುವಿಕೆ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆ ವಿಶ್ವದ ಸರಾಸರಿಯ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿದ್ದರೂ, ಜವಾಬ್ದಾರಿಯುತ ದೇಶವಾಗಿ ಭಾರತವು ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದೆ.

ಕಾಪ್-26ರಲ್ಲಿ ಭಾರತವು 'ಪರಿಸರಕ್ಕಾಗಿ ಜೀವನಶೈಲಿ' ಅಂದರೆ ಎಲ್.ಐ.ಎಫ್.ಇ. ಎಂಬ ಸಂದೇಶವನ್ನು ನೀಡಿದ್ದು, ವಿಶ್ವ ಸಮುದಾಯವು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದೆ ಎಂದು ರಾಷ್ಟ್ರಪತಿ ಹೇಳಿದರು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ, ನಮ್ಮ ಜೀವನಶೈಲಿ ಸದಾ ಲೈಫ್ ಸಂದೇಶದೊಂದಿಗೆ ಸ್ಥಿರವಾಗಿದೆ. ಪ್ರಕೃತಿಯನ್ನು ಗೌರವಿಸುವುದು, ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡದಿರುವುದು ಮತ್ತು ನೈಸರ್ಗಿಕ ಸಂಪತ್ತನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅಂತಹ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಅಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ವಿಶ್ವ ಸಮುದಾಯವನ್ನು ಪ್ರೇರೇಪಿಸಲು ಭಾರತವು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಜಿ-20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, ಜಿ-20 ರಾಷ್ಟ್ರಗಳು ವಿಶ್ವದ ಒಟ್ಟು ಜಿಡಿಪಿಗೆ ಶೇ.85 ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಶೇ.75ರಷ್ಟು ಕೊಡುಗೆ ನೀಡುತ್ತಿವೆ ಎಂದರು. ಇದರ ಜೊತೆಗೆ, ವಿಶ್ವದ ಜನಸಂಖ್ಯೆಯ ಶೇಕಡಾ 60 ರಷ್ಟು ಜನರು ಜಿ -20 ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತವು ತನ್ನ ಅಧ್ಯಕ್ಷೀಯ ಅವಧಿಯಲ್ಲಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯವಾಕ್ಯವನ್ನು 'ವಸುದೈವ ಕುಟುಂಬಕಂ' ಆದರ್ಶದ ಪ್ರಕಾರ ಅಳವಡಿಸಿಕೊಂಡಿದೆ ಮತ್ತು ನಾವು ಅದನ್ನು ವಿಶ್ವ ವೇದಿಕೆಯಲ್ಲಿಯೂ ಪ್ರಸಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಎಲ್ಲಾ ಪ್ರಶಸ್ತಿ ವಿಜೇತರನ್ನು, ವಿಶೇಷವಾಗಿ ಮಕ್ಕಳನ್ನು ರಾಷ್ಟ್ರಪತಿಯವರು ಶ್ಲಾಘಿಸಿದರು. ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯತೆ ಪ್ರಶಸ್ತಿ ವಿಜೇತರನ್ನು ಅವರ ನವೀನ ಚಿಂತನೆ ಮತ್ತು ಕಾರ್ಯವಿಧಾನಕ್ಕಾಗಿ ಶ್ಲಾಘಿಸಿದರು. ಅವರ ನಾವೀನ್ಯತೆಗಳನ್ನು ವ್ಯಾಪಕವಾಗಿ ಬಳಸಬೇಕು, ಇದರಿಂದ ಹೆಚ್ಚು ಹೆಚ್ಚು ಜನರು ಸ್ಫೂರ್ತಿ ಪಡೆಯಬಹುದು ಮತ್ತು ಪರಿಸರ ಸಂರಕ್ಷಣೆಗಾಗಿ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದರು. ನಾವು ಏನೇ ಮಾಡಿದರೂ ಅದು ಸದಾ ಪ್ರಕೃತಿಯ ಪರವಾಗಿರುತ್ತದೆ, ಪ್ರಕೃತಿಯ ವಿರುದ್ಧವಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳುವಂತೆ ಅವರು ಎಲ್ಲರನ್ನೂ ಆಗ್ರಹಿಸಿದರು. ಪ್ರಕೃತಿ ಮತ್ತು ಅಭಿವೃದ್ಧಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದರಲ್ಲಿ ಮಾನವ ಕಲ್ಯಾಣ ಅಡಗಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿಯವರ ಭಾಷಣ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ -

 *****


(Release ID: 1883463) Visitor Counter : 178