ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

9ನೇ ವಿಶ್ವ ಆಯುರ್ವೇದ ಕಾಂಗ್ರೆಸ್‌ ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು


ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಿದರು

" ಆಯುರ್ವೇದವು ಚಿಕಿತ್ಸೆಯನ್ನು ಮೀರಿದೆ ಮತ್ತು ಸ್ವಾಸ್ಥ್ಯ(ಆರೋಗ್ಯಕ್ಷೇಮ)ವನ್ನು ಉತ್ತೇಜಿಸುತ್ತದೆ"

"ಇಡೀ ಪ್ರಪಂಚವಿಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆರೋಗ್ಯ ಮತ್ತು ಸ್ವಾಸ್ಥ್ಯ(ಆರೋಗ್ಯಕ್ಷೇಮ)ಗಳ ಜಾಗತಿಕ ಹಬ್ಬವಾಗಿ ಆಚರಿಸುತ್ತಿದೆ"

" ರಾಷ್ಟ್ರೀಯ ಆಯುಷ್ ಸಂಶೋಧನಾ ಒಕ್ಕೂಟವನ್ನು ರಚಿಸುವ ದಿಕ್ಕಿನಲ್ಲಿ ನಾವು ಈಗ ಮುನ್ನಡೆಯುತ್ತಿದ್ದೇವೆ"

"8 ವರ್ಷಗಳ ಹಿಂದೆ ಸುಮಾರು ರೂ. 20000 ಕೋಟಿ ಗಳಷ್ಟಿದ್ದ ಆಯುಷ್ ಉದ್ಯಮವಿಂದು ಸುಮಾರು ರೂ. 1.5 ಲಕ್ಷ ಕೋಟಿಗಳಿಗೆ ತಲುಪಿದೆ"

"ಸಾಂಪ್ರದಾಯಿಕ ಔಷಧದ ಕ್ಷೇತ್ರವು ನಿರಂತರವಾಗಿ ವಿಸ್ತರಿಸುತ್ತಿದೆ ಮತ್ತು ನಾವು ಅದರ ಪ್ರತಿಯೊಂದು ಸಾಧ್ಯತೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು"

"ಒಂದು ಭೂಮಿ, ಒಂದು ಆರೋಗ್ಯ" ಎಂದರೆ ಆರೋಗ್ಯದ ಸಾರ್ವತ್ರಿಕ ದೃಷ್ಟಿಕೋನವಾಗಿದೆ"

Posted On: 11 DEC 2022 5:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್‌ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (ಎ.ಐ.ಐ.ಎ.) ಗೋವಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (ಎನ್. ಐ. ಯು. ಎಂ) ), ಘಾಜಿಯಾಬಾದ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪತಿ (ಎನ್.‌ ಐ. ಹೆಚ್.), ದೆಹಲಿ – ಎಂಬ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು. ಈ ಮೂರು ಸಂಸ್ಥೆಗಳು ಜನರಿಗಾಗಿ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಸಹಯೋಗಗಳನ್ನು ಮತ್ತಷ್ಟು ಬಲಪಡಿಸುತ್ತವೆ, ಮತ್ತು ಕೈಗೆಟುಕುವ ಆಯುಷ್ ಸೇವೆಗಳನ್ನು ಇನ್ನೂ ಸುಗಮಗೊಳಿಸುತ್ತವೆ. ಸುಮಾರು ರೂಪಾಯಿ 970 ಕೋಟಿಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸಂಸ್ಥೆಗಳು ಸುಮಾರು 500 ಆಸ್ಪತ್ರೆ ಹಾಸಿಗೆಗಳ ಸೇರ್ಪಡೆಯೊಂದಿಗೆ ಸುಮಾರು 400 ವಿದ್ಯಾರ್ಥಿಗಳ ವೈದ್ಯಕೀಯ ಸೇವೆಯನ್ನು ಹೆಚ್ಚಿಸಲಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್‌ ನಲ್ಲಿ ಭಾಗವಹಿಸಿದ ಜಗತ್ತಿನಾದ್ಯಂತದಿಂದ ವಿವಿಧಡೆಯ ಎಲ್ಲ ಪ್ರತಿನಿಧಿಗಳನ್ನು ಗೋವಾದ ಸುಂದರ ಭೂಮಿಗೆ ಸ್ವಾಗತಿಸಿದರು ಮತ್ತು ವಿಶ್ವ ಆಯುರ್ವೇದ ಕಾಂಗ್ರೆಸ್‌ ನ ಯಶಸ್ಸಿಗಾಗಿ ಪಾಲ್ಗೊಂಡ ಪ್ರತಿಯೊಬ್ಬರನ್ನು ಅಭಿನಂದಿಸಿದರು. “ಆಜಾದಿ ಕಾ ಅಮೃತ್ ಕಾಲ್ ಆಚರಣೆ ನಡೆಯುತ್ತಿರುವಾಗ ವಿಶ್ವ ಆಯುರ್ವೇದ ಕಾಂಗ್ರೆಸ್ ಅನ್ನು ಆಯೋಜಿಸಲಾಗುತ್ತಿದೆ. ಭಾರತದ ವೈಜ್ಞಾನಿಕ, ಜ್ಞಾನ ಮತ್ತು ಸಾಂಸ್ಕೃತಿಕ ಅನುಭವದ ಮೂಲಕ ಜಾಗತಿಕ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವುದು, ನಮ್ಮ ಸರ್ಕಾರದ ಅಮೃತ ಕಾಲದ ಪ್ರಮುಖ ನಿರ್ಣಯಗಳಲ್ಲಿ ಒಂದಾಗಿದೆ ಮತ್ತು ಆಯುರ್ವೇದವು ಅದಕ್ಕೆ ಬಲವಾದ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಜಿ-20 ಶೃಂಗಸಭೆಯ ಅಧ್ಯಕ್ಷೀಯತೆಯನ್ನು ಉಲ್ಲೇಖಿಸಿ, ಜಿ-20ರ ಸಂಕಲ್ಪ ವಿಷಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ದ ಬಗ್ಗೆ ಪ್ರಧಾನಮಂತ್ರಿಯವರು ತಿಳಿಸಿದರು.

ವಿಶ್ವದ 30ಕ್ಕೂ ಹೆಚ್ಚು ದೇಶಗಳು ಆಯುರ್ವೇದವನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿ ಎಂದು ಗುರುತಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು,  ಆಯುರ್ವೇದಕ್ಕೆ ವ್ಯಾಪಕ ಮನ್ನಣೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಹೆಚ್ಚು ಹಾಗೂ ನಿರಂತರ ಕೆಲಸ ಮಾಡಲು ಪ್ರಧಾನಮಂತ್ರಿಯವರು ಸಂಶೋಧಕರಿಗೆ ಕರೆ ನೀಡಿದರು. ಇಂದು ಉದ್ಘಾಟನೆಯಾದ ಮೂರು ರಾಷ್ಟ್ರೀಯ ಸಂಸ್ಥೆಗಳು ಆಯುಷ್ ಆರೋಗ್ಯ ವ್ಯವಸ್ಥೆಗೆ ಹೊಸ ಗತಿ ಮುತ್ತು ವೇಗವನ್ನು ನೀಡುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಆಯುರ್ವೇದದ ತಾತ್ವಿಕ ತಳಹದಿಯ ಮೇಲೆ ಮಾತನಾಡುತ್ತಾ ಪ್ರಧಾನಮಂತ್ರಿಯವರು, "ಆಯುರ್ವೇದವು ಚಿಕಿತ್ಸೆಯನ್ನು ಮೀರಿ ಹೋಗುತ್ತದೆ ಮತ್ತು ಸ್ವಾಸ್ಥ್ಯ(ಆರೋಗ್ಯಕ್ಷೇಮ)ವನ್ನು ಉತ್ತೇಜಿಸುತ್ತದೆ. ಜಗತ್ತು ವೈದ್ಯಕೀಯ ಪ್ರವೃತ್ತಿಗಳಲ್ಲಿ ವಿವಿಧ ಬದಲಾವಣೆಗಳನ್ನು ಅನುಭವಿಸಿದ ನಂತರ ಈ ಪ್ರಾಚೀನ ಜೀವನ ವಿಧಾನದತ್ತ ಬದಲಾಗುತ್ತಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. “ಭಾರತದಲ್ಲಿ ಈಗಾಗಲೇ ಆಯುರ್ವೇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳು ನಡೆಯುತ್ತಿವೆ” ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆಯುರ್ವೇದಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಉತ್ತೇಜಿಸಿದ ಮತ್ತು ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಗತಿಗೆ ಶ್ರಮಿಸಿದ ರೀತಿಯನ್ನು ವಿವರಿಸಿದರು. ಇದರ ಪರಿಣಾಮವಾಗಿ, ವಿಶ್ವ ಆರೋಗ್ಯ ಸಂಸ್ಥೆಯು ಸಾಂಪ್ರದಾಯಿಕ ಔಷಧಿಗಳಿಗಾಗಿ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವನ್ನು ಜಾಮ್‌ ನಗರದಲ್ಲಿ ಸ್ಥಾಪಿಸಿತು. ಪ್ರಸ್ತುತ ಸರ್ಕಾರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು “ಆಯುಷ್‌ ನ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ, ಇದು ಆಯುರ್ವೇದದ ಬಗ್ಗೆ ಉತ್ಸಾಹ ಮತ್ತು ನಂಬಿಕೆಯನ್ನು ಹೆಚ್ಚಿಸಲು ಕಾರಣವಾಯಿತು. ಏಮ್ಸ್ ಮಾದರಿಯಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ” ಎಂದು ಹೇಳಿದರು. ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಆಯುಷ್ ಆವಿಷ್ಕಾರ ಮತ್ತು ಹೂಡಿಕೆ ಶೃಂಗಸಭೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, “ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು  ಪೂರ್ಣ ಪ್ರಶಂಸೆ ವ್ಯಕ್ತಪಡಿಸಿದೆ. ವಿಶ್ವವು ಅಂತರರಾಷ್ಟ್ರೀಯ ಯೋಗ ದಿನವನ್ನು ಆರೋಗ್ಯ ಮತ್ತು ಸ್ವಾಸ್ಥ್ಯದ ಜಾಗತಿಕ ಹಬ್ಬವಾಗಿ ಆಚರಿಸುತ್ತಿದೆ” ಎಂದು ತಿಳಿಸಿದರು. "ಒಂದು ಕಾಲದಲ್ಲಿ ಯೋಗವನ್ನು ಕೀಳಾಗಿ ಕಾಣಲಾಗುತ್ತಿತ್ತು ಆದರೆ ಇಂದು ಅದು ಇಡೀ ಮಾನವಕುಲದ ಭರವಸೆ ಮತ್ತು ನಿರೀಕ್ಷೆಗಳ ಮೂಲವಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಅಂಗೀಕರಿಸಲು ವಿಳಂಬ ತೋರಿದ ವಿಶ್ವದ ಆರೋಗ್ಯ ಕ್ಷೇತ್ರದ ಬಗ್ಗೆ ಪ್ರಧಾನಮಂತ್ರಿಯವರು ವಿಷಾದ ವ್ಯಕ್ತಪಡಿಸಿದರು. ಮುಂದುವರಿದ ವಿಜ್ಞಾನವು ಪುರಾವೆಯನ್ನು ಮಾತ್ರ ಪವಿತ್ರ ಗ್ರಂಥವೆಂದು ಪರಿಗಣಿಸುತ್ತದೆ ಎಂದು ತಿಳಿಸಿದರು. ಆಯುರ್ವೇದವು 'ದತ್ತಾಂಶ ಆಧಾರಿತ ಸಾಕ್ಷ್ಯ' ದ ದಾಖಲೀಕರಣದ ಕಡೆಗೆ ನಿರಂತರವಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು, ನಾವು ಆಯುರ್ವೇದದ ಫಲಿತಾಂಶಗಳನ್ನು ಸಾಕಷ್ಟು ಹೊಂದಿದ್ದೇವೆ ಮತ್ತು ನಮ್ಮ ಪರವಾಗಿ ಗುಣಮುಖವಾದ ಪರಿಣಾಮಗಳನ್ನು ಸಾಕಷ್ಟು ಹೊಂದಿದ್ದೇವೆ, ಆದರೆ ನಾವು ಪುರಾವೆಗಳ ದಾಖಲಾತಿ ವಿಷಯದಲ್ಲಿ ಹಿಂದುಳಿದಿದ್ದೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಮೇಲಿನ ಪ್ರತಿ ಹಕ್ಕುಗಳನ್ನು ಪರಿಶೀಲಿಸಲು ನಮ್ಮ ವೈದ್ಯಕೀಯ ಡೇಟಾ, ಸಂಶೋಧನೆ ಮತ್ತು ನಿಯತಕಾಲಿಕೆಗಳನ್ನು ಒಟ್ಟುಗೂಡಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ನಿಟ್ಟಿನಲ್ಲಿ ಈತನಕ ಮಾಡಿದ ಹಲವಾರು ಕಾರ್ಯಗಳನ್ನು ವಿವರಿಸುತ್ತಾ ಪ್ರಧಾನಮಂತ್ರಿಯವರು, “ಸಾಕ್ಷ್ಯಾಧಾರಿತ ಸಂಶೋಧನಾ ದತ್ತಾಂಶಕ್ಕಾಗಿ ಆಯುಷ್ ಸಂಶೋಧನಾ ಪೋರ್ಟಲ್” ಅನ್ನು ರಚಿಸುವ ಬಗ್ಗೆ ಪ್ರಸ್ತಾಪಿಸಿದರು. ಇದುವರೆಗೆ ಸುಮಾರು 40 ಸಾವಿರ ಸಂಶೋಧನಾ ಅಧ್ಯಯನಗಳ ಮಾಹಿತಿ ಲಭ್ಯವಾಗಿದೆ ಮತ್ತು ಕರೋನಾ ಅವಧಿಯಲ್ಲಿ ನಾವು ಆಯುಷ್‌ ಗೆ ಸಂಬಂಧಿಸಿದ ಸುಮಾರು 150 ನಿರ್ದಿಷ್ಟ ಸಂಶೋಧನಾ ಅಧ್ಯಯನಗಳನ್ನು ನಡೆಸಿದ್ದೇವೆ. ನಾವು ಈಗ 'ರಾಷ್ಟ್ರೀಯ ಆಯುಷ್ ಸಂಶೋಧನಾ ಒಕ್ಕೂಟ'ವನ್ನು ರಚಿಸುವ ದಿಕ್ಕಿನಲ್ಲಿ ಮುನ್ನಡೆಯುತ್ತಿದ್ದೇವೆ” ಎಂದು ಸಂಶೋಧನಾ ಮಾಹಿತಿ ನೀಡಿದರು.

ಅಂತಿಮ ಬಳಕೆದಾರರ ಜ್ಞಾನದ ಕೊರತೆಯಿಂದ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಯಂತ್ರ ಅಥವಾ ಕಂಪ್ಯೂಟರ್‌ ಗೆ ಸಾದೃಶ್ಯವನ್ನು ಚಿತ್ರಿಸಿದ ಪ್ರಧಾನಮಂತ್ರಿಯವರು, “ಆಯುರ್ವೇದವು ಒಂದು ಜೀವನ ವಿಧಾನವಾಗಿದೆ. ದೇಹ ಮತ್ತು ಮನಸ್ಸು ಒಟ್ಟಿಗೆ ಮತ್ತು ಪರಸ್ಪರ ಸಾಮರಸ್ಯದಿಂದ ಹೇಗೆ ಆರೋಗ್ಯವಾಗಿರಬೇಕು ಎಂದು ಆಯುರ್ವೇದವು ನಮಗೆ ಕಲಿಸುತ್ತದೆ. ‘ಸರಿಯಾದ ನಿದ್ದೆ’ ಎಂಬುದು ಇಂದು ವೈದ್ಯಕೀಯ ವಿಜ್ಞಾನದ ಬಹುದೊಡ್ಡ ಚರ್ಚೆಯ ವಿಷಯವಾಗಿದೆ, ಆದರೆ ಭಾರತದ ಆಯುರ್ವೇದ ತಜ್ಞರು ಶತಮಾನಗಳ ಹಿಂದೆಯೇ ಈ ಬಗ್ಗೆ ವಿವರವಾಗಿ ಬರೆದಿದ್ದಾರೆ” ಎಂದು  ಹೇಳಿದರು

ಆಯುರ್ವೇದ ಕ್ಷೇತ್ರದಲ್ಲಿ ಗಿಡಮೂಲಿಕೆಗಳ ಕೃಷಿ, ಆಯುಷ್ ಔಷಧಿಗಳ ತಯಾರಿಕೆ ಮತ್ತು ಪೂರೈಕೆ ಮತ್ತು ಡಿಜಿಟಲ್ ಸೇವೆಗಳಂತಹ ಹೊಸ ಅವಕಾಶಗಳ ಕುರಿತು ಪ್ರಧಾನಮಮಂತ್ರಿಯವರು ವಿವರಿಸಿದರು. ಆಯುರ್ವೇದ ಕ್ಷೇತ್ರದಲ್ಲಿ ಎಲ್ಲರಿಗೂ ಇರುವ ಅವಕಾಶಗಳ ಕುರಿತು ಮಾತನಾಡಿದ ಪ್ರಧಾನಮಮಂತ್ರಿಯವರು, “ಈ ಪ್ರದೇಶಗಳಲ್ಲಿ ಆಯುಷ್ ಸ್ಟಾರ್ಟಪ್‌ಗಳಿಗೆ ದೊಡ್ಡ ಅವಕಾಶವಿದೆ. ಆಯುಷ್ ವಲಯದಲ್ಲಿ ಸುಮಾರು 40,000 ಎಂ.ಎಸ್‌.ಎಂ.ಇ.ಗಳು ಸಕ್ರಿಯವಾಗಿ ಪ್ರವರ್ತಿಸುತ್ತಿವೆ. 8 ವರ್ಷಗಳ ಹಿಂದೆ ಸುಮಾರು ರೂ. 20000 ಕೋಟಿ ಇದ್ದ ಆಯುಷ್ ಉದ್ಯಮ ಕ್ಷೇತ್ರ ಇಂದು ಸುಮಾರು ರೂ. 1.5 ಲಕ್ಷ ಕೋಟಿಗೆ ತಲುಪಿದೆ. ಇದರರ್ಥ 7-8 ವರ್ಷಗಳಲ್ಲಿ 7 ಪಟ್ಟು ಬೆಳವಣಿಗೆಯಾಗಿದೆ. ವಲಯದ ಜಾಗತಿಕ ಬೆಳವಣಿಗೆಯಾಗಿದೆ. ಮತ್ತು ಗಿಡಮೂಲಿಕೆ ಔಷಧಿ ಮತ್ತು ಮಸಾಲೆಗಳ ಪ್ರಸ್ತುತ ಜಾಗತಿಕ ಮಾರುಕಟ್ಟೆಯು ಸುಮಾರು 120 ಶತಕೋಟಿ ಡಾಲರ್ ಅಥವಾ ರೂಪಾಯಿ l0 ಲಕ್ಷ ಕೋಟಿಯಾಗಿದೆ” ಎಂದು ಹೇಳಿದರು. "ಸಾಂಪ್ರದಾಯಿಕ ಔಷಧದ ಈ ವಲಯವು ನಿರಂತರವಾಗಿ ವಿಸ್ತರಿಸುತ್ತಿದೆ ಮತ್ತು ನಾವು ಅದರ ಪ್ರತಿಯೊಂದು ಸಾಧ್ಯತೆಯ ಸಂಪೂರ್ಣ ಲಾಭವನ್ನು ಪಡೆಯಬೇಕು. ಗ್ರಾಮೀಣ ಆರ್ಥಿಕತೆಗಾಗಿ, ನಮ್ಮ ರೈತರಿಗೆ ಕೃಷಿಯ ಸಂಪೂರ್ಣ ಹೊಸ ಕ್ಷೇತ್ರವನ್ನು ತೆರೆಯಲಾಗುತ್ತಿದೆ, ಅದರಲ್ಲಿ ಅವರು ಉತ್ತಮ ಬೆಲೆಯನ್ನು ಸಹ ಪಡೆಯುತ್ತಾರೆ. ಇದರಲ್ಲಿ ಯುವಕರಿಗೆ ಸಾವಿರಾರು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ಪ್ರಧಾನಮಮಂತ್ರಿಯವರು ಹೇಳಿದರು.

ವಿಶೇಷವಾಗಿ ಗೋವಾದಂತಹ ರಾಜ್ಯಕ್ಕೆ ಆಯುರ್ವೇದ ಮತ್ತು ಯೋಗ ಕ್ಷೇತ್ರದಲ್ಲಿ ಪ್ರವಾಸೋದ್ಯಮದಲ್ಲಿನ ಅವಕಾಶಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಗೋವಾದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎ.ಐ.ಐ.ಎ) ಆ ದಿಕ್ಕಿನಲ್ಲಿ ಪ್ರಮುಖ ಆರಂಭವಾಗಿದೆ” ಎಂದು ಹೇಳಿದರು.

ಭಾರತವು ಜಗತ್ತಿಗೆ ಮುಂದಿಟ್ಟಿರುವ “ಒಂದು ಭೂಮಿ ಒಂದು ಆರೋಗ್ಯ” ಎಂಬ ಭವಿಷ್ಯದ ದೃಷ್ಟಿಕೋನವನ್ನು ಪ್ರಧಾನಮಂತ್ರಿಯವರು ವಿವರಿಸಿದರು. “'ಒಂದು ಭೂಮಿ, ಒಂದು ಆರೋಗ್ಯ' ಎಂದರೆ ಆರೋಗ್ಯದ ಸಾರ್ವತ್ರಿಕ ದೃಷ್ಟಿಕೋನವಾಗಿದೆ. ಅದು ಸಮುದ್ರ ಪ್ರಾಣಿಗಳಾಗಲಿ, ಕಾಡುಪ್ರಾಣಿಗಳಾಗಲಿ, ಮನುಷ್ಯರಾಗಲಿ ಅಥವಾ ಸಸ್ಯಗಳಾಗಲಿ, ಅವರುಗಳ ಆರೋಗ್ಯವು ಪರಸ್ಪರ ಸಂಬಂಧ ಹೊಂದಿದೆ. ಅವರನ್ನು ಒಂಟಿಯಾಗಿ ನೋಡುವ ಬದಲು ಸಮಗ್ರವಾಗಿ ನೋಡಬೇಕು. ಆಯುರ್ವೇದದ ಈ ಸಮಗ್ರ ದೃಷ್ಟಿಕೋನವು ಭಾರತದ ಸಂಪ್ರದಾಯ ಮತ್ತು ಜೀವನಶೈಲಿಯ ಭಾಗವಾಗಿದೆ” ಎಂದು ಹೇಳಿದರು. ಆಯುಷ್ ಮತ್ತು ಆಯುರ್ವೇದವನ್ನು ಒಟ್ಟಾರೆಯಾಗಿ ಮುಂದಕ್ಕೆ ಕೊಂಡೊಯ್ಯುವ ಮಾರ್ಗಸೂಚಿಯನ್ನು ಹೇಗೆ ರಚಿಸಬಹುದು ಎಂಬುದನ್ನು ಚರ್ಚಿಸಲು ಪ್ರಧಾನಮಂತ್ರಿಯವರು ಆಯುರ್ವೇದ ಕಾಂಗ್ರೆಸ್‌ಗೆ ಕರೆ ನೀಡಿದರು. 

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಗೋವಾದ ರಾಜ್ಯಪಾಲ ಶ್ರೀ.ಪಿ.ಎಸ್. ಶ್ರೀಧರನ್ ಪಿಳ್ಳೈ, ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬನಾದ ಸೋನೋವಾಲ್, ಕೇಂದ್ರ ಆಯುಷ್ ಖಾತೆಯ ರಾಜ್ಯ ಸಚಿವ ಡಾ. ಮುಂಜಪರ ಮಹೇಂದ್ರಭಾಯಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್, ವಿಜ್ಞಾನ ಭಾರತಿಯ ಅಧ್ಯಕ್ಷರಾದ ಡಾ ಶೇಖರ್ ಮಾಂಡೆ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಿಶ್ವ ಆಯುರ್ವೇದ ಕಾಂಗ್ರೆಸ್ ನ 9 ನೇ ಆವೃತ್ತಿಯ ವಿಷಯವು "ಒಂದು ಆರೋಗ್ಯಕ್ಕಾಗಿ ಆಯುರ್ವೇದ" ಆಗಿದೆ. ವಿಶ್ವ ಆಯುರ್ವೇದ ಕಾಂಗ್ರೆಸ್  ಮತ್ತು ಆರೋಗ್ಯ ಎಕ್ಸ್‌ಪೋದ 9 ನೇ ಆವೃತ್ತಿಯು 50 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 400 ಕ್ಕೂ ಹೆಚ್ಚು ಸಾಗರೋತ್ತರ ಪ್ರತಿನಿಧಿಗಳು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಯುರ್ವೇದದ ವಿವಿಧ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ..  

ಇಂದು ಉದ್ಘಾಟನೆಗೊಂಡ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಮೂರು ಸಂಸ್ಥೆಗಳೆಂದರೆ, ಗೋವಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ, ಘಾಜಿಯಾಬಾದ್ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್, ಮತ್ತು ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪತಿಗಳಾಗಿವೆ.  ಇವುಗಳು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಂಶೋಧನೆ ಮತ್ತು ಅಂತರಾಷ್ಟ್ರೀಯ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಜನರಿಗೆ ಕೈಗೆಟುಕುವ ಆಯುಷ್‌ ಔಷಧೀಯ ವ್ಯವಸ್ಥೆ- ಸೇವೆಗಳಿಗೆ ಇನ್ನೂ ಅನುಕೂಲವಾಗಲಿವೆ. ಸುಮಾರು ರೂ. 970 ಕೋಟಿಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸಂಸ್ಥೆಗಳು ಸುಮಾರು 500 ಆಸ್ಪತ್ರೆ ಹಾಸಿಗೆಗಳ ಸೇರ್ಪಡೆಯೊಂದಿಗೆ ಸುಮಾರು 400 ವೈದ್ಯಕೀಯ ವಿದ್ಯಾರ್ಥಿಗಳ ಸೇವನೆಯನ್ನು ಹೆಚ್ಚಿಸುತ್ತವೆ.  

*****


(Release ID: 1882598) Visitor Counter : 239