ಪ್ರಧಾನ ಮಂತ್ರಿಯವರ ಕಛೇರಿ

 ಗೋವಾ ರೋಜ್‌ಗಾರ್ ಮೇಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ಪಠ್ಯ

Posted On: 24 NOV 2022 12:15PM by PIB Bengaluru

 ನಮಸ್ಕಾರ,

ಇಂದು ಗೋವಾ ಸರ್ಕಾರವು ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇಂದು  ಗೋವಾ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನೇಕ ಯುವಕರಿಗೆ ಸಾಮೂಹಿಕ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ.ನೇಮಕಾತಿ ಪತ್ರ ಪಡೆದ ಎಲ್ಲ ಯುವಕರಿಗೆ ಮತ್ತು ಅವರ ಪೋಷಕರಿಗೆ ಅಭಿನಂದನೆಗಳು.  ಇನ್ನು ಕೆಲವೇ ತಿಂಗಳುಗಳಲ್ಲಿ ಗೋವಾ ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ತಿಳಿಸಿದ್ದು, ಇದು ಗೋವಾ ಪೊಲೀಸರನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ನಾಗರಿಕರ ಅದರಲ್ಲಿಯೂ  ವಿಶೇಷವಾಗಿ ಪ್ರವಾಸಿಗರ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಸ್ನೇಹಿತರೇ,

ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ನಿರಂತರವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ.  ಕೇಂದ್ರ ಸರ್ಕಾರವು ಉದ್ಯೋಗ ಮೇಳದ ಮೂಲಕ ಭಾರತ ಸರ್ಕಾರದಲ್ಲಿ ಪ್ರತಿ ತಿಂಗಳು ಸಾವಿರಾರು ಯುವಕರಿಗೆ ಉದ್ಯೋಗ ನೀಡುತ್ತಿದೆ.   ಬಿಜೆಪಿ ಸರ್ಕಾರ ಇರುವ ಕಡೆಗಳಲೆಲ್ಲಾ ಡಬಲ್ ಇಂಜಿನ್ ಸರ್ಕಾರಗಳು ಕೆಲಸ ಮಾಡುತ್ತಿದ್ದು, ಈ ಎಲ್ಲ ಬಿಜೆಪಿ ರಾಜ್ಯ ಸರ್ಕಾರಗಳು ತಮ್ಮದೇ ಮಟ್ಟದಲ್ಲಿ ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿರುವುದು ನನಗೆ ಖುಷಿ ತಂದಿದೆ.

ಸ್ನೇಹಿತರೇ,

ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ ಗೋವಾ ರಾಜ್ಯದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ನೀಡಿದ್ದು, ಸುಮಾರು 3000 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಪಾದಲ್ಲಿ ನಿರ್ಮಿಸಲಾದ ಹೊಸ ವಿಮಾನ ನಿಲ್ದಾಣವೂ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.  ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಗೋವಾದ ಸಾವಿರಾರು ಜನರು ಉದ್ಯೋಗ ಪಡೆದಿದ್ದಾರೆ.  ಅದೇ ರೀತಿ ಇಂದು ಗೋವಾದಲ್ಲಿ ನಡೆಯುತ್ತಿರುವ ಸಂಪರ್ಕ ಯೋಜನೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ಕೂಡ ಗೋವಾದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿವೆ.  ಗೋವಾದಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವುದರ ಜೊತೆಗೆ  ಸ್ವಯಂಪೂರ್ಣ ರಾಜ್ಯದ ನಿರ್ಮಾಣ ಇದರ ಸಂಕಲ್ಪವಾಗಿದೆ.  ಗೋವಾ ಪ್ರವಾಸೋದ್ಯಮ ಮಾಸ್ಟರ್ ಪ್ಲ್ಯಾನ್ ಮತ್ತು ನೀತಿಯ ಮೂಲಕ ರಾಜ್ಯ ಸರ್ಕಾರವು ಗೋವಾದ ಅಭಿವೃದ್ಧಿಗೆ ಹೊಸ ನೀಲನಕ್ಷೆಯನ್ನು ಸಹ ಸಿದ್ಧಪಡಿಸಿದೆ.  ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ಹೊಸ ಸಾಧ್ಯತೆಗಳನ್ನು ಸೃಜಿಸಲಾಗಿದೆ.

ಸ್ನೇಹಿತರೇ,

ಗೋವಾದ ಗ್ರಾಮೀಣ ಪ್ರದೇಶಗಳಿಗೆ ಆರ್ಥಿಕ ಬಲವನ್ನು ನೀಡಲು ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಉದ್ಯೋಗವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಭತ್ತ, ಹಣ್ಣು ಸಂಸ್ಕರಣೆ, ತೆಂಗು, ಸೆಣಬು, ಸಾಂಬಾರು ಪದಾರ್ಥಗಳನ್ನು ಉತ್ಪಾದಿಸುವ ರೈತರನ್ನು ಸ್ವಸಹಾಯ ಸಂಘಗಳಿಗೆ ಜೋಡಿಸಲಾಗುತ್ತಿದೆ.  ಈ ಎಲ್ಲ ಪ್ರಯತ್ನಗಳು ಗೋವಾದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೇ,

ಇಂದು ಗೋವಾದಲ್ಲಿ ನೇಮಕಾತಿ ಪತ್ರ ಪಡೆದಿರುವ ಯುವಕರಿಗೆ ಇನ್ನೊಂದು ವಿಷಯ ಹೇಳಬಯಸುತ್ತೇನೆ. ನಿಮ್ಮ ಜೀವನದ ಪ್ರಮುಖ 25 ವರ್ಷಗಳು ಈಗ ಪ್ರಾರಂಭವಾಗಲಿವೆ. ನೀವು ಗೋವಾದ ಅಭಿವೃದ್ಧಿಯೊಂದಿಗೆ 2047 ರ ನವಭಾರತದ ಗುರಿಯನ್ನು ಹೊಂದಿದ್ದೀರ, ಈ ಸಂಕಲ್ಪದೊಂದಿಗೆ  ಗೋವಾದ ಅಭಿವೃದ್ಧಿಗೆ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.  ನೀವೆಲ್ಲರೂ ಪೂರ್ಣ ಭಕ್ತಿ ಮತ್ತು ಸನ್ನದ್ಧತೆಯಿಂದ ನಿಮ್ಮ ಕರ್ತವ್ಯದ ಮಾರ್ಗವನ್ನು ಅನುಸರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ.

 ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.  ಧನ್ಯವಾದಗಳು.

*****



(Release ID: 1878786) Visitor Counter : 117