ಪ್ರಧಾನ ಮಂತ್ರಿಯವರ ಕಛೇರಿ

ಬಾಲಿಯಲ್ಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಸಿಂಗಾಪುರ್ ನ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿ

Posted On: 16 NOV 2022 1:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಿಂಗಾಪುರ್ ನ ಪ್ರಧಾನಮಂತ್ರಿ ಶ್ರೀ ಲೀ ಹ್ಸಿನ್ ಲೂಂಗ್ ಅವರನ್ನು ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿ ಮಾಡಿದರು. ಕಳೆದ ವರ್ಷ ರೋಮ್ನಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಲೀ ಅವರೊಂದಿಗಿನ ಭೇಟಿಯನ್ನು ಅವರು ನೆನಪಿಸಿಕೊಂಡರು.

ಇಬ್ಬರೂ ಪ್ರಧಾನ ಮಂತ್ರಿಗಳು ಭಾರತ ಮತ್ತು ಸಿಂಗಾಪುರ್  ನಡುವಿನ ಬಲವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತು ಸೆಪ್ಟೆಂಬರ್ 2022 ರಲ್ಲಿ ನವದೆಹಲಿಯಲ್ಲಿ ನಡೆದ ಭಾರತ ಮತ್ತು ಸಿಂಗಾಪುರ್ ಸಚಿವರ ದುಂಡುಮೇಜಿನ ಉದ್ಘಾಟನಾ ಅಧಿವೇಶನ ಸೇರಿದಂತೆ ನಿಯಮಿತ ಉನ್ನತ ಮಟ್ಟದ ಸಚಿವರ ಮತ್ತು ಸಾಂಸ್ಥಿಕ ಸಂವಾದಗಳ ಬಗ್ಗೆ ಪರಿಶೀಲಿಸಿದರು.

ಉಭಯ ದೇಶಗಳ ನಡುವೆ ವಿಶೇಷವಾಗಿ ಫಿನ್ಟೆಕ್, ನವೀಕರಣ ಸಾಧ್ಯ ಇಂಧನ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಹಸಿರು ಆರ್ಥಿಕತೆ, ಮೂಲಸೌಕರ್ಯ ಮತ್ತು ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮತ್ತು ಭಾರತದ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್, ಆಸ್ತಿ ನಗದೀಕರಣ ಯೋಜನೆ ಮತ್ತು ಗತಿ ಶಕ್ತಿ ಯೋಜನೆಗಳ ಲಾಭ ಪಡೆಯಲು ಪ್ರಧಾನಮಂತ್ರಿ  ಮೋದಿಯವರು ಸಿಂಗಾಪುರ್ ದೇಶಕ್ಕೆ  ಆಹ್ವಾನ ನೀಡಿದರು.

ಉಭಯ ನಾಯಕರು ಇತ್ತೀಚಿನ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳ ವಿನಿಮಯ ಮಾಡಿಕೊಂಡರು. ಭಾರತದ  'ಆಕ್ಟ್ ಈಸ್ಟ್ ಪಾಲಿಸಿ' ಯಲ್ಲಿ ಮತ್ತು 2021-2024ರ ಅವಧಿಯಲ್ಲಿ ಆಸಿಯಾನ್-ಭಾರತ ಸಂಬಂಧಗಳ ದೇಶದ ಸಂಯೋಜಕವಾಗಿ ಸಿಂಗಾಪುರ್ನ ಪಾತ್ರವನ್ನು  ಪ್ರಧಾನಮಂತ್ರಿ ಮೋದಿಯವರು ಶ್ಲಾಘಿಸಿದರು. ಭಾರತ-ಆಸಿಯಾನ್ ಬಹುಮುಖಿ ಸಹಕಾರವನ್ನು ಹೆಚ್ಚಿಸಲು ಒಗ್ಗೂಡಿ ಕೆಲಸ ಮಾಡುವ ಬಯಕೆಯನ್ನು ಉಭಯನಾಯಕರು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಮೋದಿಯವರು ಭವಿಷ್ಯಕ್ಕಾಗಿ ಪ್ರಧಾನಿ ಲೀ ಅವರಿಗೆ ಶುಭ ಹಾರೈಸಿದರು ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

*****



(Release ID: 1876425) Visitor Counter : 118