ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ಐ ಎಫ್ ಎಫ್ ಐ 53 ರಲ್ಲಿ 15 ಚಲನಚಿತ್ರಗಳು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ


ಐ ಎಫ್ ಎಫ್ ಐ 53 ರ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳಿವೆ

Posted On: 07 NOV 2022 10:37AM by PIB Bengaluru

ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದ 53 ನೇ ಆವೃತ್ತಿಯಲ್ಲಿ 15 ಚಲನಚಿತ್ರಗಳು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಈ ಸ್ಪರ್ಧಾ ವಿಭಾಗದಲ್ಲಿ ಕಲೆಯ ಸೌಂದರ್ಯ ಮತ್ತು ರಾಜಕೀಯದ ಹೊಸ ಪ್ರವೃತ್ತಿಯನ್ನು ಪ್ರತಿನಿಧಿಸುವ 12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳು ಇವೆ.

ಐ ಎಫ್ ಎಫ್ ಐ ನ 3 ನೇ ಆವೃತ್ತಿಯಲ್ಲಿ ಮೊದಲ ಗೋಲ್ಡನ್ ಪೀಕಾಕ್ ಪ್ರಶಸ್ತಿ ನೀಡಲಾಗಿದ್ದು, ಅಂದಿನಿಂದ ಇದು ಏಷ್ಯಾದಲ್ಲಿ ಹೆಚ್ಚು ಬೇಡಿಕೆಯಿರುವ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇಸ್ರೇಲಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ನಡಾವ್ ಲ್ಯಾಪಿಡ್, ಅಮೆರಿಕದ ನಿರ್ಮಾಪಕ ಜಿಂಕೊ ಗೊಟೊಹ್, ಫ್ರೆಂಚ್ ಚಲನಚಿತ್ರ ಸಂಕಲನಕಾರ ಪಾಸ್ಕೇಲ್ ಚವಾನ್ಸ್, ಫ್ರೆಂಚ್ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ವಿಮರ್ಶಕ ಮತ್ತು ಪತ್ರಕರ್ತ ಜೇವಿಯರ್ ಅಂಗುಲೊ ಬಾರ್ಟುರೆನ್ ಮತ್ತು ಭಾರತದವರೇ ಆದ ಚಲನಚಿತ್ರ ನಿರ್ದೇಶಕ ಸುದೀಪ್ತೋ ಸೇನ್ ಅವರಿರುವ ತೀರ್ಪುಗಾರರ ತಂಡವು ಈ ವರ್ಷದ ವಿಜೇತರನ್ನು ಆಯ್ಕೆ ಮಾಡುತ್ತದೆ.

ಈ ವರ್ಷದ ಸ್ಪರ್ಧೆಯಲ್ಲಿರುವ ಚಲನಚಿತ್ರಗಳು:

1. ಪರ್ಫೆಕ್ಟ್ ನಂಬರ್ (2022)

ಪೋಲಿಷ್ ಚಲನಚಿತ್ರ ನಿರ್ದೇಶಕ ಕ್ರಿಸ್ಜ್ಟೋಫ್ ಜಾನುಸ್ಸಿ ಅವರ ಪರ್ಫೆಕ್ಟ್ ನಂಬರ್, ನೈತಿಕತೆ ಮತ್ತು ಮರಣದ ಬಗ್ಗೆ ಆಲೋಚನೆಗಳನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಚಿತ್ರವಾಗಿದೆ. ಇಟಲಿ ಮತ್ತು ಇಸ್ರೇಲ್ನ ಸಹ-ನಿರ್ಮಾಣದ ಈ ಚಲನಚಿತ್ರವು ಯುವ ಗಣಿತಜ್ಞ ಮತ್ತು ಅವನ ದೂರದ ಸೋದರಸಂಬಂಧಿ ನಡುವಿನ ಸಂಬಂಧವನ್ನು ಪರಿಶೋಧಿಸುತ್ತದೆ ಮತ್ತು ಇಬ್ಬರ ನಡುವಿನ ಆಕಸ್ಮಿಕ ಭೇಟಿಯು ನಿಗೂಢ ವಿಶ್ವ ಕ್ರಮ, ಜೀವನದ ಅರ್ಥ ಮತ್ತು ಅದರ ಸಾಗುವಿಕೆಯ ಬಗ್ಗೆ ಆಳವಾದ ಧ್ಯಾನಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಹೇಳುತ್ತದೆ.

2. ರೆಡ್ ಶೂಸ್ (2022)

ಮೆಕ್ಸಿಕನ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಐಚೆಲ್ಮನ್ ಕೈಸರ್ ತಮ್ಮ ರೆಡ್ ಶೂಸ್ ಸಿನಿಮಾವನ್ನು ಎಲ್ಲಕ್ಕಿಂತ ಹೆಚ್ಚಾಗಿ ಭಾವನೆಗಳ ಪ್ರತಿಬಿಂಬ ಎಂದು ವಿವರಿಸುತ್ತಾನೆ. ಈ ಚಿತ್ರವು ಏಕಾಂಗಿ ಜೀವನ ನಡೆಸುವ ರೈತನು ತನ್ನ ಮಗಳ ಸಾವಿನ ಸುದ್ದಿಯನ್ನು ಸ್ವೀಕರಿಸುವ ಕುರಿತಾಗಿದೆ. ರೈತನು ತನ್ನ ಮಗಳ ದೇಹವನ್ನು ಮನೆಗೆ ತರಲು ಅಪರಿಚಿತ ಮತ್ತು ಬೇರೆಯದೇ ಆದ ಜಗತ್ತಿನೊಂದಿಗೆ ನಡೆಸುವ ಪ್ರಯತ್ನಗಳೊಂದಿಗೆ ಚಿತ್ರವು ಸಾಗುತ್ತದೆ. ಚಲನಚಿತ್ರವು ಅನೇಕ ಪ್ರಶಸ್ತಿಗಳ ನಾಮನಿರ್ದೇಶನ ಪಡೆದಿತ್ತು. ಇದು ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರಶಸ್ತಿಯ ಸ್ಪರ್ಧೆಯಲ್ಲಿತ್ತು.

3. ಎ ಮೈನರ್ (2022)

1970 ರ ದಶಕದಲ್ಲಿ ಇರಾನಿನಲ್ಲಿ ಹೊಸ ಅಲೆಯ ಸಿನಿಮಾಗಳ ತಯಾರರಕರಲ್ಲಿ ಒಬ್ಬರಾದ ದರಿಯುಶ್ ಮೆಹರ್ಜುಯಿ ಇರಾನಿನ ಸಿನೆಮಾ ಲೋಕಕ್ಕೆ ಚಿರಪರಿಚಿತರು. ಇವರು ತಮ್ಮ ಇತ್ತೀಚಿನ ಚಿತ್ರ ಎ ಮೈನರ್ ನೊಂದಿಗೆ ಐ ಎಫ್ ಎಫ್ ಐ ಗೆ ಮರಳಿದ್ದಾರೆ. ತಂದೆಯ ವಿರೋಧದ ನಡುವೆಯೂ ಸಂಗೀತಗಾರ್ತಿಯಾಗಬೇಕೆಂದು ಹಂಬಲಿಸುವ ಬಾಲಕಿಯ ಕುರಿತಾದ ಚಿತ್ರ ಇದು. ಒಂದೇ ಕುಟುಂಬದ ಸದಸ್ಯರ ನಡುವಿನ ಸಂಕೀರ್ಣ ಸಮೀಕರಣಗಳು, ಪೋಷಕರು ಮತ್ತು ಮಗುವಿನ ನಡುವಿನ ವಿಭಿನ್ನ ಆಕಾಂಕ್ಷೆಗಳು ಮತ್ತು ಸಂಮೋಹನಗೊಳಿಸುವ ಸಂಗೀತ ಈ ಸಿನಿಮಾದ ಪ್ರಮುಖ ಅಂಶಗಳಾಗಿವೆ.

4. ನೋ ಎಂಡ್ (2021)

ಇರಾನ್ ನ ಚಿತ್ರ ನೋ ಎಂಡ್ ಇರಾನ್ನಲ್ಲಿನ ರಹಸ್ಯ ಪೋಲೀಸರ ಕುಶಲತೆ ಮತ್ತು ಕುತಂತ್ರಗಳನ್ನು ಚಿತ್ರಿಸುತ್ತದೆ. ಪ್ರಾಮಾಣಿಕ ವ್ಯಕ್ತಿಯೊಬ್ಬ, ತನ್ನ ಮನೆಯನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ರಹಸ್ಯ ಪೋಲೀಸರನ್ನು ಒಳಗೊಂಡ ಸುಳ್ಳಿನಲ್ಲಿ ತೊಡಗುತ್ತಾನೆ. ನಿಜವಾದ ರಹಸ್ಯ ಪೊಲೀಸರು ಅಲ್ಲಿಗೆ ಬಂದಾಗ ವಿಷಯಗಳು ಜಟಿಲವಾಗುತ್ತವೆ. ಜಾಫರ್ ಪನಾಹಿ ಅವರ ಸಹಯೋಗಿಯಾದ ನಾಡರ್ ಸೀವರ್ ಅವರ ಈ ಎರಡನೇ ಚಿತ್ರವು ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ್ಯೂ ಕರೆಂಟ್ಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಈ ಚಿತ್ರಕ್ಕೆ ಜಾಫರ್ ಪನಾಹಿ ಸಲಹೆಗಾರ ಮತ್ತು ಸಂಕಲನಕಾರರಾಗಿದ್ದಾರೆ.

5. ಮೆಡಿಟರೇನಿಯನ್ ಫೀವರ್ (2022)

ಪ್ಯಾಲೇಸ್ಟಿನಿಯನ್-ಇಸ್ರೇಲಿ ಬರಹಗಾರ-ನಿರ್ದೇಶಕ ಮಹಾ ಹಾಜ್ನ ಮೆಡಿಟರೇನಿಯನ್ ಫೀವರ್ ಇಬ್ಬರು ಮಧ್ಯವಯಸ್ಕರನ್ನು ಕುರಿತ ಹಾಸ್ಯ ಸಿನಿಮಾವಾಗಿದೆ. ಕೇನ್ಸ್ನ ಅನ್ ಸರ್ಟೈನ್ ರಿಗಾರ್ಡ್ ಕಾಂಪಿಟೆಷನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದಿದೆ. ಮಹತ್ವಾಕಾಂಕ್ಷಿ ಲೇಖಕ ಮತ್ತು ವಂಚಕನೊಬ್ಬನ ನಡುವಿನ ಅಸಂಭವ ಪಾಲುದಾರಿಕೆಯ ಸುತ್ತ ಈ ಚಲನಚಿತ್ರವನ್ನು ಹೆಣೆಯಲಾಗಿದೆ.

6. ವೆನ್ ದ ವೇವ್ಸ್ ಆರ್ ಗಾನ್ (2022)

ಫಿಲಿಫೈನ್ಸ್ ನಿರ್ದೇಶಕ ಲಾವ್ ಡಯಾಜ್ ಅವರ ವೆನ್ ದ ವೇವ್ಸ್ ಆರ್ ಗಾನ್  ಚಿತ್ರವು ಫಿಲಿಪೈನ್ಸ್ತನಿಖಾಧಿಕಾರಿಯೊಬ್ಬರು ನೈತಿಕತೆಯ  ಸುಳಿಯಲ್ಲಿ ಸಿಲುಕುವ ಕಥೆಯಾಗಿದೆ. ಚಿತ್ರವು ಅವನ ಕರಾಳ ಭೂತಕಾಲವನ್ನು ಚರ್ಚಿಸುತ್ತದೆ, ಅವನು ತೀವ್ರ ಆತಂಕ ಮತ್ತು ತಪ್ಪಿತಸ್ಥ ಭಾವನೆಯಿಂದ ಹೊರಬರಲು ಪ್ರಯತ್ನಿಸುತ್ತಿರುವಾಗಲೂ ಅದು ಅವನನ್ನು ಕಾಡುತ್ತಲೇ ಇರುತ್ತದೆ. ತಮ್ಮದೇ ಆದ 'ಸಿನಿಮ್ಯಾಟಿಕ್ ಟೈಮ್' ಗೆ ಹೆಸರುವಾಸಿಯಾದ ಲಾವ್ ಡಯಾಜ್ (ಅವರ 2004 ರ ಚಲನಚಿತ್ರ, ಎವಲ್ಯೂಷನ್ ಆಫ್ ಎ ಫಿಲಿಪಿನೋ ಫ್ಯಾಮಿಲಿ, ಸುಮಾರು 11 ಗಂಟೆಗಳ ಅವಧಿಯದ್ದಾಗಿದೆ) ಈ ಚಲನಚಿತ್ರವನ್ನು ಕೇವಲ 3 ಗಂಟೆಗಳ ಮಾತ್ರ ಮುಗಿಸಿದ್ದಾರೆ.

7. ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್ (2022)

ಕೋಸ್ಟಾರಿಕಾ ಚಲನಚಿತ್ರ ನಿರ್ದೇಶಕಿ ವ್ಯಾಲೆಂಟಿನಾ ಮೌರೆಲ್ ತಮ್ಮ ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್ ಸಿನಿಮಾಕ್ಕೆ 2022 ರ ಲೊಕಾರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಚಿತ್ರವು ವಿಚ್ಛೇದಿತ ಪೋಷಕರನ್ನು ಹೊಂದಿರುವ 16 ವರ್ಷದ ಹುಡುಗಿ ಇವಾಳ ಕಥೆಯನ್ನು ಹೇಳುತ್ತದೆ, ಅವಳು ತನ್ನ ದೂರವಾದ ತಂದೆಯನ್ನು ಹಚ್ಚಿಕೊಂಡಿರುತ್ತಾಳೆ. ಅವಳು ತನ್ನ ತಂದೆಯನ್ನು ಮರುಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ, ಅವಳು ತನ್ನ ತಂದೆ ಮತ್ತು ತನ್ನ ಬಗ್ಗೆ ಆಶ್ಚರ್ಯಕರ ವಿಷಯಗಳನ್ನು ಕಂಡುಕೊಳ್ಳುತ್ತಾಳೆ. ಲೊಕಾರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರೆನಾಲ್ಡೊ ಅಮಿಯನ್ ಅತ್ಯುತ್ತಮ ನಟ ಮತ್ತು ಡೇನಿಯಲಾ ಮರಿನ್ ನವಾರೊ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

8. ಕೋಲ್ಡ್ ಆಸ್ ಮಾರ್ಬಲ್ (2022)

ಅಜೆರ್ಬೈಜಾನ್ ನಿರ್ದೇಶಕ ಆಸಿಫ್ ರುಸ್ತಮೋವ್ ಅವರ ಕೋಲ್ಡ್ ಆಸ್ ಮಾರ್ಬಲ್ ಒಂದು ಕ್ರೈಂ ಥ್ರಿಲ್ಲರ್ / ಸೈಕೋ-ಥ್ರಿಲ್ಲರ್ ಆಗಿದ್ದು, ತನ್ನ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಜೈಲಿನಲ್ಲಿದ್ದ ತಂದೆಯ ಅನಿರೀಕ್ಷಿತ ಮರಳುವಿಕೆಯ ಬಗೆಗಿನ ಚಿತ್ರವಾಗಿದೆ. ಬದಲಾಗುತ್ತಿರುವ ಸಮಾಜದ ವಿರೋಧಿ ಎಂದು ನಿರ್ದೇಶಕರು ಬಣ್ಣಿಸಿರುವ ಯುವಕನ ಮೇಲೆ ಚಿತ್ರ ಕೇಂದ್ರೀಕೃತವಾಗಿದೆ. ಸಂವೇದನಾಶೀಲ ವರ್ಣಚಿತ್ರಕಾರ ಮತ್ತು ಸಮಾಧಿಯ ಕೆತ್ತನೆ ಮಾಡುವ ನಾಯಕನು ಅಂತಿಮವಾಗಿ ತನ್ನ ತಂದೆ ತನ್ನ ತಾಯಿಯನ್ನು ಏಕೆ ಕೊಂದನು ಎಂದು ಕಂಡುಕೊಂಡಾಗ ಆಘಾತಕ್ಕೆ ಒಳಗಾಗುತ್ತಾನೆ.

9. ದಿ ಲೈನ್ (2022)

ಬರ್ಲಿನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿತ್ತು. ಉರ್ಸುಲಾ ಮೀಯರ್ ಅವರ ದಿ ಲೈನ್ ಸ್ವೀಕಾರ ಮತ್ತು ಕುಟುಂಬದ ಸೂಕ್ಷ್ಮ ಸಂಬಂಧಗಳನ್ನು ಕುರಿತ ಸಿನಿಮವಾಗಿದೆ. ಫ್ರೆಂಚ್-ಸ್ವಿಸ್ ತಯಾರಿಕೆಯ ಚಲನಚಿತ್ರವು ತಾಯಿ ಮತ್ತು ಮಗಳ ನಡುವಿನ ಪ್ರಕ್ಷುಬ್ಧ ಸಂಬಂಧವನ್ನು ಪರಿಶೋಧಿಸುತ್ತದೆ. ಸ್ವಿಟ್ಜರ್ಲೆಂಡ್ನಲ್ಲಿ ಚಿತ್ರೀಕರಿಸಲಾದ ಈ ಚಿತ್ರವು  ಮಾತೃತ್ವ ಮತ್ತು ಹಿಂಸೆಯ  ಸಂಯೋಜನೆಯನ್ನು ಒಳಗೊಂಡಿದೆ

10. ಸೆವೆನ್ ಡಾಗ್ಸ್ (2021)

43 ನೇ ಕೈರೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಸೆವೆನ್ ಡಾಗ್ಸ್, ಒಬ್ಬಂಟಿ ಮನುಷ್ಯನೊಬ್ಬ ತೀವ್ರ ಹಣದ ಸಮಸ್ಯೆಯ ನಡುವೆಯು ತನ್ನ ಏಳು ನಾಯಿಗಳನ್ನು ಸಾಕಲು ಹೆಣಗಾಡುವ ಚಿತ್ರವಾಗಿದೆ. ಈ ಚಿತ್ರವು ಅರ್ಜೆಂಟೀನಾದ ನಿರ್ದೇಶಕ ರೋಡ್ರಿಗೋ ಗೆರೆರೋ ಅವರ ನಾಲ್ಕನೇ ಸಿನಿಮಾವಾಗಿದೆ. ಕೇವಲ 80 ನಿಮಿಷಗಳ ಚಲನಚಿತ್ರವು ಮನುಷ್ಯ ಮತ್ತು ಅವನ ಸಾಕುಪ್ರಾಣಿಗಳ ನಡುವಿನ ಬಂಧವನ್ನು ಪರಿಶೋಧಿಸುತ್ತದೆ.

11. ಮಾರಿಯಾ : ದಿ ಓಷನ್ ಏಂಜೆಲ್ (2022)

ಶ್ರೀಲಂಕಾದ ನಿರ್ದೇಶಕ ಅರುಣಾ ಜಯವರ್ದನಾ ಅವರ ಮಾರಿಯಾ: ದಿ ಓಶಿಯನ್ ಏಂಜೆಲ್ ಗೋಲ್ಡನ್ ಪೀಕಾಕ್ ಮೇಲೆ ಕಣ್ಣಿಟ್ಟಿರುವ ಶ್ರೀಲಂಕಾದ ಎರಡನೇ ಚಲನಚಿತ್ರವಾಗಿದೆ, ಲೆಸ್ಟರ್ ಜೇಮ್ಸ್ ಪೆರೀಸ್ ಅವರ ಗಂಪೆರಾಲಿಯಾ ಈ ಪ್ರಶಸ್ತಿಯನ್ನು ಗೆದ್ದಿದೆ. ಮಾರಿಯಾ: ದಿ ಓಷನ್ ಏಂಜೆಲ್, ಸಮುದ್ರದಲ್ಲಿ ತೇಲುತ್ತಿರುವ ಲೈಂಗಿಕ ಆಟಿಕೆಗಳನ್ನು ನೋಡಿದ ನಂತರ ಅವರ ಜೀವನವು ತೊಂದರೆಗೊಳಗಾದ ಮೀನುಗಾರರನ್ನು ಕುರಿತಾದ ಚಲನಚಿತ್ರವಾಗಿದೆ. ಈ ಚಲನಚಿತ್ರ ನಿರ್ದೇಶಕರು ತಮ್ಮ 2011 ರ ಆಗಸ್ಟ್ ಡ್ರಿಝಲ್ ಸಿನಿಮಾ ಮೂಲಕ ಹೆಸರುವಾಸಿಯಾಗಿದ್ದಾರೆ

12. ದ ಕಾಶ್ಮೀರ ಫೈಲ್ಸ್ (2022)

ದ ಕಾಶ್ಮೀರ ಫೈಲ್ಸ್ 1990 ರಲ್ಲಿ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ನಿರ್ಗಮಿಸುವ ಸುತ್ತ ಕೇಂದ್ರೀಕೃತವಾದ ಹಿಂದಿ ಚಲನಚಿತ್ರವಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ, ತನ್ನ ಹೆತ್ತವರ ಅಕಾಲಿಕ ಮರಣದ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಹೊರಟ ನಾಯಕ ಯುವ ಕಾಲೇಜು ವಿದ್ಯಾರ್ಥಿ ಕೃಷ್ಣನ ಸುತ್ತ ಬೆಳೆಯುತ್ತದೆ,

13. ನೆಝೌಹ್ (2022)

2022 ರ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕ್ಷಕರ ಪ್ರಶಸ್ತಿ ವಿಜೇತ ಚಿತ್ರವಾದ ನೆಝೌಹ್, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿನ ಕುಟುಂಬದ ಕುರಿತದ್ದಾಗಿದೆ. ಅರೇಬಿಕ್ ಚಿತ್ರವು ಸಿರಿಯಾದಲ್ಲಿ ಮುತ್ತಿಗೆ ಹಾಕಿದ ಪ್ರದೇಶದಲ್ಲಿ ಉಳಿಯಲು ನಿರ್ಧರಿಸುವ ಕುಟುಂಬವನ್ನು ಕುರಿತು ಹೇಳುತ್ತದೆ. ತಮ್ಮ ನೆರೆಹೊರೆಯವರು ಬಾಂಬ್ ದಾಳಿಗೊಳಗಾದಾಗ ಮೊದಲ ಬಾರಿಗೆ ಸ್ವತಃ ತಾನೇ ಮನೆಯ ಹೊರಗೆ ಬದುಕು ಕಳೆದೆ ಎಂದು ನಿರ್ದೇಶಕಿ ಸೌದೆ ಕಾಡನ್ ಹೇಳಿದ್ದಾರೆ.

14. ದ ಸ್ಟೋರಿ ಟೆಲ್ಲರ್ (2022)

ಅನಂತ್ ಮಹದೇವನ್ ಅವರ ದಿ ಸ್ಟೋರಿಟೆಲ್ಲರ್ ಚಿತ್ರವು ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ ಪಾತ್ರವಾದ ತಾರಿಣಿ ಖುರೊವನ್ನು ಆಧರಿಸಿದೆ. ತಾರಿಣಿ ಖುರೊ ತನ್ನ ಕೆಲಸದಿಂದ ನಿವೃತ್ತಿ ಪಡೆದು ಕಥೆಗಾರ್ತಿಯಾಗಲು ನಿರ್ಧರಿಸಿದಾಗ ಹೇಗೆ ವಿಚಿತ್ರ ಸನ್ನಿವೇಶದಲ್ಲಿ ಸಿಲುಕುತ್ತಾಳೆ ಎಂಬುದು ಕಥೆಯಾಗಿದೆ. ಚಲನಚಿತ್ರವು 2022 ರ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಿಮ್ ಜಿ-ಸಿಯೋಕ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು, ಅಲ್ಲಿ ಅದು ಮೊದಲ ಬಾರಿಗೆ ಪ್ರದರ್ಶನಗೊಂಡಿತು.

15.ಕುರಂಗು ಪೆಡಲ್ (2022)

ರಾಸಿ ಅಳಗಪ್ಪನ್ ಅವರ ‘ಸೈಕಲ್’ಎಂಬ ಸಣ್ಣ ಕಥೆಯನ್ನು ಆಧರಿಸಿದ ನಿರ್ದೇಶಕ ಕಮಲಾಕಣ್ಣನ್ ಅವರ ಕುರಂಗು ಪೆಡಲ್ ಚಿತ್ರವು, ತನ್ನ ತಂದೆಗೆ ಕಲಿಸಲು ಸಾಧ್ಯವಾಗದಿದ್ದರೂ ಸಹ ಶಾಲಾ ಹುಡುಗನೊಬ್ಬ ಸೈಕಲ್ ಕಲಿಯಲು ಬಯಸುತ್ತಾನೆ. ಗ್ರಾಮೀಣ ಪರಿಸರದ ನಿರೂಪಣೆಯು ಮಕ್ಕಳನ್ನು ಒಳಗೊಂಡಿದೆ. ಈ ಚಲನಚಿತ್ರದ ನಿರ್ದೇಶಕರು ತಮ್ಮ 2012 ರ ಮಧುಬಾನಕಡೈ ಚಿತ್ರದಿಂದಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

****



(Release ID: 1874256) Visitor Counter : 207