ಪ್ರಧಾನ ಮಂತ್ರಿಯವರ ಕಛೇರಿ

ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ(ಶಾಖೆಗಳ) ಸಮರ್ಪಣಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ 

Posted On: 16 OCT 2022 3:26PM by PIB Bengaluru

ಇಲ್ಲಿ ಉಪಸ್ಥಿತರಿರುವ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳು, ಆರ್‌ಬಿಐ ಗವರ್ನರ್, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿರುವ ಸಚಿವರು, ಅರ್ಥಶಾಸ್ತ್ರಜ್ಞರು, ಎಲ್ಲಾ ಹಣಕಾಸು ತಜ್ಞರು, ಬ್ಯಾಂಕಿಂಗ್ ತಜ್ಞರು, ಇತರೆ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!

ದೇಶಾದ್ಯಂತ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಉದ್ಘಾಟನೆ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದು ದೇಶವು ಮತ್ತೊಮ್ಮೆ ಡಿಜಿಟಲ್ ಇಂಡಿಯಾದ ನೈಜ ಸಾಮರ್ಥ್ಯವನ್ನು ನೋಡುತ್ತಿದೆ. ಇಂದು ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು(ಶಾಖೆಗಳು) ಆರಂಭವಾಗಿವೆ. ಈ ಕಾರ್ಯಕ್ರಮ, ನಮ್ಮ ಬ್ಯಾಂಕಿಂಗ್ ವಲಯ ಮತ್ತು ಆರ್‌ಬಿಐಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ.
 
ಸ್ನೇಹಿತರೆ,

 

ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಭಾರತದ ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿವೆ. ದೇಶವು ಈಗಾಗಲೇ ಅಂತಹ ಘನ ಉದ್ದೇಶದೆಡೆಗೆ ಚಲಿಸುತ್ತಿದೆ. ಇದು ಅಂತಹ ಒಂದು ವಿಶೇಷ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ಇದು 'ಕನಿಷ್ಠ ಡಿಜಿಟಲ್ ಮೂಲಸೌಕರ್ಯ'ದೊಂದಿಗೆ ಗರಿಷ್ಠ ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತದೆ. ಈ ಸೇವೆಗಳು ಕಾಗದದ ಕೆಲಸಗಳಿಂದ ಮತ್ತು ರಗಳೆಗಳಿಂದ ಮುಕ್ತವಾಗಿರುತ್ತವೆ ಮತ್ತು ಹಿಂದೆಂದಿಗಿಂತಲೂ ಸುಲಭವಾಗಿರುತ್ತದೆ. ಅಂದರೆ, ಇದು ಅನುಕೂಲಕ್ಕಾಗಿ ಮಾತ್ರವಲ್ಲದೆ ಬಲವಾದ ಡಿಜಿಟಲ್ ಬ್ಯಾಂಕಿಂಗ್ ಭದ್ರತೆಯನ್ನು ಸಹ ನೀಡುತ್ತದೆ. ಹಳ್ಳಿ ಅಥವಾ ಸಣ್ಣ ಪಟ್ಟಣದಲ್ಲಿ, ಒಬ್ಬ ವ್ಯಕ್ತಿಯು ಡಿಜಿಟಲ್ ಬ್ಯಾಂಕಿಂಗ್ ಘಟಕದ ಸೇವೆ ಪಡೆದಾಗ, ಹಣವನ್ನು ಕಳುಹಿಸುವುದರಿಂದ ಹಿಡಿದು ಸಾಲ ಪಡೆಯುವ ತನಕ  ಎಲ್ಲವೂ ಆನ್‌ಲೈನ್‌ನಲ್ಲಿ ಸುಲಭವಾಗುತ್ತದೆ. ಸುಮ್ಮನೆ ಊಹಿಸಿಕೊಳ್ಳಿ! ಮೂಲ ಬ್ಯಾಂಕಿಂಗ್ ಸೇವೆಗಳಿಗಾಗಿ ಗ್ರಾಮೀಣರು ಅಥವಾ ಬಡವರು ಕಷ್ಟಪಡಬೇಕಾದ ಕಾಲವೊಂದಿತ್ತು. ಅಂಥವರಿಗೆ ಬ್ಯಾಂಕಿಂಗ್ ಸೇವೆಯಿಂದ ಬಹಳ ತೊಂದರೆಯಾಗುತ್ತಿತ್ತು. ಆದರೆ ಇಂದು ಅವರು ಈ ಬದಲಾವಣೆಯನ್ನು ಅನುಭವಿಸಲು ಸಂತಸ ಮತ್ತು ಉತ್ಸುಕರಾಗಿದ್ದಾರೆ.
 
ಸ್ನೇಹಿತರೆ,


ಭಾರತದ ಸಾಮಾನ್ಯ ಮನುಷ್ಯನನ್ನು ಸಬಲೀಕರಣಗೊಳಿಸುವುದು ಮತ್ತು ಅವನನ್ನು ಸಶಕ್ತನನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಆದ್ದರಿಂದ, ನಾವು ಸಮಾಜದ ಅತ್ಯಂತ ಕೆಳಸ್ತರದ ಜನರನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನೀತಿಗಳನ್ನು ರೂಪಿಸಿದ್ದೇವೆ. ಇಡೀ ಸರ್ಕಾರವು ಜನರಿಗೆ ಅನುಕೂಲ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವ ಮಾರ್ಗವನ್ನು ಅನುಸರಿಸುತ್ತಿದೆ. ನಾವು ಒಟ್ಟಿಗೆ 2 ವಿಷಯಗಳಲ್ಲಿ ಕೆಲಸ ಮಾಡಿದೆವು. ಮೊದಲನೆಯದು- ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು, ಅದನ್ನು ಬಲಪಡಿಸುವುದು ಮತ್ತು ಅದರೊಳಗೆ ಪಾರದರ್ಶಕತೆ ತರುವುದು; ಮತ್ತು ಎರಡನೆಯದು - ಆರ್ಥಿಕ ಸೇರ್ಪಡೆ. ಹಿಂದೆ ಬೌದ್ಧಿಕ ವಿಚಾರಸಂಕಿರಣಗಳಿದ್ದಾಗ ಮಹಾನ್ ವಿದ್ವಾಂಸರು ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕತೆ ಮತ್ತು ಬಡವರ ಬಗ್ಗೆ ಚರ್ಚಿಸುತ್ತಿದ್ದರು. ಅವರು ಹಣಕಾಸಿನ ಸೇರ್ಪಡೆ ಬಗ್ಗೆ ಮಾತನಾಡುತ್ತಿದ್ದರು, ಆದರೆ ವ್ಯವಸ್ಥೆಗಳು ಮತ್ತು ಸೌಲಭ್ಯಗಳು ಕೇವಲ ಕಲ್ಪನೆಗಳಿಗೆ ಸೀಮಿತವಾಗಿದ್ದವು. ಈ ಕ್ರಾಂತಿಕಾರಿ ಕೆಲಸಕ್ಕಾಗಿ ಅಂದರೆ ಆರ್ಥಿಕ ಒಳಗೊಳ್ಳುವಿಕೆಗಾಗಿ ಸಮರ್ಪಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿರಲಿಲ್ಲ. ಬಡವರೇ ಬ್ಯಾಂಕ್‌ಗೆ ಹೋಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುತ್ತಾರೆ ಎಂದು ಈ ಮೊದಲು ಭಾವಿಸಲಾಗಿತ್ತು. ಆದರೆ ನಾವು ಈ ಅಭ್ಯಾಸವನ್ನು ಬದಲಿಸಿದ್ದೇವೆ. ಬ್ಯಾಂಕ್ ಮತ್ತು ಅದರ ಸೌಲಭ್ಯಗಳನ್ನು ಬಡವರ ಮನೆಗಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಇದಕ್ಕಾಗಿ ನಾವು ಮೊದಲು ಬಡವರು ಮತ್ತು ಬ್ಯಾಂಕ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿತ್ತು. ಆದ್ದರಿಂದ, ಬ್ಯಾಂಕ್ ಶಾಖೆಗಳ ಭೌತಿಕ ದೂರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಅಂತರವೂ ದೊಡ್ಡ ಅಡಚಣೆಯಾಗಿತ್ತು. ದೂರದ ಪ್ರದೇಶಗಳಲ್ಲೂ ಬ್ಯಾಂಕಿಂಗ್ ಸೇವೆಗಳು ಪ್ರತಿ ಮನೆ ಬಾಗಿಲಿಗೂ ತಲುಪುವಂತೆ ಮಾಡಲು ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ಇಂದು ಭಾರತದ 99 ಪ್ರತಿಶತಕ್ಕೂ ಹೆಚ್ಚು ಹಳ್ಳಿಗಳು ಕೆಲವು ಅಥವಾ ಇತರೆ ಬ್ಯಾಂಕ್ ಶಾಖೆ ಅಥವಾ ಬ್ಯಾಂಕ್ ಮಿತ್ರ ಅಥವಾ ಬ್ಯಾಂಕಿಂಗ್ ವರದಿಗಾರನನ್ನು 5 ಕಿ.ಮೀ ಅಂತರದಲ್ಲಿ ಹೊಂದಿವೆ. ಇದಲ್ಲದೆ, ದೇಶದ ಅಂಚೆ ಕಚೇರಿಗಳ ಬೃಹತ್ ಜಾಲವು ಇಂಡಿಯಾ ಪೋಸ್ಟ್ ಬ್ಯಾಂಕ್ ಮೂಲಕ ಮುಖ್ಯವಾಹಿನಿಯ ಬ್ಯಾಂಕಿಂಗ್‌ನ ಭಾಗವಾಗಿ ಮಾಡಿದೆ. ಇಂದು, ಪ್ರತಿ 100,000 ವಯಸ್ಕ ಜನಸಂಖ್ಯೆಗೆ ದೇಶದಲ್ಲಿ ಬ್ಯಾಂಕ್ ಶಾಖೆಗಳ ಸಂಖ್ಯೆ ಜರ್ಮನಿ, ಚೀನಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಿಗಿಂತ ಹೆಚ್ಚಾಗಿದೆ.
 
ಸ್ನೇಹಿತರೆ,


ಶ್ರೀಸಾಮಾನ್ಯನ ಜೀವನ ಮಟ್ಟ ಹೆಚ್ಚಿಸುವ ಸಂಕಲ್ಪದೊಂದಿಗೆ ಹಗಲಿರುಳು ನಾವು ಶ್ರಮಿಸುತ್ತಿದ್ದೇವೆ. ಈಗಿರುವ ವ್ಯವಸ್ಥೆಗಳನ್ನು ಸುಧಾರಿಸುವುದು ಮತ್ತು ಪಾರದರ್ಶಕತೆ ತರುವುದು ನಮ್ಮ ಸಂಕಲ್ಪವಾಗಿದೆ. ಕಡುಬಡವರನ್ನೂ ತಲುಪುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ. ನಾವು ಜನ್ ಧನ್ ಅಭಿಯಾನ ಪ್ರಾರಂಭಿಸಿದಾಗ, ಕೆಲವರು ತೀವ್ರ ವಿರೋಧ ಮಾಡಿದರು, ಪ್ರತಿಭಟಿಸಿದರು - 'ಬಡವರು ಬ್ಯಾಂಕ್ ಖಾತೆಗಳೊಂದಿಗೆ ಏನು ಮಾಡುತ್ತಾರೆ'? ಈ ಕ್ಷೇತ್ರದ ಅನೇಕ ತಜ್ಞರು ಸಹ ಈ ಅಭಿಯಾನದ ಮಹತ್ವವನ್ನು ಗ್ರಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಬ್ಯಾಂಕ್ ಖಾತೆಯ ಶಕ್ತಿಗೆ ಇಂದು ಇಡೀ ದೇಶವೇ ಸಾಕ್ಷಿಯಾಗುತ್ತಿದೆ. ನನ್ನ ದೇಶದ ಸಾಮಾನ್ಯ ನಾಗರಿಕನು ಅದನ್ನು ಅನುಭವಿಸುತ್ತಿದ್ದಾನೆ. ಬ್ಯಾಂಕ್ ಖಾತೆಗಳಿಂದಾಗಿ ಬಡವರಿಗೆ ಅತ್ಯಂತ ಕಡಿಮೆ ಕಂತಿನಲ್ಲಿ ವಿಮಾ ರಕ್ಷಣೆ ನೀಡಿದ್ದೇವೆ. ಅವುಗಳನ್ನು ಬ್ಯಾಂಕ್ ಖಾತೆಗಳೊಂದಿಗೆ ಜೋಡಿಸಿದ ನಂತರ, ಬಡವರು ಈಗ ಯಾವುದೇ ಖಾತರಿಯಿಲ್ಲದೆ ಸಾಲ ಪಡೆಯಲು ಸಾಧ್ಯವಾಗುತ್ತಿದೆ. ಇದೀಗ ಸಬ್ಸಿಡಿ ಹಣ ನೇರವಾಗಿ ಬಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸೇರುತ್ತಿದೆ. ಬಡವರು ನೀಡಿದ ಹಣ ನೇರವಾಗಿ ಅವರ ಖಾತೆಗೆ ಸೇರುತ್ತಿರುವುದರಿಂದ ಬ್ಯಾಂಕ್ ಖಾತೆಗಳ ಮೂಲಕವೇ ಮನೆ, ಶೌಚಾಲಯ ನಿರ್ಮಿಸಿಕೊಳ್ಳಲು ಹಾಗೂ ಗ್ಯಾಸ್ ಸಬ್ಸಿಡಿ ಪಡೆಯಲು ಸಾಧ್ಯವಾಗುತ್ತಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳ ಕಾರಣದಿಂದಾಗಿ ಸರ್ಕಾರದ ವಿವಿಧ ಯೋಜನೆಗಳಿಂದ ಎಲ್ಲ ಸಹಾಯ ಪಡೆಯಬಹುದು, ಏಕೆಂದರೆ ಹಣವನ್ನು ಸುಲಭವಾಗಿ ತಲುಪಿಸಬಹುದು. ಕೊರೊನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ, ಸರ್ಕಾರದ ಹಣವನ್ನು ನೇರವಾಗಿ ಬಡವರು, ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಬ್ಯಾಂಕ್ ಖಾತೆಗಳಿಂದಾಗಿ ನಮ್ಮ ಬೀದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಆರಂಭಿಸಲು ಸಾಧ್ಯವಾಯಿತು. ಆದರೆ ಅಭಿವೃದ್ಧಿ ಹೊಂದಿದ ದೇಶಗಳು ಸಹ ಈ ರೀತಿಯ ಕೆಲಸಗಳಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಸಮಯ ಅದು. ಸ್ವಲ್ಪ ಸಮಯದ ಹಿಂದೆ ಐಎಂಎಫ್, ಭಾರತದ ಡಿಜಿಟಲ್ ಬ್ಯಾಂಕಿಂಗ್ ಮೂಲಸೌಕರ್ಯವನ್ನು ಶ್ಲಾಘಿಸಿದೆ ಎಂದು ನೀವು ಕೇಳಿರಬೇಕು. ಇದರ ಶ್ರೇಯಸ್ಸು ಭಾರತದ ಬಡವರಿಗೆ, ರೈತರಿಗೆ ಮತ್ತು ಕಾರ್ಮಿಕರಿಗೆ ಸಲ್ಲುತ್ತದೆ, ಅವರು ಧೈರ್ಯ ಮತ್ತು ತಿಳಿವಳಿಕೆಯೊಂದಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ.
 
ಸ್ನೇಹಿತರೆ,
 
ಹಣಕಾಸಿನ ಪಾಲುದಾರಿಕೆಗಳು ಡಿಜಿಟಲ್ ಪಾಲುದಾರಿಕೆಗಳೊಂದಿಗೆ ಸಂಯೋಜಿಸಲ್ಪಟ್ಟಾಗ, ಸಾಧ್ಯತೆಗಳ ಸಂಪೂರ್ಣ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಅದಕ್ಕೆ ಯುಪಿಐ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತವು ಅದರ ಬಗ್ಗೆ ಹೆಮ್ಮೆಪಡುತ್ತಿದೆ. ಯುಪಿಐ ಈ ರೀತಿಯ ವಿಶ್ವದ ಮೊದಲ ತಂತ್ರಜ್ಞಾನವಾಗಿದೆ. ಆದರೆ ಭಾರತದಲ್ಲಿ ನೀವು ಇದನ್ನು ನಗರದಿಂದ ಹಳ್ಳಿಯವರೆಗೆ, ಶೋರೂಂಗಳಿಂದ ತರಕಾರಿ ಗಾಡಿಗಳವರೆಗೆ ಎಲ್ಲೆಡೆ ನೋಡಬಹುದು. ಯುಪಿಐ ಜೊತೆಗೆ ಈಗ 'ರುಪೇ ಕಾರ್ಡ್' ಅಧಿಕಾರವೂ ದೇಶದ ಸಾಮಾನ್ಯರ ಕೈಯಲ್ಲಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಗಣ್ಯರ, ಉಳ್ಳವರ ವ್ಯವಸ್ಥೆ ಎಂದು ಪರಿಗಣಿಸುವ ಸಮಯವಿತ್ತು. ಇದು ಸಮಾಜದ ಶ್ರೀಮಂತ ಮತ್ತು ಗಣ್ಯ ವರ್ಗದೊಂದಿಗೆ ಸಂಬಂಧ ಹೊಂದಿತ್ತು. ಕಾರ್ಡ್‌ಗಳು ವಿದೇಶಿಯಾಗಿದ್ದವು, ಅವುಗಳನ್ನು ಬಳಸಿದ ಕೆಲವೇ ಜನರು ಇದ್ದರು. ಅವುಗಳನ್ನು ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ, ಇಂದು ಭಾರತದಲ್ಲಿ 70 ಕೋಟಿಗೂ ಹೆಚ್ಚು ರುಪೇ ಕಾರ್ಡ್‌ಗಳು ಸಾಮಾನ್ಯ ಜನರ ಬಳಿ ಇವೆ. ಇಂದು ಭಾರತದ ಸ್ಥಳೀಯ ರೂಪೇ ಕಾರ್ಡ್ ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟಿದೆ. ತಂತ್ರಜ್ಞಾನ ಮತ್ತು ಆರ್ಥಿಕತೆಯ ಈ ಸಂಯೋಜನೆಯು ಒಂದೆಡೆ ಬಡ ಮತ್ತು ಮಧ್ಯಮ ವರ್ಗದ ಘನತೆಗೆ ಹೆಚ್ಚಿನ ಶಕ್ತಿ ನೀಡುತ್ತಿದೆ, ಇನ್ನೊಂದೆಡೆ ದೇಶದ ಡಿಜಿಟಲ್ ಕಂದಕವನ್ನು ತೊಡೆದುಹಾಕುತ್ತಿದೆ.
 
ಸ್ನೇಹಿತರೆ,
ಜೆಎಎಮ್ ಅಂದರೆ ಜನ್‌ಧನ್, ಆಧಾರ್ ಮತ್ತು ಮೊಬೈಲ್‌ನ ತ್ರಿವಳಿ ಶಕ್ತಿಯು ದೇಶವನ್ನು ಕಾಡುತ್ತಿರುವ ಪ್ರಮುಖ ಅಂಟುಜಾಢ್ಯದ ಬಗ್ಗೆ ಕಾಳಜಿ ವಹಿಸಿದೆ. ಆ ರೋಗವೆಂದರೆ ಭ್ರಷ್ಟಾಚಾರ. ಸರಕಾರ ಬಿಡುಗಡೆ ಮಾಡಿದ ಹಣ ಬಡವರಿಗೆ ತಲುಪುವ ವೇಳೆಗೆ ಮಾಯವಾಗುತ್ತದೆ. ಆದರೆ, ಈಗ ನೇರ ನಗದು ವರ್ಗಾವಣೆ ಅಂದರೆ ಡಿಬಿಟಿ ಮೂಲಕ, ಹಣ ಬಿಡುಗಡೆಯಾದ ವ್ಯಕ್ತಿಯ ಖಾತೆಗೆ ಹಣ ನೇರವಾಗಿ ತಲುಪುತ್ತದೆ, ಅದು ಕೂಡ ಅಲ್ಪ ಸಮಯದಲ್ಲೇ. ಇದುವರೆಗೆ 25 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಡಿಬಿಟಿ ಮೂಲಕ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಅದೇ ರೀತಿ ನಾಳೆಯೂ ದೇಶದ ಕೋಟ್ಯಂತರ ರೈತರಿಗೆ 2,000 ರೂ. ಮೊತ್ತದ ಮತ್ತೊಂದು ಕಂತನ್ನು ಕಳುಹಿಸಲಿದ್ದೇನೆ.
 
ಸಹೋದರರ ಸಹೋದರಿಯರೆ,
 
ಇಂದು ಇಡೀ ಜಗತ್ತು ಭಾರತದ ಡಿಬಿಟಿ ಮತ್ತು ಡಿಜಿಟಲ್ ಶಕ್ತಿ ಸಾಮರ್ಥ್ಯವನ್ನು ಶ್ಲಾಘಿಸುತ್ತಿದೆ. ನಾವು ಇಂದು ಜಾಗತಿಕ ಮಾದರಿಯಾಗಿ ನೋಡಲ್ಪಡುತ್ತಿದ್ದೇವೆ. ಡಿಜಿಟಲೀಕರಣದ ಮೂಲಕ ಸಾಮಾಜಿಕ ಭದ್ರತೆ ಖಾತ್ರಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ವಿಶ್ವಬ್ಯಾಂಕ್ ಘೋಷಿಸಿದೆ. ತಂತ್ರಜ್ಞಾನದ ವಿಷಯದಲ್ಲಿ ವಿಶ್ವಾದ್ಯಂತ ಅತ್ಯಂತ ಯಶಸ್ವಿ ವ್ಯಕ್ತಿಗಳು ಅಥವಾ ವಿಶ್ವದ ತಂತ್ರಜ್ಞಾನ ಶಿಲ್ಪಿಗಳು ಸಹ  ಭಾರತದ ಈ ವ್ಯವಸ್ಥೆಯನ್ನು ಬಹಳಷ್ಟು ಮೆಚ್ಚುತ್ತಿದ್ದಾರೆ! ಅವರಿಗೂ ಅದರ ಯಶಸ್ಸಿನಿಂದ ಆಶ್ಚರ್ಯವಾಗುತ್ತಿದೆ.

ಸಹೋದರ ಸಹೋದರಿಯರೆ,
ನೀವು ಸುಮ್ಮನೆ ಊಹಿಸಿಕೊಳ್ಳಿ! ಡಿಜಿಟಲ್ ಭಾಗವಹಿಸುವಿಕೆ ಮತ್ತು ಆರ್ಥಿಕ ಭಾಗವಹಿಸುವಿಕೆ ವೈಯಕ್ತಿಕವಾಗಿ ಅಪಾರ ಶಕ್ತಿಯನ್ನು ಹೊಂದಿರುವಾಗ, ಇವೆರಡರ 100 ಪ್ರತಿಶತ ಸಾಮರ್ಥ್ಯ ಬಳಸಿಕೊಂಡು ನಾವು ನಮ್ಮ ದೇಶವನ್ನು ಪ್ರಗತಿಯ ಎಷ್ಟು ದೂರ ಕೊಂಡೊಯ್ಯಬಹುದು? ಆದ್ದರಿಂದ, ಹಣಕಾಸು ತಂತ್ರಜ್ಞಾನ ನೀತಿಗಳು ಮತ್ತು ಪ್ರಯತ್ನಗಳು ಇಂದು ಭಾರತದ ಹೃದಯಭಾಗದಲ್ಲಿದೆ ಮತ್ತು ನಮ್ಮ ದೇಶದ ಭವಿಷ್ಯವನ್ನು ಮಾರ್ಗದರ್ಶಿಸುತ್ತಿದೆ. ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಹಣಕಾಸು ತಂತ್ರಜ್ಞಾನದ ಈ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಜನ್ ಧನ್ ಖಾತೆಗಳು ದೇಶದಲ್ಲಿ ಹಣಕಾಸು ಸೇರ್ಪಡೆಗೆ ಅಡಿಪಾಯ ಹಾಕಿದ್ದರೆ, ಹಣಕಾಸು ತಂತ್ರಜ್ಞಾನಗಳು ಆರ್ಥಿಕ ಕ್ರಾಂತಿಗೆ ಭದ್ರ ಬುನಾದಿ ಹಾಕುತ್ತಿವೆ.
 
ಸ್ನೇಹಿತರೆ,
 
ಇತ್ತೀಚೆಗೆ, ಬ್ಲಾಕ್‌ಚೈನ್ ತಂತ್ರಜ್ಞಾನ ಆಧರಿಸಿದ ಡಿಜಿಟಲ್ ಕರೆನ್ಸಿ ಪ್ರಾರಂಭಿಸುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಭವಿಷ್ಯದ ಡಿಜಿಟಲ್ ಕರೆನ್ಸಿಯಾಗಿರಲಿ ಅಥವಾ ಇಂದಿನ ದಿನಗಳಲ್ಲಿ ಡಿಜಿಟಲ್ ವಹಿವಾಟುಗಳಾಗಲಿ, ಆರ್ಥಿಕತೆಯ ಹೊರತಾಗಿ ಅನೇಕ ಪ್ರಮುಖ ಆಯಾಮಗಳು ಅವುಗಳೊಂದಿಗೆ ಸಂಬಂಧ ಹೊಂದಿವೆ. ಉದಾಹರಣೆಗೆ, ಕರೆನ್ಸಿಯನ್ನು ಮುದ್ರಿಸಲು ಖರ್ಚು ಮಾಡಿದ ಹಣವನ್ನು ನಮ್ಮ ದೇಶ ಉಳಿಸಬಹುದು. ಕರೆನ್ಸಿ ಮುದ್ರಣಕ್ಕಾಗಿ ನಾವು ವಿದೇಶದಿಂದ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳುತ್ತೇವೆ. ಡಿಜಿಟಲ್ ಆರ್ಥಿಕತೆಯ ಕಡೆಗೆ ತಿರುಗುವ ಮೂಲಕ ನಾವು ಈ ವಿಷಯಗಳಲ್ಲಿಯೂ ಹಣ ಉಳಿಸಬಹುದು. ಇದು ಸ್ವಾವಲಂಬಿ ಭಾರತದ ಬ್ಯಾಂಕಿಂಗ್ ವಲಯ ಮತ್ತು ಆರ್‌ಬಿಐನ ಬಹುದೊಡ್ಡ ಕೊಡುಗೆ ಎಂದು ನಾನು ಪರಿಗಣಿಸಿದ್ದೇನೆ. ಅದೇ ಸಮಯದಲ್ಲಿ, ಕಾಗದದ ಬಳಕೆಯನ್ನು ಕಡಿಮೆ ಮಾಡುವುದರಿಂದ ಪರಿಸರಕ್ಕೆ ದೊಡ್ಡ ಲಾಭವೂ ಆಗುತ್ತದೆ.
 
 ಸ್ನೇಹಿತರೆ,
 
ಬ್ಯಾಂಕಿಂಗ್ ಇಂದು ಹಣಕಾಸಿನ ವಹಿವಾಟು ಎಲ್ಲೆಗಳನ್ನು ಮೀರಿ ಹೋಗಿದೆ. ಇದು 'ಉತ್ತಮ ಆಡಳಿತ' ಮತ್ತು 'ಉತ್ತಮ ಸೇವಾ ವಿತರಣೆ' ನೀಡುವ ಮಾಧ್ಯಮವಾಗಿದೆ. ಇಂದು ಈ ವ್ಯವಸ್ಥೆಯು ಖಾಸಗಿ ವಲಯ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆಯ ಅಪಾರ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಇಂದು, ಹೊಸ ಸ್ಟಾರ್ಟಪ್ ಪರಿಸರ ವ್ಯವಸ್ಥೆ ರಚಿಸುವಾಗ ತಂತ್ರಜ್ಞಾನದ ಮೂಲಕ ಉತ್ಪನ್ನ ಮತ್ತು ಸೇವಾ ವಿತರಣೆ ನಡೆಯದಿರುವ ಯಾವುದೇ ಕ್ಷೇತ್ರ ಅಥವಾ ವಲಯ ಭಾರತದಲ್ಲಿಲ್ಲ. ನೀವು ನೋಡಿ, ಇಂದು ನಿಮಗೆ ಬಂಗಾಳದಿಂದ ಜೇನುತುಪ್ಪ, ಅಥವಾ ಅಸ್ಸಾಂನಿಂದ ಬಿದಿರಿನ ಉತ್ಪನ್ನಗಳು, ಅಥವಾ ಕೇರಳದಿಂದ ಗಿಡಮೂಲಿಕೆಗಳು, ಅಥವಾ ನೀವು ಸ್ಥಳೀಯ ರೆಸ್ಟೋರೆಂಟ್‌ನಿಂದ ಏನನ್ನಾದರೂ ಆರ್ಡರ್ ಮಾಡಲು ಬಯಸಿದರೆ, ಅಥವಾ ನೀವು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಅಥವಾ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ಬಯಸಬೇಕು ಎಂದಾದರೆ ಆನ್‌ಲೈನ್‌ನಲ್ಲಿ ಎಲ್ಲವೂ ಸಾಧ್ಯ. ಹಳ್ಳಿಯ ಯುವಕ ಕೂಡ ನಗರದಲ್ಲಿ ವಾಸಿಸುವ ಶಿಕ್ಷಕರ ತರಗತಿಗೆ ಹಾಜರಾಗಬಹುದು! ಡಿಜಿಟಲ್ ಇಂಡಿಯಾ ಎಲ್ಲವನ್ನೂ ಸಾಧ್ಯವಾಗಿಸಿದೆ. ಕೆಲವು ವರ್ಷಗಳ ಹಿಂದೆ ಈ ಸನ್ನಿವೇಶವನ್ನು ನಾವು ಊಹಿಸಲೂ ಸಾಧ್ಯವಾಗಿರಲಿಲ್ಲ.
 
ಸ್ನೇಹಿತರೆ,
 
ಡಿಜಿಟಲ್ ಆರ್ಥಿಕತೆಯು ಇಂದು ನಮ್ಮ ಅರ್ಥ ವ್ಯವಸ್ಥೆ, ನಮ್ಮ ಸ್ಟಾರ್ಟಪ್ ಜಗತ್ತು, ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಬಿ ಭಾರತಕ್ಕೆ ದೊಡ್ಡ ಶಕ್ತಿಯಾಗಿದೆ. ಇಂದು ನಮ್ಮ ಸಣ್ಣ ಕೈಗಾರಿಕೆಗಳು, ಎಂಎಸ್ಎಂಇಗಳು, ಜಿಇಎಂನಂತಹ ವ್ಯವಸ್ಥೆ ಮೂಲಕ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸುತ್ತಿವೆ. ಅವರು ಹೊಸ ವ್ಯಾಪಾರ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಜಿಇಎಂನಲ್ಲಿ 2.5 ಲಕ್ಷ ಕೋಟಿ ರೂ. ಮೌಲ್ಯದ ಆರ್ಡರ್‌ಗಳನ್ನು ಇರಿಸಲಾಗಿದೆ. ಇದು ದೇಶದ ಸ್ಥಳೀಯ ಆರ್ಥಿಕತೆಗೆ ಮತ್ತು 'ವೋಕಲ್ ಫಾರ್ ಲೋಕಲ್' ಮಿಷನ್‌ಗೆ ತರುತ್ತಿರುವ ಪ್ರಯೋಜನವನ್ನು ನೀವೇ ಊಹಿಸಬಹುದು. ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳ ಮೂಲಕ ಈ ದಿಕ್ಕಿನಲ್ಲಿ ಇನ್ನೂ ಅನೇಕ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತವೆ. ಈ ದಿಕ್ಕಿನಲ್ಲಿ ನಾವು ಹೊಸತನವನ್ನು ಮಾಡಬೇಕು. ಹೊಸ ಆಲೋಚನೆಯೊಂದಿಗೆ, ನಾವು ಹೊಸ ಅವಕಾಶಗಳನ್ನು ಸ್ವಾಗತಿಸಬೇಕು.
 
 ಸ್ನೇಹಿತರೆ,
 
ದೇಶದ ಆರ್ಥಿಕತೆಯ ಅಭಿವೃದ್ಧಿ ಸ್ಥಿತಿಯು ಅದರ ಬ್ಯಾಂಕಿಂಗ್ ವ್ಯವಸ್ಥೆಯ ಬಲಕ್ಕೆ ನೇರವಾಗಿ ಸಂಬಂಧಿಸಿದೆ. ಇಂದು ಭಾರತದ ಆರ್ಥಿಕತೆ ನಿರಂತರವಾಗಿ ಮುನ್ನಡೆಯುತ್ತಿದೆ, ಇದು ಸಾಧ್ಯವಾಗುತ್ತಿದೆ. ಏಕೆಂದರೆ ಈ 8 ವರ್ಷಗಳಲ್ಲಿ ದೇಶವು 2014ರ ಹಿಂದಿನ ಫೋನ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಪ್ರಸ್ತುತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಬದಲಾಗಿದೆ. ನೀವು 2014ರ ಮೊದಲು ಇದ್ದ ಫೋನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೆನಪಿಸಿಕೊಳ್ಳಬಹುದು! ಬ್ಯಾಂಕ್‌ಗಳು ತಮ್ಮ ಕಾರ್ಯ ನಿರ್ವಹಣೆಯನ್ನು ನಿರ್ಧರಿಸಲು ಉನ್ನತ ಅಧಿಕಾರಿಗಳಿಂದ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದವು. ಈ 'ಫೋನ್ ಬ್ಯಾಂಕಿಂಗ್' ರಾಜಕೀಯವು ಬ್ಯಾಂಕ್‌ಗಳನ್ನು ಅಸುರಕ್ಷಿತವಾಗಿಸಿತು, ವ್ಯವಸ್ಥೆಯನ್ನು ಹಾಳು ಮಾಡಿತ. ಅಲ್ಲದೆ, ದೇಶದ ಆರ್ಥಿಕತೆಯನ್ನು ಸಹ ಅಸುರಕ್ಷಿತವಾಗಿಸಿತು, ಇದು ದೊಡ್ಡ ಹಗರಣಗಳ ವಿಷ ಬೀಜಗಳನ್ನು ಬಿತ್ತಿತ್ತು. ಸುದ್ದಿಗಳಲ್ಲಿ ಹಗರಣಗಳ ಬಗ್ಗೆ ನಾವು ನಿರಂತರವಾಗಿ ಕೇಳುತ್ತೇವೆ. ಆದರೆ ಈಗ ಡಿಜಿಟಲ್ ಬ್ಯಾಂಕಿಂಗ್‌ನಿಂದ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಬ್ಯಾಂಕ್ ಗಳ  ವಸೂಲಾಗದ ಸಾಲ- ಎನ್‌ಪಿಎಗಳ ಗುರುತಿಸುವಿಕೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆಗೆ ಮತ್ತೆ ನಾವು ಲಕ್ಷಾಂತರ ಕೋಟಿ ರೂ. ಮರುಬಂಡವಾಳ ತೊಡಗಿಸಿದ್ದೇವೆ. ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ಭ್ರಷ್ಟಾಚಾರ ತಡೆ ಕಾಯ್ದೆಗೆ ಸುಧಾರಣೆ ತಂದಿದ್ದೇವೆ. ಎನ್ ಪಿಎ ಸಂಬಂಧಿತ ಸಮಸ್ಯೆಗಳ ಪರಿಹಾರವನ್ನು ಐಬಿಸಿ ಸಹಾಯದಿಂದ ತ್ವರಿತಗೊಳಿಸಲಾಗಿದೆ. ನಾವು ಸಾಲಗಳಿಗೆ ತಂತ್ರಜ್ಞಾನ ಮತ್ತು ವಿಶ್ಲೇಷಣೆಗಳ ಬಳಕೆಯನ್ನು ಉತ್ತೇಜಿಸಿದ್ದೇವೆ. ಇದರಿಂದ ಪಾರದರ್ಶಕ ಮತ್ತು ವೈಜ್ಞಾನಿಕ ವ್ಯವಸ್ಥೆ ರಚಿಸಬಹುದು. ನೀತಿ ಅಡೆತಡೆಗಳ ಕಾರಣದಿಂದಾಗಿ ಬ್ಯಾಂಕ್‌ಗಳ ವಿಲೀನದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ. ದೇಶವು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇಂದು ಸಮರ್ಪಕ ನಿರ್ಧಾರಗಳು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಫಲಿತಾಂಶಗಳು ನಮ್ಮ ಮುಂದೆಯೇ ಇವೆ. ಜಗತ್ತು ನಮ್ಮನ್ನು ಮೆಚ್ಚುತ್ತಿದೆ. ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಮತ್ತು ಹೊಸತನದ ಹಣಕಾಸು ತಂತ್ರಜ್ಞಾನ  ಬಳಕೆಯಂತಹ ಹೊಸ ವ್ಯವಸ್ಥೆಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಸ ಸ್ವಯಂಚಾಲಿತ ಕಾರ್ಯವಿಧಾನವನ್ನು ಈಗ ರಚಿಸಲಾಗುತ್ತಿದೆ. ಒಂದೆಡೆ ಗ್ರಾಹಕರಿಗೆ ಸ್ವಾಯತ್ತತೆ ಇದ್ದರೆ, ಮತ್ತೊಂದೆಡೆ ಬ್ಯಾಂಕ್‌ಗಳಿಗೆ ಅನುಕೂಲ ಮತ್ತು ಪಾರದರ್ಶಕತೆ ಇದೆ. 'ಇಂತಹ ವ್ಯವಸ್ಥೆಗಳನ್ನು ಹೆಚ್ಚು ಸಮಗ್ರವಾಗಿ ಮಾಡುವುದು ಹೇಗೆ? ಅದನ್ನು ದೊಡ್ಡ ಮಟ್ಟದಲ್ಲಿ ಮುಂದಕ್ಕೆ ಕೊಂಡೊಯ್ಯುವುದು ಹೇಗೆ?' ಈ ರೀತಿಯ ಪ್ರಶ್ನೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಬ್ಯಾಂಕಿಂಗ್ ಪಾಲುದಾರರು ಕೆಲಸ ಮಾಡಬೇಕು. ನಮ್ಮ ಎಲ್ಲ ಬ್ಯಾಂಕುಗಳು ಡಿಜಿಟಲ್ ವ್ಯವಸ್ಥೆಗಳೊಂದಿಗೆ ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸುವ ಗುರಿ ಹೊಂದಿರಬೇಕು.
ನಾನು ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದ ಜನರು, ಸಣ್ಣ ಉದ್ಯಮಿಗಳು ಮತ್ತು ಬ್ಯಾಂಕ್‌ಗಳೊಂದಿಗೆ ಸಂಪರ್ಕ ಹೊಂದಿರುವ ಗ್ರಾಮೀಣ ವ್ಯಾಪಾರಿಗಳಿಗೆ ವಿನಂತಿ ಮಾಡಲು ಬಯಸುತ್ತೇನೆ. ನಾವು 'ಆಜಾದಿ ಕಾ ಅಮೃತ ಮಹೋತ್ಸವ' ಆಚರಿಸುತ್ತಿರುವುದರಿಂದ, ನೀವು ದೇಶಕ್ಕಾಗಿ ಮನವಿ ಈಡೇಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಮ್ಮ ಬ್ಯಾಂಕುಗಳು ಮತ್ತು ನಮ್ಮ ಸಣ್ಣ ವ್ಯಾಪಾರಿಗಳು ಒಟ್ಟಾಗಿ ಏನಾದರೂ ಮಾಡಬಹುದೇ? ನಿಮ್ಮ ಬ್ಯಾಂಕ್ ಶಾಖೆಯ ಹತ್ತಿರದ  ಪ್ರದೇಶದಿಂದ ಕನಿಷ್ಠ 100 ವ್ಯಾಪಾರಿಗಳನ್ನು ಸಂಪೂರ್ಣ ಡಿಜಿಟಲ್ ವಹಿವಾಟು ಅಥವಾ 100% ಡಿಜಿಟಲ್ ವಹಿವಾಟಿನ ವ್ಯವಸ್ಥೆಯೊಂದಿಗೆ ನಿಮ್ಮ ಬ್ಯಾಂಕ್‌ಗೆ ಸಂಪರ್ಕಿಸಲು ಸಾಧ್ಯವಾದರೆ, ಬೃಹತ್ ಕ್ರಾಂತಿಗೆ ನೀವು ಭದ್ರ ಬುನಾದಿ ನಿರ್ಮಿಸಬಹುದು!
 
ಸಹೋದರರು ಮತ್ತು ಸಹೋದರಿಯರೆ,
 
ಇದು ದೇಶಕ್ಕೆ ಅದ್ಭುತ ಆರಂಭವಾಗಬಹುದು. ನಾನು ನಿಮ್ಮಲ್ಲಿ ಸರಳವಾಗಿ ವಿನಂತಿಸುತ್ತಿದ್ದೇನೆ. ಇದಕ್ಕಾಗಿ ಯಾರೂ ಯಾವುದೇ ಕಾನೂನು ಅಥವಾ ನಿಯಮಗಳನ್ನು ಮಾಡಲು ಸಾಧ್ಯವಿಲ್ಲ. ಮತ್ತು ನೀವು ಅದರ ಪ್ರಯೋಜನವನ್ನು ನೋಡಿದಾಗ, ಆ ಸಂಖ್ಯೆಯನ್ನು 100 ರಿಂದ 200 ಕ್ಕೆ ಹೆಚ್ಚಿಸಲು ನಾನು ಯಾರನ್ನೂ ಮನವೊಲಿಸುವ ಅಗತ್ಯವಿಲ್ಲ.
 
ಸ್ನೇಹಿತರೆ,
 
ಪ್ರತಿ ಶಾಖೆಯು ಅದರೊಂದಿಗೆ 100 ವ್ಯಾಪಾರಿಗಳನ್ನು ಸಂಪರ್ಕಿಸುವ ಗುರಿ ಹೊಂದಿರಬೇಕು. ಇಂದು ಜನ್ ಧನ್ ಖಾತೆಗಳ ಯಶಸ್ಸಿಗೆ ಕಾರಣ ನಮ್ಮ ಬ್ಯಾಂಕ್ ಸಿಬ್ಬಂದಿ ಮತ್ತು ಕೆಳಹಂತದಲ್ಲಿರುವ ನೌಕರರು ಮತ್ತು ಅವರ ಶ್ರಮ. ಬಡವರ ಗುಡಿಸಲುಗಳಿಗೆ ಭೇಟಿ ನೀಡುತ್ತಿದ್ದರು, ಅವರು ವಾರಾಂತ್ಯದಲ್ಲೂ ಸಹ ಕೆಲಸ ಮಾಡಿದರು. ಅದರಿಂದಲೇ ಜನ್ ಧನ್ ಯಶಸ್ವಿಯಾಯಿತು. ಜನ್ ಧನ್ ಯಶಸ್ವಿಗೊಳಿಸಿದ ಬ್ಯಾಂಕ್ ನೌಕರರ ಶಕ್ತಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಇಂದು ಬ್ಯಾಂಕ್ ಕೆಲಸಗಾರರು ಮತ್ತು ಮ್ಯಾನೇಜರ್‌ಗಳು ತಮ್ಮ ಕಮಾಂಡ್ ಏರಿಯಾದ 100 ವ್ಯಾಪಾರಿಗಳನ್ನು ತಮ್ಮ ಬ್ಯಾಂಕ್ ಶಾಖೆಯೊಂದಿಗೆ ಪ್ರೇರೇಪಿಸಲು, ಶಿಕ್ಷಣ ನೀಡಲು ಮತ್ತು ಸಂಪರ್ಕಿಸಲು ಸಾಧ್ಯವಾದರೆ, ನೀವು ಬೃಹತ್ ಕ್ರಾಂತಿಯನ್ನು ಮುನ್ನಡೆಸುತ್ತೀರಿ. ಈ ಆರಂಭವು ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕತೆಯನ್ನು ನಾವು ಭವಿಷ್ಯದಲ್ಲಿ ಸಿದ್ಧವಾಗಿರುವ ಹಂತಕ್ಕೆ ಕೊಂಡೊಯ್ಯುತ್ತದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ನನಗೆ ಖಾತ್ರಿಯಿದೆ. ಶುಭಾಶಯ ಸಲ್ಲಿಸುವುದರೊಂದಿಗೆ, ಭಾರತದ ಹಣಕಾಸು ಸಚಿವರು, ಹಣಕಾಸು ಸಚಿವಾಲಯ, ನಮ್ಮ ಆರ್‌ಬಿಐ ಗವರ್ನರ್, ಆರ್‌ಬಿಐ ತಂಡ ಮತ್ತು ಎಲ್ಲ ಜನರು, ನಮ್ಮ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಉದ್ಯೋಗಿಗಳಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದರೆ ನೀವು ಅಮೂಲ್ಯ ಉಡುಗೊರೆಯನ್ನು ನೀಡಿದ್ದೀರಿ. ದೇಶ! ಮತ್ತು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಈ ಅಮೂಲ್ಯ ಕೊಡುಗೆಯನ್ನು ದೀಪಾವಳಿಯ ಮೊದಲು ಮತ್ತು 75 ವರ್ಷಗಳ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ ಮಹಾನ್ ಜನತೆಗೆ ಅರ್ಪಿಸುತ್ತಿರುವುದು ಅದ್ಭುತ ಕಾಕತಾಳೀಯವಾಗಿದೆ! ಶುಭಾಶಯಗಳು, ಎಲ್ಲರಿಗೂ ತುಂಬು ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು  ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

*******



(Release ID: 1868706) Visitor Counter : 138