ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳ ಭಾಷಣದ ಕನ್ನಡದ ಆವೃತ್ತಿ
Posted On:
11 OCT 2022 5:47PM by PIB Bengaluru
ಸೋದರರನ ನಮಸ್ಕಾರ,
ಗುಜರಾತ್ ನ ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ಇಂದು ಬಹಳ ಮಹತ್ವಪೂರ್ಣ ದಿನವಾಗಿದೆ. ನಾನು ಈ ಕೆಲಸವನ್ನು ವೇಗದಿಂದ ಮುಂದಕ್ಕೆ ಕೊಂಡೊಯ್ಯುವಲ್ಲಿ ಕೈಜೋಡಿಸುವ ಸೋದರ ಭೂಪೇಂದ್ರ ಅವರಿಗೆ, ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೆ, ಎಲ್ಲ ಸಂಸದರಿಗೆ, ಶಾಸಕರಿಗೆ ಮತ್ತು ವೇದಿಕೆ ಮೇಲೆ ಆಸೀನರಾದಂತಹ ಎಲ್ಲ ಕಾರ್ಪೋರೇಟ್ ದಿಗ್ಗಜರಿಗೆ ಅಭಿನಂದಿಸ ಬಯಸುತ್ತೇನೆ ಮತ್ತು ಧನ್ಯವಾದ ಹೇಳ ಬಯಸುತ್ತೇನೆ.
ಈಗ ನಮ್ಮ ಅಹ್ಮದಾಬಾದ್ ಮತ್ತು ಗುಜರಾತ್ ನಲ್ಲಿ ವಿಶ್ವದ ಅತ್ಯಂತ ಮುಂದುವರಿದ ವೈದ್ಯಕೀಯ ತಂತ್ರಜ್ಞಾನ, ಗುಣಮಟ್ಟದ ಸೌಲಭ್ಯಗಳು ಮತ್ತು ವೈದ್ಯಕೀಯ ಮೂಲ ಸೌಕರ್ಯಗಳು ಲಭ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದಂತಹ ಸಾಮಾನ್ಯ ಜನತೆಯಿಂದ ಇವು ಬಳಸಲ್ಪಡುತ್ತವೆ. ಸೋದರ ಸೋದರಿಯರೆ, ಇಂಥ ಎಲ್ಲರಿಗೆ ಈ ಸರ್ಕಾರಿ ಆಸ್ಪತ್ರೆಗಳು ಮತ್ತು ಅದರ ಸಿಬ್ಬಂದಿ ದಿನದ 24 ಗಂಟೆ ಸೇವೆ ನೀಡಲು ಸಿದ್ಧರಾಗಿರುತ್ತಾರೆ. ಮೂರುವರೆ ವರ್ಷಗಳ ಹಿಂದೆ 1200 ಹಾಸಿಗೆಯ ಸಾಮರ್ಥ್ಯದ ಸೂಪರ್ ಸ್ಪೆಷಿಯಾಲಿಟಿ ಮತ್ತುಪ್ರಸೂತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಉದ್ಘಾಟನೆಗಾಗಿ ಈ ಕ್ಯಾಂಪಸ್ ಗೆ ಭೇಟಿ ನೀಡುವಸೌಭಾಗ್ಯ ದೊರೆತಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಇಂದು ಇಷ್ಟೊಂದು ಅಗಾಧವಾದ ರೀತಿಯಲ್ಲಿ ಈ ಮೆಡಿಸಿಟಿ ಕ್ಯಾಂಪಸ್ ಸಿದ್ಧಗೊಂಡಿದೆ. ಇದರ ಜೊತೆ ಜೊತೆಗೆ ಮೂತ್ರ ಪಿಂಡದ ರೋಗಗಳ ಸಂಸ್ಥೆಮತ್ತು ಯು ಎನ್ ಮೆಹ್ತಾ ಹೃದ್ರೋಗ ಸಂಸ್ಥೆಗಳು ಕೂಡಾ ತಮ್ಮ ಸೇವೆಗಳನ್ನು ವಿಸ್ತರಿಸುತ್ತಿವೆ.
ಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನೂತನ ಕಟ್ಟಡದಲ್ಲಿ ಸುಧಾರಿತ ಅಸ್ತಿಮಜ್ಜೆ ಕಸಿಯ ಸುಧಾರಿತ ಸೌಲಭ್ಯಗಳಂತಹವನ್ನು ಕೂಡಾ ಆರಂಭಿಸಲಾಗುತ್ತಿದೆ. ಇದು ಸೈಬರ್ ನೈಫ್ ನಂತಹ ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿದ ದೇಶದ ಪ್ರಥಮ ಸರ್ಕಾರಿ ಆಸ್ಪತ್ರೆ ಇದಾಗಲಿದೆ.
ಗುಜರಾತ್ ನಷ್ಟು ಅಭಿವೃದ್ಧಿ ವೇಗವಿದ್ದಾಗ ಮತ್ತು ಸಾಧನೆಗಳು ಎಷ್ಟರಮಟ್ಟಿಗಿರುತ್ತವೆ ಎಂದರೆ ಕೆಲವೊಮ್ಮೆ ಅವುಗಳನ್ನು ಎಣಿಸಲು ಸಹ ಕಷ್ಟವಾಗುತ್ತದೆ. ಗುಜರಾತ್ ಎಂದಿನಂತೆ, ದೇಶದಲ್ಲಿಯೇ ಪ್ರಥಮ ಬಾರಿಗೆ ಮಾಡುತ್ತಿರುವ ಸಾಧನೆಗಳು ಬಹಳಷ್ಟಿವೆ. ಈ ಸಾಧನೆಗಳಿಗಾಗಿ ನಿಮ್ಮೆಲ್ಲರನ್ನು ಮತ್ತು ಗುಜರಾತ್‌ನ ಸಮಸ್ತ ಜನರನ್ನು ಅಭಿನಂದಿಸುತ್ತೇನೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಠಿಣಪರಿಶ್ರಮದಿಂದ ಈ ಯೋಜನೆಗಳನ್ನು ಯಶಸ್ವಿಗೊಳಿಸಿದ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಮತ್ತು ಅವರ ಸರ್ಕಾರವನ್ನು ನಾನು ಮನಃಪೂರ್ವಕ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದು, ನಾನು ಈ ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಗುಜರಾತ್‌ನ ಪ್ರಮುಖ ಪ್ರಯಾಣದ ಬಗ್ಗೆ ಮಾತನಾಡಬಯಸುತ್ತೇನೆ. ವಿವಿಧ ರೋಗಗಳಿಂದ ಮುಕ್ತಿ ಪಡೆಯುವ ಪಯಣವಿದಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮೋದಿಯವರು ವಿವಿಧ ರೀತಿಯ
ಕಾಯಿಲೆಗಳ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ ಎಂದು ನೀವು ಆಶ್ಚರ್ಯ ಪಡಬಹುದು. ಇಲ್ಲಿ ಇದ್ದಂತಹ ಕಾಯಿಲೆಗಳ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ನಾನೊಬ್ಬ ವೈದ್ಯನಲ್ಲ ಆದರೆ ಈ ಎಲ್ಲಾ ಕಾಯಿಲೆಗಳನ್ನು ನಾನು ಗುಣಪಡಿಸಬೇಕಾಗಿತ್ತು. ಸುಮಾರು 20-25 ವರ್ಷಗಳ ಹಿಂದೆ ಗುಜರಾತ್ ಅನೇಕ ರೋಗಗಳಿಂದ ಪೀಡಿತವಾಗಿತ್ತು. ಅದರಲ್ಲಿ ಒಂದು ಕಾಯಿಲೆ - ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದ್ದುದು. ಎರಡನೆಯದು ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳು. ಮೂರನೆಯದ್ದು ವಿದ್ಯುತ್ ಕೊರತೆ. ನಾಲ್ಕನೆಯದ್ದು ನೀರಿನ ಕೊರತೆ. ಐದನೆಯ ರೋಗ ಎಲ್ಲೆಡೆ ವ್ಯಾಪಿಸಿದ ದುರಾಡಳಿತ. ಆರನೆಯದ್ದು ಕೆಟ್ಟ ಕಾನೂನು ಮತ್ತು ಸುವ್ಯವಸ್ಥೆ. ಮತ್ತು ವೋಟ್ ಬ್ಯಾಂಕ್ ರಾಜಕೀಯ ಈ ಎಲ್ಲ ರೋಗಗಳ ಮೂಲವಾಗಿತ್ತು. ಇಲ್ಲಿರುವ ಹಿರಿಯರು, ಹಿರಿಯ ತಲೆಮಾರಿನವರು ಇವೆಲ್ಲವನ್ನೂ ಅರಿತಿದ್ದಾರೆ. 20-25 ವರ್ಷಗಳ ಹಿಂದೆ ಗುಜರಾತ್‌ನ ಪರಿಸ್ಥಿತಿ ಹೀಗಿತ್ತು! ಉತ್ತಮ ಶಿಕ್ಷಣಕ್ಕಾಗಿ ಯುವಜನತೆ ರಾಜ್ಯದಿಂದ ಹೊರ ಹೋಗಬೇಕಾಗಿತ್ತು. ಉತ್ತಮ ಆಹಾರ ಮತ್ತು ಚಿಕಿತ್ಸೆಗಾಗಿ ಜನರು ಪರದಾಡಬೇಕಿತ್ತು. ಜನರು ವಿದ್ಯುತ್‌ಗಾಗಿ ಕಾಯಬೇಕಿತ್ತು. ಅವರು ಪ್ರತಿದಿನ ಭ್ರಷ್ಟಾಚಾರ ಹಾಗೂ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಹಿಸಬೇಕಿತ್ತು. ಆದರೆ ಆ ಎಲ್ಲ ಕಾಯಿಲೆಗಳನ್ನು ಹಿಮ್ಮೆಟ್ಟಿ ಇಂದು ಗುಜರಾತ್ ಮುನ್ನಡೆ ಸಾಧಿಸುತ್ತಿದೆ. ಆದ್ದರಿಂದಲೇ ಇಂಥ ವಿವಿಧ ರೋಗಗಳಿಂದ ರಾಜ್ಯವನ್ನು ಮುಕ್ತಗೊಳಿಸಲು ನಾವು ಅಭಿಯಾನವನ್ನು ಆರಂಭಿಸಿದ್ದೇವೆ, ಜೊತೆಗೆ ನಾಗರಿಕರು ಇಂಥ ರೋಗಗಳಿಂದ ಗುಣಮುಖರಾಗುತ್ತಿದ್ದಾರೆ. ಹೈಟೆಕ್ ಆಸ್ಪತ್ರೆಗಳ ವಿಷಯ ಮಾತನಾಡುವುದಾದರೆ ಇಂದು ಗುಜರಾತ್ ಅಗ್ರಸ್ಥಾನದಲ್ಲಿದೆ. ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಆಸ್ಪತ್ರೆಗೆ ಹಲವು ಬಾರಿ ಭೇಟಿ ನೀಡುತ್ತಿದ್ದೆ. ಆ ಸಮಯದಲ್ಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ವಿವಿಧ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಬರಲು ಇಚ್ಛಿಸುತ್ತಾರೆ ಎಂಬುದು ತಿಳಿಯಿತು.
ಸ್ನೇಹಿತರೆ,
ಇಂದು, ನಾವು ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬಗ್ಗೆ ಪ್ರಸ್ತಾಪಿಸುವುದಾದರೆ ಗುಜರಾತ್‌ಗೆ ಯಾವುದೇ ಹೋಲಿಕೆಯೇ ಇಲ್ಲ. ಗುಜರಾತ್‌ನಲ್ಲಿ ನೀರು, ವಿದ್ಯುತ್ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ದೊಂದಿಗೆ ಇಂದು ಸರ್ಕಾರವು ಗುಜರಾತಿನ ಕಲ್ಯಾಣಕ್ಕಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸ್ನೇಹಿತರೆ,
ಇಂದು ಅಹಮದಾಬಾದ್‌ನಲ್ಲಿರುವ ಈ ಹೈಟೆಕ್ ಮೆಡಿಸಿಟಿ ಮತ್ತು ಇತರ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ಗುಜರಾತ್‌ನ ಅಸ್ತಿತ್ವಕ್ಕೆ ಹೊಸ ಅರ್ಥವನ್ನು ತಂದುಕೊಟ್ಟಿವೆ. ಇದು ಕಲ್ಯಾಣ ಸಂಸ್ಥೆ ಮಾತ್ರವಲ್ಲದೆ, ಗುಜರಾತ್ ಜನತೆಯ ಸಾಮರ್ಥ್ಯದ ಸಂಕೇತವೂ ಆಗಿದೆ. ಗುಜರಾತ್‌ನ ಜನರು ಮೆಡಿಸಿಟಿಯಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಾರೆ ಮತ್ತು ಈಗ ವಿಶ್ವದ ಉನ್ನತ ವೈದ್ಯಕೀಯ ಸೌಲಭ್ಯಗಳು ತಮ್ಮ ರಾಜ್ಯದಲ್ಲಿ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಹೆಮ್ಮೆ ಪಡುತ್ತಾರೆ. ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿರುವ ಗುಜರಾತ್ ಅದರಲ್ಲೂ ಉತ್ತೇಜನವನ್ನು ಪಡೆಯಲಿದೆ.
ಸ್ನೇಹಿತರೆ,
ಸಾಮಾನ್ಯವಾಗಿ ನಾವು ಆರೋಗ್ಯಯುತ ದೇಹಕ್ಕಾಗಿ ಆರೋಗ್ಯಯುತ ಮನಸ್ಸು ಅವಶ್ಯ ಎಂದು ಕೇಳಿದ್ದೇವೆ. ಇದು ಸರ್ಕಾರಗಳಿಗೂ ಅನ್ವಯಿಸುತ್ತದೆ. ಸರ್ಕಾರದ ಮನಸ್ಸು ಆರೋಗ್ಯಯುತವಾಗಿಲ್ಲ ಎಂದಾದಲ್ಲಿ ಅವರ ಉದ್ದೇಶಗಳು ಸ್ಪಷ್ಟವಾಗಿರುವುದಿಲ್ಲ ಮತ್ತು ಜನರ ಬಗ್ಗೆ ಸಂವೇದನಾ ಶೀಲತೆಯೂ ಇರುವುದಿಲ್ಲ. ರಾಜ್ಯದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳೂ ದುರ್ಬಲಗೊಳ್ಳುತ್ತದೆ. 20-22 ವರ್ಷಗಳಿಂದ ಗುಜರಾತಿನ ಜನತೆ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ.ನೀವುಚಿಕಿತ್ಸೆ ಪಡೆಯಲು ಭೇಟಿ ನೀಡುವ ಹೆಚ್ಚಿನ ವೈದ್ಯರು ಖಂಡಿತವಾಗಿಯೂ ನಿಮಗೆ ಮೂರು ಸಲಹೆಗಳನ್ನು ನೀಡುತ್ತಾರೆ. ಅವರು ನಿಮಗೆ ಮೂರು ವಿಭಿನ್ನ ಪರ್ಯಾಯಗಳನ್ನು ತಿಳಿಸುತ್ತಾರೆ. ಮೊದಲಿಗೆ, ನೀವು ಔಷಧಿಯಿಂದ ಗುಣಮುಖರಾಗುತ್ತೀರಿ ಎಂದು ಅವರು ಹೇಳುತ್ತಾರೆ. ಔಷಧಿಗಳು ಪರಿಣಾಮ ಬೀರದಿದ್ದಾಗ, ಶಸ್ತ್ರಚಿಕಿತ್ಸೆಯ ಹೊರತಾಗಿ ಬೇರೆ ಆಯ್ಕೆಗಳೇ ಇಲ್ಲ ಎಂದು ಬಲವಂತಪಡಿಸುತ್ತಾರೆ. ಔಷಧಿಗಳು ಅಥವಾ ಶಸ್ತ್ರಚಿಕಿತ್ಸೆಯ ಜೊತೆಗೆ, ತಮ್ಮ ರೋಗಿಗಳನ್ನು ನೋಡಿಕೊಳ್ಳುವಂತೆ ಕುಟುಂಬದ ಸದಸ್ಯರಿಗೆ ಸಲಹೆ ನೀಡುತ್ತಾರೆ.
ಸ್ನೇಹಿತರೆ,
ಗುಜರಾತ್‌ನ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸಲು ನಮ್ಮ ಸರ್ಕಾರವು ಈ ಮೂರು ಚಿಕಿತ್ಸಾ ವಿಧಾನಗಳನ್ನು ಬಳಸಿತು. ರೋಗಿಗಳಿಗೆ ಏನು ಸಲಹೆ ನೀಡಿಲಾಗುತ್ತದೆಯೋ, ಅದೇ ಸೂತ್ರವನ್ನು ರಾಜ್ಯದಲ್ಲಿ ಪ್ರಚಲಿತದಲ್ಲಿರುವ ವ್ಯವಸ್ಥೆಗಳ ಸುಧಾರಣೆಗೂ ನಾನು ಬಳಸಿದೆ! ವೈದ್ಯರು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ. ಅದೇ ರೀತಿ ಧೈರ್ಯ ಮತ್ತು ಪೂರ್ಣ ಬಲದಿಂದ ಹಳೆಯ ಸರ್ಕಾರಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ನನಗೆ ಸಾಧ್ಯವಾಯಿತು. ನಿಷ್ಕ್ರಿಯತೆ, ಸಡಿಲತೆ ಮತ್ತು ಭ್ರಷ್ಟಾಚಾರದ ಮೇಲಿನ ನಿಯಂತ್ರಣದ ಕತ್ತರಿ ನನ್ನ ಶಸ್ತ್ರಚಿಕಿತ್ಸೆಯಾಗಿದೆ. ಎರಡನೆಯದಾಗಿ, ಇದು ಔಷಧವಾಗಿದೆ. ನನ್ನ ಪ್ರಕಾರ, ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು, ಮಾನವ
ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಶೋಧನೆಗೆ, ಆವಿಷ್ಕಾರಕ್ಕೆ, ಹೊಸ ಆಸ್ಪತ್ರೆಗಳನ್ನು ನಿರ್ಮಿಸಲು ಮತ್ತು ಅಂತಹ ಅನೇಕ ಉಪಕ್ರಮಗಳಿಗೆ ತಡೆರಹಿತ ಪ್ರಯತ್ನಗಳನ್ನು ಇದು ಒಳಗೊಂಡಿದೆ. ಮತ್ತು ಮೂರನೆಯದಾಗಿ, ಕಾಳಜಿವಹಿಸುವುದು. ಇದು ಗುಜರಾತ್‌ನ ಆರೋಗ್ಯ ಕ್ಷೇತ್ರವನ್ನು ಗುಣಪಡಿಸುವ ಪ್ರಮುಖ ಭಾಗವಾಗಿದೆ. ನಾವು ಕಾಳಜಿಯಿಂದ ಕೆಲಸ ಮಾಡಿದೆವು. ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಹಂಚಿಕೊಂಡೆವು. ಗುಜರಾತ್ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದ ದೇಶದ ಮೊದಲ ರಾಜ್ಯವಾಗಿದೆ ಎಂದು ನಾನು ಬಹಳ ನಮ್ರತೆಯಿಂದ
ಹೇಳಬಯಸುತ್ತೇನೆ. ಪ್ರಾಣಿಗಳಿಗೂ ದಂತ ಮತ್ತು ಕಣ್ಣಿನ ಚಿಕಿತ್ಸೆ ಇದೆ ಎಂದು ನಾನು ಹೇಳುತ್ತಿದ್ದಾಗ ಹೊರ ರಾಜ್ಯದ ಜನತೆಗೆ ಅದು ವಿಚಿತ್ರವೆನಿಸುತ್ತಿತ್ತು.
ಸೋದರ ಸೋದರಿಯರೇ,
ನಮ್ಮ ಪ್ರಯತ್ನಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಒಳಗೊಂಡಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಜಿ-20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಜಗತ್ತಿನಲ್ಲಿ ಇಂತಹ ಭೀಕರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ಭೂಮಿ, ಒಂದು ಆರೋಗ್ಯ ಮಿಷನ್‌ಗಾಗಿ ಕೆಲಸ ಮಾಡಲು ನಾನು ಜನರಲ್ಲಿ ಮನವಿ ಮಾಡಿದೆ. ಬಡವರಿಗೆ ಸಹಾಯ ಮಾಡುವಂತೆ ಕರೆ ನೀಡಿದ್ದೆ. ಕೊರೋನಾ ಸಮಯದಲ್ಲಿ ಹಲವಾರು ದೇಶಗಳು ನಾಲ್ಕರಿಂದ ಐದು ಲಸಿಕೆಗಳನ್ನು ನೀಡಿರುವುದನ್ನು ನಾವುನೋಡಿದ್ದೇವೆ, ಆದರೆ ಇನ್ನೂ ಕೆಲವು ದೇಶಗಳಲ್ಲಿ ಬಡ ಜನರಿಗೆ ಲಸಿಕೆಯ ಒಂದು ಡೋಸ್ ಕೂಡ ಸಿಗಲಿಲ್ಲ. ಆಗ ನನಗೆ ನೋವಾಗಿತ್ತು. ಸ್ನೇಹಿತರೆ, ವಿಶ್ವದ ಯಾವ ಭಾಗದಲ್ಲೂ ಯಾರೂ ಸಾಯಬಾರದು ಎಂಬ ಉದ್ದೇಶದಿಂದ ನಾವು ವಿಶ್ವಕ್ಕೆ ಲಸಿಕೆಗಳನ್ನು ನೀಡಲು ನಿರ್ಧರಿಸಿದೆವು. ಮತ್ತು ವ್ಯವಸ್ಥೆಯು ಆರೋಗ್ಯಕರವಾದಾಗ, ಗುಜರಾತ್‌ನ ಆರೋಗ್ಯ ಕ್ಷೇತ್ರವೂ ಸುಧಾರಿಸಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ದೇಶದಲ್ಲಿ ಜನರು ಗುಜರಾತ್‌ನ ಉದಾಹರಣೆಗಳನ್ನು ನೀಡಲಾರಂಭಿಸಿದರು.
ಸ್ನೇಹಿತರೆ,
ಸಂಪೂರ್ಣ ಶೃದ್ಧೆಯಿಂದ ಸಮಗ್ರ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದಾಗ, ಅವುಗಳ ಫಲಿತಾಂಶ ಸಮಾನವಾಗಿ ಬಹುಪಾಲಾಗಿರುತ್ತದೆ. ಇದು ಗುಜರಾತ್ ನ ಯಶಸ್ಸಿನ ಮಂತ್ರವಾಗಿದೆ. ಇಂದು ಗುಜರಾತ್‌ನಲ್ಲಿ ಆಸ್ಪತ್ರೆಗಳಿವೆ, ವೈದ್ಯರಿದ್ದಾರೆ ಮತ್ತು ಯುವಕರು ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಲು ಅವಕಾಶಗಳಿವೆ. ಇಂತಹ ದೊಡ್ಡ ರಾಜ್ಯದಲ್ಲಿ ಸುಮಾರು 20-22 ವರ್ಷಗಳ ಹಿಂದೆ ಕೇವಲ ಒಂಬತ್ತು ವೈದ್ಯಕೀಯ ಕಾಲೇಜುಗಳಿದ್ದವು. ಒಂಬತ್ತು ವೈದ್ಯಕೀಯ ಕಾಲೇಜುಗಳು ಮಾತ್ರ! ಕೆಲವೇ ವೈದ್ಯಕೀಯ ಕಾಲೇಜುಗಳು ಇದ್ದಾಗ, ಸ್ವಾಭಾವಿಕವಾಗಿ ಕೈಗೆಟುಕುವ ಮತ್ತು ಉತ್ತಮ ಚಿಕಿತ್ಸೆಗೆ ಅವಕಾಶವಿರಲಿಲ್ಲ. ಆದರೆ, ಇಂದು 36 ವೈದ್ಯಕೀಯ ಕಾಲೇಜುಗಳು ಸೇವೆಯನ್ನು
ಸಲ್ಲಿಸುತ್ತಿವೆ. 20 ವರ್ಷಗಳ ಹಿಂದೆ ಗುಜರಾತ್‌ನ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 15,000 ಹಾಸಿಗೆಗಳಿದ್ದವು. ಪ್ರಸ್ತುತ ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ 60 ಸಾವಿರಕ್ಕೆ ಏರಿಕೆಯಾಗಿದೆ. ಈ ಹಿಂದೆ ಗುಜರಾತಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ಕೇವಲ 2,200 ಸೀಟುಗಳಿದ್ದವು. ಈಗ ಗುಜರಾತ್‌ನಲ್ಲಿ ನಮ್ಮ ಯುವಕರಿಗೆ 8,500 ವೈದ್ಯಕೀಯ ಸೀಟುಗಳು ಲಭ್ಯವಿವೆ. ಈ ಕಾಲೇಜುಗಳಿಂದ ಪದವಿ ಪಡೆದ ವೈದ್ಯರು ಗುಜರಾತ್‌ನ ಮೂಲೆ ಮೂಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಇಂದು, ಗುಜರಾತ್‌ನಲ್ಲಿ ಸಾವಿರಾರು ಉಪ-ಕೇಂದ್ರಗಳು, ಸಿಎಚ್‌ಸಿಗಳು, ಪಿಎಚ್‌ಸಿಗಳು ಮತ್ತು ಕ್ಷೇಮ ಕೇಂದ್ರಗಳ ದೊಡ್ಡ ಜಾಲವನ್ನು ಸ್ಥಾಪಿಸಲಾಗಿದೆ.
ಸ್ನೇಹಿತರೆ,
ನಾನು ಗುಜರಾತ್ ನಲ್ಲಿ ಕಲಿತಿದ್ದೆಲ್ಲವೂ ದೆಹಲಿಗೆ ತೆರಳಿದೆ ಮೇಲೆ ಬಹಳ ಉಪಯುಕ್ತವಾಯಿತು ಎಂದು ಹೇಳಲು ನಾನು ಬಯಸುತ್ತೇನೆ. ಇದೇ ದೃಷ್ಟಿಕೋನದೊಂದಿಗೆ ಕೇಂದ್ರದಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದೆವು. ಕಳೆದ 8 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 22 ಹೊಸ ಎಐಐಎಂಎಸ್ ಗಳನ್ನು ನಾವು ಆರಂಭಿಸಿದ್ದೇವೆ. ಇದರಿಂದ ಗುಜರಾತ್ ಕೂಡ ಲಾಭ ಪಡೆಯಿತು. ಗುಜರಾತ್ ನ ರಾಜ್ ಕೋಟ್ ನಲ್ಲಿ ಪ್ರಥಮ ಎಐಐಎಂಎಸ್ ನ್ನು ಆರಂಭಿಸಲಾಯಿತು. ಗುಜರಾತ್ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯವೈಖರಿಯನ್ನು ಗಮನಿಸಿದಾಗ ವೈದ್ಯಕೀಯ, ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ, ಗುಜರಾತ್ ಹೆಸರು ವಿಶ್ವಮಟ್ಟದಲ್ಲಿ ಚರ್ಚಿಸಲ್ಪಡುವ ದಿನ ದೂರವಿಲ್ಲ.
ಸ್ನೇಹಿತರೆ,
ಸಂಪನ್ಮೂಲಗಳೊಂದಿಗೆ ಸಂವೇದನಶೀಲತೆ ಬೆರೆತಾಗ ಸಂಪನ್ಮೂಲಗಳು ಸೇವೆಯ ಉತ್ತಮ ಮಾಧ್ಯಮವಾಗುತ್ತವೆ. ಆದರೆ, ಎಲ್ಲಿ ಆಪ್ಯಾಯಮಾನತೆಯಿರುವುದಿಲ್ಲವೋ ಅಲ್ಲಿ ಸಂಪನ್ಮೂಲ ವ್ಯಕ್ತಿಗಳು ಸ್ವಾರ್ಥಿಗಳು ಮತ್ತು ಭೃಷ್ಟರಾಗುಳಿದುಬಿಡುತ್ತಾರೆ. ಅದಕ್ಕೆಂದೇ ಆರಂಭದಲ್ಲಿ ನಾನು ಸಂವೇದನಾ ಶೀಲತೆ ಬಗ್ಗೆ ಪ್ರಸ್ತಾಪಿಸಿದೆ ಮತ್ತು ಹಿಂದಿನ ಅರಾಜಕತೆ ವ್ಯವಸ್ಥೆ ಬಗ್ಗೆ ನೆನಪಿಸಿದೆ. ಈಗ ವ್ಯವಸ್ಥೆ ಬದಲಾಗಿದೆ. ಈ ಸಂವೇದನಾ ಶೀಲತೆ ಮತ್ತು ಪಾರದರ್ಶಕತೆಯ ಪರಿಣಾಮವಾಗಿ ಅಹ್ಮದಾಬಾದ್ ನಲ್ಲಿ ಮೆಡಿಸಿಟಿ ಆರಂಭಿಸಲಾಗಿದೆ ಮತ್ತು ಕ್ಯಾನ್ಸರ್ ಸಂಸ್ಥೆಯನ್ನು ನವೀಕರಣಗೊಳಿಸಲಾಗಿದೆ. ಇದೇ ವೇಳೆ ಹಳ್ಳಿಗಳಿಂದ ಬರುವ ರೋಗಿಗಳು ಕೀಮೊಥೆರಪಿ ಚಿಕಿತ್ಸೆಗೆ ಅಲ್ಲಿ ಇಲ್ಲಿ ಓಡಾಡುವುದನ್ನು ತಪ್ಪಿಸಲು ಗುಜರಾತ್ ನ ಪ್ರತಿ ಜಿಲ್ಲೆಗಳಲ್ಲಿ ಡೆ ಕೇರ್ ಕೀಮೊಥೆರಪಿ ಸೌಲಭ್ಯಗಳನ್ನು ಆರಂಭಿಸಲಾಗಿದೆ. ನೀವು ಗುಜರಾತ್ ನಲ್ಲಿ ಎಲ್ಲಿಯೇ ಇರಲಿ ನಿಮ್ಮ ಜಿಲ್ಲೆಯಲ್ಲಿಯೇ ನಿಮ್ಮ ಮನೆಗೆ ಹತ್ತಿರದಲ್ಲಿಯೇ ಕೀಮೊಥೆರಪಿ ಚಿಕಿತ್ಸೆಯನ್ನು ಪಡೆಯಬಲ್ಲಿರಿ. ಅದೇ ರೀತಿ
ಭೂಪೇಂದ್ರಭಾಯಿ ಸರ್ಕಾರ ತಾಲೂಕಾ ಮಟ್ಟದಲ್ಲಿ ಡಯಾಲಸಿಸ್ ನಂತಹ ಕ್ಲಿಷ್ಟ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ತುರ್ತು ಸಮಯದಲ್ಲಿ ರೋಗಿಗಳಿಗೆ ಅವರ ಮನೆಯಲ್ಲೇ ಸೇವೆ ಒದಗಿಸಲು ಗುಜರಾತ್ ಈಗ ಡಯಾಲಸಿಸ್ ವ್ಯಾನ್ ಗಳನ್ನು ಕೂಡಾ ಆರಂಭಿಸಿದೆ. ಇಂದು 8 ಮಹಡಿಯ ಆಶ್ರಯ ತಾಣ ರೇನ್ ಬಸೇರಾವನ್ನು ಕೂಡಾ ಇಲ್ಲಿ ಉದ್ಘಾಟಿಸಲಾಯಿತು. ಡಯಾಲಸಿಸ್ ಗೆ ಸಂಬಂಧಿಸಿದಂತೆ ದೇಶಾದ್ಯಂತ ಸ್ಥಿತಿ ಬಹಳ ಶೋಚನೀಯವಾಗಿದೆ. ಸೂಚಿತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಡಯಾಲಸಿಸ್ ರೋಗಿಗಳಿಗೆ ಅತ್ಯವಶ್ಯವಾಗಿದೆ. ನಾನು ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ತೊಡಗಿದಂತಹ ಜನರೊಂದಿಗೆ ಮಾತನಾಡಿದ್ದೇನೆ. ಭಾರತದ ಪ್ರತಿ ಜಿಲ್ಲೆಗಳಲ್ಲಿ ಡಯಾಲಸಿಸ್ ಕೇಂದ್ರವನ್ನು ತೆರಯಬಯಸುತ್ತೇನೆ ಎಂದು ಅವರಿಗೆ ಹೇಳಿದೆ. ಅದೇ ರೀತಿ ಗುಜರಾತ್ ನಲ್ಲಿ ತೆಹಸೀಲ್ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ದೇಶದಲ್ಲಿ ಜಿಲ್ಲಾ ಮಟ್ಟದಲ್ಲಿ ಡಯಾಲಸಿಸ್ ಸೇವೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಕೆಲಸವನ್ನು ಕೈಗೆತ್ತಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ.
ಸ್ನೇಹಿತರೆ,
ರೋಗಿಯ ಕುಟುಂಬಸ್ಥರು ಮುಂದೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸದಂತೆ ಗುಜರಾತ್ ಸರ್ಕಾರ ಖಚಿತಪಡಿಸಿದೆ. ಈ ರೀತಿ ಇಂದು ನಮ್ಮ ದೇಶ ಕಾರ್ಯನಿರ್ವಹಿಸುತ್ತಿದೆ. ಇದು ಇಂದಿನ ದೇಶದ ಆಸ್ತಿಯಾಗಿದೆ.
ಸ್ನೇಹಿತರೆ,
ಸರ್ಕಾರ ಸಂವೇದನಾಶೀಲವಾಗಿದ್ದಾಗ ಸಮಾಜದ ಅಶಕ್ತ ವರ್ಗ, ಬಡವರು, ಮಧ್ಯಮ ವರ್ಗದವರು, ತಾಯಂದಿರು ಮತ್ತು ಸೋದರಿಯರು ಹೆಚ್ಚೆಚ್ಚು ಲಾಭ ಪಡೆಯುತ್ತಾರೆ. ಈ ಹಿಂದೆ ಗುಜರಾತ್ ನಲ್ಲಿ ಶಿಶು ಮತ್ತು ತಾಯಂದಿರ ಸಾವಿನ ಸಂಖ್ಯೆ ಚಿಂತೆಯ ವಿಷಯವಾಗಿತ್ತು ಮತ್ತು ಅಂದಿನ ಸರ್ಕಾರ ಈ ವಿಷಯವನ್ನು ಪರಿಗಣಿಸಿರಲಿಲ್ಲ. ಇದು ಮಾತೆಯರು ಮತ್ತು ಸೋದರಿಯರ ಜೀವ್ಕಕೆ ಸಂಬಂಧಿಸಿದ ವಿಷಯವಾದ್ದರಿಂದ ಇದನ್ನು ಅದೃಷ್ಟವನ್ನು ದೂಷಿಸುವಂತಹ ವಿಷಯವಾಗಬಾರದು ಎಂದು ನಾವು ನಿರ್ಧರಿಸಿದೆವು. ಕಳೆದ 20 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ನಾವು ಸೂಕ್ತ ನೀತಿ ನಿರೂಪಣೆಗಳನ್ನು ಸಿದ್ಧಗೊಳಿಸಿ ಜಾರಿಗೆ ತಂದಿದ್ದೇವೆ. ಇಂದು ಗುಜರಾತ್ ನಲ್ಲಿ ತಾಯಂದಿರ ಮತ್ತು ಶಿಶಿಗಳ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ತಾಯಂದಿರ ಜೀವರಕ್ಷೆಯನ್ನು ಮಾಡಲಾಗುತ್ತಿದೆ ಮತ್ತು ನವಜಾತ ಶಿಶುಗಳು ಕೂಡಾ ಸುರಕ್ಷಿತವಾಗಿ ಈ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿವೆ. ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನ ಪ್ರಥಮ ಬಾರಿಗೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ವೃದ್ಧಿಯಾಗುವಂತೆ ಮಾಡಿದೆ. ಈ ಯಶಸ್ಸಿನ ಹಿಂದೆ ಗುಜರಶಾತ್ ಸರ್ಕಾರದ ಚಿರಂಜೀವಿ ಮತ್ತು ಖಿಲ್ ಖಿಲಾಹಟ್ ಯೋಜನೆಗಳ ಶ್ರೇಯಸ್ಸಿದೆ. ಗುಜರಾತ್ ನ ಈ ಯಶಸ್ಸು ‘ಮಿಷನ್ ಇಂದ್ರಧನುಷ್’ ಮತ್ತು ‘ಮಾತೃವಂದನಾ’ ದಂತಹ ಯೋಜನೆಗಳ ಮೂಲಕ ಸಂಪೂರ್ಣ ದೇಶಕ್ಕೆ ಮಾರ್ಗದರ್ಶನ ನೀಡುತ್ತಿದೆ.
ಸ್ನೇಹಿತರೆ,
ಇಂದು ದೇಶದ ಎಲ್ಲ ಬಡವರಿಗೆ ಆಯುಷ್ಮಾನ್ ಭಾರತದಂತಹ ಯೋಜನೆಗಳು ಉಚಿತ ಚಿಕಿತ್ಸೆ ಒದಗಿಸುತ್ತಿವೆ. ಗುಜರಾತ್ ನಲ್ಲಿ ‘ಆಯುಷ್ಮಾನ್ ಭಾರತ’ ಮತ್ತು ‘ಮುಖ್ಯಮಂತ್ರಿ ಅಮೃತಮ್’ ಯೋಜನೆಗಳು ಬಡವರ ಚಿಂತೆ ಮತ್ತು ಹೊರೆಗಳನ್ನು ಕಡಿಮೆ ಮಾಡುತ್ತಿವೆ. ಇದು ಡಬಲ್ ಇಂಜಿನ್ ಸರ್ಕಾರದ ಶಕ್ತಿಯಾಗಿದೆ.
ಸ್ನೇಹಿತರೆ,
ಶಿಕ್ಷಣ ಮತ್ತು ಆರೋಗ್ಯ ಎರಡೂ ಕ್ಷೇತ್ರಗಳು ವರ್ತಮಾನಕಾಲದ ಮತ್ತು ಭವಿಷ್ಯದ ದಿಕ್ಕನ್ನು ನಿರ್ಧರಿಸುವಂತಹವುಗಳಾಗಿವೆ. ಉದಾಹರಣೆಗೆ, 2019 ರಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಸೌಲಭ್ಯವಿತ್ತು. ಒಂದು ವರ್ಷದ ನಂತರ, ಜಾಗತಿಕ ಸಾಂಕ್ರಾಮಿಕ ರೋಗ ಅಪ್ಪಳಿಸಿದಾಗ, ಈ ಆಸ್ಪತ್ರೆಯು ಅತಿದೊಡ್ಡ ಕೇಂದ್ರವಾಗಿ ಹೊರಹೊಮ್ಮಿತು. ಆ ಒಂದು ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಎಷ್ಟು ಜೀವಗಳನ್ನು ಉಳಿಸಿತು? ಅದೇ ರೀತಿ, 2019 ರಲ್ಲಿ ಅಹಮದಾಬಾದ್ ನಲ್ಲಿ ಎಎಂಸಿ ಮತ್ತು ಎಸ್ ವಿ ಪಿ ಆಸ್ಪತ್ರೆಗಳನ್ನು ಪ್ರಾರಂಭಿಸಲಾಯಿತು. ಈ ಆಸ್ಪತ್ರೆಯು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಕಳೆದ 20 ವರ್ಷಗಳಲ್ಲಿ ಗುಜರಾತ್‌ನಲ್ಲಿ ಅಂತಹ ಆಧುನಿಕ ವೈದ್ಯಕೀಯ ಮೂಲಸೌಕರ್ಯವಿಲ್ಲದಿದ್ದರೆ, ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ನಮಗೆ ಎಷ್ಟು ಕಷ್ಟಕರವಾಗಿರುತ್ತದೆ ಎಂದು ಊಹಿಸಿ? ನಾವು ವರ್ತಮಾನವನ್ನು ಸುಧಾರಿಸಬೇಕು ಮತ್ತು ಗುಜರಾತ್‌ನ ಭವಿಷ್ಯವನ್ನು ಸಹ ಕಾಪಾಡಬೇಕು. ಗುಜರಾತ್ ತನ್ನ ಅಭಿವೃದ್ಧಿಯ ಈ ವೇಗವನ್ನು ಮತ್ತಷ್ಟು ವೃದ್ಧಿಸುತ್ತದೆ ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಭರವಸೆಯಿದೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಮತ್ತು ಇನ್ನಷ್ಟು ಶಕ್ತಿಯೊಂದಿಗೆ ನಾವು ನಿಮ್ಮ ಸೇವೆಯನ್ನು ಮುಂದುವರಿಸುತ್ತೇವೆ. ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ಆರೋಗ್ಯವಾಗಿರಿ ಮತ್ತು ನಿಮ್ಮ ಕುಟುಂಬವು ಆರೋಗ್ಯವಾಗಿರಲಿ. ಈ ಶುಭಕಾಮನೆಗಳೊಂದಿಗೆ ನನ್ನ ಭಾಷಣಕ್ಕೆ ವಿರಾಮ ನೀಡುತ್ತೇನೆ. ಅನಂತ ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣದ ಬಹುಪಾಲು ಗುಜರಾತಿ ಭಾಷೆಯಲ್ಲಿತ್ತು.
******
(Release ID: 1867576)
Read this release in:
Odia
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam