ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

 ಮೂರು ದಿನಗಳ “ವಾಡಾ ಅಥ್ಲೀಟ್ ಜೈವಿಕ ಪಾಸ್‌ ಪೋರ್ಟ್ ಸಿಂಪೋಸಿಯಂ- 2022” ರ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್


ಉದ್ದೀಪನ ಔಷಧದ ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಸಿಂಪೋಸಿಯಂ ದೊಡ್ಡ ಮೈಲಿಗಲ್ಲಾಗಲಿದೆ ಮತ್ತು ಭಾರತದಲ್ಲಿ ಉದ್ದೀಪನ ಔಷಧ ವಿರೋಧಿ ಕಾರ್ಯಕ್ರಮವನ್ನು ಬಲಪಡಿಸುತ್ತದೆ: ಶ್ರೀ ಅನುರಾಗ್ ಠಾಕೂರ್

ಇತ್ತೀಚೆಗೆ ಜಾರಿಗೆ ತರಲಾದ ರಾಷ್ಟ್ರೀಯ ಉದ್ದೀಪನ ಔಷಧ ವಿರೋಧಿ ಕಾಯಿದೆ 2022 ದೇಶದ ಎಲ್ಲಾ ಹಂತಗಳಲ್ಲಿ ಸ್ವಚ್ಛ ಕ್ರೀಡೆಗಾಗಿ ಭಾರತದ ಬಲವಾದ ಸಂಕಲ್ಪವಾಗಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 12 OCT 2022 2:48PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದು ನವದೆಹಲಿಯಲ್ಲಿ ಮೂರು ದಿನಗಳ “ವಾಡಾ ಅಥ್ಲೀಟ್ ಜೈವಿಕ ಪಾಸ್‌ ಪೋರ್ಟ್ (ಎಬಿಪಿ) ಸಿಂಪೋಸಿಯಂ- 2022”ರ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಈ ಸಿಂಪೋಸಿಯಂ ಅನ್ನು ರಾಷ್ಟ್ರೀಯ ಉದ್ದೀಪನ ಔಷಧ ನಿಗ್ರಹ ಸಂಸ್ಥೆ (ನಾಡಾ) ಮತ್ತು ರಾಷ್ಟ್ರೀಯ ಉದ್ದೀಪನ ಔಷಧ ಪರೀಕ್ಷಾ ಪ್ರಯೋಗಾಲಯ (ಎನ್‌.ಡಿಟಿಎಲ್) ಆಯೋಜಿಸಿದೆ. ಕ್ರೀಡಾ ಕಾರ್ಯದರ್ಶಿ ಶ್ರೀಮತಿ. ಸುಜಾತಾ ಚತುರ್ವೇದಿ, ರಾಷ್ಟ್ರೀಯ ಉದ್ದೀಪನ ಔಷಧ ನಿಗ್ರಹ ಸಂಸ್ಥೆ ಮಹಾ ನಿರ್ದೇಶಕಿ ಶ್ರೀಮತಿ ರೀತು ಸೇನ್, ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ (ಅಥ್ಲೀಟ್ ಜೈವಿಕ ಪಾಸ್‌ಪೋರ್ಟ್) ಸಹಾಯಕ ನಿರ್ದೇಶಕ ಡಾ.  ರೀಡ್ ಐಕಿನ್, ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ  ಏಷ್ಯಾ / ಓಷಿಯಾನಿಯಾ ಕಚೇರಿಯ ಶ್ರೀ. ಕಜುಗಿರೊ ಹಯಾಶಿ ಮತ್ತು ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ ಹಿರಿಯ ವ್ಯವಸ್ಥಾಪಕ ಡಾ. ನಾರ್ಬರ್ಟ್ ಬೌಮ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 


 
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿಗೆ ಎಬಿಪಿ ವಿಚಾರ ಸಂಕಿರಣವನ್ನು ಆಯೋಜಿಸುತ್ತಿರುವುದು ನಮಗೆ ಹೆಚ್ಚು ವಿಶೇಷವಾಗಿದೆ, ಏಕೆಂದರೆ ನಾವು ಭಾರತದ 75 ನೇ ಸ್ವಾತಂತ್ರ್ಯವರ್ಷವನ್ನು ಆಜಾದಿ ಕಾ ಅಮೃತ ಮಹೋತ್ಸವ ಎಂದು ಆಚರಿಸುತ್ತಿದ್ದೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಕ್ರೀಡಾ ರಂಗದಲ್ಲಿ ನಿರಂತರವಾಗಿ ಹೊಸ ಔನ್ನತ್ಯ ಸಾಧಿಸುತ್ತಿದೆ ಎಂದು ಹೇಳಿದರು.

 

 


ಉದ್ದೀಪನ ಔಷಧ ನಿಗ್ರಹ ಅಥ್ಲೀಟ್ ಜೈವಿಕ ಪಾಸ್‌ ಪೋರ್ಟ್ ಬಹಳ ಮುಖ್ಯವಾದ ವೈಜ್ಞಾನಿಕ ಸಾಧನವಾಗಿದೆ ಎಂದು ಶ್ರೀ ಠಾಕೂರ್ ಒತ್ತಿ ಹೇಳಿದರು ಮತ್ತು ಸಂಬಂಧಿತ ಸಂಶೋಧನೆಯು ಕ್ರೀಡೆಯಲ್ಲಿ ಉದ್ದೀಪನ ಔಷಧ ಸೇವನೆಯನ್ನು ಪತ್ತೆಹಚ್ಚಲು ಮಾತ್ರವಲ್ಲದೆ ಅದನ್ನು ನಿಗ್ರಹಿಸಲು ಜಗತ್ತಿಗೆ ಅವಕಾಶ ಕಲ್ಪಿಸುತ್ತದೆ. ಈ ಸಿಂಪೋಸಿಯಂ ಎಬಿಪಿಯ ವಿಕಾಸ ಮತ್ತು ಬಲವರ್ಧನೆಗೆ ಮಾತ್ರವಲ್ಲದೆ ಉದ್ದೀಪನ ಔಷಧ ನಿಗ್ರಹದ ನಮ್ಮ ಸಂಘಟಿತ ಹೋರಾಟಕ್ಕೂ ಒಂದು ದೊಡ್ಡ ಮೈಲಿಗಲ್ಲಾಗಲಿ ಎಂದು ಅವರು ಆಶಿಸಿದರು. ನಮ್ಮ ಕ್ರೀಡಾಪಟುಗಳು ಮತ್ತು ಇಡೀ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಉದ್ದೀಪನ ಔಷಧ ಪಿಡುಗಿನಿಂದ ರಕ್ಷಿಸಲು ನಮಗೆ ಅಧಿಕಾರ ನೀಡುವ ಜ್ಞಾನ, ಪರಿಕರಗಳು, ಸಂಶೋಧನೆ ಮತ್ತು ಪರಿಣತಿಯೊಂದಿಗೆ ನಮ್ಮನ್ನು ನಾವು ಸಜ್ಜುಗೊಳಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಕೇಂದ್ರ ಸಚಿವರು ಭಾಗವಹಿಸಿರುವ ಎಲ್ಲರಿಗೂ ಕೋರಿದರು. ಈ ಸಿಂಪೋಸಿಯಂ ಭಾರತದಲ್ಲಿ ಉದ್ದೀಪನ ಔಷಧ ನಿಗ್ರಹ ಕಾರ್ಯಕ್ರಮವನ್ನು ಬಲಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ.

ಜಾಗತಿಕ ಉದ್ದೀಪನ ಔಷಧ ನಿಗ್ರಹ ಆಂದೋಲನಕ್ಕೆ ಭಾರತದ ಅಚಲವಾದ ಬದ್ಧತೆಯ ಗುರುತಾಗಿ ಭಾರತ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ಉದ್ದೀಪನ ಔಷಧ ನಿಗ್ರಹ ಕಾಯ್ದೆ, 2022 ಎಂಬ ಉದ್ದೀಪನ ಔಷಧ ನಿಗ್ರಹ ಕಾಯಿದೆಯನ್ನು ಜಾರಿಗೆ ತಂದಿದೆ ಎಂದು ಶ್ರೀ ಠಾಕೂರ್ ತಿಳಿಸಿದರು. ಈ ಕಾಯಿದೆಯು ದೇಶದ ಎಲ್ಲ ಹಂತಗಳಲ್ಲಿ ಸ್ವಚ್ಛ ಕ್ರೀಡೆಗಾಗಿ ಭಾರತ ಸರ್ಕಾರದ ಬಲವಾದ ಸಂಕಲ್ಪದ ದ್ಯೋತಕವಾಗಿದೆ ಎಂದರು.

 

ಕಳೆದ ಒಂದು ವರ್ಷದಲ್ಲಿ ನಾವು ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ (ವಾಡಾ)ದಲ್ಲಿ ನಮ್ಮ ಕೊಡುಗೆಯನ್ನು ಹೆಚ್ಚಿಸಿದ್ದೇವೆ ಮತ್ತು ನಮ್ಮ ಕೊಡುಗೆ ಏಷ್ಯಾದಲ್ಲಿ 4 ನೇ ಅತ್ಯಧಿಕವಾಗಿದೆ ಎಂದು ಶ್ರೀ ಠಾಕೂರ್ ಹೇಳಿದರು. ನಾವು ಯುನೆಸ್ಕೋದ ಸ್ವಯಂಸೇವಾ ನಿಧಿಗೆ ಪ್ರಮುಖ ಕೊಡುಗೆದಾರರೂ ಆಗಿದ್ದೇವೆ. ನಿಷೇಧಿತ ಪದಾರ್ಥಗಳೊಂದಿಗೆ ಪೌಷ್ಟಿಕಾಂಶದ ಪೂರಕಗಳನ್ನು ಸೇವಿಸುವುದರಿಂದ ನಮ್ಮ ಕ್ರೀಡಾಪಟುಗಳು ಅಜಾಗರೂಕ ಉದ್ದೀಪನ ಔಷಧ ಸೇವನೆಯಿಂದ ರಕ್ಷಿತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು, ನಾಡಾ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನಗಳ ವಿಶ್ವವಿದ್ಯಾಲಯ (ಎನ್.ಎಫ್.ಎಸ್.ಯು.) ಮತ್ತು ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ನೊಂದಿಗೆ ಸಹಯೋಗ ನೀಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ದಿವ್ಯಾಂಗ ಕ್ರೀಡಾಪಟುಗಳಿಗಾಗಿ ಅಂತರ್ಗತ ಸಂಪರ್ಕ ವಿಷಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಕಲಿಕೆಗಾಗಿ ಸಾರ್ವತ್ರಿಕ ವಿನ್ಯಾಸ (ಯು.ಡಿ.ಎಲ್.) ತತ್ವಗಳ ಮೇಲೆ ಉದ್ದೀಪನ ನಿಗ್ರಹ ಶಿಕ್ಷಣ ಮಾದರಿಗಳ ಸಂಕೇತ ಭಾಷೆಯು ಭಾರತದಲ್ಲಿನ ದಿವ್ಯಾಂಗ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಪ್ರಪಂಚದ ಎಲ್ಲೆಡೆಯೂ ಉಪಯುಕ್ತವಾಗಿವೆ. ನಾಡಾ ಭಾರತವು ಈ ಸಂಪನ್ಮೂಲಗಳನ್ನು ಏಷ್ಯಾದ ಇತರ ಎನ್.ಎ.ಡಿ.ಓ.ಗಳೊಂದಿಗೆ ಹಂಚಿಕೊಳ್ಳುತ್ತಿದೆ.

ಎಬಿಪಿಯೊಂದಿಗಿನ ಇತ್ತೀಚಿನ ಪ್ರವೃತ್ತಿಗಳು, ಯಶಸ್ಸುಗಳು ಮತ್ತು ಸವಾಲುಗಳು, ಸ್ಟೀರಾಯ್ಡ್ ಮಾದರಿಗಳ ಮೇಲೆ ಪರಿಣಾಮ ಬೀರುವ ಗೊಂದಲಕಾರಿ ಅಂಶವನ್ನು ನಿರ್ವಹಿಸುವುದು, ಎಬಿಪಿಗಾಗಿ ಕಾರ್ಯತಂತ್ರದ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವುದು ಇತ್ಯಾದಿಗಳು ಈ ಸಿಂಪೋಸಿಯಂನಲ್ಲಿ ಚರ್ಚೆಯ ಪ್ರಮುಖ ವಿಷಯಗಳಾಗಿವೆ ಮತ್ತು ಕ್ರೀಡೆಗಳಲ್ಲಿ ಉದ್ದೀಪನ ಔಷಧ ಪತ್ತೆ ಮತ್ತು ನಿರ್ಮೂಲನೆಗೆ ಶ್ರಮಿಸಲು ಎ.ಪಿ.ಎಂ.ಯುಗಳ ಮೂಲಕ ವಾಡಾ ನೆರವು ನೀಡುತ್ತದೆ..

ಮೊದಲ ವಾಡಾ ಎಬಿಪಿ ಸಿಂಪೋಸಿಯಂ ಅನ್ನು ಉದ್ದೀಪನ ನಿಗ್ರಹ ಪ್ರಯೋಗಾಲಯ ಕತಾರ್ (ಎಡಿಎಲ್‌.ಕ್ಯೂ) ನವೆಂಬರ್ 2015ರಲ್ಲಿ ಕತಾರ್‌ ನ ದೋಹಾದಲ್ಲಿ ಆಯೋಜಿಸಿತ್ತು. ಎರಡನೇ ವಾಡಾ ಎಬಿಪಿ ಸಿಂಪೋಸಿಯಂ ಇಟಲಿಯ ಕ್ರೀಡಾ ಔಷಧ ಒಕ್ಕೂಟ (ಎಫ್‌.ಎಂ.ಎಸ್‌.ಐ) 2018 ರಲ್ಲಿ ಇಟಲಿಯ ರೋಮ್‌ ನಲ್ಲಿ ಆಯೋಜಿಸಿತ್ತು. ಇದು ಮೂರನೇ ವಾಡಾ ಎಬಿಪಿ ಸಿಂಪೋಸಿಯಂ ಆಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. 56 ದೇಶಗಳಿಂದ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದಾರೆ, ವಾಡಾ ಅಧಿಕಾರಿಗಳು, ವಿವಿಧ ರಾಷ್ಟ್ರೀಯ ಉದ್ದೀಪನ ಔಷಧ ಸೇವನೆ ನಿಗ್ರಹ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ತಜ್ಞರು, ಅಥ್ಲೀಟ್ ಪಾಸ್‌ ಪೋರ್ಟ್ ನಿರ್ವಹಣಾ ಘಟಕಗಳು (ಎಪಿಎಂಯುಗಳು) ಮತ್ತು ವಾಡಾ ಮಾನ್ಯತೆ ಪಡೆದ ಪ್ರಯೋಗಾಲಯಗಳು ಈ ಸಿಂಪೋಸಿಯಂನಲ್ಲಿ ಭಾಗವಹಿಸಿವೆ.
 

******(Release ID: 1867143) Visitor Counter : 172