ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಹಿಮಾಚಲ ಪ್ರದೇಶದ ಬಿಲಾಸ್‌ಪುರದ ಲುಹ್ನುವಿನಲ್ಲಿ3650 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಏಮ್ಸ್ ಬಿಲಾಸ್‌ಪುರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಬಂಡ್ಲಾದಲ್ಲಿ ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್‌ ಕಾಲೇಜನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ನಲಗಢದಲ್ಲಿ ಮೆಡಿಕಲ್‌ ಡಿವೈಸ್‌ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

1690 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

ಹಿಮಾಚಲ ಪ್ರದೇಶದ ಅಭಿವೃದ್ಧಿಯ ಪಯಣದ ಭಾಗವಾಗಿರುವುದು ಅದೃಷ್ಟ

ನಮ್ಮ ಸರ್ಕಾರವು ಖಂಡಿತವಾಗಿಯೂ ನಾವು ಶಂಕುಸ್ಥಾಪನೆ ಮಾಡುವ ಯೋಜನೆಯನ್ನು ಪೂರ್ಣಗೊಳಿಸಿ ಸಮರ್ಪಿಸುತ್ತದೆ

ಹಿಮಾಚಲವು ‘ರಾಷ್ಟ್ರ ರಕ್ಷಾ’ ದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ಮತ್ತು ಈಗ ಬಿಲಾಸ್‌ಪುರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಏಮ್ಸ್‌ನೊಂದಿಗೆ, ಅದು ‘ ಜೀವನ್‌ ರಕ್ಷಾ’ ದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಎಲ್ಲರಿಗೂ ಜೀವನದ ಘನತೆಯನ್ನು ಖಾತ್ರಿಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ

ಮಹಿಳೆಯರ ಸಂತೋಷ, ಅನುಕೂಲತೆ, ಗೌರವ ಮತ್ತು ಸುರಕ್ಷತೆ ಡಬಲ್‌ ಇಂಜಿನ್‌ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ

ಮೇಡ್‌ ಇನ್‌ ಇಂಡಿಯಾ 5 ಜಿ ಸೇವೆಗಳು ಪ್ರಾರಂಭವಾಗಿವೆ ಮತ್ತು ಇದರ ಪ್ರಯೋಜನಗಳು ಹಿಮಾಚಲದಲ್ಲಿ ಶೀಘ್ರದಲ್ಲೇ ಲಭ್ಯವಾಗಲಿವೆ

Posted On: 05 OCT 2022 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 1690 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿಯಾದ ಪಿಂಜೋರ್‌ನಿಂದ ನಲಗಢದವರೆಗಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಅವರು ಬಿಲಾಸ್‌ಪುರದ ಏಮ್ಸ್ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಸುಮಾರು 350 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಲಗಢದಲ್ಲಿ ವೈದ್ಯಕೀಯ ಸಾಧನ ಉದ್ಯಾನಕ್ಕೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಅವರು, ಬಂಡ್ಲಾದಲ್ಲಿ ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್‌ ಕಾಲೇಜನ್ನೂ ಕೂಡ ಉದ್ಘಾಟಿಸಿದರು.

ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಜಯ ದಶಮಿಯ ಶುಭ ಸಂದರ್ಭದಲ್ಲಿಎಲ್ಲರಿಗೂ ಶುಭಾಶಯ ಕೋರಿದರು. ಈ ಪವಿತ್ರ ಹಬ್ಬವು ಪ್ರತಿಯೊಬ್ಬರಿಗೂ ಪ್ರತಿಜ್ಞೆ ಮಾಡಿದ ‘ಪಂಚ ಪ್ರಾಣ’ದ ಹಾದಿಯಲ್ಲಿನಡೆಯಲು ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ಪ್ರತಿಯೊಂದು ಅಡೆತಡೆಯನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು. ವಿಜಯ ದಶಮಿಗಾಗಿ ಹಿಮಾಚಲದಲ್ಲಿಇರುವ ಅವಕಾಶವನ್ನು ಪಡೆಯುವ ಸೌಭಾಗ್ಯವು ಭವಿಷ್ಯದ ಪ್ರತಿಯೊಂದು ಗೆಲುವಿಗೂ ಶುಭಸೂಚಕವಾಗಿದೆ ಎಂದು ಅವರು ಹೇಳಿದರು.

ಬಿಲಾಸ್‌ಪುರಕ್ಕೆ ಆರೋಗ್ಯ ಮತ್ತು ಶಿಕ್ಷ ಣದ ದುಪ್ಪಟ್ಟು ಕೊಡುಗೆ ದೊರೆತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕುಲ್ಲುದಸರಾದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ರಾಷ್ಟ್ರದ ಕಲ್ಯಾಣಕ್ಕಾಗಿ ಭಗವಾನ್‌ ರಘುನಾಥ್‌ ಜೀ ಅವರನ್ನು ಪ್ರಾರ್ಥಿಸುವುದಾಗಿ ಹೇಳಿದರು. ತಾವು ಮತ್ತು ಅವರ ಸಂಗಡಿಗರು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ವಾಸಿಸುತ್ತಿದ್ದ ಹಳೆಯ ದಿನಗಳನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು.

 ‘‘ ಹಿಮಾಚಲ ಪ್ರದೇಶದ ಅಭಿವೃದ್ಧಿಯ ಪಯಣದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ,’’ ಎಂದು ಇದೇ ವೇಳೆ ಅವರು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಕಳೆದ ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಎಲ್ಲಾ ಬೆಳವಣಿಗೆಗಳಿಗೆ ಜನರ ಮತವೇ ನೇರ ಹೊಣೆಯಾಗಿದೆ ಎಂದರು. ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿದ ರಾಜ್ಯ ಮತ್ತು ಕೇಂದ್ರದ ಬಗ್ಗೆ ಜನರ ವಿಶ್ವಾಸಕ್ಕೆ ಅವರು ಮನ್ನಣೆ ನೀಡಿದರು.

ಶಿಕ್ಷಣ, ರಸ್ತೆಗಳು, ಕೈಗಾರಿಕೆಗಳು, ಆಸ್ಪತ್ರೆಗಳಂತಹ ಸೌಲಭ್ಯಗಳು ದೊಡ್ಡ ನಗರಗಳಿಗೆ ಮಾತ್ರ ಎಂಬ ಚಿಂತನೆ ಬಹಳ ಹಿಂದಿನಿಂದಲೂ ಇದೆ ಎಂದು ಹೇಳಿದ ಅವರು, ಗುಡ್ಡಗಾಡು ಪ್ರದೇಶಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ,  ಮೂಲಭೂತ ಸೌಕರ್ಯಗಳೂ ಕೊನೆಯದಾಗಿ ಅಲ್ಲಿಗೆ ತಲುಪಿದವು. ಇದು ದೇಶದ ಅಭಿವೃದ್ಧಿಯಲ್ಲಿ ಭಾರಿ ಅಸಮತೋಲನವನ್ನು ಸೃಷ್ಟಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಿಮಾಚಲ ಪ್ರದೇಶದ ಜನರು ಸಣ್ಣ ವಿಷಯಗಳಿಗಾಗಿ ಚಂಡೀಗಢ ಅಥವಾ ದೆಹಲಿಗೆ ಹೋಗಬೇಕಾಯಿತು ಎಂದು ಅವರು ಮುಂದುವರಿಸಿದರು. ಆದಾಗ್ಯೂ, ಕಳೆದ 8 ವರ್ಷಗಳಲ್ಲಿ, ಡಬಲ್‌-ಎಂಜಿನ್‌ ಸರ್ಕಾರವು ಎಲ್ಲವನ್ನೂ ಬದಲಾಯಿಸಿತು. ಇಂದು ಹಿಮಾಚಲ ಪ್ರದೇಶವು ಐಐಟಿ, ಐಐಎಂ ಮತ್ತು ಐಐಐಟಿಯಂತಹ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಿಲಾಸ್‌ ಪುರದ ಏಮ್ಸ್ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅತ್ಯುನ್ನತ ಸ್ಥಾನದಲ್ಲಿರುವುದು ಬಿಲಾಸ್‌ಪುರದ ವೈಭವವನ್ನು ಹೆಚ್ಚಿಸಲಿದೆ ಎಂದು ಶ್ರೀ ನರೇಂದ್ರ ಮೋದಿ ನುಡಿದರು. ‘‘ ಕಳೆದ ಎಂಟು ವರ್ಷಗಳಲ್ಲಿ, ಹಿಮಾಚಲ ಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಏರಿದೆ,’’ ಎಂದು ಅವರು ಪ್ರತಿಪಾದಿಸಿದರು.

ಯೋಜನೆಗಳ ಸಮರ್ಪಣೆಯ ಸ್ಪಷ್ಟ ಕಾಲಮಿತಿಯೊಂದಿಗೆ ಈಗ ಅಡಿಗಲ್ಲುಗಳನ್ನು ಹಾಕಿರುವುದರಿಂದ ಸರ್ಕಾರದಲ್ಲಿಬದಲಾದ ಕಾರ್ಯಶೈಲಿಯನ್ನು ಪ್ರಧಾನಮಂತ್ರಿ ಅವರು ಬಿಂಬಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಹಿಮಾಚಲ ಪ್ರದೇಶದ ಕೊಡುಗೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ‘ರಾಷ್ಟ್ರ ರಕ್ಷಾ’ ದಲ್ಲಿರಾಜ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಈಗ ಬಿಲಾಸ್‌ಪುರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಏಮ್ಸ್ ನೊಂದಿಗೆ, ಇದು ‘ಜೀವನ್‌ ರಕ್ಷಾ’ ದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗದ ಸವಾಲಿನ ಹೊರತಾಗಿಯೂ ಸಕಾಲದಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಸರ್ಕಾರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಬೃಹತ್‌ ಪ್ರಮಾಣದ ಡ್ರಗ್ಸ್‌ (ಔಷಧ) ಪಾರ್ಕ್‌ಗೆ ಆಯ್ಕೆಯಾಗಿರುವ ಮೂರು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಒಂದಾಗಿರುವುದರಿಂದ ಹಿಮಾಚಲ ಪ್ರದೇಶದ ಜನತೆಗೆ ಇದು ಹೆಮ್ಮೆಯ

ಕ್ಷಣವಾಗಿದೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟರು. ವೈದ್ಯಕೀಯ ಸಾಧನಗಳ ಉದ್ಯಾನವನಕ್ಕೆ ಆಯ್ಕೆ ಮಾಡಲಾದ ನಾಲ್ಕು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಒಂದಾಗಿದೆ ಮತ್ತು ನಲಗಢ ಮೆಡಿಕಲ್‌ ಡಿವೈಸ್‌ ಪಾರ್ಕ್‌ ಇದರ ಭಾಗವಾಗಿದೆ. ‘‘ ಇದು ಧೈರ್ಯಶಾಲಿಗಳ ಭೂಮಿ ಮತ್ತು ನಾನು ಈ ಭೂಮಿಗೆ ಋುಣಿಯಾಗಿದ್ದೇನೆ ’’ ಎಂದು ಪ್ರಧಾನಮಂತ್ರಿ ಹೇಳಿದರು.

ವೈದ್ಯಕೀಯ ಪ್ರವಾಸೋದ್ಯಮದ ಅಂಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಹಿಮಾಚಲ ಪ್ರದೇಶವು ಕೊನೆಯಿಲ್ಲದ ಅವಕಾಶಗಳನ್ನು ಹೊಂದಿದೆ ಎಂದು ಹೇಳಿದರು. ರಾಜ್ಯದ ಗಾಳಿ, ಪರಿಸರ ಮತ್ತು ಗಿಡಮೂಲಿಕೆಗಳು ರಾಜ್ಯಕ್ಕೆ ಸಾಕಷ್ಟು ಪ್ರಯೋಜನಗಳ ಮೂಲವಾಗಬಹುದು ಎಂದು ಪ್ರಧಾನಿ ಹೇಳಿದರು.

ಬಡವರು ಮತ್ತು ಮಧ್ಯಮ ವರ್ಗದವರಿಗೆ ಸುಲಭ ಜೀವನವನ್ನು ಖಾತ್ರಿಪಡಿಸುವ ಸರ್ಕಾರದ ಪ್ರಯತ್ನಗಳನ್ನು ಬಿಂಬಿಸಿದ ಪ್ರಧಾನಮಂತ್ರಿಯ ಅವರು, ದೂರದ ಸ್ಥಳಗಳಲ್ಲಿಆಸ್ಪತ್ರೆಗಳು ಲಭ್ಯವಾಗುವಂತೆ ಮಾಡಲು ಮತ್ತು ವೈದ್ಯಕೀಯ ಬಿಲ್ಲುಗಳ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಅದಕ್ಕಾಗಿಯೇ ನಾವು ಏಮ್ಸ್ ನಿಂದ ಜಿಲ್ಲಾ ಆಸ್ಪತ್ರೆಗಳು ಮತ್ತು ಹಳ್ಳಿಗಳಲ್ಲಿನ ಸ್ವಾಸ್ಥ್ಯ ಕೇಂದ್ರಗಳಲ್ಲಿನ ನಿರ್ಣಾಯಕ ಆರೈಕೆಗೆ ತಡೆರಹಿತ ಸಂಪರ್ಕಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆಯುಷ್ಮಾನ್‌ ಭಾರತ್‌ ಯೋಜನೆಯು ರಾಜ್ಯದ ಹೆಚ್ಚಿನ ಕುಟುಂಬಗಳಿಗೆ 5 ಲಕ್ಷ  ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ದೇಶಾದ್ಯಂತ 3 ಕೋಟಿಗೂ ಹೆಚ್ಚು ರೋಗಿಗಳು ಮತ್ತು ಹಿಮಾಚಲದಿಂದ 1.5 ಲಕ್ಷ  ಫಲಾನುಭವಿಗಳು ಬಂದಿದ್ದಾರೆ. ಸರ್ಕಾರವು ದೇಶಾದ್ಯಂತ 45,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ, ಸುಮಾರು 90,000 ಕೋಟಿ ರೂಪಾಯಿ ರೋಗಿಗಳನ್ನು ಉಳಿಸಿದೆ ಎಂದು ವಿವರಿಸಿದರು.

ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಂತೋಷ, ಲಭ್ಯತೆ, ಘನತೆ,

ರಕ್ಷಣೆ ಮತ್ತು ಆರೋಗ್ಯವನ್ನು ಒದಗಿಸಲು ಡಬಲ್‌ ಇಂಜಿನ್‌ ಸರ್ಕಾರದ ಅಡಿಪಾಯವನ್ನು ಹಾಕಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ‘‘ಎಲ್ಲರಿಗೂ ಜೀವನದ ಘನತೆಯನ್ನು ಖಾತ್ರಿಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ’’ ಎಂದು ಹೇಳಿದ ಅವರು, ತಾಯಂದಿರು ಮತ್ತು ಸಹೋದರಿಯರ ಸಬಲೀಕರಣಕ್ಕಾಗಿ ಶೌಚಾಲಯ ನಿರ್ಮಾಣ, ಉಚಿತ ಅನಿಲ ಸಂಪರ್ಕ, ಸ್ಯಾನಿಟರಿ ಪ್ಯಾಡ್‌ ವಿತರಣೆ ಯೋಜನೆ, ಮಾತೃವಂದನಾ ಯೋಜನೆ ಮತ್ತು ಹರ್‌ ಘರ್‌ ಜಲ್‌ ಅಭಿಯಾನದಂತಹ ಕ್ರಮಗಳನ್ನು ಅವರು ಪಟ್ಟಿ ಮಾಡಿದರು.

ಕೇಂದ್ರದ ಯೋಜನೆಗಳನ್ನು ಉತ್ಸಾಹ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮತ್ತು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಶ್ಲಾಘಿಸಿದರು. ಹರ್‌ ಘರ್‌ ಜಲ್‌ ನಂತಹ ಯೋಜನೆಗಳು ಮತ್ತು ಪಿಂಚಣಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ವೇಗವನ್ನು ಅವರು ಶ್ಲಾಘಿಸಿದರು. ಅಂತೆಯೇ, ಹಿಮಾಚಲ ಪ್ರದೇಶದ ಅನೇಕ ಕುಟುಂಬಗಳು ಒಂದು ಶ್ರೇಣಿ ಒಂದು ಪಿಂಚಣಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿವೆ. ಶೇ.1ರಷ್ಟು ಕೊರೊನಾ ಲಸಿಕಾರಣ ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ ಎಂದು ಅವರು ಶ್ಲಾಘಿಸಿದರು.

‘‘ಹಿಮಾಚಲವು ಅವಕಾಶಗಳ ನಾಡು’’ ಎಂದು ಹೇಳಿದ ಪ್ರಧಾನಮಂತ್ರಿ ಅವರು,  ರಾಜ್ಯವು ವಿದ್ಯುತ್‌ ಉತ್ಪಾದಿಸುತ್ತದೆ, ಫಲವತ್ತಾದ ಭೂಮಿಯನ್ನು ಹೊಂದಿದೆ ಮತ್ತು ಪ್ರವಾಸೋದ್ಯಮದಿಂದಾಗಿ ಕೊನೆಯಿಲ್ಲದ ಉದ್ಯೋಗಾವಕಾಶಗಳನ್ನು ಹೊಂದಿದೆ ಎಂದು ಎಲ್ಲರಿಗೂ ಮಾಹಿತಿ ನೀಡಿದರು. ಉತ್ತಮ ಸಂಪರ್ಕದ ಕೊರತೆಯು ಈ ಅವಕಾಶಗಳ ಮುಂದೆ ಅತಿದೊಡ್ಡ ಅಡೆತಡೆಯಾಗಿ ಕಾರ್ಯನಿರ್ವಹಿಸಿತು ಎಂದು ಇದೇ ವೇಳೆ ಅವರು ಹೇಳಿದರು. 2014 ರಿಂದ, ಹಿಮಾಚಲ ಪ್ರದೇಶದಲ್ಲಿ ಹಳ್ಳಿಯಿಂದ ಹಳ್ಳಿಗೆ ಅತ್ಯುತ್ತಮ ಮೂಲಸೌಕರ್ಯವನ್ನು ತಲುಪಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಹಿಮಾಚಲದ ರಸ್ತೆಗಳ ಅಗಲೀಕರಣದ ಕೆಲಸವೂ ಸುತ್ತಲೂ ನಡೆಯುತ್ತಿದೆ ಎಂದು ತಿಳಿಸಿದರು.

‘‘ ಪ್ರಸ್ತುತ, ಹಿಮಾಚಲದಲ್ಲಿಸಂಪರ್ಕ ಕಾರ್ಯಗಳಿಗಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ’’, ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿ, ಪಿಂಜೋರ್‌ನಿಂದ ನಲಗಢ ಹೆದ್ದಾರಿಯ ಚತುಷ್ಪಥ ಕಾಮಗಾರಿ ಪೂರ್ಣಗೊಂಡಾಗ, ನಲಗಢ ಮತ್ತು ಬದ್ದಿಯ ಕೈಗಾರಿಕಾ ಪ್ರದೇಶಗಳು ಪ್ರಯೋಜನ ಪಡೆಯುತ್ತವೆ ಮಾತ್ರವಲ್ಲದೆ, ಚಂಡೀಗಢ ಮತ್ತು ಅಂಬಾಲಾದಿಂದ ಬಿಲಾಸ್‌ಪುರ, ಮಂಡಿ ಮತ್ತು ಮನಾಲಿ ಕಡೆಗೆ ಹೋಗುವ ಪ್ರಯಾಣಿಕರಿಗೂ ಸಹ ಇದರ ಪ್ರಯೋಜನ ಸಿಗುತ್ತದೆ ಎಂದು ಅವರು ಹೇಳಿದರು. ‘‘ ಹಿಮಾಚಲದ ಜನರನ್ನು ಸುತ್ತುವರಿದ ರಸ್ತೆಗಳಿಂದ ಮುಕ್ತಗೊಳಿಸಲು ಸುರಂಗಗಳ ಜಾಲವನ್ನು ಸಹ ಹಾಕಲಾಗುತ್ತಿದೆ,’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಡಿಜಿಟಲ್‌ ಇಂಡಿಯಾದ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಡಿಜಿಟಲ್‌ ಸಂಪರ್ಕಕ್ಕೆ ಸಂಬಂಧಿಸಿದಂತೆ ಹಿಮಾಚಲದಲ್ಲಿಅಭೂತಪೂರ್ವ ಕೆಲಸ ಮಾಡಲಾಗಿದೆ ಎಂದು ಹೇಳಿದರು. ‘‘ ಕಳೆದ 8 ವರ್ಷಗಳಲ್ಲಿ, ಮೇಡ್‌ ಇನ್‌ ಇಂಡಿಯಾ ಮೊಬೈಲ್‌ ಫೋನ್‌ಗಳು ಸಹ ಅಗ್ಗವಾಗಿವೆ ಮತ್ತು ನೆಟ್‌ವರ್ಕ್‌ಅನ್ನು ಹಳ್ಳಿಗಳಿಗೆ ತಂದಿವೆ,’’ ಎಂದು ಅವರು ಹೇಳಿದರು. ಉತ್ತಮ 4 ಜಿ ಸಂಪರ್ಕದಿಂದಾಗಿ ಹಿಮಾಚಲ ಪ್ರದೇಶವು ಡಿಜಿಟಲ್‌ ವಹಿವಾಟುಗಳಲ್ಲಿ ಬಹಳ ವೇಗವಾಗಿ ಚಲಿಸುತ್ತಿದೆ. ‘‘ಡಿಜಿಟಲ್‌ ಇಂಡಿಯಾದಿಂದ ಯಾರಾದರೂ ಹೆಚ್ಚು ಪ್ರಯೋಜನ ಪಡೆಯುತ್ತಿದ್ದರೆ, ಅದು ನೀವು, ಹಿಮಾಚಲದ ಜನರು’’ ಎಂದು ಅವರು ಹೇಳಿದರು. ಈ ಕಾರಣದಿಂದಾಗಿ ಬಿಲ್ಲುಗಳನ್ನು ಪಾವತಿಸುವುದು, ಬ್ಯಾಂಕ್‌ ಸಂಬಂಧಿತ ಕೆಲಸಗಳು, ಪ್ರವೇಶಗಳು, ಅರ್ಜಿಗಳು ಇತ್ಯಾದಿಗಳಿಗೆ ಕನಿಷ್ಠ ಸಮಯ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.

ದೇಶದಲ್ಲಿ5ಜಿ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ, ‘‘ಈಗ ದೇಶದಲ್ಲಿ ಮೊದಲ ಬಾರಿಗೆ, ಮೇಡ್‌ ಇನ್‌ ಇಂಡಿಯಾ 5 ಜಿ ಸೇವೆಗಳು ಸಹ ಪ್ರಾರಂಭವಾಗಿವೆ, ಮತ್ತು ಇದರ ಪ್ರಯೋಜನಗಳು ಹಿಮಾಚಲ ಪ್ರದೇಶಕ್ಕೆ ಶೀಘ್ರದಲ್ಲೇ ಲಭ್ಯವಾಗಲಿವೆ ’’ ಎಂದು ಹೇಳಿದರು. ಭಾರತದಲ್ಲಿ ಡ್ರೋನ್‌ ನಿಯಮಗಳ ಬದಲಾವಣೆಯ ನಂತರ, ಸಾರಿಗೆಗಾಗಿ ಅವುಗಳ ಬಳಕೆ ಸಾಕಷ್ಟು ಹೆಚ್ಚಾಗಲಿದ್ದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಸಹ ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಅವರು ಮಾಹಿತಿ ನೀಡಿದರು. ಹಿಮಾಚಲ ಪ್ರದೇಶವು ಡ್ರೋನ್‌ ನೀತಿಯನ್ನು ಹೊರತಂದ ಮೊದಲ ರಾಜ್ಯವಾಗಿದೆ ಎಂದು ಅವರು ಶ್ಲಾಘಿಸಿದರು. ‘‘ ನಾವು ಪ್ರತಿಯೊಬ್ಬ ನಾಗರಿಕನ ಅನುಕೂಲವನ್ನು ಹೆಚ್ಚಿಸುವ ಒಂದು ರೀತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬ ನಾಗರಿಕನು ಸಮೃದ್ಧಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಇದು ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಹಿಮಾಚಲ ಪ್ರದೇಶದ ಸಂಕಲ್ಪವನ್ನು ಸಾಬೀತುಪಡಿಸುತ್ತದೆ,’’ ಎಂದು ಪ್ರಧಾನಮಂತ್ರಿ ಅವರು ಮಾತು ಮುಕ್ತಾಯಗೊಳಿಸಿದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈ ರಾಮ್‌ ಠಾಕೂರ್‌, ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್‌,  ಕೇಂದ್ರ ಸಚಿವ ಶ್ರೀ ಅನುರಾಗ್‌ ಠಾಕೂರ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ   ಶ್ರೀ ಜಗತ್‌ ಪ್ರಕಾಶ್‌ ನಡ್ಡಾ ಮತ್ತು ಸಂಸತ್‌ ಸದಸ್ಯ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ  ಶ್ರೀ ಸುರೇಶ್‌ ಕುಮಾರ್‌ ಕಶ್ಯಪ್‌ ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಹಿನ್ನೆಲೆ

ಹಿಮಾಚಲ ಪ್ರದೇಶದಲ್ಲಿಅನೇಕ ಯೋಜನೆಗಳು

ರಾಷ್ಟ್ರೀಯ ಹೆದ್ದಾರಿ 105ರ ಪಿಂಜೋರ್‌ನಿಂದ ನಲಗಢದವರೆಗಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಮಾರ್ಗದ 31 ಕಿ.ಮೀ ಉದ್ದದ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದು 1690 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ್ದಾಗಿದೆ. ಈ ಯೋಜನೆಯು ಅಂಬಾಲಾ, ಚಂಡೀಗಢ, ಪಂಚಕುಲ ಮತ್ತು ಸೋಲನ್‌ / ಶಿಮ್ಲಾದಿಂದ ಬಿಲಾಸ್‌ಪುರ, ಮಂಡಿ ಮತ್ತು ಮನಾಲಿ ಕಡೆಗೆ ಹೋಗುವ ವಾಹನಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸುಮಾರು 18 ಕಿ.ಮೀ ವಿಸ್ತಾರವು ಹಿಮಾಚಲ ಪ್ರದೇಶದ ಅಡಿಯಲ್ಲಿಬರುತ್ತದೆ ಮತ್ತು ಉಳಿದ ಭಾಗವು ಹರಿಯಾಣಕ್ಕೆ ಬರುತ್ತದೆ. ಈ ಹೆದ್ದಾರಿಯು ಹಿಮಾಚಲ ಪ್ರದೇಶದ ಕೈಗಾರಿಕಾ ಕೇಂದ್ರವಾದ ನಲಗಢ-ಬದ್ದಿಯಲ್ಲಿಉತ್ತಮ ಸಾರಿಗೆ ಸೌಲಭ್ಯಗಳನ್ನು ಖಾತ್ರಿಪಡಿಸುತ್ತದೆ ಮತ್ತು ಈ ಪ್ರದೇಶದಲ್ಲಿಮತ್ತಷ್ಟು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಇದು ರಾಜ್ಯದ ಪ್ರವಾಸೋದ್ಯಮವನ್ನು ಸಹ ಉತ್ತೇಜಿಸುತ್ತದೆ.

ಏಮ್ಸ… ಬಿಲಾಸ್‌ಪುರ

ಬಿಲಾಸ್‌ಪುರದಲ್ಲಿಏಮ್ಸ್ಅನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ದೇಶಾದ್ಯಂತ ಆರೋಗ್ಯ ಸೇವೆಗಳನ್ನು ಬಲಪಡಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿ ಮತ್ತು ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಲಾಗುತ್ತಿದೆ. ಆಸ್ಪತ್ರೆಯ ಶಂಕುಸ್ಥಾಪನೆಯನ್ನು 2017 ರ ಅಕ್ಟೋಬರ್‌ನಲ್ಲಿಪ್ರಧಾನಮಂತ್ರಿ ಅವರು ನೆರವೇರಿಸಿದ್ದರು ಮತ್ತು ಇದನ್ನು ಕೇಂದ್ರ ವಲಯದ ಯೋಜನೆ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಸ್ಥಾಪಿಸಲಾಗುತ್ತಿದೆ.

1470 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಏಮ್ಸ್ ಬಿಲಾಸ್‌ಪುರ , 18 ಸ್ಪೆಷಾಲಿಟಿ ಮತ್ತು 17 ಸೂಪರ್‌ ಸ್ಪೆಷಾಲಿಟಿ ವಿಭಾಗಗಳು, 18 ಮಾಡ್ಯುಲರ್‌ ಆಪರೇಶನ್‌ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳೊಂದಿಗೆ 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ. 247 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಆಸ್ಪತ್ರೆಯಲ್ಲಿ24 ಗಂಟೆಗಳ ತುರ್ತು ಮತ್ತು ಡಯಾಲಿಸಿಸ್‌ ಸೌಲಭ್ಯಗಳು, ಅಲ್ಟ್ರಾಸೋನೋಗ್ರಫಿ, ಸಿಟಿ ಸ್ಕ್ಯಾ‌ನ್‌, ಎಂಆರ್‌ಐ ಮುಂತಾದ ಆಧುನಿಕ ರೋಗನಿರ್ಣಯ ಯಂತ್ರಗಳು, ಅಮೃತ್‌ ಫಾರ್ಮಸಿ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್‌ ಬ್ಲಾಕ್‌ಅನ್ನು ಸಹ ಹೊಂದಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಮತ್ತು ದುರ್ಗಮ ಬುಡಕಟ್ಟು ಪ್ರದೇಶಗಳಲ್ಲಿಆರೋಗ್ಯ ಸೇವೆಗಳನ್ನು ಒದಗಿಸಲು ಆಸ್ಪತ್ರೆಯು ಡಿಜಿಟಲ್‌ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲದೆ, ಕಜಾ, ಸಲೂನಿ ಮತ್ತು ಕೀಲಾಂಗ್‌ ನಂತಹ ದುರ್ಗಮ ಬುಡಕಟ್ಟು ಮತ್ತು ಎತ್ತರದ ಹಿಮಾಲಯದ ಪ್ರದೇಶಗಳಲ್ಲಿಆರೋಗ್ಯ ಶಿಬಿರಗಳ ಮೂಲಕ ಆಸ್ಪತ್ರೆಯು ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಆಸ್ಪತ್ರೆಯು ಪ್ರತಿ ವರ್ಷ ಎಂಬಿಬಿಎಸ್‌ ಕೋರ್ಸ್‌ ಗಳಿಗೆ 100 ವಿದ್ಯಾರ್ಥಿಗಳನ್ನು ಮತ್ತು ನರ್ಸಿಂಗ್‌ ಕೋರ್ಸ್‌ ಗಳಿಗೆ 60 ವಿದ್ಯಾರ್ಥಿಗಳನ್ನು ಸೇರಿಸುತ್ತದೆ.

ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್‌ ಕಾಲೇಜು, ಬಂಡ್ಲಾ ಪ್ರಧಾನಮಂತ್ರಿ ಅವರು ಬಂಡ್ಲಾದಲ್ಲಿ ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್‌ ಕಾಲೇಜನ್ನು ಉದ್ಘಾಟಿಸಿದರು. ಸುಮಾರು 140 ಕೋಟಿ ರೂ.ಗಳ ವೆಚ್ಚದ ಈ ಕಾಲೇಜು ಜಲವಿದ್ಯುತ್‌ ಯೋಜನೆಗಳಿಗೆ ತರಬೇತಿ ಪಡೆದ ಮಾನವಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಹಿಮಾಚಲ ಪ್ರದೇಶವು ಪ್ರಮುಖ ರಾಜ್ಯಗಳಲ್ಲಿಒಂದಾಗಿದೆ. ಇದು ಯುವಕರನ್ನು ಉತ್ತೇಜಿಸಲು ಮತ್ತು ಜಲವಿದ್ಯುತ್‌ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ಮೆಡಿಕಲ್‌ ಡಿವೈಸ್‌ ಪಾರ್ಕ್‌, ನಲಗಢ ಸುಮಾರು 350 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಲಗಢದಲ್ಲಿ ವೈದ್ಯಕೀಯ ಸಾಧನ ಉದ್ಯಾನಕ್ಕೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಮೆಡಿಕಲ್‌ ಡಿವೈಸ್‌ ಪಾರ್ಕ್‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ 800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ತಿಳುವಳಿಕಾ ಒಡಂಬಡಿಕೆಗಳಿಗೆ ಅಂಕಿತ ಹಾಕಲಾಗಿದೆ. ಈ ಯೋಜನೆಯು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

*****(Release ID: 1865558) Visitor Counter : 126