ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 5 ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


3650 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ತಾವೇ ಶಂಕುಸ್ಥಾಪನೆ ನೆರವೇರಿಸಿದ್ದ ಬಿಲಾಸ್‌ಪುರದ ಏಮ್ಸ್ ಅನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

1690 ಕೋಟಿ ರೂಪಾಯಿಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಈ ಪ್ರದೇಶದಲ್ಲಿ ಕೈಗಾರಿಕಾಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿರುವ ಯೋಜನೆ

ನಲಗಢದಲ್ಲಿ ವೈದ್ಯಕೀಯ ಸಲಕರಣೆಗಳ ಉದ್ಯಾನಕ್ಕೆ ಶಂಕುಸ್ಥಾಪನೆ ಮತ್ತು ಬಾಂಡ್ಲಾದಲ್ಲಿ ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್ ಕಾಲೇಜು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಕುಲ್ಲು ದಸರಾ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

Posted On: 03 OCT 2022 2:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು 3650 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಪ್ರಧಾನಮಂತ್ರಿಯವರು ಬಿಲಾಸ್‌ ಪುರದ ಏಮ್ಸ್‌ ಅನ್ನು ಉದ್ಘಾಟಿಸಲಿದ್ದಾರೆ. ತದ ನಂತರ, ಅವರು ಮಧ್ಯಾಹ್ನ 12:45ರ ಸುಮಾರಿಗೆ ಬಿಲಾಸ್‌ ಪುರದ ಲುಹ್ನು ಮೈದಾನವನ್ನು ತಲುಪುವ, ಅವರು ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿಯವರು ಮಧ್ಯಾಹ್ನ 3:15 ರ ಹೊತ್ತಿಗೆ ಕುಲ್ಲುವಿನ ಧಾಲ್ಪುರ್ ಮೈದಾನವನ್ನು ತಲುಪಲಿದ್ದು, ಅಲ್ಲಿ ಅವರು ಕುಲ್ಲು ದಸರಾ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಏಮ್ಸ್ ಬಿಲಾಸ್ಪುರ್

ಬಿಲಾಸ್‌ ಪುರದ ಏಮ್ಸ್  ಉದ್ಘಾಟನೆಯ ಮೂಲಕ ದೇಶದಾದ್ಯಂತ ಆರೋಗ್ಯ ಸೇವೆಗಳನ್ನು ಬಲಪಡಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಲಾಗುತ್ತಿದೆ. 2017ರ ಅಕ್ಟೋಬರ್‌ ನಲ್ಲಿ ಪ್ರಧಾನಮಂತ್ರಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಆಸ್ಪತ್ರೆಯನ್ನು ಕೇಂದ್ರ ವಲಯದ ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯಡಿ ಸ್ಥಾಪಿಸಲಾಗುತ್ತಿದೆ.

ಬಿಲಾಸ್‌ ಪುರ ಏಮ್ಸ್ ಅನ್ನು 1470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದು 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳು, 18 ಮಾದರಿ ಶಸ್ತ್ರ ಚಿಕಿತ್ಸಾ ಕೊಠಡಿಗಳು, 64 ತುರ್ತು ಚಿಕಿತ್ಸಾ ನಿಗಾ ಘಟಕದ ಹಾಸಿಗೆಗಳೊಂದಿಗೆ 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ. 247 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಆಸ್ಪತ್ರೆಯು 24 ಗಂಟೆಗಳ ತುರ್ತು ಮತ್ತು ಡಯಾಲಿಸಿಸ್ ಸೌಲಭ್ಯಗಳು, ಅಲ್ಟ್ರಾಸೋನೋಗ್ರಫಿ, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ. ಮುಂತಾದ ಆಧುನಿಕ ರೋಗನಿರ್ಣಯ ಯಂತ್ರಗಳು, ಅಮೃತ್ ಔಧಧ ಮಳಿಗೆ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್ ವಿಭಾಗವನ್ನು ಹೊಂದಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಮತ್ತು ದುರ್ಗಮ  ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಆಸ್ಪತ್ರೆಯು ಡಿಜಿಟಲ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲದೆ, ಪ್ರವೇಶಿಸಲಾಗದ ಬುಡಕಟ್ಟು ಮತ್ತು ಎತ್ತರದ ಹಿಮಾಲಯ ಪ್ರದೇಶಗಳಾದ ಕಾಜಾ, ಸಲೂನಿ ಮತ್ತು ಕೀಲಾಂಗ್‌ ನಲ್ಲಿ ಆರೋಗ್ಯ ಶಿಬಿರಗಳ ಮೂಲಕ ವಿಶೇಷ ಆರೋಗ್ಯ ಸೇವೆಗಳನ್ನು ಆಸ್ಪತ್ರೆಯು ಒದಗಿಸುತ್ತಿದೆ. ಆಸ್ಪತ್ರೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿ ವರ್ಷ ಎಂಬಿಬಿಎಸ್ ಕೋರ್ಸ್‌ ಗೆ 100 ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಕೋರ್ಸ್‌ ಗಳಿಗೆ 60 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. 

ಅಭಿವೃದ್ಧಿ ಯೋಜನೆಗಳು

ರಾಷ್ಟ್ರೀಯ ಹೆದ್ದಾರಿ-105ರಲ್ಲಿ ಪಿಂಜೋರ್‌ ನಿಂದ ನಲಗಢದವರೆಗಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥಕ್ಕಾಗಿ ಸುಮಾರು 1690 ಕೋಟಿ ರೂ. ಮೊಲ್ಯದ ಸುಮಾರು 31 ಕಿಲೋಮೀಟರ್ ಉದ್ದದ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಯ ಈ ರಸ್ತೆಯು ಅಂಬಾಲಾ, ಚಂಡೀಗಢ, ಪಂಚಕುಲ ಮತ್ತು ಸೋಲನ್/ಶಿಮ್ಲಾದಿಂದ ಬಿಲಾಸ್‌ ಪುರ, ಮಂಡಿ ಮತ್ತು ಮನಾಲಿ ಮಾರ್ಗದಲ್ಲಿನ ಸಂಚಾರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ಚತುಷ್ಪಥದ ರಾಷ್ಟ್ರೀಯ ಹೆದ್ದಾರಿಯ ಸುಮಾರು 18 ಕಿ.ಮೀ ರಸ್ತೆ, ಹಿಮಾಚಲ ಪ್ರದೇಶದ ವ್ಯಾಪ್ತಿಯಲ್ಲಿ ಬಂದರೆ, ಉಳಿದ ಭಾಗವು ಹರಿಯಾಣದಲ್ಲಿರುತ್ತದೆ. ಈ ಹೆದ್ದಾರಿಯು ಹಿಮಾಚಲ ಪ್ರದೇಶದ ಕೈಗಾರಿಕಾ ಕೇಂದ್ರವಾದ ನಲಗಢ-ಬಡ್ಡಿಯಲ್ಲಿ ಉತ್ತಮ ಸಾರಿಗೆ ಸೌಲಭ್ಯಗಳನ್ನು ಖಾತ್ರಿಪಡಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಮತ್ತಷ್ಟು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

ನಲಗಢದಲ್ಲಿ ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವೈದ್ಯಕೀಯ ಸಲಕರಣೆಗಳ ಉದ್ಯಾನಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವೈದ್ಯಕೀಯ ಸಲಕರಣೆಗಳ ಉದ್ಯಾನದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ 800 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಯೋಜನೆಯು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಪ್ರಧಾನಮಂತ್ರಿಯವರು ಬಂಡ್ಲಾದಲ್ಲಿ ಸರ್ಕಾರಿ ಹೈಡ್ರೋ ಎಂಜಿನಿಯರಿಂಗ್ ಕಾಲೇಜನ್ನು ಉದ್ಘಾಟಿಸಲಿದ್ದಾರೆ. ಸುಮಾರು 140 ಕೋಟಿ ರೂ. ವೆಚ್ಚದ ಈ ಕಾಲೇಜು ಜಲವಿದ್ಯುತ್ ಯೋಜನೆಗಳಿಗೆ ತರಬೇತಿ ಪಡೆದ ಮಾನವಶಕ್ತಿಯನ್ನು ಪಡೆಯುವಲ್ಲಿ ನೆರವಾಗುತ್ತದೆ, ಇದರಲ್ಲಿ ಹಿಮಾಚಲ ಪ್ರದೇಶವು ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಇದು ಯುವಕರ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಜಲವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ಕುಲ್ಲು ದಸರಾ

ಅಂತಾರಾಷ್ಟ್ರೀಯ ಕುಲ್ಲು ದಸರಾ ಉತ್ಸವವನ್ನು 2022ರ ಅಕ್ಟೋಬರ್ 5 ರಿಂದ 11ರವರೆಗೆ ಕುಲುವಿನ ಧಾಲ್ಪುರ್ ಮೈದಾನದಲ್ಲಿ ಆಚರಿಸಲಾಗುತ್ತದೆ. ಉತ್ಸವವು ಕಣಿವೆಯ 300 ಕ್ಕೂ ಹೆಚ್ಚು ದೇವತೆಗಳ ಸಮಾವೇಶ ಎಂಬ ಅರ್ಥದಲ್ಲಿ ವಿಶಿಷ್ಟವಾಗಿದೆ. ಉತ್ಸವದ ಮೊದಲ ದಿನದಂದು, ದೇವತೆಗಳು ತಮ್ಮ ಸುಸಜ್ಜಿತ ಪಲ್ಲಕ್ಕಿಗಳಲ್ಲಿ ಬಂದು ಮುಖ್ಯ ದೇವತೆಯಾದ ಭಗವಾನ್ ರಘುನಾಥ ಜಿ ಅವರ ದೇವಸ್ಥಾನದಲ್ಲಿ ತಮ್ಮ ನಮನವನ್ನು ಸಲ್ಲಿಸುತ್ತಾರೆ ಮತ್ತು ನಂತರ ಧಾಲ್ಪುರ ಮೈದಾನಕ್ಕೆ ತೆರಳುತ್ತಾರೆ. ಐತಿಹಾಸಿಕ ಕುಲು ದಸರಾ ಆಚರಣೆಯಲ್ಲಿ ಪ್ರಧಾನಮಂತ್ರಿಯವರು ಈ ದೈವಿಕ ರಥಯಾತ್ರೆ ಮತ್ತು ದೇವತೆಗಳ ಮಹಾಸಭೆಗೆ ಸಾಕ್ಷಿಯಾಗಲಿದ್ದಾರೆ. ದೇಶದ ಪ್ರಧಾನಮಂತ್ರಿ ಕುಲ್ಲು ದಸರಾ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

*******



(Release ID: 1864783) Visitor Counter : 164