ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಕರ್ಮ ಜಯಂತಿ ಅಂಗವಾಗಿ, ಪ್ರಧಾನಮಂತ್ರಿ ಅವರು ವಿಡಿಯೊ ಸಂದೇಶದ ಮೂಲಕ  ಕೌಶಲ್ಯ ದೀಕ್ಷಾಂತ್ ಸಮಾರೋಹ್ ಉದ್ದೇಶಿಸಿ ಮಾತನಾಡಿದರು


‘‘ಕೈಗಾರಿಕಾ ತರಬೇತಿ ಸಂಸ್ಥೆಯ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೌಶಲ್ಯ ಘಟಿಕೋತ್ಸವದ ಅಂಗವಾಗಿ, ಇಂದು ಇತಿಹಾಸ ಸೃಷ್ಟಿಯಾಗಿದೆ’’

‘‘ಕಾರ್ಮಿಕರ ದಿನವಾಗಿರುವ ವಿಶ್ವಕರ್ಮ ಜಯಂತಿಯು, ನಿಜವಾದ ಅರ್ಥದಲ್ಲಿ ಶ್ರಮಿಸುವ ಪ್ರತಿಯೊಬ್ಬ ವ್ಯಕ್ತಿಗೂ  ಗೌರವವಾಗಿದೆ’’

‘‘ಭಾರತದಲ್ಲಿ ನಾವು ಯಾವಾಗಲೂ ಕಾರ್ಮಿಕರ ಕೌಶಲ್ಯದಲ್ಲಿ ದೇವರ ಚಿತ್ರಣವನ್ನು ನೋಡಿದ್ದೇವೆ, ಅವರು ವಿಶ್ವಕರ್ಮ ರೂಪದಲ್ಲಿ ಕಾಣುತ್ತಾರೆ’’

‘‘ಶತಮಾನದ ಭಾರತ ನಿರ್ಮಾಣಕ್ಕಾಗಿ, ಭಾರತದ ಯುವಜನರು ಶಿಕ್ಷಣ ಮತ್ತು ಕೌಶಲ್ಯದಲ್ಲಿ ಸಮಾನವಾಗಿ ಪ್ರವೀಣರಾಗಿರುವುದು ಬಹಳ ಮುಖ್ಯ’’

‘‘ಐಟಿಐಗಳಿಂದ ತಾಂತ್ರಿಕ ತರಬೇತಿ ಪಡೆದ ಯುವಜನರನ್ನು ಸೇನೆಯಲ್ಲಿ ನೇಮಕ ಮಾಡಿಕೊಳ್ಳಲು ವಿಶೇಷ ಅವಕಾಶ’’

‘‘ಇದರಲ್ಲಿ ಐಟಿಐಗಳ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಯುವಜನರು ಇವುಗಳ ಸಾಧ್ಯತೆಗಳನ್ನು ಹೆಚ್ಚು ಬಳಸಿಕೊಳ್ಳಬೇಕು’’

‘‘ಭಾರತವು ಕೌಶಲ್ಯಗಳಲ್ಲಿ ಗುಣಮಟ್ಟವನ್ನು ಹೊಂದಿದೆ. ಜೊತೆಗೆ, ವೈವಿಧ್ಯತೆಯೂ ಇದೆ’’

‘‘ಶಿಕ್ಷಣದ ಶಕ್ತಿ ಜೊತೆಗೆ ಕೌಶಲ್ಯದ ಶಕ್ತಿ ಇದ್ದಾಗ, ಯುವಜನರಲ್ಲಿ ಆತ್ಮವಿಶ್ವಾಸವು ಸ್ವಯಂ ಆಗಿ ಹೆಚ್ಚಾಗುತ್ತದೆ’’

‘‘ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ, ಭಾರತದ ಮೇಲಿನ ವಿಶ್ವದ ನಂಬಿಕೆಯು ನಿರಂತರವಾಗಿ ಹೆಚ್ಚುತ್ತಿದೆ’’

‘‘ಕೌಶಲ್ಯಗಳ ವಿಷಯಕ್ಕೆ ಬಂದಾಗ ನಿಮ್ಮ ಮಂತ್ರವು ‘ಕೌಶಲ್ಯ’, ‘ಮರು ಕೌಶಲ್ಯ’ ಹಾಗೂ ‘ಉತ್ಕೃಷ್ಟತೆ’ ಆಗಿರಬೇಕು!’’

Posted On: 17 SEP 2022 3:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮೊದಲ ಬಾರಿಗೆ ಕೌಶಲ್ಯ ದೀಕ್ಷಾಂತ್ ಸಮಾರೋಹ್‌ನಲ್ಲಿ, ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಸುಮಾರು 40 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತವು 21ನೇ ಶತಮಾನದಲ್ಲಿ ಮುನ್ನಡೆಯುತ್ತಿದೆ. ಕೈಗಾರಿಕಾ ತರಬೇತಿ ಸಂಸ್ಥೆಯ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೌಶಲ ಘಟಿಕೋತ್ಸವದ ಈ ಸಂದರ್ಭವು ಇತಿಹಾಸವನ್ನು ಸೃಷ್ಟಿಸಿದ್ದು, 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ವರ್ಚುವಲ್ ಆಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಭಗವಾನ್ ವಿಶ್ವಕರ್ಮರ ಜನ್ಮದಿನದಂದು, ವಿದ್ಯಾರ್ಥಿಗಳು ತಮ್ಮ ಕೌಶಲ್ಯದೊಂದಿಗೆ ಹೊಸತನದ ಹಾದಿಯಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ನಿಮ್ಮ ಆರಂಭವು ಎಷ್ಟು ಆಹ್ಲಾದಕರವಾಗಿರುತ್ತದೆಯೋ, ನಾಳೆಯ ನಿಮ್ಮ ಪ್ರಯಾಣವೂ ಹೆಚ್ಚು ಸೃಜನಶೀಲವಾಗಿರುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ವಿಶ್ವಕರ್ಮ ಜಯಂತಿಯ ಕುರಿತು ವಿವರಿಸಿದ ಪ್ರಧಾನಮಂತ್ರಿ ಅವರು, ಇದು ಘನತೆ ಮತ್ತು ಕೌಶಲ್ಯದ ಸಮರ್ಪಣೆಯ ಹಬ್ಬವಾಗಿದೆ ಎಂದರು. ಶಿಲ್ಪಿಯೊಬ್ಬರು ದೇವರ ಮೂರ್ತಿಯನ್ನು ತಯಾರಿಸುತ್ತಿರುವುದನ್ನು ಸಾದೃಶ್ಯವಾಗಿ ಚಿತ್ರಿಸಿದ ವಿಶ್ವಕರ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಕೌಶಲ್ಯವನ್ನು ಗೌರವಿಸಿ ಗುರುತಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.  ‘ವಿಶ್ವಕರ್ಮ ಜಯಂತಿಯು ಕಾರ್ಮಿಕರ ದಿನವಾಗಿದ್ದು, ನಿಜವಾದ ಅರ್ಥದಲ್ಲಿ ಶ್ರಮಿಸುವ ಪ್ರತಿಯೊಬ್ಬ ವ್ಯಕ್ತಿಯ ಗೌರವವಾಗಿದೆ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ‘ಭಾರತದಲ್ಲಿ, ನಾವು ಯಾವಾಗಲೂ ಕಾರ್ಮಿಕರ ಕೌಶಲ್ಯದಲ್ಲಿ ದೇವರ ಚಿತ್ರಣವನ್ನು ನೋಡುತ್ತೇವೆ., ಅವರು ವಿಶ್ವಕರ್ಮರ ರೂಪದಲ್ಲಿ ಕಾಣುತ್ತಾರೆ”. ಅವರಲ್ಲಿರುವ ಕೌಶಲ್ಯವು ಎಲ್ಲಿಯೋ ದೇವರ ತುಣುಕನ್ನು ಹೊಂದಿದೆ. ‘ಈ ಕಾರ್ಯಕ್ರಮವು ಭಗವಾನ್ ವಿಶ್ವಕರ್ಮರಿಗೆ ಭಾವನಾತ್ಮಕ ‘ಕೌಶಲಾಂಜಲಿ’ಯ ಗೌರವದಂತಿದೆ ಎಂದು ನಾನು ಅಂದುಕೊಂಡಿದ್ದೇನೆ’ ಎಂದು ಅವರು ಹೇಳಿದರು.

ಕಳೆದ ಎಂಟು ವರ್ಷಗಳ ಸರ್ಕಾರದ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಭಗವಾನ್ ವಿಶ್ವಕರ್ಮರ ಸ್ಫೂರ್ತಿಯೊಂದಿಗೆ ಭಾರತವು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ, ‘ಶ್ರಮೇವ ಜಯತೆ’ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ ಎಂದರು. ‘ಶತಮಾನದ ಭಾರತವನ್ನು ನಿರ್ಮಿಸಲು, ಭಾರತದ ಯುವಜನರು ಶಿಕ್ಷಣ ಮತ್ತು ಕೌಶಲ್ಯದಲ್ಲಿ ಸಮಾನವಾಗಿ ಪ್ರವೀಣರಾಗಿರುವುದು ಬಹಳ ಮುಖ್ಯ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಯುವಕರ ಕೌಶಲ್ಯ ಅಭಿವೃದ್ಧಿ ಮತ್ತು ಹೊಸ ಸಂಸ್ಥೆಗಳ ರಚನೆಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಿದೆ ಎಂದು ಶ್ರೀ ಮೋದಿ ಅವರು ಹೇಳಿದರು. “ನಮ್ಮ ದೇಶದಲ್ಲಿ ಮೊದಲ ಐಟಿಐ 1950ರಲ್ಲಿ ಸ್ಥಾಪನೆಯಾಯಿತು. ನಂತರದ ಏಳು ದಶಕಗಳಲ್ಲಿ 10 ಸಾವಿರ ಐಟಿಐಗಳು ರೂಪುಗೊಂಡವು. 8 ವರ್ಷಗಳ ನಮ್ಮ ಸರ್ಕಾರದಲ್ಲಿ ದೇಶದಲ್ಲಿ ಸುಮಾರು 5 ಸಾವಿರ ಹೊಸ ಐಟಿಐಗಳನ್ನು ಆರಂಭಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ಐಟಿಐಗಳಿಗೆ 4 ಲಕ್ಷಕ್ಕೂ ಹೆಚ್ಚು ಹೊಸ ಸೀಟುಗಳನ್ನು ಸೇರಿಸಲಾಗಿದೆ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಭಾರತೀಯ ಕೌಶಲ್ಯಗಳ ಸಂಸ್ಥೆ ಹಾಗೂ ಐಟಿಐಗಳನ್ನು ಹೊರತುಪಡಿಸಿ, ದೇಶಾದ್ಯಂತ ಸಾವಿರಾರು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು. ಶಾಲಾ ಹಂತದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರವು 5000ಕ್ಕೂ ಹೆಚ್ಚು ಕೌಶಲ್ಯ ಕೇಂದ್ರಗಳನ್ನು ತೆರೆಯಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ನಂತರ, ಅನುಭವ ಆಧಾರಿತ ಕಲಿಕೆಯನ್ನು ಉತ್ತೇಜಿಸಲಾಗುತ್ತಿದೆ. ಶಾಲೆಗಳಲ್ಲಿ ಕೌಶಲ್ಯ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

10ನೇ ತರಗತಿ ಉತ್ತೀರ್ಣರಾದ ಬಳಿಕ ಐಟಿಐಗೆ ಬರುವವರು, ರಾಷ್ಟ್ರೀಯ ಮುಕ್ತ ಶಾಲೆಯ ಮೂಲಕ 12ನೇ ತರಗತಿ ತೇರ್ಗಡೆ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸುವಾಗ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ‘ಬೇರೆ ಅಧ್ಯಯನಗಳಿಗೂ ಇದು ನಿಮಗೆ ಹೆಚ್ಚು ಆರಾಮದಾಯಕವಾಗಿಸುತ್ತದೆ’ ಎಂದು ಶ್ರೀ ಮೋದಿ ಅವರು ತಿಳಿಸಿದರು. ಐಟಿಐಗಳಿಂದ ತಾಂತ್ರಿಕ ತರಬೇತಿ ಪಡೆದ ಯುವಜನರನ್ನು ಸೇನೆಯಲ್ಲಿ ನೇಮಕ ಮಾಡಿಕೊಳ್ಳಲು ವಿಶೇಷ ಅವಕಾಶವಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗವಾದ ‘ಉದ್ಯಮ 4.0’ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಯಶಸ್ಸಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು. ಕಾಲಕ್ಕೆ ತಕ್ಕಂತೆ ಉದ್ಯೋಗದ ಸ್ವರೂಪವೂ ಬದಲಾಗುತ್ತಿದೆ. ಹಾಗಾಗಿ ನಮ್ಮ ಐಟಿಐಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಪ್ರತಿಯೊಂದು ಆಧುನಿಕ ಕೋರ್ಸ್‌ನ ಸೌಲಭ್ಯ ಸಿಗುವಂತೆ ಸರ್ಕಾರ ವಿಶೇಷ ಕಾಳಜಿ ವಹಿಸಿದೆ ಎಂದು ತಿಳಿಸಿದರು. ಕೋರ್ಸ್‌ಗಳ ಲಭ್ಯತೆಯ ಕುರಿತು ವಿವರಿಸಿದ ಶ್ರೀ ಮೋದಿ ಅವರು, ಐಟಿಐಗಳಲ್ಲಿ ಕೋಡಿಂಗ್, ಎಐ, ರೋಬೋಟಿಕ್ಸ್, 3ಡಿ ಪ್ರಿಂಟಿಂಗ್, ಡ್ರೋನ್ ತಂತ್ರಜ್ಞಾನ ಹಾಗೂ ಟೆಲಿ ಮೆಡಿಸಿನ್‌ಗೆ ಸಂಬಂಧಿಸಿದ ಅನೇಕ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ನವೀಕರಿಸಬಹುದಾದ ಇಂಧನ, ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಭಾರತವು ಮುಂಚೂಣಿಯಲ್ಲಿರುವುದರಿಂದ, ಅಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ನಮ್ಮ ಅನೇಕ ಐಟಿಐಗಳಲ್ಲಿ ಪರಿಚಯಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಗಮನ ಸೆಳೆದರು. ‘ಉದ್ಯೋಗಾವಕಾಶಗಳನ್ನು ಪಡೆಯುವುದು ನಿಮ್ಮಂತಹ ವಿದ್ಯಾರ್ಥಿಗಳಿಗೆ  ಸುಲಭವಾಗುತ್ತದೆ" ಎಂದು ಅವರು ಹೇಳಿದರು.

ಪ್ರತಿ ಹಳ್ಳಿಗೆ ಆಪ್ಟಿಕಲ್ ಫೈಬರ್ ಒದಗಿಸುವ ಮತ್ತು ಲಕ್ಷಗಟ್ಟಲೆ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆದಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದಲ್ಲಿ ತಂತ್ರಜ್ಞಾನವು ವಿಸ್ತಾರವಾಗುತ್ತಿದ್ದಂತೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಹಳ್ಳಿಗಳಲ್ಲಿ ಹೆಚ್ಚು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ‘ಗ್ರಾಮದಲ್ಲಿ ಮೊಬೈಲ್ ರಿಪೇರಿ ಕೆಲಸವಾಗಲಿ ಅಥವಾ ಕೃಷಿಯಲ್ಲಿನ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸವಾಗಲಿ, ರಸಗೊಬ್ಬರ ಸಿಂಪಡಣೆಯಾಗಲಿ ಅಥವಾ ಡ್ರೋನ್‌ಗಳ ಸಹಾಯದಿಂದ ಔಷಧ ಪೂರೈಕೆಯಾಗಲಿ, ಗ್ರಾಮೀಣ ಆರ್ಥಿಕತೆಗೆ ಇಂತಹ ಅನೇಕ ಹೊಸ ಉದ್ಯೋಗಗಳು ಸೇರ್ಪಡೆಯಾಗುತ್ತಿವೆ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ‘ಇವುಗಳಲ್ಲಿ ಐಟಿಐಗಳ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಯುವಜನರು ಈ ಸಾಧ್ಯತೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’. ಇದೇ ದೃಷ್ಟಿಯಲ್ಲಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರವೂ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.

ಕೌಶಲ್ಯಾಭಿವೃದ್ಧಿಯ ಜೊತೆಗೆ ಯುವಕರು ಸಾಫ್ಟ್ ಸ್ಕಿಲ್‌ಗಳನ್ನು ಹೊಂದುವುದು ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ಅದಕ್ಕೆ ಉದಾಹರಣೆಗಳನ್ನು ನೀಡಿದ ಶ್ರೀ ಮೋದಿ ಅವರು, ವ್ಯವಹಾರ ಯೋಜನೆಯನ್ನು ರೂಪಿಸುವುದು, ಬ್ಯಾಂಕ್‌ನಿಂದ ಸಾಲ ಪಡೆಯುವ ಯೋಜನೆಗಳು, ಅಗತ್ಯ ನಮೂನೆಗಳನ್ನು ಭರ್ತಿ ಮಾಡುವುದು ಹಾಗೂ ಹೊಸ ಕಂಪನಿಯನ್ನು ನೋಂದಾಯಿಸುವುದು ಮುಂತಾದ ವಿಷಯಗಳು ಕೋರ್ಸ್‌ನ ಭಾಗವಾಗಿರಲಿವೆ ಎಂದು ಅವರು ಹೇಳಿದರು. ‘ಸರ್ಕಾರದ ಈ ಪ್ರಯತ್ನಗಳ ಫಲಿತಾಂಶವೆಂದರೆ, ಭಾರತವು ಇಂದು ವೈವಿಧ್ಯತೆಯ ಜೊತೆಗೆ,  ಕೌಶಲ್ಯಗಳಲ್ಲಿ ಗುಣಮಟ್ಟವನ್ನು ಹೊಂದಿದೆ. ಐಟಿಐ ಪಾಸಾದ ನಮ್ಮವರು ಕಳೆದ ಕೆಲ ವರ್ಷಗಳಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆಗಳಲ್ಲಿ ಅನೇಕ ದೊಡ್ಡ ಬಹುಮಾನಗಳನ್ನು ಗೆದ್ದಿದ್ದಾರೆ’ ಎಂದು ಅವರು ಹೇಳಿದರು.

ಕೌಶಲಾಭಿವೃದ್ಧಿಯ ಕುರಿತು ವಿವರಿಸಿದ ಪ್ರಧಾನಮಂತ್ರಿ ಅವರು, ‘ಯುವಕನೊಬ್ಬನಿಗೆ ಶಿಕ್ಷಣದ ಶಕ್ತಿಯ ಜೊತೆಗೆ ಕೌಶಲ್ಯದ ಶಕ್ತಿಯೂ ಇದ್ದಾಗ, ಅವನ ಆತ್ಮಸ್ಥೈರ್ಯವು ತಾನಾಗಿಯೇ ಹೆಚ್ಚುತ್ತದೆ. ಯುವಕರು ಕೌಶಲ್ಯದಿಂದ ಸಶಕ್ತರಾಗಿ ಹೊರಬಂದಾಗ, ಈ ಸ್ವಯಂ ಉದ್ಯೋಗದ ಮನೋಭಾವವನ್ನು ಬೆಂಬಲಿಸಲು ಅವರು ತಮ್ಮ ಕೆಲಸವನ್ನು ಹೇಗೆ ಪ್ರಾರಂಭಿಸಬೇಕು ಎಂಬ ಕಲ್ಪನೆಯನ್ನು ಪಡೆಯುತ್ತಾರೆ’. ಖಾತರಿ ಇಲ್ಲದೆ ಸಾಲ ನೀಡುವ ಮುದ್ರಾ ಯೋಜನೆ, ಸ್ಟಾರ್ಟ್‌ಅಪ್ ಇಂಡಿಯಾ ಹಾಗೂ ಮತ್ತು ಸ್ಟ್ಯಾಂಡಪ್ ಇಂಡಿಯಾದಂತಹ ಯೋಜನೆಗಳ ಶಕ್ತಿಯ ಬಗ್ಗೆ ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

‘ಮುಂದೆ ಗುರಿ ಇದ್ದು, ನೀವು ಆ ದಿಕ್ಕಿನಲ್ಲಿ ಸಾಗಬೇಕು. ದೇಶ ಇಂದು ನಿಮ್ಮ ಕೈ ಹಿಡಿದಿದೆ, ನಾಳೆ ನೀವು ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು’ ಎಂದು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಎಲ್ಲರ ಗಮನ ಸೆಳೆದ ಶ್ರೀ ಮೋದಿ ಅವರು, ಮುಂದಿನ 25 ವರ್ಷಗಳ ನಮ್ಮ ಜೀವನವು, ಮುಂದಿನ 25 ವರ್ಷಗಳ ಭಾರತಕ್ಕೂ ಅಷ್ಟೇ ಮುಖ್ಯ ಎಂದು ಹೇಳಿದರು. ‘ನೀವೆಲ್ಲರೂ ಮೇಕ್ ಇನ್ ಇಂಡಿಯಾ ಮತ್ತು ಸ್ಥಳೀಯ ಪ್ರಚಾರದ ನಾಯಕರು. ನೀವು ಭಾರತದ ಉದ್ಯಮದ ಬೆನ್ನೆಲುಬು ಇದ್ದಂತೆ. ಅಭಿವೃದ್ಧಿ ಹೊಂದಿದ ಸ್ವಾವಲಂಬಿ ಭಾರತದ ಸಂಕಲ್ಪವನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ದೊಡ್ಡದಾಗಿದೆ’ ಎಂದು ಪ್ರಧಾನಮಂತ್ರಿ ಹೇಳಿದರು.

ಜಾಗತಿಕ ಮಟ್ಟದಲ್ಲಿರುವ ಅವಕಾಶಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ತಮ್ಮ ವೇಗವನ್ನು ಕಾಯ್ದುಕೊಳ್ಳಲು ಪ್ರಪಂಚದ ಅನೇಕ ದೊಡ್ಡ ದೇಶಗಳಿಗೆ ನುರಿತ ಉದ್ಯೋಗಿಗಳ ಅಗತ್ಯವಿದ್ದು, ದೇಶ ಹಾಗೂ ವಿದೇಶಗಳಲ್ಲಿ ಹಲವು ಅವಕಾಶಗಳು ಕಾಯುತ್ತಿವೆ. ‘ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ, ಭಾರತದ ಮೇಲಿನ ವಿಶ್ವದ ವಿಶ್ವಾಸವೂ ನಿರಂತರವಾಗಿ ಹೆಚ್ಚುತ್ತಿದೆ. ಕರೋನಾ ಅವಧಿಯಲ್ಲಿಯೂ, ಭಾರತವು ತನ್ನ ನುರಿತ ಕಾರ್ಯಪಡೆ ಮತ್ತು ಅದರ ಯುವಜನರು ಹೇಗೆ ದೊಡ್ಡ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಸಮರ್ಥರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಆರೋಗ್ಯ ಸೇವೆಗಳು ಅಥವಾ ಹೋಟೆಲ್-ಆಸ್ಪತ್ರೆ ನಿರ್ವಹಣೆ, ಡಿಜಿಟಲ್ ಪರಿಹಾರಗಳು ಅಥವಾ ವಿಪತ್ತು ನಿರ್ವಹಣಾ ಕ್ಷೇತ್ರವಾಗಿರಬಹುದು.  ತಮ್ಮ ಕೌಶಲ್ಯ ಮತ್ತು ಪ್ರತಿಭೆಯಿಂದಾಗಿ ಭಾರತೀಯರು ಪ್ರತಿಯೊಂದು ದೇಶದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ’ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿ ಅವರು,  ಭವಿಷ್ಯದ ಆಧಾರವಾಗಿರುವ ಕೌಶಲ್ಯಗಳನ್ನು ಉನ್ನತೀಕರಿಸುವ ಅಗತ್ಯವನ್ನು ಪುನರುಚ್ಚರಿಸಿದರು. ‘ಕೌಶಲ್ಯಗಳ ವಿಷಯಕ್ಕೆ ಬಂದಾಗ, ನಿಮ್ಮ ಮಂತ್ರವು ‘ಕೌಶಲ್ಯ’, ‘ಮರುಕೌಶಲ್ಯ’ ಹಾಗೂ  ‘ಉತ್ಕೃಷ್ಟತೆ’ ಆಗಿರಬೇಕು!’ ಎಂದು ಶ್ರೀ ಮೋದಿ ಅವರು ಗಮನ ಸೆಳೆದರು. ಹೊಸ ಕೌಶಲಗಳನ್ನು ಕಲಿಯಲು ಮತ್ತು ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಅವರು ಕರೆ ನೀಡಿದರು. ‘ನನಗೆ ಖಾತ್ರಿ ಇದೆ. ನೀವು ಈ ವೇಗದಲ್ಲಿ ಮುಂದುವರಿಯುತ್ತೀರಿ ಮತ್ತು ನಿಮ್ಮ ಕೌಶಲ್ಯದಿಂದ, ನವ ಭಾರತದ ಉತ್ತಮ ಭವಿಷ್ಯಕ್ಕೆ ನೀವು ನಿರ್ದೇಶನವನ್ನು ನೀಡುತ್ತೀರಿ’ ಎಂದು ಭರವಸೆ ವ್ಯಕ್ತಪಡಿಸಿದರು.

 

 

 

*****


(Release ID: 1860446) Visitor Counter : 139