ಸಂಪುಟ

ಭಾರತದಲ್ಲಿ ಆಯೋಜಿಸಿರುವ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ 2022 ಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಘಟನೆ (ಫಿಫಾ) ಗೆ ಖಾತ್ರಿ ನೀಡಲು ಸಂಪುಟದ ಅಂಗೀಕಾರ

Posted On: 14 SEP 2022 3:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಆಯೋಜಿಸಿರುವ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ 2022 ಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಘಟನೆ (ಫಿಫಾ) ಗೆ ನೀಡುವ ಖಾತರಿಗೆ ಸಹಿ ಹಾಕಲು ಅನುಮೋದನೆ ನೀಡಿದೆ.

17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್ 2022, ಭಾರತದಲ್ಲಿ 2022 ರ ಅಕ್ಟೋಬರ್ 11 ರಿಂದ 30ರವರೆಗೆ ನಡೆಯಲಿದೆ. ದ್ವೈವಾರ್ಷಿಕ ಯುವ ಪಂದ್ಯಾವಳಿಯ ಏಳನೇ ಆವೃತ್ತಿಯು ಭಾರತವು ಆಯೋಜಿಸುತ್ತಿರುವ ಮೊದಲ ಫಿಪಾ ಮಹಿಳಾ ಕ್ರೀಡಾಕೂಟವಾಗಿದೆ. 17 ವರ್ಷದೊಳಗಿನ ಫಿಪಾ ಪುರುಷರ ವಿಶ್ವಕಪ್ 2017 ರಿಂದ ಪಡೆದ ಸಕಾರಾತ್ಮಕ ಪರಂಪರೆಯನ್ನು ಮುಂದುವರೆಸಲು, ರಾಷ್ಟ್ರವು ಮಹಿಳಾ ಫುಟ್‌ಬಾಲ್‌ನಲ್ಲೂ ಅಂತಹುದೇ ಯಶಸ್ಸಿಗಾಗಿ ತಯಾರಿ ನಡೆಸುತ್ತಿದೆ. ಇಲ್ಲಿ ವಿಶ್ವದಾದ್ಯಂತದ ಅತ್ಯುತ್ತಮ ಯುವ ಮಹಿಳಾ ಫುಟ್‌ಬಾಲ್ ಆಟಗಾರರು ಪ್ರತಿಷ್ಠಿತ ಟ್ರೋಫಿಯನ್ನು ಜಯಿಸಲು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ.

ಹಣಕಾಸಿನ ವೆಚ್ಚ:
ಅಖಿಲ ಭಾರತ ಫುಟ್ಬಾಲ್ ಸಂಘಟನೆ (ಎ ಐ ಎಫ್‌ ಎಫ್‌) ಗೆ ಕ್ರೀಡಾಂಗಣದ ನಿರ್ವಹಣೆ, ಕ್ರೀಡಾಂಗಣದ ವಿದ್ಯುತ್‌, ವಿದ್ಯುತ್‌ ಮತ್ತು ಕೇಬಲ್ಲಿಂಗ್, ಕ್ರೀಡಾಂಗನ ಮತ್ತು ತರಬೇತಿ ತಾಣಗಳ ಬ್ರ್ಯಾಂಡಿಂಗ್ ಇತ್ಯಾದಿಗಳಿಗೆ 10 ಕೋಟಿ ರೂ. ಆರ್ಥಿಕ ನೆರವು ನೀಡಲಾಗುವುದು. ಇದನ್ನು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ ಎಸ್‌ ಎಫ್‌) ಗಳಿಗೆ ನೆರವು ಯೋಜನೆಯ ಬಜೆಟ್ ಹಂಚಿಕೆಯಿಂದ ಭರಿಸಲಾಗುವುದು. 

ಯೋಜನೆಯ ಉದ್ದೇಶಗಳು:
•    17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್ 2022, ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಅನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
•    17 ವರ್ಷದೊಳಗಿನವರ ಫಿಫಾ ಪುರುಷರ ವಿಶ್ವಕಪ್ 2017 ರಿಂದ ಸಕಾರಾತ್ಮಕ ಪರಂಪರೆಯನ್ನು ಪಡೆದಿರುವ ರಾಷ್ಟ್ರವು, ಮಹಿಳಾ ಫುಟ್‌ಬಾಲ್‌ನಲ್ಲೂ ಅಂತಹುದೇ ಯಶಸ್ಸಿಗೆ ತಯಾರಿ ನಡೆಸುತ್ತಿದೆ, ವಿಶ್ವದಾದ್ಯಂತದ ಅತ್ಯುತ್ತಮ ಯುವ ಮಹಿಳಾ  ಫುಟ್‌ಬಾಲ್ ಆಟಗಾರರು ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿ ಹಿಡಿಯಲು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಸಕಾರಾತ್ಮಕ ಪರಂಪರೆಯನ್ನು ಸೃಷ್ಟಿಸಲು ಈ ಕೆಳಗಿನ ಉದ್ದೇಶಗಳನ್ನು ಹೊಂದಲಾಗಿದೆ:
•    ಫುಟ್ಬಾಲ್ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು.
•    ಭಾರತದಲ್ಲಿ ಫುಟ್ಬಾಲ್ ಆಡಲು ಬಾಲಕಿಯರನ್ನು ಪ್ರೇರೇಪಿಸುವುದು.
•    ಚಿಕ್ಕ ವಯಸ್ಸಿನಿಂದಲೇ ಸಮಾನ ಆಟದ ಪರಿಕಲ್ಪನೆಯನ್ನು ಸಹಜಗೊಳಿಸುವ ಮೂಲಕ ಎಲ್ಲಾ ಲಿಂಗೀಯರ ಭಾಗವಹಿಸುವಿಕೆಯನ್ನು ಪ್ರತಿಪಾದಿಸುವುದು.
•    ಭಾರತದಲ್ಲಿ ಮಹಿಳೆಯರಿಗೆ ಫುಟ್ಬಾಲ್ ಆಟದ ಗುಣಮಟ್ಟವನ್ನು ಸುಧಾರಿಸಲು ಅವಕಾಶ ಒದಗಿಸುವುದು.
•    ಮಹಿಳೆಯರ ಆಟದ ವಾಣಿಜ್ಯ ಮೌಲ್ಯವನ್ನು ಸುಧಾರಿಸುವುದು.

 

ಸಮರ್ಥನೆ:
17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ನಡೆಯಲಿದೆ. ಇದು ಯುವಜನರು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ ಮತ್ತು ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ವಿಶ್ವಕಪ್‌ ಭಾರತದ ಹೆಣ್ಣುಮಕ್ಕಳಲ್ಲಿ ಫುಟ್‌ಬಾಲ್ ಅನ್ನು ಆಯ್ಕೆಯ ಕ್ರೀಡೆಯಾಗಿ ಉತ್ತೇಜಿಸುವುದಲ್ಲದೆ, ದೇಶದಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಸಾಮಾನ್ಯವಾಗಿ ಫುಟ್‌ಬಾಲ್ ಮತ್ತು ಕ್ರೀಡೆಗಳನ್ನು ಸ್ವೀಕರಿಸಲು ಅನುಕೂಲವಾಗುವಂತಹ ಶಾಶ್ವತ ಪರಂಪರೆಯನ್ನು ಸೃಷ್ಟಿಸಲು ಸಿದ್ಧವಾಗಿದೆ.

 

ಹಿನ್ನೆಲೆ:
17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್, 17 ಅಥವಾ 17 ವರ್ಷದೊಳಗಿನ ಮಹಿಳಾ ಆಟಗಾರರಿಗೆ ಫಿಫಾ ಆಯೋಜಿಸುವ ವಿಶ್ವ ಚಾಂಪಿಯನ್‌ಶಿಪ್ ಆಗಿದೆ. ಈ ಚಾಂಪಿಯನ್‌ಶಿಪ್ 2008 ರಲ್ಲಿ ಪ್ರಾರಂಭವಾಯಿತು ಮತ್ತು ಸಾಂಪ್ರದಾಯಿಕವಾಗಿ ಸಮ-ಸಂಖ್ಯೆಯ ವರ್ಷಗಳಲ್ಲಿ ನಡೆಯುತ್ತದೆ. ವಿಶ್ವಕಪ್‌ನ 6 ನೇ ಆವೃತ್ತಿಯು ಉರುಗ್ವೆಯಲ್ಲಿ 2018ರ ನವೆಂಬರ್ 13 ರಿಂದ ಡಿಸೆಂಬರ್ 1 ರವರೆಗೆ ನಡೆಯಿತು. ಪ್ರಸ್ತುತ ಸ್ಪೇನ್ ದೇಶವು 17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್ ಚಾಂಪಿಯನ್‌ ಆಗಿದೆ. ಭಾರತದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್ 7 ನೇ ಆವೃತ್ತಿಯಾಗಿದ್ದು, ಇದರಲ್ಲಿ ಭಾರತ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ಎಐಎಫ್‌ಎಫ್‌ 3 ಸ್ಥಳಗಳಲ್ಲಿ ಸ್ಪರ್ಧೆಯ ಪಂದ್ಯಗಳನ್ನು ನಡೆಸಲು ಪ್ರಸ್ತಾಪಿಸಿದೆ. ಅವುಗಳೆಂದರೆ; (ಎ) ಭುವನೇಶ್ವರ (ಬಿ) ನವಿ ಮುಂಬೈ ಮತ್ತು (ಸಿ) ಗೋವಾ. 2017 ರ ಅಕ್ಟೋಬರ್ 6 ರಿಂದ 28 ರವರೆಗೆ ದೇಶದ 6 ವಿಭಿನ್ನ ಸ್ಥಳಗಳಾದ ನವದೆಹಲಿ, ಗುವಾಹಟಿ, ಮುಂಬೈ, ಗೋವಾ, ಕೊಚ್ಚಿ ಮತ್ತು ಕೋಲ್ಕತ್ತಾದಲ್ಲಿ 17 ವರ್ಷದೊಳಗಿನರ ಫಿಫಾ ಪುರುಷರ ವಿಶ್ವಕಪ್ ಅನ್ನು ಭಾರತವು ಯಶಸ್ವಿಯಾಗಿ ಆಯೋಜಿಸಿತ್ತು.

*****



(Release ID: 1859290) Visitor Counter : 212