ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನಮಂತ್ರಿ ಅವರಿಂದ ‘ಕರ್ತವ್ಯ ಪಥ’ ಉದ್ಘಾಟನೆ ಮತ್ತು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ 


“ನೇತಾಜಿ ಸುಭಾಷ್ ಅಖಂಡ ಭಾರತದ ಮೊದಲ ಮುಖ್ಯಸ್ಥರು, ಅವರು 1947ಕ್ಕೂ ಮುನ್ನವೇ ಅಂಡಮಾನ್ ಅನ್ನು ಸ್ವತಂತ್ರಗೊಳಿಸಿದ್ದರು ಮತ್ತು ತ್ರಿವರ್ಣ ಧ್ವಜ ಹಾರಿಸಿದ್ದರು’’

“ಕಿಂಗ್ಸ್ ವೇ ಅಂದರೆ ರಾಜಪಥ, ಗುಲಾಮಗಿರಿಯ ಸಂಕೇತ, ಅದು ಇಂದಿನಿಂದ ಇತಿಹಾಸ ಸೇರಲಿದೆ ಮತ್ತು ಶಾಶ್ವತವಾಗಿ ಅಳಿಸಿ ಹೋಗಲಿದೆ’’

“ನೇತಾಜಿ ಅವರ ಶಕ್ತಿ ಇಂದು ದೇಶಕ್ಕೆ ಮಾರ್ಗದರ್ಶನ ನೀಡಬೇಕು ಎಂಬುದು ನಮ್ಮ ಪ್ರಯತ್ನ. ‘ಕರ್ತವ್ಯ ಪಥ’ದಲ್ಲಿರುವ ನೇತಾಜಿ ಪ್ರತಿಮೆ ಅದಕ್ಕೆ ಒಂದು ಮಾಧ್ಯಮವಾಗಲಿದೆ’’

“ಇಂದು ಭಾರತದ ಆದರ್ಶಗಳು ಮತ್ತು ಆಯಾಮಗಳು ತನ್ನದೇ ಆದವು. ಇಂದು ಭಾರತದ ಸಂಕಲ್ಪ ತನ್ನದೇ ಆದದ್ದು ಮತ್ತು ಅದರ ಗುರಿಗಳೂ ಕೂಡ ತನ್ನದೇ ಆದವು. ಇಂದು ನಮ್ಮ ಪಥವೂ ನಮ್ಮದೇ, ನಮ್ಮ ಸಂಕೇತಗಳೂ ಕೂಡ ನಮ್ಮವೇ ಆಗಿವೆ’’

“ದೇಶವಾಸಿಗಳ ಚಿಂತನೆ ಮತ್ತು ನಡವಳಿಕೆ ಎರಡೂ ಗುಲಾಮಗಿರಿಯ ಮನೋಭಾವದಿಂದ ಮುಕ್ತವಾಗುತ್ತಿವೆ’’

“ರಾಜಪಥದ ಭಾವನೆ ಮತ್ತು ವಿನ್ಯಾಸ ಗುಲಾಮಗಿರಿಯ ಸಂಕೇತವಾಗಿದ್ದವು, ಆದರೆ ಇಂದು ವಾಸ್ತುಶಿಲ್ಪ ಬದಲಾವಣೆಯೊಂದಿಗೆ ಅದರ ಚೈತನ್ಯವೂ ರೂಪಾಂತರಗೊಂಡಿದೆ’’

“ಮುಂದಿನ ಗಣರಾಜ್ಯೋತ್ಸವ ಪರೆಡ್ ನಲ್ಲಿ ಸೆಂಟ್ರಲ್ ವಿಸ್ತಾದ ಶ್ರಮಜೀವಿಗಳು ಮತ್ತು ಅವರ ಕುಟುಂಬದವರು ನನ್ನ ವಿಶೇಷ ಅತಿಥಿಗಳು’’

“ನೂತನ ಸಂಸತ್ ಭವನದ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಗ್ಯಾಲರಿಯೊಂದರಲ್ಲಿ ಗೌರವದ ಸ್ಥಾನ ಲಭಿಸಲಿದೆ’’

Posted On: 08 SEP 2022 9:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಕರ್ತವ್ಯ ಪಥ'ವನ್ನು ಉದ್ಘಾಟಿಸಿದರು. ಇದು ಹಿಂದಿನ ರಾಜ್‌ಪಥ್‌ನಿಂದ ಅಧಿಕಾರದ ಹೆಜ್ಜೆ ಗುರುತಾಗಿದ್ದು, ಕರ್ತವ್ಯ ಪಥವು ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಮಂತ್ರಿ ಅನಾವರಣಗೊಳಿಸಿದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ ರಾಷ್ಟ್ರಕ್ಕೆ ಇಂದು ಹೊಸ ಸ್ಫೂರ್ತಿ ಮತ್ತು ಶಕ್ತಿಯ ಅನುಭವವಾಗುತ್ತಿದೆ ಎಂದು ಹೇಳಿದರು. “ಇಂದು ನಾವು ಹಿಂದಿನದನ್ನು ಬಿಟ್ಟು ನಾಳೆಯ ಚಿತ್ರವನ್ನು ಹೊಸ ಬಣ್ಣಗಳಿಂದ ತುಂಬುತ್ತಿದ್ದೇವೆ. ಇಂದು ಈ ಹೊಸ ಹೊಳಪು ಎಲ್ಲೆಡೆ ಗೋಚರಿಸುತ್ತಿದೆ, ಇದು ನವಭಾರತದ ಆತ್ಮವಿಶ್ವಾಸದ ಹೊಳಪಾಗಿದೆ” ಎಂದು ಅವರು ಹೇಳಿದರು. ಅವರು ಮುಂದುವರಿಸಿ, “ಕಿಂಗ್ಸ್‌ವೇ ಅಂದರೆ ಗುಲಾಮಗಿರಿಯ ಸಂಕೇತವಾದ ರಾಜಪಥವು ಇಂದಿನಿಂದ ಇತಿಹಾಸದ ವಿಷಯವಾಗಿದೆ ಮತ್ತು ಶಾಶ್ವತವಾಗಿ ಅಳಿಸಿಹೋಗಿದೆ. ಇಂದು ‘ಕರ್ತವ್ಯ ಪಥ’ ರೂಪದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಗುಲಾಮಗಿರಿಯ ಮತ್ತೊಂದು ಗುರುತಿನಿಂದ ಮುಕ್ತಿ ಹೊಂದಿದ್ದಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. 

ಇಂದು ಇಂಡಿಯಾ ಗೇಟ್ ಬಳಿ ನಮ್ಮ ರಾಷ್ಟ್ರನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. “ಗುಲಾಮಗಿರಿಯ ಕಾಲದಲ್ಲಿ, ಬ್ರಿಟಿಷ್ ರಾಜನ ಪ್ರತಿನಿಧಿಯ ಪ್ರತಿಮೆ ಇತ್ತು. ಇಂದು ಅದೇ ಸ್ಥಳದಲ್ಲಿ ನೇತಾಜಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ದೇಶವು ಆಧುನಿಕ, ಬಲಿಷ್ಠ ಭಾರತವನ್ನು ಜೀವಂತಗೊಳಿಸಿದೆ” ಎಂದು ಅವರು ಹೇಳಿದರು. ನೇತಾಜಿಯವರ ಹಿರಿಮೆಯನ್ನು ಸ್ಮರಿಸಿದ ಪ್ರಧಾನಿ, “ಸುಭಾಷ್ ಚಂದ್ರ ಬೋಸ್ ಅವರು ಹುದ್ದೆ ಮತ್ತು ಸಂಪನ್ಮೂಲಗಳ ಸವಾಲನ್ನು ಮೀರಿದ ಮಹಾನ್ ವ್ಯಕ್ತಿ. ಅವರ ಸ್ವೀಕಾರ ಹೇಗಿತ್ತೆಂದರೆ ಇಡೀ ಜಗತ್ತು ಅವರನ್ನು ನಾಯಕ ಎಂದು ಪರಿಗಣಿಸಿತು. ಅವರು ಧೈರ್ಯ ಮತ್ತು ಸ್ವಾಭಿಮಾನ ಹೊಂದಿದ್ದರು. ಅವರು ಕಲ್ಪನೆಗಳನ್ನು ಹೊಂದಿದ್ದರು, ಅವರು ದೂರದೃಷ್ಟಿಗಳನ್ನು ಹೊಂದಿದ್ದರು. ಅವರು ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿದ್ದರು ಮತ್ತು ನೀತಿಗಳನ್ನು ಹೊಂದಿದ್ದರು’’ ಎಂದರು. 

ಯಾವುದೇ ದೇಶವು ತನ್ನ ಭವ್ಯವಾದ ಗತವೈಭವವನ್ನು ಮರೆಯಬಾರದು ಎಂದು ಹೇಳಿದರು. ಭಾರತದ ಭವ್ಯ ಇತಿಹಾಸವು ಪ್ರತಿಯೊಬ್ಬ ಭಾರತೀಯನ ರಕ್ತ ಮತ್ತು ಪರಂಪರೆಯಲ್ಲಿದೆ. ನೇತಾಜಿ ಅವರು ಭಾರತದ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದ್ದರು ಮತ್ತು ಅದೇ ವೇಳೆ ಅವರು ಭಾರತವನ್ನು ಆಧುನೀಕರಣಗೊಳಿಸಲು ಬಯಸಿದ್ದರು ಎಂದು ಸ್ಮರಿಸಿಕೊಂಡರು. “ಸ್ವಾತಂತ್ರ್ಯದ ನಂತರ ಭಾರತವು ಸುಭಾಷ್ ಬಾಬು ಅವರ ಮಾರ್ಗವನ್ನು ಅನುಸರಿಸಿದ್ದರೆ, ಇಂದು ದೇಶವು ಎಷ್ಟು ಎತ್ತರದಲ್ಲಿರುತ್ತಿತ್ತು! ಆದರೆ ದುರಾದೃಷ್ಟವಶಾತ್, ನಮ್ಮ ಈ ಮಹಾನ್ ವೀರನನ್ನು ಸ್ವಾತಂತ್ರ್ಯ ನಂತರ ಮರೆತು ಬಿಡಲಾಯಿತು. ಅವರ ಆಲೋಚನೆಗಳು, ಅವರಿಗೆ ಸಂಬಂಧಿಸಿದ ಸಂಕೇತಗಳನ್ನು ಸಹ ನಿರ್ಲಕ್ಷಿಸಲಾಗಿದೆ’’ ಎಂದು ಪ್ರಧಾನಿ ವಿಷಾದಿಸಿದರು. 

ನೇತಾಜಿ ಅವರ 125ನೇ ಜಯಂತಿ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿನ ನೇತಾಜಿ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನು ನೆನಪುಮಾಡಿಕೊಂಡ ಅವರು, ಅಲ್ಲಿ ತಮಗಾದ ಶಕ್ತಿಯ ಅನುಭವವನ್ನು ಸ್ಮರಿಸಿಕೊಂಡರು. “ನೇತಾಜಿ ಅವರ ಶಕ್ತಿ ಇಂದು ದೇಶಕ್ಕೆ ಮಾರ್ಗದರ್ಶನವಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಕರ್ತವ್ಯಪಥ ದಲ್ಲಿರುವ ನೇತಾಜಿ ಅವರ ಪ್ರತಿಮೆ ಮಾಧ್ಯಮವಾಗಬೇಕು” ಎಂದು ಹೇಳಿದರು. “ಕಳೆದ 8 ವರ್ಷಗಳಲ್ಲಿ ನೇತಾಜಿ ಅವರ ಕನಸು ಮತ್ತು ಆದರ್ಶಗಳನ್ನು ಒಳಗೊಂಡ ಹಲವು ನಿರ್ಧಾರಗಳನ್ನು ಒಂದರ ನಂತರ ಒಂದು ಕೈಗೊಳ್ಳಲಾಗಿದೆ. ನೇತಾಜಿ ಸುಭಾಷ್ ಅವರು, ಅಖಂಡ ಭಾರತದ ಮೊದಲ ಮುಖ್ಯಸ್ಥರು, ಅವರು 1947ಕ್ಕೆ ಮುನ್ನವೇ ಅಂಡಮಾನ್  ಸ್ವತಂತ್ರಗೊಳಿಸಿದ್ದರು ಮತ್ತು ತ್ರಿವರ್ಣಧ್ವಜ ಹಾರಿಸಿದ್ದರು. ಆ ಸಮಯದಲ್ಲಿ ಅವರು  ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜ ಹಾರಿಸಬೇಕು ಎಂದು ಕಲ್ಪನೆ ಮಾಡಿಕೊಂಡಿದ್ದರು. ಆಜಾದ್ ಹಿಂದ್ ಸರ್ಕಾರದ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜ ಹಾರಿಸುವ ಸದಾವಕಾಶ ನನಗೆ ದೊರಕಿತ್ತು. ಆಗ ನನಗೆ ವೈಯಕ್ತಿಕವಾಗಿ ಅನುಭವವಾಯಿತು” ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ನೇತಾಜಿ ಅವರಿಗೆ ಮೀಸಲಾದ ಮ್ಯೂಸಿಯಂ ಮತ್ತು ಕೆಂಪುಕೋಟೆಯಲ್ಲಿ ಆಜಾದ್ ಹಿಂದ್ ಫೌಜ್ ಬಗ್ಗೆ ಅವರು ಮಾತನಾಡಿದರು. ಅಲ್ಲದೆ 2019ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಆಜಾದ್ ಹಿಂದ್ ಫೌಜ್ ಪಥಸಂಚಲನದಲ್ಲಿ ಭಾಗವಹಿಸಿದ್ದು, ಹಿರಿಯರಿಗೆ ದೀರ್ಘಕಾಲದ ಗೌರವ ಸಲ್ಲಿಸಿದಂತಾಯಿತು ಎಂದರು. ಅಂತೆಯೇ ಅಂಡಮಾನ್ ದ್ವೀಪಕ್ಕೆ ಸಂಬಂಧಿಸಿದಂತೆ ಅವರ ಸಂಬಂಧ ಮತ್ತು ಅಸ್ಮಿತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಗುವುದು. 

ಪ್ರಧಾನಮಂತ್ರಿ ಅವರು ‘ಪಂಚ ಪ್ರಾಣ’ಕ್ಕೆ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುತ್ತಾ “ಇಂದು ಭಾರತ ತನ್ನದೇ ಆದ ಆದರ್ಶಗಳು ಮತ್ತು ಆಯಾಮಗಳನ್ನು ಹೊಂದಿದೆ. ಇಂದು  ಭಾರತದ ಸಂಕಲ್ಪಗಳು ಅದರದ್ದೇ ಆಗಿವೆ ಮತ್ತು ಅದರ ಗುರಿಗಳೂ ಸಹ ಅದರದೇ ಆಗಿವೆ. ಇಂದು ನಮ್ಮ ಪಥಗಳು ನಮ್ಮದೇ ಆಗಿದ್ದು, ನಮ್ಮ ಸಂಕೇತಗಳು ಕೂಡ ನಮ್ಮವೇ ಆಗಿವೆ” ಎಂದು ಹೇಳಿದರು. ಮಾತು ಮುಂದುವರಿಸುತ್ತಾ ಅವರು, “ರಾಜಪಥ್ ಆಗಿದ್ದು ಇಂದು ಕರ್ತವ್ಯಪಥ ಆಗಿದೆ. ಜಾರ್ಜ್ ಅವರ ಪ್ರತಿಮೆ ಇದ್ದ ಜಾಗದಲ್ಲಿ ನೇತಾಜಿ ಅವರ ಪ್ರತಿಮೆ ಸ್ಥಾಪನೆಯಾಗಿದೆ. ಗುಲಾಮಗಿರಿಯ ಮನೋಭಾವ ದೂರ ಮಾಡುವುದಕ್ಕೆ ಇದೇ ಮೊದಲ ಉದಾಹರಣೆಯಲ್ಲ ಮತ್ತು ಇದೇ ಮೊದಲೂ ಅಲ್ಲ ಅಥವಾ ಕೊನೆಯೂ ಅಲ್ಲ. ಇದು ಸ್ವತಂತ್ರ ಮನಸ್ಸು ಮತ್ತು ಸ್ಫೂರ್ತಿಯನ್ನು ಸಾಧಿಸುವ ಗುರಿ ತಲುಪುವ ತನಕ ಈ ಬದ್ಧತೆಯ ಪಯಣ ಮುಂದುವರಿಯಲಿದೆ” ಎಂದು ಹೇಳಿದರು. ಅಂತೆಯೇ ಪಿಎಂ ನಿವಾಸವನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಿದ್ದು ಹಾಗೂ ಸ್ವಾತಂತ್ರ್ಯ ದಿನದಂದು ಭಾರತೀಯ ಸಂಗೀತ ಸಾಧನಗಳನ್ನು ಅಳವಡಿಸಿದ್ದು ಮತ್ತು ಬೀಟಿಂಗ್ ದ ರಿಟ್ರೀಟ್ ಸಮಾರಂಭವನ್ನು ಬದಲಾಯಿಸಿದ್ದು ಸೇರಿದಂತೆ ಕೆಲವು ಮಹತ್ವದ ಬದಲಾವಣೆಗಳ ಕುರಿತು ಮಾತನಾಡಿದರು. ಭಾರತೀಯ ನೌಕಾಪಡೆಯ ಧ್ವಜದಲ್ಲಿದ್ದ ವಸಾಹತುಶಾಹಿಯ ಸಂಕೇತವನ್ನು ಬದಲಾಯಿಸಿ, ಛತ್ರಪತಿ ಶಿವಾಜಿ ಅವರ ಸಂಕೇತವನ್ನು ಅಳವಡಿಸಿದ್ದರ ಕುರಿತು ಅವರು ಉಲ್ಲೇಖಿಸಿದರು. “ಅಂತೆಯೇ ರಾಷ್ಟ್ರೀಯ ಯುದ್ಧ ಸ್ಮಾರಕ ದೇಶದ ಗತವೈಭವವನ್ನು ಪ್ರತಿನಿಧಿಸುತ್ತದೆ” ಎಂದು ಅವರು ಹೇಳಿದರು. 

ಈ ಬದಲಾವಣೆಗಳು ಕೇವಲ ಸಂಕೇತಗಳಿಗೆ ಮೀಸಲಾದವುಗಳಲ್ಲ, ಅವುಗಳು ದೇಶದ ನೀತಿಗಳಲ್ಲೂ ಸಹ ಸೇರ್ಪಡೆಯಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. “ಬ್ರಿಟೀಷರ ಕಾಲದಿಂದ ಚಾಲ್ತಿಯಲ್ಲಿದ್ದ ನೂರಾರು ಕಾನೂನುಗಳನ್ನು ದೇಶದಲ್ಲಿ ಇಂದು ಬದಲಾಯಿಸಲಾಗಿದೆ. ಹಲವು ದಶಕಗಳಿಂದ ಬ್ರಿಟೀಷ್ ಸಂಸತ್ತಿನ ಕಾಲದಲ್ಲಿದ್ದಂತೆ ಪಾಲಿಸಲಾಗುತ್ತಿದ್ದ ಭಾರತೀಯ ಬಜೆಟ್ ನ ಸಮಯ ಮತ್ತು ದಿನಾಂಕ ಪಾಲನೆಯನ್ನು ಬದಲಾಯಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇದೀಗ ದೇಶದ ಯುವಜನತೆಗೆ ವಿದೇಶಿ ಭಾಷೆಯ ಕಡ್ಡಾಯದಿಂದ ವಿಮುಕ್ತಗೊಳಿಸಲಾಗಿದೆ” ಎಂದು ಅವರು ಉಲ್ಲೇಖಿಸಿದರು. “ಅದರರ್ಥ ದೇಶವಾಸಿಗಳ ಆಲೋಚನೆ ಮತ್ತು ನಡವಳಿಕೆ ಎರಡನ್ನೂ ಗುಲಾಮಗಿರಿಯ ಮನೋಭಾವದಿಂದ ಮುಕ್ತಗೊಳಿಸಬೇಕು” ಎಂದು ಅವರು ಹೇಳಿದರು. 

ಕರ್ತವ್ಯಪಥ ಕೇವಲ ಇಟ್ಟಿಗೆ ಮತ್ತು ಕಲ್ಲಿನ ರಸ್ತೆಯಲ್ಲ, ಇದು ಭಾರತದ ಹಿಂದಿನ ಪ್ರಜಾಪ್ರಭುತ್ವ ಮತ್ತು ಸಾರ್ವಕಾಲಿಕ ಆದರ್ಶಗಳ ಜೀವಂತ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ದೇಶದ ಜನರು ಇಲ್ಲಿಗೆ ಭೇಟಿ ನೀಡಿದಾಗ ನೇತಾಜಿ ಅವರ ಪ್ರತಿಮೆ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ಅವರಿಗೆ ಹೆಚ್ಚಿನ ಸ್ಫೂರ್ತಿಯ ಮೂಲವಾಗಲಿದೆ ಮತ್ತು ಅವರಲ್ಲಿ ಕರ್ತವ್ಯ ಪ್ರಜ್ಞೆಯನ್ನು ತುಂಬಲಿದೆ ಎಂದು ಅವರು ಪುನರುಚ್ಚರಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಬ್ರಿಟೀಷ್ ರಾಜ್ ಕಾಲದಲ್ಲಿದ್ದ ರಾಜಪಥ, ಭಾರತದ ಜನರನ್ನು ಗುಲಾಮರಂತೆ ಕಂಡಿತ್ತು ಎಂದು ಪ್ರಧಾನಿ ಹೇಳಿದರು. ರಾಜಪಥದ ವಿನ್ಯಾಸ ಮತ್ತು ಭಾವನೆಗಳು ಗುಲಾಮಗಿರಿಯ ಸಂಕೇತವಾಗಿದ್ದವು. ಆದರೆ ಇಂದು ವಾಸ್ತುಶಿಲ್ಪ ಮತ್ತು ಅದರ ಸ್ಫೂರ್ತಿಯನ್ನು ರೂಪಾಂತರಗೊಳಿಸಲಾಗಿದೆ ಎಂದು ಅವರು ಹೇಳಿದರು. ಕರ್ತವ್ಯಪಥ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ರಾಷ್ಟ್ರಪತಿ ಭವನದವರೆಗೆ ವಿಸ್ತರಣೆಗೊಂಡಿದ್ದು, ಅದು ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಎಂದು ಅವರು ಹೇಳಿದರು.  

ಕರ್ತವ್ಯಪಥದ ಮರು ಅಭಿವೃದ್ಧಿಗೆ ದೈಹಿಕವಾಗಿ ಶ್ರಮವಹಿಸಿದ ಶ್ರಮಿಕರು ಮತ್ತು ಕಾರ್ಮಿಕರಿಗೆ ಪ್ರಧಾನಮಂತ್ರಿ ಅವರು ವಿಶೇಷವಾದ ಕೃತಜ್ಞತೆಯನ್ನು ಸಲ್ಲಿಸಿದರಲ್ಲದೆ, ಇದು ಅವರ ಶ್ರಮ ರಾಷ್ಟ್ರದ ನಿಟ್ಟಿನಲ್ಲಿ ಕರ್ತವ್ಯಕ್ಕೆ ಒಂದು ಜೀವಂತ ಮತ್ತು ತಾಜಾ ಉದಾಹರಣೆಯಾಗಿದೆ ಎಂದು ಹೇಳಿದರು. ಶ್ರಮಜೀವಿಗಳನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಗತ ವೈಭವದ ಬಗ್ಗೆ ಅವರು ತಮ್ಮ ಹೃದಯದಲ್ಲಿ ಇರಿಸಿಕೊಂಡಿರುವ ಭಾವನೆಗಳನ್ನು ಶ್ಲಾಘಿಸಿದರು. ಮುಂದಿನ ಗಣರಾಜ್ಯೋತ್ಸವ ಪರೇಡ್ ಗೆ ಸೆಂಟ್ರಲ್ ವಿಸ್ತಾ ಕಾಮಗಾರಿಯಲ್ಲಿ ದುಡಿಯುತ್ತಿರುವ ಶ್ರಮಜೀವಿಗಳು ಮತ್ತು ಅವರ ಕುಟುಂಬಗಳು ಪ್ರಧಾನಮಂತ್ರಿಗಳ ವಿಶೇಷ ಅತಿಥಿಗಳಾಗಲಿದ್ದಾರೆ. ದೇಶದಲ್ಲಿ ಶ್ರಮ(ಕೂಲಿ) ಮತ್ತು ಶ್ರಮಜೀವಿ(ಕಾರ್ಮಿಕರಿಗೆ) ಗೌರವ ನೀಡುವ ಪರಂಪರೆ ಇದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ನೀತಿಗಳಲ್ಲಿ ಸಂವೇದನಾಶೀಲತೆಗೆ ಒತ್ತು ನೀಡಲಾಗಿದೆ ಹಾಗೂ ನಿರ್ಧಾರಗಳನ್ನು ಸಂವೇದನೆಯಿಂದ ಕೈಗೊಳ್ಳಲಾಗುತ್ತಿದೆ ಮತ್ತು “ಶ್ರಮ ಮೇವ ಜಯತೇ” ರಾಷ್ಟ್ರದ ಮಂತ್ರವಾಗಲಿದೆ ಎಂದು ಹೇಳಿದರು. ಕಾಶಿವಿಶ್ವನಾಥ ಧಾಮ, ವಿಕ್ರಾಂತ್ ಮತ್ತು ಪ್ರಯಾಗ್ ರಾಜ್ ಕುಂಭದಲ್ಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದನ್ನು ಪ್ರಧಾನಮಂತ್ರಿ ಅವರು ಶ್ರಮಿಸಿಕೊಂಡರು.  ಹೊಸ ಸಂಸತ್ ಭವನದಲ್ಲಿ ದುಡಿಯುತ್ತಿರುವ ಕೆಲಸಗಾರರು, ಯಾವುದಾದರೊಂದು ಗ್ಯಾಲರಿಯಲ್ಲಿ ಗೌರವದ ಸ್ಥಾನ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 


ಭಾರತ ಇಂದು ಭೌತಿಕ, ಡಿಜಿಟಲ್ ಮತ್ತು ಸಾರಿಗೆ ಮೂಲಸೌಕರ್ಯದ ಜತೆಗೆ ಸಾಂಸ್ಕೃತಿಕ ಮೂಲಸೌಕರ್ಯದ ನಿಟ್ಟಿನಲ್ಲೂ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಮಾಜಿಕ ಮೂಲಸೌಕರ್ಯ ಕುರಿತಂತೆ ಅವರು ಹೊಸ ಏಮ್ಸ್ ಗಳು ಮತ್ತು ವೈದ್ಯಕೀಯ ಕಾಲೇಜುಗಳು, ಐಐಟಿಗಳು, ನೀರಿನ ಸಂಪರ್ಕ ಮತ್ತು ಅಮೃತ ಸರೋವರದ ಉದಾಹರಣೆಗಳನ್ನು ನೀಡಿದರು. ಗ್ರಾಮೀಣ ರಸ್ತೆಗಳು ಮತ್ತು ದಾಖಲೆ ಸಂಖ್ಯೆಯ ಆಧುನಿಕ ಎಕ್ಸ್ ಪ್ರೇಸ್ ವೇಗಳು, ರೈಲ್ವೆ ಮತ್ತು ಮೆಟ್ರೋ ಜಾಲ ಮತ್ತು ಹೊಸ ವಿಮಾನ ನಿಲ್ದಾಣಗಳು ದೇಶದ ಸಾರಿಗೆ ಮೂಲಸೌಕರ್ಯವನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ವಿಸ್ತರಣೆ ಮಾಡಲಾಗುತ್ತಿದೆ ಎಂದರು. ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಮತ್ತು ದಾಖಲೆ ಸಂಖ್ಯೆಯ ಡಿಜಿಟಲ್ ಪಾವತಿಗಳು ಭಾರತದ ಡಿಜಿಟಲ್ ಮೂಲಸೌಕರ್ಯ, ಜಾಗತಿಕ ಮಟ್ಟದಲ್ಲಿ ಶ್ಲಾಘನೀಯ ವಿಷಯವಾಗಿದೆ. ಸಾಂಸ್ಕೃತಿಕ ಮೂಲಸೌಕರ್ಯದ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾವನೆಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಮೂಲಸೌಕರ್ಯ ಒದಗಿಸುವುದು ಮಾತ್ರವಲ್ಲ, ನಮ್ಮ ಇತಿಹಾಸ, ನಮ್ಮ ರಾಷ್ಟ್ರೀಯ ನಾಯಕರು ಮತ್ತು ನಮ್ಮ ರಾಷ್ಟ್ರೀಯ ಪರಂಪರೆಗೆ ಸಂಬಂಧಿಸಿದ ಮೂಲಸೌಕರ್ಯವೂ ಸಹ ಒಳಗೊಂಡಿದೆ ಎಂದರು. ಸಮಾನ ಜರೂರಿನಲ್ಲಿ ಅಂತಹ ಸ್ಥಳಗಳ ಅಭಿವೃದ್ಧಿಯೂ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.  “ಅದು ಸರ್ದಾರ್ ಪಟೇಲರ ಏಕತಾ ಪ್ರತಿಮೆ ಆಗಬಹುದು ಅಥವಾ ಬುಡಕಟ್ಟು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾದ ಮ್ಯೂಸಿಯಂ ಆಗಿರಬಹುದು, ಪಿಎಂ ಮ್ಯೂಸಿಯಂ ಆಗಿರಬಹುದು ಅಥವಾ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕವಾಗಿರಬಹುದು, ರಾಷ್ಟ್ರೀಯ ಯುದ್ಧ ಸ್ಮಾರಕವಾಗಿರಬಹುದು ಅಥವಾ ರಾಷ್ಟ್ರೀಯ ಪೊಲೀಸ್ ಸ್ಮಾರಕವಾಗಿರಬಹುದು, ಇವೆಲ್ಲಾ ಸಾಂಸ್ಕೃತಿಕ ಮೂಲಸೌಕರ್ಯದ ಉದಾಹರಣೆಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ನಮ್ಮ ಸಂಸ್ಕೃತಿಯನ್ನು ರಾಷ್ಟ್ರವನ್ನಾಗಿ ವ್ಯಾಖ್ಯಾನಿಸುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಮತ್ತಷ್ಟು ವಿಸ್ತರಿಸಿದರು. ಇದು ನಮ್ಮ ಮೌಲ್ಯಗಳು ಏನೂ ಎಂಬುದನ್ನು ಮತ್ತು ನಾವು ಹೇಗೆ ಅವುಗಳನ್ನು ಸಂರಕ್ಷಿಸುತ್ತಿದ್ದೇವೆ ಎಂಬುದರ ವ್ಯಾಖ್ಯಾನವಾಗಿದೆ. ಮಹತ್ವಾಕಾಂಕ್ಷೆಯ ಭಾರತ ಕ್ಷಿಪ್ರ ಪ್ರಗತಿಯನ್ನು ಸಾಧಿಸಬೇಕಾದರೆ, ಸಾಮಾಜಿಕ ಮೂಲಸೌಕರ್ಯ, ಸಾರಿಗೆ ಮೂಲಸೌಕರ್ಯ, ಡಿಜಿಟಲ್ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೂಲಸೌಕರ್ಯಕ್ಕೆ ಒಟ್ಟಾರೆಯಾಗಿ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. “ಇಂದು ಕರ್ತವ್ಯಪಥದ ಮೂಲಕ ಸಾಂಸ್ಕೃತಿಕ ಮೂಲಸೌಕರ್ಯಕ್ಕೆ ಒಂದು ಶ್ರೇಷ್ಠ ಉದಾಹರಣೆಯನ್ನು ಪಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ, ದೇಶದ ಪ್ರತಿಯೊಬ್ಬ ಪ್ರಜೆಯೂ ಹೊಸದಾಗಿ ನಿರ್ಮಿಸಲಾದ ವೈಭವಯುತ ಕರ್ತವ್ಯಪಥಕ್ಕೆ ಭೇಟಿ ನೀಡಬೇಕು ಎಂದು ಮುಕ್ತ ಆಹ್ವಾನವನ್ನು ನೀಡಿದರು. “ಅದರ ಅಭಿವೃದ್ಧಿಯಲ್ಲಿ ನೀವು ಭಾರತದ ಭವಿಷ್ಯವನ್ನು ಕಾಣುವಿರಿ, ಇಲ್ಲಿನ ಶಕ್ತಿ ನಮ್ಮ ಬೃಹತ್ ರಾಷ್ಟ್ರಕ್ಕೆ ಹೊಸ ಮುನ್ನೋಟ ಮತ್ತು ಹೊಸ ವಿಶ್ವಾಸವನ್ನು ನೀಡಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಮೂರು ದಿನಗಳ ಕಾಲ ನೇತಾಜಿ ಸುಭಾಷ್ ರ ಜೀವನವನ್ನಾಧರಿಸಿದ ದ್ರೋಣ್ ಪ್ರದರ್ಶನದ ಕುರಿತು ಪ್ರಧಾನಮಂತ್ರಿ ಉಲ್ಲೇಖಿಸಿದರು. ಪ್ರಧಾನಮಂತ್ರಿ ಅವರು, ನಾಗರಿಕರು ಇಲ್ಲಿಗೆ ಭೇಟಿ ನೀಡಬೇಕು ಮತ್ತು ಇಲ್ಲಿ ಫೋಟೋ ತೆಗೆದು ಅವುಗಳನ್ನು ಹ್ಯಾಶ್ ಟ್ಯಾಗ್  #KartavyaPath ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಬೇಕು ಎಂದು ಕರೆ ನೀಡಿದರು. “ಇದೀಗ ಇಡೀ ಪ್ರದೇಶ ದೆಹಲಿಯ ಜನರ ಹೃದಯ ಬಡಿತದಲ್ಲಿದೆ. ಬಹುತೇಕ ಜನರು ಇಲ್ಲಿಗೆ ಸಂಜೆ ಭೇಟಿ ನೀಡಿ, ಸಮಯ ಕಳೆಯುತ್ತಾರೆ. ಅದನ್ನು ಗಮನದಲ್ಲಿರಿಸಿಕೊಂಡು ಕರ್ತವ್ಯಪಥದ ಯೋಜನೆ, ವಿನ್ಯಾಸ ಮತ್ತು ದೀಪದ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಅವರು ಹೇಳಿದರು. “ಕರ್ತವ್ಯಪಥದ ಸ್ಫೂರ್ತಿ ದೇಶದಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ. ಈ ಹರಿವು ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಕಾರದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು. 

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಹಿನ್ನೆಲೆ: 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಕರ್ತವ್ಯ ಪಥ’ ವನ್ನು ಉದ್ಘಾಟಿಸಿದರು. ಇದು ಹಿಂದಿನ ರಾಜಪಥ ಅಧಿಕಾರದ ಹೆಗ್ಗುರುತಾಗಿತ್ತು, ಆದರೆ ಕರ್ತವ್ಯ ಪಥ ಸಾರ್ವಜನಿಕ ಮಾಲಿಕತ್ವ ಮತ್ತು ಸಬಲೀಕರಣದ ಉದಾಹರಣೆಯ ಸಂಕೇತವಾಗಿದೆ. ಇದೇ ವೇಳೆ ಪ್ರಧಾನಮಂತ್ರಿ ಅವರು ಇಂಡಿಯಾಗೇಟ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಕ್ರಮಗಳು ಪ್ರಧಾನಮಂತ್ರಿ ಅವರ ಅಮೃತ ಕಾಲದಲ್ಲಿ ನವಭಾರತ ನಿರ್ಮಾಣ ಮಾಡುವ ಎರಡನೇ “ಪಂಚ ಪ್ರಾಣ”- ವಸಾಹತುಶಾಹಿ ಮನೋಭಾವ ಅಳಿಸಿ ಹಾಕುವ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ. 

ಕೆಲವು ವರ್ಷಗಳಿಂದೀಚೆಗೆ ರಾಜಪಥ ಮತ್ತು ಸೆಂಟ್ರಲ್ ವಿಸ್ತಾ ಅವಿನ್ಯೂಗೆ ಹೊಂದಿಕೊಂಡಿರುವ ಪ್ರದೇಶ ಹೆಚ್ಚಿನ ಪ್ರವಾಸಿಗರಿಂದಾಗಿ ಅಧಿಕ ದಟ್ಟಣೆಗೆ ಸಾಕ್ಷಿಯಾಗುತ್ತಿರುವುದಲ್ಲದೆ, ಮೂಲಸೌಕರ್ಯದ ಮೇಲೆ ಒತ್ತಡ ಉಂಟಾಗಿತ್ತು. ಅಲ್ಲಿ ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ಮೂಲಸೌಕರ್ಯ, ಅಗತ್ಯ ವಾಹನ ನಿಲುಗಡೆ ಸೌಕರ್ಯಗಳಂತಹ ಮೂಲಸೌಕರ್ಯಗಳ ಕೊರತೆಯಿತ್ತು. ಅಲ್ಲದೆ ಅಸಮರ್ಪಕ ಸೂಚನಾ ಫಲಕಗಳು, ಕಾರಂಜಿಯ ಕಳಪೆ ನಿರ್ವಹಣೆ ಮತ್ತು ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಇತ್ತು. ಜತೆಗೆ ಗಣರಾಜ್ಯೋತ್ಸವ ಪರೇಡ್ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಂಚಾರಕ್ಕೆ ಕನಿಷ್ಠ ನಿರ್ಬಂಧಗಳನ್ನು ವಿಧಿಸುವ ಮೂಲಕ ಕಡಿಮೆ ಅಡಚಣೆಯಾಗುವಂತೆ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮರು ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಮತ್ತು ವಾಸ್ತುಶಿಲ್ಪ ಸ್ವರೂಪದ ಸಮಗ್ರತೆಯನ್ನು ಕಾಯ್ದುಕೊಳ್ಳಲಾಗಿದೆ.  

ಕರ್ತವ್ಯ ಪಥವು ಸುಂದರವಾದ ದೃಶ್ಯಗಳು, ಕಾಲ್ನಡಿಗೆಗೆ ಹುಲ್ಲುಹಾಸು, ಹೆಚ್ಚುವರಿ ಹಸಿರು ಸ್ಥಳಗಳು, ನವೀಕರಿಸಿದ ಕಾಲುವೆಗಳು, ಹೊಸ ಮೂಲ ಸೌಕರ್ಯದ ಬ್ಲಾಕ್ ಗಳು, ಸುಧಾರಿತ ಸೂಚನಾ ಫಲಕಗಳು ಮತ್ತು ಮಾರಾಟದ ಕಿಯೋಸ್ಕ್ ಗಳನ್ನು ಒಳಗೊಂಡಿದೆ. ಇದಲ್ಲದೆ, ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ದೀಪಗಳು ಸಾರ್ವಜನಿಕರ ಉತ್ತಮ ಅನುಭವ ನೀಡು ಕೆಲವು ವೈಶಿಷ್ಟ್ಯಗಳಾಗಿವೆ. ಇದು ಘನ ತ್ಯಾಜ್ಯ ನಿರ್ವಹಣೆ, ಮಳೆನೀರು ನಿರ್ವಹಣೆ, ಬಳಸಿದ ನೀರಿನ ಮರು ಬಳಕೆ, ಮಳೆನೀರು ಕೊಯ್ಲು, ನೀರಿನ ಸಂರಕ್ಷಣೆ ಮತ್ತು ದಕ್ಷ ಬೆಳಕಿನ ವ್ಯವಸ್ಥೆಗಳಂತಹ ಹಲವು ಸುಸ್ಥಿರ  ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. 

ಈ ವರ್ಷದ ಆರಂಭದಲ್ಲಿ ಜನವರಿ 23 ರ ಪರಾಕ್ರಮ ದಿನದಂದು ಪ್ರಧಾನಿ ಅವರು ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ಸ್ಥಳದಲ್ಲಿಯೇ, ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಗ್ರಾನೈಟ್ ಪ್ರತಿಮೆಯು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಅಪಾರ ಕೊಡುಗೆ ಸೂಕ್ತವಾದ ಗೌರವವಾಗಿದೆ ಮತ್ತು ಇದು ದೇಶ ಅವರಿಗೆ ಋಣಿಯಾಗಿರುವ ಸಂಕೇತವಾಗಿದೆ. ಮುಖ್ಯ ಶಿಲ್ಪಿಯಾಗಿದ್ದ ಶ್ರೀ ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ 28 ಅಡಿ ಎತ್ತರದ ಪ್ರತಿಮೆಯನ್ನು ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ ಮತ್ತು 65 ಎಂಟಿ ತೂಕವಿದೆ.

मैं देश के हर एक नागरिक का आवाहन करता हूँ, आप सभी को आमंत्रण देता हूँ...

आइये, इस नवनिर्मित कर्तव्यपथ को आकर देखिए।

इस निर्माण में आपको भविष्य का भारत नज़र आएगा।

यहाँ की ऊर्जा आपको हमारे विराट राष्ट्र के लिए एक नया विज़न देगी, एक नया विश्वास देगी: PM @narendramodi

— PMO India (@PMOIndia) September 8, 2022

*****(Release ID: 1858181) Visitor Counter : 100