ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಪ್ರಶಸ್ತಿ–2022 ವಿಜೇತ ಶಿಕ್ಷಕರೊಂದಿಗೆ ಪ್ರಧಾನಮಂತ್ರಿ ಅವರ ಸಂವಾದದ ಭಾಷಾಂತರ
Posted On:
05 SEP 2022 10:38PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಧರ್ಮೇಂದ್ರ ಅವರೇ, ಅನ್ನಪೂರ್ಣ ದೇವಿ ಅವರೇ ಹಾಗೂ ದೇಶಾದ್ಯಂತ ಇರುವ ಎಲ್ಲಾ ನನ್ನ ಶಿಕ್ಷಕ ಸಹೋದ್ಯೋಗಿಗಳೇ. ಇಂದು ನಿಮ್ಮ ಮೂಲಕ, ಒಂದು ರೀತಿಯಲ್ಲಿ ದೇಶದ ಎಲ್ಲಾ ಶಿಕ್ಷಕರೊಂದಿಗೆ ನಾನು ಮಾತನಾಡುತ್ತಿದ್ದೇನೆ.
ಭಾರತದ ಮಾಜಿ ರಾಷ್ಟ್ರಪತಿ ಮತ್ತು ಶಿಕ್ಷಣ ತಜ್ಞರಾದ ಡಾ. ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ, ಇಂದು ದೇಶ ಅವರಿಗೆ ಗೌರವ ಸಲ್ಲಿಸುತ್ತಿದೆ. ಪ್ರಸ್ತುತ ನಮ್ಮ ರಾಷ್ಟ್ರಪತಿಗಳು ಸಹ ಶಿಕ್ಷಕರಾಗಿರುವುದು ನಮ್ಮ ಅದೃಷ್ಟ. ಜೀವನದ ಆರಂಭಿಕ ಅವಧಿಯಲ್ಲಿ ಶಿಕ್ಷಕರಾಗಿದ್ದ ಅವರು, ಒಡಿಶಾದಲ್ಲಿ ಅತ್ಯಂತ ದೂರದ ಪ್ರದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಶಿಕ್ಷಕರೂ ಆಗಿದ್ದ ರಾಷ್ಟ್ರಪತಿಗಳು ನಿಮ್ಮನ್ನು ಸನ್ಮಾನಿಸಿರುವುದು ನಮಗೆ ಹಲವು ರೀತಿಯಲ್ಲಿ ಸಂತೋಷವನ್ನುಂಟು ಮಾಡಿರುವುದು ಕಾಕತಾಳೀಯವಾಗಿದ್ದು, ನಿಮಗೆ ಹೆಮ್ಮೆಯ ವಿಷಯವೂ ಹೌದು.
ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ದೇಶವು ತನ್ನ ದೊಡ್ಡ ಕನಸುಗಳನ್ನು ಈಡೇರಿಸಲು ಬದ್ಧವಾಗಿರುವ ಈ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿನ ರಾಧಾಕೃಷ್ಣನ್ ಅವರ ಪ್ರಯತ್ನಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತವೆ. ರಾಷ್ಟ್ರ ಪ್ರಶಸ್ತಿ ಪಡೆದ ಎಲ್ಲಾ ಶಿಕ್ಷಕರನ್ನು ಈ ಸಂದರ್ಭದಲ್ಲಿ ನಾನು ಅಭಿನಂದಿಸುತ್ತೇನೆ. ರಾಜ್ಯಗಳಲ್ಲಿಯೂ ಈ ಪ್ರಶಸ್ತಿಗಳನ್ನು ನೀಡಲಾಗಿದೆ.
ಸ್ನೇಹಿತರೇ,
ಅನೇಕ ಶಿಕ್ಷಕರೊಂದಿಗೆ ಸಂವಾದ ನಡೆಸುವ ಅವಕಾಶ ಇದೀಗ ನನಗೆ ಸಿಕ್ಕಿದೆ. ಎಲ್ಲರೂ ಬೇರೆ ಬೇರೆ ಭಾಷೆ ಮಾತನಾಡುತ್ತಾರೆ. ಇಲ್ಲಿ ವಿವಿಧ ಭಾಷೆಗಳು, ಪ್ರದೇಶಗಳು ಹಾಗೂ ಸಮಸ್ಯೆಗಳಿರಬಹುದು. ಆದರೆ, ಒಂದು ವಿಷಯವಂತೂ ಸಾಮಾನ್ಯವಾಗಿದೆ. ಅದೇನೆಂದರೆ, ನಿಮ್ಮ ಪ್ರಯತ್ನಗಳು ಮತ್ತು ವಿದ್ಯಾರ್ಥಿಗಳ ಕಡೆಗಿರುವ ಸಮರ್ಪಣೆ. ನಿಮ್ಮ ನಡುವೆ ಇರುವ ಈ ಸಮಾನ ಅಂಶ ಬಹಳ ಮುಖ್ಯವಾದುದು. ಒಬ್ಬ ಯಶಸ್ವಿ ಶಿಕ್ಷಕ ಎಂದಿಗೂ, ‘ಇದು ನಿನ್ನ ಕೈಯಲ್ಲಿ ಸಾಧ್ಯವಾಗುವುದಿಲ್ಲ’ ಎಂದು ತನ್ನ ವಿದ್ಯಾರ್ಥಿಯನ್ನು ಎದೆಗುಂದಿಸುವುದಿಲ್ಲ ಎಂಬುದನ್ನು ನೀವು ನೋಡಿರಲೇಬೇಕು. ಶಿಕ್ಷಕನಲ್ಲಿರುವ ದೊಡ್ಡ ಶಕ್ತಿ ಸಕಾರಾತ್ಮಕತೆ. ಓದಿನಲ್ಲಿ ಮಗು ಎಷ್ಟೇ ಹಿಂದುಳಿದಿದ್ದರೂ, ಶಿಕ್ಷಕರು ಅವನನ್ನು ಪ್ರೋತ್ಸಾಹಿಸುತ್ತಾರೆ. ಚನ್ನಾಗಿ ಓದುವವರ ಬಗ್ಗೆ ಉಲ್ಲೇಖಿಸಿ, ಅವನೂ ಚನ್ನಾಗಿ ಓದುವಂತೆ ಪ್ರೇರೇಪಿಸುತ್ತಾರೆ. ಇವು ಶಿಕ್ಷಕರಲ್ಲಿರುವ ಗುಣಗಳು.
ಶಿಕ್ಷಕರು ಪ್ರತಿ ಬಾರಿಯೂ ಸಕಾರಾತ್ಮಕವಾಗಿಯೇ ಮಾತನಾಡುತ್ತಾರೆ. ಋಣಾತ್ಮಕ ಟೀಕೆಗಳ ಮೂಲಕ ಯಾರನ್ನೂ ನಿರುತ್ಸಾಹಗೊಳಿಸುವ ಸ್ವಭಾವ ಅವರದ್ದಲ್ಲ. ಪ್ರತಿ ಮಗುವಿಗೆ ಜ್ಞಾನವನ್ನು ನೀಡುವ ಪಾತ್ರದ ಜೊತೆಗೆ, ಅವರಲ್ಲಿ ಕನಸುಗಳನ್ನು ಶಿಕ್ಷಕರು ಬಿತ್ತುತ್ತಾರೆ. ಆ ಕನಸನ್ನು ಸಂಕಲ್ಪವಾಗಿ ಪರಿವರ್ತಿಸಿಸುವುದನ್ನು ಕಲಿಸುತ್ತಾರೆ. ಸಂಕಲ್ಪಕ್ಕೆ ಬದ್ಧನಾಗಿದ್ದರೆ ತನ್ನ ಕನಸನ್ನು ನನಸಾಗಿಸಬಹುದು ಎಂದು ಪ್ರೋತ್ಸಾಹಿಸುತ್ತಾರೆ. ಮಗುವೊಂದು ತನ್ನ ಕನಸುಗಳನ್ನು ಸಂಕಲ್ಪವಾಗಿ ಪರಿವರ್ತಿಸಿಕೊಂಡು, ಗುರುಗಳು ತೋರಿದ ಹಾದಿಯಲ್ಲಿ ನಡೆದು ಸಾಧಿಸಿರುವುದನ್ನು ನೀವು ನೋಡಿರಲೇಬೇಕು. ಅಂದರೆ, ಒಬ್ಬ ಶಿಕ್ಷಕ ತನ್ನ ಜೀವನದಲ್ಲಿ ಒಂದು ಕನಸನ್ನು ಬಿತ್ತಿ ಅದೇ ಸಮಯದಲ್ಲಿ ದೀಪವನ್ನು ಬೆಳಗಿಸಿದರೆ, ಅದರ ಸಂಪೂರ್ಣ ಪಯಣವು ಕನಸಿನಿಂದ ಸಾಧನೆಯೆಡೆಗೆ ಹಾಗೂ ಕಿರಣದಿಂದ ಬೆಳಕಿನೆಡೆಗೆ ಸಾಗುತ್ತದೆ. ಹಲವು ಸವಾಲು ಮತ್ತು ಕತ್ತಲೆಯ ನಡುವೆಯೂ ಅದು ಅವನಿಗೆ ದಾರಿ ತೋರಿಸುತ್ತದೆ.
ದೇಶ ಇಂದು ಹೊಸ ಕನಸುಗಳು ಮತ್ತು ಸಂಕಲ್ಪಗಳ ಅಂತಹದ್ದೊಂದು ಘಟ್ಟದಲ್ಲಿ ಸಜ್ಜಾಗಿ ನಿಂತಿದೆ. 2047ರ ಭಾರತದ ಭವಿಷ್ಯವನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಪಟ್ಟಿ ಮಾಡಲಿದ್ದು, ಅವರ ಜೀವನವು ನಿಮ್ಮ ಕೈಯಲ್ಲಿದೆ. ಅಂದರೆ, ಮುಂದಿನ 10 ಮತ್ತು 20 ವರ್ಷಗಳ ಕಾಲ ಸೇವೆ ಸಲ್ಲಿಸಲಿರುವ ಶಿಕ್ಷಕರು, 2047ರಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಶಾಲೆಯಲ್ಲಿ ನೀವು ಕೆಲಸ ಮಾಡುವುದು, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವುದು ಅಥವಾ ಪಠ್ಯಕ್ರಮ ನಿರ್ವಹಿಸುವುದಷ್ಟೇ ಅಲ್ಲದೆ, ನೀವು ವಿದ್ಯಾರ್ಥಿಯ ಜೀವನದ ಭಾಗವಾಗಿರುತ್ತೀರಿ. ದೇಶಕ್ಕಾಗಿ ಆತನನ್ನು ತಯಾರು ಮಾಡುವ ಮೂಲಕ, ಕನಸುಗಳನ್ನು ಕಟ್ಟುವ ಕೆಲಸ ಮಾಡಿ. ಬೆಳಗ್ಗೆ 10ರಿಂದ ಸಂಜೆ 5ರ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳುವ, ಕೇವಲ ನಾಲ್ಕು ತರಗತಿಗಳ ಬಗ್ಗೆ ಕಾಳಜಿ ವಹಿಸುವ ಸಣ್ಣ ಕನಸುಗಳಿರುವ ಶಿಕ್ಷಕ, ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಸಂಬಳ ಪಡೆಯುತ್ತಾನೆ. ಆದರೆ, ಯಾವುದೇ ಸಂತೋಷ ಪಡೆಯುವುದಿಲ್ಲ. ಆತ ಎಲ್ಲವನ್ನೂ ಹೊರೆಯಾಗಿ ಕಾಣುತ್ತಾನೆ. ಆದರೆ, ವಿದ್ಯಾರ್ಥಿಗಳ ಕನಸುಗಳಿಗೆ ತನ್ನನ್ನು ಹಚ್ಚಿಕೊಂಡಿದ್ದಾಗ ಆತನಿಗೆ ಯಾವುದೂ ಹೊರೆಯಾಗುವುದಿಲ್ಲ. ಇದನ್ನು ಅರಿತರೆ, ಆತ ದೇಶಕ್ಕೆ ಪ್ರಮುಖ ಕೊಡುಗೆ (ತನ್ನ ವಿದ್ಯಾರ್ಥಿಗಳ ಕನಸುಗಳನ್ನು ಈಡೇರಿಸಲು ಸಹಾಯ ಮಾಡುವ ಮೂಲಕ) ನೀಡಬಹುದು. ತ್ರಿವರ್ಣ ಧ್ವಜದೊಂದಿಗೆ ಪೀಠದ ಮೇಲೆ ನಿಲ್ಲುವ ಕನಸನ್ನು ಹೊಂದಿರುವ ಆಟಗಾರನನ್ನು ತಯಾರಿಸಲು ಅವನು ನಿರ್ಧರಿಸಿದರೆ, ಪಡೆಯುವ ಸಂತೋಷ ಹೇಗಿರುತ್ತದೆಂಬುದನ್ನು ನೀವು ಊಹಿಸಬಲ್ಲಿರಾ? ರಾತ್ರಿಯೂ ಎಚ್ಚರವಾಗಿರುವುದರ ಮೂಲಕ (ಆ ಕನಸಿನ ಈಡೇರಿಕೆಗಾಗಿ), ನೀವು ಎಷ್ಟು ಸಂತೋಷಪಡುತ್ತೀರಾ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.
ಶಾಲಾ ಕೊಠಡಿಗಳು, ನಾಲ್ಕೈದು ತರಗತಿಗಳು ಹಾಗೂ ಶಿಕ್ಷಕರು ಬರದಿದ್ದರೆ ಬೇರೆಯವರನ್ನು ಹೊಂದಿಸುವುದು…. ನಿಮ್ಮ ಇಂತಹ ಸಮಸ್ಯೆಗಳು ನನಗೆ ತಿಳಿದಿದೆ. ಅದಕ್ಕಾಗಿಯೇ ನಾನಿದನ್ನು ಹೇಳುತ್ತಿದ್ದೇನೆ. ಈ ಎಲ್ಲಾ ಹೊರೆಗಳನ್ನು ನೀವು ತೊಡೆದು ಹಾಕಬೇಕು ಮತ್ತು ಮಕ್ಕಳ ಜೀವನದೊಂದಿಗೆ ಸೇರಿಕೊಂಡಿರಬೇಕು.
ಎರಡನೆಯದಾಗಿ, ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಜ್ಞಾನವನ್ನು ನೀಡುವುದಕ್ಕಿಂತ ಹೆಚ್ಚಾಗಿ, ಅವರ ಜೀವನವನ್ನು ನಾವು ಉತ್ತಮಗೊಳಿಸಬೇಕಾಗಿದೆ. ಪ್ರತ್ಯೇಕವಾಗಿ ಅಥವಾ ಬಾವಿಯೊಳಗೆ ಜೀವನ ಮಾಡುವುದಕ್ಕೆ ಆಗುವುದಿಲ್ಲ. ಒಂದು ಮಗು ತನ್ನ ತರಗತಿ, ಶಾಲಾ ಆವರಣ ಹಾಗೂ ಮನೆಯ ಪರಿಸರದಲ್ಲಿ ವಿಭಿನ್ನ ವಿಷಯಗಳನ್ನು ನೋಡುವಾಗ, ಸಂಘರ್ಷ ಮತ್ತು ವಿರೋಧಾಭಾಸದಲ್ಲಿ ತನ್ನನ್ನು ಕಂಡುಕೊಳ್ಳುತ್ತಾ ಹೋಗುತ್ತದೆ. ತಾಯಿ ಏನನ್ನೋ ಹೇಳುತ್ತಿರುವಾಗಲೇ, ಶಿಕ್ಷಕ ಮತ್ತು ತರಗತಿಯ ಉಳಿದವರು ಬೇರೆಯದ್ದನ್ನು ಹೇಳಿದಾಗ ಗೊಂದಲಕ್ಕೊಳಗಾಗುತ್ತಾನೆ. ಇಂತಹ ಸಂದಿಗ್ಧತೆಯಿಂದ ಆ ಮಗುವನ್ನು ಹೊರತರುವುದು ನಮ್ಮ ಕರ್ತವ್ಯ. ಆದರೆ, ಅವನ ಸಂದಿಗ್ಧತೆಯನ್ನು ಪರಿಹರಿಸುವ ಯಾವುದೇ ಚುಚ್ಚುಮದ್ದು ಅಥವಾ ಲಸಿಕೆ ಇಲ್ಲ. ಹಾಗಾಗಿ, ಶಿಕ್ಷಕರು ಸಮಗ್ರ ವಿಧಾನವನ್ನು ಅವಳಡಿಸಿಕೊಳ್ಳುವುದು ಬಹಳ ಮುಖ್ಯ.
ತಮ್ಮ ವಿದ್ಯಾರ್ಥಿಗಳ ಕುಟುಂಬವನ್ನು ಬಲ್ಲ ಎಷ್ಟು ಶಿಕ್ಷಕರು ಇಲ್ಲಿದ್ದಾರೆ? ಕುಟುಂಬವನ್ನು ಭೇಟಿ ಮಾಡಿ, ಅವರ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ? ವಿದ್ಯಾರ್ಥಿಯ ಕುಟುಂಬಕ್ಕೆ ಅವನ ಸಾಮರ್ಥ್ಯದ ಬಗ್ಗೆ ಹೇಳಿ, ಶಿಕ್ಷಕನಾಗಿ ನನ್ನ ಪ್ರಯತ್ನಗಳನ್ನು ನಾನು ಬಿಡುವುದಿಲ್ಲ. ಆದರೆ, ನೀವು ಸ್ವಲ್ಪ ನನಗೆ ಸಹಾಯ ಮಾಡಿ. ಮನೆಯಲ್ಲಿ ನೀವು ಸ್ವಲ್ಪ ಗಮನ ಹರಿಸಿದರೆ, ಅವನು ಉತ್ತಮ ಪ್ರಗತಿಯನ್ನು ಸಾಧಿಸಬಹುದು ಎಂದು ಯಾರಾದರೂ ಹೇಳಿದ್ದಾರೆಯೇ?
ಆ ಕುಟುಂಬದ ಸದಸ್ಯರಲ್ಲಿ ನೀವು ಕನಸನ್ನು ಬಿತ್ತುತ್ತೀರಿ. ಅದರಿಂದ, ಅವರೂ ನಿಮ್ಮ ಜೊತೆಗಾರರಾಗುತ್ತಾರೆ. ಆಗ ಮನೆಯೇ ಸಂಸ್ಕೃತಿಯ ಶಾಲೆಯಾಗುತ್ತದೆ. ತರಗತಿಯಲ್ಲಿ ನೀವು ಬಿತ್ತುವ ಕನಸುಗಳು, ಆ ಮನೆಯಲ್ಲಿ ಅರಳಲಾರಂಭಿಸುತ್ತವೆ. ನಿಮ್ಮನ್ನು ಬೇಜಾರುಗೊಳಿಸಿದ ಒಬ್ಬ ಅಥವಾ ಇಬ್ಬರು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ನೀವು ಕಂಡಿರಬೇಕು. ಅವನನ್ನು ಗಮನಿಸಿದ ತಕ್ಷಣ, ನಿಮ್ಮ ಸಮಯವನ್ನು ಹಾಳು ಮಾಡುತ್ತಾನೆ ಎಂದು ನೀವು ಭಾವಿಸುವಿರಿ. ಅವನಿಗೂ ನಿಮ್ಮ ಬಗ್ಗೆ ಅದೇ ಭಾವನೆ ಇರುತ್ತದೆ. ಬೆಂಚಿನ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಅವನು, ನಿರ್ದಿಷ್ಟವಾಗಿ ಈ ಶಿಕ್ಷಕ ತನ್ನನ್ನು ಇಷ್ಟಪಡುವುದಿಲ್ಲ ಎಂದು ಭಾವಿಸುತ್ತಾನೆ.
ಒಬ್ಬರ ಇಷ್ಟ-ಕಷ್ಟಗಳಿಂದ ಆ ಮಕ್ಕಳಿಗೆ ಅನ್ಯಾಯವಾಗಬೇಕೆ? ಒಬ್ಬ ಯಶಸ್ವಿ ಶಿಕ್ಷಕನೆಂದರೆ, ತನ್ನ ಮಕ್ಕಳ ಬಗ್ಗೆ ಇಷ್ಟಪಡುವುದಾಗಲಿ ಅಥವಾ ಇಷ್ಟಪಡದಿರುವುದಾಗಲೀ ಅಲ್ಲ. ಬದಲಿಗೆ, ಎಲ್ಲರೂ ಅವನಿಗೆ ಸಮಾನರು. ಸ್ವಂತ ಮಕ್ಕಳನ್ನು ಸಹ ಅದೇ ತರಗತಿಯಲ್ಲಿ ಹೊಂದಿರುವ ಶಿಕ್ಷಕರನ್ನು ನಾನು ನೋಡಿದ್ದೇನೆ. ಆದರೆ, ಆ ಶಿಕ್ಷಕರು ಇತರ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿಯೇ ತಮ್ಮ ಮಕ್ಕಳನ್ನೂ ನಡೆಸಿಕೊಳ್ಳುತ್ತಾರೆ.
ವಿದ್ಯಾರ್ಥಿಗಳಿಗೆ ಅವರು ನಾಲ್ಕು ಪ್ರಶ್ನೆಗಳನ್ನು ಕೇಳಬೇಕಾದರೆ, ತನ್ನ ಮಗುವಿನ ಪರವಾಗಿರುವುದಿಲ್ಲ. ಏಕೆಂದರೆ ತನ್ನ ಮಗುವಿಗೆ ಒಳ್ಳೆಯ ತಾಯಿ ಮತ್ತು ತಂದೆಯ ಜೊತೆಗೆ, ಉತ್ತಮ ಶಿಕ್ಷಕನ ಅಗತ್ಯವಿದೆ ಎಂಬುದನ್ನು ಅವರು ತಿಳಿದಿರುತ್ತಾರೆ. ಆದ್ದರಿಂದ, ಮನೆಯಲ್ಲಿ ಪೋಷಕರ ಪಾತ್ರ ನಿರ್ವಹಿಸುವಂತೆಯೇ, ತರಗತಿಯಲ್ಲಿ ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನು ಕಾಪಾಡಿಕೊಳ್ಳಲು ಅವರು ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಮಗುವಿನೊಂದಿಗಿನ ಅವರ ವೈಯಕ್ತಿಕ ಸಂಬಂಧವು ತರಗತಿಯಲ್ಲಿ ಪ್ರತಿಫಲಿಸುವುದಿಲ್ಲ.
ಶಿಕ್ಷಕರ ಮಹಾತ್ಯಾಗದಿಂದ ಮಾತ್ರ ಇದು ಸಾಧ್ಯ. ಆದ್ದರಿಂದಾಗಿಯೇ, ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಭಾರತದ ಸಂಪ್ರದಾಯಗಳು ಎಂದಿಗೂ ಪುಸ್ತಕಗಳಿಗೆ ಸೀಮಿತವಾಗಿಲ್ಲ. ಇದೊಂದು ರೀತಿಯಲ್ಲಿ ನಮಗೆ ನೈತಿಕ ಬೆಂಬಲವಾಗಿದೆ. ಇಂದು ತಂತ್ರಜ್ಞಾನದಿಂದಾಗಿ ಹಲವು ಸಂಗತಿಗಳು ಸಾಧ್ಯವಾಗಿವೆ. ತಂತ್ರಜ್ಞಾನವನ್ನು ಬಳಸಿಕೊಂಡು ಕಲಿತ ಸಾಕಷ್ಟು ಶಿಕ್ಷಕರನ್ನು ನಮ್ಮ ಹಳ್ಳಿಗಳಲ್ಲಿ ನಾನು ನೋಡಿದ್ದೇನೆ. ತಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಏನನ್ನಾದರೂ ಪಠ್ಯಕ್ರಮದಿಂದ ಸಿದ್ಧಪಡಿಸಬಹುದು ಎಂಬುದನ್ನು ಅವರು ಅರಿತುಕೊಂಡಿದ್ದಾರೆ.
ನೇಮಕಾತಿ ಮಾಡಬೇಕಾದ ಶಿಕ್ಷಕರ ಸಂಖ್ಯೆ, ಶಾಲೆ ಬಿಟ್ಟ ವಿದ್ಯಾರ್ಥಿಗಳ ಅಂಕಿಅಂಶ ಅಥವಾ ಹೆಣ್ಣು ಮಕ್ಕಳ ದಾಖಲಾತಿ... ಸರ್ಕಾರದಲ್ಲಿರುವವರು ಕೇವಲ ಇಂತಹ ಅಂಕಿ-ಅಂಶಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಇದರಲ್ಲಷ್ಟೇ ಅವರು ನಿರತರಾಗಿರುತ್ತಾರೆ. ಆದರೆ, ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳ ಜೀವನದ ಬಗ್ಗೆ ಕಾಳಜಿ ವಹಿಸುತ್ತಾನೆ. ಇದೇ ಇಬ್ಬರಿಗೂ ಇರುವ ದೊಡ್ಡ ವ್ಯತ್ಯಾಸ. ಈ ಜವಾಬ್ದಾರಿಗಳನ್ನು ಶಿಕ್ಷಕರು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ, ದೊಡ್ಡ ಬದಲಾವಣೆಯನ್ನು ತರಬಹುದು.
ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಯಾಕೆ? ಅದರಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ನಾನು ಹೇಳಲಾರೆ. ಆ ರೀತಿ, ಯಾರೂ ಹಕ್ಕಿನಿಂದ ಹೇಳಲು ಸಾಧ್ಯವಿಲ್ಲ. ಆದರೆ, ಹಲವರು ಅದರಲ್ಲಿ ಯೋಗ್ಯತೆಯನ್ನು ಕಂಡು ಅಳವಡಿಸಿಕೊಳ್ಳಲು ನಿರ್ಧರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವಷ್ಟು, ಹಳೆಯ ಅಭ್ಯಾಸಗಳ ಗೀಳು ನಮಗಿದೆ. ಒಮ್ಮೆ ವ್ಯಕ್ತಿಯೊಬ್ಬರು ಮಹಾತ್ಮ ಗಾಂಧೀಜಿ ಅವರನ್ನು, ಕೆಲವು ಅನುಮಾನಗಳು ಅಥವಾ ಸಮಸ್ಯೆಗಳು ಎದುರಾದಾಗ ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ಅವರು, ‘ಭಗವದ್ಗೀತೆಯಿಂದ ನಾನು ಬಹಳಷ್ಟು ಪಡೆಯುತ್ತೇನೆ’ ಎಂದರು. ಪ್ರತಿ ಬಾರಿ ಓದಿದಾಗಲೂ ಹೊಸ ಹೊಸ ಅರ್ಥಗಳನ್ನು ಕಂಡುಕೊಂಡು ಅವರಿಗೆ ಜ್ಞಾನೋದಯವಾಯಿತು ಎಂಬುದು ಅದರರ್ಥ.
ಅದೇ ರೀತಿ, ಶಿಕ್ಷಣ ಜಗತ್ತಿನಲ್ಲಿರುವ ಜನರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು 10–15 ಬಾರಿ ಪರಿಶೀಲಿಸಬೇಕು ಮತ್ತು ಪರಿಹಾರಗಳನ್ನು ಹುಡುಕಬೇಕು. ಇದನ್ನು ಕೇವಲ ಸರ್ಕಾರದ ಸುತ್ತೋಲೆ ಎಂದು ನೋಡಬಾರದು. ತುಂಬು ಹೃದಯದಿಂದ ನಾವು ಅದನ್ನು ಅಳವಡಿಸಿಕೊಳ್ಳಬೇಕು. ಅಂತಹ ಪ್ರಯತ್ನ ನಡೆದಾಗ, ನೀತಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನನಗಿದೆ. ಏಕೆಂದರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ನಮ್ಮ ದೇಶದ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಲಕ್ಷಾಂತರ ಶಿಕ್ಷಕರು ಅದಕ್ಕೆ ಕೊಡುಗೆ ನೀಡಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಬಹುದೊಡ್ಡ ವಿಚಾರ ಮಂಥನ ನಡೆದಿದೆ. ಮಕ್ಕಳಿಗೆ ಆಡಳಿತ ಭಾಷೆಯು ಉಪಯೋಗವಾಗುವಂತೆ ನೋಡಿಕೊಳ್ಳುವುದು ಅದನ್ನು ರೂಪಿಸಿದ ಶಿಕ್ಷಕರ ಕೆಲಸ. ಅದನ್ನು ಅತ್ಯಂತ ಸರಳ ಮತ್ತು ಸ್ಪಷ್ಟವಾದ ರೀತಿಯಲ್ಲಿ ಅವರಿಗೆ ವಿವರಿಸಬೇಕಾಗಿದೆ. ರಂಗ ಪ್ರಯೋಗಗಳು, ಪ್ರಬಂಧ ಬರಹ ಹಾಗೂ ವ್ಯಕ್ತಿತ್ವದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹೇಗೆ ಚರ್ಚಿಸುತ್ತಾರೋ ಅದೇ ರೀತಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಚರ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಶಿಕ್ಷಕರು ಅದನ್ನು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳು ಚರ್ಚಿಸಿದರೆ, ಖಂಡಿತವಾಗಿಯೂ ಒಂದು ಅಥವಾ ಎರಡು ಹೊಸ ವಿಷಯಗಳು ಹೊರಹೊಮ್ಮುತ್ತವೆ. ಇಂತಹದ್ದೊಂದು ಪ್ರಯತ್ನ ನಡೆಯಬೇಕು.
ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದ ಹಿನ್ನೆಲೆಯಲ್ಲಿ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾನು ಮಾಡಿದ ಭಾಷಣವನ್ನು ನೀವು ನೆನಪಿಸಿಕೊಳ್ಳಿ. 2047 ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಮಾತನಾಡಿದೆ. ಭಾಷಣದಲ್ಲಿ ‘ಪಂಚ ಪ್ರಾಣ’ವನ್ನು (ಐದು ಪ್ರತಿಜ್ಞೆ) ಪ್ರಸ್ತಾಪಿಸಿದೆ. ತರಗತಿಗಳಲ್ಲಿ ಆ ಐದು ಪ್ರತಿಜ್ಞೆಗಳನ್ನು ಚರ್ಚಿಸಬಹುದೇ? ಶಾಲೆಗಳಲ್ಲಿ ಬೆಳಗಿನ ಸಭೆಯ ಸಮಯದಲ್ಲಿ, ವಾರದ ಐದು ವಿಭಿನ್ನ ದಿನಗಳಲ್ಲಿ, ಈ ಐದು ಪ್ರತಿಜ್ಞೆಗಳ ಮೇಲೆ ಮಾತನಾಡುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗುರುತಿಸಬಹುದು. ಇದು ವರ್ಷವಿಡೀ ಮುಂದುವರಿಯಬೇಕು. ಈ ಐದು ಪ್ರತಿಜ್ಞೆಗಳು ಪ್ರತಿಯೊಬ್ಬ ನಾಗರಿಕನ ಪ್ರತಿಜ್ಞೆಯಾಗಬೇಕು ಎಂಬುದನ್ನು ಇದು ಸೂಚಿಸುತ್ತದೆ.
ಈ ರೀತಿ ಮಾಡಲು ಸಾಧ್ಯವಾದರೆ, ನಮ್ಮ ಭವಿಷ್ಯಕ್ಕಾಗಿ ಒಂದು ಮಾರ್ಗವನ್ನು ರಚಿಸಲು ಈ ಐದು ಪ್ರತಿಜ್ಞೆಗಳು ನಮಗೆ ಸಹಾಯ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಈ ಐದು ಪ್ರತಿಜ್ಞೆಗಳು ಹೇಗೆ ವಿದ್ಯಾರ್ಥಿಗಳ ಜೀವನದ ಭಾಗವಾಗಬಹುದು ಎಂಬುದನ್ನು ನೋಡುವ ಪ್ರಯತ್ನ ನಮ್ಮದಾಗಬೇಕು.
ಎರಡನೆಯದಾಗಿ, ತನ್ನ ಮನಸ್ಸಿನಲ್ಲಿ 2047ರ ಕನಸು ಕಾಣದ ಯಾವುದೇ ವಿದ್ಯಾರ್ಥಿ ಭಾರತದಲ್ಲಿ ಇರಬಾರದು. ಎಲ್ಲರಲ್ಲೂ ಅಂತಹ ಕನಸುಗಳಿರಬೇಕು. 2047ರಲ್ಲಿ ಅವರ ವಯಸ್ಸು ಎಷ್ಟಿರಲಿದೆ ಎಂದು ಕೇಳಬೇಕು. ಆ ವರ್ಷಗಳಲ್ಲಿ ತನಗಾಗಿ ಮತ್ತು ದೇಶಕ್ಕಾಗಿ ಅವರ ಯೋಜನೆಗಳೇನು ಎಂಬುದರ ಬಗ್ಗೆ ಕೇಳಬೇಕು. 2047ರವರೆಗಿನ ವರ್ಷಗಳು, ತಿಂಗಳುಗಳು, ದಿನಗಳು ಹಾಗೂ ಗಂಟೆಗಳನ್ನು ಅವರು ಲೆಕ್ಕ ಹಾಕಬೇಕು. ಯೋಜನೆಗಳ ಬಗ್ಗೆ ಹೇಳಬೇಕು. ಇದರಿಂದಾಗಿ ಅವರ ಮುಂದೆ ಒಂದು ಚಿತ್ರಣ ಸಿದ್ಧವಾಗಲಿದೆ. ತನ್ನ ಗಂಟೆಗಳನ್ನು ಅವರು ಎಣಿಸತೊಡಗುತ್ತಾರೆ. ಪ್ರತಿ ಗಂಟೆಯೂ ಹಾದುಹೋಗುವಾಗ 2047 ಸಮೀಪಿಸುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ. 2047 ಅನ್ನು ಹೇಗೆ ಸಮೀಪಿಸಬೇಕೆಂದು ಯೋಜನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ.
ವಿದ್ಯಾರ್ಥಿಗಳಲ್ಲಿ ಇಂತಹ ಪ್ರಜ್ಞೆಯನ್ನು ನಾವು ಬೆಳೆಸಿದರೆ, ಹೊಸ ಶಕ್ತಿ ಮತ್ತು ಉತ್ಸಾಹದಿಂದ ಅವರು ಅದರ ಹಿಂದೆ ಹೋಗುತ್ತಾರೆ. ದೊಡ್ಡ ಕನಸುಗಳನ್ನು ಕಾಣುವ, ದೊಡ್ಡ ಸಂಕಲ್ಪಗಳನ್ನು ಕೈಗೊಳ್ಳುವ ಹಾಗೂ ತಮ್ಮ ಇಡೀ ಜೀವನವನ್ನು ದೂರದೃಷ್ಟಿಯಿಂದ ನೋಡಲು ಸಿದ್ಧವಾಗಿರುವವರು ಮಾತ್ರ ಜಗತ್ತಿನಲ್ಲಿ ಪ್ರಗತಿ ಸಾಧಿಸುತ್ತಾರೆ.
1947ಕ್ಕಿಂತ ಮೊದಲು ನೀವು ನೋಡಿರಬಹುದು. 1930ರ ದಂಡಿ ಯಾತ್ರೆ ಮತ್ತು 1942ರ ಭಾರತ ಬಿಟ್ಟು ತೊಲಗಿ ಚಳುವಳಿಯ ನಡುವಿನ 12 ವರ್ಷಗಳ ಕಾಲ ಇಡೀ ದೇಶವು ಸ್ವಾತಂತ್ರ್ಯದ ಮಂತ್ರದಲ್ಲಿ ಮುಳುಗಿತ್ತು. ಜನರ ಜೀವನದ ಎಲ್ಲಾ ಹಂತಗಳಲ್ಲಿ ಸ್ವಾತಂತ್ರ್ಯವು ಮನೋಧರ್ಮವಾಗಿ ಮಾರ್ಪಟ್ಟಿತ್ತು. ಉತ್ತಮ ಆಡಳಿತ ಮತ್ತು ದೇಶದ ಹೆಮ್ಮೆಗಾಗಿ ಈಗ ನಮಗೂ ಅದೇ ಮನೋಧರ್ಮದ ಅಗತ್ಯವಿದೆ.
ನಮ್ಮ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜನರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಿಮಗೆ ನೀವೇ ಈ ಪ್ರಯತ್ನಕ್ಕೆ ಬದ್ಧರಾದರೆ, ನಾವು ಆ ಕನಸುಗಳನ್ನು ನನಸಾಗಿಸಬಹುದು ಎಂಬ ಖಾತ್ರಿ ನನಗಿದೆ. ಹಳ್ಳಿಗಳಿಂದಲೂ ಶೀಘ್ರವೇ ಈ ಭಾವನೆ ಹೊರಹೊಮ್ಮಲಿದೆ. ಈಗ ಸುಮ್ಮನೆ ಇರುವುದನ್ನು ದೇಶ ಬಯಸುವುದಿಲ್ಲ. 250 ವರ್ಷಗಳ ಕಾಲ ನಮ್ಮನ್ನು ಆಳಿದವರನ್ನು, ವಿಶ್ವ ಆರ್ಥಿಕತೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಾವು ಹಿಂದಿಕ್ಕಿ ಮುನ್ನಡೆದಿರುವುದನ್ನು ನೀವು ನೋಡಿದ್ದೀರಿ. ಆರನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯ ಶ್ರೇಯಾಂಕದ ಸುಧಾರಣೆಯು ಅತ್ಯಂತ ವಿಶೇಷವಾಗಿದೆ. ಏಕೆಂದರೆ ನಾವು (ನಮ್ಮನ್ನು ಆಳಿದವರನ್ನು) ಅವರನ್ನು ಮೀರಿಸಿದ್ದೇವೆ. ತ್ರಿವರ್ಣ ಮತ್ತು ಆಗಸ್ಟ್ 15ಕ್ಕೆ ಇಂತಹದ್ದೊಂದು ವಿಶೇಷ ಶಕ್ತಿ ಇದೆ.
ಆಗಸ್ಟ್ 15ರಂದು (1947) ತ್ರಿವರ್ಣ ಧ್ವಜಕ್ಕಾಗಿ (ಸ್ವಾತಂತ್ರ್ಯ) ನಡೆದ ಚಳುವಳಿಯ ಬೆಳಕಿನಲ್ಲಿ ಈ 5ನೇ ಶ್ರೇಯಾಂಕವು ಬಂದಿದೆ. ಈ ಗಟ್ಟಿತನದ ಕಾರಣಕ್ಕೆ ತ್ರಿವರ್ಣ ಧ್ವಜವು ಎತ್ತರದಲ್ಲಿ ಹಾರಾಡುತ್ತಿದೆ. ಇಂತಹ ಮನೋಧರ್ಮವು ಬಹಳ ಮುಖ್ಯ. ದೇಶಕ್ಕಾಗಿ ಬದುಕಬೇಕು, ದೇಶಕ್ಕಾಗಿ ಹೋರಾಡಬೇಕು, ಬೇಕಾದರೆ ದೇಶಕ್ಕಾಗಿ ಸಾಯಬೇಬೇಕು ಎಂಬ 1930ರಿಂದ 1942ರ ಅವಧಿಯಲ್ಲಿದ್ದ ಮನೋಧರ್ಮ ಇಂದಿಗೂ ಬೇಕಾಗಿದೆ.
ನನ್ನ ದೇಶವನ್ನು ಹಿಂದುಳಿಯುವುದಕ್ಕೆ ನಾನು ಬಿಡುವುದಿಲ್ಲ. ಸಾವಿರಾರು ವರ್ಷಗಳ ಗುಲಾಮಗಿರಿಯಿಂದ ನಾವು ಹೊರ ಬಂದಿದ್ದೇವೆ. ಈಗ ಅವಕಾಶವಿದ್ದು, ನಾವು ನಿಲ್ಲುವುದಿಲ್ಲ ಮತ್ತು ಮುಂದುವರಿಯುತ್ತೇವೆ. ಈ ಪ್ರಯತ್ನದಲ್ಲಿ ಶಿಕ್ಷಕರೂ ಭಾಗಿಗಳಾದರೆ, ನಮ್ಮ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ.
ಕಠಿಣ ಪರಿಶ್ರಮದ ನಂತರ ನೀವು ಈ ಪ್ರಶಸ್ತಿಗಳನ್ನು ಗೆದ್ದಿದ್ದೀರಿ. ಆದ್ದರಿಂದ, ಹೆಚ್ಚಿನ ಕೆಲಸಕ್ಕೆ ನಿಮ್ಮನ್ನ ನಾನು ನಿಯೋಜಿಸುತ್ತಿದ್ದೇನೆ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಕೆಲಸ ನಿಯೋಜಿಸಬೇಕೆಂದು ಯಾರಾದರೂ ಭಾವಿಸುತ್ತಾರೆ. ಇಲ್ಲದಿದ್ದರೆ, ಕೆಲಸ ಮಾಡದವರಿಗೆ ಯಾರು ತಾನೇ ಕೆಲಸ ನೀಡುತ್ತಾರೆ. ಕೆಲಸ ಮಾಡದವರಿಗೆ ಕೆಲಸ ಕೊಡುವುವವರಾರು? ತಾವು ವಹಿಸಿಕೊಳ್ಳುವ ಯಾವುದೇ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ನಿಮಗೆ ಅನೇಕ ಶುಭಾಶಯಗಳು!
ತುಂಬಾ ಧನ್ಯವಾದಗಳು!
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿತ್ತು.
(Release ID: 1857832)
Visitor Counter : 282
Read this release in:
Marathi
,
Tamil
,
Malayalam
,
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Telugu