ಸಂಪುಟ
azadi ka amrit mahotsav

ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 07 SEP 2022 4:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಶಿಕ್ಷಣ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಶಿಕ್ಷಣ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ. ಭಾರತ ಮತ್ತು ಯುಎಇ ನಡುವಿನ ಶೈಕ್ಷಣಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.


ಶಿಕ್ಷಣ ಕ್ಷೇತ್ರದಲ್ಲಿ ಯುಎಇಯೊಂದಿಗೆ 2015 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಅದು 2018 ರಲ್ಲಿ ಮುಕ್ತಾಯಗೊಂಡಿತು. 2019 ರಲ್ಲಿ, ಉಭಯ ದೇಶಗಳ ಶಿಕ್ಷಣ ಸಚಿವರ ನಡುವಿನ ಸಭೆಯಲ್ಲಿ, ಯುಎಇಯು ಹೊಸ ಒಪ್ಪಂದಕ್ಕೆ ಸಹಿ ಹಾಕಲು ಪ್ರಸ್ತಾಪಿಸಿತು. ಹೊಸ ತಿಳುವಳಿಕಾ ಒಪ್ಪಂದವು ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಭಾರತದ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳನ್ನು ಒಳಗೊಂಡಿದೆ.


ಈ ತಿಳಿವಳಿಕೆ ಒಪ್ಪಂದವು ಮಾಹಿತಿ ಶಿಕ್ಷಣದ ವಿನಿಮಯ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ಬೋಧಕ ಸಿಬ್ಬಂದಿಯ ಸಾಮರ್ಥ್ಯದ ಅಭಿವೃದ್ಧಿ, ಅವಳಿ, ಜಂಟಿ ಪದವಿ ಮತ್ತು ಡ್ಯುಯಲ್ ಪದವಿ ಕಾರ್ಯಕ್ರಮಗಳನ್ನು ನೀಡಲು ಎರಡೂ ದೇಶಗಳಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 


ಈ ತಿಳಿವಳಿಕೆ ಒಪ್ಪಂದವು ಶೈಕ್ಷಣಿಕ ಸಹಕಾರವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಭಾರತ ಮತ್ತು ಯುಎಇ ನಡುವಿನ ಶೈಕ್ಷಣಿಕ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಅರ್ಹತೆಗಳ ಪರಸ್ಪರ ಗುರುತಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಮಾಹಿತಿ ವಿನಿಮಯವನ್ನು ಸುಗಮಗೊಳಿಸುತ್ತದೆ. ಯುಎಇ ದೇಶವು ಭಾರತೀಯರಿಗೆ ಪ್ರಮುಖ ಕೆಲಸದ ತಾಣವಾಗಿರುವುದರಿಂದ ಟಿವಿಇಟಿಯಲ್ಲಿನ ಸಹಕಾರವನ್ನು ಸಹ ಇದು ಒಳಗೊಳ್ಳುತ್ತದೆ.


ಎಂಒಯು ಸಹಿ ಮಾಡಿದ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ ಮತ್ತು ಎರಡೂ ದೇಶಗಳ ಒಪ್ಪಿಗೆಯೊಂದಿಗೆ ಸ್ವಯಂಚಾಲಿತವಾಗಿ ನವೀಕರಣವಾಗುತ್ತದೆ. ಒಮ್ಮೆ ಸಹಿ ಮಾಡಿದ ನಂತರ, ಈ ತಿಳಿವಳಿಕೆ ಒಪ್ಪಂದವು 2015 ರಲ್ಲಿ ಯುಎಇಯೊಂದಿಗೆ ಸಹಿ ಮಾಡಿದ ಹಿಂದಿನ ತಿಳಿವಳಿಕೆ ಒಪ್ಪಂದವನ್ನು ರದ್ದುಗೊಳಿಸುತ್ತದೆ.

*****


(Release ID: 1857654) Visitor Counter : 186