ಬುಡಕಟ್ಟು ವ್ಯವಹಾರಗಳ ಸಚಿವಾಲಯ

ʻಆಶ್ವಾಸನ್ʼ ಅಭಿಯಾನದ ಅಡಿಯಲ್ಲಿ 68,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆ-ಮನೆ ಕ್ಷಯರೋಗ ತಪಾಸಣೆ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು


ಈ ಉಪಕ್ರಮದ ಅಡಿಯಲ್ಲಿ 1 ಕೋಟಿಗೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ

Posted On: 26 AUG 2022 12:51PM by PIB Bengaluru

ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ `ಟಿಬಿʼ ವಿಭಾಗವು ಆಗಸ್ಟ್ 24 ರಂದು ನವದೆಹಲಿಯ ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ (ಎನ್‌ಟಿಆರ್‌ಐ) 'ಬುಡಕಟ್ಟು ಕ್ಷಯರೋಗ ಉಪಕ್ರಮ'ದ ಅಡಿಯಲ್ಲಿ 100 ದಿನಗಳ ʻಆಶ್ವಾಸನ್ʼ ಅಭಿಯಾನದ ಕಲಿಕೆಗಳನ್ನು ಪ್ರಸ್ತುತಪಡಿಸಲು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿತು.

ʻಬುಡಕಟ್ಟು ಕ್ಷಯರೋಗ ಉಪಕ್ರಮʼವು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ʻಕೇಂದ್ರ ಕ್ಷಯರೋಗ ವಿಭಾಗʼದ ಒಂದು ಜಂಟಿ ಉಪಕ್ರಮವಾಗಿದೆ. ತಾಂತ್ರಿಕ ಪಾಲುದಾರನಾಗಿ ಯು.ಎಸ್.ಎ.ಐ.ಡಿ ಮತ್ತು ಅನುಷ್ಠಾನ ಪಾಲುದಾರನಾಗಿ ʻಪಿರಾಮಲ್ ಸ್ವಾಸ್ಥ್ಯʼ ಈ ಉಪಕ್ರಮವನ್ನು ಬೆಂಬಲಿಸಿವೆ.

ʻಬುಡಕಟ್ಟು ಕ್ಷಯರೋಗ ಉಪಕ್ರಮʼದ ಅಡಿಯಲ್ಲಿ, ಭಾರತದ 174 ಬುಡಕಟ್ಟು ಜಿಲ್ಲೆಗಳಲ್ಲಿ ಕ್ಷಯರೋಗದ ಸಕ್ರಿಯ ಪ್ರಕರಣಗಳನ್ನು ಕಂಡುಹಿಡಿಯಲು ಈ ವರ್ಷದ ಜನವರಿ 7ರಂದು ʻಆಶ್ವಾಸನ್ ಅಭಿಯಾನʼ ಪ್ರಾರಂಭಿಸಲಾಯಿತು. ಮಹಾರಾಷ್ಟ್ರದ ನಂದೂರ್‌ಬರ್‌ ಜಿಲ್ಲೆಯಲ್ಲಿ ಇದಕ್ಕೆ ಚಾಲನೆ ನೀಡಲಾಯಿತು. ಈ ಉಪಕ್ರಮದ ಅಡಿಯಲ್ಲಿ, 68,019 ಹಳ್ಳಿಗಳ ವ್ಯಾಪ್ತಿಯಲ್ಲಿ ಮನೆ-ಮನೆ ಕ್ಷಯರೋಗ ತಪಾಸಣೆಯನ್ನು ಕೈಗೊಳ್ಳಲಾಯಿತು. 1,03,07,200 ವ್ಯಕ್ತಿಗಳ ಮೌಖಿಕ ಸ್ಕ್ರೀನಿಂಗ್ ಆಧಾರದ ಮೇಲೆ, 3,82,811 ಜನರನ್ನು ʻಶಂಕಿತ ಟಿಬಿʼ ರೋಗಿಗಳಾಗಿ ಗುರುತಿಸಲಾಗಿದೆ. ಈ ಪೈಕಿ, 2,79,329 (73%) ಮಾದರಿಗಳನ್ನು ʻಟಿಬಿʼ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು 9,971 ಜನರಿಗೆ ʻಟಿಬಿʼ ಪಾಸಿಟಿವ್ ಕಂಡುಬಂದಿದೆ. ಇವರಿಗೆ ಭಾರತ ಸರಕಾರದ ಶಿಷ್ಟಾಚಾರಗಳ ಪ್ರಕಾರ ಚಿಕಿತ್ಸೆ ನೀಡಲಾಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ನವಲ್ಜಿತ್ ಕಪೂರ್ ಅವರು, "ಆಶ್ವಾಸನ್ ಅಭಿಯಾನವು ಸುಮಾರು 2 ಲಕ್ಷ ಸಮುದಾಯ ಪ್ರಭಾವಿಗಳನ್ನು ಒಟ್ಟುಗೂಡಿಸಿತು. ಅಭಿಯಾನವನ್ನು ಯಶಸ್ವಿಗೊಳಿಸಲು ಅವರು ಹೃತ್ಪೂರ್ವಕವಾಗಿ ಪಾಲ್ಗೊಂಡರು. ಇವರಲ್ಲಿ ಬುಡಕಟ್ಟು ನಾಯಕರು, ಬುಡಕಟ್ಟು ಶುಶ್ರೂಷಕರು, ಪಿಆರ್‌ಐ ಸದಸ್ಯರು, ಸ್ವಸಹಾಯ ಗುಂಪುಗಳು ಮತ್ತು ಬುಡಕಟ್ಟು ಪ್ರದೇಶಗಳ ಯುವಕರು ಸೇರಿದ್ದಾರೆ. ಇವರೆಲ್ಲರೂ ಸ್ಕ್ರೀನಿಂಗ್ ಪ್ರಕ್ರಿಯೆ ಮತ್ತು ಸಮುದಾಯ ಜಾಗೃತಿಯಲ್ಲಿ ಈ ಅಭಿಯಾನದ ಭಾಗವಾಗಿದ್ದರು," ಎಂದು ತಿಳಿಸಿದರು. ʻಕೇಂದ್ರ ಕ್ಷಯರೋಗ ವಿಭಾಗʼ, ರಾಜ್ಯ ಕ್ಷಯ ರೋಗ ಅಧಿಕಾರಿಗಳು ಮತ್ತು ಜಿಲ್ಲಾ ಕ್ಷಯರೋಗ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ʻಪಿರಾಮಲ್ ಫೌಂಡೇಶನ್ʼ ಹಾಗೂ ಯು.ಎಸ್.ಎ.ಐ.ಡಿ.ಯ ಪ್ರಯತ್ನಗಳಿಗಾಗಿ ಅವರು ಅಭಿನಂದನೆ ಸಲ್ಲಿಸಿದರು. ಇತರ ಜನಸಮುದಾಯಗಳಿಗೆ ಹೋಲಿಸಿದರೆ ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ಉಸಿರಾಟದ ಕಾಯಿಲೆಗಳು ಮತ್ತು ಟಿಬಿಗೆ ತುತ್ತಾಗುವ ಬಗ್ಗೆ ದತ್ತಾಂಶವು ಸೂಚಿಸುತ್ತದೆ ಎಂದು ಅವರು ಹೇಳಿದರು. ಮೂಲಸೌಲಭ್ಯಗಳ ಕೊರತೆಗಳ ವಿಶ್ಲೇಷಣೆ ನಡೆಸುವಂತೆ ಮತ್ತು ರಾಜ್ಯದ ಸಂಬಂಧಪಟ್ಟ ಬುಡಕಟ್ಟು ಕಲ್ಯಾಣ ಇಲಾಖೆಯ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳಿಂದ ಅಗತ್ಯ ಅನುದಾನ ಪಡೆಯುವಂತೆ ಅವರು ಎಲ್ಲಾ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸೂಚಿಸಿದರು.

ʻಕೇಂದ್ರ ಕ್ಷಯರೋಗ ವಿಭಾಗʼದ ಉಪ ಮಹಾನಿರ್ದೇಶಕರಾದ ಶ್ರೀ ವಿವೇಕಾನಂದ ಗಿರಿ ಅವರು ʻಸಿಟಿಡಿʼಯ ʻಬುಡಕಟ್ಟು ಕ್ಷಯರೋಗ ಉಪಕ್ರಮʼವನ್ನು ಪ್ರಸ್ತುತಪಡಿಸಿದರು. ಹೆಚ್ಚುವರಿ ಮಹಾ ನಿರ್ದೇಶಕ ಡಾ. ರಘುರಾಮ್ ರಾವ್ ಅವರು ಮಾತನಾಡಿ, “ಕ್ಷಯರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಬುಡಕಟ್ಟು ಸಮುದಾಯಗಳೊಂದಿಗೆ ಕೆಲಸ ಮಾಡಲು ಕೇಂದ್ರ ಕ್ಷಯರೋಗ ವಿಭಾಗವು ಉತ್ಸುಕವಾಗಿದೆ,ʼʼ ಎಂದು ಹೇಳಿದರು. ʻಆಶ್ವಾಸನ್ʼ ಅಭಿಯಾನದ ಮೂಲಕ ಹೊರಹೊಮ್ಮಿದ ದತ್ತಾಂಶದ ನೆರವಿನೊಂದಿಗೆ, ಕ್ಷಯರೋಗದ ʻಹಾಟ್‌ಸ್ಪಾಟ್‌ʼಗಳನ್ನು ಗುರುತಿಸಿ, ಅವುಗಳನ್ನೇ ಪ್ರಾರಂಭಿಕ ಬಿಂದುಗಳಾಗಿ ʻಸಿಟಿಡಿ ಟಿಬಿʼ ಬಳಸಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ʻಯು.ಎಸ್.ಎ.ಐ.ಡಿ ಇಂಡಿಯಾʼದ ಆರೋಗ್ಯ ವಿಭಾಗದ ನಿರ್ದೇಶಕಿ ಶ್ರೀಮತಿ ಸಂಗೀತಾ ಪಟೇಲ್ ಅವರು, ಬುಡಕಟ್ಟು ಸಮುದಾಯಗಳಲ್ಲಿ ಕ್ಷಯರೋಗವನ್ನು ಪರಿಹರಿಸುವ ಕುರತ ಬದ್ಧತೆಗಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯವನ್ನು ಅಭಿನಂದಿಸಿದರು. "ಸಮುದಾಯ ಮಟ್ಟದಲ್ಲಿ ಕೆಲಸ ಮಾಡುವ 2200ಕ್ಕೂ ಹೆಚ್ಚು ಸದಸ್ಯರೊಂದಿಗೆ ಏನೆಲ್ಲಾ ಸಾಧಿಸಲಾಗಿದೆ ಎಂದು ನೀವು ಯೋಚಿಸಿದರೆ, ಅದು ನಂಬಲಸಾಧ್ಯವೆನಿಸುತ್ತದೆ. 10 ದಶಲಕ್ಷ ಜನರನ್ನು ತಲಿಪಿ, 10,000 ಟಿಬಿ ರೋಗಿಗಳನ್ನು ಗುರುತಿಸಲಾಗಿದೆ. 75 ಟಿಬಿ ಮುಕ್ತ ಬುಡಕಟ್ಟು ಜಿಲ್ಲೆಗಳಿಗೆ ತಲುಪುವ ಬದ್ಧತೆಯನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ಆದರೆ ಇತರ ಬುಡಕಟ್ಟು ಜಿಲ್ಲೆಗಳನ್ನು ಕೈಬಿಡಬಾರದು,ʼʼ ಎಂದು ಅವರು ಸಲಹೆ ನೀಡಿದರು.

ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ, ಮುಂಬರುವ ತಿಂಗಳುಗಳಲ್ಲಿ 75ಹೆಚ್ಚು ಅಧಿಕ ಹೊರೆಯ ಬುಡಕಟ್ಟು ಜಿಲ್ಲೆಗಳನ್ನು ಆಯ್ಕೆ ಮಾಡಿ, ಅವುಗಳತ್ತ ಆದ್ಯತೆಯ ಮೇರೆಗೆ ಗಮನ ಕೇಂದ್ರೀಕರಿಸಲಾಗಿದೆ. 75 ಜಿಲ್ಲೆಗಳಿಗೆ ಮೂರು ಆಯಾಮಗಳ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದ್ದು, ಅದರಡಿ ಈ ಕೆಳಕಂಡ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲಾಗುತ್ತದೆ:

i. ಸಮುದಾಯ ಸಂಘಟನೆಗಾಗಿ ಹಾಲಿ ಪ್ರಕ್ರಿಯೆಯ ಸಮಯದಲ್ಲಿ ಗುರುತಿಸಲಾದ ಸಮುದಾಯ ಪ್ರಭಾವಿ ವ್ಯಕ್ತಿಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವ ಮೂಲಕ ʻಟಿಬಿʼ ಸೇವೆಗಳಿಗೆ ಬೇಡಿಕೆಯನ್ನು ಸೃಷ್ಟಿಸುವುದು; ಟಿಬಿ, ರೋಗಲಕ್ಷಣಗಳು, ಹರಡುವಿಕೆ ಮತ್ತು ಚಿಕಿತ್ಸಾ ಪ್ರಕ್ರಿಯೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಕ್ಷಯರೋಗಕ್ಕೆ ಸಂಬಂಧಿಸಿದ ಕಳಂಕ ಭಾವ ಮತ್ತು ಭಯವನ್ನು ಪರಿಹರಿಸುವುದು.

ii. ʻಟಿಬಿʼ ಪರೀಕ್ಷೆ ಮತ್ತು ರೋಗನಿರ್ಣಯ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ಕ್ಷಯರೋಗ ಸೇವೆಗಳ ವಿತರಣೆಯನ್ನು ಸುಧಾರಿಸುವುದು, ಅನುಷ್ಠಾನದ ಅಂತರಗಳನ್ನು ಪರಿಹರಿಸಲು ʻಪಿಐಪಿʼಗಳು ಮತ್ತು ಇತರ ಧನಸಹಾಯದ ಮೂಲಗಳನ್ನು ಬಳಸಿಕೊಳ್ಳುವುದು ಮತ್ತು ಪ್ರತಿಯೊಬ್ಬರಿಗೂ ಪರಿಹಾರವನ್ನು ಒದಗಿಸುವುದು.

iii. ಸಕ್ರಿಯ ಪ್ರಕರಣ ಪತ್ತೆ ಅಭಿಯಾನಗಳ ಮೂಲಕ ಪ್ರಸರಣದ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಸೋಂಕುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.

ಕಾರ್ಯಕ್ರಮದಲ್ಲಿ ಮಾತನಾಡಿದ ʻಪಿರಾಮಲ್ ಸ್ವಾಸ್ಥ್ಯʼದ ʻಟ್ರೈಬಲ್ ಟಿಬಿ ಅಭಿಯಾನʼದ ಮುಖ್ಯಸ್ಥರಾದ ಡಾ. ಶೋಭಾ ಎಕ್ಕಾ ಅವರು, "ಭಾರತದಾದ್ಯಂತ ವಾಸಿಸುವ ಲಕ್ಷಾಂತರ ಬುಡಕಟ್ಟು ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ʻಪಿರಾಮಲ್ ಸ್ವಾಸ್ಥ್ಯʼ ಸಂಸ್ಥೆಯು ಅತ್ಯಂತ ಬದ್ಧವಾಗಿದೆ. ಜೊತೆಗೆ ಕ್ಷಯ-ಮುಕ್ತ ಭಾರತದ ಗುರಿಯನ್ನು ಸಾಧಿಸಲು ಕ್ಷಯರೋಗ ಮುಕ್ತ ಬುಡಕಟ್ಟು ಸಮುದಾಯಗಳು ಆಧಾರಸ್ತಂಭವಾಗಿವೆ ಎಂಬುದು ನನ್ನ ನಂಬಿಕೆ,ʼʼ ಎಂದು ಹೇಳಿದರು. ಶ್ರೀಮತಿ ವಿನಿತಾ ಶ್ರೀವಾಸ್ತವ (ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಬುಡಕಟ್ಟು ಆರೋಗ್ಯ ಕೋಶದ ಸಲಹೆಗಾರ್ತಿ) ಹಾಗೂ ʻಪಿರಾಮಲ್ ಸ್ವಾಸ್ಥ್ಯʼದ ಹಿರಿಯ ಉಪಾಧ್ಯಕ್ಷರಾದ ಡಾ. ಶೈಲೇಂದ್ರ ಹೆಗ್ಡೆ ಮತ್ತು ಅಶ್ವಿನ್ ದೇಶಮುಖ್ ಹಿರಿಯ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯ ಮತ್ತು ಜಿಲ್ಲಾ ಕ್ಷಯರೋಗ ಅಧಿಕಾರಿಗಳು, ತಾಂತ್ರಿಕ ತಜ್ಞರು, ಸಮುದಾಯ ಪ್ರಭಾವಿಗಳು ಮತ್ತು ಅಭಿವೃದ್ಧಿ ಪಾಲುದಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

******



(Release ID: 1854788) Visitor Counter : 177