ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಗೋಧಿ ಅಥವಾ ಮಸ್ಲಿನ್ ಹಿಟ್ಟಿನ ರಫ್ತು ನೀತಿಗೆ ಕೇಂದ್ರ ಸಂಪುಟ ಅನುಮೋದನೆ

Posted On: 25 AUG 2022 2:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ, ಗೋಧಿ ಅಥವಾ ಮಸ್ಲಿನ್ ಹಿಟ್ಟಿಗೆ (ಎಚ್ ಎಸ್ ಸಂಕೇತ 1101) ರಫ್ತು ನಿಬಂಧನೆ ಮತ್ತು ನಿಷೇಧದಿಂದ ವಿನಾಯ್ತಿ ನೀಡುವ ನೀತಿ ತಿದ್ದುಪಡಿ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.  
 

ಪರಿಣಾಮ:
ಇದೀಗ ಈ ಅನುಮೋದನೆಯಿಂದಾಗಿ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧವನ್ನು ಹೇರಲು ಅನುವು ಮಾಡಿಕೊಡುತ್ತದೆ, ಇದು ಏರಿಕೆಯಾಗುತ್ತಿರುವ ಗೋಧಿ ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸುತ್ತದೆ ಮತ್ತು ಸಮಾಜದ ಅತ್ಯಂತ ದುರ್ಬಲ ವರ್ಗಗಳ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತದೆ.          

 

ಅನುಷ್ಠಾನ:
ಈ ಕುರಿತು ವಿದೇಶಿ ವ್ಯಾಪಾರ ಕುರಿತ ಮಹಾನಿರ್ದೇಶಕರು (ಡಿಜಿಎಫ್ ಟಿ) ಅಧಿಸೂಚನೆಯನ್ನು ಹೊರಡಿಸುತ್ತಾರೆ. 

 

ಹಿನ್ನೆಲೆ: 
ರಷ್ಯಾ ಮತ್ತು ಉಕ್ರೇನ್ ಜಾಗತಿಕ ಗೋಧಿ ವ್ಯಾಪಾರದ ಪ್ರಮುಖ ರಫ್ತುದಾರರಾಗಿದ್ದು, ಅವರು ಸುಮಾರು ಜಾಗತಿಕ ರಫ್ತು ವ್ಯಾಪಾರದ 1/4 ರಷ್ಟು ಗೋಧಿ ರಫ್ತು ಮಾಡುತ್ತವೆ. ಅವುಗಳ ನಡುವಿನ ಸಂಘರ್ಷವು ಜಾಗತಿಕ ಗೋಧಿ ಪೂರೈಕೆ ಸರಣಿಯ ಅಡಚಣೆಗೆ ಕಾರಣವಾಗಿ, ಭಾರತೀಯ ಗೋಧಿಯ ಬೇಡಿಕೆ ಹೆಚ್ಚಾಗಿದೆ. ಅದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ದೇಶದ 1.4 ಶತಕೋಟಿ ಜನರ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ 2022ರ ಮೇ ತಿಂಗಳಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 
ಆದರೂ, ಗೋಧಿಯ ರಫ್ತಿನ ಮೇಲಿನ ನಿಷೇಧದಿಂದಾಗಿ (ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ), ಗೋಧಿ ಹಿಟ್ಟಿನ ಬೇಡಿಕೆಯು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಾಗಿದೆ ಮತ್ತು ಇದು ಭಾರತದಿಂದ ರಫ್ತು ಹಿಂದಿನ ವರ್ಷದ 2021ರಲ್ಲಿ ಅವಧಿಗೆ ಹೋಲಿಸಿದರೆ ಏಪ್ರಿಲ್-ಜುಲೈ 2022 ರ ಅವಧಿಯಲ್ಲಿ ಶೇ.200ರಷ್ಟು  ಪ್ರಗತಿಯನ್ನು ದಾಖಲಿಸಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿಗೆ ಹೆಚ್ಚಿದ ಬೇಡಿಕೆಯು ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಗಮನಾರ್ಹ ಏರಿಕೆಗೆ ಕಾರಣವಾಗಿದೆ.  

ಈ ಹಿಂದೆ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿಷೇಧ ಅಥವಾ ಯಾವುದೇ ನಿರ್ಬಂಧ ಹಾಕಬಾರದೆಂಬ  ನೀತಿ ಇತ್ತು. ಆದ್ದರಿಂದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಗೋಧಿ ಹಿಟ್ಟಿನ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಗೋಧಿ ಹಿಟ್ಟಿನ ರಫ್ತಿನ ಮೇಲಿನ ನಿಷೇಧ / ನಿರ್ಬಂಧಗಳಿಂದ ವಿನಾಯಿತಿ ಹಿಂತೆಗೆದುಕೊಳ್ಳುವ ಮೂಲಕ ನೀತಿಯಲ್ಲಿ ಭಾಗಶಃ ಮಾರ್ಪಾಡು ಮಾಡುವ ಅಗತ್ಯವಿದೆ. 

*******



(Release ID: 1854374) Visitor Counter : 218