ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೋವಾದ ಪಣಜಿಯಲ್ಲಿ ಜರುಗಿದ ಹರ್ ಘರ್ ಜಲ ಉತ್ಸವದಲ್ಲಿ ಪ್ರಧಾನಮಂತ್ರಿಯವರ ವಿಡಿಯೊ ಸಂದೇಶದ ಕನ್ನಡ ಅವತರಣಿಕೆ

Posted On: 19 AUG 2022 1:52PM by PIB Bengaluru

ನಮಸ್ಕಾರ್, ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಜೀ, ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ, ಗೋವಾ ಸರ್ಕಾರದ ಇತರ ಸಚಿವರು, ಗಣ್ಯರು, ಘನತೆವೆತ್ತವರು, ಮಹಿಳೆಯರು ಮತ್ತು ಸಜ್ಜನ ಬಾಂಧವರೇ, ಇಂದು ಅತ್ಯಂತ ಮಹತ್ವದ ಮತ್ತು ಪವಿತ್ರ ದಿನವಾಗಿದೆ. ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಎಲ್ಲಾ ದೇಶವಾಸಿಗಳಿಗೆ ಮತ್ತು ಪ್ರಪಂಚದಾದ್ಯಂತ ಹರಡಿರುವ ಶ್ರೀ ಕೃಷ್ಣನ ಭಕ್ತರಿಗೆ ಅನೇಕ ಅಭಿನಂದನೆಗಳು. ಜೈ ಶ್ರೀ ಕೃಷ್ಣ! 

 

ಈ ಕಾರ್ಯಕ್ರಮ ಗೋವಾದಲ್ಲಿ ನಡೆಯುತ್ತಿದೆ. ಆದರೆ ಇಂದು ನಮ್ಮ ದೇಶದ ಸಾಧಿಸಿದ ಮೂರು ದೊಡ್ಡ ಸಾಧನೆಗಳನ್ನು ಎಲ್ಲಾ ನಾಗರಿಕರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಮತ್ತು ನಾನು ಇದನ್ನು ಇಡೀ ದೇಶದ ಜನತೆಗಾಗಿ ತಿಳಿಸಲು ಬಯಸುತ್ತೇನೆ. ನನ್ನ ದೇಶವಾಸಿಗಳು ಭಾರತದ ಈ ಸಾಧನೆಗಳ ಬಗ್ಗೆ ತಿಳಿದಾಗ, ಅವರು ತುಂಬಾ ಹೆಮ್ಮೆಪಡುತ್ತಾರೆ, ವಿಶೇಷವಾಗಿ ಅದರಲ್ಲೂ ನಮ್ಮ ತಾಯಂದಿರು ಮತ್ತು ಸಹೋದರಿಯರು ಹೆಮ್ಮೆಪಡುತ್ತಾರೆ. ‘ಅಮೃತ್ ಕಾಲ’ದಲ್ಲಿ ಭಾರತವು ಕೆಲಸ ಮಾಡುತ್ತಿರುವ ಬೃಹತ್ ಗುರಿಗಳಿಗೆ ಸಂಬಂಧಿಸಿ ಮೂರು ಪ್ರಮುಖ ಮೈಲಿಗಲ್ಲುಗಳನ್ನು ನಾವು ಇಂದು ದಾಟಿದ್ದೇವೆ. ಮೊದಲ ಮೈಲಿಗಲ್ಲು ಇಂದು ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನಳ್ಳಿ ಮೂಲಕ ಶುದ್ಧ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮನೆಮನೆಗೆ ಶುದ್ಧ ನೀರು ಪೂರೈಸುವ ಸರ್ಕಾರದ ಅಭಿಯಾನಕ್ಕೆ ಇದು ದೊಡ್ಡ ಯಶಸ್ಸು ಲಭಿಸಿದೆ. ಇದು ‘ಸಬ್ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಎಂಬುದಕ್ಕೂ ಉತ್ತಮ ಉದಾಹರಣೆಯಾಗಿದೆ. ಈ ಸಾಧನೆಗಾಗಿ ನಾನು ಪ್ರತಿಯೊಬ್ಬ ದೇಶವಾಸಿಗಳನ್ನು ಮತ್ತು ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರನ್ನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

 

ದೇಶ ಮತ್ತು ವಿಶೇಷವಾಗಿ ಗೋವಾ ರಾಜ್ಯವು ಇಂದು ಒಂದು ಮೈಲಿಗಲ್ಲನ್ನು ಸಾಧಿಸಿದೆ. ಇಂದು ಗೋವಾ ರಾಜ್ಯವು ದೇಶದ ಮೊದಲ ಹರ್ ಘರ್ ಜಲ್ ಪ್ರಮಾಣೀಕೃತ ರಾಜ್ಯವಾಗಿದ್ದು, ಪ್ರತಿ ಮನೆಯೂ ಕೊಳವೆ ನಳ್ಳಿ ನೀರಿನ ಸಂಪರ್ಕವನ್ನು ಹೊಂದಿದೆ. ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೂಡ ಹರ್ ಘರ್ ಜಲ್ ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಟ್ಟಿವೆ. ಕಳೆದ ಕೆಲವು ವರ್ಷಗಳಲ್ಲಿ, ಗೋವಾ ದೇಶದ ಪ್ರತಿಯೊಂದು ಪ್ರಮುಖ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಗೋವಾದ ಜನತೆಗೆ, ಪ್ರಮೋದ್ ಜೀ ಮತ್ತು ಅವರ ತಂಡಕ್ಕೆ, ಗೋವಾ ಸರ್ಕಾರಕ್ಕೆ ಮತ್ತು ಸ್ಥಳೀಯ ಸ್ವ-ಸರ್ಕಾರ ಸಂಸ್ಥೆಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನೀವು ಹರ್ ಘರ್ ಜಲ್ ಮಿಷನ್ ಅನ್ನು ಮುಂದಕ್ಕೆ ಕೊಂಡೊಯ್ದ ರೀತಿ, ಇದು ಇಡೀ ದೇಶಕ್ಕೆ ಸ್ಫೂರ್ತಿ ನೀಡಲಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನೂ ಹಲವು ರಾಜ್ಯಗಳು ಈ ಪಟ್ಟಿಗೆ ಸೇರ್ಪಡೆಯಾಗಲಿವೆ ಎಂಬ ವಿಷಯ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.

 

ಸ್ನೇಹಿತರೇ, 

 

ದೇಶದ ಮೂರನೇ ಸಾಧನೆಯು ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದ್ದು. ಕೆಲವು ವರ್ಷಗಳ ಹಿಂದೆ, ಎಲ್ಲಾ ದೇಶವಾಸಿಗಳ ಪ್ರಯತ್ನದಿಂದ ದೇಶವನ್ನು ಬಯಲು ಬಹಿರ್ದೆಶೆ(ಶೌಚ) ಮುಕ್ತ ಎಂದು ಘೋಷಿಸಲಾಯಿತು. ಇದಾದ ನಂತರ ಗ್ರಾಮಗಳನ್ನು ಬಯಲು ಬಹಿರ್ದೆಶೆ ಮುಕ್ತ (ಒ.ಡಿ.ಎಫ್.) ಪ್ಲಸ್ ಮಾಡಲು ನಿರ್ಧರಿಸಿದ್ದೇವೆ. ಅಂದರೆ, ಸಮುದಾಯ ಶೌಚಾಲಯಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು(ಗ್ರೇ ವಾಟರ್) ನಿರ್ವಹಣೆ, ಗೋಬರ್ ಧನ್ ಯೋಜನೆಗಳಂತಹ ಸೌಲಭ್ಯಗಳನ್ನು ಗ್ರಾಮಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ನಿಟ್ಟಿನಲ್ಲಿ ದೇಶವೂ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ ಒಂದು ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಬಯಲು ಬಹಿರ್ದೆಶೆ ಮುಕ್ತ (ಒ.ಡಿ.ಎಫ್.) ಪ್ಲಸ್ ಆಗಿವೆ. ಈ ಮೂರು ಪ್ರಮುಖ ಮೈಲಿಗಲ್ಲುಗಳನ್ನು ದಾಟಿದ್ದಕ್ಕಾಗಿ ಎಲ್ಲಾ ರಾಜ್ಯಗಳು ಮತ್ತು ಗ್ರಾಮಗಳಿಗೆ ಅಭಿನಂದನೆಗಳು.

 

ಸ್ನೇಹಿತರೇ,

 

ಇಂದು, 21 ನೇ ಶತಮಾನದ ದೊಡ್ಡ ಸವಾಲುಗಳಲ್ಲಿ ಒಂದು ನೀರಿನ ಭದ್ರತೆ ಎಂದು ವಿಶ್ವದ ಪ್ರಮುಖ ಸಂಸ್ಥೆಗಳು ತಮ್ಮ ವರದಿಯಲ್ಲಿ ಹೇಳುತ್ತಿವೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುವಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಕೊರತೆಯೂ ದೊಡ್ಡ ಅಡಚಣೆಯಾಗಬಹುದು. ಜನಸಾಮಾನ್ಯರು, ಬಡವರು, ಮಧ್ಯಮ ವರ್ಗದವರು, ರೈತರು ಮತ್ತು ಕೈಗಾರಿಕೆಗಳು, ಎಲ್ಲರೂ ನೀರಿಲ್ಲದೆ ನರಳುತ್ತಿದ್ದಾರೆ. ಈ ದೊಡ್ಡ ಸವಾಲನ್ನು ಎದುರಿಸಲು, ಸೇವೆ ಮತ್ತು ಕರ್ತವ್ಯ ಪ್ರಜ್ಞೆಯೊಂದಿಗೆ ಹಗಲಿರುಳು ಕೆಲಸ ಮಾಡುವ ಅಗತ್ಯವಿದೆ. ನಮ್ಮ ಸರ್ಕಾರ ಕಳೆದ ಎಂಟು ವರ್ಷಗಳಿಂದ ಈ ಸ್ಫೂರ್ತಿಯೊಂದಿಗೆ ಜಲ ಭದ್ರತೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ತೊಡಗಿದೆ. ಸರ್ಕಾರ ರಚಿಸಲು ಕಷ್ಟಪಡಬೇಕಾಗಿಲ್ಲ, ಆದರೆ ದೇಶವನ್ನು ಕಟ್ಟಲು ಕಷ್ಟಪಡಲೇ ಬೇಕೆಂಬುದು ನಿಜ. ಮತ್ತು ನಮ್ಮ ದೇಶ ಕಟ್ಟುವ ಕಾರ್ಯವು ಎಲ್ಲರ ಪ್ರಯತ್ನದಿಂದ ನಡೆಯುತ್ತದೆ. ನಾವೆಲ್ಲರೂ ದೇಶವನ್ನು ಅಭಿವೃದ್ಧಿಪಡಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ ಮತ್ತು ಆದ್ದರಿಂದ, ನಾವು ದೇಶದ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ನಿರಂತರವಾಗಿ ಪರಿಹರಿಸುತ್ತಿದ್ದೇವೆ. ದೇಶದ ಬಗ್ಗೆ ಕಾಳಜಿ ಇಲ್ಲದವರು ದೇಶದ ವರ್ತಮಾನ ಅಥವಾ ಭವಿಷ್ಯವನ್ನು ಹಾಳು ಮಾಡಿಕೊಂಡರೂ ಪರವಾಗಿಲ್ಲ ಎಂಬ ಧೋರಣೆ ಹೊಂದಿದ್ದಾರೆ. ಅಂತಹ ಜನರು ಖಂಡಿತವಾಗಿಯೂ ನೀರಿಗಾಗಿ ದೊಡ್ಡದೊಡ್ಡ ಭರವಸೆಗಳನ್ನು ನೀಡಬಹುದು, ಆದರೆ ನೀರಿನ ಬಗ್ಗೆ ದೊಡ್ಡ ಸಂಕಲ್ಪ ಮತ್ತು ದೂರದೃಷ್ಟಿಯೊಂದಿಗೆ ಕೆಲಸ ಮಾಡಲು ಅವರಿಂದ ಸಾಧ್ಯವಿಲ್ಲ.

 

ಸ್ನೇಹಿತರೇ,   

 

ಸ್ವಾತಂತ್ರ್ಯದ ‘ಅಮೃತ ಕಾಲ’ದ ಸಂದರ್ಭದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಭಾರತದ ಪ್ರಗತಿಗೆ ಸವಾಲಾಗದಂತೆ ಜಲ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ. ಮಳೆ ನೀರು ಸಂಗ್ರಹ ( ಕ್ಯಾಚ್ ದಿ ರೈನ್), ಅಟಲ್ ಭುಜಲ್ ಯೋಜನೆ, ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳ ನಿರ್ಮಾಣ, ನದಿಗಳ ಜೋಡಣೆ, ಅಥವಾ ಜಲ ಜೀವನ್ ಮಿಷನ್, ಈ ಎಲ್ಲಾ ಯೋಜನೆಗಳ ಗುರಿ ದೇಶದ ಜನರಿಗೆ ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು. ಇದೀಗ ಭಾರತದಲ್ಲಿ ರಾಮ್ಸರ್ ಸೈಟ್ಗಳ ಸಂಖ್ಯೆ 75 ಕ್ಕೆ ಏರಿದೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ಬಂದಿತ್ತು. ಈ ಪೈಕಿ ಕಳೆದ ಎಂಟು ವರ್ಷಗಳಲ್ಲಿ 50 ಸೈಟ್ಗಳನ್ನು ಸೇರಿಸಲಾಗಿದೆ. ಅಂದರೆ, ಭಾರತವು ಜಲ ಭದ್ರತೆಗಾಗಿ ಸರ್ವಾಂಗೀಣ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅದು ಪ್ರತಿ ದಿಕ್ಕಿನಲ್ಲಿಯೂ ಫಲಿತಾಂಶಗಳನ್ನು ಪಡೆಯುತ್ತಿದೆ.

 

ಸ್ನೇಹಿತರೇ,

 

ನೀರು ಮತ್ತು ಪರಿಸರದ ಬಗೆಗಿನ ಅದೇ ಬದ್ಧತೆಯು ಜಲ ಜೀವನ್ ಮಿಷನ್ ನ ಮೈಲಿಗಲ್ಲಿನಲ್ಲೂ ಪ್ರತಿಫಲಿಸುತ್ತದೆ, ಈ ಯೋಜನೆಯಡಿಯಲ್ಲಿ 10 ಕೋಟಿ ಜನರಿಗೆ ಕೊಳವೆ ನಳ್ಳಿ ಮೂಲಕ ಕುಡಿಯುವ ಶುದ್ಧ ನೀರು ಒದಗಿಸಲಾಗಿದೆ. ‘ಅಮೃತ್ ಕಾಲ್’ಗೆ ಇದಕ್ಕಿಂತ ಉತ್ತಮ ಆರಂಭ ಇರಲಾರದು. ಕೇವಲ ಮೂರು ವರ್ಷಗಳಲ್ಲಿ ಏಳು ಕೋಟಿ ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಳ್ಳಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇದು ಸಾಮಾನ್ಯ ಸಾಧನೆಯಲ್ಲ. ಕಳೆದ ಏಳು ದಶಕಗಳಲ್ಲಿ ದೇಶದ ಮೂರು ಕೋಟಿ ಗ್ರಾಮೀಣ ಕುಟುಂಬಗಳಿಗೆ ಮಾತ್ರ ನಳ್ಳಿ ನೀರು ಲಭ್ಯವಾಗಿತ್ತು. ದೇಶದಲ್ಲಿ ಸುಮಾರು 16 ಕೋಟಿ ಗ್ರಾಮೀಣ ಕುಟುಂಬಗಳಿದ್ದು, ನೀರಿಗಾಗಿ ಹೊರಗಿನ ಮೂಲಗಳನ್ನು ಅವಲಂಬಿಸಬೇಕಾಯಿತು. ಈ ಮೂಲಭೂತ ಅಗತ್ಯಕ್ಕಾಗಿ ಹೆಣಗಾಡುತ್ತಿರುವ ಹಳ್ಳಿಗಳ ಇಷ್ಟು ದೊಡ್ಡ ಜನಸಂಖ್ಯೆಯನ್ನು ನಾವು ಬಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿ ಮನೆಗೆ ಕೊಳವೆಯ ನಳ್ಳಿ ನೀರು ಕೊಡುವುದಾಗಿ ಕೆಂಪುಕೋಟೆಯಿಂದ ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದೆ. ಹೊಸ ಸರ್ಕಾರ ರಚನೆಯಾದ ನಂತರ ನಾವು ಜಲಶಕ್ತಿಗಾಗಿ ಪ್ರತ್ಯೇಕ ಸಚಿವಾಲಯ ಮಾಡಿದ್ದೇವೆ. ಈ ಅಭಿಯಾನಕ್ಕೆ ಸುಮಾರು 3.60 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 100 ವರ್ಷಗಳ ಇತಿಹಾಸದಲ್ಲಿ ಕಂಡ ಅತಿದೊಡ್ಡ ಸಾಂಕ್ರಾಮಿಕ ರೋಗದಿಂದ ಉಂಟಾದ ಸಮಸ್ಯೆಗಳ ಹೊರತಾಗಿಯೂ, ಈ ಅಭಿಯಾನದ ವೇಗವು ಕಡಿಮೆಯಾಗಲಿಲ್ಲ, ತೀವ್ರತೆ ಕುಂಠಿತವಾಗಲಿಲ್ಲ. ಈ ಸತತ ಪ್ರಯತ್ನದ ಫಲವೇನೆಂದರೆ ಏಳು ದಶಕಗಳಿಗೆ ಹೋಲಿಸಿದರೆ ದೇಶ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟು ಕೆಲಸ ಮಾಡಿದೆ. ಇದು, ನಾನು ಈ ಬಾರಿ ಕೆಂಪು ಕೋಟೆಯಿಂದ ಪ್ರಸ್ತಾಪಿಸಿದ ಅದೇ ಜನಕೇಂದ್ರಿತ ಅಭಿವೃದ್ಧಿಯ ಉದಾಹರಣೆಯಾಗಿದೆ. ಪ್ರತಿ ಮನೆಗೆ ನೀರು ಬಂದಾಗ, ನಮ್ಮ ಸಹೋದರಿಯರು ಮತ್ತು ಭವಿಷ್ಯದ ಪೀಳಿಗೆಗಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಮತ್ತು ಅಪೌಷ್ಟಿಕತೆಯ ವಿರುದ್ಧ ನಮ್ಮ ಹೋರಾಟವು ಬಲಗೊಳ್ಳುತ್ತದೆ. ನೀರಿನ ಪ್ರತಿಯೊಂದು ಸಮಸ್ಯೆಯಿಂದಲೂ ನಮ್ಮ ತಾಯಂದಿರು ಮತ್ತು ಸಹೋದರಿಯರು ಹೆಚ್ಚು ಬಳಲುತ್ತಿದ್ದಾರೆ. ಆದ್ದರಿಂದ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಕಾರ್ಯಾಚರಣೆಯ ಕೇಂದ್ರಬಿಂದುವಾಗಿದ್ದಾರೆ. ಶುದ್ಧ ಕುಡಿಯುವ ನೀರು ತಲುಪಿದ ಮನೆಗಳಲ್ಲಿ ಈಗ ಸಹೋದರಿಯರ ಸಮಯ ಉಳಿತಾಯವಾಗುತ್ತಿದೆ. ಕಲುಷಿತ ನೀರಿನಿಂದ ಕುಟುಂಬಗಳ ಮಕ್ಕಳಿಗೆ ಬರುವ ರೋಗಗಳೂ ಕಡಿಮೆಯಾಗಿವೆ  

 

 

ಸ್ನೇಹಿತರೇ,

 

ಜಲ ಜೀವನ್ ಮಿಷನ್ ನಿಜವಾದ ಪ್ರಜಾಪ್ರಭುತ್ವದ ಉತ್ತಮ ಉದಾಹರಣೆಯಾಗಿದೆ, ಪೂಜ್ಯ ಬಾಪು ಅವರು ಕನಸು ಕಂಡ ಗ್ರಾಮ ಸ್ವರಾಜ್. ನಾನು ಗುಜರಾತ್ ನಲ್ಲಿದ್ದಾಗ ಕಚ್ ಜಿಲ್ಲೆಯ ತಾಯಂದಿರು ಮತ್ತು ಸಹೋದರಿಯರಿಗೆ ನೀರಿನ ಅಭಿವೃದ್ಧಿ ಕಾರ್ಯಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು ಎಂದು ನನಗೆ ನೆನಪಿದೆ. ಈ ಪ್ರಯೋಗ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯೂ ಸಿಕ್ಕಿದೆ. ಇಂದು ಅದೇ ಪ್ರಯೋಗವು ಜಲ ಜೀವನ್ ಮಿಷನ್ ನ ಪ್ರಮುಖ ಪ್ರೇರಣೆಯಾಗಿದೆ. ಜಲ ಜೀವನ್ ಮಿಷನ್ ಕೇವಲ ಸರ್ಕಾರದ ಯೋಜನೆ ಅಲ್ಲ, ಆದರೆ ಇದು ಸಮುದಾಯಕ್ಕಾಗಿ ಸಮುದಾಯ ನಡೆಸುವ ಯೋಜನೆಯಾಗಿದೆ.   

 

 

ಸ್ನೇಹಿತರೇ,

 

ಜಲ ಜೀವನ್ ಮಿಷನ್ನ ಯಶಸ್ಸಿಗೆ ಕಾರಣ ಅದರ ನಾಲ್ಕು ಬಲವಾದ ಸ್ತಂಭಗಳೆಂದರೆ, ಮೊದಲನೆಯದು - ಜನರ ಭಾಗವಹಿಸುವಿಕೆ; ಎರಡನೆಯದು - ಪ್ರತಿ ಪಾಲುದಾರರ ಸಮರ್ಪಕ ಪಾಲುದಾರಿಕೆ; ಮೂರನೆಯದು - ರಾಜಕೀಯ ಇಚ್ಛೆ; ಮತ್ತು ನಾಲ್ಕನೆಯದು- ಸಂಪನ್ಮೂಲಗಳ ಅತ್ಯುತ್ತಮ ಬಳಕೆ.

 

ಸಹೋದರ ಸಹೋದರಿಯರೇ,

 

ಪಂಚಾಯತ್ಗಳು, ಗ್ರಾಮ ಸಭೆಗಳು, ಗ್ರಾಮಗಳ ಸ್ಥಳೀಯ ಜನರನ್ನು ಜಲ ಜೀವನ್ ಮಿಷನ್ ನಲ್ಲಿ ಸೇರಿಸಿಕೊಂಡು ಹಲವಾರು ಜವಾಬ್ದಾರಿಗಳನ್ನು ವಹಿಸಿದ ರೀತಿ ಅಭೂತಪೂರ್ವವಾಗಿದೆ. ಪ್ರತಿ ಮನೆಗೂ ಕೊಳವೆ ಮೂಲಕ ನಳ್ಳಿಯಲ್ಲಿ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಗ್ರಾಮಗಳ ಜನರ ಸಹಕಾರ ಪಡೆಯಬೇಕು. ಗ್ರಾಮಸ್ಥರೇ ತಮ್ಮ ಗ್ರಾಮಗಳಲ್ಲಿ ನೀರಿನ ಭದ್ರತೆಗಾಗಿ ಗ್ರಾಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ನೀರಿನ ಬೆಲೆಯನ್ನೂ ಹಳ್ಳಿಗಳ ಜನರೇ ನಿರ್ಧರಿಸುತ್ತಿದ್ದಾರೆ. ಹಳ್ಳಿಗಳ ಜನರೂ ನೀರಿನ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಜಲಸಮಿತಿಗಳಲ್ಲಿ ಕನಿಷ್ಠ ಶೇಕಡ 50ರಷ್ಟು ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ. ಶೀಘ್ರ ಕಾಮಗಾರಿ ನಡೆಯಬೇಕಾದ ಬುಡಕಟ್ಟು ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜಲ ಜೀವನ್ ಮಿಷನ್ ನ ಎರಡನೇ ಸ್ತಂಭವೆಂದರೆ ಪಾಲುದಾರಿಕೆ. ರಾಜ್ಯ ಸರ್ಕಾರಗಳು, ಪಂಚಾಯತ್ ಗಳು, ಸ್ವಯಂಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲಾ ತಳಮಟ್ಟದಲ್ಲಿ ಜಲ ಜೀವನ್ ಮಿಷನ್ ನಿಂದಾಗಿ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.  

 

ಸ್ನೇಹಿತರೇ,

ರಾಜಕೀಯ ಇಚ್ಛಾಶಕ್ತಿಯು ಜಲ ಜೀವನ್ ಮಿಷನ್ನ ಯಶಸ್ಸಿನ ಮೂರನೇ ಮುಖ್ಯ ಸ್ತಂಭವಾಗಿದೆ. ಕಳೆದ 70 ವರ್ಷಗಳಲ್ಲಿ ಏನನ್ನು ಸಾಧಿಸಬಹುದಿತ್ತೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದನ್ನು ನಾವು ಏಳು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಇದು ಕಷ್ಟಕರವಾದ ಗುರಿಯಾಗಿದೆ, ಆದರೆ ಭಾರತದ ಜನರು ಒಮ್ಮೆ ನಿರ್ಧರಿಸಿದರೆ ಸಾಧಿಸಲು ಸಾಧ್ಯವಾಗದ ಯಾವುದೇ ಗುರಿ ಇಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಪಂಚಾಯತ್ಗಳು ಈ ಅಭಿಯಾನವನ್ನು ತ್ವರಿತವಾಗಿ ಪೂರ್ಣಗೊಳಿಸಲು ತೊಡಗಿವೆ. ಜಲ ಜೀವನ್ ಮಿಷನ್ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗೆ ಸಮಾನ ಒತ್ತು ನೀಡುತ್ತಿದೆ. ಜಲ ಜೀವನ್ ಮಿಷನ್ ಗೆ ಉತ್ತೇಜನ ನೀಡುವ ಎಂ.ಎನ್.ಆರ್.ಇ.ಜಿ.ಎ. (ಮನ್ರೇಗಾ) ನಂತಹ ಯೋಜನೆಗಳಿಂದಲೂ ಕೂಡಾ ಸಹಾಯವನ್ನು ಪಡೆಯಲಾಗುತ್ತಿದೆ. ಈ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳು ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಮಿಷನ್ ನ ಒಂದು ಪ್ರಯೋಜನವೆಂದರೆ ಪ್ರತಿ ಮನೆಗೆ ನಳ್ಳಿ ನೀರು ಬಂದಾಗ, ಎಲ್ಲಡೆ ಸಮಾನತೆಯ ಸಮತೋಲನ ಇರುತ್ತದೆ ಮತ್ತು ಪಕ್ಷಪಾತದ ಒಲವು ಮತ್ತು ತಾರತಮ್ಯದ ವ್ಯಾಪ್ತಿಯು ಕೊನೆಗೊಳ್ಳುತ್ತದೆ.

 

ಸ್ನೇಹಿತರೇ,

ಈ ಅಭಿಯಾನದ ಸಮಯದಲ್ಲಿ, ಹೊಸ ನೀರಿನ ಮೂಲಗಳು, ಟ್ಯಾಂಕ್ಗಳು, ನೀರಿನ ಸಂಸ್ಕರಣಾ ಘಟಕಗಳು ಮತ್ತು ಪಂಪ್ ಹೌಸ್ಗಳನ್ನು ಸಹ ಜಿಯೋ ಟ್ಯಾಗ್ ಮಾಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಬಳಕೆ ಅಂದರೆ ಇಂಟರ್ನೆಟ್ ಬಳಸಿ ನೀರು ಸರಬರಾಜು ಮತ್ತು ಗುಣಮಟ್ಟವನ್ನು ಮೇಲ್ವಿಚಾರಣೆ ಹಾಗೂ ಪರಿಹಾರಗಳ ವ್ಯವಸ್ಥೆಗಳು (ಇಂಟರ್ನೆಟ್ ಆಫ್ ಥಿಂಗ್ಸ್ ಸೊಲ್ಯೂಷನ್ಸ್) ಸಹ ಪ್ರಾರಂಭವಾಗಿದೆ. ಅಂದರೆ, ಮಾನವಶಕ್ತಿಯ ಶಕ್ತಿ, ಮಹಿಳಾ ಶಕ್ತಿ ಮತ್ತು ತಂತ್ರಜ್ಞಾನವು ಒಟ್ಟಾಗಿ ಜಲ ಜೀವನ್ ಮಿಷನ್ ಅನ್ನು ಸಶಕ್ತಗೊಳಿಸುತ್ತಿವೆ. ಇಡೀ ದೇಶವು ಶ್ರಮಿಸುತ್ತಿರುವ ರೀತಿಯಲ್ಲಿ ನಾವು ಖಂಡಿತವಾಗಿಯೂ ಪ್ರತಿ ಮನೆಗೆ ನೀರಿನ ಗುರಿಯನ್ನು ಸಾಧಿಸುತ್ತೇವೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.

 

ಮತ್ತೊಮ್ಮೆ, ಈ ಮಹಾನ್ ಯಶಸ್ಸಿಗಾಗಿ ನಾನು ಗೋವಾ, ಗೋವಾ ಸರ್ಕಾರ ಮತ್ತು ಗೋವಾ ನಾಗರಿಕರನ್ನು ಅಭಿನಂದಿಸುತ್ತೇನೆ. ಮೂರು ವರ್ಷಗಳ ಹಿಂದಿನ ಕೆಂಪು ಕೋಟೆಯ ಕನಸನ್ನು, ಗ್ರಾಮ ಪಂಚಾಯತ್ ಗಳಿಂದ ಪ್ರಾರಂಭಿಸಿ ಎಲ್ಲಾ ಸಂಸ್ಥೆಗಳ ಸಹಾಯದಿಂದ ಸಾಕಾರಗೊಳಿಸಲಾಗುತ್ತಿದೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ನಾನು ಮತ್ತೊಮ್ಮೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರುತ್ತೇನೆ ಮತ್ತು ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ. ತುಂಬಾ ಧನ್ಯವಾದಗಳು.

 

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಇಂಗ್ಲೀಷ್ ಭಾಷಾಂತರದ ಕನ್ನಡ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(Release ID: 1853321) Visitor Counter : 149