ಸಂಪುಟ
ಮೂರು ಲಕ್ಷ ರೂಪಾಯಿಗಳವರೆಗಿನ ಅಲ್ಪಾವಧಿ ಕೃಷಿ ಸಾಲದ ಮೇಲೆ ವಾರ್ಷಿಕ ಶೇ.1.5ರಷ್ಟು ಬಡ್ಡಿ ಸಹಾಯಧನ ನೀಡಲು ಸಂಪುಟದ ಅನುಮೋದನೆ
ಈ ಯೋಜನೆಯಡಿ 2022-23 ರಿಂದ 2024-25 ರವರೆಗೆ 34,856 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಗೆ ಅವಕಾಶ
ರೈತರಿಗೆ ಕೃಷಿ ವಲಯದಲ್ಲಿ ಸಾಕಷ್ಟು ಸಾಲದ ಹರಿವನ್ನು ಖಚಿತಪಡಿಸಲಿರುವ ನಿರ್ಧಾರ
Posted On:
17 AUG 2022 3:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲಾ ಹಣಕಾಸು ಸಂಸ್ಥೆಗಳು ಅಲ್ಪಾವಧಿ ಕೃಷಿ ಸಾಲಗಳ ಮೇಲೆ ಶೇ.1.5ರಷ್ಟು ಬಡ್ಡಿ ಸಹಾಯಧನದ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಹೀಗಾಗಿ, ರೈತರಿಗೆ 3 ಲಕ್ಷ ರೂ.ಗಳವರೆಗಿನ ಅಲ್ಪಾವಧಿ ಕೃಷಿ ಸಾಲ ನೀಡಲು, ಸಾಲ ನೀಡಿಕೆ ಸಂಸ್ಥೆಗಳಿಗೆ (ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ನೇರವಾಗಿ ವಾಣಿಜ್ಯ ಬ್ಯಾಂಕುಗಳೊಂದಿಗೆ ವಿಲೀನಗೊಂಡ ಗಣಕೀಕೃತ ಪಿಎಸಿಎಸ್) 2022-23 ರಿಂದ 2024-25 ರ ಹಣಕಾಸು ವರ್ಷದಲ್ಲಿ ಶೇ.1.5 ಬಡ್ಡಿ ಸಹಾಯಧನವನ್ನು ಒದಗಿಸಲಾಗುವುದು.
ಬಡ್ಡಿ ಸಹಾಯಧನ ಬೆಂಬಲದಲ್ಲಿನ ಈ ಹೆಚ್ಚಳಕ್ಕೆ ಈ ಯೋಜನೆಯಡಿ 2022-23 ರಿಂದ 2024-25 ರವರೆಗೆ 34,856 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಹಂಚಿಕೆಯ ಅಗತ್ಯವಿದೆ.
ಪ್ರಯೋಜನಗಳು:
ಬಡ್ಡಿ ಸಹಾಯಧನದ ಹೆಚ್ಚಳವು ಕೃಷಿ ವಲಯದಲ್ಲಿ ಸಾಲದ ಹರಿವಿನ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ ಮತ್ತು ಸಾಲ ನೀಡುವ ಸಂಸ್ಥೆಗಳ ವಿಶೇಷವಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಆರ್ಥಿಕ ಆರೋಗ್ಯ ಮತ್ತು ಕಾರ್ಯಸಾಧ್ಯತೆಯನ್ನು ಖಚಿತಪಡಿಸುತ್ತದೆ ಜೊತೆಗೆ, ಗ್ರಾಮೀಣ ಆರ್ಥಿಕತೆಯಲ್ಲಿ ಸಾಕಷ್ಟು ಕೃಷಿ ಸಾಲವನ್ನು ಖಚಿತಪಡಿಸುತ್ತದೆ.
ಬ್ಯಾಂಕುಗಳು ನಿಧಿಗಳ ವೆಚ್ಚದ ಹೆಚ್ಚಳವನ್ನು ತಾಳಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅಲ್ಪಾವಧಿ ಕೃಷಿ ಅಗತ್ಯಗಳಿಗಾಗಿ ರೈತರಿಗೆ ಸಾಲಗಳನ್ನು ನೀಡಲು ಮತ್ತು ಹೆಚ್ಚಿನ ರೈತರು ಕೃಷಿ ಸಾಲದ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡಲು ಪ್ರೋತ್ಸಾಹಿಸುತ್ತದೆ. ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅಲ್ಪಾವಧಿಯ ಕೃಷಿ ಸಾಲಗಳನ್ನು ಒದಗಿಸುವುದರಿಂದ ಇದು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
ಸಕಾಲದಲ್ಲಿ ಸಾಲವನ್ನು ಮರುಪಾವತಿಸುವ ಸಂದರ್ಭದಲ್ಲಿ ರೈತರು ವಾರ್ಷಿಕ ಶೇ.4ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಸಾಲವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.
ಹಿನ್ನೆಲೆ:
ರೈತರಿಗೆ ಅಗ್ಗದ ದರದಲ್ಲಿ ತೊಂದರೆಯಿಲ್ಲದ ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಭಾರತ ಸರ್ಕಾರದ ಮೊದಲ ಆದ್ಯತೆಯಾಗಿದೆ. ಅದರಂತೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ರೈತರಿಗಾಗಿ ಪರಿಚಯಿಸಲಾಯಿತು, ಯಾವುದೇ ಸಮಯದಲ್ಲಿ ಸಾಲದ ಮೇಲೆ ಕೃಷಿ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಅವರನ್ನು ಸಶಕ್ತರನ್ನಾಗಿ ಮಾಡಲಾಯಿತು. ರೈತರು ಬ್ಯಾಂಕಿಗೆ ಕನಿಷ್ಠ ಬಡ್ಡಿದರವನ್ನು ಪಾವತಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ಬಡ್ಡಿ ಸಹಾಯಧನ ಯೋಜನೆಯನ್ನು (ಐಎಸ್ಎಸ್) ಪರಿಚಯಿಸಿತು, ಇದನ್ನು ಈಗ ಮಾರ್ಪಡಿಸಿದ್ದು, ಬಡ್ಡಿ ಸಬ್ಸಿಡಿ ಯೋಜನೆ (ಎಂಐಎಸ್) ಎಂದು ಮರುನಾಮಕರಣ ಮಾಡಲಾಗಿದೆ, ಇದು ರೈತರಿಗೆ ಸಬ್ಸಿಡಿ ಸಹಿತ ಬಡ್ಡಿ ದರಗಳಲ್ಲಿ ಅಲ್ಪಾವಧಿ ಸಾಲವನ್ನು ಒದಗಿಸುತ್ತದೆ.
ಈ ಯೋಜನೆಯಡಿಯಲ್ಲಿ, ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಇತರ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ವಾರ್ಷಿಕ ಶೇ.7ರ ದರದಲ್ಲಿ 3.00 ಲಕ್ಷ ರೂ.ಗಳವರೆಗಿನ ಅಲ್ಪಾವಧಿ ಕೃಷಿ ಸಾಲ ಲಭ್ಯವಿದೆ. ಸಾಲಗಳ ತ್ವರಿತ ಮತ್ತು ಸಕಾಲಿಕ ಮರುಪಾವತಿಗಾಗಿ ರೈತರಿಗೆ ಹೆಚ್ಚುವರಿ ಶೇ.3ರ ಬಡ್ಡಿ ಸಹಾಯಧನವನ್ನು (ತ್ವರಿತ ಮರುಪಾವತಿ ಪ್ರೋತ್ಸಾಹಕ – ಪಿಆರ್.ಐ) ಸಹ ನೀಡಲಾಗುತ್ತದೆ. ಆದ್ದರಿಂದ, ಒಬ್ಬ ರೈತನು ತನ್ನ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ, ಅವನು ವಾರ್ಷಿಕ ಶೇ.4 ದರದಲ್ಲಿ ಸಾಲವನ್ನು ಪಡೆದಂತಾಗುತ್ತದೆ. ರೈತರಿಗೆ ಈ ಸೌಲಭ್ಯವನ್ನು ಸಾಕಾರಗೊಳಿಸಲು, ಭಾರತ ಸರ್ಕಾರವು ಈ ಯೋಜನೆಯನ್ನು ನೀಡುವ ಹಣಕಾಸು ಸಂಸ್ಥೆಗಳಿಗೆ ಬಡ್ಡಿ ಸಹಾಯಧನವನ್ನು (ಐ.ಎಸ್.) ಒದಗಿಸುತ್ತದೆ. ಈ ಬೆಂಬಲವು ಕೇಂದ್ರದಿಂದ ಶೇ.100ರಷ್ಟು ಧನಸಹಾಯವನ್ನು ಹೊಂದಿದೆ, ಇದು ಬಜೆಟ್ ವೆಚ್ಚ ಮತ್ತು ಫಲಾನುಭವಿಗಳ ವ್ಯಾಪ್ತಿಗೆ ಅನುಗುಣವಾಗಿ ಡಿಎ ಮತ್ತು ಎಫ್.ಡಬ್ಲ್ಯೂನ ಎರಡನೇ ಅತಿದೊಡ್ಡ ಯೋಜನೆಯಾಗಿದೆ.
ಇತ್ತೀಚೆಗೆ, ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ, 2.5 ಕೋಟಿಯ ಗುರಿಯ ವಿರುದ್ಧ 3.13 ಕೋಟಿಗೂ ಹೆಚ್ಚು ರೈತರಿಗೆ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ನೀಡಲಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ ನೋಂದಾಯಿತ ರೈತರಿಗಾಗಿ ಕೆಸಿಸಿ ಅತಿ ಗರಿಷ್ಠ ಮಟ್ಟ (ಸ್ಯಾಚುರೇಷನ್ ಡ್ರೈವ್) ನಂತಹ ವಿಶೇಷ ಉಪಕ್ರಮಗಳು ಕೆಸಿಸಿ ಮಂಜೂರು ಪಡೆಯಲು ಒಳಗೊಂಡಿರುವ ಪ್ರಕ್ರಿಯೆ ಮತ್ತು ದಾಖಲೀಕರಣವನ್ನು ಸರಳೀಕರಿಸಿದೆ.
ಬದಲಾಗುತ್ತಿರುವ ಆರ್ಥಿಕ ಸನ್ನಿವೇಶವನ್ನು, ವಿಶೇಷವಾಗಿ ಹಣಕಾಸು ಸಂಸ್ಥೆಗಳಿಗೆ ಅದರಲ್ಲೂ ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಬಡ್ಡಿದರ ಮತ್ತು ಸಾಲದ ದರಗಳಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈ ಹಣಕಾಸು ಸಂಸ್ಥೆಗಳಿಗೆ ಒದಗಿಸಲಾದ ಬಡ್ಡಿ ಸಬ್ಸಿಡಿಯ ದರವನ್ನು ಪರಾಮರ್ಶಿಸಿದೆ. ಇದು ರೈತರಿಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಲದ ಹರಿವನ್ನು ಖಚಿತಪಡಿಸುತ್ತದೆ ಮತ್ತು ಸಾಲ ನೀಡುವ ಸಂಸ್ಥೆಗಳ ಆರ್ಥಿಕ ಆರೋಗ್ಯವನ್ನು ಖಾತ್ರಿಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಸವಾಲನ್ನು ಎದುರಿಸಲು, ಭಾರತ ಸರ್ಕಾರವು ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಅಲ್ಪಾವಧಿಯ ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನವನ್ನು ಶೇ.1.5ಕ್ಕೆ ಮರುಸ್ಥಾಪಿಸಲು ಅವಕಾಶ ನೀಡಲು ನಿರ್ಧರಿಸಿದೆ.
*******
(Release ID: 1852581)
Visitor Counter : 1343
Read this release in:
Bengali
,
Assamese
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam