ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯುವ ಸಂವಾದ್ "India@2047" ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಅನುರಾಗ್ ಠಾಕೂರ್ ಭಾಷಣ


ಭಾರತೀಯ ಮೌಲ್ಯಗಳು, ನೈತಿಕತೆ, ಜ್ಞಾನ, ಮತ್ತು ಮಾದರಿಗಳನ್ನು ವಿಶ್ವಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ - ಶ್ರೀ ಧರ್ಮೇಂದ್ರ ಪ್ರಧಾನ್

ಯುವಜನತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ಒದಗಿಸುವುದಕ್ಕಾಗಿ ದೇಶಾದ್ಯಂತ ತಳಮಟ್ಟದವರೆಗೆ 750 ಯುವ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು: ಶ್ರೀ ಅನುರಾಗ್ ಠಾಕೂರ್

ಯುವಕರು ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಬೇಕು ಮತ್ತು ದೇಶವನ್ನು ವಿಶ್ವಗುರುವನ್ನಾಗಿ ಮಾಡಬೇಕು: ಕ್ರೀಡಾ ಸಚಿವರು

ಅಮೃತ ಕಾಲದಲ್ಲಿ, ಯುವಜನರು ಅಮೃತ್ ಗುರಿಗಳನ್ನು ನಿಗದಿ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಸಾಧಿಸಲು ಜವಾಬ್ದಾರಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು: ಶ್ರೀ ಠಾಕೂರ್

Posted On: 12 AUG 2022 5:18PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಯುವಜನ ವ್ಯವಹಾರಗಳು ಹಾಗು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಹೊಸ ದಿಲ್ಲಿಯಲ್ಲಿ ಯುವ ಸಂವಾದ "India@2047" ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವರಾದ ಶ್ರೀ ನಿಸಿತ್ ಪ್ರಾಮಾಣಿಕ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಾಕ್ಸರ್ ನಿಖತ್ ಜರೀನ್, ರೇಸ್ ವಾಕರ್ ಪ್ರಿಯಾಂಕಾ ಗೋಸ್ವಾಮಿ, ಭಾರತೀಯ ಹಾಕಿ ತಂಡದ ಆಟಗಾರ ಶ್ರೀ ಪಿ.ಆರ್.ಶ್ರೀಜೇಶ್, ಪರ್ವತಾರೋಹಿ ಶ್ರೀಮತಿ ಅರುಣಿಮಾ ಸಿನ್ಹಾ ಮತ್ತು ಪ್ರೇರಕ ಭಾಷಣಕಾರರಾದ ಶ್ರೀಮತಿ ಅಭಾ ಮರ್ಯಾದಾ ಬ್ಯಾನರ್ಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್ ಅವರು, ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ, ನಮ್ಮ ಯುವ ಶಕ್ತಿಯು ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮುಂದಾಳತ್ವ ವಹಿಸಿದೆ ಎಂದರು. ಶಹೀದ್ ಭಗತ್ ಸಿಂಗ್, ಶಹೀದ್ ಬಾಜಿ ರೌತ್, ರಾಣಿ ಗೈಡಿನ್ಲಿಯು ಮತ್ತು ಅವರಂತಹ ಇತರ ಅಸಂಖ್ಯಾತ ಜನರು ನಮಗೆ ಸ್ಫೂರ್ತಿ ನೀಡಿದರು ಮತ್ತು ಅವರ ಹರೆಯದಲ್ಲಿ ಮುಂಚೂಣಿಯಲ್ಲಿ ನಿಂತು ನಾಯಕತ್ವ ಒದಗಿಸಿದರು ಎಂದೂ ಅವರು ಹೇಳಿದರು. ಭಾರತವು ಶ್ರೀಮಂತ ನಾಗರಿಕತೆಯ ಬೇರುಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಉತ್ಸಾಹಶೀಲ ಯುವ ಜನಸಮುದಾಯದ ಮೇಲಿದೆ ಎಂದವರು ನುಡಿದರು.  

21 ನೇ ಶತಮಾನದಲ್ಲಿ, ಭಾರತೀಯ ಮೌಲ್ಯಗಳು, ನೈತಿಕತೆಗಳು, ಜ್ಞಾನ ಮತ್ತು ಮಾದರಿಗಳನ್ನು ವಿಶ್ವಕ್ಕೆ ಪಸರಿಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದು ಅವರು ಹೇಳಿದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ತೋರಿದ ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಉಲ್ಲೇಖಿಸಿದ ಅವರು ನಮ್ಮ ಇಂದಿನ ಯುವಕರು ವಿಶೇಷವಾಗಿ ಅಮೃತ್ ಕಾಲ್ ನ ಈ 25 ವರ್ಷಗಳಲ್ಲಿ ಭಾರತವನ್ನು ಇನ್ನಷ್ಟು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ ಅದೇ ಮನೋಭಾವ ಮತ್ತು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು, ವಿಶ್ವವು ಭಾರತದತ್ತ ಬಹಳ ಭರವಸೆಯಿಂದ ನೋಡುತ್ತಿದೆ ಎಂದೂ ಹೇಳಿದರು.

 

ದೇಶದ ಯುವಜನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರುವಂತೆಯೇ, ಅವರು ತಮ್ಮ ಕರ್ತವ್ಯಗಳು ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಜವಾಬ್ದಾರಿಗಳ ಬಗ್ಗೆಯೂ ಚಿಂತನೆ ಮಾಡುತ್ತಿರಬೇಕು, ಜಾಗರೂಕರಾಗಿರಬೇಕು ಎಂದು ಶ್ರೀ ಪ್ರಧಾನ್ ಅವರು ದೇಶದ ಯುವಜನತೆಗೆ ಮನವಿ ಮಾಡಿದರು. ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಅವರು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಎಂದೂ ಅವರು ಹೇಳಿದರು.

ನಮ್ಮ ಯುವಕರ ಪ್ರತಿಭೆ, ದೃಢತೆ ಮತ್ತು ಮನೋಭಾವವು ಪ್ರೇರಣಾದಾಯಕ ಮತ್ತು ಪ್ರೋತ್ಸಾಹದಾಯಕವಾಗಿದೆ ಎಂದು ಶ್ರೀ ಪ್ರಧಾನ್ ಹೇಳಿದರು. ವಿಶೇಷವಾಗಿ ನಾವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಮತ್ತು ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಇಂತಹ ಮಹತ್ವದ ಸಂದರ್ಭದಲ್ಲಿ ಯುವ ಸಂವಾದವನ್ನು ಆಯೋಜಿಸಿದ್ದಕ್ಕಾಗಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವಾಲಯವನ್ನು ಅವರು ಶ್ಲಾಘಿಸಿದರು. ಈ ಸಂವಾದಗಳು ದೇಶದಲ್ಲಿ ಸಕಾರಾತ್ಮಕ ಅನುಭೂತಿಯನ್ನು ಸೃಷ್ಟಿಸುತ್ತವೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್ ಅವರು, ಯುವಜನರು ದೇಶವನ್ನು ಯಶಸ್ಸಿನತ್ತ ಕೊಂಡೊಯ್ಯುವ ಎಂಜಿನ್ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸದಾ ಹೇಳುತ್ತಿರುತ್ತಾರೆ, ಅಮೃತ್ ಕಾಲದ ಈ ಸಮಯದಲ್ಲಿ ದೇಶವನ್ನು ಯಶಸ್ಸಿನ ಉತ್ತುಂಗದತ್ತ ಕೊಂಡೊಯ್ಯುವುದು ಈಗ ನಮ್ಮ ಯುವಜನತೆಯ ಕರ್ತವ್ಯವಾಗಿದೆ ಎಂದರು. ಅಮೃತ್ ಕಾಲ್ ನಲ್ಲಿ, ಯುವಕರು ಅಮೃತ್ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಈ ಗುರಿಗಳನ್ನು ಸಾಧಿಸಲು ಜವಾಬ್ದಾರಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಯುವಜನರು ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು ಮತ್ತು ದೇಶವನ್ನು ವಿಶ್ವಗುರುವನ್ನಾಗಿ ಮಾಡಬೇಕು ಎಂದೂ ಅವರು ಹೇಳಿದರು.

 

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಯುವಜನ ವ್ಯವಹಾರಗಳ ಇಲಾಖೆಯು ದೇಶಾದ್ಯಂತ ತಳಮಟ್ಟದವರೆಗೆ 750 ಯುವ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದೂ ಶ್ರೀ ಠಾಕೂರ್ ಹೇಳಿದರು. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ ಮತ್ತು ಸಬಲೀಕರಣದಂತಹ ನಾಲ್ಕು ಇ-ಗಳು (ಅಂದರೆ ಎಜ್ಯುಕೇಶನ್, ಎಂಪ್ಲಾಯಿಮೆಂಟ್, ಎಂಥ್ರಪ್ರೀನರ್ಶಿಪ್, ಎಂಪವರ್ ಮೆಂಟ್) ದೇಶದ ಯುವಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬಹಳ ಮುಖ್ಯ ಮತ್ತು ಇವು ಕೇಂದ್ರಬಿಂದುಗಳಾಗಿವೆ ಎಂದು ಸಚಿವರು ಅಭಿಪ್ರಾಯಪಟ್ಟರು. ಸ್ವಯಂಸೇವಕತನದ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಪ್ರತಿಯೊಬ್ಬ ಯುವಜನತೆಯೂ ಸ್ವಯಂಸೇವೆಯನ್ನು ಕೈಗೊಳ್ಳುವ ಮೂಲಕ ಅವರು ಅವಶ್ಯ ಅಮೂಲ್ಯ ಸೇವೆಯನ್ನು ರಾಷ್ಟ್ರಕ್ಕೆ ಸಲ್ಲಿಸಬಹುದು ಎಂದು ಹೇಳಿದರು. ಇಂಧನ ಮತ್ತು ಪರಿಸರ ಸಂರಕ್ಷಣೆ, ಫಿಟ್ ಇಂಡಿಯಾ, ಸ್ವಚ್ಛ ಭಾರತ, ಮಾದಕ ವ್ಯಸನದ ವಿರುದ್ಧದ ಅಭಿಯಾನ, ಪೋಷಣ್ ಅಭಿಯಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಯುವಜನತೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.

 

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುವಂತೆ ಶ್ರೀ ಅನುರಾಗ್ ಠಾಕೂರ್ ಅವರು ಯುವಜನತೆಯಲ್ಲಿ ಮನವಿ ಮಾಡಿದರು. ತಿರಂಗಾ 130 ಕೋಟಿ ಭಾರತೀಯರ ಏಕತೆಯ ಸಂಕೇತವಾಗಿದೆ ಎಂದು ಸಚಿವರು ಹೇಳಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಆದರೆ ಈಗ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಬೇಕಾಗಿರುವುದು ಯುವಕರಿಂದ "ಯೋಗದಾನವೇ ಹೊರತು ಬಲಿದಾನವಲ್ಲ" ಎಂದೂ ಅವರು ಹೇಳಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ವೈಎಎಸ್ ಸಹಾಯಕ ಸಚಿವರಾದ ಶ್ರೀ ನಿಸಿತ್ ಪ್ರಾಮಾಣಿಕ್ ಅವರು, ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಜಾಗತಿಕ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮುಂಚೂಣಿ ಯೋಧರಾಗಿ ಎನ್ವೈಕೆಎಸ್ ಮತ್ತು ಎನ್ಎಸ್ಎಸ್ ಸ್ವಯಂಸೇವಕರ ಪಾತ್ರವನ್ನು ಶ್ರೀ ಪ್ರಾಮಾಣಿಕ್ ಶ್ಲಾಘಿಸಿದರು. ಪ್ರಧಾನ ಮಂತ್ರಿಯವರ ಸಂಕಲ್ಪ್ ಸೆ ಸಿದ್ಧಿ ಮಂತ್ರದಿಂದ ಸ್ಫೂರ್ತಿ ಪಡೆದ ಭಾರತದ ಯುವಜನರು ಈಗ ಉದ್ಯೋಗಾಕಾಂಕ್ಷಿಗಳಿಗೆ ಬದಲಾಗಿ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಂಡಿದ್ದಾರೆ ಎಂದರು.

ಯುವಜನ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು, ಭಾರತದ ಜನಸಂಖ್ಯೆಯ ಪ್ರಮುಖ ಭಾಗವಾಗಿರುವ ಯುವಜನರು ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದರು.

 

ಸಂವಾದದಲ್ಲಿ, ಬಾಕ್ಸರ್ ನಿಖತ್ ಜರೀನ್, ರೇಸ್ ವಾಕರ್ ಪ್ರಿಯಾಂಕಾ ಗೋಸ್ವಾಮಿ, ಭಾರತೀಯ ಹಾಕಿ ತಂಡದ ಆಟಗಾರ ಶ್ರೀ ಪಿ.ಆರ್.ಶ್ರೀಜೇಶ್, ಪರ್ವತಾರೋಹಿ ಶ್ರೀಮತಿ ಅರುಣಿಮಾ ಸಿನ್ಹಾ ಮತ್ತು ಪ್ರೇರಕ ಭಾಷಣಕಾರರಾದ ಶ್ರೀಮತಿ ಅಭಾ ಮರ್ಯಾದಾ ಬ್ಯಾನರ್ಜಿ ಅವರು ಯುವಜನತೆಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶ್ರೀ ಅನುರಾಗ್ ಠಾಕೂರ್ ಅವರೂ, ಭಾಗವಹಿಸಿದ್ದ ಯುವಜನತೆಯ ಜೊತೆ ಸಂವಾದ ನಡೆಸಿದರು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ದೇಶಾದ್ಯಂತ 750 ಯುವ ಸಂವಾದ ಕಾರ್ಯಕ್ರಮಗಳು ಭಾಗವಹಿಸುವ ಯುವಜನತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವನ್ನು ಒದಗಿಸುತ್ತವೆ. ಇದಲ್ಲದೆ, ಈ ಕಾರ್ಯಕ್ರಮವು ಅವರಿಗೆ ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ.

 

**********


(Release ID: 1851602) Visitor Counter : 842