ಚುನಾವಣಾ ಆಯೋಗ
ಎಲ್ಲರೂ ಒಳಗೊಂಡಂತೆ, ಎಲ್ಲರಿಗೂ ಪ್ರವೇಶ ಸಿಗುವಂತೆ ಮತ್ತು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ನಮ್ಮ ಚುನಾವಣೆಗಳನ್ನು ನಡೆಸುವ ಸಲುವಾಗಿ ಭಾರತೀಯ ಚುನಾವಣಾ ಆಯೋಗದಿಂದ ಏಷ್ಯಾ ಪ್ರಾದೇಶಿಕ ವೇದಿಕೆಯ ವರ್ಚುವಲ್ ಸಮಾವೇಶ ಆಯೋಜನೆ
ಮೆಕ್ಸಿಕೊದ ರಾಷ್ಟ್ರೀಯ ಚುನಾವಣಾ ಸಂಸ್ಥೆ ಆಯೋಜಿಸಲಿರುವ "ಪ್ರಜಾಪ್ರಭುತ್ವಕ್ಕಾಗಿ ಜಾಗತಿಕ ಶೃಂಗಸಭೆ"ಯ ಪೂರ್ವಭಾವಿಯಾಗಿ ಏಷ್ಯಾ ಪ್ರಾದೇಶಿಕ ವೇದಿಕೆ ಸಭೆ ಆಯೋಜನೆ
ಪ್ರಜಾಪ್ರಭುತ್ವಕ್ಕಾಗಿ ಜಾಗತಿಕ ಶೃಂಗಸಭೆಯ ಭಾಗವಾಗಿ ಅಮೆರಿಕ, ಆಫ್ರಿಕಾ, ಏಷ್ಯಾ, ಯುರೋಪ್, ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕಾಗಿ 5 ಪ್ರಾದೇಶಿಕ ವೇದಿಕೆಗಳ ರಚನೆ
Posted On:
10 AUG 2022 11:56AM by PIB Bengaluru
ಎಲ್ಲರೂ ಒಳಗೊಂಡಂತೆ, ಎಲ್ಲರಿಗೂ ಪ್ರವೇಶ ಸಿಗುವಂತೆ ಮತ್ತು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ನಮ್ಮ ಚುನಾವಣೆಗಳನ್ನು ನಡೆಸುವ ಸಲುವಾಗಿ ಭಾರತೀಯ ಚುನಾವಣಾ ಆಯೋಗವು ನವದೆಹಲಿಯ ನಿರ್ವಾಚನ್ ಸದನದಲ್ಲಿ ಆಗಸ್ಟ್ 11ರಂದು ಏಷ್ಯಾ ಪ್ರಾದೇಶಿಕ ವೇದಿಕೆಯ ವರ್ಚುವಲ್ ಸಮಾವೇಶ ಆಯೋಜಿಸಿದೆ. ಮೆಕ್ಸಿಕೊದ ರಾಷ್ಟ್ರೀಯ ಚುನಾವಣಾ ಸಂಸ್ಥೆ ಮುಂಬರುವ ತಿಂಗಳಲ್ಲಿ ಆಯೋಜಿಸಲಿರುವ "ಪ್ರಜಾಪ್ರಭುತ್ವಕ್ಕಾಗಿ ಜಾಗತಿಕ ಶೃಂಗಸಭೆ"ಯ ಪೂರ್ವಭಾವಿಯಾಗಿ ಏಷ್ಯಾ ಪ್ರಾದೇಶಿಕ ವೇದಿಕೆ ಸಭೆ ಆಯೋಜಿಸಲಾಗುತ್ತಿದೆ. ಜಾಗತಿಕ ಶೃಂಗಸಭೆ ಮತ್ತು ಏಷ್ಯಾ ಪ್ರಾದೇಶಿಕ ವೇದಿಕೆ ಸಭೆಯು ಅಂತಾರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳು, ವಿಶ್ವಾದ್ಯಂತ ಇರುವ ಚುನಾವಣಾ ಸಂಸ್ಥೆಗಳ ನಡುವೆ ಸಂವಾದ, ಸಹಕಾರ(ಸಮಷ್ಟಿ ಪರಿಣಾಮ) ಸೃಷ್ಟಿಸುವ ಗುರಿ ಹೊಂದಿದೆ. ಅಲ್ಲದೆ, ಇಡೀ ವಿಶ್ವಾದ್ಯಂತ ಚುನಾವಣಾ ಪ್ರಜಾಪ್ರಭುತ್ವವನ್ನು ಬಲಪಡಿಸಲು ಬೌದ್ಧಿಕ ಮತ್ತು ಸಾಂಸ್ಥಿಕ ಚಲನಶೀಲತೆಯನ್ನು ಉತ್ತೇಜಿಸಲಿವೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಶ್ರೀ ಅನೂಪ್ ಚಂದ್ರ ಪಾಂಡೆ ಅವರು ಏಷ್ಯಾ ಪ್ರಾದೇಶಿಕ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯು ಮೆಕ್ಸಿಕೊ, ಮಾರಿಷಸ್, ಫಿಲಿಪ್ಪೀನ್ಸ್, ನೇಪಾಳ, ಉಜ್ಬೇಕಿಸ್ತಾನ್, ಮಾಲ್ಡೀವ್ಸ್‌ನ ಚುನಾವಣಾ ನಿರ್ವಹಣಾ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವಿನ ಅಂತಾರಾಷ್ಟ್ರೀಯ ಸಂಸ್ಥೆ, ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆ(ಎ-ವೆಬ್) ಮತ್ತು ಚುನಾವಣಾ ವ್ಯವಸ್ಥೆಯ ಅಂತಾರಾಷ್ಟ್ರೀಯ ಪ್ರತಿಷ್ಠಾನ(ಐಎಫ್‌ಇಎಸ್)ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಏಷ್ಯಾ ಪ್ರಾದೇಶಿಕ ವೇದಿಕೆ ಸಭೆಯಲ್ಲಿ ಪ್ರಮುಖ 2 ಕಲಾಪಗಳು ಜರುಗಲಿವೆ. ಮೊದಲ ಕಲಾಪದಲ್ಲಿ 'ಎಲ್ಲರನ್ನೂ ಒಳಗೊಂಡ ಚುನಾವಣೆಗಳು: ದೂರದ ಪ್ರದೇಶಗಳಲ್ಲಿ ಯುವಜನರು, ಮಹಿಳೆಯರು ಮತ್ತು ನಾಗರಿಕರ ಭಾಗವಹಿಸುವಿಕೆ ಹೆಚ್ಚಿಸುವುದು' ವಿಷಯ ಕುರಿತು ಸಂವಾದ ನಡೆಯಲಿದೆ. ಮಾರಿಷಸ್ ಮತ್ತು ನೇಪಾಳದ ಮುಖ್ಯ ಚುನಾವಣಾ ಆಯುಕ್ತರು ಈ ಕಲಾಪದ ಸಹ ಅಧ್ಯಕ್ಷರಾಗಿರುತ್ತಾರೆ. ಅಧಿವೇಶನದಲ್ಲಿ ಫಿಲಿಪ್ಪೀನ್ಸ್ ಚುನಾವಣಾ ಆಯೋಗ, ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವಿನ ಅಂತಾರಾಷ್ಟ್ರೀಯ ಸಂಸ್ಥೆ, ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆ(ಎ-ವೆಬ್)ಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
'ಚುನಾವಣೆಗಳಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಭಾಗವಹಿಸುವಿಕೆ ಹೆಚ್ಚಿಸುವುದು' ವಿಷಯ ಕುರಿತು ಎರಡನೇ ಕಲಾಪದಲ್ಲಿ ಸಂವಾದ ಮತ್ತು ಚರ್ಚೆಗಳ ನಡೆಯಲಿವೆ. ಫಿಲಿಪ್ಪೀನ್ಸ್ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ಉಜ್ಬೇಕಿಸ್ತಾನ ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಕಲಾಪ ಜರುಗಲಿದೆ. ನೇಪಾಳ ಮತ್ತು ಮಾಲ್ಡೀವ್ಸ್ ಚುನಾವಣಾ ಆಯೋಗ ಮತ್ತು ಚುನಾವಣಾ ವ್ಯವಸ್ಥೆಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ(ಏಷ್ಯಾ ಪೆಸಿಫಿಕ್) ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
'ಪ್ರಜಾಪ್ರಭುತ್ವಕ್ಕಾಗಿ ಜಾಗತಿಕ ಶೃಂಗಸಭೆ'ಯ ಭಾಗವಾಗಿ, ಆಫ್ರಿಕಾ, ಅಮೆರಿಕ, ಏಷ್ಯಾ, ಯುರೋಪ್ ಮತ್ತು ಅರಬ್ ರಾಷ್ಟ್ರಗಳ 5 ಪ್ರಾದೇಶಿಕ ವೇದಿಕೆಗಳನ್ನು ರಚಿಸಲಾಗಿದೆ.
"ಪ್ರಜಾಪ್ರಭುತ್ವಕ್ಕಾಗಿ ಜಾಗತಿಕ ಶೃಂಗಸಭೆ"ಯ ಪೂರ್ವಭಾವಿಯಾಗಿ ಭಾರತವು ಏಷ್ಯಾ ಪ್ರಾದೇಶಿಕ ವೇದಿಕೆ ಸಭೆ ಆಯೋಜಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಒಡ್ಡಿದ ಸವಾಲುಗಳ ನಂತರ ಚುನಾವಣಾ ನಿರ್ವಹಣಾ ಸಂಸ್ಥೆಗಳನ್ನು ಸಾಂಸ್ಥಿಕಗೊಳಿಸವುದು, ಮತ್ತು ಸಜ್ಜುಗೊಳಿಸುವುದು ಮಾತ್ರವಲ್ಲದೆ, ಬದಲಾಗುತ್ತಿರುವ ಜಾಗತಿಕ ರಾಜಕೀಯ ಪರಿಸ್ಥಿತಿ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಚುನಾವಣಾ ನಿರ್ವಹಣೆಯಲ್ಲಿ ಅವುಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.
ಪ್ರಾದೇಶಿಕ ವೇದಿಕೆ ಸಭೆಗಳ ನಿರ್ಣಯಗಳು(ಫಲಶೃತಿ) ವಿಶೇಷವಾಗಿ ಸದೃಢ ಚುನಾವಣಾ ಪ್ರಕ್ರಿಯೆಗಳ ಮೂಲಕ ವಿಶ್ವಾದ್ಯಂತ ಪ್ರಜಾಪ್ರಭುತ್ವ ಬಲಪಡಿಸಲು ಕ್ರಿಯಾಯೋಜನೆ ಮತ್ತು ಕಾರ್ಯಸೂಚಿ ರಚಿಸುವ ಗುರಿ ಹೊಂದಿವೆ. ಇಲ್ಲಿಯವರೆಗೆ, ಯುರೋಪ್, ಅಮೆರಿಕ ಮತ್ತು ಆಫ್ರಿಕಾಕ್ಕೆ ಸಂಬಂಧಿಸಿದ 3 ಪ್ರಾದೇಶಿಕ ವೇದಿಕೆ ಸಭೆಗಳು 2022 ಜೂನ್ ಮತ್ತು ಜುಲೈನಲ್ಲಿ ನಡೆದಿವೆ.
***********
(Release ID: 1850519)