ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಲ್ಡೀವ್ಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾಧ್ಯಮ ಹೇಳಿಕೆಯ ಇಂಗ್ಲಿಷ್ ಭಾಷಾಂತರ

Posted On: 02 AUG 2022 5:05PM by PIB Bengaluru

ಘನತೆವೆತ್ತ, ನನ್ನ ಮಿತ್ರ ಅಧ್ಯಕ್ಷ ಸೋಲಿ ಅವರೇ, 


ಎರಡೂ ನಿಯೋಗಗಳ ಸದಸ್ಯರೇ,


ಮಾಧ್ಯಮ ಪ್ರತಿನಿಧಿಗಳೇ,

ನಮಸ್ಕಾರ! 


ಮೊದಲಿಗೆ, ನಾನು ನನ್ನ ಸ್ನೇಹಿತರಾದ ಅಧ್ಯಕ್ಷ ಸೋಲಿ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಬಯಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸ್ನೇಹ ಸಂಬಂಧಗಳಲ್ಲಿ ಹೊಸ ಹುರುಪು ಕಂಡುಬಂದಿದೆ, ನಮ್ಮ ಆಪ್ತತೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳ ಹೊರತಾಗಿಯೂ, ನಮ್ಮ ಸಹಕಾರವು ಸಮಗ್ರ ಪಾಲುದಾರಿಕೆಯ ರೂಪವನ್ನು ಪಡೆಯುತ್ತಿದೆ.
ಸ್ನೇಹಿತರೇ, 
ಇಂದು ನಾನು ಅಧ್ಯಕ್ಷ ಸೋಲಿ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇನೆ. ನಾವು ನಮ್ಮ ದ್ವಿಪಕ್ಷೀಯ ಸಹಕಾರದ ಎಲ್ಲಾ ಆಯಾಮಗಳನ್ನು ಪರಾಮರ್ಶಿಸಿದ್ದೇವೆ ಮತ್ತು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.
ಕೆಲವೇ ಹೊತ್ತಿನ ಹಿಂದೆ, ನಾವು ಗ್ರೇಟರ್ ಮಾಲೆ ಸಂಪರ್ಕ ಯೋಜನೆಯನ್ನು ಪ್ರಾರಂಭಿಸುವುದನ್ನು ಸ್ವಾಗತಿಸಿದ್ದೇವೆ. ಇದು ಮಾಲ್ಡೀವ್ಸ್ ನ ಅತಿದೊಡ್ಡ ಮೂಲಸೌಕರ್ಯ ಯೋಜನೆಯಾಗಿದೆ. ನಾವು ಇಂದು ಗ್ರೇಟರ್ ಮಾಲೆಯಲ್ಲಿ 4೦೦೦ ಸಾಮಾಜಿಕ ವಸತಿ ಘಟಕಗಳ ನಿರ್ಮಾಣದ ಯೋಜನೆಗಳನ್ನು ಸಹ ಪರಾಮರ್ಶಿಸಿದ್ದೇವೆ. 2000 ಸಾಮಾಜಿಕ ವಸತಿ ಘಟಕಗಳಿಗೆ ನಾವು ಹೆಚ್ಚುವರಿಯಾಗಿ ಆರ್ಥಿಕ ಬೆಂಬಲವನ್ನು ಒದಗಿಸುತ್ತೇವೆ ಎಂದು ಘೋಷಿಸಲು ನಾನು ಹರ್ಷಿಸುತ್ತೇನೆ. 
ನಾವು ಹೆಚ್ಚುವರಿಯಾಗಿ 100 ದಶಲಕ್ಷ ಡಾಲರ್ ಸಾಲ (ಲೈನ್ ಆಫ್ ಕ್ರೆಡಿಟ್)ವನ್ನು ಒದಗಿಸಲು ನಿರ್ಧರಿಸಿದ್ದೇವೆ, ಇದರಿಂದ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬಹುದಾಗಿದೆ.
ಸ್ನೇಹಿತರೆ,
ಹಿಂದೂ ಮಹಾಸಾಗರದಲ್ಲಿ ಅಂತರ ದೇಶ ಅಪರಾಧ, ಭಯೋತ್ಪಾದನೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯ ಬೆದರಿಕೆ ಗಂಭೀರವಾಗಿದೆ. ಹೀಗಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಕ್ಷಣೆ ಮತ್ತು ಸುರಕ್ಷತೆಯ ಕ್ಷೇತ್ರದಲ್ಲಿನ ಆಪ್ತ ಸಂಪರ್ಕ ಇಡೀ ವಲಯದ ಶಾಂತಿ ಮತ್ತು ಸ್ಥಿರತೆಗೆ ಪ್ರಮುಖವಾಗಿದೆ. ನಾವು ಈ ಎಲ್ಲ ಸಮಾನ ಸವಾಲುಗಳ ವಿರುದ್ಧ ನಮ್ಮ ಸಹಕಾರವನ್ನು ಹೆಚ್ಚಿಸಿದ್ದೇವೆ.  ಇದು ಮಾಲ್ಡೀವ್ಸ್ ಭದ್ರತಾ ಅಧಿಕಾರಿಗಳ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಬೆಂಬಲವನ್ನು ಸಹ ಒಳಗೊಂಡಿದೆ. ಭಾರತವು ಮಾಲ್ಡೀವ್ಸ್ ಭದ್ರತಾ ಪಡೆಗೆ 24 ವಾಹನಗಳು ಮತ್ತು ಒಂದು ನೌಕಾ ದೋಣಿಯನ್ನು ಒದಗಿಸಲಿದೆ ಎಂದು ಘೋಷಿಸಲು ನಾನು ಹರ್ಷಿಸುತ್ತೇನೆ. ಮಾಲ್ದೀವ್ಸ್ ನ 61 ದ್ವೀಪಗಳಲ್ಲಿ ಪೊಲೀಸ್ ಸೌಲಭ್ಯಗಳನ್ನು ನಿರ್ಮಿಸಲು ನಾವು ಸಹಕಾರ ನೀಡಲಿದ್ದೇವೆ.
ಸ್ನೇಹಿತರೇ, 
2030 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಮಾಲ್ಡೀವ್ಸ್ ಸರ್ಕಾರ ಹೊಂದಿದೆ. ಈ ಬದ್ಧತೆಗಾಗಿ ನಾನು ಅಧ್ಯಕ್ಷ ಸೋಲಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಗುರಿಯನ್ನು ಸಾಧನೆಗಾಗಿ ಭಾರತವು ಮಾಲ್ಡೀವ್ಸ್ ಗೆ ಎಲ್ಲ ಸಾಧ್ಯ ಬೆಂಬಲವನ್ನು ನೀಡುತ್ತದೆ ಎಂಬ ಭರವಸೆ ನೀಡುತ್ತೇನೆ. ಭಾರತವು, ಒಂದು ವಿಶ್ವ, ಒಂದು ಸೂರ್ಯ, ಒಂದು ಗ್ರಿಡ್ ಎಂಬ ಉಪಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೆತ್ತಿಕೊಂಡಿದ್ದು, ಇದರ ಅಡಿಯಲ್ಲಿ ನಾವು ಮಾಲ್ಡೀವ್ಸ್ ನೊಂದಿಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.
ಸ್ನೇಹಿತರೇ,
ಇಂದು, ಭಾರತ-ಮಾಲ್ಡೀವ್ಸ್ ಪಾಲುದಾರಿಕೆಯು ಎರಡೂ ದೇಶಗಳ ನಾಗರಿಕರ ಹಿತದೃಷ್ಟಿಯಿಂದ  ಕೆಲಸ ಮಾಡುವುದಷ್ಟೇ ಅಲ್ಲದೆ, ಈ ವಲಯದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಮೂಲವೂ ಆಗುತ್ತಿದೆ. ಮಾಲ್ದೀವ್ಸ್ ನ ಯಾವುದೇ ಅಗತ್ಯ ಅಥವಾ ಬಿಕ್ಕಟ್ಟಿನಲ್ಲಿ ಭಾರತವು ಮೊದಲ ಸ್ಪಂದನೆಯ ರಾಷ್ಟ್ರವಾಗಿದೆ ಮತ್ತು ಹಾಗೆ ಮುಂದುವರಿಯುತ್ತದೆ. 
ಅಧ್ಯಕ್ಷ ಸೋಲಿ ಮತ್ತು ಅವರ ನಿಯೋಗಕ್ಕೆ ಭಾರತದಲ್ಲಿ ಆಹ್ಲಾದಕರ ಭೇಟಿಯಾಗಲಿ ಎಂದು ನಾನು ಹಾರೈಸುತ್ತೇನೆ. 
ನಿಮಗೆ ತುಂಬಾ ಧನ್ಯವಾದಗಳು.


ಘೋಷಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಭಾಷಾಂತರವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***********


(Release ID: 1847738) Visitor Counter : 101