ಪ್ರಧಾನ ಮಂತ್ರಿಯವರ ಕಛೇರಿ

44ನೇ ʻಚೆಸ್ ಒಲಿಂಪಿಯಾಡ್ʼ ಆರಂಭವನ್ನು ಘೋಷಿಸಿದ ಪ್ರಧಾನಿ


ʻಚೆಸ್ ಒಲಿಂಪಿಯಾಡ್ʼ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ; ಸ್ಪರ್ಧೆಯಲ್ಲಿ ಭಾರತವು ತನ್ನ ಅತಿದೊಡ್ಡ ತಂಡವನ್ನು ಕಣಕ್ಕಿಳಿಸುತ್ತಿದೆ

"ಚೆಸ್‌ನ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಯು ಚೆಸ್ ಕ್ರೀಡೆಯ ತವರೂರಾದ ಭಾರತದಲ್ಲಿ ನಡೆಯುತ್ತಿದೆ"

"44ನೇ ʻಚೆಸ್ ಒಲಿಂಪಿಯಾಡ್ʼ ಅನೇಕ ಪ್ರಥಮಗಳು ಮತ್ತು ದಾಖಲೆಗಳ ಪಂದ್ಯಾವಳಿಯಾಗಿದೆ"

"ತಮಿಳುನಾಡು ಭಾರತಕ್ಕೆ ʻಚೆಸ್ ಪವರ್ ಹೌಸ್ʼ ಆಗಿದೆ"

"ತಮಿಳುನಾಡು ಅತ್ಯುತ್ತಮ ಮನಸ್ಸುಗಳು, ರೋಮಾಂಚಕವಾದ ಸಂಸ್ಕೃತಿ ಮತ್ತು ವಿಶ್ವದ ಅತ್ಯಂತ ಹಳೆಯ ತಮಿಳು ಭಾಷೆಗೆ ತವರಾಗಿದೆ.

"ಭಾರತದಲ್ಲಿ ಕ್ರೀಡೆಗಳಿಗೆ ಈಗಿನ ವರ್ತಮಾನಕ್ಕಿಂತಲೂ ಉತ್ತಮ ಸಮಯ ಮತ್ತೊಂದಿಲ್ಲ"

"ಯುವ ಶಕ್ತಿ ಮತ್ತು ಸಮರ್ಥ ಪರಿಸರದ ಪರಿಪೂರ್ಣ ಮಿಶ್ರಣದೊಂದಿಗೆ ಭಾರತದ ಕ್ರೀಡಾ ಸಂಸ್ಕೃತಿ ಬಲಗೊಳ್ಳುತ್ತಿದೆ"

“ಕ್ರೀಡೆಯಲ್ಲಿ ಸೋತವರು ಯಾರೂ ಇರುವುದಿಲ್ಲ. ಅಲ್ಲಿ ವಿಜೇತರು ಮತ್ತು ಭವಿಷ್ಯದ ವಿಜೇತರು ಇರುತ್ತಾರೆ"

Posted On: 28 JUL 2022 8:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಚೆನ್ನೈನ ಜೆಎಲ್ಎನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಿದರು. ತಮಿಳುನಾಡು ರಾಜ್ಯಪಾಲ ಶ್ರೀ ಆರ್. ಎನ್. ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರದ ಸಹಾಯಕ ಸಚಿವ ಶ್ರೀ ಎಲ್. ಮುರುಗನ್ ಹಾಗೂ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(ಎಫ್.ಐ.ಡಿ.ಇ.) ಅಧ್ಯಕ್ಷ ಶ್ರೀ ಅರ್ಕೇಡಿ ಡ್ವೊರ್ಕೊವಿಚ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದಾದ್ಯಂತದ ಎಲ್ಲಾ ಆಟಗಾರರು ಮತ್ತು ಚೆಸ್ ಪ್ರೇಮಿಗಳನ್ನು ಭಾರತಕ್ಕೆ ಸ್ವಾಗತಿಸಿದರು. 'ಆಜಾದಿ ಕಾ ಅಮೃತ ಮಹೋತ್ಸವ'ದ ಸಮಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಸಂದರ್ಭದ ಮಹತ್ವವನ್ನು ಅವರು ವಿವರಿಸಿದರು. ಚೆಸ್‌ನ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಯು ಚೆಸ್‌ ಕ್ರೀಡೆಯ ತವರೂರಾದ ಭಾರತದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.
ʻ44ನೇ ಚೆಸ್ ಒಲಿಂಪಿಯಾಡ್ʼ ಅನೇಕ ಪ್ರಥಮಗಳು ಮತ್ತು ದಾಖಲೆಗಳ ಪಂದ್ಯಾವಳಿಯಾಗಿದೆ ಎಂದು ಪ್ರಧಾನಿ ಹೇಳಿದರು. ಇದೇ ಮೊದಲ ಬಾರಿಗೆ ʻಚೆಸ್ ಒಲಿಂಪಿಯಾಡ್ʼ ಅನ್ನು ಚೆಸ್‌ ಕ್ರೀಡೆಯ ಮೂಲ ಸ್ಥಳವಾದ ಭಾರತದಲ್ಲಿ ನಡೆಸಲಾಗುತ್ತಿದೆ. 3 ದಶಕಗಳಲ್ಲಿ ಮೊದಲ ಬಾರಿಗೆ ಏಷ್ಯಾದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ. ಈ ಬಾರಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ದೇಶಗಳು ಹಾಗೂ ಅತಿ ಹೆಚ್ಚಿನ ಸಂಖ್ಯೆಯ ತಂಡಗಳು ಭಾಗವಹಿಸುತ್ತಿವೆ. ಮಹಿಳಾ ವಿಭಾಗದಲ್ಲೂ ಅತಿ ಹೆಚ್ಚು ಪ್ರವೇಶಗಳಿಗೆ ಈ ಬಾರಿಯ ಪಂದ್ಯಾವಳಿ ಸಾಕ್ಷಿಯಾಗಿದೆ. ʻಚೆಸ್ ಒಲಿಂಪಿಯಾಡ್ʼನ ಮೊಟ್ಟಮೊದಲ ʻಟಾರ್ಚ್ ರಿಲೇʼಯನ್ನು ಈ ಬಾರಿ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಚೆಸ್ ಜೊತೆ ತಮಿಳುನಾಡು ಬಲವಾದ ಐತಿಹಾಸಿಕ ಸಂಬಂಧವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಅದಕ್ಕಾಗಿಯೇ ತಮಿಳುನಾಡು ಭಾರತದ ಪಾಲಿಗೆ ಚೆಸ್ನ ಶಕ್ತಿಕೇಂದ್ರವಾಗಿದೆ. ಈ ರಾಜ್ಯವು ಭಾರತದ ಅನೇಕ ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳನ್ನು ಸೃಷ್ಟಿಸಿದೆ. ಇದು ಅತ್ಯುತ್ತಮ ಮನಸ್ಸುಗಳು, ರೋಮಾಂಚಕ ಸಂಸ್ಕೃತಿ ಮತ್ತು ವಿಶ್ವದ ಅತ್ಯಂತ ಹಳೆಯ ತಮಿಳು ಭಾಷೆಗೆ ನೆಲೆಯಾಗಿದೆ ಎಂದರು.
ಕ್ರೀಡೆಯ ಸೌಂದರ್ಯವೇ ಅಂಥದ್ದು. ಏಕೆಂದರೆ ಅದು ಒಂದುಗೂಡಿಸುವ ಅಂತರ್ಗತ ಶಕ್ತಿಯನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. “ಕ್ರೀಡೆಗಳು ಜನರನ್ನು ಮತ್ತು ಸಮಾಜಗಳನ್ನು ಹತ್ತಿರವಾಗಿಸುತ್ತವೆ. ಕ್ರೀಡೆಯು ತಂಡದ ಕೆಲಸದ ಮನೋಭಾವವನ್ನು ಬೆಳೆಸುತ್ತದೆ. ಭಾರತದಲ್ಲಿ ಕ್ರೀಡೆಗಳಿಗೆ ಹಾಲಿ ವರ್ತಮಾನಕ್ಕಿಂತಲೂ ಉತ್ತಮ ಸಮಯ ಮತ್ತೊಂದಿಲ್ಲ ಎಂದು ಪ್ರಧಾನಿ ಗಮನಸೆಳೆದರು. ʻಒಲಿಂಪಿಕ್ಸ್ʼ, ʻಪ್ಯಾರಾಲಿಂಪಿಕ್ಸ್ʼ ಮತ್ತು ʻಡೀಫ್‌ಲಿಂಪ್ಲಿಕ್ಸ್‌ʼನಲ್ಲಿ ಭಾರತವು ತನ್ನ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದೆ. ಈ ಹಿಂದೆ ನಾವು ಗೆಲುವನ್ನೇ ನೋಡಿರದ ಕ್ರೀಡೆಗಳಲ್ಲಿಯೂ ನಾವು ಕೀರ್ತಿಯನ್ನು ಸಾಧಿಸಿದ್ದೇವೆ,ʼʼ ಎಂದು ಅವರು ಹೇಳಿದರು. ಯುವ ಶಕ್ತಿ ಮತ್ತು ಸಕ್ರಿಯಗೊಳಿಸುವ ಪರಿಸರ - ಈ ಎರಡೂ ಅಂಶಗಳ ಪರಿಪೂರ್ಣ ಮಿಶ್ರಣದಿಂದಾಗಿ ಭಾರತದ ಕ್ರೀಡಾ ಸಂಸ್ಕೃತಿ ಬಲಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಕ್ರೀಡೆಯಲ್ಲಿ ಸೋತವರು ಯಾರೂ ಇರುವುದಿಲ್ಲ. ವಿಜೇತರು ಮತ್ತು ಭವಿಷ್ಯದ ವಿಜೇತರು ಇರುತ್ತಾರೆ ಎಂದು ಪ್ರಧಾನಿ ಹೇಳಿದರು. `44ನೇ ಚೆಸ್ ಒಲಿಂಪಿಯಾಡ್’ನಲ್ಲಿ ಎಲ್ಲಾ ತಂಡಗಳು ಮತ್ತು ಆಟಗಾರರು ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಹಿನ್ನೆಲೆ
ಜೂನ್ 19, 2022ರಂದು ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊಟ್ಟಮೊದಲ `ಚೆಸ್ ಒಲಿಂಪಿಯಾಡ್’ ಟಾರ್ಚ್ ರಿಲೇಗೆ ಪ್ರಧಾನಮಂತ್ರಿ ಅವರು ಚಾಲನೆ ನೀಡಿದ್ದರು. ಈ ಟಾರ್ಚ್ 40 ದಿನಗಳ ಕಾಲ ದೇಶದ 75 ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಿ, ಸುಮಾರು 20,000 ಕಿಲೋಮೀಟರ್ ದೂರವನ್ನು ಕ್ರಮಿಸಿ ಮಹಾಬಲಿಪುರಂನಲ್ಲಿ ಕೊನೆಗೊಂಡಿತು.  ನಂತರ ಸ್ವಿಟ್ಜರ್ಲೆಂಡ್‌ನ ʻಎಫ್‌ಐಡಿಇʼ ಪ್ರಧಾನ ಕಚೇರಿಗೆ ತಲುಪಿತು.
ಜುಲೈ 28ರಿಂದ ಆಗಸ್ಟ್ 9, 2022ರವರೆಗೆ ಚೆನ್ನೈನಲ್ಲಿ ʻ44ನೇ ಚೆಸ್ ಒಲಿಂಪಿಯಾಡ್ʼನಡೆಯಲಿದೆ. 1927ರಿಂದಲೂ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮತ್ತು ಏಷ್ಯಾದಲ್ಲಿ ಆತಿಥ್ಯ ವಹಿಸಲಾಗುತ್ತಿದೆ. 187 ದೇಶಗಳು ಇದರಲ್ಲಿ ಭಾಗವಹಿಸುತ್ತಿವೆ. ಇದು ಯಾವುದೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುತ್ತಿರುವ ಅತಿ ಹೆಚ್ಚು ದೇಶಗಳ ಸಂಖ್ಯೆಯಾಗಿದೆ. ಭಾರತವು 30 ಆಟಗಾರರನ್ನು ಒಳಗೊಂಡ 6 ತಂಡಗಳ ಅತಿದೊಡ್ಡ ಕ್ರೀಡಾಪಡೆಯನ್ನು ಕಣಕ್ಕಿಳಿಸುತ್ತಿದೆ.

 

*********



(Release ID: 1846130) Visitor Counter : 144