ಪರಿಸರ ಮತ್ತು ಅರಣ್ಯ ಸಚಿವಾಲಯ

ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆಯ ತಿಳಿವಳಿಕೆ ಒಪ್ಪಂದಕ್ಕೆ ಭಾರತ-ನಮೀಬಿಯಾ ಸಹಿ


ಉಭಯ ದೇಶಗಳ ನಡುವೆ ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆಗೆ ತಿಳಿವಳಿಕೆ ಒಪ್ಪಂದದಲ್ಲಿ ಒತ್ತು 

ಜಾಗತಿಕ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುವ ಐತಿಹಾಸಿಕ ವಿಕಸನೀಯ ಸಮತೋಲನ ಮರುಸ್ಥಾಪಿಸಲು ಭಾರತದಲ್ಲಿ ಚಿರತೆ ಮರುಪರಿಚಯ ಯೋಜನೆ

Posted On: 20 JUL 2022 12:59PM by PIB Bengaluru

ಭಾರತ ಸರ್ಕಾರ ಮತ್ತು ನಮೀಬಿಯಾ ಗಣರಾಜ್ಯ ಸರ್ಕಾರವು ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆಯ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಭಾರತದಲ್ಲಿ ಈಗ ಐತಿಹಾಸಿಕ ಶ್ರೇಣಿಯ ಗತವೈಭವ ನೆನಪಿಸುವ ಚಿರತೆಗಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ. ಭಾರತ ಮತ್ತು ನಮೀಬಿಯಾ ನಡುವೆ ಪರಸ್ಪರ ಗೌರವ, ಸಾರ್ವಭೌಮತ್ವ, ಸಮಾನತೆ ಮತ್ತು ಉತ್ತಮ ಹಿತಾಸಕ್ತಿಯ ತತ್ವಗಳ ಆಧಾರದ ಮೇಲೆ ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆ ಉತ್ತೇಜಿಸಲು ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧ ಅಭಿವೃದ್ಧಿಪಡಿಸಲು ತಿಳಿವಳಿಕೆ ಪತ್ರವು ಅನುವು ಮಾಡಿಕೊಡುತ್ತದೆ.

 


ತಿಳಿವಳಿಕೆ ಒಪ್ಪಂದದ ಪ್ರಮುಖ ಅಂಶಗಳು: 

 

  • ಅಳಿವಿನಂಚಿನಲ್ಲಿರುವ ಚಿರತೆಗಳು ನೆಲೆಸಿದ್ದ ಹಿಂದಿನ ಪ್ರದೇಶಗಳಲ್ಲೇ ಅವುಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಯ ಮೇಲೆ ನಿರ್ದಿಷ್ಟ ಗಮನ  ಹೊಂದಿರುವ ಜೀವವೈವಿಧ್ಯ ಸಂರಕ್ಷಣೆ.
  • ಎರಡೂ ದೇಶಗಳಲ್ಲಿ ಚಿರತೆಯ ಸಂರಕ್ಷಣೆ ಉತ್ತೇಜಿಸುವ ಗುರಿ ಹೊಂದಿರುವ ಪರಿಣತಿ ಮತ್ತು ಸಾಮರ್ಥ್ಯಗಳ ಹಂಚಿಕೆ ಮತ್ತು ವಿನಿಮಯ.
  • ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯದ ಬಳಕೆ.
  • ತಾಂತ್ರಿಕ ಆನ್ವಯಿಕಗಳು (ಉಪಯೋಗಗಳು ಅಥವಾ ಪ್ರಯೋಜನಗಳು), ವನ್ಯಜೀವಿ ಆವಾಸ ಸ್ಥಾನಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಸೃಷ್ಟಿಸುವ ಕಾರ್ಯವಿಧಾನಗಳು ಮತ್ತು ಜೈವಿಕ ವೈವಿಧ್ಯದ ಸಮರ್ಥ ನಿರ್ವಹಣೆ.
  • ಹವಾಮಾನ ಬದಲಾವಣೆ, ಪರಿಸರ ಆಡಳಿತ, ಪರಿಸರ ಪ್ರಭಾವದ ಮೌಲ್ಯಮಾಪನಗಳು, ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಹಾಗೂ ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳಲ್ಲಿ ಸಹಯೋಗ.
  • ತಾಂತ್ರಿಕ ಪರಿಣತಿ ಹಂಚಿಕೊಳ್ಳುವುದು ಸೇರಿದಂತೆ ವನ್ಯಜೀವಿ ನಿರ್ವಹಣೆಯಲ್ಲಿ ತರಬೇತಿ ಮತ್ತು ಶಿಕ್ಷಣಕ್ಕಾಗಿ ಸಿಬ್ಬಂದಿ ವಿನಿಮಯ.
  •  

 


ರಾಷ್ಟ್ರೀಯ ಸಂರಕ್ಷಣಾ ನೀತಿ ಮತ್ತು ನಿರೂಪಣೆಗಳಿಗೆ ಚಿರತೆ ವಿಶೇಷವಾದ ಪ್ರಾಮುಖ್ಯ ಹೊಂದಿದೆ. ಚಿರತೆಯನ್ನು ಭಾರತಕ್ಕೆ ಮರಳಿ ತರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಸಂರಕ್ಷಣಾ ಪರಿಣಾಮಗಳನ್ನೂ ಪರಿಗಣಿಸಬೇಕಾಗುತ್ತದೆ. ಚಿರತೆ ಮರುಸ್ಥಾಪನೆಯು ಮೂಲ ಚಿರತೆಯ ಆವಾಸ ಸ್ಥಾನಗಳು ಮತ್ತು ಅವುಗಳ ಜೀವವೈವಿಧ್ಯದ ಮರುಸ್ಥಾಪನೆಗಳು ಮೂಲಮಾದರಿಯ ಭಾಗವಾಗಿದೆ. ಇದು ಜೈವಿಕ ವೈವಿಧ್ಯದ ಅವನತಿ ಮತ್ತು ತ್ವರಿತ ನಷ್ಟ  ತಡೆಯಲು ನೆರವಾಗುತ್ತದೆ.
ದೊಡ್ಡ ಪ್ರಮಾಣದ ಮಾಂಸಾಹಾರಿ ಜೀವಿಗಳಲ್ಲಿ  ಚಿರತೆ ಹಾಗು ಮಾನವನ ನಡುವಿನ ಸಂಘರ್ಷ ಕಡಿಮೆ. ಏಕೆಂದರೆ ಅವು ಮನುಷ್ಯರಿಗೆ ಅಪಾಯ ಉಂಟು ಮಾಡುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಜಾನುವಾರುಗಳ ಮೇಲೆ ದಾಳಿ ಮಾಡುವುದಿಲ್ಲ. ಅಂತೆಯೇ ಈ ಉನ್ನತ ಪರಭಕ್ಷಕವನ್ನು ಮರಳಿ ತರುವುದರಿಂದ ವಿಕಸನೀಯ ಸಮತೋಲನವನ್ನು ಮರುಸ್ಥಾಪನೆ ಸಾಧ್ಯವಾಗಲಿದೆ. ಇದರ ಪರಿಣಾಮವಾಗಿ ಪರಿಸರ ವ್ಯವಸ್ಥೆಯ ವಿವಿಧ ಹಂತಗಳ ಮೇಲೆ ಶ್ರೇಣೀಕೃತ ಪರಿಣಾಮಗಳನ್ನು ಉಂಟುಮಾಡಿ, ವನ್ಯಜೀವಿ ಮತ್ತು ಆವಾಸ ಸ್ಥಾನಗಳ (ಹುಲ್ಲುಗಾವಲುಗಳು, ಕುರುಚಲು ಪ್ರದೇಶಗಳು ಮತ್ತು ತೆರೆದ ಅರಣ್ಯ ಪರಿಸರ ವ್ಯವಸ್ಥೆಗಳು) ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ ಅಥವಾ ಕಾರಣವಾಗುತ್ತದೆ. ಚಿರತೆಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಯು ಉನ್ನತ ಪರಿಸರ ವ್ಯವಸ್ಥೆಗಳ  ವೈವಿಧ್ಯೌನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ಚಿರತೆಯ ಮರುಪರಿಚಯ ಯೋಜನೆಯ ಮುಖ್ಯ ಗುರಿಯು ದೇಶದಲ್ಲಿ ಕಾರ್ಯಸಾಧುವಾದ ಚಿರತೆ ಸಂತತಿಯನ್ನು ಸ್ಥಾಪಿಸುವುದಾಗಿದೆ. ಪರಭಕ್ಷಕ ಪ್ರಾಣಿಯಾಗಿ ಚಿರತೆ ತನ್ನ ಕಾರ್ಯಕಾರಿ ಪಾತ್ರವನ್ನು ನಿರ್ವಹಿಸಲು ಈ ಯೋಜನೆ ಅನುವು ಮಾಡಿಕೊಡುತ್ತದೆ. ಅಲ್ಲದೆ ಯೋಜನೆಯ ವ್ಯಾಪ್ತಿಯೊಳಗೆ ಚಿರತೆಯ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ ಅದರ ಜಾಗತಿಕ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ.
2010 ಮತ್ತು 2012ರ ನಡುವೆ 10 ಅರಣ್ಯ ತಾಣಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಜನಸಂಖ್ಯಾಶಾಸ್ತ್ರ, ತಳಿಶಾಸ್ತ್ರ, ಸಂಘರ್ಷ ಮತ್ತು ಜೀವನೋಪಾಯಗಳ ಸಾಮಾಜಿಕ-ಆರ್ಥಿಕತೆಯ ಪ್ರಕಾರ ಚಿರತೆ ಸಂತತಿಯನ್ನು ಮರುಪರಿಚಯಿಸುವ ಕಾರ್ಯಸಾಧ್ಯತೆಗಳಿಗೆ ಅನುಗುಣವಾಗಿ,  ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ(ಐಯುಸಿಎನ್)ದ  ಮಾರ್ಗಸೂಚಿಗಳ ಆಧಾರದ ಮೇಲೆ, ಭಾರತದಲ್ಲಿ ಚಿರತೆಯ ಸಂತತಿ ಸ್ಥಾಪಿಸುವ ಕಾರ್ಯಸಾಧ್ಯತೆಯ ಸಂಭಾವ್ಯ ತಾಣಗಳ ಮೌಲ್ಯಮಾಪನ ಮಾಡಲಾಗಿದೆ. ಏಷ್ಯಾ ಖಂಡದ ಸಿಂಹ ಎಂದೇ ಕರೆಯಲಾಗುವ ಚಿರತೆಗಳನ್ನು ಸ್ವೀಕರಿಸಲು ಮಧ್ಯಪ್ರದೇಶ ರಾಜ್ಯದ ಕುನೊ ರಾಷ್ಟ್ರೀಯ ಉದ್ಯಾನವು ಸಿದ್ಧವಾಗಿದೆ. ಈ ಸಂರಕ್ಷಿತ ಉದ್ಯಾನದಲ್ಲಿ  ಸಾಕಷ್ಟು ಹೂಡಿಕೆ ಮಾಡಿರುವ ಜತೆಗೆ, ಕನಿಷ್ಠ ನಿರ್ವಹಣೆಯ ವ್ಯವಸ್ಥೆ ಹೊಂದಿದೆ.
ದಕ್ಷಿಣ ಆಫ್ರಿಕಾದಲ್ಲಿ (ದಕ್ಷಿಣ ಆಫ್ರಿಕಾ, ನಮೀಬಿಯಾ, ಬೋಟ್ಸ್ ವಾನಾ ಮತ್ತು ಜಿಂಬಾಬ್ವೆ) ನೆಲೆಸಿರುವ ಚಿರತೆ ಸಂತತಿಯ ಸ್ಥಳಗಳ ಪೂರಕ ಪರಿಸರ, ಹವಾಮಾನ ಪರಿಸ್ಥಿತಿಗಳ ಜತೆಗೆ ಉಷ್ಣಾಂಶ ಮಾದರಿಗಳನ್ನು ಭಾರತದಲ್ಲಿ ಸಮಾನವಾದ ಸ್ಥಾಪಿತ ಸ್ಥಳವನ್ನು ರೂಪಿಸಲು ಬಳಸಲಾಗಿದೆ. ದಕ್ಷಿಣ ಆಫ್ರಿಕಾದ ಚಿರತೆಯ ಹವಾಮಾನವು ಭಾರತದಲ್ಲೂ ಇದೆ ಎಂಬುದನ್ನು  ವಿಶ್ಲೇಷಣೆ ತೋರಿಸುತ್ತಿದೆ. ಕುನೊ ರಾಷ್ಟ್ರೀಯ ಉದ್ಯಾನವು ಚಿರತೆಯ ಆವಾಸ ಸ್ಥಾನದ ಹೆಚ್ಚಿನ ಸಂಭವನೀಯತೆ ಹೊಂದಿದೆ.
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಯ ಸ್ಥಳಾಂತರಕ್ಕಾಗಿ ಕ್ರಿಯಾ ಯೋಜನೆಯನ್ನು ಐಯುಸಿಎನ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ತಾಣಗಳ ಮೌಲ್ಯಮಾಪನ ಮತ್ತು ಬೇಟೆಯ ಸಾಂದ್ರತೆಯನ್ನು ಪರಿಗಣಿಸಿ, ಕುನೊ ರಾಷ್ಟ್ರೀಯ ಉದ್ಯಾನದ ಪ್ರಸ್ತುತ ಚಿರತೆ ಸಾಗಣೆ ಸಾಮರ್ಥ್ಯ ಮತ್ತಿತರೆ ಮಾನದಂಡಗಳನ್ನು ಸಹ ಪರಿಗಣಿಸಲಾಗಿದೆ.

 


   ಕುನೊ ರಾಷ್ಟ್ರೀಯ ಉದ್ಯಾನವು ಪ್ರಸ್ತುತ 21 ಚಿರತೆಗಳನ್ನು ಸಾಕುವ, ಸಲಹುವ ಗರಿಷ್ಠ ಸಾಮರ್ಥ್ಯ ಹೊಂದಿದೆ. ಒಮ್ಮೆ ಮರುಸ್ಥಾಪಿಸಿದ ನಂತರ ಉದ್ಯಾನದ ದೊಡ್ಡ ಭೂದೃಶ್ಯವು ಸುಮಾರು 36 ಚಿರತೆಗಳನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಲಿದೆ. ಕುನೊ ವನ್ಯಜೀವಿ ವಿಭಾಗದ (1,280 ಚದರ ಕಿ.ಮೀ) ಉಳಿದ ಭಾಗವನ್ನು ಸೇರಿಸುವ ಮೂಲಕ ಚಿರತೆ ಸಾಕಣೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬಹುದು.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ ಟಿಸಿಎ)ದ ಮೂಲಕ ಭಾರತದಲ್ಲಿ ಚಿರತೆ ಮರುಪರಿಚಯ ಕಾರ್ಯಕ್ರಮಕ್ಕೆ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲ ಒದಗಿಸಲಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹೆಚ್ಚುವರಿ ಹಣಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಮೂಲಕ ಸರ್ಕಾರ ಮತ್ತು ಕಾರ್ಪೊರೇಟ್ ಏಜೆನ್ಸಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯುಐಐ), ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಂಸಾಹಾರಿ, ಚಿರತೆ ತಜ್ಞರು, ಏಜೆನ್ಸಿಗಳು ಕಾರ್ಯಕ್ರಮಕ್ಕೆ ತಾಂತ್ರಿಕ ಮತ್ತು ಜ್ಞಾನದ ಬೆಂಬಲ ಒದಗಿಸಲಿದ್ದಾರೆ.


  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಎನ್ ಟಿಸಿಎ, ಡಬ್ಲ್ಯುಐಐ,  ರಾಜ್ಯ ಅರಣ್ಯ ಇಲಾಖೆಗಳ ಅಧಿಕಾರಿಗಳು ಆಫ್ರಿಕಾದ ಚಿರತೆ ಸಂರಕ್ಷಣಾ ಮೀಸಲು ಅರಣ್ಯಗಳಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಚಿರತೆಯ ಮರುಪರಿಚಯದ ಯಶಸ್ಸನ್ನು ಖಚಿತಪಡಿಸಲು  ಸಂವೇದನಾಶೀಲರಾಗಿರುತ್ತಾರೆ. ಜತೆಗೆ, ಭಾರತೀಯ ಅರಣ್ಯ ಪಾಲಕರು ಅಥವಾ ಚಿರತೆ ಸಂರಕ್ಷಕರಿಗೆ ತರಬೇತಿ ನೀಡಲು ಆಫ್ರಿಕಾದ ಚಿರತೆ ನಿರ್ವಾಹಕರು ಮತ್ತು ಜೀವಶಾಸ್ತ್ರಜ್ಞರನ್ನು ಆಹ್ವಾನಿಸಲಾಗುತ್ತದೆ.


    ಕುನೊ ರಾಷ್ಟ್ರೀಯ ಉದ್ಯಾನ ಆಡಳಿತ ಮಂಡಳಿಯು ನಿರ್ವಹಣೆ, ರಕ್ಷಣೆ ಮತ್ತು ನಿರ್ವಹಣೆಗೆ ಅತ್ಯಗತ್ಯವಾದ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುತ್ತದೆ. ಆದರೆ ಚಿರತೆಯ ಸಂಶೋಧನಾ ತಂಡವು ಸಂಶೋಧನೆಯ ಮೇಲ್ವಿಚಾರಣೆ ಮಾಡುತ್ತದೆ. ಸ್ಥಳೀಯ ಗ್ರಾಮಸ್ಥರ ಭಾಗವಹಿಸುವಿಕೆ ಉತ್ತೇಜಿಸಲು ವಿವಿಧ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸರಪಂಚರು (ಗ್ರಾಮ ಮುಖ್ಯಸ್ಥರು), ಸ್ಥಳೀಯ ಮುಖಂಡರು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ಧಾರ್ಮಿಕ ವ್ಯಕ್ತಿಗಳು ಮತ್ತು ಎನ್‌ಜಿಒಗಳಿಗೆ ಸಂರಕ್ಷಣೆಯ ಉತ್ತಮ ಪಾಲಿನ ಜವಾಬ್ದಾರಿ ಒದಗಿಸಲಾಗುವುದು. ಶಾಲಾ ಕಾಲೇಜುಗಳು ಮತ್ತು ಹಳ್ಳಿಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಹ ಯೋಜಿಸಲಾಗಿದೆ. ಸ್ಥಳೀಯ ಪ್ರಾಣಿ  "ಚಿಂಟು ಚೀತಾ" ಎಂಬ ಹೆಸರಿನಲ್ಲಿ ಸ್ಥಳೀಯ ಸಮುದಾಯಗಳಿಗೆ ಸಾರ್ವಜನಿಕ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಚೀತಾ-ಮಾನವ ಸಂಬಂಧಗಳಿಗೆ ಸಂಬಂಧಿಸಿದಂತೆ ಮಾಹಿತಿ ಪ್ರಸಾರ ಮಾಡುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಅವರು, ಎಲ್ಲಾ ರಾಜ್ಯಗಳ ಅಧಿಕಾರಿಗಳು ಮತ್ತು ಕುನೊ ರಾಷ್ಟ್ರೀಯ ಉದ್ಯಾನದ ಸುತ್ತಲಿನ ಕ್ಷೇತ್ರಗಳಿಂದ ಆಯ್ಕೆಯಾಗಿರುವ ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಗೆ ಮನವಿ ಮಾಡಿದ್ದಾರೆ.


   2020ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಪ್ರಕಾರ, ಭಾರತದಲ್ಲಿ ಚಿರತೆಯ ಮರುಪರಿಚಯವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ ಟಿಸಿಎ)ವು ಮೇಲ್ವಿಚಾರಣೆ ಮಾಡುತ್ತಿವೆ. ಭಾರತದ ಸುಪ್ರೀಂ ಕೋರ್ಟ್‌ ಗೊತ್ತುಪಡಿಸಿದ ತಜ್ಞರ ಸಮಿತಿಯಿಂದ ಮಾರ್ಗದರ್ಶನ ಮತ್ತು ನಿರ್ದೇಶನ ನೀಡುತ್ತಿದೆ.  

C:\Users\hp\Downloads\chintu_cheetah.jpg

ಭಾರತದಲ್ಲಿ  "ಚಿರತೆಯ ಮರುಪರಿಚಯಕ್ಕಾಗಿ ಕ್ರಿಯಾಯೋಜನೆ" ಎಂಬ ಕರಪತ್ರದ ಲಿಂಕ್ ಕ್ಲಿಕ್ ಮಾಡಿ....


 

*********



(Release ID: 1843005) Visitor Counter : 455