ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav g20-india-2023

2022-23ರಲ್ಲಿ ಬಫರ್ ಸ್ಟಾಕ್‌ಗಾಗಿ ರೈತರಿಂದ ಅತ್ಯಧಿಕ 2.50 ಲಕ್ಷ ಟನ್ ಈರುಳ್ಳಿ ಖರೀದಿ ಮಾಡಲಾಗಿದೆ


"ಈರುಳ್ಳಿಯ ಪ್ರಾಥಮಿಕ ಸಂಸ್ಕರಣೆ, ಸಂಗ್ರಹಣೆ ಮತ್ತು ಬೆಲೆ ಸ್ಥೀರೀಕರಣ ತಂತ್ರಜ್ಞಾನಗಳ" ಅಭಿವೃದ್ಧಿಗಾಗಿ ಬೃಹತ್‌ ಸವಾಲು ಅಭಿಯಾನ ಪ್ರಕಟಿಸಿದ ಕೇಂದ್ರ

ಈರುಳ್ಳಿಯಲ್ಲಿ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡುವ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನವೋದ್ಯಮಗಳೊಂದಿಗೆ ತೊಡಗಿಸಿಕೊಂಡಿದೆ

Posted On: 15 JUL 2022 1:59PM by PIB Bengaluru

ಕೇಂದ್ರವು 2022-23ರಲ್ಲಿ ಬಫರ್‌ ಸ್ಟಾಕ್‌ಗಾಗಿ ಅತ್ಯಧಿಕ 2.50 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸುವ ಮೂಲಕ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿದೆ. ಪ್ರಸಕ್ತ ವರ್ಷದಲ್ಲಿ ಈರುಳ್ಳಿ ಬಫರ್ ಸ್ಟಾಕ್‌ ಪ್ರಮಾಣವು 2021-22ರಲ್ಲಿ ಇದ್ದ 2.0 ಲಕ್ಷ ಟನ್‌ಗಳಿಗಿಂತಲೂ 0.50 ಲಕ್ಷ ಟನ್ ಹೆಚ್ಚಾಗಿದೆ. ಬೆಲೆ ಸ್ಥಿರೀಕರಣ ಬಫರ್ ಸಂಗ್ರಹಕ್ಕಾಗಿ ಪ್ರಸ್ತುತ ಹಿಂಗಾರು ಸುಗ್ಗಿಯಿಂದ ಈರುಳ್ಳಿಯನ್ನು ಖರೀದಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿನ ರೈತರಿಂದ ʻರೈತ ಉತ್ಪಾದಕ ಸಂಸ್ಥೆಗಳʼ (ಎಫ್‌ಪಿಒ) ಮೂಲಕ ʻರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟʼವು (ನಾಫೆಡ್) ದಾಸ್ತಾನನ್ನು ಖರೀದಿಸಿದೆ.

ಉದ್ದೇಶಿತ ಮುಕ್ತ ಮಾರುಕಟ್ಟೆ ಮಾರಾಟದ ಮೂಲಕ ದಾಸ್ತಾನನ್ನು ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈರುಳ್ಳಿ ಪೂರೈಕೆ ಕಡಿಮೆ ಇರುವ ಮಾಸಗಳಲ್ಲಿ (ಆಗಸ್ಟ್-ಡಿಸೆಂಬರ್) ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಸರಬರಾಜು ಮಾಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸರಕಾರಿ ಏಜೆನ್ಸಿಗಳಿಗೆ ಈರುಳ್ಳಿಯನ್ನು ನೀಡಲಾಗುವುದು. ಹಿಂದಿನ ತಿಂಗಳು ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾದ ರಾಜ್ಯಗಳು / ನಗರಗಳನ್ನು ಗುರಿಯಾಗಿಸಿಕೊಂಡು ಹಾಗೂ ಒಟ್ಟಾರೆ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಮಂಡಿಗಳನ್ನು ಗುರಿಯಾಗಿಸಿಕೊಂಡು ಮುಕ್ತ ಮಾರುಕಟ್ಟೆ ಮಾಲನ್ನು ಬಿಡುಗಡೆ ಮಾಡಲಾಗುವುದು.

ಈರುಳ್ಳಿಯ ಬೆಲೆ ಸ್ಥಿರೀಕರಣ ಬಫರ್ ದಾಸ್ತಾನು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಒಂದೆಡೆ ಇದು ಈರುಳ್ಳಿ ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುತ್ತದೆ. ಮತ್ತೊಂದೆಡೆ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈರುಳ್ಳಿಯು ಕೊಂಚ ಕಾಲದ ಬಳಿಕ ಹಾಳಾಗುವ ತರಕಾರಿಯಾಗಿದೆ. ತೂಕ ನಷ್ಟ, ಕೊಳೆಯುವುದು, ಮೊಳಕೆಯೊಡೆಯುವುದು ಇತ್ಯಾದಿಗಳನ್ನು ಸುಗ್ಗಿಯ ನಂತರದ ಗಣನೀಯ ನಷ್ಟಕ್ಕೆ ಕಾರಣವೆಂದು ಅಂದಾಜಿಸಲಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಕಟಾವು ಮಾಡಲಾದ ಹಿಂಗಾರು ಈರುಳ್ಳಿಯು ಭಾರತದ ಈರುಳ್ಳಿ ಉತ್ಪಾದನೆಯ 65% ರಷ್ಟಿದೆ ಮತ್ತು ಅಕ್ಟೋಬರ್-ನವೆಂಬರ್‌ನಿಂದ ಮುಂಗಾರು ಬೆಳೆಯನ್ನು ಕಟಾವು ಮಾಡುವವರೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ಆದ್ದರಿಂದ ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈರುಳ್ಳಿಯನ್ನು ಯಶಸ್ವಿಯಾಗಿ ಸಂಗ್ರಹಿಸುವುದು ಅತ್ಯಗತ್ಯ.

ಈರುಳ್ಳಿಯ ಸುಗ್ಗಿಯ ನಂತರದ ನಷ್ಟವನ್ನು ನಿವಾರಿಸಲು, ಕಳಪೆ ಸಂಗ್ರಹಣೆ ಮತ್ತು ಸಂಸ್ಕರಣೆಯಿಂದಾಗಿ ಉಂಟಾಗುವ ನಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯು "ಈರುಳ್ಳಿಯ ಪ್ರಾಥಮಿಕ ಸಂಸ್ಕರಣೆ, ಸಂಗ್ರಹಣೆ ಮತ್ತು ಬೆಲೆ ಸ್ಥಿರೀಕರಣ ತಂತ್ರಜ್ಞಾನಗಳ" ಅಭಿವೃದ್ಧಿಗಾಗಿ ಒಂದು ಬೃಹತ್‌ ಸವಾಲು ಆಂದೋಲನವನ್ನು (ಈರುಳ್ಳಿ ಕುರಿತಾದ ಗ್ರ್ಯಾಂಡ್ ಚಾಲೆಂಜ್) ಘೋಷಿಸಿದೆ. ಈರುಳ್ಳಿಯ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನವೋದ್ಯಮಗಳೊಂದಿಗೆ ತೊಡಗಿಸಿಕೊಂಡಿದೆ.

ʻಈರುಳ್ಳಿ ಕುರಿತಾದ ಗ್ರ್ಯಾಂಡ್ ಚಾಲೆಂಜ್ʼ ಅಭಿಯಾನದಡಿ ವಿದ್ಯಾರ್ಥಿಗಳು (ಯುಜಿ / ಪಿಜಿ / ಡಿಪ್ಲೊಮಾ), ಸಂಶೋಧನಾ ವಿದ್ವಾಂಸರು, ಬೋಧಕ ಸದಸ್ಯರು, ನವೋದ್ಯಮಗಳು ಮತ್ತು ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇತರ ವ್ಯಕ್ತಿಗಳಿಂದ ಈರುಳ್ಳಿಯ ವ್ಯರ್ಥವನ್ನು ಕಡಿಮೆ ಮಾಡಲು ದಕ್ಷ ಹಾಗೂ ಕಡಿಮೆ ವೆಚ್ಚದ ಪರಿಹಾರಗಳನ್ನು ಆಹ್ವಾನಿಸಲಾಗಿದೆ. ಸವಾಲಿನಲ್ಲಿ ನಾಲ್ಕು ವಿಭಾಗಗಳಿದ್ದು, ಅವುಗಳೆಂದರೆ, ಶೇಖರಣಾ ರಚನೆಗಳ ವಿನ್ಯಾಸಗಳಲ್ಲಿನ ಸುಧಾರಣೆ, ಕೊಯ್ಲು ಪೂರ್ವ ಹಂತ, ಪ್ರಾಥಮಿಕ ಸಂಸ್ಕರಣೆ ಮತ್ತು ಬೆಲೆ ಸ್ಥಿರೀಕರಣ: ಈರುಳ್ಳಿ ತ್ಯಾಜ್ಯದ ಮೌಲ್ಯವರ್ಧನೆ ಮತ್ತು ಬಳಕೆ.

ಈ ಸವಾಲನ್ನು ಮೂರು ಹಂತಗಳಲ್ಲಿ ಹೊರತರಲಾಗಿದೆ. ಉದ್ದೇಶಿತ ತಾಂತ್ರಿಕ ಪರಿಹಾರದ ಕಲ್ಪನೆಗಳು ಹಾಗೂ ತಂತ್ರಜ್ಞಾನ ಪರಿಹಾರಗಳನ್ನು ಮೂರು ಹಂತಗಳಲ್ಲಿ (ಐಡಿಯಾಷನ್ ಟು ಪ್ರೂಫ್-ಆಫ್-ಕಾನ್ಸೆಪ್ಟ್ ಹಂತ, ಪ್ರೂಫ್ ಆಫ್ ಕಾನ್ಸೆಪ್ಟ್ನಿಂದ ಉತ್ಪನ್ನದ ಹಂತ ಮತ್ತು ಫೀಲ್ಡ್ ಇಂಪ್ಲಿಮೆಂಟೇಶನ್ ಹಂತ) ಮೌಲ್ಯಮಾಪನ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್‌ ಮಾಡಿದ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನದ ಮೊತ್ತವಿರುತ್ತದೆ.

ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸವಾಲಿನಲ್ಲಿ ಭಾಗವಹಿಸುವಂತೆ ವಿನಂತಿ ಮಾಡುವ ಜತೆಗೆ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ʻಡಿಒಸಿಎʼ ಸವಾಲಿನ ಬಗ್ಗೆ ಮಾಹಿತಿ ನೀಡಲಾಗಿದೆ. ಆಸಕ್ತ ಸ್ಪರ್ಧಿಗಳು https://doca.gov.in/goc/ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.

 

**********

 

 

 

 

 

 

 (Release ID: 1841904) Visitor Counter : 132