ಪ್ರಧಾನ ಮಂತ್ರಿಯವರ ಕಛೇರಿ

ಜಪಾನ್‌ನ ಮಾಜಿ ಪ್ರಧಾನಮಂತ್ರಿ ಅಬೆ ಶಿಂಜೊ ಅವರ ದುರಂತ ನಿಧನಕ್ಕೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ


ಅಬೆ ಶಿಂಜೊ ಅವರಿಗೆ ಗೌರವದ ಸಂಕೇತವಾಗಿ 09 ಜುಲೈ 2022 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು

Posted On: 08 JUL 2022 3:52PM by PIB Bengaluru

ಜಪಾನ್‌ನ ಮಾಜಿ ಪ್ರಧಾನಿ ಅಬೆ ಶಿಂಜೊ ಅವರ ದುರಂತ ನಿಧನಕ್ಕೆ ಪ್ರಧಾನಮಂತ್ರಿಯವರು ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಶ್ರೀ ಅಬೆ ಅವರೊಂದಿಗಿನ ತಮ್ಮ ಒಡನಾಟ ಮತ್ತು ಸ್ನೇಹವನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ, ಭಾರತ-ಜಪಾನ್ ನಡುವಿನ ಬಾಂಧವ್ಯವನ್ನು ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಅವರು ನೀಡಿದ ಅಪಾರ ಕೊಡುಗೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಬೆ ಶಿಂಜೊ ಅವರಿಗೆ ಗೌರವ ಸೂಚಕವಾಗಿ ಶ್ರೀ ಮೋದಿ ಅವರು 2022ರ ಜುಲೈ 9ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಪ್ರಧಾನಮಂತ್ರಿ ಅವರು ಟೋಕಿಯೋದಲ್ಲಿ ತಮ್ಮ ಇತ್ತೀಚಿನ ಭೇಟಿಯ ಭಾವಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು,

"ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಶಿಂಜೊ ಅಬೆ ಅವರ ದುರಂತ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಮಾತುಗಳಿಗೆ ಮೀರಿದ ದುಃಖ ನನ್ನನ್ನು ಆವರಿಸಿದೆ. ಅವರು ಒಬ್ಬ ಅತ್ಯುನ್ನತ ಜಾಗತಿಕ ಮುತ್ಸದ್ದಿ, ಅಸಾಧಾರಣ ನಾಯಕ ಮತ್ತು ಆಡಳಿತಗಾರರಾಗಿದ್ದರು. ಅವರು ಜಪಾನ್ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು."

"ಶ್ರೀ ಅಬೆ ಅವರೊಂದಿಗಿನ ನನ್ನ ಒಡನಾಟವು ಅನೇಕ ವರ್ಷಗಳಷ್ಟು ಹಳೆಯದಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರ ಪರಿಚಯವಾಗಿತ್ತು ಮತ್ತು ನಾನು ಪ್ರಧಾನಿಯಾದ ನಂತರವೂ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣವಾದ ಒಳನೋಟಗಳು ಸದಾ ನನ್ನ ಮೇಲೆ ಆಳವಾದ ಪ್ರಭಾವ ಬೀರಿದವು.”

"ನನ್ನ ಇತ್ತೀಚಿನ ಜಪಾನ್ ಭೇಟಿಯ ಸಮಯದಲ್ಲಿ, ಶ್ರೀ ಅಬೆ ಅವರನ್ನು ಮತ್ತೆ ಭೇಟಿಯಾಗಲು ಮತ್ತು ಅನೇಕ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಅವರು ಅಂದು ಎಂದಿನಂತೆಯೇ ಹಾಸ್ಯಭರಿತ ಮತ್ತು ಒಳನೋಟವುಳ್ಳ ಸಂಭಾಷಣೆಯಲ್ಲಿ ತೊಡಗಿದ್ದರು. ಇದೇ ನಮ್ಮ ಕೊನೆಯ ಭೇಟಿ ಎಂಬ ಸುಳಿವೂ ಸಹ ನನಗಾಗ ಇರಲಿಲ್ಲ. ಅವರ ಕುಟುಂಬ ಮತ್ತು ಜಪಾನಿನ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.

"ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಅಬೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂದು, ಇಡೀ ಭಾರತವು ಜಪಾನ್‌ನೊಂದಿಗೆ ದುಃಖಿಸುತ್ತಿದೆ ಮತ್ತು ಈ ಕಷ್ಟದ ಸಮಯದಲ್ಲಿ ನಾವು ನಮ್ಮ ಜಪಾನಿನ ಸಹೋದರ ಮತ್ತು ಸಹೋದರಿಯರ ಬೆನ್ನಿಗೆ ನಿಲ್ಲುತ್ತೇವೆ.

"ಮಾಜಿ ಪ್ರಧಾನಿ ಅಬೆ ಶಿಂಜೊ ಅವರ ಬಗ್ಗೆ ನಮ್ಮ ಆಳವಾದ ಗೌರವದ ಸಂಕೇತವಾಗಿ, 2022ರ ಜುಲೈ 9ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುವುದು.”

"ಟೋಕಿಯೋದಲ್ಲಿ ನನ್ನ ಆತ್ಮೀಯ ಸ್ನೇಹಿತ ಶಿಂಜೊ ಅಬೆ ಅವರೊಂದಿಗಿನ ಇತ್ತೀಚಿನ ಭೇಟಿಯ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ. ಭಾರತ-ಜಪಾನ್ ಬಾಂಧವ್ಯವನ್ನು ಬಲಪಡಿಸುವ ಬಗ್ಗೆ ಸದಾ ಉತ್ಸುಕರಾಗಿದ್ದ ಅವರು ಆಗತಾನೆ ಜಪಾನ್-ಭಾರತ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

 

********(Release ID: 1840484) Visitor Counter : 111