ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಕಂಪ್ಯೂಟರೀಕರಣಕ್ಕೆ ಸಂಪುಟದ ಅನುಮೋದನೆ


ಒಟ್ಟಾರೆ 2516 ಕೋಟಿ ರೂ. ಬಜೆಟ್ ಹಂಚಿಕೆಯೊಂದಿಗೆ ಕಾರ್ಯಾಚರಣೆಯಲ್ಲಿರುವ 63,000 ಪಿಎಸಿಎಸ್ ಗಳ ಕಂಪ್ಯೂಟರೀಕರಣ.

ಇದರಿಂದ ಸುಮಾರು 13 ಕೋಟಿ ರೈತರಿಗೆ ಪ್ರಯೋಜನವಾಗಲಿದ್ದು, ಇವರಲ್ಲಿ ಹೆಚ್ಚಿನವರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ

ಇದು ಪಾರದರ್ಶಕತೆ, ದಕ್ಷತೆ, ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದ್ದು, ಪಂಚಾಯತ್ ಮಟ್ಟದಲ್ಲಿ ನೋಡಲ್ ವಿತರಣಾ ಸೇವಾ ಕೇಂದ್ರವಾಗಲು ಪಿಎಸಿಎಸ್ ಗೆ ಸಹಾಯ ಮಾಡುತ್ತದೆ

ದತ್ತಾಂಶ ಸಂಗ್ರಹಣೆ, ಸೈಬರ್ ಭದ್ರತೆ, ಯಂತ್ರಾಂಶ, ಅಸ್ತಿತ್ವದಲ್ಲಿರುವ ದಾಖಲೆಗಳ ಡಿಜಿಟಲೀಕರಣ, ನಿರ್ವಹಣೆ ಮತ್ತು ತರಬೇತಿಯೊಂದಿಗೆ ಕ್ಲೌಡ್ ಆಧಾರಿತ ಏಕೀಕೃತ ತಂತ್ರಾಂಶ ಪ್ರಮುಖ ಅಂಶಗಳಾಗಿವೆ.

Posted On: 29 JUN 2022 3:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಕಂಪ್ಯೂಟರೀಕರಣಕ್ಕೆ ತನ್ನ ಅನುಮೋದನೆ ನೀಡಿದ್ದು, ಇದು ಪಿಎಸಿಎಸ್ ನ ದಕ್ಷತೆಯನ್ನು ಹೆಚ್ಚಿಸುವ, ಅವುಗಳ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ ಉದ್ದೇಶವನ್ನು ಹೊಂದಿದೆ; ತಮ್ಮ ವ್ಯವಹಾರವನ್ನು ವೈವಿಧ್ಯಮಯಗೊಳಿಸಲು ಮತ್ತು ಬಹು ಚಟುವಟಿಕೆಗಳು / ಸೇವೆಗಳನ್ನು ಕೈಗೊಳ್ಳಲು ಪಿಎಸಿಎಸ್ ಗೆ ಅನುಕೂಲ ಮಾಡಿಕೊಡಲಾಗುತ್ತದೆ. ಈ ಯೋಜನೆಯು 5 ವರ್ಷಗಳ ಅವಧಿಯಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು 63,000 ಪಿಎಸಿಎಸ್ ಗಳ ಕಂಪ್ಯೂಟರೀಕರಣ ಮಾಡಲು ಉದ್ದೇಶಿಸಿದೆ, ಒಟ್ಟು 2516 ಕೋಟಿ ರೂ.ಗಳ ಬಜೆಟ್ ಹಂಚಿಕೆಯಲ್ಲಿ ಭಾರತ ಸರ್ಕಾರದ ಪಾಲು 1528 ಕೋಟಿ ರೂ.ಗಳಾಗಿರುತ್ತದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (ಪಿಎಸಿಎಸ್) ದೇಶದ ಮೂರು ಹಂತದ ಅಲ್ಪಾವಧಿ ಸಹಕಾರಿ ಸಾಲ (ಎಸ್.ಟಿ.ಸಿ.ಸಿ.)ದಲ್ಲಿ ಅತ್ಯಂತ ಕೆಳಹಂತದಲ್ಲಿದ್ದು, ಸುಮಾರು 13 ಕೋಟಿ ರೈತರನ್ನು ಸದಸ್ಯರನ್ನಾಗಿ ಹೊಂದಿದೆ, ಇದು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ದೇಶದ ಎಲ್ಲಾ ಘಟಕಗಳು ನೀಡುವ ಕೆಸಿಸಿ ಸಾಲಗಳಲ್ಲಿ ಪಿಎಸಿಎಸ್ ಪಾಲು ಶೇ.41 (3.01 ಕೋಟಿ ರೈತರು)ರಷ್ಟಿದೆ ಮತ್ತು ಪಿಎಸಿಎಸ್ ಮೂಲಕ ಈ ಕೆಸಿಸಿ ಸಾಲಗಳಲ್ಲಿ (2.95 ಕೋಟಿ ರೈತರು) ಶೇ.95 ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಂದಿದೆ. ಇತರ ಎರಡು ಹಂತಗಳಾದ ರಾಜ್ಯ ಸಹಕಾರಿ ಬ್ಯಾಂಕುಗಳು (ಎಸ್ಟಿಸಿಬಿಗಳು) ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (ಡಿಸಿಸಿಬಿಗಳು) ಈಗಾಗಲೇ ನಬಾರ್ಡ್ ನಿಂದ ಸ್ವಯಂಚಾಲಿತಗೊಂಡಿದ್ದು, ಸಾಮಾನ್ಯ ಬ್ಯಾಂಕಿಂಗ್ ತಂತ್ರಾಂಶ (ಸಿಬಿಎಸ್) ಗೆ ಬಂದಿವೆ.

ಆದಾಗ್ಯೂ, ಹೆಚ್ಚಿನ ಪಿಎಸಿಎಸ್ ಗಳು ಇಲ್ಲಿಯವರೆಗೆ ಕಂಪ್ಯೂಟರೀಕರಣಗೊಂಡಿಲ್ಲ ಮತ್ತು ಇನ್ನೂ ಹಸ್ತಚಾಲಿತವಾಗಿ ಕಾರ್ಯನಿರ್ವಹಿಸುತ್ತಿವೆ, ಇದರ ಪರಿಣಾಮವಾಗಿ ಅದಕ್ಷತೆ ಮತ್ತು ವಿಶ್ವಾಸದ ಕೊರತೆ ಉಂಟಾಗುತ್ತದೆ. ಕೆಲವು ರಾಜ್ಯಗಳಲ್ಲಿ, ಏಕಾಂಗಿಯಾಗಿ ಮತ್ತು ಪಿಎಸಿಎಸ್ ನ ಭಾಗಶಃ ಕಂಪ್ಯೂಟರೀಕರಣವನ್ನು ಮಾಡಲಾಗಿದೆ. ಅವರು ಬಳಸುತ್ತಿರುವ ತಂತ್ರಾಂಶದಲ್ಲಿ ಯಾವುದೇ ಏಕರೂಪತೆ ಇಲ್ಲ ಮತ್ತು ಅವು ಡಿಸಿಸಿಬಿಗಳು ಮತ್ತು ಎಸ್ಟಿಸಿಬಿಗಳೊಂದಿಗೆ ಪರಸ್ಪರ ಸಂಪರ್ಕ ಹೊಂದಿಲ್ಲ. ಗೌರವಾನ್ವಿತ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ದೇಶಾದ್ಯಂತದ ಎಲ್ಲಾ ಪಿಎಸಿಎಸ್ ಗಳನ್ನು ಕಂಪ್ಯೂಟರೀಕರಣಗೊಳಿಸಲು ಮತ್ತು ಅವರನ್ನು ರಾಷ್ಟ್ರಮಟ್ಟದಲ್ಲಿ ಒಂದು ಸಾಮಾನ್ಯ ವೇದಿಕೆಗೆ ತರಲು ಮತ್ತು ಅವರ ದೈನಂದಿನ ವ್ಯವಹಾರಕ್ಕಾಗಿ ಕಾಮನ್ ಅಕೌಂಟಿಂಗ್ ಸಿಸ್ಟಮ್ (ಸಿಎಎಸ್) ಅನ್ನು ಹೊಂದಲು ಪ್ರಸ್ತಾಪಿಸಲಾಗಿದೆ.

ಪಿಎಸಿಎಸ್ ನ ಕಂಪ್ಯೂಟರೀಕರಣ, ಹಣಪೂರಣ ಮತ್ತು ರೈತರಿಗೆ ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ (ಎಸ್.ಎಂಎಫ್.ಗಳು) ಸೇವಾ ವಿತರಣೆಯನ್ನು ಬಲಪಡಿಸುವ ಉದ್ದೇಶವನ್ನು ಈಡೇರಿಸುವುದರ ಜೊತೆಗೆ ವಿವಿಧ ಸೇವೆಗಳಿಗೆ ನೋಡಲ್ ಸೇವಾ ವಿತರಣಾ ಕೇಂದ್ರವಾಗಲಿದೆ ಮತ್ತು ರಸಗೊಬ್ಬರಗಳು, ಬೀಜಗಳು ಇತ್ಯಾದಿಗಳಂತಹ ಆದಾನ (ಇನ್ ಪುಟ್)ಗಳನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲೀಕರಣವನ್ನು ಸುಧಾರಿಸುವುದರ ಜೊತೆಗೆ ಬ್ಯಾಂಕಿಂಗ್ ಚಟುವಟಿಕೆಗಳು ಮತ್ತು ಬ್ಯಾಂಕೇತರ ಚಟುವಟಿಕೆಗಳಿಗೆ ಪಿಎಸಿಎಸ್ ನ ವ್ಯಾಪ್ತಿಯನ್ನು ಉತ್ತಮಪಡಿಸಲು ಈ ಯೋಜನೆ ನೆರವಾಗುತ್ತದೆ. ನಂತರ ಡಿಸಿಸಿಬಿಗಳು ಪಿಎಸಿಎಸ್ ಮೂಲಕ ಜಾರಿಗೆ ತರಬಹುದಾದ ವಿವಿಧ ಸರ್ಕಾರಿ ಯೋಜನೆಗಳನ್ನು (ಸಾಲ ಮತ್ತು ಸಬ್ಸಿಡಿ ಒಳಗೊಂಡಿರುವ) ಕೈಗೆತ್ತಿಕೊಳ್ಳುವ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಇದು ಸಾಲಗಳ ತ್ವರಿತ ವಿಲೇವಾರಿ, ಕಡಿಮೆ ಪರಿವರ್ತನಾ ವೆಚ್ಚ, ತ್ವರಿತ ಲೆಕ್ಕಪರಿಶೋಧನೆ ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳೊಂದಿಗಿನ ಪಾವತಿ ಮತ್ತು ಲೆಕ್ಕಪತ್ರಗಳಲ್ಲಿನ ಅಸಮತೋಲನವನ್ನು ತಗ್ಗಿಸುವುದನ್ನು ಖಚಿತಪಡಿಸುತ್ತದೆ.

ಸೈಬರ್ ಭದ್ರತೆ ಮತ್ತು ದತ್ತಾಂಶ ಸಂಗ್ರಹಣೆಯೊಂದಿಗೆ ಕ್ಲೌಡ್ ಆಧಾರಿತ ಸಾಮಾನ್ಯ ತಂತ್ರಾಂಶದ ಅಭಿವೃದ್ಧಿ, ಪಿಎಸಿಎಸ್ ಗೆ ಯಂತ್ರಾಂಶ ಬೆಂಬಲವನ್ನು ಒದಗಿಸುವುದು, ನಿರ್ವಹಣಾ ಬೆಂಬಲ ಮತ್ತು ತರಬೇತಿ ಸೇರಿದಂತೆ ಅಸ್ತಿತ್ವದಲ್ಲಿರುವ ದಾಖಲೆಗಳ ಡಿಜಿಟಲೀಕರಣವನ್ನು ಈ ಯೋಜನೆ ಒಳಗೊಂಡಿದೆ. ಈ ತಂತ್ರಾಂಶವು ರಾಜ್ಯಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವಂತಹ (ಕಸ್ಟಮೈಸೇಶನ್) ನಮ್ಯತೆಯನ್ನು ಹೊಂದಿರುವ ಸ್ಥಳೀಯ ಭಾಷೆಯಲ್ಲಿರುತ್ತದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನು (ಪಿಎಂಯು) ಸ್ಥಾಪಿಸಲಾಗುತ್ತದೆ. ಸುಮಾರು 200 ಪಿಎಸಿಎಸ್.ಗಳ ಗುಚ್ಛದಲ್ಲಿ ಜಿಲ್ಲಾ ಮಟ್ಟದ ಬೆಂಬಲವನ್ನು ಸಹ ಒದಗಿಸಲಾಗುತ್ತದೆ. ಪಿಎಸಿಎಸ್ ನ ಕಂಪ್ಯೂಟರೀಕರಣ ಪೂರ್ಣಗೊಂಡಿರುವ ರಾಜ್ಯಗಳ ಸಂದರ್ಭದಲ್ಲಿ, ಸಾಮಾನ್ಯ ತಂತ್ರಾಂಶದೊಂದಿಗೆ ಸಂಯೋಜಿಸಲು/ಅಳವಡಿಸಿಕೊಳ್ಳಲು ಅವರು ಒಪ್ಪಿದರೆ, ಅವರ ಯಂತ್ರಾಂಶ ಅಗತ್ಯ ನಿರ್ದಿಷ್ಟತೆಗಳನ್ನು ಪೂರೈಸುತ್ತದೆ ಮತ್ತು ತಂತ್ರಾಂಶವನ್ನು 2017 ರ ಫೆಬ್ರವರಿ 1 ರ ನಂತರ ಅನುಸ್ಥಾಪಿಸಿದ್ದರೆ, ಪ್ರತಿ ಪಿಎಸಿಎಸ್ ಗೆ ರೂ. 50,000/- ಗಳನ್ನು ಮರುಪಾವತಿಸಲಾಗುತ್ತದೆ.

******



(Release ID: 1838089) Visitor Counter : 1473