ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನ ಮಂತ್ರಿ.

Posted On: 27 JUN 2022 9:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸಿರಿಲ್ ರಾಮಾಫೋಸಾ ಅವರನ್ನು ಜರ್ಮನಿಯ ಸ್ಕ್ಲೋಸ್ ಎಲ್ಮಾವ್‌ನಲ್ಲಿ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ 2022ರ ಜೂನ್ 27ರಂದು ಭೇಟಿಯಾಗಿ ಮಾತುಕತೆ ನಡೆಸಿದರು.

ಉಭಯ ನಾಯಕರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಾಮರ್ಶಿಸಿದರು. 2019 ರಲ್ಲಿ ಸಹಕಾರಕ್ಕೆ ಸಂಬಂಧಿಸಿ ವ್ಯೂಹಾತ್ಮಕ ಕಾರ್ಯತಂತ್ರದ ಕಾರ್ಯಕ್ರಮಕ್ಕೆ ಸಹಿ ಹಾಕಿದ ನಂತರದ ಬೆಳವಣಿಗೆಗಳ ಬಗ್ಗೆ ಅವರು ವಿಶೇಷವಾಗಿ ಚರ್ಚಿಸಿದರು. ರಕ್ಷಣೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ವ್ಯಾಪಾರ ಹಾಗು ಹೂಡಿಕೆ, ಆಹಾರ ಭದ್ರತೆ, ರಕ್ಷಣೆ, ಔಷಧಗಳು, ಡಿಜಿಟಲ್ ಹಣಕಾಸು ಸೇರ್ಪಡೆ, ಕೌಶಲ್ಯ ಅಭಿವೃದ್ಧಿ, ವಿಮೆ, ಆರೋಗ್ಯ ಮತ್ತು ಜನತೆ –ಜನತೆಯ ನಡುವಣ ಸಂಪರ್ಕಗಳಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವನ್ನು ಪುನರುಚ್ಚರಿಸಿದರು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೋವಿಡ್- 19 ಲಸಿಕೆಗಳ ಉತ್ಪಾದನೆಯನ್ನು ಬೆಂಬಲಿಸುವ 2022ರ ಜೂನ್ ತಿಂಗಳಲ್ಲಿ ನಡೆದ ಡಬ್ಲ್ಯು.ಟಿ.ಒ. ಒಪ್ಪಂದವನ್ನು ಇಬ್ಬರು ನಾಯಕರೂ ಸ್ವಾಗತಿಸಿದರು. ಕೋವಿಡ್- 19 ತಡೆಗಟ್ಟುವಿಕೆ, ನಿಯಂತ್ರಣ ಅಥವಾ ಚಿಕಿತ್ಸೆಗೆ ಸಂಬಂಧಿಸಿದಂತೆ ಟ್ರಿಪ್ಸ್ ಒಪ್ಪಂದದ ಕೆಲವು ನಿಬಂಧನೆಗಳ ಅನುಷ್ಠಾನದ ಕುರಿತು ಎಲ್ಲಾ ಡಬ್ಲ್ಯು.ಟಿ.ಒ. ಸದಸ್ಯರಿಗೆ ಅದನ್ನು ಮನ್ನಾ ಮಾಡಲು ಸಲಹೆ ಮಾಡುವ ಮೊದಲ ಪ್ರಸ್ತಾವನೆಯನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಸಲ್ಲಿಸಿದ್ದವು.

ಬಹುಪಕ್ಷೀಯ ಸಂಸ್ಥೆಗಳಲ್ಲಿ ನಿರಂತರ ಸಮನ್ವಯ ಮತ್ತು ಅವುಗಳ ಸುಧಾರಣೆಯ ಅಗತ್ಯ, ವಿಶೇಷವಾಗಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ಸಂಬಂಧಿಸಿ ಕೂಡಾ ಚರ್ಚೆಗಳು ನಡೆದವು.

******


(Release ID: 1837614) Visitor Counter : 135