ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ರಿಲೇಯ ಧರ್ಮಶಾಲಾ ಹಂತದಲ್ಲಿ ಶ್ರೀ ಅನುರಾಗ್ ಸಿಂಗ್ ಠಾಕೂರ್ ಭಾಗಿ, ಹಿಮಾಚಲ ಮತ್ತು ಭಾರತದಲ್ಲಿ ಚೆಸ್ ಜನಪ್ರಿಯಗೊಳಿಸಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ.
Posted On:
22 JUN 2022 3:43PM by PIB Bengaluru
ಬುಧವಾರ ಬೆಳಗ್ಗೆ ನಡೆದ ಮೊಟ್ಟಮೊದಲ ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ರಿಲೇ ಸಮಾರಂಭದ ಧರ್ಮಶಾಲಾ ನಿಲುಗಡೆಯಲ್ಲಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಜೂನ್ 19 ರ ಭಾನುವಾರದಂದು ಹೊಸದಿಲ್ಲಿಯ ಐಜಿ ಕ್ರೀಡಾಂಗಣದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ ನೀಡಿದ್ದರು.
ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿಯು ಭಾರತದ 75 ನಗರಗಳಲ್ಲಿ ಸಂಚಾರ ಮಾಡಲಿದೆ. ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುವ ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥ ಇದನ್ನು ಆಯೋಜಿಸಲಾಗಿದೆ.
ಎಚ್.ಪಿ.ಸಿ.ಎ.ಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ “ಭಾರತದಲ್ಲಿ ಚೆಸ್‌ಗೆ ಸುದೀರ್ಘ ಪರಂಪರೆ ಮತ್ತು ಇತಿಹಾಸವಿದೆ. ನಾವು ಚದುರಂಗದಿಂದ ಶತ್ರಾಂಜ್ (ಚೆಸ್) ಪ್ರಾರಂಭಿಸಿದ್ದೇವೆ,” ಎಂದರು. “ಚೆಸ್ ಒಲಿಂಪಿಯಾಡ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಮತ್ತು ಇದಕ್ಕೆ ಆಜಾದಿ ಕಾ ಅಮೃತ್ ಮಹೋತ್ಸವಕ್ಕಿಂತ ಉತ್ತಮವಾದ ಬೇರೆ ಸಂದರ್ಭ ಯಾವುದಿದೆ. ಚೆಸ್ ಒಲಿಂಪಿಯಾಡ್‌ನಲ್ಲಿ ಒಟ್ಟು 188 ದೇಶಗಳ 2000 ಕ್ಕೂ ಹೆಚ್ಚು ಆಟಗಾರರು ಮತ್ತು 1000 ಅಧಿಕಾರಿಗಳು ಭಾರತಕ್ಕೆ ಬರುತ್ತಾರೆ. ಈ ಕ್ರಮವನ್ನು ಕೈಗೊಂಡಿರುವುದಕ್ಕಾಗಿ ಮತ್ತು ಯುವ ಚೆಸ್ ಉತ್ಸಾಹಿಗಳಿಗೆ ತಮ್ಮ ಹಿರಿಯ ಸಹ ಆಟಗಾರರನ್ನು ಹಾಗು ಗ್ರ್ಯಾಂಡ್ ಮಾಸ್ಟರ್ ಗಳನ್ನು ಭೇಟಿ ಮಾಡಲು ಅವಕಾಶವನ್ನು ಒದಗಿಸಿರುವುದಕ್ಕಾಗಿ ನಾನು ಎಐಸಿಎಫ್ ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದವರು ಹೇಳಿದರು.
ಎಚ್‌ಪಿಸಿಎ ಧರ್ಮಶಾಲಾದಲ್ಲಿ ಬುಧವಾರ ನಡೆದ ಕ್ರೀಡಾ ಜ್ಯೋತಿ ರಿಲೇ ಸಮಾರಂಭದಲ್ಲಿ ಹಿಮಾಚಲ ಪ್ರದೇಶ ಸರಕಾರದ ಯುವಜನ ಸೇವೆಗಳು ಮತ್ತು ಕ್ರೀಡಾ ಸಚಿವರು ಹಾಗು ಅರಣ್ಯ ಸಚಿವರಾದ ಶ್ರೀ ರಾಕೇಶ್ ಪಠಾನಿಯಾ, ಅಖಿಲ ಭಾರತ ಚೆಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಸಿಂಗ್ ಚೌಹಾಣ್, ಹಾಗೂ ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎ.ಐ.ಸಿ.ಎಫ್. ಅಧಿಕಾರಿಗಳು ಭಾಗವಹಿಸಿದ್ದರು.
ಶಾಲೆಯ ವಿದ್ಯಾರ್ಥಿಗಳು, ಧರ್ಮಶಾಲಾದ ಎಸ್.ಎ.ಐ. ಕೇಂದ್ರದ ಕ್ರೀಡಾಪಟುಗಳು, ಎನ್.ವೈ.ಕೆ.ಎಸ್. ಸ್ವಯಂಸೇವಕರು ಮತ್ತು ಹಿಮಾಚಲ ಚೆಸ್ ಅಸೋಸಿಯೇಷನ್‌ನ ಯುವಜನರನ್ನು ಒಳಗೊಂಡಂತೆ 500 ಮಂದಿ ಎಚ್.ಪಿ.ಸಿ.ಎ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಜ್ಯೋತಿಯನ್ನು ಶ್ರೀ ಠಾಕೂರ್ ಅವರಿಗೆ ಹಸ್ತಾಂತರಿಸಲು ಮತ್ತು ಬಳಿಕ ಅದನ್ನು ಶಿಮ್ಲಾಕ್ಕೆ ಕೊಂಡೊಯ್ಯಲು ಚೆಸ್ ಗ್ರ್ಯಾಂಡ್‌ಮಾಸ್ಟರ್ ದೀಪ್ ಸೇನ್‌ಗುಪ್ತಾ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕ್ರೀಡಾ ಜ್ಯೋತಿ ರಿಲೇ ಉದ್ಘಾಟನಾ ಸಮಾರಂಭವನ್ನು ಸ್ಮರಿಸಿಕೊಂಡ ಶ್ರೀ ಠಾಕೂರ್, “ಪ್ರಧಾನ ಮಂತ್ರಿ ಮೋದಿ ಜಿ ಅವರು ಈ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಯನ್ನು ಪ್ರಾರಂಭಿಸಿದರು ಮತ್ತು ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಆ ದಿನ ಸುಮಾರು 10000 ಜನರು ಹಾಜರಿದ್ದರು. ಈಗ, ನಾವು ಈ ಜ್ಯೋತಿ ದೇಶದ ಮೂಲೆ ಮೂಲೆಗಳನ್ನು ತಲುಪುವಂತೆ ಮಾಡಬೇಕು ಮತ್ತು ಭಾರತದ ಮೂಲೆ ಮೂಲೆಗಳಿಗೂ ಆಟವನ್ನು ಹರಡಬೇಕು. ಕೇಂದ್ರ ಕ್ರೀಡಾ ಸಚಿವನಾಗಿ ಮತ್ತು ಕ್ರೀಡಾ ಪ್ರೇಮಿಯಾಗಿ, ಹಿಮಾಚಲ ಮತ್ತು ಭಾರತದಲ್ಲಿ ಚೆಸ್ ಅನ್ನು ಜನಪ್ರಿಯಗೊಳಿಸಲು ಸರ್ವ ಕ್ರಮಗಳನ್ನು ಕೈಗೊಳ್ಳುತ್ತೇನೆ” ಎಂದು ಹೇಳಿದರು.
44 ನೇ ಫಿಡೆ ಚೆಸ್ ಒಲಿಂಪಿಯಾಡ್ 2022ರ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈಯಲ್ಲಿ ನಡೆಯಲಿದೆ.
******
(Release ID: 1836336)
Visitor Counter : 178