ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಪರಿಸರಕ್ಕಾಗಿ ಜೀವನಶೈಲಿ- LiFE ಆಂದೋಲನ' ಎಂಬ ಜಾಗತಿಕ ಉಪಕ್ರಮಕ್ಕೆ ಪ್ರಧಾನಮಂತ್ರಿ ಚಾಲನೆ

"ಮಾನವ-ಕೇಂದ್ರಿತ, ಸಾಮೂಹಿಕ ಪ್ರಯತ್ನಗಳು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ದೃಢವಾದ ಕ್ರಮಗಳನ್ನು ಬಳಸಿಕೊಂಡು ನಮ್ಮ ಗ್ರಹ ಎದುರಿಸುತ್ತಿರುವ ಸವಾಲನ್ನು ಪರಿಹರಿಸುವುದು ಈ ಹೊತ್ತಿನ ಅಗತ್ಯವಾಗಿದೆ"

ಲೈಫ್ ಅಭಿಯಾನ ಭೂತಕಾಲದಿಂದ ಕಲಿತು, ವರ್ತಮಾನದಲ್ಲಿ ಕಾರ್ಯನಿರ್ವಹಿಸಿ, ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ"

ಕಡಿಮೆ ಬಳಕೆ, ಮರುಬಳಕೆ ಮತ್ತು ಪುನರ್ಬಳಕೆ ಮಾಡುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆಗಳಾಗಿವೆ

ವೃತ್ತಾಕಾರದ ಆರ್ಥಿಕತೆಯು ನಮ್ಮ ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ

ತಂತ್ರಜ್ಞಾನ ಮತ್ತು ಸಂಪ್ರದಾಯಗಳು ಬೆರೆತಾಗ, ಜೀವನದ ದೃಷ್ಟಿಕೋನವನ್ನು ಮತ್ತಷ್ಟು ಮುಂದೆ ತೆಗೆದುಕೊಂಡು ಹೋಗಲಾಗುತ್ತದೆ, "ನಮ್ಮ ಗ್ರಹವು ಒಂದೇ ಆದರೆ ನಮ್ಮ ಪ್ರಯತ್ನಗಳು ಅನೇಕ ಆಗಿರಬೇಕು - ಒಂದು ಭೂಮಿ, ಅನೇಕ ಪ್ರಯತ್ನಗಳು"

ಹವಾಮಾನ-ಪರ ವರ್ತನೆಗಳನ್ನು ಉತ್ತೇಜಿಸಲು ನಾಗರಿಕರ ಕ್ರಮದ ಈ ಜಾಗತಿಕ ಉಪಕ್ರಮದ ನೇತೃತ್ವ ವಹಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಅಭಿನಂದಿಸುತ್ತೇನೆ: ಬಿಲ್ ಗೇಟ್ಸ್

ಭಾರತ ಮತ್ತು ಪ್ರಧಾನಮಂತ್ರಿಯವರು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಹಾಗೂ ಮಾನವ ನಡವಳಿಕೆಗೆ ಸಂಬಂಧಿಸಿದಂತೆ ವಿಶ್ವ ನಾಯಕರಾಗಿದ್ದಾರೆ : ಪ್ರೊ. ಕ್ಯಾಸ್ ಸನ್ ಸ್ಟೈನ್, ನಡ್ಜ್ ಸಿದ್ಧಾಂತದ ಲೇಖಕರು

ಭಾರತವು ಜಾಗತಿಕ ಪರಿಸರ ಕ್ರಮಕ್ಕೆ ಕೇಂದ್ರವಾಗಿದೆ: ಶ್ರೀಮತಿ ಇಂಗರ್ ಆಂಡರ್ಸನ್, ಯುಎನ್ಇಪಿ ಜಾಗತಿಕ ಮುಖ್ಯಸ್ಥೆ

ನಿರ್ಣಾಯಕ ಹವಾಮಾನ ಕ್ರಮದ ಹಿಂದೆ ಭಾರತವು ವಿಶ್ವ ವೇದಿಕೆಯಲ್ಲಿ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ: ಶ್ರೀ ಅಚಿಮ್ ಸ್ಟೈನರ್, ಯುಎನ್.ಡಿ.ಪಿ ಜಾಗತಿಕ ಮುಖ್ಯಸ್ಥ

ಹೆಚ್ಚು ಅಗತ್ಯವಾಗಿರುವ ಜಾಗತಿಕ ಆಂದೋಲನ ಮತ್ತು ಸಂಭಾಷಣೆಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ವರ್ಲ್ಡ್ ರಿಸೋರ್ಸಸ್ ಸಂಸ್ಥೆ, ಸಿಇಒ ಮತ್ತು ಅಧ್ಯಕ್ಷ ಶ್ರೀ ಅನಿರುದ್ಧ್ ದಾಸ್ ಗುಪ್ತಾ.

ಗ್ಲ್ಯಾಸ್ಗೋದಲ್ಲಿ ನಡೆದ ಕಾಪ್ 26ರಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸಿದ ಹವಾಮಾನ ಅರ್ಥಶಾಸ್ತ್ರಜ್ಞ ಲಾರ್ಡ್ ನಿಕೋಲಸ್ ಸ್ಟರ್ನ್

ಸ್ವಚ್ಛ ಭಾರತ, ಜನ್ ಧನ್, ಪೌಷ್ಟಿಕ ಅಭಿಯಾನ ಮುಂತಾದ ಭಾರತದ ಪ್ರಮುಖ ಉಪಕ್ರಮಗಳಲ್ಲಿ ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಮುಂಚೂಣಿ ಕಾರ್ಯಕರ್ತರ ಸಬಲೀಕರಣವನ್ನು ಶ್ಲಾಘಿಸಿದ ವಿಶ್ವಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಲ್ಪಾಸ್

Posted On: 05 JUN 2022 7:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ಪರಿಸರಕ್ಕಾಗಿ ಜೀವನಶೈಲಿ - ಲೈಫ್ ಅಭಿಯಾನ' ಎಂಬ ಜಾಗತಿಕ ಉಪಕ್ರಮಕ್ಕೆ ಚಾಲನೆ ನೀಡಿದರು. ಇದು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ವಿಶ್ವದಾದ್ಯಂತದ ಜನರು, ಸಮುದಾಯಗಳು ಮತ್ತು ಸಂಸ್ಥೆಗಳ ಮೇಲೆ ಪ್ರಭಾವ ಬೀರಲು ಮತ್ತು ಮನವೊಲಿಸಲು ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಮೊದಲಾದವುಗಳಿಂದ ಕಲ್ಪನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸುವ 'ಪ್ರಬಂಧಗಳಿಗೆ ಲೈಫ್ ನ ಜಾಗತಿಕ ಕರೆ'ಗೂ ಚಾಲನೆ ನೀಡುತ್ತದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 'ಪರಿಸರಕ್ಕಾಗಿ ಜೀವನಶೈಲಿ - ಲೈಫ್ ಆಂದೋಲನ' ಎಂಬ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಲು ಇಂದು ಸೂಕ್ತ ದಿನವಾಗಿದ್ದು,  ನಾವು ಲೈಫ್ - ಪರಿಸರಕ್ಕಾಗಿ ಜೀವನಶೈಲಿ ಆಂದೋಲನವನ್ನು ಪ್ರಾರಂಭಿಸುತ್ತೇವೆ ಎಂದು ಅವರು ಹೇಳಿದರು. ಮಾನವ ಕೇಂದ್ರಿತ, ಸಾಮೂಹಿಕ ಪ್ರಯತ್ನಗಳು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮತ್ತಷ್ಟು ಸುಸ್ಥಿರಗೊಳಿಸುವ ದೃಢವಾದ ಕ್ರಮವನ್ನು ಬಳಸಿಕೊಂಡು ನಮ್ಮ ಗ್ರಹವು ಎದುರಿಸುತ್ತಿರುವ ಸವಾಲನ್ನು ಪರಿಹರಿಸುವ ಈ ಹೊತ್ತಿನ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.
ಕಳೆದ ವರ್ಷ ಕಾಪ್ 26ರಲ್ಲಿ ತಾವು ಈ ಜಾಗತಿಕ ಉಪಕ್ರಮವನ್ನು ಪ್ರಸ್ತಾಪಿಸಿದ್ದನ್ನು ಪ್ರಧಾನಮಂತ್ರಿಯವರು ಸಭಿಕರಿಗೆ ನೆನಪಿಸಿದರು. ನಮ್ಮ ಗ್ರಹಕ್ಕೆ ಹೊಂದಿಕೆಯಾಗುವ ಮತ್ತು ಅದಕ್ಕೆ ಹಾನಿಯಾಗದ ಜೀವನಶೈಲಿಯೊಂದಿಗೆ ಜೀವಿಸುವುದು ಲೈಫ್ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು. ಅಂತಹ ಜೀವನಶೈಲಿಯೊಂದಿಗೆ ಬದುಕುವವರನ್ನು "ಭೂಗ್ರಹ ಪರವಾದ ಜನರು" ಎಂದು ಕರೆಯಲಾಗುತ್ತದೆ.  ಲೈಫ್ ಅಭಿಯಾನ ಭೂತಕಾಲದಿಂದ ಕಲಿತು, ವರ್ತಮಾನದಲ್ಲಿ ಕಾರ್ಯನಿರ್ವಹಿಸಿ ಮತ್ತು ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಕಡಿಮೆ ಬಳಕೆ ಮಾಡುವುದು, ಮರುಬಳಕೆ ಮತ್ತು ಪುನರ್ ಬಳಕೆ ಮಾಡುವುದು ನಮ್ಮ ಜೀವನದಲ್ಲಿ ಹೆಣೆದ ಪರಿಕಲ್ಪನೆಗಳಾಗಿವೆ. ವೃತ್ತಾಕಾರದ ಆರ್ಥಿಕತೆಯು ನಮ್ಮ ಸಂಸ್ಕೃತಿ ಮತ್ತು ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ ಎಂದರು.
ದೇಶದಲ್ಲಿರುವ 1.3 ಶತಕೋಟಿ ಭಾರತೀಯರಿಂದಾಗಿ ನಮ್ಮ ದೇಶದ ಪರಿಸರಕ್ಕಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ, ಅವರಿಗೆ ಧನ್ಯವಾದಗಳು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಅರಣ್ಯ ಪ್ರದೇಶವು ಹೆಚ್ಚುತ್ತಿದೆ ಮತ್ತು ಸಿಂಹಗಳು, ಹುಲಿಗಳು, ಚಿರತೆಗಳು, ಆನೆಗಳು ಮತ್ತು ಘೇಂಡಾಮೃಗಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.40ರಷ್ಟನ್ನು ಸಾಧಿಸುವ ಭಾರತದ ಗುರಿಯನ್ನು ಗಡುವಿಗಿಂತ 9 ವರ್ಷ ಮುಂಚಿತವಾಗಿ ತಲುಪಲಾಗಿದೆ ಎಂದು ಅವರು ಹೇಳಿದರು. ಪೆಟ್ರೋಲ್ ನಲ್ಲಿ  ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ನವೆಂಬರ್ 2022ರ ಗುರಿಗಿಂತ 5 ತಿಂಗಳು ಮೊದಲೇ ಸಾಧಿಸಲಾಗಿದೆ. 2013-14 ರಲ್ಲಿ ಶೇ.1.5 ರಷ್ಟಿದ್ದ ಎಥನಾಲ್ ಮಿಶ್ರಣ, 2019-20 ರಲ್ಲಿ ಶೇ.5ರಷ್ಟಾಗಿದ್ದು, ಇದು ಪ್ರಮುಖ ಮೈಲಿಗಲ್ಲಾಗಿದೆ. ನವೀಕರಿಸಬಹುದಾದ ಇಂಧನಕ್ಕೆ ಸರ್ಕಾರ ಹೆಚ್ಚಿನ ಗಮನ ಹರಿಸಿದೆ ಎಂದು ಅವರು ಹೇಳಿದರು. ಮುಂದಿನ ಹಾದಿಯು ಆವಿಷ್ಕಾರ ಮತ್ತು ಮುಕ್ತತೆಯ ಕುರಿತಾದದ್ದಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಮತ್ತು ಸಂಪ್ರದಾಯಗಳು ಬೆರೆತಾಗ, ಜೀವನದ ದೃಷ್ಟಿಕೋನವನ್ನು ಮತ್ತಷ್ಟು ಮುಂದೆ ತೆಗೆದುಕೊಂಡು ಹೋಗಬಹುದು ಎಂದರು.
ಮಹಾತ್ಮಾ ಗಾಂಧಿಯವರು ಶೂನ್ಯ ಇಂಗಾಲದ ಜೀವನಶೈಲಿಯ ಬಗ್ಗೆ ಮಾತನಾಡಿದ್ದರು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ನಮ್ಮ ದೈನಂದಿನ ಜೀವನದ ಆಯ್ಕೆಗಳಲ್ಲಿ, ನಾವು ಅತ್ಯಂತ ಸುಸ್ಥಿರವಾದ ಆಯ್ಕೆಗಳನ್ನು ಆರಿಸಿಕೊಳ್ಳೋಣ ಎಂದು ಅವರು ಹೇಳಿದರು. ಮರುಬಳಕೆ, ಕಡಿಮೆ ಬಳಕೆ ಮತ್ತು ಪುನರ್ ಬಳಕೆಯ ತತ್ವವನ್ನು ಅನುಸರಿಸುವಂತೆ ಅವರು ಸಭಿಕರನ್ನು ಒತ್ತಾಯಿಸಿದರು. ನಮ್ಮ ಗ್ರಹವು ಒಂದೇ ಆದರೆ ನಮ್ಮ ಪ್ರಯತ್ನಗಳು ಅನೇಕವಾಗಿರಬೇಕು - ಒಂದು ಭೂಮಿ, ಅನೇಕ ಪ್ರಯತ್ನಗಳು. "ಉತ್ತಮ ಪರಿಸರಕ್ಕಾಗಿ ಮತ್ತು ಜಾಗತಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಯಾವುದೇ ಪ್ರಯತ್ನವನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ. ನಮ್ಮ ಹಿಂದಿನ ಸಾಧನೆಯ ದಾಖಲೆಗಳೇ ಸ್ವತಃ ಮಾತನಾಡುತ್ತದೆ" ಎಂದು ಹೇಳಿದ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹ-ಅಧ್ಯಕ್ಷರಾದ ಶ್ರೀ ಬಿಲ್ ಗೇಟ್ಸ್; ಹವಾಮಾನ ಅರ್ಥಶಾಸ್ತ್ರಜ್ಞ ಲಾರ್ಡ್ ನಿಕೋಲಸ್ ಸ್ಟರ್ನ್; ನಡ್ಜ್ ಥಿಯರಿಯ ಲೇಖಕ ಪ್ರೊ. ಕ್ಯಾಸ್ ಸನ್ ಸ್ಟೈನ್; ವರ್ಲ್ಡ್ ರಿಸೋರ್ಸಸ್ ಸಂಸ್ಥೆಯ ಸಿಇಓ ಮತ್ತು ಅಧ್ಯಕ್ಷ ಶ್ರೀ ಅನಿರುದ್ಧ ದಾಸ್ ಗುಪ್ತಾ; - ಯುಎನ್ಇಪಿ ಜಾಗತಿಕ ಮುಖ್ಯಸ್ಥೆ ಶ್ರೀಮತಿ ಇಂಗರ್ ಆಂಡರ್ಸನ್, ಯುಎನ್.ಡಿಪಿ ಜಾಗತಿಕ ಮುಖ್ಯಸ್ಥ ಶ್ರೀ ಅಚಿಮ್ ಸ್ಟೈನರ್ ಮತ್ತು ವಿಶ್ವ ಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಲ್ಪಾಸ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಭೂಪೇಂದ್ರ ಯಾದವ್ ಮತ್ತು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತಾಭ್ ಕಾಂತ್ ಸಹ ಉಪಸ್ಥಿತರಿದ್ದರು.
ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಆನದ ಸಹ-ಅಧ್ಯಕ್ಷರಾದ ಶ್ರೀ ಬಿಲ್ ಗೇಟ್ಸ್ ಅವರು ಭಾರತದ ನಾಯಕತ್ವ ಮತ್ತು ಹೆಚ್ಚುತ್ತಿರುವ ಹೊರಸೂಸುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದರು. "ಲೈಫ್ ಆಂದೋಲನದ ಬಗ್ಗೆ ಮತ್ತು ಸಾಮೂಹಿಕ ಕ್ರಮದ ಸಂಪೂರ್ಣ ಶಕ್ತಿಯನ್ನು ಸೆಳೆಯುವ ಅದರ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಹಸಿರುಮನೆ ಅನಿಲಗಳನ್ನು ತೊಡೆದುಹಾಕಲು ನಮಗೆ ನಾವೀನ್ಯಪೂರ್ಣ ತಂತ್ರಜ್ಞಾನಗಳು ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯ ಅಗತ್ಯವಿದೆ. ಈ ನವೀನ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಖಾಸಗಿ ಮತ್ತು ಸಾರ್ವಜನಿಕ ವಲಯಗಳ ನಡುವೆ ದೊಡ್ಡ ಹೂಡಿಕೆಗಳು ಮತ್ತು ಪಾಲುದಾರಿಕೆಗಳು ಮಾತ್ರವಲ್ಲದೆ ವ್ಯಕ್ತಿಗಳಿಂದ ಬೇಡಿಕೆಗಳೂ ಬೇಕಾಗುತ್ತವೆ. ವೈಯಕ್ತಿಕ ಕ್ರಮಗಳು ಮಾರುಕಟ್ಟೆಗೆ ಸಂಕೇತಗಳನ್ನು ರವಾನಿಸುತ್ತವೆ, ಅದು ಸರ್ಕಾರಗಳು ಮತ್ತು ಉದ್ಯಮಗಳಿಗೆ ಈ ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ನಮಗೆ ಅಗತ್ಯವಿರುವ ನಾವೀನ್ಯತೆಗಳನ್ನು ಸೃಷ್ಟಿಸುತ್ತದೆ " ಎಂದು ಅವರು ಹೇಳಿದರು. "ಹವಾಮಾನ ಪರ ನಡವಳಿಕೆಗಳನ್ನು ಉತ್ತೇಜಿಸಲು ನಾಗರಿಕ ಕ್ರಮದ ಈ ಜಾಗತಿಕ ಉಪಕ್ರಮದ ನೇತೃತ್ವ ವಹಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಮೋದಿಯವರನ್ನು ಅಭಿನಂದಿಸುತ್ತೇನ. ನಾವೆಲ್ಲರೂ ಒಟ್ಟಾಗಿ ಹಸಿರು ಕೈಗಾರಿಕಾ ಕ್ರಾಂತಿಯನ್ನು ಮಾಡಬಹುದು" ಎಂದರು. "ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಜಾಗತಿಕ ಕ್ರಮದ ಅಗತ್ಯವು ಎಂದಿಗೂ ದೊಡ್ಡದಲ್ಲ, ನಾವು ನಮ್ಮ ಹವಾಮಾನ ಗುರಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತದ ಪಾತ್ರ ಮತ್ತು ನಾಯಕತ್ವವು ನಿರ್ಣಾಯಕವಾಗಿದೆ" ಎಂದು ಅವರು ಹೇಳಿದರು.
ನಡ್ಜ್  ಸಿದ್ಧಾಂತದ ಲೇಖಕ ಪ್ರೊ. ಕ್ಯಾಸ್ ಸನ್ ಸ್ಟೈನ್ ಅವರು, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಮತ್ತು ಮಾನವ ನಡವಳಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಪ್ರಧಾನಮಂತ್ರಿಯವರು ವಿಶ್ವ ನಾಯಕರಾಗಿದ್ದಾರೆ ಮತ್ತು 'ನಮ್ಮಲ್ಲಿ ಅನೇಕರು ಸ್ಫೂರ್ತಿ ಮತ್ತು ಕಲ್ಪನೆಗಳಿಗಾಗಿ ಭಾರತದತ್ತ ನೋಡುತ್ತಿದ್ದಾರೆ ಎಂದರು. ನಡವಳಿಕೆಯ ಬದಲಾವಣೆಯ ಈಸ್ಟ್  ಚೌಕಟ್ಟಿನ ಬಗ್ಗೆ ಮಾತನಾಡಿದ ಅವರು, ಈಸ್ಟ್ (EAST) ಇ ಎಂದರೆ ಈಸಿ (ಸುಲಭ), ಎ ಅಟ್ರಾಕ್ಟ್ರಿವ್ (ಆಕರ್ಷಕ), ಎಸ್. ಅಂದರೆ ಸೋಸಿಯಲ್ (ಸಾಮಾಜಿಕ) ಮತ್ತು ಟಿ ಎಂದರೆ ಟೈಮ್ಲಿ (ಸಕಾಲಿಕ) ಎಂದು ತಿಳಿಸಿದರು.  ಅದಕ್ಕೆ ಅವರು ಎಫ್ ಅಕ್ಷರ ಸೇರಿಸಿ  FEAST (ಫೆಸ್ಟ್) ಚೌಕಟ್ಟು ಮಾಡಿದರು. ಎಫ್ ಎಂದರೆ ಫನ್ (ವಿನೋದ) ಎಂದ ಅವರು,  ಪರಿಸರ ಪರ ಚಟುವಟಿಕೆಗಳು ಹಲವುಬಾರಿ ವಿನೋದಮಯವಾಗಿದ್ದು, ಭಾರತವು ಇತ್ತೀಚಿನ ದಿನಗಳಲ್ಲಿ ಇದನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಯುಎನ್.ಇಪಿ ಜಾಗತಿಕ ಮುಖ್ಯಸ್ಥೆ ಶ್ರೀಮತಿ ಇಂಗರ್ ಆಂಡರ್ಸನ್ ಕೂಡ ಈ ಸಂದರ್ಭದಲ್ಲಿ ಮಾತನಾಡಿ, ಪ್ರಧಾನಮಂತ್ರಿಯವರು ಲೈಫ್ಗೆ ಚಾಲನೆ ನೀಡಿರುವುದನ್ನು ಸ್ವಾಗತಿಸಿದರು. "1 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮತ್ತು ನಾವಿನ್ಯತೆ ಮತ್ತು ಉದ್ಯಮಶೀಲತೆಯ ಬೆಳೆಯುತ್ತಿರುವ ಪೀಳಿಗೆಗೆ ನೆಲೆಯಾಗಿರುವ ಭಾರತವು ಜಾಗತಿಕ ಪರಿಸರ ಕ್ರಿಯೆಯ ಕೇಂದ್ರವಾಗಿದೆ" ಎಂದು ಅವರು ಹೇಳಿದರು.
ಯುಎನ್.ಡಿ.ಪಿ ಜಾಗತಿಕ ಮುಖ್ಯಸ್ಥ ಶ್ರೀ ಅಚಿಮ್ ಸ್ಟೈನರ್, ಭಾರತದಂತಹ ದೇಶಗಳು ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ಹವಾಮಾನ ಕ್ರಮದ ಹಿಂದಿನ ಚಾಲನಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಇದು ಅಂತಾರಾಷ್ಟ್ರೀಯ ಸೌರ ಸಹಯೋಗ ಮತ್ತು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟ ಮತ್ತು ಒಂದು ಸೂರ್ಯ ಒಂದು ವಿಶ್ವ ಒಂದು ಗ್ರಿಡ್ ನಂತಹ ಅತ್ಯಾಧುನಿಕ ಉಪಕ್ರಮಗಳ ಮೂಲಕ ಮಾಡುತ್ತಿರುವ ಕಾರ್ಯವನ್ನು ಒಳಗೊಂಡಿದೆ ಎಂದರು.
ವರ್ಲ್ಡ್ ರಿಸೋರ್ಸಸ್ ಸಂಸ್ಥೆಯ ಸಿಇಓ ಮತ್ತು ಅಧ್ಯಕ್ಷ ಶ್ರೀ ಅನಿರುದ್ಧ ದಾಸ್ ಗುಪ್ತಾ ಅವರು, ನಾವು ಹೇಗೆ ಜೀವಿಸುತ್ತೇವೆ, ನಾವು ಹೇಗೆ ಸೇವಿಸುತ್ತೇವೆ ಮತ್ತು ನಾವು ಗ್ರಹದ ಬಗ್ಗೆ ಹೇಗೆ ಕಾಳಜಿ ವಹಿಸುತ್ತೇವೆ ಎಂಬುದರ ಕುರಿತ ಅತ್ಯಗತ್ಯವಾಗಿದ್ದ ಜಾಗತಿಕ ಆಂದೋಲನ ಮತ್ತು ಮಾತುಕತೆಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.
ಗ್ಲ್ಯಾಸ್ಗೋದಲ್ಲಿ ನಡೆದ ಕಾಪ್ 26ರಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಮಹತ್ವದ ಭಾಷಣವನ್ನು ಹವಾಮಾನ ಅರ್ಥಶಾಸ್ತ್ರಜ್ಞ ಲಾರ್ಡ್ ನಿಕೋಲಸ್ ಸ್ಟರ್ನ್ ಸ್ಮರಿಸಿದರು. ಸಮುದಾಯಗಳ ಜೀವನ ಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಳಿಸುವಲ್ಲಿ ಇದು 21 ನೇ ಶತಮಾನದ ಅಭಿವೃದ್ಧಿ ಮತ್ತು ಬೆಳವಣಿಗೆಯ ಗಾಥೆಯಾಗಿದೆ ಎಂದರು.
ವಿಶ್ವಬ್ಯಾಂಕ್ ಅಧ್ಯಕ್ಷರಾದ ಶ್ರೀ ಡೇವಿಡ್ ಮಲ್ಪಾಸ್, ಭಾರತೀಯ ನೀತಿಗಳಲ್ಲಿ ಪರಿಸರದ ಕೇಂದ್ರೀಕರಣದ ಬಗ್ಗೆ ಭಾರತೀಯ ಧರ್ಮಗ್ರಂಥಗಳ ಉಲ್ಲೇಖಗಳನ್ನು ಸ್ಮರಿಸಿದರು. 2019 ರಲ್ಲಿ ಗುಜರಾತ್ ನಲ್ಲಿ ನಾಗರಿಕ ಸೇವಾ ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರೊಂದಿಗೆ ಕೆಲಸ ಮಾಡುವಾಗ ಈ ತುರ್ತು ಅಗತ್ಯನ್ನು ಮನಗಂಡಿದ್ದಾಗಿ ಅವರು ಸ್ಮರಿಸಿದರು. ಪೋಷಣ್ (ಪೌಷ್ಟಿಕ ಅಭಿಯಾನ), ಆಶಾ ಮತ್ತು ಸ್ವಚ್ಛ ಭಾರತ್ ನಂತಹ ಭಾರತದ ಸ್ಥಳೀಯ ಉಪಕ್ರಮಗಳು ಮತ್ತು ಹಣ ಪೂರಣದಲ್ಲಿ ಜನರು ಮತ್ತು ಸ್ಥಳೀಯ ಉಪಕ್ರಮಗಳು ಮಾಡುತ್ತಿರುವ ಸಹಾಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ವರ್ಷ ಗ್ಲ್ಯಾಸ್ಗೋದಲ್ಲಿ ನಡೆದ 26ನೇ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (ಕಾಪ್26) ಪ್ರಧಾನಮಂತ್ರಿಯವರು ಲೈಫ್ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ಕಲ್ಪನೆಯು ಪರಿಸರ-ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ, ಅದು 'ಬುದ್ಧಿಹೀನ ಮತ್ತು ವಿನಾಶಕಾರಿ ಬಳಕೆಯ' ಬದಲಿಗೆ 'ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ಣ ಬಳಕೆ'ಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದರು.

*****

 


(Release ID: 1831467) Visitor Counter : 408